Ravi Hunj Column: ನಿಶ್ಶೂನ್ಯ ಬಸವ ಸಂಸ್ಕೃತಿ ಅಭಿಯಾನದ ಒಂದು ಪಕ್ಷಿನೋಟ, ನಿಮಗಾಗಿ !
ಸಂವಾದದಲ್ಲಿ ಓರ್ವ ವಿದ್ಯಾರ್ಥಿನಿ, “ಇಷ್ಟಲಿಂಗದ ಪರಿಕಲ್ಪನೆ ಹಿನ್ನೆಲೆ ಏನು?" ಎಂದು ಕೇಳಿದಳು. ಅದಕ್ಕೆ ಇಳಕಲ್ ಸ್ವಾಮಿಗಳು, “ಇಷ್ಟಲಿಂಗ, ಧರ್ಮ ಕುರುಹಲ್ಲ. ಅದಕ್ಕ ಸೈಂಟಿಫಿಕ್ ಕಾರಣ ಐತಿ. ಮನುಷ್ಯನ ಮನಸ್ಸಿನಲ್ಲಿ ದುರ್ಭಾವನೆ ಮತ್ತು ಸದ್ಭಾವನೆ ಎಂಬ ಪಾಸಿಟಿವ್ ಮತ್ತು ನೆಗೆಟಿವ್ ಅಂಶಗಳು ಅದಾವು. ಬಸವಣ್ಣೋರು ನೆಗೆಟಿವ್ ಅಂಶ ತೆಗಿಯಾಕ ಇಷ್ಟಲಿಂಗ ಕೊಟ್ಟಾರ.

-

ಬಸವ ಮಂಟಪ
ರವಿ ಹಂಜ್
ಆಧ್ಯಾತ್ಮಿಕ ಅರುಹಿನ ಕುರುಹಾದ ಇಷ್ಟಲಿಂಗವನ್ನು ಯಃಕಶ್ಚಿತ್ ಎರಡು ತೊಲದ ಕಾರ್ಬನ್ ಮಾಡಿ, ಆಧ್ಯಾತ್ಮಿಕ ಬಸವಣ್ಣನನ್ನು ಭೌತಿಕ ವಿeನಿ ಮಾಡಿ, ತಹತಹಿಯ ಸಂಕಥನವನ್ನು ಓರ್ವ ಮಠಾಧಿಪತಿಗಳು ಹೊಸೆಯುವ ಮೂರ್ಖತನದ ಧಾರ್ಷ್ಟ್ಯದ ಅನಿವಾರ್ಯತೆ ಏನು? ಹೀಗೆ ತೆಪರು ತೆಪರಾಗಿ ತಾವೇ ತಾವಾಗಿ ಬಟಾಬಯಲು ಬೆತ್ತಲಾಗುವ ಜರೂರತ್ತು ಇವರಿಗೆ ಬೇಕಿತ್ತೆ?
ಒಂದು ಪಕ್ಷದ ಅದರಲ್ಲೂ ಓರ್ವ ರಾಜಕಾರಣಿಯ ಭಟ್ಟಂಗಿಗಳಾದ ಲಿಂಗಾಹತ ಭಂಜಕ ಕಾವಿಧಾರಿ ಗಳು, ತಮ್ಮ ನಾಯಕನ ಕುರ್ಚಿ ಅಲುಗಾಡುತ್ತಿದ್ದಂತೆಯೇ ಎಚ್ಚೆತ್ತು ಬಸವಣ್ಣ, ವಚನ, ಶರಣ, ಕಲ್ಯಾಣ ಮತ್ತಿತರೆ ಹೆಸರಿನಲ್ಲಿ ತಮ್ಮ ಭಂಜಕತನದ ಸೂರ್ತಿಯನ್ನು ಉಕ್ಕಿಸುತ್ತಾರೆ. ಹಾಗೆ ಸ್ಪೂರ್ತಿಗೊಂಡು ಉಕ್ಕಿಸಿದ ಭಂಜಕತನಕ್ಕೆ ಮತ್ತೆ ಕಲ್ಯಾಣ, ನಿತ್ಯ ಬಸವ, ದಿನಕ್ಕೊಂದು ವಚನ, ಶರಣ ಸ್ಮೃತಿ ಮುಂತಾದ ಹೊಸ ಹೊಸ ರಂಗ ಪರಿಕರಗಳೊಂದಿಗೆ ರಂಗುರಂಗಿನ ಸಮ್ಮೇಳನ, ಸಮಾವೇಶ ಮುಂತಾದ ರಂಗಪ್ರಯೋಗಗಳನ್ನು ಏರ್ಪಡಿಸುತ್ತಾರೆ. ಆ ಎಲ್ಲಾ ರಂಗಪ್ರಯೋಗ ಗಳಲ್ಲಿ ಅವರು ಹೊಸ ಹೊಸ ರಾಗಗಳಲ್ಲಿ ಭಜಿಸುವುದು, ಅದೇ ಏಕತಾನತೆಯ ದ್ವಂದ್ವದ ಹಳೆಯ ಸುಳ್ಳಿನ ವಿಜೃಂಭಿತ ಹಾಡುಗಳನ್ನೇ! ಇವರ ಇಂಥ ಇತ್ತೀಚಿನ ರಂಗಪ್ರಯೋಗವೇ ‘ಬಸವ ಸಂಸ್ಕೃತಿ ಅಭಿಯಾನ’!
