Vinayaka V Bhat Column: ಹೆಮ್ಮೆಯ ಕನ್ನಡತಿ ಬಾನು ಮುಷ್ತಾಕ್ ಅವರಿಗೆ ಕಳಕಳಿಯ ಪತ್ರ
ನಿಮ್ಮ ಕಥೆಗಳನ್ನು, ನನ್ನನ್ನೂ ಸೇರಿ ಎಷ್ಟು ಜನ ಕನ್ನಡಿಗರು ಓದಿದ್ದಾರೋ ತಿಳಿಯದು. ಆದರೆ ನಿಮಗೆ ಪ್ರಶಸ್ತಿ ಬಂದ ಸುದ್ದಿ ತಿಳಿದು ಕರ್ನಾಟಕ ಸರಕಾರವಷ್ಟೇ ಅಲ್ಲ, ನೀವು ಕನ್ನಡಮಾತೆಯ ಹೆಮ್ಮೆಯ ಕುವರಿ ಎನ್ನುವ ಕಾರಣಕ್ಕಾಗಿ ಇಡೀ ಕರುನಾಡು ಸಂಭ್ರಮಿಸಿತು. ನಮ್ಮ ನಾಡಿನ ಹೆಣ್ಣುಮಗಳೊಬ್ಬಳಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಬಂದಿದೆ ಎನ್ನುವುದೇ, ನಾಡು ಸಂತೋಷ ಪಡಲು ಪ್ರಮುಖ ಕಾರಣವಾಯ್ತು.

-

ವಿದ್ಯಮಾನ
vinayakvbhat@autoaxle.com
ಬಾನು ಮುಷ್ತಾಕ್ ಅವರಿಗೆ ಅಭಿನಂದನೆಗಳು ಮತ್ತು ನಮಸ್ಕಾರಗಳು. ನೀವು ಕೇವಲ ಬರಹಗಾರ್ತಿ ಯಲ್ಲದೆ, ಹೋರಾಟಗಾರ್ತಿ, ಪತ್ರಕರ್ತೆ, ವಕೀಲೆ ಮತ್ತು ರಾಜಕಾರಣಿಯೂ ಅಗಿ ಮಹಿಳೆಯರಿಗೆ ಮಾದರಿಯಾಗಿದ್ದೀರಿ. ದೀಪಾ ಭಸ್ತಿ ಅವರು ಕನ್ನಡ ಭಾಷೆಯಿಂದ ಆಂಗ್ಲ ಭಾಷೆಗೆ ಅನುವಾದಿಸಿದ ನಿಮ್ಮ ಸಣ್ಣ ಕಥಾ ಸಂಕಲನ ‘ಎದೆಯ ಹಣತೆ’/‘ಹಾರ್ಟ್ ಲ್ಯಾಂಪ್’ಗೆ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ದೊರಕಿರುವುದು ನಿಜಕ್ಕೂ ಸಂತೋಷ ತಂದಿತು.
ನಿಮಗೆ ಅಭಿನಂದನೆಗಳು. ಈ ಪ್ರಶಸ್ತಿ, ನಿಮ್ಮ ಕಥಾಸಂಕಲನದ ಮೂಲಕ ಕನ್ನಡಕ್ಕೆ ಪ್ರಥಮ ಬಾರಿಗೆ ದೊರೆತಿದೆ ಎಂದು ತಿಳಿದಾಗಲಂತೂ ಇನ್ನೂ ಸಂತೋಷವಾಯಿತು. ನಿಮ್ಮಿಂದಾಗಿ ಅಥವಾ ನಿಮ್ಮ ಕೃತಿಯಿಂದಾಗಿ, ಕನ್ನಡ ಸಾರಸ್ವತ ಲೋಕಕ್ಕೆ ಅಂತಾರಾಷ್ಟ್ರೀಯ ವೇದಿಕೆಯೊಂದರಲ್ಲಿ ಮರ್ಯಾದೆ ದೊರೆಯುವಂತಾಯ್ತು.
ನಿಮ್ಮ ಕಥೆಗಳನ್ನು, ನನ್ನನ್ನೂ ಸೇರಿ ಎಷ್ಟು ಜನ ಕನ್ನಡಿಗರು ಓದಿದ್ದಾರೋ ತಿಳಿಯದು. ಆದರೆ ನಿಮಗೆ ಪ್ರಶಸ್ತಿ ಬಂದ ಸುದ್ದಿ ತಿಳಿದು ಕರ್ನಾಟಕ ಸರಕಾರವಷ್ಟೇ ಅಲ್ಲ, ನೀವು ಕನ್ನಡಮಾತೆಯ ಹೆಮ್ಮೆಯ ಕುವರಿ ಎನ್ನುವ ಕಾರಣಕ್ಕಾಗಿ ಇಡೀ ಕರುನಾಡು ಸಂಭ್ರಮಿಸಿತು. ನಮ್ಮ ನಾಡಿನ ಹೆಣ್ಣುಮಗಳೊಬ್ಬಳಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಬಂದಿದೆ ಎನ್ನುವುದೇ, ನಾಡು ಸಂತೋಷ ಪಡಲು ಪ್ರಮುಖ ಕಾರಣವಾಯ್ತು.
ಇದನ್ನೂ ಓದಿ: Vinayaka V Bhat Column: ಆತ್ಮಗೌರವವನ್ನೇ ಬಲಿಕೊಟ್ಟ ಮೇಲೆ, ಬದುಕಿದ್ದೂ ಸತ್ತಂತೆ
ಮತ್ತೊಮ್ಮೆ ನಿಮಗೂ ಮತ್ತು ನಿಮ್ಮ ಕಥೆಗಳನ್ನು ಪ್ರಶಸ್ತಿಯ ವೇದಿಕೆಯವರೆಗೆ ಕೊಂಡೊಯ್ದ ಇನ್ನೊಬ್ಬ ಹೆಮ್ಮೆಯ ಕನ್ನಡತಿ, ದೀಪಾ ಭಸ್ತಿಯವರಿಗೂ ಅಭಿನಂದನೆಗಳು. ನಮ್ಮ ನಾಡಿನಲ್ಲಿ ನಿಮಗೆ ಸಿಕ್ಕಷ್ಟು ಪ್ರಚಾರ-ಗೌರವ, ನಿಮ್ಮ ಕಥೆಗಳನ್ನು ಆಂಗ್ಲ ಭಾಷೆಗೆ ಭಾಷಾಂತರಿಸಿ, ಜಂಟಿಯಾಗಿ ನಿಮ್ಮೊಂದಿಗೆ ಪ್ರಶಸ್ತಿ ಸ್ವೀಕರಿಸಿದ ದೀಪಾ ಬಸ್ತಿಯವರಿಗೂ ಸಿಗಬೇಕಾಗಿತ್ತು ಅನಿಸಿತು.
ಇರಲಿ, ಅದಕ್ಕೆ ನಿಮ್ಮನ್ನು ಹೊಣೆಗಾರಳನ್ನಾಗಿ ಮಾಡಲಾರೆ. ವಿಶ್ವ ಪ್ರಸಿದ್ಧ ದಸರಾ ಉದ್ಘಾಟನೆಯ ಅವಕಾಶ ಬಹಳ ಗೌರವದ್ದು ಎಂಬುದು, ಈ ಮಹೋತ್ಸವವನ್ನು ಹಿಂದೆ ಉದ್ಘಾಟಿಸಿದವರೆಲ್ಲರ ಅನಿಸಿಕೆ. ಹಿಂದೂ ಧರ್ಮದ ಮಹಿಳೆಯೊಬ್ಬಳಿಗೆ ನಿಮಗೆ ಸಿಕ್ಕ ಪ್ರಶಸ್ತಿ ದೊರೆತಿದ್ದರೆ, ಸರಕಾರ ಅವರನ್ನು ಆಮಂತ್ರಿಸುತ್ತಿತ್ತೋ ಇಲ್ಲವೋ ಎನ್ನುವುದರ ಕುರಿತು ನನಗಂತೂ ಸಂಶಯವಿದೆ.
ಪದ್ಮಪ್ರಶಸ್ತಿ ದೊರಕಿಸಿಕೊಂಡ ಕನ್ನಡ ನಾಡಿನ ಅನೇಕ ಸಾಧಕಿಯರಿಗೂ ಈ ಅವಕಾಶ ದೊರೆ ತಿಲ್ಲ. ಆದರೆ ನಿಮ್ಮ ಅದೃಷ್ಟ, ಹಿಂದೂ ನಂಬಿಕೆಯ ಪ್ರಕಾರ ನಡೆಯುವ ದಸರಾ ಮಹೋತ್ಸವದ ಉದ್ಘಾಟನೆಗೆ ಸರಕಾರದ ವತಿಯಿಂದ ನಿಮ್ಮನ್ನು ಅಧಿಕೃತವಾಗಿ ಆಮಂತ್ರಿಸಲಾಗಿದೆ.
ಮಹಿಷಾಸುರನನ್ನು ಆರಾಧಿಸುವವರ ಗ್ಯಾಂಗ್‌ನಿಂದ ಯಾರಾದರೂ ಒಬ್ಬರನ್ನು ಈ ಸಾರಿ ಜಗನ್ಮಾತೆಯ ದಸರಾ ಉತ್ಸವದ ಉದ್ಘಾಟನೆಗೆ ಆಮಂತ್ರಿಸಬಹುದು ಎನ್ನುವ ನಿರೀಕ್ಷೆಯಿತ್ತು. ಆದರೆ, ಈ ಸಂದರ್ಭದಲ್ಲಿ ನಿಮಗೆ ಅಂತಾರಾಷ್ಟ್ರೀಯ ಪ್ರಶಸ್ತಿಯೊಂದು ದೊರೆತಿದ್ದರಿಂದ, ಸರಕಾರ ನಿಮ್ಮನ್ನು ಈ ಮೂಲಕ ಗೌರವಿಸುತ್ತಿರಬೇಕು.

ನೀವು ಈ ಮಹೋತ್ಸವ ವನ್ನು ಉದ್ಘಾಟಿಸುತ್ತಿರುವುದು ಜಗನ್ಮಾತೆ ಚಾಮುಂಡಿಗೂ ಸಂತೋಷ ವಾಗಿರಲಿಕ್ಕೆ ಸಾಕು; ಸಾಧನೆ ಮಾಡಿದ ತನ್ನ ಮಗಳೊಬ್ಬಳು, ತನ್ನ ಸನ್ನಿಧಾನಕ್ಕೆ ಬಂದು ಸೇವೆ ಮಾಡುತ್ತಿದ್ದಾಳೆ ಎಂದು ಆಕೆಯೂ ಹರ್ಷ ಪಡಬಹುದು. ಆದರೆ, ಈ ಕೆಲಸ ನಿಮ್ಮ ತತ್ವಾದರ್ಶ ಗಳಿಗೆ ಒಪ್ಪುತ್ತದೆಯೇ, ನೀವು ಈ ಅವಕಾಶವನ್ನು ಹೇಗೆ ಸ್ವೀಕರಿಸಿದ್ದೀರಿ ಎಂಬುದನ್ನು ನೀವೇ ಹೇಳಬೇಕು.
ನಿಮಗೂ ತಿಳಿದಿರುವಂತೆ, ಸರಕಾರದ ಈ ನಿರ್ಧಾರ ಸ್ವಲ್ಪ ವಿವಾದಕ್ಕೊಳಗಾಗಿ ನಿಮ್ಮ ಬೇಸರಕ್ಕೂ ಕಾರಣವಾಗಿದೆ. ನಿಮ್ಮನ್ನು ಆಮಂತ್ರಿಸಿದ ಮೇಲೆ ವಿವಾದವಾಗಿದ್ದಲ್ಲ, ವಿವಾದವಾಗಲೆಂದೇ ಸರಕಾರ ನಿಮ್ಮನ್ನು ಆಮಂತ್ರಿಸಿದೆಯೇನೋ ಅನಿಸುತ್ತಿದೆ. ನಿಮಗೂ ಹಾಗೆ ಅನಿಸಿರಲಿಕ್ಕೆ ಸಾಕು. ನಿಮಗೆ ಪ್ರಶಸ್ತಿ ಬಂದ ಸುದ್ದಿ ತಿಳಿದಾಗಲೇ, ದಸರಾ ಉದ್ಘಾಟನೆಗೆ ಈ ಸಲ ನಿಮ್ಮನ್ನೇ ಸರಕಾರ ಕರೆಯಲಿದೆ ಎನ್ನುವುದು ಕನ್ನಡಿಗರಿಗೆ ತಿಳಿದಿತ್ತು.
ಅಧಿಕೃತ ಘೋಷಣೆಯೊಂದೇ ಬಾಕಿಯಿತ್ತು. ಅಲ್ಲಿಂದೀಚೆಗೆ, ಕನ್ನಡಿಗರನ್ನು ಅಸಹಿಷ್ಣುಗಳು ಎಂದು ಬಿಂಬಿಸುವ ಯತ್ನಗಳಾಗುತ್ತಿವೆ. ‘ಚಾಮುಂಡಿಯ ಕ್ಷೇತ್ರ ಹಿಂದೂಗಳ ಆಸ್ತಿಯಲ್ಲ’ ಎಂದೆಲ್ಲಾ ಹೇಳಲಾಗುತ್ತಿದೆ. ಹಾಗಂತ, ಅನ್ಯಧರ್ಮೀಯರು ದಸರೆಯನ್ನು ಉದ್ಘಾಟಿಸುತ್ತಿರುವುದು ಇದೇ ಮೊದಲಂತೂ ಅಲ್ಲ. ಡಾ.ಕೆ.ಎಸ್. ನಿಸಾರ್ ಅಹಮದ್ ಅವರು ಹೆಮ್ಮೆಯಿಂದ, ಕೃತಜ್ಞತಾ ಪೂರ್ವಕ ವಾಗಿ ಈ ಕೆಲಸವನ್ನು ಹಿಂದೆ ಮಾಡಿದ್ದಿದೆ.
ಒಬ್ಬ ಮಹಿಳೆ ಉದ್ಘಾಟಿಸುತ್ತಿರುವುದೂ ಇದೇ ಮೊದಲಲ್ಲ. ನಮ್ಮ ಹೆಮ್ಮೆಯ ಆಸ್ತಿಕ ಸಾಧಕಿ ಸುಧಾ ಮೂರ್ತಿಯವರು ತಮ್ಮ ಅಹೋಭಾಗ್ಯವೆಂದು ಭಾವಿಸಿ, ಈ ಕಾರ್ಯವನ್ನು ಕೆಲವು ವರ್ಷಗಳ ಹಿಂದೆ ಸೇವಾಭಾವದಿಂದ ಮಾಡಿರುವುದಿದೆ. ಹಾಗಾಗಿ, ನೀವು ಮುಸಲ್ಮಾನರು ಎಂತಲೋ, ಮಹಿಳೆ ಎಂತಲೋ ಜನ ವಿರೋಧಿಸುತ್ತಿರುವುದಲ್ಲ ಎನ್ನುವುದು ತಿಳಿದು ಬರುತ್ತದೆ. ನೀವು ನಾಡದೇವಿ ಚಾಮುಂಡೇಶ್ವರಿಯ ವಾರ್ಷಿಕ ಧಾರ್ಮಿಕ ವಿಽಯಾದ ದಸರಾ ಮಹೋತ್ಸವವನ್ನು ಉದ್ಘಾಟಿ ಸುವುದನ್ನು ಒಪ್ಪದ, ಕನ್ನಡನಾಡಿನ ಸಾತ್ವಿಕ ಜನರ ವಿರೋಧಕ್ಕೆ ಮೂಲ ಕಾರಣವೇನು ಎನ್ನುವುದು ನಿಮಗೂ ತಿಳಿದಿದೆ.
“ಕನ್ನಡವನ್ನು ಒಂದು ಭಾಷೆಯಾಗಿ ಮಾತನಾಡಲು ನನಗೆ, ನನ್ನ ಮನೆಯವರಿಗೆ ನೀವು ಅವಕಾಶ ವನ್ನೇ ಕೊಡಲಿಲ್ಲ. ಕನ್ನಡವನ್ನು ಕನ್ನಡ ಭುವನೇಶ್ವರಿಯನ್ನಾಗಿ ಮಾಡಿಬಿಟ್ರಿ, ಕರುನಾಡಿಗೆ ಕೆಂಪು ಹಳದಿ ಬಣ್ಣದ ಬಾವುಟ ಮಾಡಿ, ಅವಳಿಗೆ ಅರಿಶಿನ-ಕುಂಕುಮ ಲೇಪಿಸಿ ಮಂದಾಸನದ ಮೇಲೆ ಕುಳ್ಳಿರಿಸಿ ಬಿಟ್ರಿ. ಈಗ ನಾನೆಲ್ಲಿ ನಿಲ್ಲಬೇಕು? ನಾನು ಏನನ್ನು ನೋಡಬೇಕು? ನಾನು ಹೇಗೆ ಇನ್ವಾಲ್ವ್ ಆಗಬೇಕು? ನನ್ನ ಹೊರಗಟ್ಟು ವಿಕೆ ಇಂದು ನಿನ್ನೆಯದಲ್ಲ, ಹೀಗೆಲ್ಲ ಮಾಡುವ ಮೂಲಕ ನೀವು ಕನ್ನಡಾಂಬೆಯ ಮೇಲೆ ದೌರ್ಜನ್ಯಮಾಡುತ್ತಿದ್ದೀರಿ, ಕನ್ನಡವನ್ನು ಭುವನೇಶ್ವರಿಯನ್ನಾಗಿಸಿ, ಅವಳ ರಥ ಎಳೆದು ಪರಿಶೆ ಮಾಡಿದಿರಿ, ನನ್ನನ್ನು ಹೊರಗಟ್ಟಲು ನೀವು ಇದನ್ನೆಲ್ಲ ಮಾಡಿದಿರಿ, ನನ್ನನ್ನು ಹೊರಗಟ್ಟಲು ಇಷ್ಟೆಲ್ಲಾ ಹುನ್ನಾರ ಬೇಕಿತ್ತಾ ನಿಮಗೆ, ಮುಸ್ಲಿಂ ಬರಹಗಾರರಿಗೆ ನೀವು ಉತ್ತರ ಕೊಡ ಬೇಕಾಗಿದೆ" ಎಂದೆಲ್ಲ ನೀವು ಹೇಳಿರುತ್ತೀರಿ.
2023ರಲ್ಲಿ ಜನ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡುತ್ತಾ, ಕನ್ನಡ ಭಾಷೆಯನ್ನು ಕನ್ನಡಾಂಬೆ ಯನ್ನಾಗಿಸಿದ ಕುರಿತು ನೀವು ಅಸಮಾಧಾನ ಹೊಮ್ಮಿಸಿರುವುದು, ಕನ್ನಡ ಬಾವುಟದ ಬಣ್ಣವು ಅರಿಶಿನ- ಕುಂಕುಮದ ಬಣ್ಣಕ್ಕೆ ಹೋಲಿಕೆಯಾಗಿರುವುದಕ್ಕೆ ನೀವು ಅಪಸ್ವರ ಎತ್ತಿರುವುದು, ಕರ್ನಾಟಕದಲ್ಲಿ ಮುಸ್ಲಿಂ ಬರಹಗಾರರಿಗೆ ಅಗತ್ಯ ಪ್ರೋತ್ಸಾಹ ದೊರೆಯಲಿಲ್ಲ ಎಂದಿರುವುದು, ಅತ್ಯಂತ ಸಹಿಷ್ಣುಗಳು ಮತ್ತು ರಸಿಕರಾದ ಕನ್ನಡಿಗರ ಮನಸ್ಸಿಗೆ ಘಾಸಿಯುಂಟು ಮಾಡಿದೆ.
ಹಾಗಾಗಿ, ನೀವು ದಸರೆಯನ್ನು ಉದ್ಘಾಟಿಸುವುದು ಸರಿಬರುತ್ತಿಲ್ಲದಿರಬಹುದು. ಹಿಂದೂಸ್ತಾನದಲ್ಲಿ, ಅದರಲ್ಲೂ ಕರ್ನಾಟಕದಲ್ಲಿ ಇಲ್ಲಿಯ ತನಕ ಸಾಹಿತ್ಯ-ಸಂಗೀತಕ್ಕೆ ಜಾತಿ-ಧರ್ಮಗಳ ಭೇದ ಮುಸು ಕಿಲ್ಲ. ಇಲ್ಲಿಯ ಜನ ಸಂಗೀತವನ್ನು ಸಂಗೀತವಾಗಿಯಷ್ಟೇ ಕೇಳುತ್ತಾರೆ, ಸಾಹಿತ್ಯವನ್ನು ಅದರ ಮೌಲ್ಯದ ಆಧಾರದಲ್ಲಿ ಸಾಹಿತ್ಯವಾಗಷ್ಟೇ ಓದುತ್ತಾರೆ ಎನ್ನುವುದನ್ನು ನಿಮ್ಮಲ್ಲಿ ವಿಶದೀಕರಿಸು ತ್ತೇನೆ.
‘ನಿತ್ಯೋತ್ಸವದ ಕವಿ’ ಎಂದೇ ಹೆಸರುವಾಸಿಯಾಗಿದ್ದ ಹೆಮ್ಮೆಯ ಕನ್ನಡಿಗ ಡಾ.ನಿಸಾರ್ ಅಹಮದ್ ಅವರು ಕೂಡಾ ನಿಮ್ಮ ಸಮುದಾಯದವರೇ ಆಗಿದ್ದರಲ್ಲವೇ? ಅವರಿಗೆ ಕನ್ನಡ ಜನರ ಅಸೀಮ ಪ್ರೀತಿ ದೊರೆತಿದೆ. ಅವರೂ ಒಮ್ಮೆ ದಸರೆಯನ್ನು ಉದ್ಘಾಟಿಸಿದ್ದಾರೆ. ಆಗ ಯಾವುದೇ ವಿವಾದವಾಗಲಿಲ್ಲ ವೇಕೆ ಎಂದು ನೀವು ವಿಮರ್ಶೆ ಮಾಡಿಕೊಳ್ಳುವುದೊಳಿತು.
“ನನಗೆ ಅನೇಕ ಪ್ರಶಸ್ತಿಗಳು ಸಂದಿವೆ, ಎಲ್ಲ ಪ್ರಶಸ್ತಿಗಳಿಗೂ ಅದರದ್ದೇ ಆದ ಗೌರವವಿದೆ. ಕಾರಣ ಅದರ ಹಿಂದೆ, ನನ್ನ ಮೇಲಿನ ಪ್ರೀತಿ ಮತ್ತು ನನ್ನ ಕೆಲಸದ ಮೇಲಿನ ಗೌರವವಿರುತ್ತದೆ. ಆದರೆ, ನಾಡಹಬ್ಬ ದಸರಾವನ್ನು ಉದ್ಘಾಟಿಸಲು ಅವಕಾಶ ನೀಡಿ ಗೌರವಿಸಿದ್ದು ನನಗೆ ಸಂದ ಎಲ್ಲ ಪ್ರಶಸ್ತಿಗಳಿಗಿಂತ ದೊಡ್ಡ ಸನ್ಮಾನವಾಗಿದೆ" ಎಂದು ನಿಸಾರ್ ಅವರು ಹೇಳಿರುವುದನ್ನು ನೆನಪಿಸಿ ಕೊಳ್ಳುತ್ತೇನೆ. ಆ ವಿಷಯದಲ್ಲಿ ಅವರಿಗೆ ಅಷ್ಟು ಖುಷಿಯಿತ್ತು.
“ನಾವು ಇನ್ವಾಲ್ವ್ ಆಗಬೇಕು, ನನ್ನನ್ನು ಯಾಕೆ ಇನ್ವಾಲ್ವ್ ಮಾಡುವುದಿಲ್ಲ" ಎಂದು ಬೇರೆಯವ ರನ್ನು ಕೇಳುವುದಲ್ಲ ಎನ್ನುವುದಕ್ಕೆ ಅವರು ಉದಾಹರಣೆಯಾದವರು. ಅವರನ್ನು ಪ್ರೀತಿಸುವವ ರಲ್ಲಿ ಎಲ್ಲ ಧರ್ಮದ ಕನ್ನಡಿಗರೂ ಇದ್ದಾರೆ. ಅವರೂ, ‘ನಿತ್ಯೋತ್ಸವ ತಾಯೆ ನಿನಗೆ ನಿತ್ಯೋತ್ಸವ’ ಎಂದು ಕನ್ನಡವನ್ನು, ಕರುನಾಡನ್ನು ಹೆಮ್ಮೆಯಿಂದ ತಾಯಿ ಅಂತಲೇ ಸಂಬೋಧಿಸಿ ಬರೆದಿದ್ದಾರೆ. ಇನ್ನು ನಮ್ಮ ರಾಷ್ಟ್ರಕವಿ ಕುವೆಂಪು ಅವರು ಕರುನಾಡನ್ನು ಹಾಡಿಹೊಗಳಿದ ನಾಡಗೀತೆಯ ಬಗ್ಗೆ ನಿಮಗೆ ನಾನು ಹೇಳುವುದೇನೂ ಇಲ್ಲ. ‘ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ’ ಎಂದು ಕರುನಾಡನ್ನು ತಾಯಿ ಎಂದೇ ಸಂಬೋಧಿಸಿದ್ದಾರೆ.
ಅಷ್ಟೇ ಅಲ್ಲದೆ ಈ ನಾಡು, ಇಷ್ಟು ಭವ್ಯವೂ ಸುಂದರವೂ ಆಗಲು ಕಾರಣರಾದ ಎಲ್ಲರ ಹೆಸರನ್ನು ಈ ಗೀತೆಯಲ್ಲಿ ಅಳವಡಿಸಿದ್ದಾರೆ. ಮಹಾಭಾರತ ಬರೆದ ಕುಮಾರವ್ಯಾಸ, ರನ್ನ, ಕರುನಾಡಿನ ಆಧ್ಯಾತ್ಮಿಕ ಅಸ್ಮಿತೆಯಾದ ಶಂಕರರು, ರಾಮಾನುಜರು ಮತ್ತು ವಿದ್ಯಾರಣ್ಯರನ್ನು ಅವರು ಗುಣಗಾನ ಮಾಡಿ ನಮ್ಮ ಆಚಾರ್ಯ ಪರಂಪರೆಯನ್ನು ಗೌರವಿಸಿದ್ದಾರೆ.
ಭಕ್ತಿ ಭಂಡಾರಿ ಬಸವಣ್ಣನನ್ನು ಕೊಂಡಾಡಿದ್ದಾರೆ. ಏನು ಮಾಡೋಣ ಮೇಡಂ, ಕನ್ನಡಕ್ಕಾಗಿ, ಕರುನಾಡಿಗಾಗಿ ದುಡಿದ ಎಲ್ಲ ಮಹನೀಯರುಗಳೂ ಈ ನಾಡನ್ನು ಹಾಗೂ ಈ ಭಾಷೆಯನ್ನು ‘ತಾಯಿ’ ಎಂದೇ ಭಾವಿಸಿದ್ದಾರೆ. ನಮ್ಮ ಭಾರತೀಯ ಸಂಸ್ಕೃತಿ ಇರುವುದೇ ಹೀಗೆ. ಆಶ್ರಯ ಕೊಡುವ ಜನನಿ ಮತ್ತು ಜನ್ಮಭೂಮಿ ಎರಡನ್ನೂ ಮಾತೃ ಸ್ಥಾನದಲ್ಲೇ ನೋಡುವುದನ್ನು ಅನಾದಿಯಿಂದ ನಮಗೆ ಕಲಿಸಲಾಗಿದೆ.
ಯಾವುದೇ ಧರ್ಮ, ಜಾತಿಗಳಲ್ಲಿಯೂ ತಾಯಿ ತಾಯಿಯೇ ಆಗಿರುತ್ತಾಳೆ ಎನ್ನುವುದು ನನ್ನ ತಿಳಿವಳಿಕೆ. ಹಾಗಾಗಿ, ಅವರನ್ನೆಲ್ಲ ನೀವು ದೂರುತ್ತೀರಾ? ನಮ್ಮ ನಾಡಗೀತೆಯನ್ನು, ಅದನ್ನು ರಚಿಸಿದ ರಾಷ್ಟ್ರಕವಿ ಕುವೆಂಪು ಅವರನ್ನು ನೀವು ಒಪ್ಪುವುದಿಲ್ಲವೇ? ಎನ್ನುವುದು ನನ್ನ ಪ್ರಶ್ನೆ ಯಾಗಿದೆ. ಅನೇಕ ರಾಜ್ಯಗಳಿಗೆ ಇರದ ಬಾವುಟ ಮತ್ತು ನಾಡಗೀತೆ ನಮ್ಮ ಕನ್ನಡ ಭುವನೇಶ್ವರಿಗೆ ಇದೆ.
ಇದು, ಕನ್ನಡಿಗರಾಗಿ ಸಂತೋಷ ಮತ್ತು ಹೆಮ್ಮೆ ಪಡುವ ವಿಷಯವೋ? ಅಥವಾ ಅದರ ಬಣ್ಣವು ಅರಿಶಿನ-ಕುಂಕುಮಕ್ಕೆ ಹೋಲುತ್ತದೆ ಎನ್ನುವ ಕಾರಣಕ್ಕೆ ಕ್ಯಾತೆ ಎತ್ತುವುದು ಸೂಕ್ತವೋ? ನೀವೇ ಹೇಳಬೇಕು. ಅರಿಶಿನ-ಕುಂಕುಮವನ್ನು ನಮ್ಮ ದೇಶದಲ್ಲಿ ಮಂಗಳದ ಸೂಚಕವಾಗಿ ಬಳಸ ಲಾಗುತ್ತದೆ. ಅರಿಶಿನ-ಕುಂಕುಮ, ಹೂವು- ಪತ್ರೆ, ಗಂಧ ಮುಂತಾದ ದ್ರವ್ಯಗಳನ್ನು ಬಿಟ್ಟು ನಮಗೆ ಪೂಜೆಯಿಲ್ಲ.
ಅದು ಹಿಂದುತ್ವದ ಸಂಕೇತವಾಗಿರುವುದರಿಂದ, ಕೆಲವು ರಾಜಕಾರಣಿಗಳಂತೆ ನಿಮಗೂ ಅವು ಗಳನ್ನು ಕಂಡರಾಗದು ಅಂತ ತೋರುತ್ತದೆ. ಇರಲಿ, ಅದು ನಿಮ್ಮ ವೈಯಕ್ತಿಕ ಅಭಿಪ್ರಾಯವೆಂದು ಗೌರವಿ ಸೋಣ. ಆದರೆ, ನೀವು ದಸರಾ ಉದ್ಘಾಟನೆಗೆ ಹೋದರೆ, ತಾಯಿ ಚಾಮುಂಡೇಶ್ವರಿಯ ಮೂರ್ತಿಗೆ ಹೂವೇರಿಸುವುದು, ಅರಿಶಿನ-ಕುಂಕುಮವೇರಿಸುವುದು, ಆರತಿ ಎತ್ತುವುದು ಈ ಎಲ್ಲವನ್ನೂ ಮಾಡಬೇಕಾಗುತ್ತದೆ.
ಚಾಮುಂಡಿ ತಾಯಿಯ ಸನ್ನಿಧಾನದಲ್ಲಿ ಅರಿಶಿನ- ಕುಂಕುಮದ್ದೇ ಕಾರುಬಾರು ಇರು ತ್ತದೆ. ಹಿಂದೂ ನಂಬಿಕೆಯಲ್ಲಿ, ಅರಿಶಿನ-ಕುಂಕುಮಕ್ಕೆ ಇನ್ನಿಲ್ಲದ ಮಹತ್ವ ಇರುತ್ತದೆ. ಅಲ್ಲಿ ತಾಯಿಯ ಮೂರ್ತಿಗೆ ಪುಷ್ಪಾರ್ಚನೆ ಮಾಡುವುದು, ಆರತಿ ಬೆಳಗುವುದು ಎಲ್ಲ ಇರುತ್ತದೆ, ತೇರು ಎಳೆಯುವುದೂ ಇರುತ್ತದೆ. ಅರಿಶಿನ-ಕುಂಕುಮದ ಬಣ್ಣದ ಬಗ್ಗೆ ಒಂದು ರೀತಿಯ ಅಲರ್ಜಿ ಇರುವ ನಿಮಗೆ, ಅಲ್ಲಿಗೆ ಹೋಗಿ ನಿಮ್ಮ ಮನೋಧೋರಣೆಗೆ ಒಪ್ಪದ ಕೆಲಸ ಮಾಡುವಾಗ ಒಂದು ರೀತಿಯ ಮುಜುಗರವಾಗದೇ? ಎನ್ನುವ ಸಂಶಯ ನನ್ನನ್ನು ಕಾಡುತ್ತಿದೆ. ಕನ್ನಡ ಭುವನೇಶ್ವರಿಯ ಅಸ್ತಿತ್ವವನ್ನೇ ಒಪ್ಪದ ನಿಮ್ಮ ಮನಸ್ಥಿತಿಗೆ, ಚಾಮುಂಡಿ ಪೂಜೆ ಹೇಗೆ ಸರಿಹೋದೀತು ಎಂದೆನಿಸುತ್ತಿದೆ.
ಇಷ್ಟೆಲ್ಲ, ನಿಮ್ಮ ಮನಸ್ಸಿಗೊಪ್ಪದ, ನಿಮ್ಮ ಅಸಮಾಧಾನ-ಅಸಹನೆಗಳಿಗೆ ಕಾರಣವಾಗುವ ಕಾರ್ಯ ಗಳು ದಸರಾ ಮಹೋತ್ಸವದ ಉದ್ಘಾಟನಾ ಸಮಯದಲ್ಲಿ ನಿಮ್ಮಿಂದಲೇ ನಡೆಯುತ್ತದೆ ಎಂದು ಗೊತ್ತಿದ್ದರೂ, ನೀವು ಹೇಗೆ ಈ ಆಮಂತ್ರಣವನ್ನು ಒಪ್ಪಿದಿರಿ ಎನ್ನುವುದೇ ತಿಳಿಯುತ್ತಿಲ್ಲ.
