Vastu Tips: ಮನೆಯಲ್ಲಿ ಸಕಾರಾತ್ಮಕತೆಯನ್ನು ವೃದ್ಧಿಸಲಿ ನವರಾತ್ರಿ
ಇಂದು ನವರಾತ್ರಿ ಆರಂಭವಾಗಲಿದೆ. ಒಂಬತ್ತು ದಿನಗಳ ಕಾಲ ಆರಾಧಿಸಲಾಗುವ ಈ ಹಬ್ಬದ ವೇಳೆ ಮನೆಯಲ್ಲಿ ಕೆಲವೊಂದು ನಿಯಮ ಪರಿಪಾಲನೆ ಮಾಡುವುದರಿಂದ ಸಕಾರಾತ್ಮಕತೆಯನ್ನು ವೃದ್ಧಿಸಿಕೊಳ್ಳಬಹುದು. ಇದಕ್ಕಾಗಿ ವಾಸ್ತು ಶಾಸ್ತ್ರಜ್ಞರಾದ ಕರುಣಾಕರ ಶಾಂತಿ ಹೇಳಿರುವ ಕೆಲವು ನಿಯಮಾವಳಿಗಳು ಇಂತಿವೆ.

-

ಬೆಂಗಳೂರು: ದೇಶಾದ್ಯಂತ ನವರಾತ್ರಿ (Vastu tips for navaratri) ಸಂಭ್ರಮ ಆರಂಭವಾಗಿದೆ. ಮನೆಮನೆಗಳಲ್ಲೂ ದೇವಿಯ ನಾಮಸ್ಮರಣೆ ಕೇಳುವಂತಿದೆ. ಒಂಬತ್ತು ದಿನಗಳಲ್ಲಿ ದೇವಿಯ ವಿವಿಧ ರೂಪಗಳನ್ನು ಪೂಜಿಸುವುದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿಯನ್ನು ಆಹ್ವಾನಿಸಬಹುದು. ಇದಕ್ಕಾಗಿ ವಾಸ್ತು ಶಾಸ್ತ್ರವು (vastu shastra) ಕೆಲವೊಂದು ನಿಯಮಗಳನ್ನು ಹೇಳಿದೆ. ಇದನ್ನು ಸರಿಯಾಗಿ ಅನುಸರಿಸಿ ನವರಾತ್ರಿ ಪೂಜೆಯನ್ನು (Navaratri 2025) ಮನೆಯಲ್ಲಿ ಮಾಡುವುದರಿಂದ ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸಬಹುದು. ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಸುವಂತೆ ಮಾಡಬಹುದು ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞ ಕರುಣಾಕರ ಶಾಂತಿ.
ದ್ವಾರ ಸ್ವಚ್ಛವಾಗಿರಲಿ
ಮನೆಯ ಮುಖ್ಯ ದ್ವಾರವು ಶಕ್ತಿಯ ಹರಿವಿನ ದ್ವಾರವಾಗಿದೆ. ಅದನ್ನು ಸದಾ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಬಹುಮುಖ್ಯ. ಬಾಗಿಲಿನ ಬಳಿ ಕಸದ ಬುಟ್ಟಿ, ಪೊರಕೆ ಅಥವಾ ಮುರಿದ ವಸ್ತುಗಳು ಇರದಂತೆ ನೋಡಿಕೊಳ್ಳಿ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಸ್ವಸ್ತಿಕ್ ಚಿಹ್ನೆ ಮತ್ತು ಮಾವಿನ ಎಲೆ ತೋರಣಗಳಿಂದ ಪ್ರವೇಶದ್ವಾರವನ್ನು ಅಲಂಕರಿಸುವುದರಿಂದ ಮನೆಗೆ ಸಂಪತ್ತು ಮತ್ತು ಸಾಮರಸ್ಯದ ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸಿಕೊಳ್ಳಬಹುದು.
ಪೂಜಾ ಸ್ಥಳ
ನವರಾತ್ರಿಯಲ್ಲಿ ಮನೆಯ ಪೂಜಾ ಸ್ಥಳವನ್ನು ಈಶಾನ್ಯದಲ್ಲಿ ಮಾಡುವುದು ಶುಭ ಎಂದು ಪರಿಗಣಿಸಲಾಗಿದೆ. ಇದು ಪೂಜೆಗೆ ಅತ್ಯಂತ ಪವಿತ್ರವಾದ ಪ್ರದೇಶವಾಗಿದೆ. ಪೂರ್ವ ಅಥವಾ ಉತ್ತರಕ್ಕೆ ಎದುರಾಗಿ ದುರ್ಗಾ ದೇವಿಯ ವಿಗ್ರಹ ಅಥವಾ ಚಿತ್ರವನ್ನು ಮರದ ಚೌಕಿಯ ಮೇಲೆ ಇಟ್ಟು ಪ್ರಾರ್ಥನೆ ಸಲ್ಲಿಸಬೇಕು. ಇದರಿಂದ ಜೀವನದಲ್ಲಿ ಯಶಸ್ಸು, ಧೈರ್ಯ ಸಿಗುವುದು.
