ಸಂಪಾದಕೀಯ ಸದ್ಯಶೋಧನೆ
(ನಿನ್ನೆಯ ಸಂಚಿಕೆಯಿಂದ)
ಮೊರಾರ್ಜಿ ಸರಕಾರವನ್ನು ಉಳಿಸಲು ಅಥವಾ ಜಗಜೀವನ್ ರಾಮ್ ಅವರನ್ನು ಬ್ಲ್ಯಾಕ್‌ಮೇಲ್ ಮಾಡಿ ತಮ್ಮ ಬಣದ ಹಿತಾಸಕ್ತಿ ಕಾಯ್ದುಕೊಳ್ಳಬಹುದು ಎಂದು ರಾಜ್ ನಾರಾಯಣ್ ಆರಂಭದಲ್ಲಿ ಭಾವಿಸಿದ್ದರು. ಆದರೆ ಅವರ ಆಲೋಚನೆ ಬದಲಾಯಿತು. ಅವರು ಮೊರಾರ್ಜಿ ಸರಕಾರವನ್ನು ಉರುಳಿಸಿ ಚರಣ್ ಸಿಂಗ್ ಅವರನ್ನು ಪ್ರಧಾನಿ ಮಾಡಬೇಕೆಂಬ ಮತ್ತೊಂದು ಬೃಹತ್ ರಾಜಕೀಯ ನಾಟಕದ ಸಂಚಿನಲ್ಲಿದ್ದರು. ರಾಜ್ ನಾರಾಯಣ್ ಈ ಫೋಟೋಗಳನ್ನು ಇಂದಿರಾ ಗಾಂಧಿ ಅವರ ಪುತ್ರ ಸಂಜಯ್ ಗಾಂಧಿಗೆ ತಲುಪಿಸಿದರು. ಅದನ್ನು ರಾಜಕೀಯವಾಗಿ ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ದೊಡ್ಡ ಕಾರ್ಯತಂತ್ರವೇ ರೂಪಿತವಾಯಿತು.
ಆಗಿನ್ನೂ ಇಪ್ಪತ್ತರ ಹರೆಯದ ಮೇನಕಾ ಗಾಂಧಿ (ಸಂಜಯ್ ಗಾಂಧಿ ಪತ್ನಿ) ‘ಸೂರ್ಯ ಇಂಡಿಯಾ’ ಎಂಬ ಇಂಗ್ಲಿಷ್ ಮಾಸಿಕ ಪತ್ರಿಕೆಯನ್ನು ನಡೆಸುತ್ತಿದ್ದರು. ತುರ್ತು ಪರಿಸ್ಥಿತಿಯ ನಂತರ ಜೈಲು, ಕೋರ್ಟು ಎಂದು ಅಲೆಯುತ್ತಿದ್ದ ಗಾಂಧಿ ಕುಟುಂಬಕ್ಕೆ ಜನತಾ ಪಕ್ಷದ ಮೇಲೆ ಸೇಡು ತೀರಿಸಿ ಕೊಳ್ಳಲು ಇದಕ್ಕಿಂತ ದೊಡ್ಡ ಅಸ್ತ್ರ ಸಿಗಲು ಸಾಧ್ಯವಿರಲಿಲ್ಲ.
