ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranjith H Ashwath Column: ಸಿದ್ಧಾಂತಕ್ಕಾಗಿ ಪಕ್ಷದಲ್ಲಿರುವವರಿಗೊಂದು ಅವಕಾಶ ?

ವರ್ಷದಿಂದ ವರ್ಷಕ್ಕೆ ಅಧಿಕಾರವನ್ನು ವಿಸ್ತರಿಸುತ್ತಲೇ ಸಾಗುತ್ತಿರುವ ಬಿಜೆಪಿ ನಾಯಕರಿಗೆ, ಕರ್ನಾಟಕದ ಇಂದಿನ ಸ್ಥಿತಿ ‘ಗಂಭೀರ’ ಎನಿಸದೇ ಇರಬಹುದು. ಆದರೆ ದಕ್ಷಿಣ ಭಾರತದಲ್ಲಿ ಪಕ್ಷದ ಬಾವುಟ ಕಟ್ಟಲು ಜನರಿಲ್ಲದ ಸಮಯದಲ್ಲಿ ‘ನಿಷ್ಠಾವಂತ’ ಕಾರ್ಯಕರ್ತರಿಂದಲೇ ಮಾದರಿ ಎನಿಸಿದ್ದ ರಾಜ್ಯ ಬಿಜೆಪಿಯಲ್ಲಿ ಇಂದು ವಲಸಿಗರದ್ದೇ ಕಾರುಬಾರಾಗುತ್ತಿರುವುದು ಹಲವು ಕಾರ್ಯಕರ್ತರ ಅಕ್ಷೇಪಕ್ಕೆ ಕಾರಣವಾಗಿದೆ ಎಂದರೆ ತಪ್ಪಾಗುವುದಿಲ್ಲ.

ಸಿದ್ಧಾಂತಕ್ಕಾಗಿ ಪಕ್ಷದಲ್ಲಿರುವವರಿಗೊಂದು ಅವಕಾಶ ?

ಅಶ್ವತ್ಥಕಟ್ಟೆ

ranjith.hoskere@gmail.com

ದೇಶ ಮೊದಲು, ಪಕ್ಷ ನಂತರ; ಪಕ್ಷ ಮೊದಲು, ವ್ಯಕ್ತಿ ನಂತರ’ ಎನ್ನುವ ಮಂತ್ರದೊಂದಿಗೆ ದೇಶದಲ್ಲಿ ಆರಂಭಗೊಂಡ ಬಿಜೆಪಿಯ ಮೂಲ ಎನಿಸಿರುವ ಸಂಘ-ಪರಿವಾರವು (ಆರ್‌ಎಸ್‌ಎಸ್) ಶತಮಾನೋ ತ್ಸವದ ಸಂಭ್ರಮದಲ್ಲಿದೆ. ಅಧಿಕಾರಕ್ಕಿಂತ ಸೈದ್ಧಾಂತಿಕ ಹೋರಾಟವೇ ಮುಖ್ಯ ಎನ್ನುವ ಆಲೋಚನೆಗೆ ಇಂದಿಗೂ ಸಂಘ ಪರಿವಾರದ ಬಹುತೇಕರು ಬದ್ಧರಾಗಿದ್ದಾರೆ.

ಆದರೆ ಪ್ರಜಾಪ್ರಭುತ್ವದಲ್ಲಿ ‘ಧ್ವನಿ’ ಇರಬೇಕು, ತಮ್ಮ ಸಿದ್ಧಾಂತವನ್ನು ಜನರಿಗೂ ತಿಳಿಸಬೇಕು ಎಂದರೆ ರಾಜಕೀಯ, ಅಧಿಕಾರ ಅನಿರ್ವಾಯ ಎನ್ನುವ ಕಾರಣಕ್ಕೆ ಸಂಘ ಪರಿವಾರದ ಮುಂದು ವರಿದ ಭಾಗವಾಗಿ ಬಿಜೆಪಿ ರೂಪುಗೊಂಡಿದೆ. ಸಿದ್ಧಾಂತಕ್ಕೆ ಅಗ್ರಸ್ಥಾನ ನೀಡುವ ಸಂಘ-ಪರಿವಾರದ ಶತಮಾನೋತ್ಸವದ ಹೊಸ್ತಿಲಲ್ಲಿ ಬಿಜೆಪಿ ಅದರಲ್ಲಿಯೂ ರಾಜ್ಯ ಬಿಜೆಪಿಯಲ್ಲಿನ ಹತ್ತಾರು ಘಟನಾವಳಿಗಳು ಸಂಘದ ‘ಮೂಲ’ ತತ್ವವನ್ನೇ ಅನುಸರಿಸುತ್ತಿಲ್ಲ ಎನ್ನುವ ಅನುಮಾನವನ್ನು ಮೂಡಿಸುತ್ತಿವೆ.

