ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Roopa Gururaj Column: ಬಡ ಮಹಿಳೆಯ ಬಡತನ ನೀಗಿಸಿದ ಕನಕಧಾರ ಸ್ತೋತ್ರ

ಆ ನಿಸ್ವಾರ್ಥ ದಾನವನ್ನು ಕಂಡ ಶಂಕರನ ಹೃದಯ ಕರಗಿತು. ತನಗೆ ತಿನ್ನಲು ಇಲ್ಲದಿದ್ದ ರೂ, ಇದ್ದುದನ್ನೇ ದಾನ ಮಾಡಿದ ಆ ತಾಯಿಯ ತ್ಯಾಗ ಶಂಕರನನ್ನು ಆಳವಾಗಿ ಸ್ಪರ್ಶಿಸಿತು. ತಕ್ಷಣವೇ ಆಕಾಶದತ್ತ ದೃಷ್ಟಿಸಿ, ತಾಯಿ ಮಹಾಲಕ್ಷ್ಮಿಯನ್ನು ಸ್ತುತಿಸಿ 22 ಶ್ಲೋಕಗಳ ದಿವ್ಯ ಸ್ತೋತ್ರವನ್ನು ಪಠಿಸಿದನು. ಅದೇ ‘ಕನಕಧಾರ ಸ್ತೋತ್ರ’.

ಬಡ ಮಹಿಳೆಯ ಬಡತನ ನೀಗಿಸಿದ ಕನಕಧಾರ ಸ್ತೋತ್ರ

-

ಒಂದೊಳ್ಳೆ ಮಾತು

ಬಡತನವನ್ನು ನೀಗಿಸಿ ಐಶ್ವರ್ಯವನ್ನು ಹರಿಸುವ ದಿವ್ಯಸ್ತೋತ್ರವೇ ‘ಕನಕಧಾರ ಸ್ತೋತ್ರ’. ಕನಕ ಎಂದರೆ ಬಂಗಾರ, ಧಾರಾ ಎಂದರೆ ಧಾರಾಕಾರ ಮಳೆಯಂತೆ ಸುರಿಯುವುದು. ಅಂದರೆ ಬಂಗಾರದ ಮಳೆಯನ್ನೇ ಸುರಿಸಿದಂತಹ ಮಹಿಮೆಯ ಸ್ತೋತ್ರ. ಈ ಅಪೂರ್ವ ಸ್ತೋತ್ರವನ್ನು ರಚಿಸಿದವರು ಜಗದ್ಗುರು ಆದಿ ಶಂಕರಾಚಾರ್ಯರು.

ಆದಿ ಶಂಕರರು ಕೇರಳದ ಕಾಲಡಿ ಗ್ರಾಮದಲ್ಲಿ ಜನಿಸಿದರು. ಅತೀ ಚಿಕ್ಕ ವಯಸ್ಸಿನಲ್ಲೇ ಅಪಾರ ಬುದ್ಧಿಶಕ್ತಿ, ವೇದಾಧ್ಯಯನ ಮತ್ತು ಶಾಸ್ತ್ರಜ್ಞಾನವನ್ನು ಪಡೆದು, ಸನ್ಯಾಸ ಸ್ವೀಕರಿಸಿ ಪರಿವ್ರಾಜಕಚಾರ್ಯರಾಗಿ ಇಡೀ ಭಾರತವನ್ನು ಕಾಲ್ನಡಿಗೆಯಲ್ಲಿ ಸಂಚರಿಸಿದರು. ಅನ್ಯ ಮತೀಯ ತತ್ತ್ವಗಳನ್ನು ತರ್ಕದಿಂದ ಖಂಡಿಸಿ, ಸನಾತನ ಹಿಂದೂ ಧರ್ಮವನ್ನು ಪುನಃ ಪ್ರತಿಷ್ಠಾಪಿಸಿದ ಮಹಾನ್ ದಾರ್ಶನಿಕರು ಅವರು.

ಈ ಕಥೆ ನಡೆದಾಗ ಶಂಕರರಿಗೆ ಕೇವಲ ಐದು ವರ್ಷ. ಆಗಿನ ಕಾಲದಲ್ಲಿ ವಿದ್ಯಾರ್ಥಿಗಳು ಭಿಕ್ಷಾಟನೆಯ ಮೂಲಕವೇ ವಿದ್ಯಾಭ್ಯಾಸ ಮಾಡಬೇಕಿತ್ತು. ಒಂದು ದಿನ ಬಾಲ ಶಂಕರ ಭಿಕ್ಷೆಗಾಗಿ ಒಬ್ಬ ಬಡ ಮಹಿಳೆಯ ಗುಡಿಸಲ ಮುಂದೆ ನಿಂತು, ‘ಭವತಿ ಭಿಕ್ಷಾಂ ದೇಹಿ’ ಎಂದು ಕೋರಿದನು.

