ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Ravi Hunj Column: ಸಂಸೃತಿ ಸಮ್ಮಿಲನ ಮತ್ತು ಸಮಯಭೇದದ ಸುತ್ತಮುತ್ತ ಒಂದು ಇಣುಕುನೋಟ

ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳಲ್ಲಿ ಯವನರ ಕುರಿತಾದ ಉಲ್ಲೇಖ ವಿದೆ. ಅಂದು ಗ್ರೀಕರನ್ನು ಯವನರು ಎನ್ನುತ್ತಿದ್ದರು. ಹಾಗಾಗಿ ಗ್ರೀಕರು ಇವೆರಡೂ ಗ್ರಂಥರಚನೆಗೂ ಮುನ್ನವೇ ಭಾರತದಲ್ಲಿ ನೆಲೆ ನಿಂತಿದ್ದ ವಿದೇಶಿ ವಲಸೆಗಾರರು ಎನ್ನಬಹುದು. ಸದ್ಯಕ್ಕೆ ಈ ಗ್ರಂಥಗಳ ಕಾಲವನ್ನು ಚರ್ಚಿಸದೆ ಗ್ರೀಕರ ಬಗ್ಗೆ ಗಮನ ಹರಿಸೋಣ. ಏಕೆಂದರೆ ಗ್ರೀಕರಿಲ್ಲದೆ ಭಾರತವಿಲ್ಲ ಎಂಬುದು ಪ್ರಮಾಣೀ ಕೃತ ಸಂಗತಿ!

ಸಂಸೃತಿ ಸಮ್ಮಿಲನ ಮತ್ತು ಸಮಯಭೇದದ ಸುತ್ತಮುತ್ತ ಒಂದು ಇಣುಕುನೋಟ

Profile Ashok Nayak Feb 17, 2025 9:13 AM

ಬಸವ ಮಂಟಪ

ರವಿ ಹಂಜ್‌

(ಭಾಗ-೧)

ಎಡಪಂಥವು ಆರ್ಯರನ್ನು ‘ಮಧ್ಯ ಏಷ್ಯಾದಿಂದ ಬಂದ ವಲಸಿಗರು’ ಎಂದರೆ ಬಲಪಂಥವು ‘ಅವರು ಇಲ್ಲಿಂದಲೇ ಅಲ್ಲಿಗೆ ಹೋಗಿ ತಿರುಗಿ ಬಂದವರು’ ಎನ್ನುತ್ತದೆ. ಈ ಎಲ್ಲಿಂದಲೋ ಬಂದವರು ಮತ್ತು ತಿರುಗಿ ಬಂದವರು ತಾವು ಬರುವಾಗ ಅಲ್ಲಿನ ಸಂಸ್ಕೃತಿಯನ್ನು ತಂದರು ಮತ್ತದನ್ನು ಸೌಹಾ ರ್ದಯುತವಾಗಿ ನೆಲಮೂಲಿಗರೊಂದಿಗೆ ಒಡಗೂಡಿ ಸಂಯೋಜಿಸಿದರು. ಹೀಗೆ ಬಂದವರು ಈಜಿಪ್ಟಿ ನವರು ಎಂದು ಕೆಲವರು ವಾದಿಸಿದರೆ, ಮತ್ತೆ ಕೆಲವರು ಯುರೋಪಿನಿಂದ ಬಂದವರು ಎನ್ನುತ್ತಾರೆ. ಈ ಎರಡೂ ಮಧ್ಯ ಏಷ್ಯಾ ಅಲ್ಲ ಎಂಬುದು ಗಮನಾರ್ಹ. ಹಾಗಾಗಿ ಮಧ್ಯ ಏಷ್ಯಾ ದಿಂದ ಬಂದ ವರು ಇಲ್ಲಿನ ಅಗ್ನಿ ಆರಾಧಕರಾಗಿದ್ದ ಪಾರ್ಶ್ವ, ಪಾರ್ಥೇನಿಯನ್ನರಾಗಿ ಬಲಪಂಥ ದವರು ಹೇಳುವಂತೆ ಹೊರಹೋಗಿ ತಿರುಗಿ ಬಂದವರು ಎಂಬುದು ಗಮನಾರ್ಹ.

ಅಂದರೆ ಬೇರೆ ಯಾವ ಪ್ರದೇಶದಿಂದಲೂ ವಲಸಿಗರು ಭಾರತಕ್ಕೆ ಬರಲಿಲ್ಲವೇ? ಬಂದಿದ್ದರೆ ಅವರು ಯಾರು? ವೋಲ್ಗಾ ತೀರದಿಂದ ಗಂಗಾ ತೀರಕ್ಕೆ ವಲಸೆ ಬಂದ ರಷ್ಯಾ ಮೂಲದ ಬಿಳಿಯರೇ ಆರ್ಯರು ಎಂಬ ಕಮ್ಯುನಿಸ್ಟರ ಥಿಯರಿ ಇದ್ದರೂ ಅದರ ಬಗ್ಗೆ ನಂಬಲರ್ಹ ಮಾಹಿತಿಯ ಕೊರತೆ ಇದೆ. ಅದನ್ನು ಭಾರತೀಯ ಕಮ್ಯುನಿಸ್ಟರೇ ಪರಿಗಣಿಸುತ್ತಿಲ್ಲ.

