ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Roopa Gururaj Column: ಬೆಂಕಿ ಹತ್ತಿದ ಬಸ್ಸಿಗೆ ನುಗ್ಗಿ ಮಕ್ಕಳ ಪ್ರಾಣ ಉಳಿಸಿದ 11ರ ಹುಡುಗ

ಬಸ್ಸಿನೊಳಗೆ ಅಚಾನಕ್ ಬೆಂಕಿ ಕಾಣಿಸಿಕೊಂಡು ಹೊಗೆ ತುಂಬಿತು. ಮಕ್ಕಳು ಭಯಭೀತ ರಾಗಿ ಕೂಗಿದರು. ಬಸ್ಸು ಇದ್ದಕ್ಕಿದ್ದಂತೆ ಮಕ್ಕಳಿಗೆ ಸಾವಿನ ಕೋಪವಾಯಿತು. ಅದೇ ಸಮಯದಲ್ಲಿ ಬಸ್ಸಿನ ಹೊರಗೆ ಜನಸಮೂಹದ ನಡುವೆ ನಿಂತಿದ್ದವನು ಈ 11 ವರ್ಷದ ಬಾಲಕ ಓಂ ಪ್ರಕಾಶ್. ಬಸ್ಸಿನಲ್ಲಿದ್ದ ದೊಡ್ಡವರು ಆಘಾತದಿಂದ ಏನು ಮಾಡಲೂ ತೋಚದೆ ಸ್ಥಬ್ಧರಾಗಿದ್ದಾಗ, ಓಂ ಕಾರ್ಯಪ್ರವೃತ್ತನಾದನು.

ಒಂದೊಳ್ಳೆ ಮಾತು

ಅಶಾಂತಿ ಮತ್ತು ಗೊಂದಲದ ಸುದ್ದಿಗಳ ನಡುವೆ, ಮಾನವೀಯತೆಯ ಮೇಲೆ ನಂಬಿಕೆ ಯನ್ನು ಪುನರುಜ್ಜೀವನಗೊಳಿಸಿದ ಒಂದು ನಿಶ್ಶಬ್ದ ಸಾಹಸದ ಕಥೆ ಬಹುಶಃ ಬಹಳಷ್ಟು ಜನರ ಗಮನಕ್ಕೆ ಬಂದಿರುತ್ತದೆ. ಧೈರ್ಯ-ಶೌರ್ಯ ಮೆರೆಯುವುದಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ಈ ಘಟನೆ ನೆನಪಿಸಿತು.

ಅಂದು ಸಾಮಾನ್ಯ ಶಾಲಾ ದಿನ. ಮಕ್ಕಳ ನಗು, ಮಾತು, ಮಕ್ಕಳ ಆಟ ಪಾಠ ಎಲ್ಲವೂ ಸಹಜ ವಾಗಿತ್ತು. ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಸಾಗುತ್ತಿದ್ದ ಶಾಲಾ ಬಸ್ಸಿನಲ್ಲಿ ಇದ್ದಕ್ಕಿದ್ದಂತೆ ಭಯದ ವಾತಾವರಣ ಸೃಷ್ಟಿಯಾಯಿತು.

ಬಸ್ಸಿನೊಳಗೆ ಅಚಾನಕ್ ಬೆಂಕಿ ಕಾಣಿಸಿಕೊಂಡು ಹೊಗೆ ತುಂಬಿತು. ಮಕ್ಕಳು ಭಯಭೀತ ರಾಗಿ ಕೂಗಿದರು. ಬಸ್ಸು ಇದ್ದಕ್ಕಿದ್ದಂತೆ ಮಕ್ಕಳಿಗೆ ಸಾವಿನ ಕೋಪವಾಯಿತು. ಅದೇ ಸಮಯ ದಲ್ಲಿ ಬಸ್ಸಿನ ಹೊರಗೆ ಜನಸಮೂಹದ ನಡುವೆ ನಿಂತಿದ್ದವನು ಈ 11 ವರ್ಷದ ಬಾಲಕ ಓಂ ಪ್ರಕಾಶ್. ಬಸ್ಸಿನಲ್ಲಿದ್ದ ದೊಡ್ಡವರು ಆಘಾತದಿಂದ ಏನು ಮಾಡಲೂ ತೋಚದೆ ಸ್ಥಬ್ಧ ರಾಗಿದ್ದಾಗ, ಓಂ ಕಾರ್ಯಪ್ರವೃತ್ತನಾದನು.

