ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Shalini Rajaneesh Column: ಮಹಿಳಾ ಸಬಲೀಕರಣ ಮತ್ತು ಮಕ್ಕಳ ಕಲ್ಯಾಣದ ಕಿರುನೋಟ

ಉದ್ಯೋಗಸ್ಥ ಮಹಿಳೆಯರಿಗೆಂದು 6 ಪ್ರಮುಖ ನಗರಗಳಲ್ಲಿ 23 ವಸತಿನಿಲಯಗಳನ್ನು ಬಾಡಿಗೆ ಕಟ್ಟಡಗಳಲ್ಲಿ ಪ್ರಾರಂಭಿಸ ಲಾಗಿದೆ. ಗಾರ್ಮೆಂಟ್ಸ್, ಕೈಗಾರಿಕೆಗಳು ಮತ್ತು ಇತರ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪ ಸಂಖ್ಯಾತ ವರ್ಗದ ದುಡಿಯುವ ಮಹಿಳೆಯರಿಗೆ ಆದ್ಯತೆ ಮೇರೆಗೆ ಸೌಲಭ್ಯ ನೀಡಲಾಗುತ್ತಿದೆ.

ಮಹಿಳಾ ಸಬಲೀಕರಣ ಮತ್ತು ಮಕ್ಕಳ ಕಲ್ಯಾಣದ ಕಿರುನೋಟ

-

Ashok Nayak
Ashok Nayak Mar 9, 2026 6:54 AM

ಪಕ್ಷಿನೋಟ

ಶಾಲಿನಿ ರಜನೀಶ್

ರಾಜ್ಯ ಸರಕಾರವು 2007-08ರಿಂದಲೇ ಮಹಿಳಾ ಉದ್ದೇಶಿತ ಆಯವ್ಯಯ ಮಂಡಿಸುವ ಮೂಲಕ ಮಹಿಳೆಯರಿಗಾಗಿ ಪ್ರತ್ಯೇಕ ಅನುದಾನ ಮೀಸಲಿಡುತ್ತಿರುವುದು ವಿಶೇಷ. ಮಹಿಳೆಯರು ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರಕಾರ ಜಾರಿಗೆ ತಂದಿರುವ ಈ ಯೋಜನೆಗಳು ಸಮಾಜದಲ್ಲಿ ಸಬಲೀಕರಣ ಮತ್ತು ಸಮಾನತೆಯತ್ತ ಮಹತ್ವದ ಹೆಜ್ಜೆಯಾಗಿವೆ.

ಅಂತಾರಾಷ್ಟ್ರೀಯ ಮಹಿಳಾ ದಿನದ ಆಚರಣೆ ನಿನ್ನೆಯಷ್ಟೇ (ಮಾ.8) ಮುಗಿದಿದೆ. ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಮಹಿಳೆಯರಿಗೂ ಶುಭಾಶಯಗಳು. ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಶೇ.49.1ರಷ್ಟು ಮಹಿಳೆಯರಿದ್ದಾರೆ. ಮಹಿಳೆಯರ ಮತ್ತು ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ಸರಕಾರವು ಹಲವಾರು ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೆ ತಂದಿದೆ. ಪೌಷ್ಟಿಕ ಆಹಾರದಿಂದ ಹಿಡಿದು ಆರ್ಥಿಕ ಸ್ವಾವಲಂಬ ನೆಯವರೆಗೆ ಪ್ರತಿಯೊಂದು ಹಂತದಲ್ಲೂ ಮಹಿಳೆಯರನ್ನು ಸಶಕ್ತಗೊಳಿಸುವುದು ಸರಕಾರದ ಮುಖ್ಯ ಗುರಿಯಾಗಿದೆ. ಇದನ್ನು ಹಂಚಿಕೊಳ್ಳುವ ಪ್ರಯತ್ನವಾಗಿದೆ ಈ ಲೇಖನ.

ರಾಜ್ಯ ಸರಕಾರವು 2007-08ರಿಂದಲೇ ಮಹಿಳಾ ಉದ್ದೇಶಿತ ಆಯವ್ಯಯ (Gender Budget ) ಮಂಡಿಸುವ ಮೂಲಕ ಮಹಿಳೆಯರಿಗಾಗಿ ಪ್ರತ್ಯೇಕ ಅನುದಾನ ಮೀಸಲಿಡು ತ್ತಿರುವುದು ವಿಶೇಷ.