ಇದನ್ನೂ ಓದಿ: Ravi Hunz Column: ಧರ್ಮೋದಯ ಮತ್ತು ಜಗತ್ತಿನ ಪ್ರಪ್ರಥಮ ಸಂಪತ್ತು !

ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳಲ್ಲಿ ಯವನರ ಕುರಿತಾದ ಉಲ್ಲೇಖ ವಿದೆ. ಅಂದು ಗ್ರೀಕರನ್ನು ಯವನರು ಎನ್ನುತ್ತಿದ್ದರು. ಹಾಗಾಗಿ ಗ್ರೀಕರು ಇವೆರಡೂ ಗ್ರಂಥರಚನೆಗೂ ಮುನ್ನವೇ ಭಾರತದಲ್ಲಿ ನೆಲೆ ನಿಂತಿದ್ದ ವಿದೇಶಿ ವಲಸೆಗಾರರು ಎನ್ನಬಹುದು. ಸದ್ಯಕ್ಕೆ ಈ ಗ್ರಂಥಗಳ ಕಾಲವನ್ನು ಚರ್ಚಿಸದೆ ಗ್ರೀಕರ ಬಗ್ಗೆ ಗಮನ ಹರಿಸೋಣ. ಏಕೆಂದರೆ ಗ್ರೀಕರಿಲ್ಲದೆ ಭಾರತವಿಲ್ಲ ಎಂಬುದು ಪ್ರಮಾಣೀಕೃತ ಸಂಗತಿ!

ಅಲೆಗ್ಸಾಂಡರನಿಗಿಂತ ಮುಂಚೆಯೇ ಸಾಕಷ್ಟು ಗ್ರೀಕರು ಭಾರತಕ್ಕೆ ವಲಸೆ ಬಂದಿದ್ದರೆನ್ನಲಾಗಿದೆ. ಆ ರೀತಿ ವಲಸೆ ಬಂದ ಗ್ರೀಕರು ತಮ್ಮೊಂದಿಗೆ ತಮ್ಮ ಸಂಸ್ಕೃತಿಯ ದೇವಾನುದೇವತೆಗಳನ್ನು ತಂದಿ ದ್ದರು. ಅವರ ಆಲೋಚನೆಯ ದೇವರುಗಳನ್ನು ಹಿಂದೂಗಳು ತಮ್ಮ ಆರಾಧನೆಗಳೊಂದಿಗೆ ಸಂಯೋಜಿಸಿಕೊಳ್ಳುತ್ತಾ ಹಿಂದೂ ದೇವಲೋಕ ಸೃಷ್ಟಿಸಿಕೊಂಡರೆನ್ನಲಾಗುತ್ತದೆ.

ಇದಕ್ಕೆ ಪೂರಕವಾಗಿ ಗ್ರೀಕರ ಜಿಯಸ್ ಮತ್ತು ಋಗ್ವೇದದ ಇಂದ್ರರಲ್ಲಿ ಸಾಕಷ್ಟು ಸಾಮ್ಯಗಳಿವೆ. ಜಿಯಸ್ಸನ ಆಯುಧ ಸಿಡಿಲಾಕೃತಿಯಲ್ಲಿದ್ದರೆ, ಅದೇ ಆಕಾರದ ವಜ್ರಾಯುಧ ಇಂದ್ರನ ಆಯುಧ ವಾಗಿತ್ತು. ಜಿಯಸ್ ಒಲಿಂಪಸ್ ಪರ್ವತದಲ್ಲಿದ್ದರೆ, ಇಂದ್ರ ಮೇರು ಪರ್ವತದಲ್ಲಿದ್ದ. ಜಿಯಸ್ ಮತ್ತು ಇಂದ್ರರಿಬ್ಬರೂ ಹವಾಮಾನಗಳ ದೇವತೆಗಳೆನಿಸಿದ್ದರು ಅಥವಾ ಹವಾಮಾನಗಳ ಮೇಲೆ ಹಿಡಿತ ಹೊಂದಿದ್ದರು.

ಅದೇ ರೀತಿ ಗ್ರೀಕ್ ಹೀರಾ ಗೃಹ ಮತ್ತು ಸಂಪತ್ತಿನ ದೇವತೆಯಾಗಿದ್ದರೆ, ಹಿಂದೂಗಳ ಲಕ್ಷ್ಮಿ ಐಶ್ವರ್ಯ ದ ದೇವತೆಯಾಗಿದ್ದಳು. ಗೃಹ ಖಾತೆ ದೊಡ್ಡದೆನಿಸಿ ಪಾರ್ವತಿಯನ್ನು ಸೃಷ್ಟಿಸಿದರು. ಅಲ್ಲಿ ಅಥಿನಾ ವಿದ್ಯಾಬುದ್ಧಿಯ ದೇವತೆಯಾದರೆ, ನಮ್ಮಲ್ಲಿ ಸರಸ್ವತಿ ಅದೇ ವಿದ್ಯಾಬುದ್ಧಿಯ ದೇವತೆಯಾದಳು. ಹೇಡಸ್ ಯಮನಾಗಿ, ಪೊಸೈಡನ್ ವರುಣನಾಗಿ, ಹೆಪೋಯಿಸ್ಟಸ್ ವಿಶ್ವಕರ್ಮನಾಗಿ, ಅಪೋಲೊ ಆದಿತ್ಯನಾಗಿ, ಪ್ರೇಮಬಾಣ ಬಿಡುವ ಕ್ಯೂಪಿಡ್ ಕಾಮದೇವನಾದನು.

