Vishweshwar Bhat Column: ಜಗಜೀವನರಾಂ ಪುತ್ರನ ಪ್ರಕರಣ
ಬಾಬು ಜಗಜೀವನ್ ರಾಮ್ ದೇಶದ ಧೀಮಂತ ದಲಿತ ನಾಯಕರಾಗಿದ್ದರು ಮತ್ತು ಅಂದಿನ ಮೊರಾರ್ಜಿ ದೇಸಾಯಿ ನೇತೃತ್ವದ ಸರಕಾರದಲ್ಲಿ ಉಪಪ್ರಧಾನ ಹಾಗೂ ರಕ್ಷಣಾ ಸಚಿವರಾಗಿದ್ದರು. ಮೊರಾರ್ಜಿ ಅವರ ನಂತರ ಪ್ರಧಾನಿ ಹುದ್ದೆಗೆ ಅವರೇ ಪ್ರಬಲ ಸ್ಪರ್ಧಿಯಾಗಿದ್ದರು. ಆದರೆ ಅವರ ಮಗ ಸುರೇಶ್ ರಾಮ್ (ಸುಮಾರು 46 ವರ್ಷ) ದೆಹಲಿ ವಿಶ್ವವಿದ್ಯಾಲಯದ ತರುಣ ವಿದ್ಯಾರ್ಥಿನಿ ಸುಷ್ಮಾ ಚೌಧರಿ (ಸುಮಾರು 22 ವರ್ಷ) ಜತೆ ರಹಸ್ಯ ಸಂಬಂಧ ಹೊಂದಿದ್ದರು.
-
ಸಂಪಾದಕೀಯ ಸದ್ಯಶೋಧನೆ
1970ರ ದಶಕದ ಕೊನೆಯ ಭಾಗವು ಭಾರತೀಯ ರಾಜಕೀಯ ಇತಿಹಾಸದಲ್ಲಿ ಅತ್ಯಂತ ನಾಟಕೀಯ ಹಾಗೂ ತಲ್ಲಣಗಳಿಂದ ಕೂಡಿದ ಕಾಲಘಟ್ಟವಾಗಿತ್ತು. ತುರ್ತು ಪರಿಸ್ಥಿತಿಯ ನಂತರ ಇಂದಿರಾ ಗಾಂಧಿಯವರನ್ನು ಸೋಲಿಸಿ ಅಧಿಕಾರಕ್ಕೆ ಬಂದಿದ್ದ ಜನತಾ ಪಾರ್ಟಿ ಸರಕಾರವು ಆಂತರಿಕ ಭಿನ್ನಾಭಿಪ್ರಾಯಗಳು, ನಾಯಕರ ಅಹಂ ಮತ್ತು ರಾಜಕೀಯ ಪಿತೂರಿಗಳಿಂದ ಜರ್ಜರಿತವಾಗಿತ್ತು.
ಇಂಥ ಸೂಕ್ಷ ಸಮಯದಲ್ಲಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಹಾಗೂ ಅಂದಿನ ಪ್ರಭಾವಿ ದಲಿತ ನಾಯಕ ಮತ್ತು ಉಪಪ್ರಧಾನಿ ಬಾಬು ಜಗಜೀವನ್ ರಾಮ್ ಅವರ ರಾಜಕೀಯ ಭವಿಷ್ಯಕ್ಕೆ ಭಾರಿ ಪೆಟ್ಟು ನೀಡಿದ ಘಟನೆಯೇ ಅವರ ಮಗ ಸುರೇಶ್ ರಾಮ್ ಮತ್ತು ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿದ್ಯಾರ್ಥಿನಿ ಸುಷ್ಮಾ ಚೌಧರಿ ಅವರ ಪ್ರೇಮ ಪ್ರಕರಣ. ಈ ರಹಸ್ಯ ಸಂಬಂಧವನ್ನು ಪತ್ತೆಹಚ್ಚಿ, ಅದನ್ನು ರಾಜಕೀಯ ಅಸವನ್ನಾಗಿ ಬಳಸಿಕೊಂಡಿದ್ದು ಪಶ್ಚಿಮ ಉತ್ತರ ಪ್ರದೇಶದ ಉದಯೋನ್ಮುಖ ಯುವ ನಾಯಕ ಕೆ.ಸಿ. ತ್ಯಾಗಿ ಮತ್ತು ಅವರ ಆಪ್ತ ಒಂಪಾಲ್ ಸಿಂಗ್.
