Vishweshwar Bhat Column: ಬಿಗ್ ಮ್ಯಾಕ್ ಇಂಡೆಕ್ಸ್ ಎಂದರೇನು?
ಭಾರತದಲ್ಲಿ ಅದೇ ಬರ್ಗರ್ ಬೆಲೆ 200 ರುಪಾಯಿ ಇದೆ ಎಂದುಕೊಳ್ಳೋಣ. ಹಾಗಿದ್ದಲ್ಲಿ, ಪಿಪಿಪಿ ಸಿದ್ಧಾಂತದ ಪ್ರಕಾರ ಒಂದು ಡಾಲರ್ ಮೌಲ್ಯವು 40 ರುಪಾಯಿ ಆಗಿರಬೇಕು. ಆದರೆ, ಮಾರುಕಟ್ಟೆಯಲ್ಲಿ ಒಂದು ಡಾಲರ್ ಮೌಲ್ಯ 80 ರುಪಾಯಿ ಆಗಿದ್ದರೆ, ಭಾರತೀಯ ರುಪಾಯಿ ಯು ಡಾಲರ್ ಎದುರು ‘ಅಂಡರ್‌ವ್ಯಾಲ್ಯೂಡ್’ (ಕಡಿಮೆ ಮೌಲ್ಯದ ಸ್ಥಿತಿಯಲ್ಲಿ) ಇದೆ ಎಂದು ಅರ್ಥ.
-
ಸಂಪಾದಕರ ಸದ್ಯಶೋಧನೆ
ಅರ್ಥಶಾಸ್ತ್ರದಂಥ ಗಂಭೀರ ವಿಷಯವನ್ನು ಜನಸಾಮಾನ್ಯರಿಗೂ ಅರ್ಥವಾಗುವಂತೆ ಸರಳವಾಗಿ ಮತ್ತು ಕುತೂಹಲಕಾರಿಯಾಗಿ ನಿರೂಪಿಸುವುದರಲ್ಲಿ ದಿ ಎಕನಾಮಿಸ್ಟ್ ಪತ್ರಿಕೆ ಸದಾ ಮುಂಚೂಣಿ ಯಲ್ಲಿರುವುದನ್ನು ಗಮನಿಸಿರಬಹುದು. ಇದಕ್ಕೆ ಅತ್ಯುತ್ತಮ ಉದಾ ಹರಣೆ ಎಂದರೆ ಅವರು 1986ರಲ್ಲಿ ಪರಿಚಯಿಸಿದ ಬಿಗ್ ಮ್ಯಾಕ್ ಇಂಡೆಕ್ಸ್.
ಹಾಗಾದರೆ ಬಿಗ್ ಮ್ಯಾಕ್ ಇಂಡೆಕ್ಸ್ ಎಂದರೇನು? ಇದು ವಿವಿಧ ದೇಶಗಳ ಕರೆನ್ಸಿಗಳ (ನೋಟು) ಮೌಲ್ಯವನ್ನು ಅಳೆಯಲು ಬಳಸುವ ಒಂದು ಅನೌಪಚಾರಿಕ ಸಾಧನ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ದೇಶದ ಹಣದ ಮೌಲ್ಯವು ವಾಸ್ತವವಾಗಿ ಎಷ್ಟು ಇರಬೇಕು ಮತ್ತು ಪ್ರಸ್ತುತ ಎಷ್ಟು ಇದೆ (ಅಂದರೆ ಅದು ಓವರ್ ವ್ಯಾಲ್ಯೂಡ್ ಆಗಿದೆಯೇ ಅಥವಾ ಅಂಡರ್ ವ್ಯಾಲ್ಯೂಡ್ ಆಗಿದೆಯೇ?) ಎಂಬುದನ್ನು ಇದು ಪತ್ತೆ ಮಾಡುತ್ತದೆ.
ಇದಕ್ಕೆ ಆಧಾರವಾಗಿ ಬಳಸುವುದು ಮೆಕ್‌ಡೊನಾಲ್ಡ್ಸ್ (McDonald's) ಕಂಪನಿಯ ಪ್ರಸಿದ್ಧ ‘ಬಿಗ್ ಮ್ಯಾಕ್’ ಬರ್ಗರ್. ಈ ಸೂಚ್ಯಂಕ ಹೇಗೆ ಕೆಲಸ ಮಾಡುತ್ತದೆ? ಬಿಗ್ ಮ್ಯಾಕ್ ಇಂಡೆಕ್ಸ್ ಖರೀದಿ ಶಕ್ತಿ ಸಮಾನತೆ’ (Purchasing Power Parity) ಅಂದರೆ ಪಿಪಿಪಿ ಎಂಬ ಆರ್ಥಿಕ ಸಿದ್ಧಾಂತದ ಮೇಲೆ ನಿಂತಿದೆ.