ಹೌದು, ಸಂಧಿಕಾಲಕ್ಕೆ ಬಂದು ನಿಂತಿರುವ ಆರ್‌ಎಸ್‌ಎಸ್ ಶತಮಾನೋತ್ಸವದ ಹೊಸ್ತಿಲಲ್ಲಿ ದೇಶಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಇವು ಸಂಘ ಪರಿವಾರದ ಕಾರ್ಯಕ್ರಮಗಳಾದರೂ, ಬಿಜೆಪಿ ಈ ಎಲ್ಲ ಕಾರ್ಯಕ್ರಮಗಳ ಯಶಸ್ಸಿಗೆ ಹಾಗೂ ಆರ್‌ಎಸ್‌ಎಸ್ ನ ಸೈದ್ಧಾಂತಿಕ ವಿಷಯದಲ್ಲಿನ ‘ಅಚಲತೆ’ಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಿ ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸುವುದಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಇದನ್ನೂ ಓದಿ: Ranjith H Ashwath Column: ದಳಗಳನ್ನು ಒಗ್ಗೂಡಿಸುವುದು ಸುಲಭವೇ ?

ರಾಜ್ಯ ಬಿಜೆಪಿ ನಾಯಕರೂ ರಾಜ್ಯದ ಹಲವೆಡೆ ಸಂಘ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡು ‘ಸೈದ್ಧಾಂತಿಕ’ ವಿಷಯದಲ್ಲಿ ಸರಣಿ ಭಾಷಣಗಳನ್ನು ಮಾಡುತ್ತಿದ್ದಾರೆ. ಸೈದ್ಧಾಂತಿಕ ಬದ್ಧತೆಯಲ್ಲಿ ಮುನ್ನಡೆದರೆ ಅವಕಾಶಗಳು ತಾನೇತಾನಾಗಿ ಮನೆ ಬಾಗಿಲಿಗೆ ಬರುತ್ತವೆ ಎನ್ನುವುದು ಸಂಘ ಪರಿವಾರದಿಂದ ಬಿಜೆಪಿಗೆ ಬಂದಿರುವ ಬಹುತೇಕ ಕಾರ್ಯಕರ್ತರ ಅಭಿಪ್ರಾಯ ವಾಗಿದೆ.

ಆ ಕಾರಣಕ್ಕಾಗಿಯೇ, ಸೈದ್ಧಾಂತಿಕವಾಗಿ ಯಾವುದೇ ರಾಜಿ ಮಾಡಿಕೊಳ್ಳದೇ ತಾವಾಯಿತು, ತಮ್ಮ ಕೆಲಸವಾಯಿತು ಎಂದು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡ ಅನೇಕ ನಾಯಕರಿದ್ದಾರೆ. ಆದರೆ ಇತ್ತೀಚಿನ ದಿನದಲ್ಲಿ ರಾಜ್ಯ ಬಿಜೆಪಿಯಲ್ಲಿ ಪಕ್ಷಕ್ಕಾಗಿ ದುಡಿದವರಿಗಿಂತ, ಅಧಿಕಾರಕ್ಕಾಗಿ ಪಕ್ಷವನ್ನು ಹುಡುಕಿಕೊಂಡು ಬಂದವರಿಗೆ ಅವಕಾಶ ನೀಡಲಾಗುತ್ತಿದೆಯೇ ಎನ್ನುವ ಅನುಮಾನ ಮೂಡುತ್ತದೆ.