ಇವರ ಎಲ್ಲಾ ಬಹು ಭೈರವಿ ರಾಗದ ಹಿನ್ನೆಲೆಯ ಸಂಕೀರ್ಣಗಳನ್ನು ‘ವಿಶ್ವವಾಣಿ’ಯು ಒಂಟಿ ಬೈರಾಗಿಯಾಗಿ ಭೈರಿಗೆ ಹಾಕಿ ಛಿದ್ರಗೊಳಿಸಿದೆ. ಒಂದು ಸತ್ಯದ ಮುಂದೆ ಲಕ್ಷ ಸುಳ್ಳುಗಳೂ ಶೂನ್ಯ ವಾಗುತ್ತವೆ ಎಂಬುದನ್ನು ವಿಶ್ವವಾಣಿಯ ಮೂಲಕ ಸಮಾಜ ಅರಿತಿದೆ. ಅಲ್ಲದೇ ಇಂಥ ಎಲ್ಲಾ ಭಂಜಕ ಸಮಾವೇಶಗಳಲ್ಲಿಯೂ ಅಧ್ಯಾತ್ಮ ಶೂನ್ಯರಾದ ಇವರನ್ನು ಬಸವಣ್ಣನು ಪರೋಕ್ಷವಾಗಿ ಬೆತ್ತಲು ಮಾಡುತ್ತಲೇ ಇದ್ದಾನೆ!
ಸದ್ಯದ ರಂಗ ಪ್ರಯೋಗವಾದ ‘ಬಸವ ಸಂಸ್ಕೃತಿ ಅಭಿಯಾನ’ದಲ್ಲೂ ಅದೇ ನಡೆಯುತ್ತಿದೆ. ಹೇಗೆ? ಬನ್ನಿ ನೋಡೋಣ. ಸದ್ಯದ ‘ಬಸವ ಸಂಸ್ಕೃತಿ ಅಭಿಯಾನ’ ಎಂಬ ಪ್ರಹಸನಕ್ಕೆ ರಾಜ್ಯ ಸಾಕ್ಷಿ ಯಾಗುತ್ತಿದೆ. ಇದು ಪ್ರಹಸನ ಏಕೆಂದರೆ, ಇದರಲ್ಲಿ ನಾಟಕೀಯತೆ ಇದೆ, ರಂಗಜಂಗಮರಿದ್ದಾರೆ, ಸಂಗೀತ, ಸಂಭಾಷಣೆ, ಹಾಸ್ಯ, ದ್ವೇಷಗಳನ್ನೊಳಗೊಂಡ ಎಲ್ಲಾ ಷಡ್ರಸಗಳಿವೆ.
ಇದನ್ನೂ ಓದಿ: Ravi Hunj Column: ಇದು ವಿಡಂಬನೆಯಾಚೆಗಿನ ಸತ್ಯ, ಗುರುತು ಹಾಕಿಕೊಳ್ಳಿ...
ಅದರಲ್ಲೂ ಕಂಪನಿ ನಾಟಕಗಳಂತೆ ಒಂದೊಂದು ಊರಿನಲ್ಲಿ ನಿತ್ಯ ಕ್ಯಾಂಪ್ ಹಾಕಿ ಜನರಿಗೆ ಭರಪೂರ ಮನರಂಜನೆಯನ್ನು ನೀಡಲಾಗುತ್ತಿದೆ. ವಿಶೇಷವೆಂದರೆ ಕಾವಿಧಾರಿ ಸನ್ಯಾಸಿಗಳ ಸಮೂ ಹವು ಇಷ್ಟರ ಮಟ್ಟಿನ ಮನರಂಜನೆ ನೀಡಿದ್ದನ್ನು ನಾಡು ಹಿಂದೆಂದೂ ಕಂಡಿರಲಿಲ್ಲ. ಇದೆಲ್ಲ ವನ್ನೂ ಪ್ರೌಢ ಅಖಂಡ ವೀರಶೈವ ಲಿಂಗಾಯತ ಧರ್ಮಿಗಳು ಹಿಂದೆ ಕಂಡಿದ್ದರೂ ಈ ಪ್ರಹಸನ ದಲ್ಲಿ ವಿಶೇಷವಾಗಿ ಕಾಲೇಜು ಯುವಕ-ಯುವತಿಯರು ಕಾಣುತ್ತಿದ್ದಾರೆ.
ಈ ಅಭಿಯಾನದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಎಂಬ ಪೂರ್ವಭಾವಿ ತಯಾರಿಯ ಪ್ರಶ್ನೋ ತ್ತರ ಸಂವಾದ ನಡೆಯುತ್ತದೆ. ಈ ಸಂವಾದವನ್ನು ನೋಡಿದ ಯಾರಿಗಾದರೂ ಇದು ಪೂರ್ವಭಾವಿ ಯಾಗಿ ತಾಲೀಮು ನಡೆಸಿದ ಸಂವಾದ ಎಂದು ಮೇಲ್ನೋಟಕ್ಕೆ ಕಾಣುತ್ತದೆ. ಇರಲಿ, ಇದು ನಿಜದ ಸಂವಾದ ಎಂದುಕೊಂಡೇ ವಿಶ್ಲೇಷಿಸೋಣ.
ಸಂವಾದದಲ್ಲಿ ಓರ್ವ ವಿದ್ಯಾರ್ಥಿನಿ, “ಇಷ್ಟಲಿಂಗದ ಪರಿಕಲ್ಪನೆ ಹಿನ್ನೆಲೆ ಏನು?" ಎಂದು ಕೇಳಿದಳು. ಅದಕ್ಕೆ ಇಳಕಲ್ ಸ್ವಾಮಿಗಳು, “ಇಷ್ಟಲಿಂಗ, ಧರ್ಮ ಕುರುಹಲ್ಲ. ಅದಕ್ಕ ಸೈಂಟಿಫಿಕ್ ಕಾರಣ ಐತಿ. ಮನುಷ್ಯನ ಮನಸ್ಸಿನಲ್ಲಿ ದುರ್ಭಾವನೆ ಮತ್ತು ಸದ್ಭಾವನೆ ಎಂಬ ಪಾಸಿಟಿವ್ ಮತ್ತು ನೆಗೆಟಿವ್ ಅಂಶಗಳು ಅದಾವು. ಬಸವಣ್ಣೋರು ನೆಗೆಟಿವ್ ಅಂಶ ತೆಗಿಯಾಕ ಇಷ್ಟಲಿಂಗ ಕೊಟ್ಟಾರ. ಸಣ್ಣ ಕೂಸುಗಳಿಗೆ ಕಾಡಿಗಿ ಹಚ್ಚುವುದು, ಕೂಸಿಗೆ ಊಟ ಮಾಡಿಸುವಾಗ ಯಾರರ ಬಂದರ ಊಟದ ಬಟ್ಟಲ ಸೆರಗಿನಿಂದ ಮುಚ್ಚುವುದು ಎಲ್ಲಾ ಕೆಟ್ಟ ದೃಷ್ಟಿ ಬೀಳಬಾರದು ಅಂತ ಮಾಡುದು.