ಇದನ್ನೂ ಓದಿ: Vishweshwar Bhat Column: ಸೈನಿಕರು ಡ್ರಗ್ಸ್ ಸೇವಿಸಿದಾಗ..
ದೀರ್ಘಾವಧಿಯಲ್ಲಿ, ಯಾವುದೇ ಎರಡು ದೇಶಗಳ ನಡುವಿನ ವಿನಿಮಯ ದರವು ( Exchange Rate), ಆ ಎರಡು ದೇಶಗಳಲ್ಲಿನ ಒಂದೇ ರೀತಿಯ ವಸ್ತುಗಳ ಬೆಲೆಯನ್ನು ಸಮಾನವಾಗಿಸುವ ಮಟ್ಟಕ್ಕೆ ಬದಲಾಗಬೇಕು. ಉದಾಹರಣೆಗೆ, ಅಮೆರಿಕದಲ್ಲಿ ಒಂದು ಬಿಗ್ ಮ್ಯಾಕ್ ಬರ್ಗರ್ ಬೆಲೆ 5 ಡಾಲರ್ ಇದೆ ಎಂದು ಭಾವಿಸೋಣ.
ಭಾರತದಲ್ಲಿ ಅದೇ ಬರ್ಗರ್ ಬೆಲೆ 200 ರುಪಾಯಿ ಇದೆ ಎಂದುಕೊಳ್ಳೋಣ. ಹಾಗಿದ್ದಲ್ಲಿ, ಪಿಪಿಪಿ ಸಿದ್ಧಾಂತದ ಪ್ರಕಾರ ಒಂದು ಡಾಲರ್ ಮೌಲ್ಯವು 40 ರುಪಾಯಿ ಆಗಿರಬೇಕು. ಆದರೆ, ಮಾರುಕಟ್ಟೆ ಯಲ್ಲಿ ಒಂದು ಡಾಲರ್ ಮೌಲ್ಯ 80 ರುಪಾಯಿ ಆಗಿದ್ದರೆ, ಭಾರತೀಯ ರುಪಾಯಿಯು ಡಾಲರ್ ಎದುರು ‘ಅಂಡರ್‌ವ್ಯಾಲ್ಯೂಡ್’ (ಕಡಿಮೆ ಮೌಲ್ಯದ ಸ್ಥಿತಿಯಲ್ಲಿ) ಇದೆ ಎಂದು ಅರ್ಥ. ಇದಕ್ಕೆ ಬಿಗ್ ಮ್ಯಾಕ್’ ಅನ್ನೇ ಏಕೆ ಆರಿಸಿಕೊಳ್ಳಲಾಗಿದೆ? ಜಗತ್ತಿನ ಸಾವಿರಾರು ವಸ್ತುಗಳ ಪೈಕಿ ಇದನ್ನೇ ಸೂಚ್ಯಂಕ ಕ್ಕೆ ಆಯ್ಕೆ ಮಾಡಲು ಕಾರಣಗಳಿವೆ - ಮೊದಲನೆಯದು ಜಾಗತಿಕ ಲಭ್ಯತೆ.
ಮೆಕ್‌ಡೊನಾಲ್ಡ್ಸ್ ಜಗತ್ತಿನ ಬಹುತೇಕ ಎಲ್ಲ ದೇಶಗಳಲ್ಲೂ ಇದೆ. ಎರಡನೆಯದು, ಏಕರೂಪದ ಗುಣಮಟ್ಟ. ನೀವು ಲಂಡನ್ನಲ್ಲಿ ಬಿಗ್ ಮ್ಯಾಕ್ ತಿಂದರೂ ಅಥವಾ ಟೋಕಿಯೊದಲ್ಲಿ ತಿಂದರೂ ಅದರ ತಯಾರಿಕಾ ವಿಧಾನ, ಕಚ್ಚಾ ವಸ್ತುಗಳು ಮತ್ತು ಗುಣಮಟ್ಟ ಬಹುತೇಕ ಒಂದೇ ಆಗಿರುತ್ತದೆ.