ವರ್ಷದಿಂದ ವರ್ಷಕ್ಕೆ ಅಧಿಕಾರವನ್ನು ವಿಸ್ತರಿಸುತ್ತಲೇ ಸಾಗುತ್ತಿರುವ ಬಿಜೆಪಿ ನಾಯಕರಿಗೆ, ಕರ್ನಾಟಕದ ಇಂದಿನ ಸ್ಥಿತಿ ‘ಗಂಭೀರ’ ಎನಿಸದೇ ಇರಬಹುದು. ಆದರೆ ದಕ್ಷಿಣ ಭಾರತದಲ್ಲಿ ಪಕ್ಷದ ಬಾವುಟ ಕಟ್ಟಲು ಜನರಿಲ್ಲದ ಸಮಯದಲ್ಲಿ ‘ನಿಷ್ಠಾವಂತ’ ಕಾರ್ಯಕರ್ತರಿಂದಲೇ ಮಾದರಿ ಎನಿಸಿದ್ದ ರಾಜ್ಯ ಬಿಜೆಪಿಯಲ್ಲಿ ಇಂದು ವಲಸಿಗರದ್ದೇ ಕಾರುಬಾರಾಗುತ್ತಿರುವುದು ಹಲವು ಕಾರ್ಯಕರ್ತರ ಅಕ್ಷೇಪಕ್ಕೆ ಕಾರಣವಾಗಿದೆ ಎಂದರೆ ತಪ್ಪಾಗುವುದಿಲ್ಲ.

ಕರ್ನಾಟಕ ಬಿಜೆಪಿಯಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ, ‘ಮೂಲ’ ನಾಯಕರಿಗಿಂತ ‘ಆಪರೇಷನ್ ಕಮಲ’ದ ಮೂಲಕ ಪ್ರವೇಶಿಸಿರುವ ನಾಯಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ ಎನ್ನುವುದು ಸ್ಪಷ್ಟ. ಯಾವುದೇ ರಾಜಕೀಯ ಪಕ್ಷವು ವಲಸಿಗರನ್ನು ಸೇರಿಸಿಕೊಳ್ಳದೆಯೇ ಪಕ್ಷ ನಡೆಸುತ್ತೇವೆ ಅಥವಾ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುವ ಸ್ಥಿತಿಯಲ್ಲಿಲ್ಲ ಎನ್ನುವುದು ಸ್ಪಷ್ಟ.

ಆದರೆ ವಲಸಿಗರನ್ನು ಸೇರಿಸಿಕೊಳ್ಳುವ ಭರದಲ್ಲಿ ಮೂಲ ನಿವಾಸಿಗಳನ್ನು ಮೂಲೆಗೆ ತಳ್ಳುವುದಕ್ಕೆ ಹಲವರ ಅಕ್ಷೇಪವಿದೆ. ಕಳೆದ ಒಂದೂವರೆ ದಶಕದಲ್ಲಿ ರಾಷ್ಟ್ರಮಟ್ಟದಲ್ಲಿ ಗಮನಿಸಿದರೆ ಬಿಜೆಪಿಗೆ ವಿವಿಧ ಮೂಲಗಳಿಂದ ‘ಹೊಸ’ ನೀರು ಸೇರ್ಪಡೆಯಾಗಿರುವುದು ಗೊತ್ತಿರುವಂಥದ್ದೇ. ಆದರೆ ಕರ್ನಾಟಕದಲ್ಲಿ ಮಾತ್ರ ಹೊಸಬರು ಬರುತ್ತಿದ್ದಂತೆ, ಅವರಿಗೆ ಅವಕಾಶ ನೀಡುವ ಜತೆಜತೆಗೆ ಮೂಲ ನಿವಾಸಿಗಳನ್ನು ಮೂಲೆಗುಂಪು ಮಾಡುತ್ತಿರುವುದು ‘ಅಸಮಾಧಾನ’ದ ಮೂಲವಾಗಿದೆ.

ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಹಕರಿಸಿದ ‘ಶಾಸಕರಿಗೆ’ ಸ್ಥಾನಮಾನ ನೀಡುವುದು ಅನಿವಾರ್ಯ ಎನ್ನುವುದನ್ನು ಯಾರೂ ಅಲ್ಲಗಳೆಯುತ್ತಿಲ್ಲ. ಆದರೆ, ಪಕ್ಷವನ್ನು ಅಧಿಕಾರದ ಹೊಸ್ತಿಲಿಗೆ ತಂದು ನಿಲ್ಲಿಸಿದ ನಾಯಕರು ಹಾಗೂ ಕಾರ್ಯಕರ್ತರ ಪಡೆಯನ್ನು ಬದಿಗಿಟ್ಟು ಹೊರಗಿ ನಿಂದ ಬಂದಿರುವ ನಾಯಕರಿಗೆ ಅವಕಾಶ ನೀಡುತ್ತಿರುವುದು ಇಂದಿನ ರಾಜ್ಯ ಬಿಜೆಪಿಯ ಬಹುದೊಡ್ಡ ಸಮಸ್ಯೆಯಾಗಿದೆ.

