ಮಿದುಳಿನ ಪಾರ್ಶ್ವವಾಯು: ಇರಲಿ ಒಂದಿಷ್ಟು ಎಚ್ಚರ
ಈ ‘ಸ್ಟ್ರೋಕ್’ ಯಾರಿಗೆ ಬೇಕಾದರೂ, ಯಾವಾಗ ಬೇಕಾದರೂ, ಯಾವುದೇ ಹೊತ್ತಿನಲ್ಲೂ ಸಂಭವಿಸ ಬಹುದು. ಸಾಮಾನ್ಯವಾಗಿ, ೬೦ ವರ್ಷದ ನಂತರವೇ ಈ ಕಾಯಿಲೆ ಹೆಚ್ಚಾಗಿ ಕಾಣ ಸಿಗುತ್ತದೆ. ಜಾಗತಿಕ ವಾಗಿ, ತೀವ್ರ ಹೃದಯಾಘಾತದ ನಂತರ ಸಾವಿಗೆ ಕಾರಣವಾಗುವ ರೋಗಗಳಲ್ಲಿ ‘ಸ್ಟ್ರೋಕ್’ ಎರಡನೇ ಸ್ಥಾನವನ್ನು ಗಳಿಸಿದೆ.
-
Ashok Nayak
Oct 29, 2025 1:16 PM
ಆರೋಗ್ಯ ಭಾಗ್ಯ
ಮುರಲೀ ಮೋಹನ್ ಚೂಂತಾರು
(ಇಂದು ವಿಶ್ವ ಮಿದುಳಿನ ಪಾರ್ಶ್ವವಾಯು ದಿನ)
ಪ್ರತಿ ವರ್ಷದ ಅಕ್ಟೋಬರ್ 29ರಂದು ವಿಶ್ವದಾದ್ಯಂತ ‘ಬ್ರೇನ್ ಸ್ಟ್ರೋಕ್ ಡೇ’ ಅಥವಾ ‘ಮಿದುಳಿನ ಆಘಾತದ ದಿನ’ವನ್ನು ಆಚರಿಸಿ, ಮಿದುಳಿನ ಪಾರ್ಶ್ವವಾಯುವಿನ ಬಗ್ಗೆ ಜಾಗೃತಿ ಮೂಡಿಸಿ, ಈ ಆಘಾತವು ಉಂಟಾಗುವ ಸಾಧ್ಯತೆಯನ್ನು ತಗ್ಗಿಸಲು ಯತ್ನಿಸಲಾಗುತ್ತದೆ. ‘ಸ್ಟ್ರೋಕ್ ಡೇ’ ಆಚರಣೆ ಶುರುವಾಗಿದ್ದು 2006ರಲ್ಲಿ. ವಿಶ್ವ ಸ್ಟ್ರೋಕ್ ಸಂಸ್ಥೆಯು ಈ ಆಚರಣೆಯನ್ನು ಜಾರಿಗೆ ತಂದಿದೆ. ‘ಪ್ರತಿ ನಿಮಿಷವೂ ಅಮೂಲ್ಯ’ ( Every Minute Counts ) ಎಂಬುದು 2025ರ ಆಚರಣೆಯ ಧ್ಯೇಯ ವಾಕ್ಯವಾಗಿದೆ.
ಈ ‘ಸ್ಟ್ರೋಕ್’ ಯಾರಿಗೆ ಬೇಕಾದರೂ, ಯಾವಾಗ ಬೇಕಾದರೂ, ಯಾವುದೇ ಹೊತ್ತಿನಲ್ಲೂ ಸಂಭವಿಸಬಹುದು. ಸಾಮಾನ್ಯವಾಗಿ, ೬೦ ವರ್ಷದ ನಂತರವೇ ಈ ಕಾಯಿಲೆ ಹೆಚ್ಚಾಗಿ ಕಾಣ ಸಿಗುತ್ತದೆ. ಜಾಗತಿಕವಾಗಿ, ತೀವ್ರ ಹೃದಯಾಘಾತದ ನಂತರ ಸಾವಿಗೆ ಕಾರಣವಾಗುವ ರೋಗಗಳಲ್ಲಿ ‘ಸ್ಟ್ರೋಕ್’ ಎರಡನೇ ಸ್ಥಾನವನ್ನು ಗಳಿಸಿದೆ. ಆದರೆ, ಸಮಾಧಾನಕರ ಅಂಶವೆಂದರೆ ಬಹುತೇಕ ‘ಸ್ಟ್ರೋಕ್’ಗಳನ್ನು ತಡೆಗಟ್ಟಬಹುದಾಗಿದೆ.