ಕಾಡಿಗಿ ಕೆಟ್ಟ ದೃಷ್ಟಿಯನ್ನ ಹೀರಿಕೊಳ್ಳುತ್ತದ. ಬಸವಣ್ಣನವರು ಆಯುರ್ವೇದಿಕ್ ಪಂಡಿತರಿದ್ದರು. ಕಾಡಿಗೆ ಎಂಬ ಕಾರ್ಬನ್ ಅನ್ನ ನಮಗ ಲಿಂಗ ಮಾಡಿಕೊಟ್ಟು ಕುಂದರಿಸಿದರು. ಈ ಕಾರ್ಬನ್ ನಮ್ಮೆಲ್ಲ ನೆಗೆಟಿವ್ ಎನರ್ಜಿ ಹೀರಿಕೊಂಡು ಬಿಡ್ತತಿ. ನಾವು ಸುಮ್ಮನ ಅದನ್ನ ನೋಡ್ಕೋತ ಕೂತುಕಬೇಕು. ನೀವೆ ಬಿಎಸ್ಸಿ ಸ್ಟೂಡೆಂಟ್ಸ್ ಇದ್ದೀರಿ. ನೀವು ಬ್ಲಾಕ್ ಬಾಡಿ ರೇಡಿಯೇಷನ್ ಥಿಯರಿ, ಫೋಕಲ್ ಲೆನ್ತ್ ಥಿಯರಿ ಓದಿರ್ತೀರಿ. ಲಿಂಗ ಇಡೋ ಗುಂಡಗಡಿಗಿ ಸಾಮಾನ್ಯವಾಗಿ ಬೆಳ್ಳಿದು ಇರ್ತದ.
ಬೆಳ್ಳಿ ಹೀಟ್ ಕಂಡಕ್ಟರ್ ಐತಿ. ಅದು ನಮ್ಮ ಬಾಡಿ ಹೀಟ್ ಹೀರಿಕೊಂಡು ಒಳಗಿರೋ ಕಾರ್ಬನ್ ಲಿಂಗಾನ ಹೀಟ್ ಮಾಡ್ತೇತಿ. ಪೂಜಾ ಮಾಡುವಾಗ ಅದನ್ನ ಅಂಗೈ ಮ್ಯಾಲೆ ಯಾಕ ಇಟ್ಕೋತಿವಿ ಅಂದ್ರ ಅಂಗೈ ಹೀಟ್ ಇರ್ತೇತಿ. ಅಂಗೈ ಮ್ಯಾಲ ಲಿಂಗ ಇಟ್ಕೊಂಡಾಗ ಗೆಲಾಕ್ಸಿಯಿಂದ ಆಟಂಸ್ ಬಂದು ಕಾರ್ಬನ್ ಮ್ಯಾಲ ಕುರುತಾವ. ಕಾರ್ಬನ್ (ಲಿಂಗ)ಹೀಟಿಂದ ಆಟಂಸ್ ಬಿಸಿಯಾಗಿ ಪ್ರೋಟಾ ನ್ಯೂಟ್ರಾ ಎಲೆಕ್ಟ್ರಾ ರೇಡಿಯೇಟ್ ಆಗಿ ಹನ್ನೆರಡು ಇಂಚಿನ ದೂರದಲ್ಲಿರುವ ಕಣ್ಣು ಅವನ್ನ ಹೀರಿ ಕೊಂಡು ಬಿಡ್ತೇತಿ.
ಕಣ್ಣಾಗಿರೋ ನರಗೋಳು ಮೂಲಕ ಪಿನಿಯಲ್ ಗ್ಲಾಂಡ್ ಅದನ್ನ ಜಗ್ಗಿ ಮೆಲಟೋನಿನ್ ಉತ್ಪಾದನೆ ಆಗ್ತದ. ಈ ಮೆಲಟೋನಿನ್ ಅನ್ನೋದು best tonic for nerves ! ಉತ್ಪತ್ತಿಯಾದ ಮೆಲಟೋನಿನ್ ಪಿಟ್ಯುಟರಿ ಗ್ಲ್ಯಾಂಡ್ ಸೇರಿ ನಂತರ ನರವ್ಯೂಹದ ಮೂಲಕ ದೇಹಕ್ಕ ಹೊಸ ಚೈತನ್ಯ ಕೊಡ್ತದ".
ಹೀಗೆ ಬಸವಣ್ಣನವರು ಆಯುರ್ವೇದಿಕ್, ಭೌತಶಾಸ್ತ್ರ, ರಸಾಯನಶಾಸ್ತ್ರದ ಪಂಡಿತರಾಗಿ ಇನ್ನೇ ನೇನೋ ಆಗುವವರಿದ್ದರು. ಆದರೆ ಉತ್ತರ ಅಷ್ಟಕ್ಕೇ ಮುಗಿಯಿತು. ಅಂದ ಹಾಗೆ, ವೈಜ್ಞಾನಿಕವಾಗಿ ಸಾಬೀತಾಗಿರುವಂತೆ ಮನುಷ್ಯನ ದೇಹದಲ್ಲಿ ಆತನ ತೂಕದ 18 ಪ್ರತಿಶತ ಕಾರ್ಬನ್ ಇರುತ್ತದೆ.
