ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Roopa Gururaj Column: ಪ್ರೀತಿಯ ಪಯಣ: 7 ಸಾವಿರ ಕಿಲೋ ಮೀಟರ್‌ ಸಾಹಸ

ನಾನು ನನ್ನ ಸ್ವಂತ ಶಕ್ತಿಯ ಮೇಲೆ ನಿನ್ನ ಬಳಿಗೆ ಬರುತ್ತೇನೆ, ನಿರೀಕ್ಷಿಸು’ ಎಂದು ಭಾಷೆ ನೀಡಿದರು. 1978ರ ಆರಂಭದಲ್ಲಿ, ಪಿಕೆ ತಮ್ಮ ಜೀವನದ ಅತ್ಯಂತ ಸಾಹಸಮಯ ನಿರ್ಧಾರ ಕೈಗೊಂಡರು. ಒಂದು ಸಣ್ಣ ಬ್ಯಾಗ್ ಮತ್ತು ಒಂದು ಹಳೆಯ ಸೈಕಲ್ ಹಿಡಿದು ಅವರು ಸ್ವೀಡನ್ ಕಡೆಗೆ ಪ್ರಯಾಣ ಬೆಳೆಸಿದರು. ಅವರ ಬಳಿ ಹಣವಿರಲಿಲ್ಲ, ಕೇವಲ ಪ್ರೀತಿಸಿದ ಜೀವ ಷಾರ್ಲೆಟ್ ವಿಳಾಸವಿತ್ತು

ಪ್ರೀತಿಯ ಪಯಣ: 7 ಸಾವಿರ ಕಿಲೋ ಮೀಟರ್‌ ಸಾಹಸ

-

ಒಂದೊಳ್ಳೆ ಮಾತು

1975ರ ಬೇಸಿಗೆಯ ಒಂದು ದಿನ, ದೆಹಲಿಯ ಜನನಿಬಿಢ ರಸ್ತೆಯ ಬದಿಯಲ್ಲಿ ಯುವ ಕಲಾವಿದ ಪ್ರದ್ಯುಮ್ನ ಕುಮಾರ್ (ಪಿಕೆ) ಕುಳಿತು ಅಪರಿಚಿತರ ಚಿತ್ರಗಳನ್ನು ಬಿಡಿಸುತ್ತಿದ್ದರು. ಅವರ ಕೈಗಳು ಇದ್ದಿಲಿನಿಂದ ಕಪ್ಪಾಗಿದ್ದರೂ, ಅವರ ಕುಂಚದಿಂದ ಮೂಡಿಬರುತ್ತಿದ್ದ ರೇಖೆಗಳು ಜನರ ಆತ್ಮವನ್ನೇ ಹಿಡಿದಿಡುವಂತಿದ್ದವು.

ಭಾರತದ ತೀರಾ ಕೆಳವರ್ಗದಲ್ಲಿ ಜನಿಸಿದ್ದ ಪಿಕೆ ಅವರಿಗೆ ಸಮಾಜವು ಅನೇಕ ಬಾರಿ ಅವಮಾನ ಮಾಡಿತ್ತು, ಆದರೆ ಅವರ ಕಲೆಯು ಅವರಿಗೆ ಗೌರವ ಮತ್ತು ಧ್ವನಿಯನ್ನು ನೀಡಿತ್ತು. ಅದೇ ದಿನ, ಸ್ವೀಡನ್ ದೇಶದ ಶ್ರೀಮಂತ ಮನೆತನಕ್ಕೆ ಸೇರಿದ ಷಾರ್ಲೆಟ್ ಎಂಬ ಯುವತಿ ಅವರ ಮುಂದೆ ಬಂದು ನಿಂತಳು.

ಅವಳ ಬಂಗಾರದ ಬಣ್ಣದ ಕೂದಲು ಮತ್ತು ಹೊಳೆಯುವ ಕಣ್ಣುಗಳು ಪಿಕೆಯನ್ನು ಸೆಳೆದವು. ಪಿಕೆ ಅವಳ ಚಿತ್ರವನ್ನು ಬಿಡಿಸಿದಾಗ, ಅವರಿಬ್ಬರ ನಡುವೆ ಮಾತಿಗೂ ಮೀರಿದ ಒಂದು ಅದೃಶ್ಯ ಸಂಬಂಧ ಏರ್ಪಟ್ಟಿತು. ಕೆಲವೇ ವಾರಗಳಲ್ಲಿ ಅವರ ಸ್ನೇಹ ಪ್ರೀತಿಯಾಗಿ ಅರಳಿ, ದೆಹಲಿಯ ಆಕಾಶದ ಕೆಳಗೆ ಸಂಪ್ರದಾಯಬದ್ಧವಾಗಿ ಮದುವೆಯಾದರು.