ಇದನ್ನೂ ಓದಿ: Vishweshwar Bhat Column: ಜಗಜೀವನರಾಂ ಪುತ್ರನ ಪ್ರಕರಣ
1978ರ ಅಕ್ಟೋಬರ್ ಸಂಚಿಕೆಯಲ್ಲಿ ಈ ಫೋಟೋಗಳನ್ನು ಪ್ರಕಟಿಸುವ ಮುನ್ನ ತೀವ್ರ ಎಚ್ಚರಿಕೆ ವಹಿಸಲಾಗಿತ್ತು. ಫೋಟೋಗಳು ನಕಲಿ ಎಂದು ಯಾರೂ ವಾದಿಸಬಾರದು ಎಂಬ ಕಾರಣಕ್ಕೆ, ಅತ್ಯಂತ ಸ್ಪಷ್ಟವಾಗಿದ್ದ ಮೂರು-ನಾಲ್ಕು ಪೋಲರಾಯ್ಡ್ ಚಿತ್ರಗಳನ್ನು ಆಯ್ದುಕೊಳ್ಳಲಾಯಿತು. ಪತ್ರಿಕೆ ಮಾರುಕಟ್ಟೆಗೆ ಬರುತ್ತಿದ್ದಂತೆ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಯಾಯಿತು. ಎಷ್ಟು ದೊಡ್ಡ ಮಟ್ಟದ ಬೇಡಿಕೆ ಇತ್ತೆಂದರೆ, ‘ಸೂರ್ಯ’ ಪತ್ರಿಕೆಯ ಪ್ರತಿಗಳು ಕಪ್ಪು ಮಾರುಕಟ್ಟೆಯಲ್ಲಿ ಹತ್ತರಿಂದ ನೂರು ಪಟ್ಟು ಹೆಚ್ಚಿನ ಬೆಲೆಗೆ ಮಾರಾಟವಾದವು!
ದೆಹಲಿಯ ರಾಜಕೀಯ ವಲಯದಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಆ ಪತ್ರಿಕೆಯೇ ಇತ್ತು. ಈ ಹಗರಣ ಕೇವಲ ಪತ್ರಿಕೆಗಳಿಗೆ ಸೀಮಿತವಾಗದೆ ಸಂಸತ್ತಿನ ಉಭಯ ಸದನಗಳನ್ನೂ ತಲುಪಿತು. ಪ್ರತಿಪಕ್ಷಗಳು ರಕ್ಷಣಾ ಸಚಿವ ಜಗಜೀವನ್ ರಾಮ್ ರಾಜೀನಾಮೆಗೆ ಪಟ್ಟು ಹಿಡಿದವು. ರಕ್ಷಣಾ ಸಚಿವರ ಮಗನೇ ಇಂಥ ಸಾರ್ವಜನಿಕ ನೈತಿಕ ಅಧಃಪತನಕ್ಕೆ ಕಾರಣನಾಗಿದ್ದಾನೆ ಮತ್ತು ಆತನನ್ನು ಕಿಡ್ನಾಪ್ ಮಾಡು ವಷ್ಟು ಭದ್ರತಾ ಲೋಪ ಉಂಟಾಗಿದೆ ಎಂದರೆ ದೇಶದ ರಕ್ಷಣೆಯ ಕಥೆಯೇನು ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ಸಂಸದರು ಎತ್ತಿದರು.
ಜಗಜೀವನ್ ರಾಮ್ ಅವರು ಅತ್ಯಂತ ಅಪಮಾನದಿಂದ ತಲೆತಗ್ಗಿಸುವಂತಾಯಿತು. ಅವರು ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಬಳಿ ಹೋಗಿ, ತಮಗೆ ರಾಜಕೀಯವಾಗಿ ಮುಗಿಸಲು ಇಂದಿರಾ ಗಾಂಧಿ ಮತ್ತು ಚರಣ್ ಸಿಂಗ್ ಬಣ ಹೂಡಿರುವ ಸಂಚು ಇದು ಎಂದು ಅಳಲು ತೋಡಿ ಕೊಂಡರು.