ಹೀಗಿರುವಾಗ ಎರಡು ತೊಲ ತೂಕದ ಇಷ್ಟಲಿಂಗದ ಕಾರ್ಬನ್ ಏನು ಮಹಾ ಬದಲಾವಣೆ ತರಬಲ್ಲದು? ಆಧ್ಯಾತ್ಮಿಕ ಅರುಹಿನ ಕುರುಹಾದ ಇಷ್ಟಲಿಂಗವನ್ನು ಯಃಕಶ್ಚಿತ್ ಎರಡು ತೊಲದ ಕಾರ್ಬನ್ ಮಾಡಿ, ಆಧ್ಯಾತ್ಮಿಕ ಬಸವಣ್ಣನನ್ನು ಭೌತಿಕ ವಿಜ್ಞಾನಿ ಮಾಡಿ, ತಹತಹಿಯ ಸಂಕಥನ ವನ್ನು ಓರ್ವ ಮಠಾಧಿಪತಿಗಳು ಹೊಸೆಯುವ ಮೂರ್ಖತನದ ಧಾರ್ಷ್ಟ್ಯದ ಅನಿವಾರ್ಯತೆ ಏನು? ಹೀಗೆ ತೆಪರು ತೆಪರಾಗಿ ತಾವೇ ತಾವಾಗಿ ಬಟಾಬಯಲು ಬೆತ್ತಲಾಗುವ ಜರೂರತ್ತು ಇವರಿಗೆ ಬೇಕಿತ್ತೆ? ಕಣ್ಣು, ದೃಷ್ಟಿ, ಕಪ್ಪನೆಯ ಕಾರ್ಬನ್ನು, ಗೆಲಾಕ್ಸಿ, ಅಂಗೈ, ಹೀಟು, ಸ್ರವಿಸುವುದು, ನರನಾಡಿಗಳಲ್ಲಿ ಒಸರಿ ಚೈತನ್ಯವುಕ್ಕಿ ಆನಂದ ತರುವುದು... ಎಂಬ ಥಿಯರಿಯನ್ನು ಪಡ್ಡೆ ಹೈಕಳು ನೂರಕ್ಕೆ ನೂರು ಪ್ರತಿಶತ ಜೀವಶಾಸದ ಪ್ರಕ್ರಿಯೆಯಾಗಿಯೇ ಆಲೋಚಿಸಿ ಆನಂದಿಸುತ್ತಾರೆ ಎಂಬುದನ್ನು ಈ ಕಾವಿ ಬ್ರಹ್ಮಚಾರಿಗಳು ಖಂಡಿತ ಅರಿಯಲು ಸಾಧ್ಯವಿಲ್ಲ!
ಇನ್ನು ಲಿಂಗವನ್ನು ಅಂಗೈಯಲ್ಲಿ ಹಿಡಿದು ದೃಷ್ಟಿಯನ್ನು ಲಿಂಗದಲ್ಲಿ ಕೇಂದ್ರೀಕರಿಸಿ ಧ್ಯಾನಸ್ಥ ರಾಗುವುದರಿಂದ ಮಿದುಳಿನಲ್ಲಿ ಪಿನಿಯಲ್ ಗ್ರಂಥಿ (ಗ್ಲ್ಯಾಂಡ್) ಜಾಗೃತಗೊಂಡು ಲಿಂಗವಂತನು ಹೆಚ್ಚಿನ ಕಾಯಕ, ಬೌದ್ಧಿಕ, ಆಧ್ಯಾತ್ಮಿಕ ಸಾಧನೆಗೈದು ಸದಾ ಸಮಚಿತ್ತನಾಗಿ ಶಾಂತಿಯನ್ನು ಹೊಂದಿರು ತ್ತಾನೆ ಎಂದು ವೀರಶೈವ ಧರ್ಮವು ಹೇಳುತ್ತದೆ.
ಕೈಯಲ್ಲಿ ಏನನ್ನೂ ಹಿಡಿಯದೆ ಭ್ರೂಮಧ್ಯೆ ದೃಷ್ಟಿಯನ್ನು ಕೇಂದ್ರೀಕರಿಸಿ ಧ್ಯಾನಸ್ಥರಾಗುವುದರಿಂದ ಸಹ ಇದೇ ಜಾಗೃತಿ ಉಂಟಾಗುತ್ತದೆ ಎಂದು ಯೋಗಶಾಲೆಗಳು, ಅಧ್ಯಾತ್ಮಗುರುಗಳು, ಮತ್ತು ಹಿಂದೂ ಸಂಸ್ಕೃತಿಯ ಮತಧರ್ಮಗಳು ಹೇಳುತ್ತವೆ. ವೀರಶೈವ ಧರ್ಮವೂ ಲಿಂಗವೆಂಬ ಕುರುಹು ಹಿಡಿದು ಧ್ಯಾನದ ಸಾಧನೆಯಲ್ಲಿ ಒಂದು ಮಟ್ಟವನ್ನು ದಾಟಿದ ನಂತರ ಕುರುಹಿನ ಅವಶ್ಯಕತೆ ಯಿಲ್ಲ ಎಂದೇ ಹೇಳುತ್ತದೆ.
ಪತಂಜಲಿಯ ಅಷ್ಟಾಂಗ ಯೋಗದ ‘ಧಾರಣ’ವೇ ಶಿವಾಗಮ ಮತ್ತು ವಚನಗಳು ಹೇಳಿದ ಷಟ್‌ಸ್ಥಳ ಗಳ ‘ಐಕ್ಯ’ರೂಪ. ಧಾರಣ ಮತ್ತು ಸಮಾಧಿ ಎಂಬ ಪತಂಜಲಿಯ ಯೋಗಭಾಗಗಳೇ ವೀರಶೈವದ ಐಕ್ಯಸ್ಥಲ. ಕಂತೆ ಹಚ್ಚಿದ ಇಷ್ಟಲಿಂಗವನ್ನು ಚಿನ್ನದ/ಬೆಳ್ಳಿಯ/ ಕಟ್ಟಿಗೆಯ ಕರಡಿಗೆಯಲ್ಲಿ ಅಥವಾ ಬಟ್ಟೆಯ ಗಂಟಿನಲ್ಲಿ ಇಡುವ ಉದ್ದೇಶ ಕಂತಿಯ ಒಳಗಿರುವ ಗುರು ಕರುಣಿಸಿದ ಚಿಕ್ಕ ಸ್ಥಾವರ ಲಿಂಗದ ಪೀಠದ ರಕ್ಷಣೆಗೆ ಕಂಡುಕೊಂಡ ವಿಧಾನವೇ ಹೊರತು ಯಾವ ಕಾರ್ಬನ್ನು, ಹೀಟ್ ಕಂಡಕ್ಟರ್ ಎನ್ನುವ ಸಂಕಥನೀಯ ವಿಶ್ಲೇಷಣೆಯಲ್ಲ.