ಇದನ್ನೂ ಓದಿ: Roopa Gururaj Column: ಬಡ ಮಹಿಳೆಯ ಬಡತನ ನೀಗಿಸಿದ ಕನಕಧಾರ ಸ್ತೋತ್ರ

ತನ್ನ ಸುರಕ್ಷತೆಯನ್ನು ಲೆಕ್ಕಿಸದೆ, ಅದ್ಭುತ ಧೈರ್ಯ ಮತ್ತು ಚುರುಕು ಬುದ್ಧಿಯಿಂದ ಬೆಂಕಿ ಹತ್ತಿದ ಬಸ್ಸಿನ ಕಡೆ ಓಡಿದನು. ಬಾಗಿಲು ಅಂಟಿಕೊಂಡಿತ್ತು, ಬೆಂಕಿಯ ಕಾವು ಅಸಹ್ಯವಾದ ಬಿಸಿ ಆದರೂ ಅವನು ಇದು ಯಾವುದನ್ನು ಒಂದಿಷ್ಟೂ ಲೆಕ್ಕಿಸಲಿಲ್ಲ. ಅಪಾರ ಧೈರ್ಯ ದಿಂದ ಬಾಗಿಲನ್ನು ಒಡೆದು ತೆರೆದನು.

ಹೊಗೆ ಕಣ್ಣುಗಳನ್ನು ಸುಡುತ್ತಿದ್ದರೂ, ಬೆಂಕಿ ಚರ್ಮವನ್ನು ತಾಕುತ್ತಿದ್ದರೂ ಅವನು ಒಂದು ಹೆಜ್ಜೆಯೂ ಹಿಂದಿರಲಿಲ್ಲ. ಉರಿಯುತ್ತಿದ್ದ ಬೆಂಕಿ ಹತ್ತಿದ ಬಸ್ಸಿನೊಳಗೆ ಈ ಹುಡುಗ ಮತ್ತೆ ಮತ್ತೆ ಹೋದ. ಪ್ರತೀ ಬಾರಿ ಭಯಭೀತರಾದ ಮಕ್ಕಳ ಕೈ ಹಿಡಿದು, ಹೊಗೆಯ ಮಧ್ಯೆ ದಾರಿ ತೋರಿಸಿ, ಯಾರೂ ಆ ಬಸ್ಸಿನಲ್ಲಿ ಉಳಿಯದಂತೆ ನೋಡಿಕೊಂಡನು.

ಒಬ್ಬೊಬ್ಬರಾಗಿ ಎಲ್ಲಾ 18 ಮಕ್ಕಳೂ ಸುರಕ್ಷಿತವಾಗಿ ಹೊರಬಂದರು. ಕೊನೆಯ ಮಗು ಹೊರ ಬರುವಷ್ಟರಲ್ಲಿ ಓಂಗೆ ಗಾಯಗಳಾಗಿದ್ದವು, ಆದರೂ ಅವನು ಅನೇಕ ವಯಸ್ಕರು ಮಾಡಲಾಗದ ಕೆಲಸವನ್ನು ಮಾಡಿ ಸಾಧಿಸಿದ್ದನು. ಇಷ್ಟೆಲ್ಲ ಮಾಡುತ್ತಿದ್ದ ಆ 11 ವರ್ಷದ ಹುಡುಗನ ಧೈರ್ಯವನ್ನು ನೋಡಿ ಅಲ್ಲಿ ಯಾರು ಚಪ್ಪಾಳೆ ತಟ್ಟುತ್ತಿರಲಿಲ್ಲ, ಅವನ ಸಮಯೋಚಿತ ಕೆಲಸವನ್ನು ಯಾವ ಕ್ಯಾಮರಾ ಕಣ್ಣುಗಳು ಕೂಡ ಸರಿ ಹಿಡಿಯುತ್ತಿರಲಿಲ್ಲ.

ಇದೆಲ್ಲ ಹೋಗಲಿ, ಯಾವುದೇ ಬಹುಮಾನಗಳ ನಿರೀಕ್ಷೆಯೂ ಇರಲಿಲ್ಲ. ಇದ್ದದ್ದು ಎಲ್ಲರಂತೆ ಬೆಂಕಿ ಹತ್ತಿದ ಬಸ್ಸನ್ನು ನೋಡಿ ಭಯಪಡುವ ಮನಸ್ಸಿಗಿಂತ, ಮಾನವೀಯತೆ ಯನ್ನು ಆರಿಸಿದ ಒಂದು ಹೃದಯ ಮಾತ್ರ.

