ಒಂದೊಳ್ಳೆ ಮಾತು
ಬಹಳ ಹಿಂದೆ ಒಬ್ಬ ಧರ್ಮಿಷ್ಠ ರಾಜನಿದ್ದನು. ಅವನ ಭಕ್ತಿಯನ್ನು ಪರೀಕ್ಷಿಸಿ, ಅವನಿಗೆ ಉತ್ತಮ ಗತಿ ಕಲ್ಪಿಸಲು ದೇವರ್ಷಿ ನಾರದರು ಅರಮನೆಗೆ ಆಗಮಿಸಿದರು. ರಾಜನು ಅವರನ್ನು ಅತ್ಯಂತ ಭಕ್ತಿ ಯಿಂದ ಸ್ವಾಗತಿಸಿ ಭೋಜನಕ್ಕೆ ಆಹ್ವಾನಿಸಿದಾಗ, ನಾರದರು ಒಂದು ಷರತ್ತು ಹಾಕಿದರು: “ರಾಜಾ, ಭೋಜನದ ನಂತರ ನನಗೆ ತೃಪ್ತಿಯಾಗುವವರೆಗೂ ನೀನು ತಾಂಬೂಲ ಮಡಚಿ ಕೊಡುತ್ತಿರಬೇಕು".
ರಾಜನು ಇದಕ್ಕೆ ಸಂತೋಷದಿಂದ ಒಪ್ಪಿದನು. ಊಟದ ನಂತರ ತಾಂಬೂಲ ಸೇವೆ ಆರಂಭ ವಾಯಿತು. ನಾರದರು ಶ್ರೀಹರಿಯ ನಾಮ ಸ್ಮರಿಸುತ್ತಾ ತಾಂಬೂಲ ಮೆಲ್ಲುತ್ತಿದ್ದರು, ರಾಜನು ಭಕ್ತಿಯಿಂದ ಮಡಚಿ ಕೊಡುತ್ತಿದ್ದನು. ಗಂಟೆಗಳು ಕಳೆದವು, ಹಗಲು ಹೋಗಿ ರಾತ್ರಿಯಾಯಿತು. ಬುಟ್ಟಿಗಟ್ಟಲೆ ವೀಳ್ಯದೆಲೆ ಖಾಲಿಯಾದರೂ ನಾರದರು ಸಾಕು ಎನ್ನಲಿಲ್ಲ.
ಸಮಯ ಕಳೆದಂತೆ ರಾಜನ ಭಕ್ತಿ ಮಾಯವಾಗಿ ಕಿರಿಕಿರಿ ಶುರುವಾಯಿತು. ಅಹಂಕಾರ ಮತ್ತು ಅಸಹನೆ ತಲೆಯೆತ್ತಿದವು. ‘ಇವರಿಗೆ ಸಾಕಾಗುವುದೇ ಇಲ್ಲವೇ?’ ಎಂದು ಮನದ ಶಪಿಸಿದನು.
ಇದನ್ನೂಓದಿ: Roopa Gururaj Column: ಪ್ರೀತಿಯ ಪಯಣ: 7 ಸಾವಿರ ಕಿಲೋ ಮೀಟರ್ ಸಾಹಸ
ಸಂಯಮ ಕಳೆದುಕೊಂಡ ರಾಜನು, ನಾರದರನ್ನು ಹೇಗಾದರೂ ಅಲ್ಲಿಂದ ಎಬ್ಬಿಸಲು ಒಂದು ಕುತಂತ್ರ ಹೂಡಿದನು. ತಾಂಬೂಲದ ನಡುವೆ ಬಟಾಣಿ ಗಾತ್ರದ ಒಂದು ಚಿಕ್ಕ ಸಗಣಿಯ ಉಂಡೆ ಅಡಗಿಸಿ ನಾರದರಿಗೆ ನೀಡಿದನು. ಆ ತಾಂಬೂಲ ಬಾಯಿಗೆ ಹೋಗುತ್ತಿದ್ದಂತೆಯೇ ನಾರದರು, “ಸಾಕಪ್ಪಾ ರಾಜಾ, ತೃಪ್ತಿಯಾಯಿತು!" ಎಂದು ಹರಸಿ ಅಲ್ಲಿಂದ ಹೊರಟುಹೋದರು. ತನ್ನ ಉಪಾಯ ಫಲಿಸಿದ್ದಕ್ಕೆ ರಾಜ ಸಂಭ್ರಮಿಸಿದನು. ಆದರೆ ಮರುದಿನ ರಾಜ್ಯದ ಗಡಿಯಲ್ಲಿ ಬೆಟ್ಟದಷ್ಟು ದೊಡ್ಡ ಸಗಣಿಯ ರಾಶಿ ಪ್ರತ್ಯಕ್ಷವಾಯಿತು!
ಅದು ಎಲ್ಲಿಂದ ಬಂತು ಎಂದು ಯಾರಿಗೂ ತಿಳಿಯಲಿಲ್ಲ. ರಾಜನಿಗೆ ಅದು ತನ್ನ ಅಪಚಾರದ ಫಲವೆಂದು ಅರ್ಥವಾಯಿತು. ಪಶ್ಚಾತ್ತಾಪದಿಂದ ನಾರದರನ್ನು ಪ್ರಾರ್ಥಿಸಿದಾಗ, ಅವರು ಪ್ರತ್ಯಕ್ಷ ರಾಗಿ, “ರಾಜಾ, ನೀನು ಭಕ್ತರಿಗೆ ಮಾಡಿದ ಮೋಸವು ಬೆಟ್ಟದಷ್ಟು ಪಾಪವಾಗಿ ಬೆಳೆದಿದೆ. ಈ ಸಗಣಿಯ ಬೆಟ್ಟವನ್ನು ನೀನೇ ತಿಂದು ಮುಗಿಸಬೇಕು, ಇಲ್ಲದಿದ್ದರೆ ಮುಂದಿನ ಜನ್ಮದಲ್ಲಿ ಸಗಣಿ ಹುಳವಾಗಿ ಹುಟ್ಟಿ ಇದನ್ನು ತೀರಿಸಬೇಕು" ಎಂದರು.
ರಾಜನು ಗಾಬರಿಗೊಂಡು ಕ್ಷಮೆ ಯಾಚಿಸಿದಾಗ, ನಾರದರು ಒಂದು ಉಪಾಯ ತಿಳಿಸಿದರು: “ನೀನು ಪ್ರತಿದಿನ ಸಂಜೆ ನಿನ್ನ ಮಗಳೊಂದಿಗೆ ರಥದಲ್ಲಿ ಕುಳಿತು ಜನರು ನೋಡುವಂತೆ ಕಾಡಿಗೆ ಹೋಗಿ, ತಡರಾತ್ರಿ ಅರಮನೆಗೆ ಮರಳು. ಯಾರಿಗೂ ಇದರ ಕಾರಣ ಹೇಳಬೇಡ".
ರಾಜನು ಹಾಗೆಯೇ ಮಾಡಿದನು. ಇದನ್ನು ನೋಡಿದ ಜನರು ರಾಜನ ಬಗ್ಗೆ ಕೆಟ್ಟದಾಗಿ ಮಾತನಾಡ ತೊಡಗಿದರು. “ರಾಜನಿಗೆ ಬುದ್ಧಿ ಕೆಟ್ಟಿದೆ, ಮಗಳನ್ನು ಕರೆದುಕೊಂಡು ಅಡ್ಡಾದಿಡ್ಡಿ ಅಲೆಯು ತ್ತಿದ್ದಾನೆ" ಎಂದು ಊರೆಲ್ಲಾ ಅಪಪ್ರಚಾರ ಮಾಡಿದರು. ದಿನಗಳು ಕಳೆದಂತೆ ಜನರು ರಾಜನ ಈ ನಡವಳಿಕೆಯನ್ನು ಚರ್ಚಿಸುತ್ತಾ, ಅವನನ್ನು ಅತೀವವಾಗಿ ದೂಷಿಸಿದರು.