ಮಕ್ಕಳಿಗೆ ಇಂಥ ತಪ್ಪು ಕಲ್ಪನೆ ಕೊಡುವುದು ಮೂರ್ಖತನವಾಗುತ್ತದೆ. ಒಟ್ಟಾರೆ ಧ್ಯಾನದ ಸಾಧನೆ ಯಿಂದ ಯೋಗ ನಿದ್ರೆ ಹೊಂದಿ ಸಾಧಕನು ಭೂತ, ವರ್ತಮಾನ, ಭವಿಷ್ಯತ್ ಕಾಲದ ಪ್ರಮುಖ ಆಗು ಹೋಗುಗಳನ್ನು ಕಾಣುತ್ತಾನೆ. ಆತನು ಕುಳಿತಲ್ಲಿಂದಲೇ ತನ್ನ ಆತ್ಮವನ್ನು ಬಯಸಿದ ಸ್ಥಳ, ಮನೆ, ಊರು, ಬೀದಿ, ದೇಶಗಳನ್ನು ಸುತ್ತಿಸುತ್ತಾನೆ.
ಒಟ್ಟಾರೆ ಕಾಲಾತೀತ, ಜಾಗಾತೀತನಾಗಿ ಅನಿಕೇತ ನನೇ ಆಗಿರುತ್ತಾನೆ ಎಂದು ಅನೇಕ ಸಾಧು ಸಾಧಕ ರಲ್ಲದೆ ಶೈವ, ವೀರಶೈವ, ವೈದಿಕ, ಸನಾತನ ಮತಧರ್ಮಗಳೆಲ್ಲವೂ ಹೇಳುತ್ತವೆ. ಇರಲಿ, ಇನ್ನೊಬ್ಬ ವಿದ್ಯಾರ್ಥಿ, “ಜಾತಿ ವ್ಯವಸ್ಥೆ ನಿವಾರಿಸಲು ವಚನಗಳ ಪ್ರೇರಣೆ ಇನ್ನೂ ಆಗಿಲ್ಲವೇಕೆ?" ಎಂದು ಕೇಳಿದನು.
ಇದಕ್ಕೆ ಉತ್ತರಿಸಿದ ಭಾಲ್ಕಿ ಶ್ರೀಗಳು, “ಜಾತಿ ನಿರ್ಮೂಲನೆಗಾಗಿಯೇ ಬಸವಣ್ಣ ಹೋರಾಟ ಮಾಡಿದ್ದು. ಜಾತಿ ಅಂದ್ರ ರೋಗ, ಧರ್ಮ ಅದಕ್ಕ ಔಷಧಿ. ಈಗ ಮಾವು, ಬೇವು, ಜಾಲಿ ಮುಂತಾದ ಕಟಿಗಿಯನ್ನು ಸುಟ್ಟರ ಅದರ ಬೂದಿಯನ್ನು ಇಂತಿಂಥಾದ್ದು ಅಂತ ಹೇಳೋಕ ಆಗ್ತದ? ನಮ್ಮ ಧರ್ಮ ಅಂಥಾದ್ದು" ಎಂದರು.
ಅವರ ಅಜುಬಾಜು ಮೇಲೆ ಕೆಳಗೆ ಸುತ್ತ ಹಲವಾರು ಮಲತ್ರಯಿ ಜಾತಿಪೀಠಿಗಳನ್ನೇ ಕೂರಿಸಿಕೊಂಡು ಸತ್ಯದ ನೆತ್ತಿಯ ಮೇಲೆ ಹೊಡೆದಂತೆ ಹೀಗೆ ಉತ್ತರಿಸಿದರು. ಅಂದ ಹಾಗೆ ಈ ಅಭಿಯಾನದ ರಂಗನಿರ್ದೇಶಕರೇ ಪಂಡಿತಾರಾಧ್ಯ ಎಂಬ ಓರ್ವ ಮಲತ್ರಯಿ ಜಾತಿಪೀಠಿ! ಚೆನ್ನಬಸವಣ್ಣನ ದೀಕ್ಷಾ ವಿಧಿ ವಿಧಾನದ ರೀತಿ ದೀಕ್ಷೆ ಪಡೆಯದ ಇವರಲ್ಲದೆ ಈ ಒಕ್ಕೂಟದ ಅನೇಕ ಜಾತಿ ಪೀಠಿ ಸದಸ್ಯರು ಸಹ ಮಲತ್ರಯಿಗಳು ಮತ್ತು ಲಿಂಗಾಯತದ ಹೊರಗಿರುವವರು.
ಇರಲಿ, ಮತ್ತೋರ್ವ ವಿದ್ಯಾರ್ಥಿನಿ, “ಲಿಂಗತಾರತಮ್ಯ ಏಕೆ ಇನ್ನೂ ಇದೆ. ನೀವೆ ಸ್ವಾಮಿಗಳು ಮುಂದೆ ಕುಳಿತಿದ್ದೀರಿ. ಮಾತೆಯರು ಹಿಂದೆ ಕೂತಿದ್ದಾರೆ. ನೀವೇ ಲಿಂಗ ತಾರತಮ್ಯ ಮಾಡುತ್ತಿದ್ದೀರಿ!" ಎಂದು ಆಕ್ಷೇಪಿಸಿದಳು. ಅದಕ್ಕೆ, ಸಂವಾದ ನಡೆಸಿಕೊಡುತ್ತಿದ್ದ ಹಿಡಿಗೂಟದ ಸ್ವಾಮಿಯು, “ನಾವು ಮಹಿಳಾ ಮಾತೆಯರನ್ನು ಹಿಂದೆ ಎತ್ತರದ ಸ್ಥಾನದಲ್ಲಿ ಕೂರಿಸಿ ಪುರುಷ ಸ್ವಾಮಿಗಳನ್ನು ಅವರ ಕೆಳಗೆ ಕೂರಿಸಿ ದ್ದೇವೆ" ಎಂದು ಹಾಸ್ಯಧಾಟಿಯಲ್ಲಿ ಹೇಳಿದರೆ ಭಾಲ್ಕಿ ಶ್ರೀಗಳು, “ನಾವು ಇಲ್ಲಿ ಕೂರಬೇಕು ಎಂದು ನಿಯಮ ಹೇಳಿಲ್ಲ.
ಇಲ್ಲಿ ಯಾರು ಎಲ್ಲಿ ಬೇಕಿದ್ದರೂ ಕೂರಬಹುದು. ಅವರವರ ಇಚ್ಛೆಗನುಸಾರವಾಗಿ ಕುಳಿತಿದ್ದಾರೆ" ಎಂದು ತಿಪ್ಪೆ ಸಾರಿಸಿದರು. ಅದಕ್ಕೆ ಸಾಣೇಹಳ್ಳಿ, “ಆಯ್ದಕ್ಕಿ ಲಕ್ಕಮ್ಮ ತನ್ನ ಗಂಡ ಹೆಚ್ಚು ಅಕ್ಕಿ ತಂದಾಗ ಆತನಿಗೆ ಛೀಮಾರಿ ಹಾಕಿದಳು ಎಂದರೆ ಎಂಥ ಸಮಾನತೆ ಇತ್ತು. ಇವೊತ್ತು ಯಾಕಿಲ್ಲ? ಈಗ ಸ್ವಾರ್ಥ ತುಂಬಿದೆ" ಎಂದು ಮಾನ ಮುಚ್ಚಿಕೊಂಡರು.
ಒಟ್ಟಾರೆ ಗೊಂದಲ ಗೊಂದಲ ಗೊಂದಲ! ದ್ವಂದ್ವ ದ್ವಂದ್ವ ದ್ವಂದ್ವ!! ನಂತರ ಇನ್ನೊಬ್ಬ ವಿದ್ಯಾರ್ಥಿ, “ಈಗಲೂ ಕೆಲವು ಕಡೆ ಕೆಲವು ಜಾತಿಯವರಿಗೆ ದೇವಸ್ಥಾನ ಪ್ರವೇಶ ನಿರಾಕರಣೆ ಇದೆ. ಏಕೆ?" ಎಂದು ಕೇಳಿದನು.
ಅದಕ್ಕೆ ಜಾತಿಪೀಠಿ ಪಂಡಿತಾರಾಧ್ಯರು, “ದೇವಸ್ಥಾನಗಳಿಗೆ ಹೋಗುವುದು ಬಿಟ್ಟರೆ ಜಾತಿಭೂತ ಕಿತ್ತು ಹೋಗುತ್ತದೆ" ಎಂದರು. ಆದರೆ ಖುದ್ದು ತಾವೇ ಓರ್ವ ಜಾತಿಪೀಠದ ಶಾಖಾಮಠಿಯಾಗಿದ್ದುದನ್ನು ಜಾತಿಭೂತ ಎನ್ನಲಿಲ್ಲ! ದೆವ್ವದ ಬಾಯಲ್ಲಿ ಭಗವದ್ಗೀತೆ!
ಇನ್ನೊಬ್ಬ ವಿದ್ಯಾರ್ಥಿ, “ಸಮಾನತೆ ಎನ್ನುವ ನೀವು, ನಿಮ್ಮ ಲಿಂಗಾಯತವೇ ವಿಶ್ವದ ಶ್ರೇಷ್ಠ ಧರ್ಮ ಎಂದು ಏಕೆ ಹೇಳುತ್ತೀರಿ?" ಎಂದು ಕೇಳಿದನು. ಅದಕ್ಕೆ ಉತ್ತರಿಸಿದ ಮಾತೆಯೊಬ್ಬರು, “ಕ್ರಿಶ್ಚಿಯನ್ನ ರಲ್ಲಿ ಅದಿಲ್ಲ, ಇಸ್ಲಾಮಿನಲ್ಲಿ ಇದಿಲ್ಲ, ಬ್ರಾಹ್ಮಣರಲ್ಲಿ ಮಹಿಳೆಯರಿಗೆ ಜನಿವಾರವೇ ಇಲ್ಲ. ಅದಕ್ಕೆ ನಮ್ಮದು ಶ್ರೇಷ್ಠ" ಎಂದು ಉತ್ತರಿಸಿ ಕಿಸಕಿಸನೆ ನಕ್ಕು ಧಾರ್ಮಿಕ ಸಮಾನತೆಯ ಉದ್ದೇಶವನ್ನೇ ಅರ್ಥೈಸದಾದರು.
ಮುಂದಿನ ಪ್ರಶ್ನೆ, “ನಮ್ಮ ಜಾತಿಯವರಿಗೆ ಏಕೆ ಟಿಕೆಟ್ ಕೇಳ್ತೀರಿ?"
ಸಾಣೇಹಳ್ಳಿ, “ನಾನು ಏನೇ ಹೇಳಿದರೂ ಅದು ವಿವಾದ ಆಗುತ್ತದೆ. ಇಂಥವರನ್ನೇ ಮಂತ್ರಿ ಮಾಡ್ರಿ, ಟಿಕೆಟ್ ಕೊಡ್ರಿ ಅನ್ನೋದು ತಪ್ಪು. ಬಸವಣ್ಣ ಸಹ ರಾಜಕಾರಣಿಯೇ. ಹೇಡಿಂಗೇ ಹಿರಿತನ ಎಂಬ ಸರ್ವಜ್ಞನ ವಚನವನ್ನು ಉಖಿಸಿ ಮಠಕ್ಕೆ ಸ್ವಾಮಿ ಹೇಗೆ ಇರಬೇಕು ಎಂದು ತಿಳಿಸುತ್ತಾ ಮೂಢ, ಸ್ವಾರ್ಥಿ, ಅಜ್ಞಾನಿ, ವಿಷಯ ಲೋಲುಪ್ತ ಆಗಿರಬಾರದು" ಎಂದು ತಮ್ಮ ಅಜ್ಞಾನಕ್ಕೆ ಸೆಲೆಬ್ರಿಟಿ ಲೇಪನ ಹಚ್ಚಿ ಮದವನ್ನು ಮೆರೆದರು.
ವಿಪರ್ಯಾಸವೆಂದರೆ ಆ ಮಾತುಗಳು ಮಠಾಧೀಶನಲ್ಲದ ಖುದ್ದು ಮಧಾಧೀಶ ತಾನೇ ಆಗಿದ್ದೇನೆ ಎಂಬ ಆತ್ಮಾವಲೋಕನದ ಅಣಿಮುತ್ತುಗಳಾಗಿದ್ದವು! ಕಣ್ಣರಿಯದಿದ್ದರೆ ಕರುಳರಿಯದೇ? ಇನ್ನು ನಡುನಡುವೆ ಸಂವಾದದ ಹಿಡಿಗೂಟ ಹಿಡಿದಿದ್ದ ಸ್ವಾಮಿ, “ಜೋರು ಚಪ್ಪಾಳೆ ಪ್ಲೀಸ್! ಜೋರು ಚಪ್ಪಾಳೆ ಪ್ಲೀಸ್!" ಎನ್ನುತ್ತಿದ್ದ.
ಮುಂದೆ ಅಷ್ಟಾವರಣ, ವಿಭೂತಿ, ರುದ್ರಾಕ್ಷಿ, ಲಿಂಗದ ವ್ಯಾಖ್ಯಾನಕ್ಕೆ ಇಳಕಲ್ ಶ್ರೀಗಳು ರುದ್ರಾಕ್ಷಿ ಆಯುರ್ವೇದಿಕ್ ಶಕ್ತಿ. ಲಿಂಗ ಕಾರ್ಬನ್ ಶಕ್ತಿ, ವಿಭೂತಿ ಅರಿವಿನ ಶಕ್ತಿ ಎಂದೇನೋ ಬಡಬಡಿಸಿದರು.
ಇನ್ನೊಬ್ಬ ವಿದ್ಯಾರ್ಥಿನಿ, “ಸ್ವಾಮಿಗಳು ಎಂದರೆ ಈಗ ಭಯ ಸೃಷ್ಟಿಯಾಗಿದೆ. ಇದಕ್ಕೇನು ಹೇಳುತ್ತೀರಿ?" ಎಂದಳು. ಹಿಡಿಗೂಟದ ಸ್ವಾಮಿ, “ಸಮಾಜದ ಎ ಕ್ಷೇತ್ರಗಳಲ್ಲೂ ಇಂಥ ಅಪವಾದಗಳು ಇರುತ್ತವೆ. ರೈತರು, ಶಿಕ್ಷಕರು, ವೈದ್ಯರು ಮುಂತಾದ ಎಲ್ಲ ರಂಗಗಳಲ್ಲೂ ಇಂಥದ್ದು ಇರುತ್ತದೆ. ಯಾರೋ ಒಬ್ಬ ಸ್ವಾಮಿ ಮಾಡಿದರೆ ಅದು ಎಲ್ಲರದೂ ಅಲ್ಲ" ಎಂದು ಒರೆಸಿ “ಮುಂದಿನ ಪ್ರಶ್ನೆ ಪ್ಲೀಸ್" ಎಂದರು. ನಡುನಡುವೆ ಪ್ರಶ್ನೆ ಕೇಳಿದವರಿಗೆ ‘ಶಹಬ್ಬಾಸ್’, ‘ಅತ್ಯುತ್ತಮ ಪ್ರಶ್ನೆ’ ಮುಂತಾಗಿ ಪುಸಲಾಯಿಸುವ ಪ್ರಕ್ರಿಯೆ ನಡೆಯುತ್ತಲೇ ಇತ್ತು.
ಹಿರೇಮಠ ಎನ್ನುವವರು, “ಶಿವ ಪುರಾಣದಲ್ಲಿ ಪ್ರಕೃತಿದತ್ತ ಐದು ಲಿಂಗ ವರ್ಣನೆ ಇದೆ. ಬಸವಣ್ಣ ಹೇಳಿದ ಇಷ್ಟಲಿಂಗ ಈ ಐದರಲ್ಲಿ ಯಾವ ವರ್ಗದ್ದು?" ಎಂದು ಕೇಳಿದರು. ಅದಕ್ಕೆ ಭಾಲ್ಕಿ ಶ್ರೀಗಳು ಹೇಳಿದ್ದು- “ವಿಶ್ವಾತ್ಮಕ ರೂಪದ್ದು. ಅದಕ್ಕೂ ಶಿವ ಪುರಾಣಕ್ಕೂ ಸಂಬಂಧವಿಲ್ಲ". ಅವರಿಂದ ಮೈಕ್ ಕಿತ್ತುಕೊಂಡ ಸಂಸಾರಿ ಬರಗುಂಡಿ ಎನ್ನುವವರು, “ನಾವು ಪೂಜೆ ಮಾಡುವವರಲ್ಲ. ನಾವು ಅನು ಸಂಧಾನ ಮಾಡುವವರು. ಮುಂದಿನ ಪ್ರಶ್ನೆ, ಮುಂದಿನ ಪ್ರಶ್ನೆ ಕೇಳಿ" ಎಂದರು.