ಮಹಿಳೆಯರು ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರಕಾರ ಜಾರಿಗೆ ತಂದಿರುವ ಈ ಯೋಜನೆಗಳು ಸಮಾಜದಲ್ಲಿ ಸಬಲೀಕರಣ ಮತ್ತು ಸಮಾನತೆಯತ್ತ ಮಹತ್ವದ ಹೆಜ್ಜೆಯಾಗಿವೆ.

  1. ರಾಜ್ಯದ ಪ್ರಮುಖ ಗ್ಯಾರಂಟಿ ಯೋಜನೆಗಳು

ಗೃಹಲಕ್ಷ್ಮಿ ಯೋಜನೆ: ಮಹಿಳೆಯರ ಆರ್ಥಿಕ ಸ್ಥಿತಿಗತಿ ಸುಧಾರಿಸಲು ಮನೆಯ ಯಜಮಾನಿಗೆ ಪ್ರತಿ ತಿಂಗಳು 2000 ರು.ಗಳನ್ನು ನೇರವಾಗಿ ಡಿಬಿಟಿ (DBT) ಮೂಲಕ ಜಮೆ ಮಾಡಲಾಗುತ್ತಿದೆ. ಈಗಾಗಲೇ 1.24 ಕೋಟಿ ಫಲಾನುಭವಿಗಳಿಗೆ ಒಟ್ಟು 42,345 ಕೋಟಿ ರು.ಗಳನ್ನು ನೀಡಲಾಗಿದೆ.

ಇದನ್ನೂ ಓದಿ: Shakti Scheme: ಹೆತ್ತವರು ಬೈದರೆಂದು ಅಕ್ಕ- ತಮ್ಮ ಮನೆಯಿಂದ ಪರಾರಿ, ಶಕ್ತಿ ಯೋಜನೆ ಬಳಸಿ ಸುತ್ತಾಟ!

ಶಕ್ತಿ ಯೋಜನೆ: ಇದು ಮಹಿಳೆಯರಿಗೆ ರಾಜ್ಯದೊಳಗೆ ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯವನ್ನು ಒದಗಿಸುತ್ತದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲಾ ನಿಗಮಗಳ ಸಾಮಾನ್ಯ ಬಸ್‌ಗಳಲ್ಲಿ ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಉಚಿತವಾಗಿ ಸಂಚರಿಸಬಹುದು. ಇದು ಉದ್ಯೋಗ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿನ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸಿದೆ.

  1. ಪೌಷ್ಟಿಕಾಂಶ ಮತ್ತು ಆರೋಗ್ಯಕ್ಕೆ ಆದ್ಯತೆ

ಮಹಿಳೆಯರ ಹಾಗೂ ಮಕ್ಕಳ ಅಪೌಷ್ಟಿಕತೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸರಕಾರ ವಿವಿಧ ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ:

ಪೌಷ್ಟಿಕ ಆಹಾರ: 06 ತಿಂಗಳಿಂದ 06 ವರ್ಷದ ಮಕ್ಕಳಿಗೆ 500 ಕ್ಯಾಲೊರಿ, 12-15 ಗ್ರಾಂ ಪ್ರೋಟೀನ, ಗರ್ಭಿಣಿ ಮತ್ತು ಬಾಣಂತಿಯರಿಗೆ ಹಾಗೂ ಪ್ರಾಯಪೂರ್ವ ಬಾಲಕಿಯರಿಗೆ 600 ಕ್ಯಾಲೋರಿ, 18-20 ಗ್ರಾಂ ಪ್ರೋಟೀನ್ ಹಾಗೂ ತೀವು ಅಪೌಷ್ಟಿಕ ಮಕ್ಕಳಿಗೆ 800 ಕ್ಯಾಲೋರಿ, 20-25 ಗ್ರಾಂ ಪ್ರೋಟೀನ್‌ಯುಕ್ತ ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ.