ಹೀಗೆ ಗ್ರೀಕ್-ಹಿಂದೂ ದೇವತೆಗಳಲ್ಲಿ ಸಾಮ್ಯತೆಯಿದೆ. ಈ ದೇವತೆಗಳು ಕರ್ತವ್ಯದಲ್ಲಷ್ಟೇ ಅಲ್ಲದೆ ತಮ್ಮ ಆಯುಧ, ವಾಹನಗಳಲ್ಲಿ ಕೂಡಾ ಸಾಕಷ್ಟು ಸಾಮ್ಯತೆಯನ್ನು ಹೊಂದಿವೆ. ಹಿಂದೂ-ಗ್ರೀಕ್ ಸಂಸ್ಕೃತಿಯ ಸಮ್ಮಿಲನಕ್ಕೆ ಭಾರತದಾದ್ಯಂತ ಸಾಕ್ಷಿ ಪುರಾವೆಗಳಿವೆ. ಇತಿಹಾಸಜ್ಞರಾದ ಎಚ್.ಜಿ. ರಾಲಿನ್ಸನ್, ಗ್ರೀಕ್ ಪೈಥಾಗರಸ್ ಅನುಯಾಯಿಗಳ ಗಣಿತಸೂತ್ರ, ತತ್ವeನ, ಆಚರಣೆಗಳು ಬಹು ಪಾಲು ಕ್ರಿಸ್ತಪೂರ್ವ 6ನೇ ಶತಮಾನದ ಭಾರತದಲ್ಲಿದ್ದವುಗಳೇ ಆಗಿದ್ದವೆಂದು ಅಭಿಪ್ರಾಯ ಪಟ್ಟಿದ್ದಾರೆ.

ಅದಲ್ಲದೇ 11ನೇ ಶತಮಾನದ ಪರ್ಷಿಯನ್ ಯಾತ್ರಿಕ ‘ಅಲ್ ಬರೂನಿ’ ಭಾರತ, ಗ್ರೀಕ್ ಮತ್ತು ರೋಮನ್ನರ ಖಗೋಳ ಶಾಸ್ತ್ರಗಳಲ್ಲಿನ ಸಾಮ್ಯತೆಯ ಕುರಿತು ಭಾರತದ ಬಗೆಗಿನ ತನ್ನ ಪುಸ್ತಕದಲ್ಲಿ ಸವಿವರವಾಗಿ ಬರೆದಿದ್ದಾನೆ. ಗ್ರೀಕ್ ಮತ್ತು ಸಂಸ್ಕೃತಗಳೆರಡರಲ್ಲಿಯೂ ಪ್ರಾವೀಣ್ಯವನ್ನು ಹೊಂದಿ ದ್ದ ಈತ ಗ್ರೀಕ್ ಮತ್ತು ಭಾರತೀಯ ಸಂಸ್ಕೃತಿಗಳ ಸಾಮ್ಯತೆಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾನೆ. ತಮಿಳು ಸಂಗಮ ಸಾಹಿತ್ಯದಲ್ಲಿ ಕೂಡಾ ಯವನರ ಮದ್ಯ, ಸಂಗೀತದ ವರ್ಣನೆ ಇದೆ.

ಪ್ರಪ್ರಥಮ ಗರುಡಗಂಬ ಎನ್ನಲಾದ ಹೆಲಿಯೋಧರಸ್ ಸ್ಥಂಭದ ಮೇಲೆ ಬ್ರಾಹ್ಮಿ ಲಿಪಿಯ ಪ್ರಾಕೃತ ಭಾಷೆಯಲ್ಲಿ ದೇವರ ದೇವ ವಸುದೇವನ ಈ ಗರುಡಗಂಬವನ್ನು ಯೋನ (ಯವನ) ದೊರೆ ತಕ್ಷಶಿಲೆಯ ಅಮಾತ್ಯಲಿಖಿತನ ರಾಯಭಾರಿಯಾಗಿ ತಕ್ಷಶಿಲೆಯ ದಿಯೋ ನ ಪುತ್ರ ಹೆಲಿಯೋಧರ ಭಾಗವತನು, ಕಾಶೀಪುತ್ರ ಭಾಗಭದ್ರನಿಗೆ ಅರ್ಪಿಸಿರುವುದು. ಆತ್ಮನಿಗ್ರಹ, ದಾನ ಮತ್ತು ಜಾಗೃತಿ ಯೆಂಬ ಮೂರು ಹೆಜ್ಜೆಗಳೇ ಅಮರತ್ವಕ್ಕೆ ಕೊಂಡೊಯ್ಯುತ್ತವೆ ಎಂದು ಮೇಲೆ ಕೆತ್ತಲಾಗಿದೆ (ಲಿಪಿಯ ಮೂಲ ತರ್ಜುಮೆ: ರಿಚರ್ಡ್ ಸಾಲೋಮನ್, ಪ್ರೊಫೆಸರ್, ಏಷ್ಯನ್ ಭಾಷಾ ಅಧ್ಯಯನ ವಿಭಾಗ, ವಾಷಿಂಗ್ಟನ್ ವಿಶ್ವವಿದ್ಯಾಲಯ).