ಈ ಕಾರಣಕ್ಕಾಗಿಯೇ, ‘ಶಿಸ್ತಿನ’ ಪಕ್ಷವೆನಿಸಿದ್ದರೂ ಪಕ್ಷದೊಳಗಿರುವ ಕೆಲ ನಾಯಕರು ರಾಜ್ಯ ಬಿಜೆಪಿ ಸಂಘಟನೆ, ನಾಯಕತ್ವದ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಇನ್ನು ಕೆಲವರು, ಪಕ್ಷದ ವಿರುದ್ಧ ಹೇಳಿಕೆ ನೀಡದಿದ್ದರೂ ತಮ್ಮ ಅಸಮಾಧಾನವನ್ನು ನಿರಂತರವಾಗಿ ಸೂಕ್ತ ವೇದಿಕೆಯಲ್ಲಿ ಪರೋಕ್ಷವಾಗಿ ಹೊರಹಾಕುತ್ತಾ ಬರುತ್ತಿದ್ದಾರೆ.

ಆದರೆ ಸಂಘ-ಪರಿವಾರದ ಶತಮಾನೋತ್ಸವದ ಈ ಸಂಧಿಕಾಲದಲ್ಲಿಯೂ ನಾಯಕರು ಈ ಬಗ್ಗೆ ಆಲೋಚನೆ ಮಾಡದಿದ್ದರೆ, ಕಾರ್ಯಕರ್ತರಿಗೆ ಯಾವ ಸಂದೇಶ ರವಾನಿಸುವ ಪ್ರಯತ್ನ ಮಾಡಲಾಗುತ್ತಿದೆ ಎನ್ನುವ ಪ್ರಶ್ನೆ ಏಳುವುದು ಸಹಜ. ಈ ರೀತಿಯ ಸಮಸ್ಯೆ ಕರ್ನಾಟಕದಲ್ಲಿ ಮಾತ್ರ ಕಾಣಿಸುತ್ತದೆ.

ಮೊದಲೇ ಹೇಳಿದಂತೆ, ರಾಜಕೀಯ ಪಕ್ಷವಾಗಿ ‘ಅಧಿಕಾರ’ ಹಿಡಿಯುವ ಕಾರಣಕ್ಕೆ ಅನೇಕ ರಾಜ್ಯ ಗಳಲ್ಲಿ ಹಲವು ಮೂಲಗಳಿಂದ ನಾಯಕರನ್ನು ಸೇರಿಸಿಕೊಂಡಿದ್ದಾರೆ. ಈ ಎಲ್ಲರಿಗೂ ‘ಕೊಟ್ಟ’ ಮಾತನ್ನು ಉಳಿಸಿಕೊಳ್ಳುವುದಕ್ಕೆ ಕೆಲ ಹುದ್ದೆಗಳನ್ನು ನೀಡಲಾಗಿದೆ. ಆದರೆ ಆಯಕಟ್ಟಿನ ಹುದ್ದೆಗಳನ್ನು ಮಾತ್ರ ಮೂಲನಿವಾಸಿಗಳಿಗೆ ಅಥವಾ ಸಂಘದ ಹಿನ್ನೆಲೆ ಇರುವವರಿಗೆ ನೀಡಲಾಗಿದೆ.

ದೇಶದ ಬಹುತೇಕ ರಾಜ್ಯಗಳಲ್ಲಿನ ಬಿಜೆಪಿ ಘಟಕಗಳಲ್ಲಿ ಆಯಕಟ್ಟಿನ ಹುದ್ದೆಗಳಿಗೆ, ಪಕ್ಷ ಸಂಘಟನೆಯ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸುವ ಸ್ಥಾನಗಳನ್ನು, ಸಂಘ ಪರಿವಾರದ ಹಿನ್ನೆಲೆ ಹಾಗೂ ಪಕ್ಷದ ಸೈದ್ಧಾಂತಿಕ ನಿಲುವಿಗೆ ಗಟ್ಟಿಯಾಗಿ ನಿಂತಿರುವರ ಕಾರ್ಯಕರ್ತರು, ನಾಯಕರಿಗೆ ನೀಡುವ ಕೆಲಸವಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ‘ಅಧಿಕಾರ’ ಅಥವಾ ‘ಟಿಕೆಟ್’ಗಾಗಿ ಪಕ್ಷಕ್ಕೆ ಸೇರ್ಪಡೆಯಾದ ಹಲವರಿಗೆ ಅವಕಾಶ ನೀಡಿರುವ ಉದಾಹರಣೆಗಳಿವೆ.

ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿ ತಳಮಟ್ಟದಿಂದ ಕೆಲಸ ಮಾಡಿರುವ ಬಹುತೇಕ ಕಾರ್ಯಕರ್ತರನ್ನು ರಾಜ್ಯ ಬಿಜೆಪಿಯು ಬದಿಗಿಡುವ ಕೆಲಸ ಮಾಡುತ್ತಿದೆ ಎನ್ನುವ ಆರೋಪವಿದೆ. ಕಳೆದ ಬಾರಿ ಆಪರೇಷನ್ ಕಮಲದ ಮೂಲಕ ಪಕ್ಷಕ್ಕೆ ಬಂದಿರುವ ಅಥವಾ ಜನತಾದಳದಿಂದ ಬಿಜೆಪಿ ಕದತಟ್ಟಿದ ಅನೇಕರಿಗೆ ಪಕ್ಷದ ‘ಉತ್ತಮ ಸ್ಥಾನ’ಗಳನ್ನು ನೀಡಲಾಗುತ್ತಿದೆ.

ಈ ನಿಟ್ಟಿನಲ್ಲಿ ಪಕ್ಷದ ವರಿಷ್ಠರು ಇನ್ನಾದರೂ ಆಲೋಚಿಸುವ ಕೆಲಸ ಮಾಡಬೇಕಿದೆ. ಇಲ್ಲವಾದರೆ, ಸೈದ್ಧಾಂತಿಕ ಕಾರಣಕ್ಕಾಗಿ ಪಕ್ಷದೊಂದಿಗೆ ಇರುವ ಅನೇಕ ಕಾರ್ಯಕರ್ತರು ಮೌನವಾಗುವ ಅಪಾಯವಿದೆ ಎನ್ನುವ ಚರ್ಚೆ ಶುರುವಾಗಿದೆ. ಉದಾಹರಣೆಗೆ ಕರ್ನಾಟಕದಲ್ಲಿ ಪಕ್ಷವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೆ.ಎಸ್.ಈಶ್ವರಪ್ಪ, ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದಲೇ ದೂರವಿಡುವ ಕೆಲಸವಾಗಿದೆ.

ಇನ್ನು ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅರವಿಂದ ಲಿಂಬಾವಳಿ ಅವರನ್ನು ಸದ್ದಿಲ್ಲದೇ ಇನ್ನು ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅರವಿಂದ ಲಿಂಬಾವಳಿ ಅವರನ್ನು ಸದ್ದಿಲ್ಲದೇ ಸುನೀಲ್ ಕುಮಾರ್, ಸಿ.ಟಿ.ರವಿ, ಸುರೇಶ್ ಕುಮಾರ್ ಅವರಂಥ ನಾಯಕರನ್ನು ‘ಶಾಸಕ’ ಸ್ಥಾನಕ್ಕೆ ಸೀಮಿತಗೊಳಿಸಲಾಗಿದೆ ಎನ್ನುವುದು ಕಾರ್ಯಕರ್ತರಲ್ಲಿರುವ ಅಸಮಾಧಾನ.