ಮಾತೃಪೂರ್ಣ ಯೋಜನೆ: ಗರ್ಭಿಣಿ ಮತ್ತು ಬಾಣಂತಿಯರಿಗೆ 600 ಕ್ಯಾಲೋರಿ, 18-20 ಗ್ರಾಂ ಪ್ರೋಟೀನ್ ಒಳಗೊಂಡ ಬಿಸಿಯೂಟ, ಹಾಲು ಮತ್ತು ಮೊಟ್ಟೆಯನ್ನು ಪ್ರತಿ ಫಲಾನು ಭವಿಗೆ ಪ್ರತಿ ದಿನಕ್ಕೆ ರು. 21ರ ಘಟಕ ವೆಚ್ಚವನ್ನು ನಿಗದಿಪಡಿಸಲಾಗಿದೆ. 2025-26ನೇ ಸಾಲಿನಲ್ಲಿ ಸುಮಾರು 3,87,191 ಗರ್ಭಿಣಿಯರು ಮತ್ತು 3,42,230 ಬಾಣಂತಿ ಮಹಿಳೆಯರು ಇದರ ಲಾಭ ಪಡೆದಿದ್ದಾರೆ.

shakti r

ಸೃಷ್ಟಿ ಮತ್ತು ಕ್ಷೀರಭಾಗ್ಯ: ಸೃಷ್ಟಿ ಯೋಜನೆಯಡಿ 03 ವರ್ಷದಿಂದ 06 ವರ್ಷದ ಎಲ್ಲಾ ಸಾಮಾನ್ಯ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ (ರು. 6ರ ದರದಲ್ಲಿ) ಹಾಗೂ ವಾರದಲ್ಲಿ ಎರಡು ದಿನ ಮೊಟ್ಟೆ (ರು. 6ರ ದರದಲ್ಲಿ) ಹಾಗೂ ಕ್ಷೀರಭಾಗ್ಯ ಯೋಜನೆಯಡಿ ವಾರದಲ್ಲಿ ಐದು ದಿನ 150 ಎಂ.ಎಲ್. ಕೆನೆಭರಿತ ಹಾಲು ಹಾಗೂ 05 ಗ್ರಾಂ ಸಕ್ಕರೆ ನೀಡಲಾಗುತ್ತಿದೆ. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ಇನ್ನೂ ಹೆಚ್ಚುವರಿ ಪೌಷ್ಟಿಕ ಆಹಾರ ಹಾಗೂ ಆರೋಗ್ಯ ಆರೈಕೆ ವ್ಯವಸ್ಥೆಯೂ ಇದೆ.

3.ಬಾಲಕಿಯರ ಶಿಕ್ಷಣ ಮತ್ತು ಭವಿಷ್ಯ

ಭಾಗ್ಯಲಕ್ಷ್ಮಿ ಸುಕನ್ಯಾ ಸಮೃದ್ಧಿ ಯೋಜನೆ: ಹೆಣ್ಣು ಮಗುವಿನ ಜನನವನ್ನು ಪ್ರೋತ್ಸಾಹಿಸಲು ಮತ್ತು ಲಿಂಗಾನುಪಾತ ಸುಧಾರಿಸಲು ಬಿಪಿಎಲ್ ಕುಟುಂಬಗಳ ಹೆಣ್ಣು ಮಕ್ಕಳಿಗೆ ಆರ್ಥಿಕ ಭದ್ರತೆ ಒದಗಿಸಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ರು. 26322.00 ಲಕ್ಷಗಳನ್ನು 8,63,190 ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗಿರುತ್ತದೆ.

ವಸತಿ ನಿಲಯಗಳು: ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗ ಬಾರದೆಂದು ರಾಜ್ಯಾದ್ಯಂತ ಮೆಟ್ರಿಕ್ ಪೂರ್ವ ಮತ್ತು ನಂತರದ ವಸತಿ ನಿಲಯಗಳನ್ನು ನಡೆಸಲಾಗುತ್ತಿದೆ.

ದೀಪಿಕಾ ವಿದ್ಯಾರ್ಥಿ ವೇತನ: ಸರಕಾರಿ ಶಾಲಾ ಕಾಲೇಜುಗಳಲ್ಲಿ 10 ಮತ್ತು 12ನೇ ತರಗತಿಗಳನ್ನು ವ್ಯಾಸಂಗ ಮಾಡಿ 2025-26ನೇ ಸಾಲಿನಿಂದ ಉನ್ನತ ಶಿಕ್ಷಣವನ್ನು ಮುಂದು ವರಿಸುತ್ತಿರುವ 37000 ವಿದ್ಯಾರ್ಥಿನಿಯರಿಗೆ ವಾರ್ಷಿಕ 30000 ರು.ಗಳ ವಿದ್ಯಾರ್ಥಿ ವೇತನ ವನ್ನು ಅಜೀಂ ಪ್ರೇಮ್‌ಜಿ ಫೌಂಡೇಷನ್ ವತಿಯಿಂದ ಹಾಗೂ ಉಳಿದ ವಿದ್ಯಾರ್ಥಿನಿಯರಿಗೆ ರಾಜ್ಯ ಸರಕಾರದ ವತಿಯಿಂದ ನೀಡಲಾಗುತ್ತಿದೆ.