ಇದನ್ನೂ ಓದಿ: Roopa Gururaj Column: ಭಜಗೋವಿಂದಂ, ಭಜಗೋವಿಂದಂ ಗೋವಿಂದಂ ಭಜ ಮೂಡಮತೇ

ಮನೆಯ ಒಡತಿ ಹೊರಗೆ ಬಂದಳು. ಪುಟ್ಟ ಶಂಕರನ ತೇಜಸ್ಸನ್ನು ಕಂಡು ಅವಳ ಹೃದಯ ತುಂಬಿತು, ಆದರೆ ಅವಳ ಬಡತನ ಮುಖದಲ್ಲೇ ಸ್ಪಷ್ಟವಾಗಿ ಕಾಣುತ್ತಿತ್ತು. ಉಟ್ಟಿದ್ದ ಹರಿದ ಸೀರೆ, ಜೀರ್ಣವಾದ ದೇಹಭಾವ ಅಂತೂ ಅವಳ ಸ್ಥಿತಿ ಅತಿ ದಯನೀಯವಾಗಿತ್ತು. ಎರಡು ದಿನಗಳಿಂದ ಅನ್ನವೇ ಇಲ್ಲ, ಪತಿಯೂ ಭಿಕ್ಷೆಗೆ ಹೋದವನು ಇನ್ನೂ ಮನೆಗೆ ಬಂದಿರಲಿಲ್ಲ. ಕೊಡಲು ಏನೂ ಇಲ್ಲವಲ್ಲ ಎಂಬ ನೋವು ಅವಳನ್ನು ಕಾಡಿತು.

ಆದರೂ, ‘ನನ್ನ ಬಾಗಿಲಿಗೆ ಬಂದ ಮಗುವಿಗೆ ಬರಿ ಕೈಯಲ್ಲಿ ಕಳುಹಿಸಬಾರದು’ ಎಂಬ ಭಾವ ದಿಂದ ಮನೆ ಮೂಲೆಮೂಲೆಯನ್ನೂ ಹುಡುಕಿದಳು. ಕೊನೆಗೆ ಹಿತ್ತಲಿನಲ್ಲಿ ಮರದಿಂದ ಬಿದ್ದ ನಾಲ್ಕಾರು ಒಣ ನೆಲ್ಲಿಕಾಯಿಗಳು ಕಂಡವು. ಅದನ್ನೇ ಕೈಯಲ್ಲಿ ಹಿಡಿದು, ಸಂಕೋಚ ಹಾಗೂ ದುಃಖದಿಂದ, ‘ಮಗು, ಇದನ್ನು ಹೊರತು ನನಗೆ ಕೊಡಲು ಏನೂ ಇಲ್ಲ’ ಎಂದು ಹೇಳಿ, ಅವನ್ನು ಬಾಲ ಶಂಕರನ ಜೋಳಿಗೆಗೆ ಹಾಕಿದಳು.

ಆ ನಿಸ್ವಾರ್ಥ ದಾನವನ್ನು ಕಂಡ ಶಂಕರನ ಹೃದಯ ಕರಗಿತು. ತನಗೆ ತಿನ್ನಲು ಇಲ್ಲದಿದ್ದ ರೂ, ಇದ್ದುದನ್ನೇ ದಾನ ಮಾಡಿದ ಆ ತಾಯಿಯ ತ್ಯಾಗ ಶಂಕರನನ್ನು ಆಳವಾಗಿ ಸ್ಪರ್ಶಿ ಸಿತು. ತಕ್ಷಣವೇ ಆಕಾಶದತ್ತ ದೃಷ್ಟಿಸಿ, ತಾಯಿ ಮಹಾಲಕ್ಷ್ಮಿಯನ್ನು ಸ್ತುತಿಸಿ 22 ಶ್ಲೋಕಗಳ ದಿವ್ಯ ಸ್ತೋತ್ರವನ್ನು ಪಠಿಸಿದನು. ಅದೇ ‘ಕನಕಧಾರ ಸ್ತೋತ್ರ’.