ಹಾಗೆ ನೋಡಿದರೆ ಸದ್ಯ ಬಿಜೆಪಿಯಲ್ಲಿ ರಾಜ್ಯ ನಾಯಕತ್ವದ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿರುವ ಹಾಗೂ ಅಸಮಾಧಾನವನ್ನು ಹೊಂದಿರುವ ಬಹುತೇಕರು ಪಕ್ಷದ ಮೂಲನಿವಾಸಿಗಳು. ಅಧಿಕಾರದ ಕಾರಣಕ್ಕೆ, ಸಿದ್ಧಾಂತದಲ್ಲಿ ‘ಹೊಂದಾಣಿಕೆ’ ಮಾಡಿಕೊಂಡು ಪಕ್ಷದ ನಾಯಕತ್ವವನ್ನು ರೂಪಿಸುತ್ತಿರುವುದೇ ಈ ಎಲ್ಲರ ಕೊಸರಾಟಕ್ಕೆ ಕಾರಣ ಎಂದರೆ ತಪ್ಪಾಗುವುದಿಲ್ಲ. ಈ ಹಿಂದೆ ಪಕ್ಷದ ಹಾಗೂ ಸಂಘ ಪರಿವಾರದ ವಿರುದ್ಧ ವಾಗ್ದಾಳಿ ನಡೆಸಿಕೊಂಡೇ ಓಡಾಡಿದ್ದ ಛಲವಾದಿ ನಾರಾಯಣ ಸ್ವಾಮಿ ಅವರನ್ನು ಇಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕನನ್ನಾಗಿ ನೇಮಿಸಲಾಗಿದೆ.

ಈ ಆಯ್ಕೆಗೆ ಪಕ್ಷ ನೀಡಿರುವ ಕಾರಣ ‘ದಲಿತ’ ಸಮುದಾಯಕ್ಕೆ ಅವಕಾಶ ಎನ್ನುವುದಾಗಿದೆ. ಇನ್ನುಳಿ ದಂತೆ ಪಕ್ಷದ ಪ್ರಧಾನ ಕಾರ್ಯದರ್ಶಿಗಳ ಪಟ್ಟಿಯಲ್ಲಿರುವ ಪಿ.ರಾಜೀವ್ ಕಾಂಗ್ರೆಸ್‌ಗೆ ಬೆಂಬಲಿಸಿ, ಅಲ್ಲಿ ‘ರಾಜಕೀಯ’ ಲಾಭ-ನಷ್ಟಗಳನ್ನು ಲೆಕ್ಕ ಹಾಕಿ ಬಿಜೆಪಿಗೆ ಬಂದವರು. ಇನ್ನು ಪ್ರೀತಂ ಗೌಡ, ವೈಯಕ್ತಿಕ ಕಾರಣಕ್ಕೆ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದರೂ, ಪ್ರಧಾನ ಕಾರ್ಯದರ್ಶಿ ಸ್ಥಾನದಲ್ಲಿ ಅವರನ್ನು ಮುಂದುವರಿಸಲಾಗಿದೆ.

ಪಕ್ಷದ ಸಿದ್ಧಾಂತದಿಂದಲೇ ರಾಜಕೀಯ ಜೀವನ ಕಟ್ಟಿಕೊಂಡ ಸುನೀಲ್‌ಕುಮಾರ್ ಅವರು, ಈಗಾಗಲೇ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಒಲ್ಲೆ ಎಂದಿದ್ದರೂ, ಮುಂದುವರಿಸಲಾಗಿದೆ. ಇನ್ನು ಬಿಜೆಪಿ ಉಪಾಧ್ಯಕ್ಷರ ಪಟ್ಟಿಯಲ್ಲಿರುವ ಬೈರತಿ ಬಸವರಾಜು, ರಾಜು ಗೌಡ, ಎನ್.ಮಹೇಶ್ ಅವರೆಲ್ಲರೂ ಬೇರೆ ಕಡೆಯಿಂದ ವಲಸೆ ಬಂದವರೇ ಆಗಿದ್ದಾರೆ.

ಈ ಎಲ್ಲರನ್ನೂ ಮೀರಿ ಕೆಲ ವರ್ಷದಹಿಂದೆ ಪಕ್ಷದಿಂದ ಹೊರಹೋಗಿ ಪ್ರತ್ಯೇಕ ಪಕ್ಷ ಕಟ್ಟಿದ್ದ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಿ, ಅವರೊಂದಿಗೆ ಕೆಜೆಪಿಯಿಂದ ಬಿಜೆಪಿಗೆ ಬಂದ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ. ಕರ್ನಾಟಕದಲ್ಲಿ ಹಲವು ಕಾರಣಗಳಿಗೆ ಈ ರೀತಿ ಮೂಲ ಬಿಜೆಪಿಗರನ್ನು ಮೂಲೆಗುಂಪು ಮಾಡಿರುವ ಪಕ್ಷದ ನಾಯಕರು, ಇತರೆ ರಾಜ್ಯಗಳಲ್ಲಿ ಮೂಲ ಬಿಜೆಪಿಗರಿಗೆ ‘ಅಗ್ರ’ ಸ್ಥಾನ ನೀಡಿರುವುದು ಸ್ಪಷ್ಟ.