  1. ಆರ್ಥಿಕ ಸ್ವಾವಲಂಬನೆ ಮತ್ತು ಉದ್ಯೋಗ

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಮಹಿಳೆಯರನ್ನು ಉದ್ಯಮಿ ಗಳನ್ನಾಗಿ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ:

ಸ್ವಸಹಾಯ ಸಂಘಗಳು: ರಾಜ್ಯದಲ್ಲಿ 1.65 ಲಕ್ಷಕ್ಕೂ ಹೆಚ್ಚು ಗುಂಪುಗಳಿದ್ದು, 25 ಲಕ್ಷ ಮಹಿಳೆಯರು ಸಂಘಟಿತರಾಗಿದ್ದಾರೆ. ಮಹಿಳಾ ಉದ್ಯಮಿಗಳಿಗೆ ಗರಿಷ್ಠ 25 ಲಕ್ಷ ರು. ವರೆಗೆ ಸಾಲ ಸೌಲಭ್ಯವಿದೆ.

Gruhalakshmi ok

ಎಂಎಸ್‌ಐಎಲ್ ಚಿಟ್ ಫಂಡ್ ಯೋಜನೆ: ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ಚಿಟ್ ಫಂಡ್ ಮಹಿಳೆಯರಿಗಾಗಿ, ವಿಶೇಷವಾಗಿ ‘ಗೃಹಲಕ್ಷ್ಮಿ’ ಫಲಾನುಭವಿಗಳು ಮತ್ತು ಸ್ವಸಹಾಯ ಸಂಘಗಳ (ಎಸ್‌ಎಚ್‌ಜಿ) ಸದಸ್ಯರಿಗೆ ಸುರಕ್ಷಿತ ಉಳಿತಾಯ ಮತ್ತು ಹೂಡಿಕೆ ಅವಕಾಶಗಳನ್ನು ಒದಗಿಸುತ್ತದೆ.

ಇದು ಕರ್ನಾಟಕ ಸರಕಾರದ ಮಾಲೀಕತ್ವದ ಸಂಸ್ಥೆಯಾಗಿದ್ದು, ಪಾರದರ್ಶಕತೆ, ವಿಶ್ವಾ ಸಾರ್ಹತೆ ಮತ್ತು ಗ್ರಾಮೀಣ ಭಾಗದ ಜನರನ್ನು ಮೈಕ್ರೋ ಫೈನಾನ್ಸ್ ಶೋಷಣೆ‌ಯಿಂದ ರಕ್ಷಿಸುವ ಗುರಿಯನ್ನು ಹೊಂದಿದೆ.

ಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯಗಳು: ಉದ್ಯೋಗಸ್ಥ ಮಹಿಳೆಯರಿಗೆಂದು 6 ಪ್ರಮುಖ ನಗರಗಳಲ್ಲಿ 23 ವಸತಿನಿಲಯಗಳನ್ನು ಬಾಡಿಗೆ ಕಟ್ಟಡಗಳಲ್ಲಿ ಪ್ರಾರಂಭಿಸ ಲಾಗಿದೆ. ಗಾರ್ಮೆಂಟ್ಸ್, ಕೈಗಾರಿಕೆಗಳು ಮತ್ತು ಇತರ ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪ ಸಂಖ್ಯಾತ ವರ್ಗದ ದುಡಿಯುವ ಮಹಿಳೆಯರಿಗೆ ಆದ್ಯತೆ ಮೇರೆಗೆ ಸೌಲಭ್ಯ ನೀಡಲಾಗುತ್ತಿದೆ. 2026-27ನೇ ಆಯವ್ಯಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉದ್ಯೋಗಸ್ಥ ಮಹಿಳೆಯರಿಗೆ ತಲಾ 50 ಸಂಖ್ಯಾಬಲದ 10 ವಸತಿ ನಿಲಯಗಳನ್ನು ಬೆಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಬೆಳಗಾವಿ ಮತ್ತು ಕಲಬುರಗಿಯಲ್ಲಿ ಪ್ರಾರಂಭಿಸಲು ಘೋಷಿಸಲಾಗಿದೆ.