ಮೂರನೆಯದು, ಸ್ಥಳೀಯ ಉತ್ಪಾದನಾ ವೆಚ್ಚ. ಈ ಬರ್ಗರ್ ತಯಾರಿಸಲು ಸ್ಥಳೀಯವಾಗಿ ಸಿಗುವ ಮಾಂಸ, ತರಕಾರಿ, ಬಾಡಿಗೆ ಮತ್ತು ಕಾರ್ಮಿಕರ ಕೂಲಿಯನ್ನು ಬಳಸಲಾಗುತ್ತದೆ. ಹಾಗಾಗಿ ಇದು ಆ ದೇಶದ ಆರ್ಥಿಕತೆಯ ನೈಜ ಚಿತ್ರಣವನ್ನು ನೀಡುತ್ತದೆ. ಇದು ಬಹಳ ಜನಪ್ರಿಯವಾಗಿದ್ದರೂ, ಇದನ್ನು ಸಂಪೂರ್ಣ ವೈಜ್ಞಾನಿಕ ಎಂದು ಕರೆಯಲು ಸಾಧ್ಯವಿಲ್ಲ. ಇದಕ್ಕೆ ಕೆಲವು ಕಾರಣಗಳಿವೆ - ಪ್ರತಿ ದೇಶದಲ್ಲೂ ಆಹಾರದ ಮೇಲಿನ ತೆರಿಗೆ ಬೇರೆ ಬೇರೆ ಇರುತ್ತದೆ.
ಕೆಲವು ದೇಶಗಳಲ್ಲಿ ಬರ್ಗರ್ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಇರಬಹುದು, ಕೆಲವು ಕಡೆ ಇಲ್ಲದಿರ ಬಹುದು. ಸಾಂಸ್ಕೃತಿಕ ವ್ಯತ್ಯಾಸಗಳೂ ಪ್ರಭಾವ ಬೀರಬಹುದು. ಉದಾಹರಣೆಗೆ, ಭಾರತದಲ್ಲಿ ಗೋಮಾಂಸದ ಬಿಗ್ ಮ್ಯಾಕ್ ಬದಲಿಗೆ ಚಿಕನ್ ಅಥವಾ ‘ವೆಜ್ ಮಹಾರಾಜ ಮ್ಯಾಕ್’ ಬಳಸಲಾಗು ತ್ತದೆ. ಇದು ಬೆಲೆಯಲ್ಲಿ ವ್ಯತ್ಯಾಸ ಉಂಟು ಮಾಡಬಹುದು.
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಕಾರ್ಮಿಕರ ಕೂಲಿ ಅಧಿಕವಾಗಿರುವುದರಿಂದ ಅಲ್ಲಿ ಬರ್ಗರ್ ಬೆಲೆ ಸಹಜವಾಗಿಯೇ ಹೆಚ್ಚಿರುತ್ತದೆ. ದಿ ಎಕನಾಮಿಸ್ಟ್ ಈ ಸೂಚ್ಯಂಕವನ್ನು ಆರಂಭದಲ್ಲಿ ಒಂದು ತಮಾಷೆಯಾಗಿ ಪರಿಚಯಿಸಿತ್ತು. ಆದರೆ ಇಂದು ಇದು ಅರ್ಥಶಾಸ್ತ್ರದ ಪಠ್ಯಪುಸ್ತಕಗಳ ಭಾಗವಾಗಿದೆ. ಅನೇಕ ಶೈಕ್ಷಣಿಕ ಲೇಖನಗಳಲ್ಲಿ ಇದನ್ನು ಉಲ್ಲೇಖಿಸ ಲಾಗುತ್ತದೆ.
ಇದು ಜಟಿಲವಾದ ಕರೆನ್ಸಿ ಮಾರುಕಟ್ಟೆಯನ್ನು ಸಾಮಾನ್ಯ ಓದುಗರಿಗೆ ಸರಳವಾಗಿ ವಿವರಿಸುವಲ್ಲಿ ಯಶಸ್ವಿಯಾಗಿದೆ. ಭಾರತದಲ್ಲಿ ಬಿಗ್ ಮ್ಯಾಕ್ ಬೆಲೆ ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಕಡಿಮೆ. ಇದರರ್ಥ ಭಾರತೀಯ ರುಪಾಯಿಯು ಡಾಲರ್ ಎದುರು ಗಣನೀಯವಾಗಿ ಅಂಡರ್‌ವ್ಯಾಲ್ಯೂಡ್ ಆಗಿದೆ ಎಂದು ಈ ಇಂಡೆಕ್ಸ್ ಹೇಳುತ್ತದೆ. ಇದು ಭಾರತೀಯರ ಖರೀದಿ ಶಕ್ತಿಯನ್ನು ಜಾಗತಿಕ ಮಟ್ಟ ದಲ್ಲಿ ಅಳೆಯಲು ಒಂದು ಸುಲಭ ಮಾರ್ಗವಾಗಿದೆ. ಬಿಗ್ ಮ್ಯಾಕ್ ಇಂಡೆಕ್ಸ್ ಎಂಬುದು ಜಾಗತಿಕ ಅರ್ಥವ್ಯವಸ್ಥೆಯ ನಾಡಿ ಮಿಡಿತವನ್ನು ಅಳೆಯುವ ಒಂದು ಸ್ವಾದಿಷ್ಟ ಸಾಧನ!