ಹಿಂದೂ ಸಂಸ್ಕೃತಿಯ ವಿಷ್ಣುಭಕ್ತರಾಗಿದ್ದ ಗ್ರೀಕರು ಗರುಡಗಂಬವನ್ನು ಸ್ಥಾಪಿಸುವ ಮೂಲಕ ಪ್ರಪ್ರಥಮವಾಗಿ ಗ್ರೀಕ್ ವಿನ್ಯಾಸವನ್ನು ಭಾರತದ ಹಿಂದೂ ದೇವಸ್ಥಾನಗಳ ವಿನ್ಯಾಸಕ್ಕೆ ಸಂಯೋ ಜಿಸಿದರೆಂದೂ ಮತ್ತು ಈ ಸ್ತಂಭವು ವಿಷ್ಣುವಿನ ಕುರಿತಾದ ಅತ್ಯಂತ ಹಳೆಯ ಕುರುಹಾಗಿದೆ ಎಂದೂ ಇತಿಹಾಸಜ್ಞರು ಅಭಿಪ್ರಾಯಿಸಿದ್ದರು. ಆದರೆ ಆ ವಾದವನ್ನು ತಳ್ಳಿಹಾಕುತ್ತಾ ಇತಿಹಾಸಜ್ಞ ಅಲನ್ ಡಾಲಕ್ವಿ “ಇದು ವಿಷ್ಣುವನ್ನು ಕುರಿತಾಗಲೀ ಅಥವಾ ಗ್ರೀಕರು ವೈಷ್ಣವರಾಗಿದ್ದರೆಂಬುದಾಗಲೀ ಸರಿಯಲ್ಲ.

ಬುದ್ಧನು ಕೂಡಾ ದೇವರ ದೇವನೆಂದೂ, ಬೌದ್ಧರು ಇಂದ್ರನನ್ನು ವಸುದೇವನೆಂದೂ ಕರೆಯು ತ್ತಿದ್ದರು" ಎನ್ನುತ್ತಾರೆ. ಆದರೆ ಈ ವಾದವನ್ನು ನಂತರ ಕ್ಯೂಪರ್ ಸೇರಿದಂತೆ ಸಾಕಷ್ಟು ಇತಿಹಾಸ ಜ್ಞರು ತಳ್ಳಿಹಾಕುತ್ತಾ “ಗ್ರೀಕರು ವೈಷ್ಣವರೇ ಆಗಿದ್ದರು. ವಿಷ್ಣು, ಕೃಷ್ಣ, ಬಲರಾಮರ ಕುರಿತು ಬೌದ್ಧ ನಂಬಿಕೆಯ ಸುತ್ತಪೀಠಕದ ಜಾತಕ ಕಥೆಗಳಲ್ಲಿ ಕೇಳಿಬರುತ್ತದೆ. ನಿದ್ದೇಶ (ಚೂಲ ನಿದ್ದೇಸ್ಸಾ) ಎಂಬ ಬೌದ್ಧ ಗ್ರಂಥವು ಈ ಕುರಿತಾಗಿ ವಿವರಗಳನ್ನು ಹೊಂದಿದೆ. ವೈಷ್ಣವವೆಂಬುದು ಬೌದ್ಧರ ಒಂದು ಪಂಗಡವಾಗಿದ್ದು ಅವರೆ ಬೌದ್ಧಧರ್ಮೀಯರಾಗಿದ್ದರು.

ಅಂದರೆ ಗ್ರೀಕರಾಗಲೇ ಬೌದ್ಧ-ವೈಷ್ಣವ ಪಂಥವನ್ನು ಕಟ್ಟಿಕೊಂಡಿದ್ದರು" ಎನ್ನುತ್ತಾ ಪುರಾವೆ ಯನ್ನೊದಗಿಸುತ್ತಾರೆ. ಒಟ್ಟಾರೆ ವೈಷ್ಣವದ ಮೂಲ ಬೌದ್ಧಧರ್ಮವೆಂಬುದನ್ನು ಈ ಎರಡೂ ವಾದಗಳು ಸಮ್ಮತಿಸುತ್ತವೆ. ಕ್ರಿಸ್ತಪೂರ್ವ 3ನೇ ಶತಮಾನಕ್ಕೂ ಹಿಂದೆಯೇ ಬೌದ್ಧರಾಗಿ ಬುದ್ಧನ ಸ್ತೂಪಗಳನ್ನು ಕಟ್ಟುತ್ತಾ, ಹಿಂದೂಗಳಾಗಿ ಗರುಡಗಂಬಗಳನ್ನು ಸ್ಥಾಪಿಸಿದ ಗ್ರೀಕರು, ಮುಂದಿನ ಶತಮಾನಗಳಲ್ಲಿ ದಕ್ಷಿಣ ಭಾರತದಲ್ಲಿ ಕ್ಷತ್ರಿಯ, ಶೂದ್ರರಾಗುತ್ತ ಬಹಳಷ್ಟು ಶಿಲ್ಪ ಕಲಾಕೃತಿಗಳ ದೇವಸ್ಥಾನ, ಸ್ಮಾರಕಗಳಿಗೆ ವಾಸ್ತುಶಿಲ್ಪಿಗಳಾಗಿ ಸಾಕಷ್ಟು ಕಾಣಿಕೆ ನೀಡಿದ್ದಾರೆ.