ಉದಾಹರಣೆಗೆ, ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್, ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್, ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅಷ್ಟೇ ಏಕೆ, ಪ್ರಧಾನಿ ನರೇಂದ್ರ ಮೋದಿ ಸಹ ಸಂಘ ಪರಿವಾರದ ಹಿನ್ನೆಲೆಯಿಂದ ಬಂದಿರುವವರು. ಆದರೆ ಕರ್ನಾಟಕದಲ್ಲಿ ಮಾತ್ರ, ಬೇರೆ ಪಕ್ಷದಿಂದ ವಲಸೆ ಬಂದಿರುವವರಿಗೆ ಮನ್ನಣೆ ನೀಡುತ್ತಿರುವುದು ರಾಜ್ಯ ಬಿಜೆಪಿಯ ಇಂದಿನ ಪರಿಸ್ಥಿತಿಗೆ ಕಾರಣ ಎನ್ನುವುದು ಸ್ಪಷ್ಟ.

ಇತರೆ ಪಕ್ಷಗಳಿಗೆ ಹೋಲಿಸಿದರೆ ಸಂಘದ ಕಾರಣಕ್ಕೆ ಪ್ರಬಲ ಕಾರ್ಯಕರ್ತರ ಪಡೆಯನ್ನು ಹೊಂದಿರುವ ಬಿಜೆಪಿಯಲ್ಲಿಯೂ ಸಿದ್ಧಾಂತಕ್ಕೆ ಬೆಲೆ ನೀಡುವುದಿಲ್ಲ ಎನ್ನುವ ಸಂದೇಶವನ್ನು ಕಟ್ಟರ್ ಕಾರ್ಯಕರ್ತರಿಗೆ ಈಗಲೂ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಕಾರಣಕ್ಕಾಗಿಯೇ, ಇತರೆ ರಾಜ್ಯಗಳಲ್ಲಿನ ಪಕ್ಷದ ಸಂಘಟನೆಗೂ ಕರ್ನಾಟಕದ ಸಂಘಟನೆಗೂ ಅಜಗಜಾಂತರವಿದೆ. ಸಂಘಟನೆ ನೆಲಕಚ್ಚಿದ ಬಳಿಕ ಇದೀಗ ‘ಸಮನ್ವಯ’ ಸಭೆಯ ನೆಪದಲ್ಲಿ ಮೂಲ ಬಿಜೆಪಿಗರನ್ನು ಮತ್ತೆ ಒಗ್ಗೂಡಿಸುವ ಪ್ರಯತ್ನವು ಸಂಘದ ಸೂಚನೆ ಮೇರೆಗೆ ಆರಂಭವಾಗಿದೆ. ಆದರೆ ಈ ಸಭೆಯಲ್ಲಿ ನಿಜಕ್ಕೂ ಸೈದ್ಧಾಂತಿಕ ಹಿನ್ನೆಲೆಯ ಚರ್ಚೆಗೆ ಅವಕಾಶವಿದೆಯೋ ಅಥವಾ ಸಂಘದ ಒತ್ತಡಕ್ಕೆ ಒಲ್ಲದ ಮನಸ್ಸಿನಿಂದ ಸಭೆ ನಡೆಸಿ, ಕೈಬಿಡುವ ಪ್ರಯತ್ನದಲ್ಲಿ ರಾಜ್ಯ ಬಿಜೆಪಿ ಇದೆಯೋ ಗೊತ್ತಿಲ್ಲ.

ಈ ಹಂತದಲ್ಲಾದರೂ ಎಚ್ಚೆತ್ತುಕೊಳ್ಳದಿದ್ದರೆ, ಸಿದ್ಧಾಂತಕ್ಕೆ ಅಂಟಿಕೊಂಡಿರುವ ಅನೇಕರನ್ನು ಕಳೆದುಕೊಂಡಿರುವ ಬಿಜೆಪಿ ಮತ್ತಷ್ಟು ಕಟ್ಟರ್ ನಾಯಕರು ಹಾಗೂ ಕಾರ್ಯಕರ್ತರ ಪಡೆಯನ್ನು ಕಳೆದುಕೊಳ್ಳುವುದರಲ್ಲಿ ಅನುಮಾನವಿಲ್ಲ.