ಮುಂದೆ ಓರ್ವ ಗೃಹಿಣಿ “ಗಣಪತಿ ಮೂರ್ತಿ ಇಡಬೇಕೋ ಅಥವಾ ಬಸವ ಮೂರ್ತಿ ಇಟ್ಟರೆ ಹೇಗೆ?" ಎಂದರು. ಒಬ್ಬ ಲಿಂಗಾಹತ, “ಇಷ್ಟಲಿಂಗ ಬಿಟ್ಟು ಬೇರೆ ಏನೂ ಇಡಬೇಡಿ. ಆದರೆ ಬಸವಣ್ಣ ಓಕೆ. ಬಸವಣ್ಣನ ಮೂರ್ತಿ ಇಡಿ" ಎಂದ.
ಆತನಿಂದ ಮೈಕ್ ಕಿತ್ತುಕೊಂಡ ಬರಗುಂಡಿ ಎಂಬ ಸಂಸಾರಿ ಶರಣ, “ಲಿಂಗವು ಪಂಚದೋಷ ಕಳೆಯುತ್ತದೆ. ಹಾಗಾಗಿ ಬಸವಣ್ಣನ ಮೂರ್ತಿಯೂ ಬೇಡ. ಲಿಂಗದೊಂದಿಗೆ ಅನುಸಂಧಾನ ಮಾಡಿಕೊಂಡರೆ ಸಾಕು. ಯಾವ ಮೂರ್ತಿಪೂಜೆ ಮಾಡುವಂತಿಲ್ಲ. ಅದು ಲಿಂಗಕ್ಕೆ ಮಾಡುವ ಅಪಚಾರ" ಎಂದು ಫರ್ಮಾನು ಹೊರಡಿಸಿದರು. ಅಲ್ಲದೇ ಕೆಲವು ಸ್ವಾಮಿಗಳ ಕಿವಿಯಲ್ಲಿ ತಾಕೀತು ಸಹ ಊದಿದರು.
ಮತ್ತೆ ಮೈಕಿನಲ್ಲಿ, “ನನ್ನ ಎಲ್ಲಾ ಹಿರಿಯರು, ಗುರುಗಳು, ಲಿಂಗದೊಳಗೆ (ಲಿಂಗೈಕ್ಯ). ಅದರ ಅಂಶ ನಾವು. ಲಿಂಗವನ್ನು ಪೂಜಿಸಿ ಲಿಂಗವೇ ಆಗುವವರು ನಾವು" ಎಂದರು... ಲಿಂಗೈಕ್ಯ ಓಕೆ, ಆದರೆ ರೇಣುಕರ ಲಿಂಗೋದ್ಭವ ಏಕೆ? ಎಂದು ಮಾಡೆಲ್ ಉಪೇಂದ್ರನಂತಾದರು.
ಇವರ ಪ್ರಕಾರ ಅಖಂಡ ಶಕ್ತಿಯನ್ನು ಒಂದು ಯಃಕಶ್ಚಿತ್ ಮೂರ್ತಿಗೆ ರೂಪಿಸುವುದು ತಪ್ಪು. ಆದರೆ ಕುರುಹಿನ ರೂಪದ ಲಿಂಗ ಸರಿ! ಗೊಂದಲ ಗೊಂದಲ ಗೊಂದಲ! ದ್ವಂದ್ವ ದ್ವಂದ್ವ ದ್ವಂದ್ವ! ಬರದ ಗುಂಡಿಯಲ್ಲಿ ಇನ್ಯಾವ ಜೀವಜಲ ಉಕ್ಕೀತು? ಕಡೆಗೆ ಧರ್ಮಸ್ಥಳದ ಅಣ್ಣಪ್ಪ, ಹೊರನಾಡು ಅನ್ನಪೂರ್ಣೇಶ್ವರಿ ಗೀತೆಯ ಟೋನಿನಲ್ಲಿ, “ಜಯ ಕಲ್ಯಾಣಕೆ ಜಯ ಕಲ್ಯಾಣಕೆ ಜಯ ಕಲ್ಯಾಣಕೆ ಜಯಹೇ...." ಎಂದು ಮಂಗಳ ತೆರೆ ಬಿದ್ದಿತು.
ಅಂದ ಹಾಗೆ ಈ ಬಸವ ಸಂಸ್ಕೃತಿ ರಂಗಪ್ರಯೋಗದ ಪ್ರಾರ್ಥನೆ ಮತ್ತು ಮಂಗಳ ಹಾಡುವ ಗಾಯಕಿಯು ಸರಕಾರಿ ಮೊರಾರ್ಜಿ ವಸತಿ ಶಾಲೆಯ ಶಿಕ್ಷಕಿ. ಸಾಣೇಹಳ್ಳಿಯ ಎಲ್ಲಾ ಕಾರ್ಯಕ್ರಮ, ವಿದೇಶಿ ಪ್ರವಾಸಗಳಲ್ಲಿ ಹಾಡುವ ಕಾಯಂ ಗಾಯಕಿ. ಇವರಿಗೆ ಸರಕಾರ ಅದ್ಯಾವ ನಿಯಮಾವಳಿಗಳ ಅಡಿಯಲ್ಲಿ ವಿದೇಶ ಪ್ರವಾಸದ ಅನುಮತಿ ಮತ್ತು ತಿಂಗಳಾನುಗಟ್ಟಲೆ ರಜೆಯನ್ನು ಮಂಜೂರು ಮಾಡಿದೆಯೋ ಜಾಮದಾರನೇ ಬಲ್ಲ!
ಸಂಬಳ ಸರಕಾರಿ, ಸೇವೆ ಮಠದಲ್ಲಿ ಎಂಬುದು ಯಾವ ಕಾಯಕ ಸಂಸ್ಕೃತಿಯೋ ಕಾಯಕಯೋಗಿ ಸಾಣೇಹಳ್ಳಿಯೇ ಬಲ್ಲ!
(ಮುಂದುವರಿಯುವುದು)
(ಲೇಖಕರು ಶಿಕಾಗೊ ನಿವಾಸಿ ಹಾಗೂ ಸಾಹಿತಿ)