ನಂತರದ ಶತಮಾನಗಳಲ್ಲಿ ಹೆಚ್ಚು ಹೆಚ್ಚಾಗಿ ಜನಾಂಗೀಯವಾಗಿ ಬೆರೆತು ಯವನರು ಭಾರತೀಯರೇ ಆಗಿಹೋದುದರಿಂದ ಅವರ ವಾಸ್ತುಶಿಲ್ಪ ವಿನ್ಯಾಸದ ಕೊಡುಗೆ ಗ್ರೀಕರ ಯಾ ಯವನರದೆಂದು ಗುರುತಿಸಿಕೊಂಡಿಲ್ಲವೆಂದು ಸಾಕಷ್ಟು ಇತಿಹಾಸಜ್ಞರು ಅಭಿಪ್ರಾಯಪಟ್ಟಿದ್ದಾರೆ. ಯಾವಾಗ ಆರಾಧನೆ ಗಳು ಆಕಾರ ಪಡೆದವೋ ಆಗ ಭಾಗವತದ ಭಗ (ಯೋನಿ), ನೆಲಮೂಲಿಗರ ಲಿಂಗ ಸೇರಿ ಶಿವಲಿಂಗಾ ಕೃತಿಯಾಗಿರಬೇಕು.

ಏಕೆಂದರೆ ಅಲ್ಲಿಯವರೆಗಿನ ಲಿಂಗಾಕೃತಿಗಳು ಕೇವಲ ಶಿಶ್ನರೂಪದಲ್ಲಿದ್ದವೇ ಹೊರತು ಯೋನಿ ಪೀಠದ ಭಾಗವಿರಲಿಲ್ಲ ಎಂದು ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಆಂಧ್ರಪ್ರದೇಶದಲ್ಲಿರುವ ಯೋನಿಪೀಠವಿರದ ಗುಡಿಮಲ್ಲ ಲಿಂಗವನ್ನು ತೋರುತ್ತಾರೆ. ಈ ಎಲ್ಲಾ ಬೆಳವಣಿಗೆಗಳು ಹರಪ್ಪಾ ಮೊಹೆಂಜೋದಾರೋ ನಾಗರಿಕತೆಯ ಪೂರ್ವದಲ್ಲಿಯೇ ಆಗಿರಬೇಕು. ಏಕೆಂದರೆ ಹರಪ್ಪಾ ಉತ್ಖನನದಲ್ಲಿ ಯೋನಿಪೀಠ ಸಹಿತದ ಶಿವಲಿಂಗಗಳು ಸಿಕ್ಕಿವೆ.

ಗ್ರೀಕರಲ್ಲಿ ಇಲ್ಲದ ಶಿವ ಮತ್ತು ಪಾರ್ವತಿಯರ ಕುಟುಂಬವೇ ಇಲ್ಲಿನ ನೆಲಮೂಲದ ದೇವತೆ ಗಳೆನ್ನಬಹುದು. ಸೃಷ್ಟಿಯ ಕ್ರಿಯೆಗೆ ಪ್ರೇಮ, ನಿಸ್ವಾರ್ಥತೆ, ತ್ಯಾಗ, ನಿಷ್ಠೆ, ಸ್ನೇಹ, ಗರ್ವ, ಮದ, ಮಾತ್ಸರ್ಯ, ಸ್ವಾಭಿಮಾನಗಳಂಥ ಮಾನವ ಸಹಜ ಗುಣಗಳ ರೂಪಕಗಳ, ಪಾತ್ರಗಳು ಸಹ ಸೃಷ್ಟಿ ಯಾಗಿ ಸಮಗ್ರ ಸಂಸ್ಕೃತಿಸಂಕರದ ಒಗ್ಗೂಡಿಕೆಗೆ ನಾಂದಿಯಾಯಿತು. ಗ್ರೀಕರ ನೀರಿನ ದೇವತೆಯನ್ನು ಬೆಸ್ತ, ಕೃಷಿಕ, ಕರ್ಮಚಾರಿಗಳೆಂಬ ಶೂದ್ರವರ್ಗಕ್ಕೆ, ವಿಶ್ವಕರ್ಮ ಮತ್ತು ಲಕ್ಷ್ಮಿಯು ಕ್ರಮವಾಗಿ ಕುಶಲಕರ್ಮಿ ಮತ್ತು ವರ್ತಕರೆಂಬ ವೈಶ್ಯರಿಗೆ, ಸರಸ್ವತಿಯು ಬ್ರಾಹ್ಮಣರಿಗೆ ಹಾಗೂ ಇಂದ್ರನು ಕ್ಷತ್ರಿಯರಿಗೆ ಮೂಲ ದೇವತೆಗಳಾಗಿ ಮುಂದೆ ವರ್ಣಾಶ್ರಮಕ್ಕೆ ಸಂಯೋಜಿಸಲ್ಪಟ್ಟರು!

ಕಾಲಕ್ರಮೇಣ, ಭಾಗವತರ ವಸುದೇವನಿಗೆ ಶಿವನಂತೆಯೇ ವಿಷ್ಣು ರೂಪ ಕೊಟ್ಟಾಗ ಶಿವಲಿಂಗದ ಕಲ್ಪನೆಯು ಹರಿಹರನ ರೂಪವಾಗಿ ವಿಸ್ತರಿಸಿತು! ವಿಷ್ಣುವಿನ ಮೂಲ ಭಗವಾದುದರಿಂದಲೇ ವಿಷ್ಣುವನ್ನು ಮೋಹಿನಿ ರೂಪದ ಮಹಿಳೆಯಾಗಿಸುವಂಥ ಕತೆಗಳಾದವೆನಿಸುತ್ತದೆ. ಅಲ್ಲದೆ ಶಿವನು ಮಹಿಳೆಯ ರೂಪ ತಳೆದ ಯಾವುದೇ ಉದಾಹರಣೆಗಳಿಲ್ಲ ಸಹ. ಆದರೆ ಮುಂದೆ ದೇವಾನು ದೇವತೆ ಗಳಿಗೆ ಸಂಸಾರಗಳು ಜತೆಯಾದಾಗ ಈ ಹರಿಹರರಿಗೂ ಪುತ್ರನನ್ನು ಸೃಷ್ಟಿಸಲಾಯಿತು.