ಪೂಜಾ ಕೋಣೆಯಲ್ಲಿ ಹಳದಿ, ಹಸಿರು, ಗುಲಾಬಿ ಅಥವಾ ನೇರಳೆ ಬಣ್ಣಗಳಂತಹ ಶುಭ ಬಣ್ಣಗಳನ್ನು ಆರಿಸಿಕೊಳ್ಳುವುದು ಒಳ್ಳೆಯದು. ದೇವಿಗೆ ಕೆಂಪು ವಸ್ತ್ರ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಪೂಜಾ ವಿಧಿಗಳಿಗೆ ತಾಮ್ರ ಅಥವಾ ಬೆಳ್ಳಿಯ ಪಾತ್ರೆಗಳನ್ನು ಬಳಸಿ. ಈಶಾನ್ಯ ಮೂಲೆಯಲ್ಲಿ ತುಳಸಿ ಗಿಡವನ್ನು ಇಡುವುದರಿಂದ ಮನೆಯಲ್ಲಿ ಸಾಮರಸ್ಯದ ವಾತಾವರಣವನ್ನು ವೃದ್ಧಿಸಿಕೊಳ್ಳಬಹುದು. ಇದು ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಸಮೃದ್ಧಿಯನ್ನು ಆಹ್ವಾನಿಸುತ್ತದೆ.
ಅಖಂಡ ಜ್ಯೋತಿ
ಮನೆಯಲ್ಲಿ ಅಖಂಡ ಜ್ಯೋತಿಯನ್ನು ಇಟ್ಟುಕೊಂಡರೆ ಅದನ್ನು ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ತುಪ್ಪದಿಂದ ಬೆಳಗಿಸುವುದರಿಂದ ಶಾಂತಿ, ಸಮೃದ್ಧಿಯನ್ನು ಆಹ್ವಾನಿಸಬಹುದು.
ಕಲಶ ಸ್ಥಾಪನೆ
ನವರಾತ್ರಿಯ ಮೊದಲ ದಿನ ದೇವಾಲಯದಲ್ಲಿ ಶುದ್ಧ ನೀರು ಮತ್ತು ಹೂವುಗಳಿಂದ ತುಂಬಿದ ಕಲಶವನ್ನು ಇರಿಸಿ. ಕೊನೆಯ ದಿನದಂದು ವಿಸರ್ಜಿಸಿ. ಇದು ಮನೆಯಲ್ಲಿ ಸಾಮರಸ್ಯ ಮತ್ತು ಆರ್ಥಿಕ ಸ್ಥಿರತೆಯನ್ನು ಉತ್ತೇಜಿಸುತ್ತದೆ. ಈ ನೀರನ್ನು ಮನೆಯಾದ್ಯಂತ ಸಿಂಪಡಿಸಿ.
ಕನ್ಯಾ ಪೂಜೆ
ಅಷ್ಟಮಿಯಂದು ಕನ್ಯಾ ಪೂಜೆಯನ್ನು ಮಾಡಿದರೆ ದೇವಿಯ ಅನುಗ್ರಹ ಪ್ರಾಪ್ತಿಯಾಗುವುದು. ಇದಕ್ಕಾಗಿ ಕನ್ಯೆಯರನ್ನು ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಕುಳ್ಳಿರಿಸಿ ಅವರನ್ನು ಪೂಜಿಸಬೇಕು. ಇದು ಜೀವನದಲ್ಲಿ ಸಂತೋಷ ಮತ್ತು ತೃಪ್ತಿಯನ್ನು ತರುತ್ತದೆ.
ಇದನ್ನೂ ಓದಿ: Vastu Tips: ಪೂಜೆ ವೇಳೆ ಗಂಟೆ ಬಾರಿಸುವುದರಿಂದ ಏನು ಪ್ರಯೋಜನ?
ಗಂಟೆ ನಾದ
ಶಂಖ, ಗಂಟೆಗಳ ನಾದ ಮಾಡುವುದರಿಂದ ಮನೆಯ ಸುತ್ತಮುತ್ತ ಇರುವ ನಕಾರಾತ್ಮಕ ಶಕ್ತಿಗಳನ್ನು ಹೋಗಲಾಡಿಸಬಹುದು. ಇದರಿಂದ ಮನೆಯಲ್ಲಿ ಆಧ್ಯಾತ್ಮಿಕ ವಾತಾವರಣ ಸೃಷ್ಟಿಯಾಗುವುದು.
ನವರಾತ್ರಿಯ ವೇಳೆ ಈ ನಿಯಮಗಳನ್ನು ಪಾಲಿಸುವುದರಿಂದ ಮನೆಗಳಿಗೆ ಶಾಂತಿ, ಸಮೃದ್ಧಿ ಸ್ಥಿರವಾಗಿ ನೆಲೆಸುವಂತೆ ಮಾಡಬಹುದು ಎನ್ನುತ್ತಾರೆ ವಾಸ್ತು ತಜ್ಞರು.