ವಾರ್ಷಿಕವಾಗಿ ಅಮೆರಿಕ ದೇಶವೊಂದರಲ್ಲೇ ಸುಮಾರು ೮ ಲಕ್ಷ ಮಂದಿ (ಜಾಗತಿಕವಾಗಿ ಸುಮಾರು ೨೦ ಲಕ್ಷ ಮಂದಿ) ಈ ರೋಗಕ್ಕೆ ತುತ್ತಾಗುತ್ತಾರೆ. ಈ ‘ಸ್ಟ್ರೋಕ್’ ಬಂದ ಬಳಿಕ ಸಕಾಲದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆಯದಿದ್ದಲ್ಲಿ ಅಂಥ ವ್ಯಕ್ತಿಯು ಶಾಶ್ವತವಾಗಿ ಅಂಗವೈಕಲ್ಯವನ್ನು ಹೊಂದು ತ್ತಾನೆ.
ಹೀಗಾಗಿ, ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾಗುವ ಸಮಸ್ಯೆಗಳಲ್ಲಿ ‘ಸ್ಟ್ರೋಕ್’ಗೆ ಗಮನಾರ್ಹ ಸ್ಥಾನ ಸಿಕ್ಕಿಬಿಟ್ಟಿದೆ. ಮಿದುಳಿನ ಯಾವುದಾದರೊಂದು ಭಾಗಕ್ಕೆ ರಕ್ತಸಂಚಾರ ನಿಂತುಹೋಗಿ, ಆ ಭಾಗದ ಮಿದುಳು ನಿರ್ಜೀವವಾಗುತ್ತದೆ ಮತ್ತು ಆ ಭಾಗದಿಂದ ನಿಯಂತ್ರಿಸಲ್ಪಡುವ ಕೆಲಸಗಳು ನಿಷ್ಕ್ರಿಯ ವಾಗಿ ‘ಮಿದುಳಿನ ಆಘಾತ’ ಎಂದು ಕರೆಸಿಕೊಳ್ಳುತ್ತದೆ.
ಇದನ್ನೂ ಓದಿ: Health Tips: ಸೀದು ಕೆಂಪಾದ ಆಹಾರ ಸೇವನೆಗೆ ಯೋಗ್ಯವೇ?
‘ಸ್ಟ್ರೋಕ್’ನಲ್ಲಿ ‘ಹಿಮೋರೇಜಿಕ್ ಸ್ಟ್ರೋಕ್’ ಮತ್ತು ‘ಇಷ್ಕೆಮಿಕ್ ಸ್ಟ್ರೋಕ್’ ಎಂಬ ಎರಡು ಬಗೆಗಳಿವೆ. ‘ಹಿಮೋರೇಜಿಕ್ ಸ್ಟ್ರೋಕ್’ನಲ್ಲಿ ಮಿದುಳಿನ ರಕ್ತನಾಳಗಳು ಒಡೆದುಕೊಂಡು, ಜೀವಕೋಶಗಳು ನಿರ್ಜೀವವಾಗುತ್ತವೆ. ‘ಇಷ್ಕೆಮಿಕ್ ಸ್ಟ್ರೋಕ್’ನಲ್ಲಿ ರಕ್ತನಾಳಗಳ ಒಳಗೆ ರಕ್ತವು ಹೆಪ್ಪುಗಟ್ಟಿಕೊಂಡು ರಕ್ತ ಪರಿಚಲನೆಗೆ ಅಡ್ಡಿಯಾಗಿ, ಆ ಭಾಗದ ಜೀವಕೋಶಗಳು ಸಾಯುತ್ತವೆ. ಇದು ಅತಿ ಸಾಮಾನ್ಯ ವಾಗಿ ಕಾಣಬರುವ ಪ್ರಭೇದವಾಗಿರುತ್ತದೆ.
‘ಸ್ಟ್ರೋಕ್’ ಯಾರಿಗೆ ಬರಬಹುದು?