ಒಂದು ತಿಂಗಳ ನಂತರ ರಾಜನು ಸಗಣಿ ಬೆಟ್ಟದ ಬಳಿ ಹೋಗಿ ನೋಡಿದಾಗ, ಆಶ್ಚರ್ಯ! ಆ ದೊಡ್ಡ ಬೆಟ್ಟವೆ ಕರಗಿ ಒಂದು ಲಿಂಬೆ ಹಣ್ಣಿನ ಗಾತ್ರದ ಸಗಣಿ ಉಂಡೆ ಮಾತ್ರ ಉಳಿದಿತ್ತು. ನಾರದರು ಬಂದು ವಿವರಿಸಿದರು: “ರಾಜಾ, ನಿನ್ನ ಬಗ್ಗೆ ಜನರು ಆಡಿಕೊಂಡ ಕೆಟ್ಟ ಮಾತುಗಳ ಮೂಲಕ ನಿನ್ನ ಪಾಪದ ಬೆಟ್ಟವನ್ನು ಅವರೇ ಹಂಚಿಕೊಂಡರು. ಆದರೆ ಈ ಉಳಿದಿರುವ ಸಣ್ಣ ಉಂಡೆಯು ನೀನು ಉದ್ದೇಶಪೂರ್ವಕವಾಗಿ ಮಾಡಿದ ದ್ರೋಹದ ಫಲ. ಇದನ್ನು ನೀನು ಅನುಭವಿಸಲೇಬೇಕು". ರಾಜನು ತನ್ನ ತಪ್ಪನ್ನು ಪೂರ್ಣವಾಗಿ ಒಪ್ಪಿಕೊಂಡು, ಮುಂದಿನ ಜನ್ಮದ ಸಂಕೋಲೆಗಿಂತ ಈ ಜನ್ಮದ ಪ್ರಾಯಶ್ಚಿತ್ತವೇ ಲೇಸೆಂದು ಭಾವಿಸಿ, ಆ ಸಗಣಿ ಉಂಡೆಯನ್ನು ಪ್ರಸಾದದಂತೆ ಸೇವಿಸಿದನು.
ಮಾಡಿದವರ ಪಾಪ ಆಡಿಕೊಳ್ಳುವವರಿಗೆ ಎಂದು ಅದಕ್ಕೇ ದೊಡ್ಡವರು ಹೇಳುವುದು. ದೇವರಿಗೆ ಅಥವಾ ಸಜ್ಜನರಿಗೆ ಮಾಡುವ ದ್ರೋಹವು ಬೆಟ್ಟದಷ್ಟು ಬೆಳೆಯುತ್ತದೆ. ಅಸಹನೆ ಮತ್ತು ಅಹಂಕಾರ ವು ಭಕ್ತಿಯನ್ನು ನಾಶಪಡಿಸುತ್ತದೆ. ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಬೇರೆಯವರ ತಪ್ಪುಗಳನ್ನ ಪಟ್ಟಿ ಮಾಡುತ್ತಾ ಕೂತರೆ, ಅವರ ಕರ್ಮಫಲದ ಭಾಗವನ್ನು ನಾವು ಕೂಡ ಅನುಭವಿಸ ಬೇಕಾಗುತ್ತದೆ.
ಅಲ್ಲದೆ ಸಜ್ಜನರಿಗೆ ಮಾಡಿದ ಮೋಸ ನೂರು ಪಟ್ಟಾಗಿ ನಮಗೆ ವಾಪಸ್ ಬರುವುದರಲ್ಲಿ ಸಂದೇಹವೇ ಇಲ್ಲ. ಇದು ಕಲಿಯುಗ, ರೊಟ್ಟಿ ತಿರುಗಿ ಹಾಕಿದಂತೆ ಮಾಡಿದ ಪ್ರತಿ ಕೆಲಸಕ್ಕೂ ಪ್ರತಿಫಲವನ್ನು ಅಲ್ಲ ಅನುಭವಿಸಲೇಬೇಕು.