ಇಲ್ಲಿ ಪುರುಷ-ಪುರುಷನಿಗೆ ಮಗುವನ್ನು ಸೃಷ್ಟಿಸುವ ಕಾರ್ಯ ಅಸಹಜವೆನ್ನಿಸಿದ್ದರಿಂದ ಈ ಕಾರ್ಯ ವನ್ನು ಅಂದಿನ ಅಸಹಜವೆನ್ನಿಸುವ ಪಂಥವಾದ ತಾಂತ್ರಿಕ ಪಂಥ ಹರಿಹರಪುತ್ರನನ್ನು ಸೃಷ್ಟಿಸಿ ಪೂಜಿಸುವ ಪರಿಪಾಠ ಬಂದಿರಬಹುದೇನೋ! ಆದರೆ ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ ಸಲಿಂಗ ಸಂಬಂಧ ವನ್ನು ಕೂಡಾ ಅಧಿಕೃತವಾಗಿ ಒಪ್ಪಿಕೊಂಡು ಒಳಗೊಳ್ಳುವ ಪ್ರಕ್ರಿಯೆಯಾಗಿ ದೇವಲೋಕಕ್ಕೆ ಮಾಡಿಕೊಂಡ ತಿದ್ದುಪಡಿ ಇದೆನ್ನಿಸುತ್ತದೆ. ಮುಂದೆ ಇಂಥ ಸಾಕಷ್ಟು ತಿದ್ದುಪಡಿ ಗಳನ್ನು ದೇವಲೋಕಕ್ಕೆ ಪ್ರಯೋಗಿಸಿ ನಂತರ ಸಾಮಾಜಿಕವಾಗಿ ಅಳವಡಿಸಿಕೊಳ್ಳುವ ಪರಿಪಾಠ ಬಂದಿರಬಹುದು.

ಒಟ್ಟಾರೆ ಹೀಗೆ ಮಾನವಲೋಕದೊಂದಿಗೆ ದೇವಲೋಕವನ್ನು ಸಾಮಾಜಿಕವಾಗಿ ಸಂಯೋಗಿಸಿ ಕೊಳ್ಳುವ ಪರಿಯೇ ಆಧ್ಯಾತ್ಮಿಕವಾಗಿ ಆತ್ಮ ಮತ್ತು ಪರಮಾತ್ಮದ ಸಮೀಕರಣದ ಸೋಹಂ, ಅಹಂ ಬ್ರಹ್ಮಾಸ್ಮಿ, ಲಿಂಗಾಂಗ ಸಾಮರಸ್ಯ, ಶರಣಸತಿ ಲಿಂಗಪತಿಯಾಗಿದೆ! ಈ ಸಾಮಾಜಿಕ ವ್ಯಕ್ತಿ-ಸಮಾಜ ಸಮನ್ವಯದ ಕಾರಣವೇ ವೇದಗಳು ಕೇವಲ ಆಧ್ಯಾತ್ಮಿಕ ತತ್ವಗಳಲ್ಲದೆ ಸಾಮಾಜಿಕ ನೀತಿ ಸಹ ಆಗಿದ್ದವು. ಹೀಗೆ ಪರಸ್ಪರ ಮಾನವಲೋಕ-ದೇವಲೋಕ, ಭೂಗೋಳ-ಖಗೋಳ, ವ್ಯಕ್ತಿ-ಸಮಾಜ, ಆತ್ಮ-ಪರಮಾತ್ಮಗಳ ಸಮೀಕರಣ ಮತ್ತು ನವೀಕರಣ ವ್ಯವಸ್ಥೆ ಇದ್ದುದರಿಂದಲೇ ಹಿಂದೂ ಸಂಸ್ಕೃತಿ ಒಂದು ಜೀವಂತ ಉಸಿರಾಡುವ ಸಂಸ್ಕೃತಿ ಎನಿಸುವುದು. ಹಾಗಾಗಿಯೇ ಇದು ಕಾಲಕಾಲ ಕ್ಕೆ ನವೀಕರಣಗೊಳ್ಳುವ ಸಂವಿಧಾನ ಎನಿಸಿ ಅಂದಿನ ಸಂವಿಧಾನವಾದ ವೇದಗಳು ಕಾಲಕಾಲಕ್ಕೆ ತಿದ್ದುಪಡಿಗೊಳಗಾಗಿದ್ದುದು. ಆದರೆ ಅದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಕೇವಲ ಪೂರ್ವಗ್ರಹ ಮೂಲೋದ್ದೇಶವಾಗಿ ಯೋಚಿಸಿದಾಗ ಅದು ಅರ್ಥಹೀನ ಎನಿಸಿಬಿಡುತ್ತದೆ.