ಕೂಸಿನ ಮನೆ: ನರೇಗಾ (MGNREGA ) ಅಡಿಯಲ್ಲಿ ಕೆಲಸ ಮಾಡುವ ತಾಯಂದಿರ ಮಕ್ಕಳ ಆರೈಕೆಗಾಗಿ 4000 ಗ್ರಾಮ ಪಂಚಾಯತ್‌ಗಳಲ್ಲಿ ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸ ಲಾಗಿದೆ.

ಮಹಿಳೆಯರ ಉದ್ಯೋಗ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಈ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 6 ತಿಂಗಳಿಂದ 3 ವರ್ಷ ವಯಸ್ಸಿನ ಮಕ್ಕಳಿಗೆ ಸುರಕ್ಷತೆ, ಸ್ವಚ್ಛತೆ, ಆರೋಗ್ಯ, ಪೌಷ್ಟಿಕ ಆಹಾರ ಮತ್ತು ಪ್ರಾಥಮಿಕ ಬೆಳವಣಿಗೆಗೆ ಅಗತ್ಯವಾದ ಉತ್ತೇಜನವನ್ನು ಒದಗಿಸಲಾಗುತ್ತದೆ. ಕೆಲಸ ಮಾಡುವ ತಾಯಂದಿರು ತಮ್ಮ ಮಕ್ಕಳ ಆರೈಕೆಯ ಬಗ್ಗೆ ಆತಂಕ ಇಟ್ಟುಕೊಳ್ಳದೆ ಕೆಲಸ ಮಾಡಲು ಇದು ಸಹಾಯಕವಾಗುತ್ತದೆ.

ಶಿಶು ವಿಹಾರಗಳು: ರಾಜ್ಯದ ಪ್ರತಿ ಜಿಲ್ಲೆಯ 2 ಸರಕಾರಿ ಕಚೇರಿಗಳಲ್ಲಿ ಮತ್ತು ಪ್ರತಿ ಜಿಲ್ಲೆಯ 2 ತಾಲೂಕುಗಳಲ್ಲಿ ಹೆಚ್ಚು ಮಹಿಳಾ ಸಾಂದ್ರತೆ ಇರುವ ಪ್ರದೇಶಗಳಲ್ಲಿ 123 ಶಿಶುಪಾಲನಾ ಕೇಂದ್ರಗಳನ್ನು ಉದ್ಯೋಗಸ್ಥ ಮಹಿಳೆಯರ ಅನುಕೂಲಕ್ಕಾಗಿ ಪ್ರಾರಂಭಿಸಲಾಗಿದೆ. 2986 ಮಕ್ಕಳು ಈ ಯೋಜನೆಯ ಪ್ರಯೋಜನ ಪಡೆದಿರುತ್ತಾರೆ. 2026-27ನೇ ಆಯವ್ಯಯದಲ್ಲಿ 20 ಹೊಸ ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಲು 1 ಕೋಟಿ ರು. ಅನುದಾನ ನೀಡಲಾಗಿದೆ.

ಸಂಜೀವಿನಿ ( NRLM ): ಮಹಿಳಾ ಸ್ವಸಹಾಯ ಸಂಘಗಳನ್ನು ಬಲಪಡಿಸುವ ಮತ್ತು ಆ ಮೂಲಕ ಗ್ರಾಮೀಣ ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಗುರಿಯನ್ನು ಇದು ಹೊಂದಿದೆ. ಪ್ರಸ್ತುತ, ಈ ಸಂಸ್ಥೆಯು ಕರ್ನಾಟಕ ಸರಕಾರದ ಕೌಶಲಾಭಿವೃದ್ಧಿ, ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸುಮಾರು 30 ಲಕ್ಷ ಗ್ರಾಮೀಣ ಮಹಿಳೆಯರನ್ನು ಸಂಘಟಿಸಿ, ಕಿರು ಉದ್ದಿಮೆಗಳನ್ನು ಪ್ರಾರಂಭಿಸಲು ಬೆಂಬಲ ನೀಡಲಾಗುತ್ತಿದೆ.