ಮಿತಿಮೀರಿದ ಧೂಮಪಾನ, ಮದ್ಯಪಾನ ಮಾಡುವವರಿಗೆ, ಮಾದಕದ್ರವ್ಯಗಳನ್ನು ಸೇವಿಸುವ ಗೀಳು ಇರುವವರಿಗೆ ‘ಸ್ಟ್ರೋಕ್’ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಮಿಕ್ಕಂತೆ, ರಕ್ತದಲ್ಲಿ ಹೆಚ್ಚಿನ ಕೊಬ್ಬಿನಂಶ ಉಳ್ಳವರು, ಮಧುಮೇಹಿಗಳು, ಅಧಿಕ ರಕ್ತದೊತ್ತಡ ಇರುವವರು, ಹೃದಯಸಂಬಂಽ ಕಾಯಿಲೆ ಮತ್ತು ಪೆಡಸುಗೊಂಡ ರಕ್ತನಾಳವಿರುವವರು, ಸ್ಥೂಲದೇಹಿಗಳು ಮತ್ತು ವಿಲಾಸಿ ಜೀವನಶೈಲಿ ಯವರು, ಅತಿಯಾದ ಮಾನಸಿಕ ಒತ್ತಡ/ವ್ಯಥೆ/ ವ್ಯಾಧಿಯಿರುವವರು, ದೈಹಿಕ ಶ್ರಮವಿಲ್ಲದ ಜೀವನಕ್ರಮಕ್ಕೆ ಒಡ್ಡಿಕೊಂಡವರು, ಅತಿಯಾಗಿ ನೋವು ನಿವಾರಕ ಮಾತ್ರೆಗಳನ್ನು ಸೇವಿಸುವವರು, ಸಮತೋಲಿತ ಆಹಾರದ ಬದಲಿಗೆ ‘ಜಂಕ್ ಫುಡ್’ ಮತ್ತು ಕೊಬ್ಬಿನಂಶದ/ಕರಿದ ಪದಾರ್ಥಗಳನ್ನು ಅತಿಯಾಗಿ ಸೇವಿಸುವವರು ಈ ‘ಸ್ಟ್ರೋಕ್’ಗೆ ಒಳಗಾಗುತ್ತಾರೆ.
ಈ ಕಾಯಿಲೆಯು ವಂಶಪಾರಂಪರ್ಯವಾಗಿ ವಂಶವಾಹಿನಿಗಳಲ್ಲಿಯೂ ಬರುವ ಸಾಧ್ಯತೆ ಇರುತ್ತದೆ.
‘ಸ್ಟ್ರೋಕ್’ನ ಲಕ್ಷಣಗಳು
ಮುಖದ ಒಂದು ಭಾಗದಲ್ಲಿ ಅಥವಾ ಕೈ-ಕಾಲು, ಎದೆಭಾಗದಲ್ಲಿ ನೋವು ಇರುವುದು, ಕಣ್ಣು ಮಂಜಾಗುವುದು, ವಸ್ತುಗಳು ಎರಡೆರಡಾಗಿ ಕಾಣುವುದು, ಉಸಿರಾಡಲು ಮತ್ತು ನುಂಗಲು ಕಷ್ಟ ವಾಗುವುದು, ವಾಂತಿ/ವಾಕರಿಕೆ ಬಂದಂತಾಗುವುದು, ತಲೆ ತಿರುಗಿದಂತೆ ಭಾಸವಾಗುವುದು, ಮೈಯಲ್ಲಿ ನಡುಕ, ದೇಹದಲ್ಲಿ ಸಮತೋಲನ ತಪ್ಪುವುದು, ಕೈಕಾಲುಗಳಲ್ಲಿ ಹೊಂದಾಣಿಕೆ ಇಲ್ಲದಿರುವುದು, ಕಣ್ಣು ಕತ್ತಲಿಟ್ಟುಕೊಂಡು ಬರುವುದು, ನಡೆದಾಡಲು ಕಷ್ಟವಾಗುವುದು,
ಕೈಕಾಲುಗಳು ಮರಗಟ್ಟಿದಂತೆ ಭಾಸವಾಗುವುದು ‘ಸ್ಟ್ರೋಕ್’ನ ಲಕ್ಷಣಗಳಾಗಿರುತ್ತವೆ. ಮಿಕ್ಕಂತೆ, ಕಾರಣವಿಲ್ಲದೆ ಅತಿಯಾಗಿ ತಲೆನೊವು ಬರುವುದು, ಏನಾದರೂ ಕೆಲಸದ ಮಧ್ಯದಲ್ಲಿರುವಾಗ ಎಲ್ಲಾ ಆಲೋಚನೆಗಳೂ ನಿಷ್ಕ್ರಿಯವಾಗಿ ಏನೂ ತೋಚದಂತಾಗುವುದು, ಯೋಚನಾಶಕ್ತಿಯನ್ನು ಕಳೆದುಕೊಳ್ಳುವುದು, ಮಾತನಾಡಲು ಕಷ್ಟವಾಗುವುದು/ತೊದಲುವುದು, ಅತಿಯಾದ ಸುಸ್ತು ಮತ್ತು ಭ್ರಾಂತಿ ಉಂಟಾಗುವುದು ಕೂಡ ಇದರ ಲಕ್ಷಣಗಳಾಗಿವೆ.