ಬಾಬು ಜಗಜೀವನ್ ರಾಮ್ ದೇಶದ ಧೀಮಂತ ದಲಿತ ನಾಯಕರಾಗಿದ್ದರು ಮತ್ತು ಅಂದಿನ ಮೊರಾರ್ಜಿ ದೇಸಾಯಿ ನೇತೃತ್ವದ ಸರಕಾರದಲ್ಲಿ ಉಪಪ್ರಧಾನ ಹಾಗೂ ರಕ್ಷಣಾ ಸಚಿವರಾಗಿದ್ದರು. ಮೊರಾರ್ಜಿ ಅವರ ನಂತರ ಪ್ರಧಾನಿ ಹುದ್ದೆಗೆ ಅವರೇ ಪ್ರಬಲ ಸ್ಪರ್ಧಿಯಾಗಿದ್ದರು. ಆದರೆ ಅವರ ಮಗ ಸುರೇಶ್ ರಾಮ್ (ಸುಮಾರು 46 ವರ್ಷ) ದೆಹಲಿ ವಿಶ್ವವಿದ್ಯಾಲಯದ ತರುಣ ವಿದ್ಯಾರ್ಥಿನಿ ಸುಷ್ಮಾ ಚೌಧರಿ (ಸುಮಾರು 22 ವರ್ಷ) ಜತೆ ರಹಸ್ಯ ಸಂಬಂಧ ಹೊಂದಿದ್ದರು.
ಇದನ್ನೂ ಓದಿ: Vishweshwar Bhat Column: ಮೌನ ರೇಖೆಗಳ ಮಾತುಗಾರಿಕೆ: ಫಾಂಟ್ʼಗಳ ಒಳಜಗತ್ತು
ಸುಷ್ಮಾ ಹರಿಯಾಣದ ಪ್ರಭಾ ವಿ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ರಣಬೀರ್ ಸಿಂಗ್ ಚೌಧರಿ ಅವರ ಪುತ್ರಿಯಾಗಿದ್ದಳು (ಮತ್ತು ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಅವರ ಸಹೋದರಿ). ಈ ಇಬ್ಬರ ನಡುವಿನ ವಯಸ್ಸಿನ ವ್ಯತ್ಯಾಸ ಮತ್ತು ಇಬ್ಬರ ಕುಟುಂಬಗಳ ರಾಜಕೀ ಯ ಹಿನ್ನೆಲೆ ಈ ಸಂಬಂಧವನ್ನು ಅತ್ಯಂತ ರಹಸ್ಯವಾಗಿಡುವಂತೆ ಮಾಡಲಾಗಿತ್ತು.
ತ್ಯಾಗಿ ಮತ್ತು ಅವರ ಮಿತ್ರ ಒಂಪಾಲ್ ಸಿಂಗ್ ಜನತಾ ಪಕ್ಷದ ಸಮಾಜವಾದಿ ಬಣಕ್ಕೆ (ವಿಶೇಷವಾಗಿ ಚೌಧರಿ ಚರಣ್ ಸಿಂಗ್ ಮತ್ತು ರಾಜ್ ನಾರಾಯಣ್ ಬಣ) ಹತ್ತಿರವಾಗಿದ್ದರು. ಜನತಾ ಪಕ್ಷದೊಳಗೆ ಮೊರಾರ್ಜಿ, ಜಗಜೀವನ್ ರಾಮ್ ಮತ್ತು ಚರಣ್ ಸಿಂಗ್ ನಡುವೆ ಪ್ರಧಾನಿ ಹುದ್ದೆಗಾಗಿ ತೀವ್ರ ಪೈಪೋಟಿ ನಡೆದಿತ್ತು. ಈ ಸಮಯದಲ್ಲಿ ಸುರೇಶ್ ರಾಮ್ ಅವರ ರಹಸ್ಯ ಪ್ರೇಮದಾಟದ ಸುಳಿವು ತ್ಯಾಗಿ ಅವರಿಗೆ ಸಿಕ್ಕಿತು. ಜಗಜೀವನ್ ರಾಮ್ ರಾಜಕೀಯ ಬೆಳವಣಿಗೆಗೆ ಬ್ರೇಕ್ ಹಾಕಲು ಇದೊಂದು ಸುವರ್ಣಾವಕಾಶ ಎಂದು ಅವರು ಭಾವಿಸಿದರು.
ತ್ಯಾಗಿ ಮತ್ತು ಒಂಪಾಲ್ ಸಿಂಗ್ ಅವರು ಸುರೇಶ್ ರಾಮ್ ಹಾಗೂ ಸುಷ್ಮಾ ಚಲನವಲನಗಳ ಮೇಲೆ ತೀವ್ರ ನಿಗಾ ಇರಿಸಲು ಪ್ರಾರಂಭಿಸಿದರು. ಒಂದು ದಿನ ಸಂಜೆ ತಡವಾಗಿ ಇವರಿಬ್ಬರೂ ಕಾರಿನಲ್ಲಿ ದೆಹಲಿಯ ನಿರ್ಜನ ಪ್ರದೇಶವೊಂದರ ರಸ್ತೆಯಲ್ಲಿ ಹಿಂತಿರುಗುತ್ತಿದ್ದಾಗ, ತ್ಯಾಗಿ ನೇತೃತ್ವದ ತಂಡ ಅವರ ಕಾರನ್ನು ಅಡ್ಡಗಟ್ಟಿ ತಡೆದರು. ತ್ಯಾಗಿ ಪ್ರಕಾರ, ಅವರು ಸುರೇಶ್ ರಾಮ್ ಅವರನ್ನು ಅಪಹರಿಸಿರಲಿಲ್ಲ, ಕೇವಲ ವಿಚಾರಣೆಗೆ ಒಳಪಡಿಸಿದ್ದರು. ಆದರೆ, ವಾಸ್ತವವೇನೆಂದರೆ ಆ ರಾತ್ರಿ ಸುರೇಶ್ ರಾಮ್ ತಡ ರಾತ್ರಿಯಾದರೂ ಮನೆಗೆ ಮರಳಲಿಲ್ಲ. ಇದರಿಂದ ಆತಂಕಗೊಂಡ ತಂದೆ ಜಗಜೀವನ್ ರಾಮ್ ಪೊಲೀಸರಿಗೆ ದೂರು ನೀಡಿ, ತನ್ನ ಮಗ ನಾಪತ್ತೆಯಾಗಿದ್ದಾನೆ ಅಥವಾ ಯಾರೋ ಆತನನ್ನು ಅಪಹರಿಸಿದ್ದಾರೆ ಎಂದು ತಿಳಿಸಿದರು.
ತನಿಖೆ ನಡೆಸಿದಾಗ ತ್ಯಾಗಿ ಮತ್ತು ಅವರ ಮಿತ್ರರ ಮೇಲೆ ಕಿಡ್ನಾಪಿಂಗ್ ಪ್ರಕರಣ ದಾಖಲಾಯಿತು. ಆದರೆ ಈ ಇಡೀ ನಾಟಕದ ಹಿಂದಿನ ಅಸಲಿ ಆಟ ಬೇರೆಯೇ ಇತ್ತು. ಕಾರನ್ನು ಅಡ್ಡಗಟ್ಟಿದ ಸಮಯ ದಲ್ಲಿ ತ್ಯಾಗಿ ಮತ್ತು ಅವರ ತಂಡದ ಬಳಿ ಪೋಲರಾಯ್ಡ ಕೆಮರಾ ಇತ್ತು. ಆ ಕಾಲದಲ್ಲಿ ಕೆಮರಾಗಳ ವಿಶೇಷವೆಂದರೆ ಫೋಟೋ ತೆಗೆದ ತಕ್ಷಣ ವೇ ಪ್ರಿಂಟ್ ಕೈಗೆ ಸಿಗುತ್ತಿತ್ತು. ಸುರೇಶ್ ರಾಮ್ ಮತ್ತು ಸುಷ್ಮಾ ಚೌಧರಿ ಅತ್ಯಂತ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದಾಗ ತ್ಯಾಗಿ ತಂಡ ಅವರ ಹಲವಾರು ಫೋಟೋಗಳನ್ನು ಕ್ಲಿಕ್ಕಿಸಿತು.
‘ಆ ಸಮಯದಲ್ಲಿ ನಮ್ಮ ಕೈಯಲ್ಲಿದ್ದದ್ದು ಕೇವಲ ಕೆಲವು ಫೋಟೋಗಳಲ್ಲ, ಬದಲಿಗೆ ಇಡೀ ದೇಶದ ರಾಜಕೀಯವನ್ನು ತಲೆ ಕೆಳಗು ಮಾಡಬಲ್ಲ ಒಂದು ‘ರಾಜಕೀಯ ಚಿನ್ನದ ಗಣಿ’ ಎಂಬುದು ನಮಗೆ ತಕ್ಷಣಕ್ಕೆ ಅರಿವಾಗಲಿಲ್ಲ. ನಾವು ಆ ಫೋಟೋಗಳನ್ನು ತೆಗೆದುಕೊಂಡು ಅಲ್ಲಿಂದ ಕಣ್ಮರೆಯಾದೆವು’ ಎಂದು ತ್ಯಾಗಿ ನಂತರ ಹೇಳಿದರು. ಈ ಫೋಟೋಗಳನ್ನು ತ್ಯಾಗಿ ಅದನ್ನು ಅಂದಿನ ಜನತಾ ಸರಕಾ ರದ ಸಚಿವ ರಾಜ್ ನಾರಾಯಣ್‌ಗೆ ಹಸ್ತಾಂತರಿಸಿದರು. ನಂತರ ಏನಾಯಿತು? ನಾಳೆ ಹೇಳುತ್ತೇನೆ.