ಮೊರಾರ್ಜಿ ಅವರು ಜಗಜೀವನ್ ರಾಮ್ ಅವರನ್ನು ರಕ್ಷಿಸಲು ಪ್ರಯತ್ನಿಸಿದರಾದರೂ, ಸಾರ್ವಜನಿಕ ವಲಯದಲ್ಲಿ ಉಂಟಾಗಿದ್ದ ಆಕ್ರೋಶವನ್ನು ತಡೆಯಲು ಸಾಧ್ಯವಾಗಲಿಲ್ಲ. ದೇಶದ ಮುಂದಿನ ಪ್ರಧಾನಿಯಾಗುವ ಎಲ್ಲ ಅರ್ಹತೆ ಹೊಂದಿದ್ದ ಜಗಜೀವನ್ ರಾಮ್ ಪ್ರತಿಷ್ಠೆ ಮಣ್ಣು ಪಾಲಾಯಿತು. ನೈತಿಕ ಹೊಣೆಗಾರಿಕೆಯ ಭೀತಿಯಿಂದಾಗಿ ಅವರು ರಾಜಕೀಯವಾಗಿ ಸಂಪೂರ್ಣ ದುರ್ಬಲರಾದರು. ಈ ಹಗರಣವು ಜನತಾ ಪಕ್ಷದೊಳಗಿನ ಆಂತರಿಕ ಯುದ್ಧವನ್ನು ಬೀದಿಗೆ ತಂದಿತು. ಚರಣ್ ಸಿಂಗ್ ಬಣ ಮತ್ತು ಮೊರಾರ್ಜಿ-ಜಗಜೀವನ್ ರಾಮ್ ಬಣಗಳ ನಡುವಿನ ಬಿರುಕು ದೊಡ್ಡದಾಗಿ, ಅಂತಿಮವಾಗಿ 1979ರಲ್ಲಿ ಜನತಾ ಪಕ್ಷದ ಸರಕಾರ ಪತನಗೊಳ್ಳಲು ಇದು ಪ್ರಮುಖ ಕಾರಣವಾಯಿತು.
ತುರ್ತು ಪರಿಸ್ಥಿತಿಯ ನಂತರ ರಾಜಕೀಯವಾಗಿ ಮೂಲೆಗುಂಪಾಗಿದ್ದ ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ, ಜನತಾ ಪಕ್ಷದ ನಾಯಕರ ನೈತಿಕ ಅಧಃಪತನವನ್ನು ಜನರೆದುರು ಸಾಬೀತು ಪಡಿಸಲು ಈ ಹಗರಣ ಅತ್ಯುತ್ತಮ ಅಸ್ತ್ರವಾಯಿತು. ಇದು 1980ರಲ್ಲಿ ಇಂದಿರಾ ಗಾಂಧಿ ಮತ್ತೆ ಅಧಿಕಾರಕ್ಕೆ ಬರಲು ದಾರಿ ಮಾಡಿಕೊಟ್ಟಿತು. ಈ ಇಡೀ ಘಟನೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಖಾಸಗಿ ಅಫರ್ ಆಗಿ ಉಳಿಯದೇ, ರಾಜಕೀಯ ಮಹತ್ವಾಕಾಂಕ್ಷೆ ಹೊಂದಿದ್ದ ತರುಣ ನಾಯಕ ತ್ಯಾಗಿ ಮತ್ತು ರಾಜಕೀಯ ಚದುರಂಗದಾಟದ ಚತುರ ರಾಜ್ ನಾರಾಯಣ್ ಅವರ ಕೈ ದಾಳವಾಗಿ ಬಳಕೆಯಾಯಿತು. ಬ್ಲ್ಯಾಕ್‌ಮೇಲ್, ಕಿಡ್ನಾಪ್ ಆರೋಪ ಮತ್ತು ಅತ್ಯಂತ ಆಕ್ಷೇಪಾರ್ಹ ಫೋಟೋಗಳ ಸಾರ್ವಜನಿಕ ಪ್ರದರ್ಶನದ ಮೂಲಕ ಭಾರತದ ಇತಿಹಾಸದ ದಿಕ್ಸೂಚಿಯನ್ನೇ ಬದಲಾಯಿಸಿದ ಅತ್ಯಂತ ವಿವಾದಾತ್ಮಕ ರಾಜಕೀಯ ಹಗರಣವಾಗಿ ಇದು ಇಂದಿಗೂ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.