ಸಂಪಾದಕೀಯ ಸದ್ಯಶೋಧನೆ
‘ದಿ ಎಕಾನಾಮಿಸ್ಟ್’ (The Economist) ಜಾಗತಿಕ ಪತ್ರಿಕೋದ್ಯಮದ ಇತಿಹಾಸದಲ್ಲಿಯೇ ಅತ್ಯಂತ ಪ್ರಭಾವಶಾಲಿ, ಗೌರವಾನ್ವಿತ ಮತ್ತು ವಿಶಿಷ್ಟ ಪ್ರಕಟಣೆಯಾಗಿ ಗುರುತಿಸಿಕೊಂಡಿದೆ. ಲಂಡನ್ ಮೂಲದ ಈ ಸಾಪ್ತಾಹಿಕವು ಜಾಗತಿಕ ರಾಜಕೀಯ, ಆರ್ಥಿಕತೆ, ತಂತ್ರಜ್ಞಾನ, ಪರಿಸರ ಮತ್ತು ಸಾಂಸ್ಕೃತಿಕ ವಿದ್ಯಮಾನ ಗಳ ಮೇಲೆ ಆಳವಾದ, ತಾರ್ಕಿಕ ವಿಶ್ಲೇಷಣೆ ನೀಡುವ ಮೂಲಕ ಮೆಚ್ಚುಗೆ ಗಳಿಸಿದೆ. ಕೇವಲ ಸುದ್ದಿಯನ್ನು ವರದಿ ಮಾಡುವುದಕ್ಕಿಂತ ಹೆಚ್ಚಾಗಿ, ಜಾಗತಿಕ ಘಟನಾವಳಿಗಳ ಹಿಂದಿರುವ ಒಳನೋಟ, ದೀರ್ಘಕಾಲೀನ ಪ್ರಭಾವ ಮತ್ತು ಪರಿಹಾರಗಳನ್ನು ನಿಖರವಾಗಿ ಚರ್ಚಿಸುವುದು ಇದರ ಶೈಲಿ.
ಸುಮಾರು ಎರಡು ಶತಮಾನಗಳಿಂದ ತನ್ನದೇ ಆದ ಗಾಂಭೀರ್ಯ, ಮುಕ್ತ ಮಾರುಕಟ್ಟೆ ಪ್ರತಿಪಾದನೆ ಮತ್ತು ಕಟು ನಿಷ್ಪಕ್ಷಪಾತ ಧೋರಣೆಯನ್ನು ಉಳಿಸಿಕೊಂಡು ಬಂದಿರುವ ಈ ಪ್ರಕಟಣೆಯು ಪತ್ರಿಕೋದ್ಯಮ ಕ್ಷೇತ್ರದಲ್ಲಿ ವಿಶಿಷ್ಟ ಅಧ್ಯಾಯವಾಗಿ ನಿಲ್ಲುತ್ತದೆ. ಈ ಪ್ರಕಟಣೆಯ ಮೊದಲ ಮತ್ತು ಅತ್ಯಂತ ಆಸಕ್ತಿಕರ ಸಂಗತಿಯೆಂದರೆ ಇದರ ಸ್ವರೂಪ. ಹೊರನೋಟಕ್ಕೆ ಹಾಗೂ ಮುದ್ರಣ ಶೈಲಿ ಯಲ್ಲಿ ಇದು ಪಕ್ಕಾ ಮ್ಯಾಗಜೀನ್ನಂತೆ (ನಿಯತಕಾಲಿಕೆ) ಕಂಡರೂ, ಸಂಸ್ಥೆಯು ತನ್ನನ್ನು ಎಂದಿಗೂ ಮ್ಯಾಗಜೀನ್ ಎಂದು ಕರೆಯುವುದಿಲ್ಲ. ಬದಲಿಗೆ ಹೆಮ್ಮೆಯಿಂದ ‘ಪತ್ರಿಕೆ’ (Newspaper) ಎಂದೇ ಪರಿಗಣಿಸುತ್ತದೆ. 1843ರಲ್ಲಿ ಜೇಮ್ಸ್ ವಿಲ್ಸನ್ ಎಂಬ ಬ್ರಿಟಿಷ್ ಉದ್ಯಮಿ ಮತ್ತು ರಾಜಕಾರಣಿ ಇದನ್ನು ಆರಂಭಿಸಿದಾಗ ಮುದ್ರಣವಾಗುತ್ತಿದ್ದ ದಿನಪತ್ರಿಕೆಯ ಮಾದರಿಯ ಇದರ ಆಶಯ ರೂಪಗೊಂಡಿತ್ತು.
ಇದನ್ನೂ ಓದಿ: Vishweshwar Bhat Column: ʼನ್ಯೂಯಾರ್ಕರ್ʼ ಫ್ಯಾಕ್ಟ್ ಚೆಕಿಂಗ್: ಪತ್ರಿಕೋದ್ಯಮದ ಆತ್ಮಸಾಕ್ಷಿ
ಇಂದಿಗೂ ಅದೇ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿರುವ ಸಂಸ್ಥೆಯು, ತಾನು ನೀಡುವ ವಿಶ್ಲೇಷಣೆಗಳು ಸಾಪ್ತಾಹಿಕ ಪತ್ರಿಕೆಯ ಕರ್ತವ್ಯವನ್ನು ನಿರ್ವಹಿಸುತ್ತವೆ ಎಂಬ ಬಲವಾದ ನಂಬಿಕೆಯಿಂದ ‘ಪತ್ರಿಕೆ’ ಎಂಬ ವ್ಯಾಖ್ಯಾನಕ್ಕೇ ಅಂಟಿಕೊಂಡಿದೆ. ‘ದಿ ಎಕಾನಾಮಿಸ್ಟ್’ನ ಅತಿ ದೊಡ್ಡ ವೈಶಿಷ್ಟ್ಯವೆಂದರೆ ಇದರ ಯಾವುದೇ ಲೇಖನಗಳಿಗೂ ಲೇಖಕರ ಹೆಸರು ಅಥವಾ ಬೈಲೈನ್ (Byline) ಇರುವುದಿಲ್ಲ.
ಜಗತ್ತಿನ ಬಹುತೇಕ ಪತ್ರಿಕೆಗಳಲ್ಲಿ ಲೇಖಕರ ಹೆಸರು, ಹಿನ್ನೆಲೆಗೆ ಅಗ್ರಸ್ಥಾನ ಸಿಗುವಾಗ, ಇಲ್ಲಿ ಪ್ರಕಟವಾಗುವ ಪ್ರತಿಯೊಂದು ಲೇಖನವೂ ಅನಾಮಧೇ ಯವಾಗಿರುತ್ತದೆ. ಯಾವುದೇ ವ್ಯಕ್ತಿ ಯೊಬ್ಬನ ಸ್ವಂತ ಅಭಿಪ್ರಾಯಕ್ಕಿಂತ ಪತ್ರಿಕೆಯ ಸಾಮೂಹಿಕ ಬುದ್ಧಿಮತ್ತೆ ಮತ್ತು ಒಮ್ಮತ ಮುಖ್ಯ ಎಂಬುದು ಇದರ ತಾತ್ವಿಕ ನಿಲುವು.
ಸಂಪಾದಕೀಯ ಮಂಡಳಿಯ ಎಲ್ಲ ಸದಸ್ಯರು ಸೇರಿ ಚರ್ಚಿಸಿ ತೀರ್ಮಾನಿಸಿದ ‘ಸಾಮೂಹಿಕ ದನಿ’ ಇದರಲ್ಲಿ ಪ್ರತಿಧ್ವನಿಸುತ್ತದೆ. ಇಡೀ ಪತ್ರಿಕೆಯಲ್ಲಿ ಕೇವಲ ಸಂಪಾದಕರು ತಮ್ಮ ಅಧಿಕಾರಾವಧಿ ಮುಗಿಸಿ ವಿದಾಯ ಹೇಳುವ ಸಂದರ್ಭದಲ್ಲಿ ಮಾತ್ರ ಅವರ ಹೆಸರಿನ ಲೇಖನ ಪ್ರಕಟವಾಗುವುದು ಇಲ್ಲಿನ ಅಪರೂಪದ ಕಟ್ಟುನಿಟ್ಟಾದ ಸಂಪ್ರದಾಯ. ಈ ಪತ್ರಿಕೆಯ ಹುಟ್ಟಿನ ಹಿಂದೆಯೂ ಒಂದು ಅಪ್ಪಟ ಆರ್ಥಿಕ ಹಾಗೂ ರಾಜಕೀಯ ಇತಿಹಾಸವಿದೆ. 1843ರಲ್ಲಿ ಬ್ರಿಟನ್ನಲ್ಲಿ ಜಾರಿಯಲ್ಲಿದ್ದ ‘ಕಾರ್ನ್ ಲಾಸ್’ ಎಂಬ ಧಾನ್ಯ ಆಮದು ತೆರಿಗೆ ಕಾಯ್ದೆಯನ್ನು ರದ್ದುಗೊಳಿಸಲು ಜೇಮ್ಸ್ ವಿಲ್ಸನ್ ಈ ಪತ್ರಿಕೆಯನ್ನು ಅಸ್ತ್ರವಾಗಿ ಬಳಸಿದರು.
ಮುಕ್ತ ವ್ಯಾಪಾರ ಮತ್ತು ಜಾಗತಿಕ ಮಾರುಕಟ್ಟೆಯ ಪರವಾಗಿ ಬಲವಾದ ಧ್ವನಿ ಎತ್ತುವುದೇ ಇದರ ಮೂಲ ಧ್ಯೇಯವಾಗಿತ್ತು. 1846ರಲ್ಲಿ ಬ್ರಿಟಿಷ್ ಸರ್ಕಾರ ಆ ಕಾಯ್ದೆಯನ್ನು ರದ್ದುಗೊಳಿಸಿದಾಗ ಪತ್ರಿಕೆಯ ಮೊದಲ ಗುರಿ ಈಡೇರಿತು. ಅಂದಿನಿಂದ ಇಂದಿನವರೆಗೂ ಮುಕ್ತ ಮಾರುಕಟ್ಟೆ, ಜಾಗತೀಕರಣ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಉದಾರವಾದಿ ಪ್ರಜಾಪ್ರಭುತ್ವದ ಪರವಾಗಿ ಈ ಪತ್ರಿಕೆ ರಾಜಿರಹಿತವಾಗಿ ವಾದಿಸುತ್ತಾ ಬಂದಿದೆ.
ಜಗತ್ತಿನ ಅರ್ಥಶಾಸ್ತ್ರಜ್ಞರು ಮತ್ತು ಹಣಕಾಸು ವಿಶ್ಲೇಷಕರಿಗೆ ಅಚ್ಚುಮೆಚ್ಚಿನ ‘ಬಿಗ್ ಮ್ಯಾಕ್ ಇಂಡೆಕ್ಸ್’ (Big Mac Index) ಹುಟ್ಟಿಕೊಂಡಿದ್ದೇ ಈ ಪತ್ರಿಕೆಯ ಸೃಜನಶೀಲತೆಯಿಂದ. 1886ರಲ್ಲಿ ಮ್ಯಾಕ್ ಡೊನಾಲ್ಡ್ಸ್ ಬರ್ಗರ್ನ ಬೆಲೆಯನ್ನು ಆಧರಿಸಿ ಕರೆನ್ಸಿಗಳ ಖರೀದಿ ಸಾಮರ್ಥ್ಯದ ಸಮಾನತೆಯನ್ನು ಸುಲಭವಾಗಿ ವಿವರಿಸಲು ಇದನ್ನು ಲಘು ಹಾಸ್ಯದ ಮಾದರಿಯಾಗಿ ಪರಿಚಯಿಸಲಾಯಿತು. ಆದರೆ, ಈ ಸರಳ ಪರಿಕಲ್ಪನೆಯು ಎಷ್ಟು ನಿಖರ ಹಾಗೂ ಜನಪ್ರಿಯವಾಯಿತೆಂದರೆ, ಇಂದು ಪ್ರಪಂಚದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಅರ್ಥಶಾಸ್ತ್ರ ಪಠ್ಯಪುಸ್ತಕಗಳಲ್ಲಿ ಮತ್ತು ಹಣಕಾಸು ಸಂಸ್ಥೆಗಳಲ್ಲಿ ವಿನಿಮಯ ದರಗಳ ಮೌಲ್ಯಮಾಪನಕ್ಕೆ ಇದೊಂದು ಅಧಿಕೃತ ಉಲ್ಲೇಖವಾಗಿ ಬಳಕೆಯಾಗುತ್ತಿದೆ.
ಗಹನವಾದ ವಿಷಯವನ್ನು ಲಘು ಮತ್ತು ನೇರ ಉದಾಹರಣೆಯ ಮೂಲಕ ಜನಸಾಮಾನ್ಯರಿಗೆ ಮುಟ್ಟಿಸುವ ಪತ್ರಿಕೆಯ ಜಾಣ್ಮೆಗೆ ಇದೊಂದು ಅತ್ಯುತ್ತಮ ನಿದರ್ಶನ. ಪತ್ರಿಕೆಯ ಅಂತರಂಗದ ಪುಟಗಳಲ್ಲಿ ರುವ ಅಂಕಣಗಳು ಕೂಡ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿವೆ.