ಅಭಿಮತ
ಬೆಳ್ಳೆ ಚಂದ್ರಶೇಖರ ಶೆಟ್ಟಿ
ದೇಶದಲ್ಲಿ ಜಾರಿಯಲ್ಲಿದ್ದ ಅತಿ ಹಳೆಯ ಮತ್ತು ಪ್ರಸಕ್ತ ಕಾಲ ಘಟ್ಟಕ್ಕೆ ಹೊಂದದ, ಕೇಂದ್ರ ಸರಕಾರದ ನೂರಾರು ಕಾರ್ಮಿಕ ಕಾಯ್ದೆಗಳಿಂದ ಹೆಕ್ಕಿ ತೆಗೆದು, ಒಟ್ಟು ೨೯ ಕಾಯ್ದೆಗಳನ್ನು ಕ್ರೋಡೀಕರಿಸಿ 2019-20ರಲ್ಲಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಪ್ರಕಟಿಸಲಾಗಿತ್ತು; ಈ ಸಂಹಿತೆಗಳ ಜಾರಿಗೆ ಕೊನೆಗೂ ಗಳಿಗೆ ಕೂಡಿಬಂದು, 2025ರ ನವೆಂಬರ್ ೨೧ರಂದು ಅಧಿಸೂಚನೆ ಹೊರಡಿಸ ಲಾಗಿದೆ.
ಆಯ್ಕೆ ಮಾಡಿಕೊಂಡ ೨೯ ಕಾಯ್ದೆಗಳನ್ನು ‘ವೇತನ ಸಂಹಿತೆ’, ‘ಔದ್ಯಮಿಕ ಬಾಂಧವ್ಯ ಸಂಹಿತೆ’, ‘ಸಾಮಾಜಿಕ ಭದ್ರತೆ ಸಂಹಿತೆ’ ಹಾಗೂ ‘ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಷರತ್ತು’ ಎಂಬ ೪ ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಇವುಗಳ ವೈಶಿಷ್ಟ್ಯಗಳ ಬಗ್ಗೆ ಈಗಾಗಲೇ ಅನೇಕ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿರುವುದರಿಂದ, ಆಯ್ದ ವಿಷಯಗಳ ಬಗ್ಗೆ ಬೆಳಕು ಚೆಲ್ಲಲು ಇಲ್ಲಿ ಯತ್ನಿಸಲಾಗಿದೆ.
ವೇತನ ಸಂಹಿತೆಯಡಿಯಲ್ಲಿಯ ‘ಬೋನಸ್’ ಪಾವತಿಗೆ ಅರ್ಹರಾಗಲು ನೌಕರರ ಗರಿಷ್ಠ ವೇತನ ವನ್ನು ನಿಗದಿಪಡಿಸಲಾಗಿದೆ (ಪ್ರಸ್ತುತ 21000 ರುಪಾಯಿಯಷ್ಟಿದೆ). ಅದಕ್ಕಿಂತ ಹೆಚ್ಚು ವೇತನ ಪಡೆಯುವ ನೌಕರರು ಇದಕ್ಕೆ ಅರ್ಹರಲ್ಲ. ಮಾಲೀಕರೇ ನೀಡಿದರೆ ಮಾತ್ರ ಅನುಗ್ರಹಪೂರ್ವಕವಾಗಿ ( Exgratia) ಪಡೆಯಬಹುದು. ಇದರ ಬದಲಾವಣೆಯ ಅಗತ್ಯವಿತ್ತು.