‘ಸ್ಟ್ರೋಕ್’ ಅಮರಿಕೊಂಡಾಗ ಮುಖ ಸೊಟ್ಟಗಾಗುತ್ತದೆ, ಮುಖದಲ್ಲಿನ ಸ್ನಾಯುಗಳ ಮೇಲಿನ ನಿಯಂತ್ರಣ ತಪ್ಪುತ್ತದೆ. ಮುಖದ ಒಂದು ಭಾಗದಲ್ಲೂ ಈ ಲಕ್ಷಣ ಕಂಡುಬರಬಹುದು. ಕೈಕಾಲುಗಳ ನಿಯಂತ್ರಣ ತಪ್ಪುತ್ತದೆ, ಎರಡೂ ಕೈಗಳನ್ನು ತಲೆಯ ಮೇಲ್ಭಾಗಕ್ಕೆ ಎತ್ತಲು ಹೇಳಿದಾಗ ಅದು ಕಷ್ಟವಾಗಬಹುದು/ ಸಾಧ್ಯವಾಗದಿರಬಹುದು. ಅದೇ ರೀತಿಯಲ್ಲಿ, ನಗುವುದು ಕೂಡ ಸಾಧ್ಯ ವಾಗುವುದಿಲ್ಲ. ಇಂಥ ಲಕ್ಷಣಗಳು ಒಂದೊಮ್ಮೆ ಕಾಣಿಸಿಕೊಂಡರೆ ವಿಳಂಬ ಮಾಡದೆ ಆಸ್ಪತ್ರೆಗೆ ಧಾವಿಸಿ, ತಜ್ಞರಿಗೆ ತೋರಿಸಬೇಕು. ಕಾಲಹರಣ ಮಾಡಿದಷ್ಟೂ ಮಿದುಳಿನ ಆಘಾತದ ತೀವ್ರತೆ ಹೆಚ್ಚುತ್ತದೆ.
ತಡೆಗಟ್ಟುವುದು ಹೇಗೆ?
ಸಾಕಷ್ಟು ಮುಂಜಾಗರೂಕತೆ ವಹಿಸುವುದರಿಂದ ಮಿದುಳಿನ ಆಘಾತವನ್ನು ಶೇ.೮೦ರಷ್ಟು ತಡೆಗಟ್ಟಲು ಸಾಧ್ಯವಿದೆ. ಶಿಸ್ತುಬದ್ಧವಾಗಿಲ್ಲದ ಜೀವನಶೈಲಿಯನ್ನು ಬದಲಿಸಿಕೊಳ್ಳಬೇಕು, ಮದ್ಯಪಾನ-ಧೂಮಪಾನ, ಮಾದಕದ್ರವ್ಯದ ವ್ಯಸನವನ್ನು ತ್ಯಜಿಸಬೇಕು. ಸೋಮಾರಿತನಕ್ಕೆ ತಿಲಾಂಜಲಿಯಿತ್ತು, ಚಟುವಟಿಕೆಯ ಬದುಕಿಗೆ ಒಡ್ಡಿಕೊಳ್ಳಬೇಕು.
ವ್ಯಾಯಾಮ/ದೈಹಿಕ ಕಸರತ್ತಿನೆಡೆಗೆ ಮುಖ ಮಾಡಬೇಕು. ದಿನಕ್ಕೆ ಅರ್ಧತಾಸು ಬಿರುಸಿನ ನಡಿಗೆ ಯಲ್ಲಿ ತೊಡಗಬೇಕು. ವಿಲಾಸಿ ಜೀವನಕ್ರಮವನ್ನು ಬಿಟ್ಟುಬಿಡಬೇಕು. ಕೊಬ್ಬಿನಿಂದ ಭರಿತವಾಗಿ ರುವ ಆಹಾರ, ಕರಿದ ಪದಾರ್ಥಗಳನ್ನು ತ್ಯಜಿಸಿ ಕಾಳುಧಾನ್ಯಗಳು, ಹಸಿ ತರಕಾರಿ, ಹಣ್ಣು-ಹಂಪಲನ್ನು ಜಾಸ್ತಿ ತಿನ್ನಬೇಕು. ಮಧುಮೇಹ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು. ಸ್ಥೂಲಕಾಯದ ಸಮಸ್ಯೆಯಿಂದ ಹೊರಬರಬೇಕು. ದೇಹದ ತೂಕದ ಮಾಪನವು (ಆಟbqs IZoo ಐbಛ್ಡಿ ಆIಐ) ೨೫ಕ್ಕಿಂತ ಕಡಿಮೆ ಇರಬೇಕು.
(ಲೇಖಕರು, ಬಾಯಿ, ಮುಖ ಮತ್ತು ದವಡೆಯ ಶಸ್ತ್ರಚಿಕಿತ್ಸಕರು)