ಇರಲಿ, ಇಲ್ಲಿ ಶಿವನ ಸೃಷ್ಟಿ ಅತ್ಯಂತ ಕುತೂಹಲಕರ ಆಯಾಮವೊಂದನ್ನು ಹೊಂದಿದೆ. ಒಮ್ಮೊಮ್ಮೆ ಯಾವುದೋ ಅಂದಿನ ಜೀವಶಾಸದ ಕಲ್ಪನೆ ಶಿವನ ಕಥಾರೂಪಕ್ಕೆ ಪ್ರೇರಣೆಯಾಗಿರ ಬಹುದೆನಿಸುತ್ತದೆ. ಏಕೆಂದರೆ ಹೆಣ್ಣಿನ ಅಗತ್ಯವಿಲ್ಲದೆ ಶಿವ ತನ್ನ ವೀರ್ಯದಿಂದ ವೀರಭದ್ರನನ್ನು ಸೃಷ್ಟಿಸಿಕೊಂಡರೆ, ಪಾರ್ವತಿ ಶಿವನಿಲ್ಲದೇ ಗಣಪನನ್ನು ಸೃಷ್ಟಿಸಿಕೊಂಡು, ನಂತರ ಶಿವಪಾರ್ವತಿ ಯರಿಬ್ಬರೂ ಸೇರಿ ಷಣ್ಮುಖನನ್ನು ಪಡೆದುಕೊಂಡರು.

ನಂತರದ ಶಿವ-ವಿಷ್ಣು ರೂಪದ ಹರಿಹರನ ಪುತ್ರ ಅಯ್ಯಪ್ಪನ ಸೃಷ್ಟಿ ಇವೆ ತದ್ರೂಪು ರಚನೆಯ ಯಾ ವಂಶವಾಹಿ ಪರಿವರ್ತನೆಗಳ ಆರಂಭಿಕ ವೈಜ್ಞಾನಿಕ ಪರಿಕಲ್ಪನೆಯಂತಿವೆ. ಈ ವೈಜ್ಞಾನಿಕ ಕಲ್ಪನೆಯ ಜತೆಜತೆಗೆ ಮತ್ತೊಂದು ಸಾಮಾಜಿಕ ಕಲ್ಪನೆ ಕೂಡಾ ಶಿವಪಾರ್ವತಿಯರ ಕಥೆಯಲ್ಲಿದೆ. “ಕಟ್ಟುಮಸ್ತಾದ ನಾಯಕ ಬಡವ, ಮನೆಮಠವಿಲ್ಲದವ.

ಆದರೂ ಅವನಿಗೊಬ್ಬ ಬಲಗೈ ಬಂಟನಿರುತ್ತಾನೆ. ನಾಯಕಿ ಅತ್ಯಂತ ಸುಂದರಿ, ಶ್ರೀಮಂತನ ಮಗಳು. ಇವಳಿಗೆ ನಾಯಕನ ಮೇಲೆ ಪ್ರೇಮ. ಪೋಷಕರ ವಿರೋಧದ ನಡುವೆ ಮನೆ ಬಿಟ್ಟು ನಾಯಕನನ್ನು ಮದುವೆಯಾಗುತ್ತಾಳೆ. ಒಂದೊಮ್ಮೆ ತವರನ್ನು ನೋಡಲೆನಿಸಿ ನಾಯಕನನ್ನು ಕರೆದುಕೊಂಡು ಹೋಗೆನ್ನುತ್ತಾಳೆ ಆದರೆ ಸ್ವಾಭಿಮಾನಿ ನಾಯಕ ನಾನಲ್ಲಿಗೆ ಕಾಲಿಡಲಾರೆ ನೆನ್ನುತ್ತಾನೆ.

ಕಡೆಗೆ ಆಕೆ ತಡೆಯಲಾರದೇ ತವರುಮನೆಗೆ ಹೋಗಿ ಅವಮಾನಿತಳಾಗಿ ಆತ್ಮಹತ್ಯೆಗೆ ಪ್ರಯತ್ನಿಸು ತ್ತಾಳೆ. ಇದರಿಂದ ಕುಪಿತಗೊಂಡ ನಾಯಕ ತನ್ನ ಬಲಗೈ ಬಂಟನೊಂದಿಗೆ ನಾಯಕಿಯ ಪೋಷಕರ ಕಡೆಯವರನ್ನು ಚೆಂಡಾಡುತ್ತಾನೆ"- ಇದು ಭಾರತೀಯ ಮೂಲದ ಯಾವುದೇ ಭಾಷೆಯ ಸಾಕಷ್ಟು ಸಿನಿಮಾಗಳ ಆದಿಯಿಂದ ಇಂದಿನವರೆಗೆ ಮೆರೆಯುತ್ತಿರುವ ಮೂಲ ಪ್ರೇಮಕಥೆಯ ತಿರುಳು. ಈ ಎಲ್ಲಾ ಪ್ರೇಮಕಥೆಗಳ ಒಟ್ಟಾರೆ ಕಥಾಹಂದರ ಶಿವ-ಪಾರ್ವತಿಯರ ಪ್ರೇಮಕಥೆ!