ಇದನ್ನೂ ಓದಿ: Vishwavani Editorial: ಬದಲಾವಣೆ ಜಗದ ನಿಯಮ
ಸಂಸ್ಥೆಯ ಯಶಸ್ಸಿನಲ್ಲಿ ಎಲ್ಲ ನೌಕರರ ಪಾತ್ರವೂ ಇರುತ್ತದೆ. ಅಲ್ಲದೆ ಬೋನಸ್ಸನ್ನು ‘ಮುಂದೂಡ ಲ್ಪಟ್ಟ ವೇತನ’ ( deffered wages) ಎಂದೂ ವಿಶ್ಲೇಷಿಸಲಾಗುತ್ತದೆ. ಹಾಗಾಗಿ ಬೋನಸ್ ಪಾವತಿ ಯನ್ನು ಭಿಕ್ಷೆಯಂತೆ ಪರಿಗಣಿಸದೆ, ಗರಿಷ್ಠ ಮೊತ್ತದ ಮಿತಿಗೆ ಒಳಪಟ್ಟ ಬೋನಸ್ಸನ್ನು ಯಾವುದೇ ವೇತನದ ಮಿತಿಗೆ ಒಳಪಡಿಸದೆ ಎಲ್ಲ ನೌಕರರಿಗೂ ವಿಸ್ತರಿಸಿ ‘ಸಮಾನತೆ’ಯನ್ನು ಕಾಪಾಡಬೇಕಿತ್ತು.
ಅಲ್ಲದೆ, ನೌಕರವರ್ಗದ ನಡುವೆ ಅಸಮಾನತೆಯ ಬೇಲಿಯ ಅತೃಪ್ತಿ ಇಲ್ಲದಂಥ ಸುಧಾರಣೆಯನ್ನು ಈ ಸಂಹಿತೆ ಒಳಗೊಂಡಿರಬೇಕಿತ್ತು. ಆರೋಗ್ಯ ಮತ್ತು ಭವಿಷ್ಯನಿಧಿ ಎಂಬುದು ಎಲ್ಲ ದುಡಿಯುವ ವರ್ಗ ಮತ್ತು ಅವಲಂಬಿತ ಕುಟುಂಬಕ್ಕೆ ಅತ್ಯವಶ್ಯಕ. ಆದರೆ, ಸಾಮಾಜಿಕ ಭದ್ರತೆ ಸಂಹಿತೆಯಡಿ ಯಲ್ಲಿ ಬರುವ ನೌಕರರ ಭವಿಷ್ಯ ನಿಧಿ ಮತ್ತು ಆರೋಗ್ಯ ವಿಮೆ (ಇಪಿಎಫ್ ಮತ್ತು ಇಎಸ್‌ಐ) ಸೌಲಭ್ಯವನ್ನು ನಿಗದಿತ ವೇತನದ ಮಿತಿಯೊಳಗಿನ ನೌಕರರಿಗೆ ಮಾತ್ರ ವಿಸ್ತರಿಸಿ, ಉಳಿದ ನೌಕರರಿಗೆ ಈ ಹಿಂದೆ ಇದ್ದಂತೆಯೇ ಅಸಮಾನತೆಯನ್ನು ಮುಂದುವರಿಸಲಾಗಿದೆ.
ಇದರಿಂದಾಗಿ, ನಿಗದಿತ ವೇತನದ ವ್ಯಾಪ್ತಿ ಮೀರಿದ ನೌಕರರು ಮತ್ತು ಅವರ ಕುಟುಂಬಿಕರು, ಸೇವಾವಧಿ ಮತ್ತು ನಿವೃತ್ತಿಯ ನಂತರವೂ ನಿವೃತ್ತಿ ವೇತನ ಸೌಲಭ್ಯ ಮತ್ತು ಅಗತ್ಯ ವೈದ್ಯಕೀಯ ಸೌಲಭ್ಯದಿಂದ ವಂಚಿತರಾಗುತ್ತಾರೆ. ಸಂಹಿತೆಯಲ್ಲಿ ಈ ಅಸಮಾನತೆಯ ಸುಧಾರಣೆಯ ಬಗೆಗಿನ ಅಂಶವಿಲ್ಲ.
ಕೇವಲ ಒಂದೆರಡು ವರ್ಷದವರೆಗೆ ಶಾಸಕರು/ಸಂಸದರು ಆಗಿದ್ದವರಿಗೆ ಕನಿಷ್ಠ ಸೇವಾವಧಿ ಅಥವಾ ವಂತಿಕೆಯಿಲ್ಲದೆ ನಿವೃತ್ತಿ ವೇತನವನ್ನು ಜೀವನಪೂರ್ತಿ ನೀಡುವ ಮತ್ತು ಅವರ ಕುಟುಂಬ ವರ್ಗವೂ ಸೇರಿದಂತೆ ಮಿತಿರಹಿತ ವೈದ್ಯಕೀಯ ಸೌಲಭ್ಯ ಒದಗಿಸುವ, ಅದರ ವೆಚ್ಚವನ್ನು ಬೊಕ್ಕಸ ದಿಂದ ಭರಿಸುವ ಕ್ರಮಕ್ಕೆ ಮುಂದಾಗುತ್ತದೆ ಸರಕಾರ.
ಹೀಗಿರುವಾಗ, ಸಂಸ್ಥೆಗಾಗಿ ದುಡಿದ ಉದ್ಯೋಗಿಗಳಿಂದ ವಂತಿಕೆ ಪಡೆದಿದ್ದರೂ ಅವರಿಗೆ ಈ ಸೌಲಭ್ಯ ವನ್ನು ವಿಸ್ತರಿಸುವ ಬದ್ಧತೆ ಇರಬೇಕು ಎಂಬುದು ಸಂಹಿತೆಯ ರಚನೆಕಾರರ ಗಮನಕ್ಕೆ ಬಾರದಿರು ವುದು ಸ್ವೀಕಾರಾರ್ಹವಲ್ಲ. ನೌಕರರ ವೇತನ ಎಷ್ಟೇ ಇರಲಿ, ಭವಿಷ್ಯನಿಧಿ ಮತ್ತು ಆರೋಗ್ಯವನ್ನು ಅವರಿಗೆ ವಿಸ್ತರಿಸಿ ಸಮಾನತೆಯ ನ್ಯಾಯವನ್ನು ಮೆರೆಯಬೇಕಾದ ಅಗತ್ಯವಿತ್ತು.
ಔದ್ಯಮಿಕ ಬಾಂಧವ್ಯ ಸಂಹಿತೆಯಡಿ ಪ್ರಸಕ್ತ ಕೈಗಾರಿಕಾ ವಿವಾದ ಕಾಯ್ದೆಯನ್ನು ಸೇರಿಸಲಾಗಿದೆ. ಇದರಲ್ಲಿದ್ದ ‘ಪ್ರಾಧಿಕಾರ’ಗಳನ್ನು ಸರಳೀಕರಣ ಮಾಡಲಾಗಿದೆ. ಕೈಗಾರಿಕಾ ವಿವಾದಗಳ ಇತ್ಯರ್ಥ ಕ್ಕಾಗಿ ಒಂದು ಅಥವಾ ಎರಡು ‘ನ್ಯಾಯಮಂಡಳಿ’ ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದೆ. ಆದರೆ ಈ ನ್ಯಾಯಮಂಡಳಿಯ ಪೀಠದಲ್ಲಿ ಇಬ್ಬರು ಸದಸ್ಯರಿದ್ದು, ಅವರಲ್ಲೊಬ್ಬರು ನ್ಯಾಯಾಂಗ ಸದಸ್ಯ ರಾಗಿದ್ದರೆ, ಮತ್ತೊಬ್ಬರು ಆಡಳಿತ ಸದಸ್ಯರಾಗಿ ಸರಕಾರದ ನಿಗದಿತ ಉನ್ನತ ಹುದ್ದೆ ನಿರ್ವಹಿಸಿದ ಅಧಿಕಾರಿ ಯಾಗಿರುತ್ತಾರೆ.
ಏಕಸದಸ್ಯ ನ್ಯಾಯಮಂಡಳಿಯಲ್ಲಿ ಏಕಾಂಗಿಯಾಗಿ ನಿಗದಿತ ಕೈಗಾರಿಕಾ ವಿವಾದ ಗಳನ್ನು ಆಲಿಸಿ ತೀರ್ಪುಕೊಡಲು ಅವಕಾಶವಿದೆ; ಆದರೆ ದ್ವಿಸದಸ್ಯ ನ್ಯಾಯಪೀಠದಲ್ಲಿ ಸದಸ್ಯರ ನಡುವೆ ಒಮ್ಮತ ಮೂಡದಿದ್ದಲ್ಲಿ ಅಂತಿಮ ತೀರ್ಮಾನಕ್ಕಾಗಿ ಸರಕಾರಕ್ಕೆ ರವಾನಿಸಬೇಕಾಗುತ್ತದೆ (ದ್ವಿಸದಸ್ಯ ಪೀಠಕ್ಕೆ ‘ನ್ಯಾಯಾಂಗ’ ವಲಯದ ಸದಸ್ಯರು ಒಂದೊಮ್ಮೆ ಅಧ್ಯಕ್ಷರಾಗಿದ್ದರೂ, ಇಂಥ ಸಂದರ್ಭದಲ್ಲಿ ಅವರಿಗೆ ಪೂರ್ಣಾಧಿಕಾರವಿಲ್ಲ). ನ್ಯಾಯಾಡಳಿತದಲ್ಲಿ ಅಧಿಕಾರಿಶಾಹಿ ಸದಸ್ಯರ ಅತಿಕ್ರಮಣ ಒಳ್ಳೆಯ ಬೆಳವಣಿಗೆಯಲ್ಲ.
ಇದರಿಂದಾಗಿ ನ್ಯಾಯದಾನಕ್ಕೆ ಮತ್ತು ನ್ಯಾಯಾಂಗ ಸದಸ್ಯರ ಕಾರ್ಯಕ್ಕೆ ಧಕ್ಕೆ ಒದಗಿದಂತಾಗುತ್ತದೆ. ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳು ಪರಸ್ಪರರ ಕ್ಷೇತ್ರಗಳಲ್ಲಿ ಪ್ರವೇಶಿಸದೆ ಸ್ವತಂತ್ರ ವಾಗಿ ಕಾರ್ಯನಿರ್ವಹಿಸಬೇಕು ಎಂಬುದು ನಮ್ಮ ಸಂವಿಧಾನದ ಆಶಯವೂ ಹೌದು.
ಇತ್ತೀಚೆಗಂತೂ ಎಲ್ಲ ಕಾಯ್ದೆಗಳಲ್ಲಿಯೂ ಅಧಿಕಾರಿಶಾಹಿಗಳ ಅನವಶ್ಯಕ ಪ್ರವೇಶಕ್ಕೆ ಅವಕಾಶ ಕಲ್ಪಿಸುತ್ತಾ, ನಿವೃತ್ತಿಯಾಗುತ್ತಿರುವ ಅಥವಾ ನಿವೃತ್ತರಾದ ಅಧಿಕಾರಿಗಳಿಗೆ ‘ಪ್ರಭಾವಾನುಸಾರ ಪುನರ್ವಸತಿ’ಗೆ ದಾರಿಮಾಡಿಕೊಡುತ್ತಿರುವುದು ಸಾಮಾನ್ಯವಾಗಿದೆ.
ಆದ್ದರಿಂದ, ನ್ಯಾಯಮಂಡಳಿಯಲ್ಲಿ ಪರಸ್ಪರರ ಹಸ್ತಕ್ಷೇಪವಿಲ್ಲದಂತೆ ನೋಡಿಕೊಳ್ಳುವ, ನುರಿತ ನ್ಯಾಯಾಂಗ ಸದಸ್ಯರು ಮಾತ್ರವೇ ಅಲ್ಲಿರುವಂಥ ಕ್ರಮ ಕೈಗೊಳ್ಳುವ ಅಗತ್ಯವಿದೆ. ಗುತ್ತಿಗೆ ಕಾರ್ಮಿಕ ರ ಸೇವಾ ಸವಲತ್ತುಗಳ ಷರತ್ತುಗಳಿಗೆ ಸಂಬಂಧಿಸಿದಂತೆ, ಸಂಹಿತೆಯಲ್ಲಿ ಪ್ರಸಕ್ತ ಕಾಯ್ದೆಯ ವ್ಯಾಪ್ತಿ ಗೊಳಪಡಲು ನಿಗದಿಯಾಗಿದ್ದ ಕನಿಷ್ಠ ಕಾರ್ಮಿಕರ ಸಂಖ್ಯೆಯನ್ನು ೨೦ರಿಂದ ೫೦ಕ್ಕೆ ಏರಿಸಲಾಗಿದೆ.
ಅಲ್ಲದೆ, ಗುತ್ತಿಗೆದಾರರ ಸಂಸ್ಥೆಯಲ್ಲಿಯೇ ಕಾಯಂ ನೇಮಕವಾಗಿದ್ದು, ವಾರ್ಷಿಕ ವೇತನ ಮುಂಬಡ್ತಿ ಮತ್ತು ಸಾಮಾಜಿಕ ಭದ್ರತೆ ಕಲ್ಪಿಸಲಾದ ಕಾರ್ಮಿಕರನ್ನು ಯಾವುದೇ ಸಂಖ್ಯೆಯ ಮಿತಿಯಿಲ್ಲದೆ ಪೂರೈಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಇದು ಹೊಸ ಬದಲಾವಣೆ. ಇದು, ಗುತ್ತಿಗೆದಾರ ಮತ್ತು ಮಾಲೀಕರನ್ನು, ಗುತ್ತಿಗೆ ಕಾರ್ಮಿಕರ ಕಾಯ್ದೆಯ ಅನ್ವಯದ ಷರತ್ತಿನ ಕುಣಿಕೆಯಿಂದ ಹೊರಗೆ ಕಾರ್ಮಿಕರ ಶೋಷಣೆಗೆ ಹೊಸದಾರಿ ನಿರ್ಮಿಸಿ, ಹುದ್ದೆಗಳ ಪದನಾಮ ಬದಲಾಯಿಸಿ, ಕಡಿಮೆ ವೇತನಕ್ಕೆ ನಿಯೋಜನೆ ಮಾಡಿಕೊಳ್ಳುವ ಹೊಸಮಾರ್ಗಕ್ಕೆ ಕಾರಣವಾಗುತ್ತದೆ.
ವಾಣಿಜ್ಯೋದ್ಯಮಿಗಳು ಸಹಜವಾಗಿಯೇ ಇಂಥ ಅವಕಾಶವನ್ನು ಆಯ್ಕೆಮಾಡಿಕೊಳ್ಳುವುದರಿಂದ, ಗುತ್ತಿಗೆ ಕಾರ್ಮಿಕ ಪದ್ಧತಿಯಲ್ಲಿನ ಶೋಷಣೆಯ ಪರಿಪಾಠದ ಪೂರ್ಣವಿರಾಮ ಕಷ್ಟಸಾಧ್ಯ. ಆದ್ದರಿಂದ, ಭಾಗೀದಾರರು ಮತ್ತು ಕಾನೂನು ತಜ್ಞರು ಈ ಎಲ್ಲ ಅಂಶಗಳ ಬಗ್ಗೆ ಮತ್ತೊಮ್ಮೆ ಗಮನ ಹರಿಸಿ ಸೂಕ್ತ ಮಾರ್ಪಾಡುಗಳಿಗೆ ಆಗ್ರಹಿಸಿದಲ್ಲಿ, ಸಂಹಿತೆಯು ಅರ್ಥಪೂರ್ಣವಾಗುವುದಕ್ಕೆ ಅದು ಪೂರಕವಾಗುತ್ತದೆ.
(ಲೇಖಕರು ಹವ್ಯಾಸಿ ಬರಹಗಾರರು)