ಇದನ್ನೂ ಓದಿ: Roopa Gururaj Column: ದೇವರನ್ನು ಕಾಣಲು ಅಂತರಂಗ ಶುದ್ಧವಾಗಿರಬೇಕು

ಆದರೆ ವಿಧಿ ಅವರನ್ನು ಪರೀಕ್ಷಿಸಿತು. ಷಾರ್ಲೆಟ್ ಸ್ವೀಡನ್‌ಗೆ ಹಿಂತಿರುಗುವ ಸಮಯ ಬಂದಿತು. ಅವಳು ಪಿಕೆಯನ್ನು ತನ್ನೊಂದಿಗೆ ಬರಲು ಕರೆದಳು, ಅಷ್ಟೇ ಅಲ್ಲ ವಿಮಾನದ ಟಿಕೆಟ್ ಕೊಡಿಸುವು ದಾಗಿ ಕೂಡ ಹೇಳಿದಳು. ಆದರೆ ಸ್ವಾಭಿಮಾನಿ ಪಿಕೆ ಅದನ್ನು ನಿರಾಕರಿಸಿದರು.

‘ನಾನು ನನ್ನ ಸ್ವಂತ ಶಕ್ತಿಯ ಮೇಲೆ ನಿನ್ನ ಬಳಿಗೆ ಬರುತ್ತೇನೆ, ನಿರೀಕ್ಷಿಸು’ ಎಂದು ಭಾಷೆ ನೀಡಿದರು. 1978ರ ಆರಂಭದಲ್ಲಿ, ಪಿಕೆ ತಮ್ಮ ಜೀವನದ ಅತ್ಯಂತ ಸಾಹಸಮಯ ನಿರ್ಧಾರ ಕೈಗೊಂಡರು. ಒಂದು ಸಣ್ಣ ಬ್ಯಾಗ್ ಮತ್ತು ಒಂದು ಹಳೆಯ ಸೈಕಲ್ ಹಿಡಿದು ಅವರು ಸ್ವೀಡನ್ ಕಡೆಗೆ ಪ್ರಯಾಣ ಬೆಳೆಸಿದರು. ಅವರ ಬಳಿ ಹಣವಿರಲಿಲ್ಲ, ಕೇವಲ ಪ್ರೀತಿಸಿದ ಜೀವ ಷಾರ್ಲೆಟ್ ವಿಳಾಸವಿತ್ತು.

ಪಾಕಿಸ್ತಾನ, ಅಫ್ಘಾನಿಸ್ತಾನ, ಇರಾನ್, ಟರ್ಕಿ, ಯುಗೊಸ್ಲಾವಿಯಾ, ಜರ್ಮನಿ ಮತ್ತು ಡೆನ್ಮಾರ್ಕ್ ದೇಶಗಳ ಮೂಲಕ ಅವರು ಸೈಕಲ್ ತುಳಿಯುತ್ತಾ ಸಾಗಿದರು. ಹಾದಿಯಲ್ಲಿ ಸಿಕ್ಕವರ ಚಿತ್ರ ಬಿಡಿಸಿ ಬಂದ ಅಲ್ಪ ಹಣದಲ್ಲಿ ಊಟ ಮಾಡುತ್ತಾ, ಕಾಲ್ನಡಿಗೆ ಮತ್ತು ಸೈಕಲ್ ಮೂಲಕವೇ ತಿಂಗಳುಗಟ್ಟಲೆ ಸಾಗಿದರು.

ನಾಲ್ಕು ತಿಂಗಳ ಕಠಿಣ ಪರಿಶ್ರಮ ಮತ್ತು 7000 ಕಿಲೋಮೀಟರ್‌ಗಳಿಗೂ ಹೆಚ್ಚು ದೂರದ ಪ್ರಯಾ ಣದ ನಂತರ, ಪಿಕೆ ಸ್ವೀಡನ್‌ನಲ್ಲಿರುವ ಷಾರ್ಲೆಟ್ ಮನೆಯಂಗಳ ತಲುಪಿದರು. ಸುಸ್ತಾಗಿದ್ದರೂ ಅವರ ಕಣ್ಣಲ್ಲಿ ಗೆಲುವಿನ ನಗೆಯಿತ್ತು. ಷಾರ್ಲೆಟ್ ಬಾಗಿಲು ತೆರೆದಾಗ ಇಬ್ಬರ ಕಂಗಳಲ್ಲೂ ಆನಂದ ಭಾಷ್ಪ. ನಂತರ ಅವರು ಅಲ್ಲಿಯೇ ನೆಲೆಸಿ, ಸುಂದರ ಸಂಸಾರವನ್ನು ಕಟ್ಟಿಕೊಂಡರು.

ಪಿಕೆ ಸ್ವೀಡನ್‌ನಲ್ಲಿ ಹೆಸರಾಂತ ಕಲಾವಿದರಾಗಿ ಗುರುತಿಸಿಕೊಂಡರು. ಜಾತಿ, ವರ್ಗ ಮತ್ತು ದೇಶದ ಗಡಿಗಳನ್ನು ಮೀರಿದ ಈ ನಿಜವಾದ ಘಟನೆಯು ಮನಸ್ಸಿದ್ದರೆ ಮಾರ್ಗ, ಅಲ್ಲದೆ ನಿಜವಾದ ಪ್ರೀತಿ ಅಸಾಧ್ಯವಾದುದನ್ನೂ ಸಾಧಿಸಬಲ್ಲದು ಎಂಬುದಕ್ಕೆ ಎಂತಹವರಿಗೂ ಪ್ರೇರಣೆ.

ಇಂದಿನ ದಿನಗಳಲ್ಲಿ ವಿದ್ಯಾವಂತರಾಗಿ, ಒಳ್ಳೆಯ ಉದ್ಯೋಗದಲ್ಲಿದ್ದರೂ ಕೂಡ ಮದುವೆಯಾಗು ವಾಗ ನೂರೊಂದು ಗೊಂದಲಗಳು ಕಾಡುತ್ತವೆ. ಬರುವ ಸಂಬಳ ಸಾಕಾಗುತ್ತದೆಯೇ? ಇರುವ ಆಸ್ತಿ ಎಲ್ಲಾ ನಮಗೇ ಸೇರುತ್ತದೆಯೇ? ತಂದೆ-ತಾಯಿ ಜತೆಗಿದ್ದರೆ ಅನಾನುಕೂಲವಲ್ಲವೇ? ಹೀಗೆ ಸಿಕ್ಕಾ ಪಟ್ಟೆ ಲೆಕ್ಕಾಚಾರಗಳಲ್ಲಿ ಭಾವನಾತ್ಮಕ ಸಂಬಂಧಗಳಲ್ಲಿ ಇರಬೇಕಾದ ಪವಿತ್ರ್ಯತೆ, ಹೊಂದಿ ಕೊಂಡು ಹೋಗುವ ಸೌಜನ್ಯ, ಜೊತೆಯಾಗಿ ಬಂದದ್ದನ್ನು ಸ್ವೀಕರಿಸಿ ಬದುಕನ್ನು ಕಟ್ಟಿಕೊಳ್ಳುವ ಆತ್ಮಬಲ ಅನೇಕ ಬಾರಿ ಗಂಡು-ಹೆಣ್ಣು ಇಬ್ಬರಲ್ಲೂ ಮರೆಯಾಗುತ್ತಿದೆ.

ಮದುವೆಯಾಗಲು ಮೊದಲು ಇಬ್ಬರ ನಡುವೆ ಸ್ನೇಹ, ಪ್ರೀತಿ ಇರಬೇಕು, ಒಳ್ಳೆಯ ಗುಣ, ಕುಟುಂಬದ ಹಿನ್ನೆಲೆ ಇದ್ದಾಗ ಮಿಕ್ಕಿದ್ದೆಲ್ಲವನ್ನೂ ಕೂಡ ಕಾಲಕ್ಕೆ ತಕ್ಕಂತೆ ಹೊಂದಿಸಿಕೊಳ್ಳುತ್ತಾ ಹೋಗಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಏನೇ ಬಂದರೂ ಜೊತೆಯಾಗಿ ಅದನ್ನು ಸರಿಪಡಿಸಿಕೊಂಡು ಬದುಕುತ್ತೇವೆ ಎನ್ನುವ ಮಾಗಿದ ಮನಸ್ಥಿತಿ ಇಬ್ಬರಿಗೂ ಇರುವುದು ಬಹಳ ಮುಖ್ಯ. ಆಗ ಮಾತ್ರ ಜೀವನದುದ್ಧಕ್ಕೂ ಅನುರೂಪದ ಬಾಳಸಂಗಾತಿಗಳಾಗಿ ಜತೆಯಾಗಿರಬಹುದು.