‘ಘನ ಸರಕಾರವೇ ನನ್ನನ್ನು ಆಮಂತ್ರಿಸಿ, ಗೌರವಿಸಲು ಉದ್ದೇಶಿಸಿರುವಾಗ, ನಾನಾದರೂ ಹೇಗೆ ತಿರಸ್ಕರಿಸುವುದು?’ ಎನ್ನುವುದು ನಿಮ್ಮ ಭಾವನೆಯಿರಬೇಕು. ಆದರೆ, ಸರಕಾರದ ನಿರ್ಧಾರದ ಹಿಂದೆ ರಾಜಕೀಯ ಉದ್ದೇಶಗಳು ಹುಲುಸಾಗಿರಬಹುದು ಎನ್ನುವುದು ನಿಮಗೆ ತಿಳಿಯದ ವಿಷಯವೇನೂ ಅಲ್ಲ. ರಾಜಕೀಯವನ್ನು, ಸಣ್ಣ ಸ್ತರದಲ್ಲಾದರೂ ನೀವೂ ಕಂಡವರೇ ಇದ್ದೀರಿ. ಬಹುಸಂಖ್ಯಾತ ಹಿಂದೂಗಳನ್ನು ಕೆಣಕುವ ಹಾಗೂ ಮುಸ್ಲಿಮರನ್ನು ತುಷ್ಟೀಕರಣ ಮಾಡುವ ಹುನ್ನಾರವೂ ಈ ನಿರ್ಧಾರದ ಹಿಂದೆ ಇರಬಹುದು ಎಂದು ನಿಮಗೆ ಅನಿಸುವುದಿಲ್ಲವೇ? ಅದಲ್ಲದಿದ್ದರೆ, ಮಹಿಳೆಯೂ, ನಮ್ಮ ರಾಜ್ಯದವರೂ ಆದ, ನಿಮ್ಮ ಜತೆಗೆ ಪ್ರಶಸ್ತಿ ಹಂಚಿಕೊಂಡ ದೀಪಾ ಭಸ್ತಿಯವರನ್ನೂ ಸರಕಾರ ದಸರಾ ಉದ್ಘಾಟನೆಗೆ ಆಮಂತ್ರಿಸಬೇಕಿತ್ತು.
ಹಾಗಾಗದಿರುವುದನ್ನು ಗಮನಿಸುವಾಗ, ಎಲ್ಲೋ ರಾಜಕಾರಣಿಗಳು ನಿಮ್ಮನ್ನು ಹಾಗೂ ನಿಮಗೆ ಪ್ರಶಸ್ತಿ ಸಂದ ಈ ಸಂದರ್ಭವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ, ನೀವು ಅವರ ಒತ್ತಡಗಳಿಗೆ ಮಣಿಯುತ್ತಿದ್ದೀರಿ ಅಂತ ನನಗಂತೂ ಏಕೋ ಅನಿಸುತ್ತಿದೆ. ಸೈದ್ಧಾಂತಿಕ ವೈರುಧ್ಯಗಳ ಕಾರಣಗಳಿಂದಾಗಿ, ಸರಕಾರ ನೀಡಿದ ದಸರಾ ಉದ್ಘಾಟನೆಯ ಆಮಂತ್ರಣವನ್ನು ನೀವು ಅತ್ಯಂತ ವಿನಯ-ವಿಧೇಯತೆಯಿಂದ ತಿರಸ್ಕರಿಸುತ್ತೀರಿ ಎಂದುಕೊಂಡಿದ್ದೆ.
ಆದರೆ ನೀವು ಸ್ವೀಕರಿಸಿದ್ದೀರಿ.ಸರಕಾರದ ಮತ್ತು ನಿಮ್ಮ ತೀರ್ಮಾನವನ್ನು ಪ್ರಶ್ನಿಸುವ ಹಕ್ಕಾದರೂ ನಮಗೆಲ್ಲಿದೆ ಹೇಳಿ? ನೀವು ತಾಯಿ ಚಾಮುಂಡಿಯನ್ನು ಪೂಜಿಸುವ ಸಂದರ್ಭದಲ್ಲಿ, ನಿಮ್ಮ ಜಾತಿ, ಮತ, ಧರ್ಮ ಹಾಗೂ ಸಿದ್ಧಾಂತಗಳನ್ನೆಲ್ಲ ತಾತ್ಕಾಲಿಕವಾಗಿ ಬದಿಗಿಟ್ಟು, ಕನ್ನಡಿಗರ ಹಿರಿಯಕ್ಕನಾಗಿ, ಸಮಸ್ತ ಕನ್ನಡಿಗರ ಶ್ರೇಯೋಭಿವೃದ್ಧಿಗೆ ಸಾತ್ವಿಕ ಮನಸ್ಸಿನಿಂದ ಆ ತಾಯಿಯಲ್ಲಿ ಪ್ರಾರ್ಥಿಸಿ ಬನ್ನಿ. ನಮಗೆಲ್ಲರಿಗೂ ಆ ತಾಯಿ ಚಾಮುಂಡಿ ಸದ್ಬುದ್ಧಿಯನ್ನೂ, ನಮ್ಮ ನಾಡಿಗೆ ಶಾಂತಿ- ಸಮೃದ್ಧಿ ಯನ್ನೂ ದಯಪಾಲಿಸಲಿ ಎಂದು ಭಕ್ತಿಯಿಂದ ಹರಸಿ ಕೊಂಡು ಬನ್ನಿ ಎನ್ನುವುದು ನಿಮ್ಮಲ್ಲಿ ನನ್ನ ಕಳಕಳಿಯ ವಿನಂತಿ. ಪ್ರಶಸ್ತಿಗಾಗಿ ನಿಮಗೂ ಮತ್ತು ದೀಪಾ ಭಸ್ತಿಯವರಿಗೂ ಮತ್ತೊಮ್ಮೆ ನನ್ನ ಹೃತ್ಪೂರ್ವಕ ಅಭಿನಂದನೆಗಳು...