ಶಂಕರನ ಭಕ್ತಿಗೆ ಮೆಚ್ಚಿದ ಮಹಾಲಕ್ಷ್ಮಿ ಪ್ರತ್ಯಕ್ಷಳಾಗಿ, ‘ಈ ಮಹಿಳೆಯ ಪೂರ್ವಕರ್ಮದ ಕಾರಣ ಬಡತನ ಬರೆಯಲಾಗಿದೆ’ ಎಂದಳು. ಆದರೆ ಬಾಲ ಶಂಕರ ವಾದಿಸಿ, ‘ಅಮ್ಮಾ, ಇಂದು ಈ ತಾಯಿ ಮಾಡಿದ ನಿಸ್ವಾರ್ಥ ದಾನವೇ ಎಲ್ಲಾ ಕರ್ಮಗಳನ್ನು ಸುಡುವ ಶಕ್ತಿ ಹೊಂದಿದೆ. ಇವಳನ್ನು ಅನುಗ್ರಹಿಸಬೇಕು’ ಎಂದು ವಿನಂತಿಸಿ ದನು.

ಶಂಕರನ ತರ್ಕ ಮತ್ತು ಬಡ ಮಹಿಳೆಯ ಬಗ್ಗೆ ಇದ್ದ ಅಕ್ಕರೆಗೆ ಲಕ್ಷ್ಮಿದೇವಿಯೇ ಸೋತಳು. ಕ್ಷಣದಲ್ಲೇ ಆಕಾಶ ಮೋಡಕವಿದು, ಆ ಬಡ ಮಹಿಳೆಯ ಮನೆಯ ಅಂಗಳದಲ್ಲಿ ಚಿನ್ನದ ನೆಲ್ಲಿ ಕಾಯಿಗಳ ಮಳೆ ಸುರಿಯಿತು. ಆಕೆಯ ಬಡತನ ಮಾಯವಾಯಿತು. ಈ ಸ್ತೋತ್ರದ ಮಹಿಮೆಯನ್ನು ಗುರುಗಳು ಅರಿತು, ‘ಇನ್ನು ಮುಂದೆ ಈ ಸ್ತೋತ್ರವು ಕನಕಧಾರ ಸ್ತೋತ್ರ ಎಂದೇ ಪ್ರಸಿದ್ಧಿಯಾಗಲಿ.

ಭಕ್ತಿಯಿಂದ ಪಠಿಸುವವರಿಗೆ ಮಹಾಲಕ್ಷ್ಮಿಯ ಕೃಪೆ ಲಭಿಸಲಿ’ ಎಂದು ಆಶೀರ್ವದಿಸಿದರು. ಅಂದಿನಿಂದ ಇಂದಿನವರೆಗೂ, ನಿಸ್ವಾರ್ಥ ಭಕ್ತಿ ಮತ್ತು ಶ್ರದ್ಧೆಯಿಂದ ಕನಕಧಾರ ಸ್ತೋತ್ರ ವನ್ನು ಪಠಿಸುವವರಿಗೆ ತಾಯಿ ಮಹಾಲಕ್ಷ್ಮಿಯ ಅನುಗ್ರಹ ಸದಾ ದೊರಕುತ್ತಲೇ ಇದೆ.

ಮತ್ತೊಬ್ಬರ ನೋವನ್ನು ಕಂಡು ಅದಕ್ಕಾಗಿ ನಾವು ಭಗವಂತನನ್ನು ಪ್ರಾರ್ಥಿಸಿದಾಗ, ಆ ಪ್ರಾರ್ಥನೆಗೆ ಹೆಚ್ಚು ಬಲವಿರುತ್ತದೆ. ಆದ್ದರಿಂದಲೇ ಶುಭ ಹಾರೈಕೆಗಳು, ಹಿರಿಯರ ಆಶೀರ್ವಾದ ಜೀವನದಲ್ಲಿ ಬಹಳ ಮುಖ್ಯವಾಗುತ್ತದೆ. ಎಲ್ಲವನ್ನು ಪರಿಶ್ರಮದಿಂದ ಗಳಿಸಲು ಕರ್ಮಫಲ ಅಡ್ಡ ಬರಬಹುದು. ಆಗ ಭಗವಂತನ ಕೃಪೆ, ಹಿರಿಯರ ಆಶೀರ್ವಾದ, ಹಿತೈಷಿ ಗಳ ಶುಭಕಾಮನೆಗಳು ಖಂಡಿತಾ ನಮಗೆ ವರದಂತೆ ಆಗಬೇಕಾದ ಕೆಲಸವನ್ನು ಯಶಸ್ವಿ ಯಾಗಿ ನೆರವೇರಿಸುತ್ತದೆ. ಇಂತಹ ಸಜ್ಜನರು ಬದುಕಿನಲ್ಲಿ ಸದಾ ನಿಮ್ಮ ಸುತ್ತಲೂ ಇರಲಿ.