ಉದ್ಯೋಗಿನಿ ಯೋಜನೆ: ಸ್ವಯಂ ಉದ್ಯೋಗಕ್ಕಾಗಿ 1 ರಿಂದ 3 ಲಕ್ಷ ರು.ವರೆಗೆ ಸಾಲ ಮತ್ತು ಸಹಾಯಧನ ನೀಡಲಾಗುತ್ತದೆ.

ಚೇತನ ಯೋಜನೆ: ದಮನಿತ ಮಹಿಳೆಯರ ಪುನರ್ವಸತಿಗಾಗಿ 30,000 ರು. ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ

5.ಸುರಕ್ಷತೆ ಮತ್ತು ಸಾಮಾಜಿಕ ರಕ್ಷಣೆ ಅಕ್ಕ ಪಡೆ: ಕಳೆದ ಸಾಲಿನಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ, 2831 ವರದಕ್ಷಿಣೆ ಕಿರುಕುಳ ಪ್ರಕರಣಗಳು ದಾಖಲಾಗಿವೆ ಮತ್ತು 5842 ಲೈಂಗಿಕ ದೌರ್ಜನ್ಯ ಪ್ರಕರಣಗಳು ವರದಿ ಯಾಗಿವೆ; ಅಪಾಯದಲ್ಲಿರುವ ಅಥವಾ ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳ ತಕ್ಷಣದ ರಕ್ಷಣೆಗಾಗಿ 2025-26ನೇ ಸಾಲಿನಿಂದ ‘ಅಕ್ಕ ಪಡೆ’ಯನ್ನು ಜಾರಿಗೊಳಿಸಲಾಗಿದೆ.

ರಾಜ್ಯದ 31ಜಿಲ್ಲೆಗಳಲ್ಲಿ ಗೃಹರಕ್ಷಕ ದಳದ ಮಹಿಳಾ ಸದಸ್ಯರನ್ನೊಳಗೊಂಡ ಈ ಪಡೆ ಗಸ್ತು ಸಂಚರಿಸಲು ವಾಹನ ಸೌಲಭ್ಯವನ್ನೂ ಹೊಂದಿದೆ.

ಶಕ್ತಿ ಸದನ (ಸ್ವಾಧಾರ ಗೃಹ ಮತ್ತು ಉಜ್ವಲ ಕೇಂದ್ರ): ಸ್ವಾಧಾರ ಗೃಹ ಯೋಜನೆಯ ಮುಖ್ಯ ಉದ್ದೇಶ- ಕಷ್ಟಕರ ಪರಿಸ್ಥಿತಿಯಲ್ಲಿರುವ ಮಹಿಳೆಯರಿಗೆ ಆಶ್ರಯ, ತರಬೇತಿ ಹಾಗೂ ಶಿಕ್ಷಣ ನೀಡುವುದರ ಮೂಲಕ ಆರ್ಥಿಕವಾಗಿ, ಸಾಮಾಜಿಕವಾಗಿ ಅವರನ್ನು ಸಶಕ್ತರನ್ನಾಗಿ ಮಾಡುವುದಾಗಿರುತ್ತದೆ. ಉಜ್ವಲ ಯೋಜನೆಯು ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆಗಟ್ಟುವ, ಹಾಗೂ ಸಾಗಾಣಿಕೆ ಮತ್ತು ಲೈಂಗಿಕ ದುರುಪಯೋಗಕ್ಕೆ ಒಳಪಟ್ಟವರನ್ನು ರಕ್ಷಿಸುವ ಮತ್ತು ಪುನರ್ವಸತಿ ಕಲ್ಪಿಸುವ ಹಾಗೂ ಇವರುಗಳ ಕುಟುಂಬದವರೊಂದಿಗೆ ಮರುವಿಲೀನಗೊಳಿಸುವ ಉದ್ದೇಶವನ್ನು ಹೊಂದಿರುತ್ತದೆ. ಪ್ರಸ್ತುತ ರಾಜ್ಯಾದ್ಯಂತ 40 ಶಕ್ತಿ ಸದನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಒನ್ ಸ್ಟಾಪ್ ಸೆಂಟರ್ (ಸಖಿ): ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ಸಮಗ್ರ ಸೌಲಭ್ಯ ಅಂದರೆ, ವೈದ್ಯಕೀಯ ಚಿಕಿತ್ಸೆ ಮತ್ತು ನೆರವು, ಪೊಲೀಸ್ ನೆರವು, ಕಾನೂನು ನೆರವು ಹಾಗೂ ಸಮಾಲೋಚನೆ ವ್ಯವಸ್ಥೆಗಳನ್ನು ಒನ್ ಸ್ಟಾಪ್ ಸೆಂಟರ್‌ನಲ್ಲಿ ಒದಗಿಸಲಾಗುತ್ತಿದೆ. ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಒನ್ ಸ್ಟಾಪ್ ಸೆಂಟರ್‌ಗಳು ಕಾರ್ಯ ನಿರ್ವಹಿಸುತ್ತಿವೆ.