ಇಲ್ಲಿ ನಾಯಕ ಶಿವ, ನಾಯಕಿ ಪಾರ್ವತಿ, ನಾಯಕನ ಬಂಟ ವೀರಭದ್ರ, ಪಾರ್ವತಿಯ ದುಷ್ಟ ಪೋಷಕ ದಕ್ಷಬ್ರಹ್ಮ!ಹೀಗೆ ಶಿವನ ಕಥೆ ಪ್ರಪಂಚದ ಪ್ರಪ್ರಥಮ ಕಾಲ್ಪನಿಕ ವೈಜ್ಞಾನಿಕ ಕಥೆಯಷ್ಟೇ ಅಲ್ಲದೇ ಜಗತ್ತಿನ ಪ್ರಪ್ರಥಮ ಪ್ರೇಮಕಥೆಯೂ ಎನಿಸುತ್ತದೆ. ಒಟ್ಟಾರೆ ಶಿವ ಸಾಮಾಜಿಕವಾಗಿಯೂ ವೈಜ್ಞಾನಿಕವಾಗಿಯೂ, ಆರ್ಯರಿಗೂ ಅನಾರ್ಯರಿಗೂ, ಶ್ರೀಮಂತರಿಗೂ ಬಡವರಿಗೂ, ಗೌರ ವರ್ಣದವರಿಗೂ ಕೃಷ್ಣವರ್ಣದವರಿಗೂ ಮತ್ತು ವೈದಿಕರಿಗೂ ಅವೈದಿಕರೆಲ್ಲರಿಗೂ ಆದರ್ಶನೆನಿಸುತ್ತಾನೆ.

ಏಕೆಂದರೆ ಪ್ರೇಮ, ಕಾಮ, ಮತ್ತು ಸಂತಾನ ಮಾನವ ಜನಾಂಗದ ಅಭ್ಯುದಯಕ್ಕೆ ಅವಶ್ಯವಲ್ಲವೇ!ಹೀಗೆ ಪ್ರಕೃತಿ ಮೂಲವಾದ ಅಗ್ನಿ, ಇಂದ್ರ, ವಾಯು, ಸೂರ್ಯರಿಂದ ಆರಂಭವಾದ ದೇವರುಗಳ ಸೃಷ್ಟಿ ಕ್ರಮೇಣ ದೇವತೆಗಳನ್ನು, ಮೂಲವಾಸಿಗಳ ಶಿವನನ್ನು ಒಳಗೊಳ್ಳುತ್ತಾ ನಂತರದ ಕೃಷ್ಣ, ವಿಷ್ಣು, ರಾಮರನ್ನು ಒಳಗೊಂಡು ಹಿಗ್ಗುತ್ತಾ ಸಾಗಿತು. ಹಾಗಾಗಿಯೇ ಬೌದ್ಧಧರ್ಮದ ಜಾತಕ ಕತೆಗಳಲ್ಲಿಯೂ ಹಿಂದೂ ದೇವರುಗಳಿzರೆ ಮತ್ತು ಜೈನರು ಕೂಡಾ ಹಿಂದೂ ದೇವತೆಗಳನ್ನು ಆರಾ ಧಿಸುತ್ತಾರೆ. ಅದೇ ರೀತಿ ನಂತರ ಬಂದ ಮುಸ್ಲಿಮರು, ಕ್ರಿಶ್ಚಿಯನ್ನರು ಕೂಡಾ ತಮ್ಮ ಮತ ಧರ್ಮ ಸೂತ್ರಗಳನ್ನು ಗ್ರೀಕರಂತೆ ಇದೇ ಸಂಸ್ಕೃತಿಯೊಟ್ಟಿಗೆ ಸಂಯೋಜಿಸಿಕೊಂಡಿದ್ದರೆ ಇಂದು ಹಿಂದೂ ಧರ್ಮದಲ್ಲಿ ಅಹು, ಯೇಸು ಸಹ ಇನ್ನಿಬ್ಬರು ದೇವರುಗಳಾಗಿರುತ್ತಿದ್ದರು.

ಸೌಹಾರ್ದಮಯವಾಗಿ ಎಲ್ಲರನ್ನೂ ಒಳಗೊಳ್ಳುತ್ತ ಬೆಳೆದ ಇಂಥ ಸಂಸ್ಕೃತಿ ಯಾವಾಗ ಪಂಥಭೇದ ಗಳಾಗಿ ಸಾಗಿತೋ ಆಗ ಪರಸ್ಪರ ಶ್ರೇಷ್ಠತೆಯ ಪೈಪೋಟಿ ಉದ್ಭವಗೊಂಡಿತು. ವೀರಶೈವದ ಸಮಯಭೇದಗಳು ಸಹ ಹೀಗೆಯೇ ಸ್ವಪ್ರತಿಷ್ಠೆಗಾಗಿ ಆರಂಭವಾದವು ಎಂಬುದನ್ನು ಇಲ್ಲಿ ಸಾಂದ ರ್ಭಿಕವಾಗಿ ನೆನಪಿಸಿಕೊಳ್ಳಬಹುದು. ಏಕೆಂದರೆ ಹಿಂದೂ ಸಂಸ್ಕೃತಿಯಲ್ಲಿ ಏನಾಯಿತೋ ಅದೆಲ್ಲ ವೂ ಹಿಂದೂ ಪ್ರಭೇದದ ಮತಪಂಥಗಳಲ್ಲಿಯೂ ಆಗಿದೆ, ಆಗುತ್ತಿದೆ. ಇದಕ್ಕೆ ವೀರಶೈವ ಮತಭೇದ ಸಹ ಹೊರತಾಗಿರಲಿಲ್ಲ.

(ಮುಂದುವರಿಯುವುದು)

(ಲೇಖಕರು ಶಿಕಾಗೊ ನಿವಾಸಿ ಮತ್ತು ಸಾಹಿತಿ)