ನಂತರ ಈ ಸಾಹಸದ ಸುದ್ದಿ ದೇಶದಾದ್ಯಂತ ಹರಡಿದಾಗ, ಓಂ ಪ್ರಕಾಶ್‌ಗೆ ಭಾರತದ ಪ್ರತಿಷ್ಠಿತ ರಾಷ್ಟ್ರೀಯ ಶೌರ್ಯ ಪ್ರಶಸ್ತಿ (National Bravery Award) ಪ್ರದಾನಿಸಲಾ ಯಿತು. ಆ ಪದಕ ಕೇವಲ ಗೌರವವಲ್ಲ, ನಿಜವಾದ ಧೈರ್ಯ, ಶಕ್ತಿ, ವಯಸ್ಸು ಅಥವಾ ಅಧಿಕಾರ ದಲ್ಲಿಲ್ಲ, ಹೃದಯದಲ್ಲಿದೆ ಎಂಬುದಕ್ಕೆ ಸಾಕ್ಷಿಯಾಯಿತು.

ಓಂನ ಕಥೆ ಕೋಟ್ಯಂತರ ಜನರ ಹೃದಯವನ್ನು ಗೆದ್ದಿತು. ಅದು ರೋಚಕವಾಗಿತ್ತು ಎಂಬ ಕಾರಣಕ್ಕಲ್ಲ, ನಿಜವಾದ ಮಾನವೀಯತೆ ಮೆರೆದ ಒಬ್ಬ ಹುಡುಗನ ಪ್ರಾಮಾಣಿಕ ಪ್ರಯತ್ನ ಕ್ಕೆ ಸಿಕ್ಕ ಪ್ರತಿಫಲ ಅದು. 11 ವರ್ಷದ ಬಾಲಕನೊಬ್ಬ ಮಾನವೀಯತೆಯ ಅತ್ಯಂತ ಶುದ್ಧ ರೂಪವನ್ನು ಜಗತ್ತಿಗೇ ತೋರಿಸಿದನು.

ಎಲ್ಲಾ ವೀರರೂ ವೇಷಭೂಷಣ ಧರಿಸುವುದಿಲ್ಲ. ಕತ್ತಿ, ಗುರಾಣಿ, ಹಿಡಿದು ಯುದ್ಧಕ್ಕೆ ನಿಲ್ಲುವುದಿಲ್ಲ. ಎಲ್ಲಾ ವೀರರೂ ದೊಡ್ಡವರಾಗಿರುವುದಿಲ್ಲ. ಕೆಲವು ವೀರರು ಅಪಾಯದತ್ತ ಒಂದು ಕ್ಷಣವು ಯೋಚಿಸದೆ ಓಡುವ ಮಕ್ಕಳೂ ಆಗಿರುತ್ತಾರೆ. ಆ ಕ್ಷಣದಲ್ಲಿ ಅವರಿಗೆ ಮತ್ತೊಬ್ಬರಿಗೆ ಸಹಾಯ ಮಾಡುವ ಯೋಚನೆ ಮಾತ್ರ ಇರುತ್ತದೆ, ಆಗ ಅವರ ವಯಸ್ಸು ಅವರಿಗೆ ಮುಖ್ಯವಾಗಿರುವುದೇ ಇಲ್ಲ.

ಇಂತಹ ಮೌಲಿಕ ಘಟನೆಗಳ ಬಗ್ಗೆ ನಮ್ಮ ಮಕ್ಕಳಿಗೆ ತಿಳಿಸಿ ಹೇಳಬೇಕು. ಎಷ್ಟೇ ವಿದ್ಯೆ ಕಲಿತರೂ ಮಕ್ಕಳಲ್ಲಿ ಸಂಸ್ಕಾರ ಮಾನವೀಯತೆ, ಒಳ್ಳೆಯ ನಡವಳಿಕೆ ಇಲ್ಲದಿದ್ದರೆ ಅವರ ವಿದ್ಯೆಗೆ ಬೆಲೆಗೆ ಇರುವುದಿಲ್ಲ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ಓಂ ಪ್ರಕಾಶ್ ನ ಕಥೆ ಎಲ್ಲರಿಗೂ ಪ್ರೇರಣೆಯಾಗಲಿ.

ರೂಪಾ ಗುರುರಾಜ್

View all posts by this author