ಸಾಂತ್ವನ ಯೋಜನೆ: ಸಮಾಜದಲ್ಲಿ ವರದಕ್ಷಿಣೆ ಕಿರುಕುಳ, ಲೈಂಗಿಕ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರಕ್ಕೊಳಗಾದ ಮಹಿಳೆಯರಿಗೆ ಕಾನೂನು ನೆರವು ಹಾಗೂ ಸಮಾಲೋಚನೆಯನ್ನು ಒದಗಿಸಲಾಗುತ್ತಿದೆ. ಪ್ರಸ್ತುತ 177 ಸಾಂತ್ವನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

  1. ವಿಶೇಷ ಪುನರ್ವಸತಿ ಯೋಜನೆಗಳು

ಮಾಜಿ ದೇವದಾಸಿ ಪುನರ್ವಸತಿ: ಮಾಜಿ ದೇವದಾಸಿಯರನ್ನು ಆರ್ಥಿಕವಾಗಿ ಸಬಲೀ ಕರಣಗೊಳಿಸಲು ಆದಾಯೋತ್ಪನ್ನಕರ ಚಟುವಟಿಕೆ ಕೈಗೊಳ್ಳುವ ಉದ್ದೇಶಕ್ಕಾಗಿ, 45 ವರ್ಷ ಮೇಲ್ಪಟ್ಟ ಮಾಜಿ ದೇವದಾಸಿ ಮಹಿಳೆಯರಿಗೆ ನೇರವಾಗಿ ಪ್ರೋತ್ಸಾಹಧನ ಮೊತ್ತವಾದ 45000 ರು.ಗಳ ಆರ್ಥಿಕ ಸೌಲಭ್ಯವನ್ನು ನಿಗಮದಿಂದ ನೀಡಲಾಗುತ್ತಿದೆ. ಫಲಾನುಭವಿ ಗಳನ್ನು ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಆಯ್ಕೆ ಸಮಿತಿಯಿಂದ ಆಯ್ಕೆ ಮಾಡಲಾಗುತ್ತದೆ.

ಲಿಂಗತ್ವ ಅಲ್ಪಸಂಖ್ಯಾತರ ಕಲ್ಯಾಣ: ರಾಜ್ಯದಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ; ರಾಜ್ಯಾದ್ಯಂತ ಒಟ್ಟು 10,365 ಲಿಂಗತ್ವ ಅಲ್ಪಸಂಖ್ಯಾ ತರು ಸಮೀಕ್ಷೆಯಲ್ಲಿ ಗುರುತಿಸಿಕೊಂಡಿದ್ದು, ಸದರಿ ಸಮುದಾಯದವರ ಪುನರ್ವಸತಿಗೆ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಒಟ್ಟು 4689 ಲಿಂಗತ್ವ ಅಲ್ಪಸಂಖ್ಯಾತರಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಗಿದೆ.

ಮಹಿಳೆಯರು, ಪುರುಷರು ಜಂಟಿಯಾಗಿ ನಮ್ಮ ನಾಡಿನ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ದಿಯಲ್ಲಿ ಸಮಾನ ಪಾತ್ರ ವಹಿಸಲು ಸರಕಾರದ ಯೋಜನೆಗಳೊಂದಿಗೆ ಸಮಾಜದ ಮಾನಸಿಕ ಹಾಗೂ ಮೌಲಿಕ ಹೊಣೆ ಇರಲಿ ಎಂದು ಆಶಿಸುತ್ತೇನೆ.

(ಲೇಖಕಿ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ)