Shashidhara Halady Column: ಕಾಳಿಂಗ ಮತ್ತು ನಾಗರ ಎರಡನ್ನೂ ಪೂಜಿಸುವ ನಾಡಿದು !
ಕಾಳಿಂಗ ಸರ್ಪವು ಅತಿ ಅಪರೂಪದ ಒಂದು ಉರಗ. ಕರ್ನಾಟಕದ ಕೆಲವೇ ಪ್ರದೇಶಗಳಲ್ಲಿ ಕಂಡು ಬರುವ ಇವುಗಳನ್ನು, ಅವುಗಳ ಸಹಜ ವಾಸಸ್ಥಳದಲ್ಲಿ ನೋಡಿದವರೇ ಕಡಿಮೆ! ನಮ್ಮ ಹಳ್ಳಿಯಲ್ಲಿ, ಅಂದರೆ ಉಡುಪಿ ಜಿಲ್ಲೆಯ ಅರೆ ಮಲೆನಾಡು ಮತ್ತು ಮಲೆನಾಡು ಪ್ರದೇಶದಲ್ಲಿ ನಾಗರಹಾವನ್ನು ಸಾಕಷ್ಟು ಸಂಖ್ಯೆಯಲ್ಲಿ ಕಾಣಬಹುದು; ಆದರೆ, ಕಾಳಿಂಗ ಸರ್ಪ ಅಪರೂಪ. ನಮ್ಮ ಹಳ್ಳಿಯ ಸರಹದ್ದಿ ನಲ್ಲಿ ಅವು ಇವೆ ಎಂಬುದು ನಿಜ; ಅಥವಾ ಹಿಂದಿನ ದಿನಳಲ್ಲಿ ಅಲ್ಲಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಾಸಿಸಿರ ಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಬಹು ಅಪರೂಪ.
 
                                -
 ಶಶಿಧರ ಹಾಲಾಡಿ
                            
                                Oct 31, 2025 9:56 AM
                                
                                ಶಶಿಧರ ಹಾಲಾಡಿ
                            
                                Oct 31, 2025 9:56 AM
                            ಶಶಾಂಕಣ
ನಮ್ಮ ಹಳ್ಳಿಯಲ್ಲಿ ಕಾಳಿಂಗ ಸರ್ಪವನ್ನು ನಾನು ಕಂಡದ್ದೇ ಇಲ್ಲ; ನಮ್ಮ ಹಳ್ಳಿಯವರೂ ಕಂಡಿರ ಲಿಲ್ಲ. ಆದರೆ ಈಚಿನ ದಶಕದಲ್ಲಿ ಅಲ್ಲಲ್ಲಿ ಅಪರೂಪಕ್ಕೆ ಕಾಣಿಸುತ್ತಿದೆ ಎಂದು ವರದಿಯಾಗಿದೆ. ಇದಕ್ಕೆ ಸಂವಾದಿಯಾಗಿ, ನಾಗರಹಾವು ನಮ್ಮ ಹಳ್ಳಿಗಳಲ್ಲಿ ಹೇರಳ! ಮತ್ತು ಸಾಕಷ್ಟು ಕಡೆ ಕಾಣಿಸುತ್ತವೆ.
ಮಲೆನಾಡಿನಲ್ಲಿ, ಅದರಲ್ಲೂ ಮುಖ್ಯವಾಗಿ ಆಗುಂಬೆಯ ಸರಹದ್ದಿನಲ್ಲಿ, ಈಗ ಕೆಲವು ವಾರಗಳಿಂದ ಕಾಳಿಂಗ ಸರ್ಪದ ಸುದ್ದಿ ಹರಿದಾಡುತ್ತಿದೆ. ಕಾಳಿಂಗ ಸರ್ಪವು ಅತ್ಯಪರೂಪದ ರಗಪ್ರಭೇದವಾಗಿದ್ದು, ಅದನ್ನು ರಕ್ಷಿಸಲು, ಪ್ರಯೋಗಕ್ಕೆ ಒಳಪಡಿಸಲು ಸರಕಾರದ ಅನುಮತಿ ಬೇಕು; ಆದರೆ, ಅಂಥ ಸಮರ್ಪಕ ಅನುಮತಿ ಇಲ್ಲದೇ ಕೆಲವರು ಇದನ್ನು ಫೋಟೋಶೂಟ್‌ನಂಥ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅದರಲ್ಲೂ ಮುಖ್ಯವಾಗಿ, ಅಧ್ಯಯನ ಮತ್ತು ಚಾರಣದ ಸೋಗಿನಲ್ಲಿ, ರಕ್ಷಿತ ಜೀವಿ ಎಂದೇ ಗುರುತಿಸಲ್ಪಟ್ಟಿರುವ ಕಾಳಿಂಗ ಸರ್ಪದ ಫೋಟೋ ತೆಗೆಯುವ ಚಟುವಟಿಕೆಗೆ ಪ್ರಚಾರ ನೀಡಿ, ಫೋಟೋ ತೆಗೆದು, ಅವುಗಳಿಗೆ ತೊಂದರೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಇದು ನಿಜವಾದರೆ ಖಂಡನಾರ್ಹ.
ಕಾಳಿಂಗ ಸರ್ಪವು ಅತಿ ಅಪರೂಪದ ಒಂದು ಉರಗ. ಕರ್ನಾಟಕದ ಕೆಲವೇ ಪ್ರದೇಶಗಳಲ್ಲಿ ಕಂಡು ಬರುವ ಇವುಗಳನ್ನು, ಅವುಗಳ ಸಹಜ ವಾಸಸ್ಥಳದಲ್ಲಿ ನೋಡಿದವರೇ ಕಡಿಮೆ! ನಮ್ಮ ಹಳ್ಳಿಯಲ್ಲಿ, ಅಂದರೆ ಉಡುಪಿ ಜಿಲ್ಲೆಯ ಅರೆ ಮಲೆನಾಡು ಮತ್ತು ಮಲೆನಾಡು ಪ್ರದೇಶದಲ್ಲಿ ನಾಗರಹಾವನ್ನು ಸಾಕಷ್ಟು ಸಂಖ್ಯೆಯಲ್ಲಿ ಕಾಣಬಹುದು; ಆದರೆ, ಕಾಳಿಂಗ ಸರ್ಪ ಅಪರೂಪ. ನಮ್ಮ ಹಳ್ಳಿಯ ಸರಹದ್ದಿನಲ್ಲಿ ಅವು ಇವೆ ಎಂಬುದು ನಿಜ; ಅಥವಾ ಹಿಂದಿನ ದಿನಳಲ್ಲಿ ಅಲ್ಲಲ್ಲಿ ಸಾಕಷ್ಟು ಸಂಖ್ಯೆ ಯಲ್ಲಿ ವಾಸಿಸಿರಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಬಹು ಅಪರೂಪ. ಆಗುಂಬೆ, ಹೆಬ್ರಿ ಸನಿಹದ ಕಬ್ಬಿನಾಲೆ, ಸೋಮೇಶ್ವರ ಮೊದಲಾದ ಕಾಡು ಪ್ರದೇಶಗಳಲ್ಲಿ ಅವುಗಳಪಾಡಿಗೆ ಅವು ವಾಸಿಸುತ್ತಿವೆ ಮತ್ತು ಜನರ ಕಣ್ಣಿಗೆ ಬೀಳುವುದು ಕಡಿಮೆ.
ಇದನ್ನೂ ಓದಿ: Shashidhara Halady Column: ಬೆಳಕು ಬೀರುವ ಸರಸ್ವತಿ ಚೇಳು !
ಆದರೆ, ಹಿಂದೆ ಅವು ಸಾಕಷ್ಟು ಸಂಖ್ಯೆಯಲ್ಲಿ ಇದ್ದಿರಲೇಬೇಕು. ಅದಕ್ಕೆ ಪುರಾವೆಯಾಗಿ, ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ‘ಕಾಡಿಯ’ ಅಥವಾ ‘ಕಾಡ್ಯ’ ಎಂದು ಅವುಗಳನ್ನು ಗುರುತಿಸಿ, ಗೌರವಿಸಿ, ಪೂಜಿಸುವ ಪದ್ಧತಿ ಇಂದಿಗೂ ಇದೆ.
ಇವನ್ನು ಪೂಜಿಸುವ ಪರಂಪರೆಯ ಭಾಗವಾಗಿ, ‘ಕಾಡ್ಯನಾಟ’ ಎಂಬ ನೃತ್ಯಸಹಿತ ಪೂಜಾ ಪದ್ಧತಿ ಯೂ ಚಾಲ್ತಿಯಲ್ಲಿದ್ದು, ಇದರ ಕುರಿತು ಪ್ರೊ.ಎ.ವಿ.ನಾವಡ ಅವರು ಮೊದಲಿಗೆ ವ್ಯಾಪಕವಾಗಿ ಸಂಶೋಧನೆ ಮಾಡಿ, ಗ್ರಂಥವನ್ನೂ (1980 ದಶಕದಲ್ಲಿ) ಹೊರತಂದಿದ್ದಾರೆ. ನಾಗಮಂಡಲ ಎಂಬ ಪ್ರಸಿದ್ಧ ಪೂಜಾಪದ್ಧತಿಯಲ್ಲಿ ನಾಗರಹಾವನ್ನು ಆರಾಧಿಸಿದರೆ, ಕಾಡ್ಯನಾಟ ಪದ್ಧತಿಯಲ್ಲಿ ಕಾಳಿಂಗ ಸರ್ಪವನ್ನು ಆರಾಧಿಸುವ ಕ್ರಮವಿದೆ.
ಈಗಲೂ ಕಾಡ್ಯನಾಟ ಅಲ್ಲಲ್ಲಿ ನಡೆಯುತ್ತಿದ್ದರೂ, ನಾಗಮಂಡಲಕ್ಕೆ ಹೋಲಿಸಿದರೆ ಪ್ರಚಾರ ತುಸು ಕಡಿಮೆ. ಕುಂದಾಪುರ ತಾಲೂಕಿನ ಕಾಳಾವರ ಎಂಬಲ್ಲಿನ ಸುಬ್ರಹ್ಮಣ್ಯ ದೇಗುಲದಲ್ಲಿ ಕಾಳಿಂಗ ಸರ್ಪನ ಆರಾಧನೆಯ ಪದ್ಧತಿ ಇದೆ ಎಂದು ಗುರುತಿಸಲಾಗಿದೆ. ಅಂದರೆ, ಕರ್ನಾಟಕದ ಕರಾವಳಿ ಮತ್ತು ಮಲೆನಾಡಿನಲ್ಲಿ, ನಾಗರಹಾವಿನ ಜತೆಯಲ್ಲೇ, ಕಾಳಿಂಗ ಸರ್ಪನನ್ನೂ ಪೂಜಿಸುವ ಪದ್ಧತಿ ಇದೆ ಎಂಬುದು ಸ್ಪಷ್ಟ.
 
    
ನಮ್ಮ ಹಳ್ಳಿಯಲ್ಲಿ ಕಾಳಿಂಗ ಸರ್ಪವನ್ನು ನಾನು ಕಂಡದ್ದೇ ಇಲ್ಲ; ನಮ್ಮ ಹಳ್ಳಿಯವರೂ ಕಂಡಿರ ಲಿಲ್ಲ. ಆದರೆ ಈಚಿನ ದಶಕದಲ್ಲಿ ಅಲ್ಲಲ್ಲಿ ಅಪರೂಪಕ್ಕೆ ಕಾಣಿಸುತ್ತಿದೆ ಎಂದು ವರದಿಯಾಗಿದೆ. ಇದಕ್ಕೆ ಸಂವಾದಿಯಾಗಿ, ನಾಗರಹಾವು ನಮ್ಮ ಹಳ್ಳಿಗಳಲ್ಲಿ ಹೇರಳ! ಮತ್ತು ಸಾಕಷ್ಟು ಕಡೆ ಕಾಣಿಸುತ್ತವೆ. ಕಾಳಿಂಗ ಸರ್ಪ ಮತ್ತು ನಾಗರಹಾವುಗಳೆರಡನ್ನೂ ಕರಾವಳಿ ಮತ್ತು ಮಲೆನಾಡಿನ ಜನರು ಆರಾಧಿಸುತ್ತಾರೆ; ಎಷ್ಟರ ಮಟ್ಟಿಗೆ ಎಂದರೆ, ಇವುಗಳನ್ನು ಸಾಮಾನ್ಯವಾಗಿ ಸಾಯಿಸುವು ದಿಲ್ಲ, ಅಸಲು ಅವುಗಳಿಗೆ ಗಾಯವನ್ನೂ ಮಾಡುವುದಿಲ್ಲ!
ಬಯಲುಸೀಮೆಯಲ್ಲಿ ಅಲ್ಲಲ್ಲಿ ಹಾವು ಎಂದಾಕ್ಷಣ, ಅದು ನಾಗರಹಾವೇ ಆಗಿರಲಿ, ಬಡಿದು ಸಾಯಿಸುವುದುಂಟು. ಆದರೆ, ಕರಾವಳಿಯಲ್ಲಿ ನಾಗರಹಾವನ್ನು ಕೊಲ್ಲುವ ಕ್ರಮವೇ ಇಲ್ಲ, ಅದೆಷ್ಟೋ ತೊಂದರೆ ಕೊಟ್ಟಿದ್ದರೂ! ಅದು ದೇವರ ಹಾವು ಅಂದರೆ ದೇವರ ಸ್ವರೂಪ ಎಂದು ಆರಾಧಿಸುವ ಪದ್ಧತಿ ಅಲ್ಲುಟು, ಕಾಳಿಂಗ ಸರ್ಪಕ್ಕೂ ಸಹ.
ಬಾಲ್ಯದಲ್ಲಿ ನಮ್ಮ ಹಳ್ಳಿಯಲ್ಲಿ ಜನರೊಡನೆ ನಾಗರಹಾವಿನ ಮುಖಾಮುಖಿಯಾಗಿದ್ದನ್ನು ಹಲವು ಬಾರಿ ನಾನು ಕಂಡಿದ್ದೆ. ಬೇಸಗೆಯ ಬಿಸಿಲು ಕಾಡತೊಡಗಿತು ಎಂದರೆ, ಎಲ್ಲೆಡೆ ಸೆಕೆ, ತಾಪ. ಅತ್ತ ಭೂಮಿಯೂ ಬಿಸಿಯಾಗುತ್ತದೆ, ಭೂಮಿಯ ಒಳಗೂ ತಾಪಮಾನ ಏರುತ್ತದೆ. ನಮ್ಮ ಹಳ್ಳಿಯಲ್ಲಿ ಇಂಥ ದಿನಗಳಲ್ಲಿ ತಲೆದೋರುವ ಸಮಸ್ಯೆ ಎಂದರೆ, ನೆಲದಿಂದ ಹೊರಬರುವ ಉರಗಗಳು! ಬಿಸಿಲಿ ನಿಂದ ನೆಲ ಕಾದಂತೆಲ್ಲಾ, ನೆಲದೊಳಗೆ ಶಿಶಿರ ನಿದ್ರೆ ಮಾಡುತ್ತಿರುವ ಅಥವಾ ತಮ್ಮ ತಾಣದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಹಾವುಗಳು, ಚೇಳುಗಳು ಮೇಲಕ್ಕೆ ಬರುವುದುಂಟು.
ಹೀಗೆ ಬೇಸಗೆಯಲ್ಲಿ ಹೊರಬರುವ ಹಾವುಗಳಿಂದಾಗಿ, ಸಾಕಷ್ಟು ಅಪಾಯಕಾರಿ ಸನ್ನಿವೇಶಗಳೂ ಎದುರಾಗುತ್ತಿದ್ದುದುಂಟು. ಪಾಪ, ಆ ಹಾವುಗಳಿಗೆ ತಾವು ಸಂಚರಿಸುವ ದಾರಿಯು ಮನುಷ್ಯನ ದಾರಿ ಎಂದು ಹೇಗಾದರೂ ಗೊತ್ತಾಗಬೇಕು? ತಮ್ಮ ಪಾಡಿಗೆ ತೆವಳಿಕೊಂಡು ಹೋಗುತ್ತಿರುವಾಗ, ಅವನ್ನು ನೋಡದ ಮನುಷ್ಯನು ಅವುಗಳ ಮೇಲೆ ಕಾಲಿಟ್ಟರೆ, ಅವು ಕಚ್ಚುತ್ತಿದ್ದುದುಂಟು.
ಆ ದಾರಿಯಲ್ಲಿ ನಡೆಯುತ್ತಿದ್ದವನ ಗ್ರಹಚಾರ ನೆಟ್ಟಗಿದ್ದರೆ, ಆ ಹಾವು ವಿಷರಹಿತ ಹಾವು ಆಗಿರ ಬಹುದು; ಆದರೆ, ವಿಷಕಾರಿ ಹಾವು ಕಚ್ಚಿದರೆ, ಪ್ರಾಣಾಪಾಯದ ಸಂದರ್ಭ ಇದ್ದದ್ದೇ. ಇಂಥ ದೊಂದು ದುರಂತಕ್ಕೆ ಒಮ್ಮೆ ಸಾಕ್ಷಿಯಾಗಿದ್ದೆ. ನಾವು ಆರೆಂಟು ಮಕ್ಕಳು, ಶಾಲೆ ಮುಗಿಸಿಕೊಂಡು ಬಂದು, ಸಂಜೆಯ ಹೊತ್ತಿನಲ್ಲಿ ಮನೆಯ ಮುಂದಿನ ಅಗೇಡಿಯಲ್ಲಿ ಚಿನ್ನಿದಾಂಡು ಆಡುತ್ತಿದ್ದೆವು.
ಇನ್ನೇನು ಕತ್ತಲಾಗುವ ಸಮಯ; ಯಾರೋ ಹೊಡೆದ ಚಿನ್ನಿಯು, ಅಗೇಡಿಯ ಅಂಚಿನ ಸಣ್ಣ ತೋಡಿನತ್ತ ಹೋಗಿ ಬಿತ್ತು. ಅದು ಬೇಸಗೆಯ ಸಮಯ; ಅಗೇಡಿಯಲ್ಲಾಗಲೀ, ತೋಡಿನಲ್ಲಾ ಗಲೀ ನೀರಿರಲಿಲ್ಲ. ತೋಡಿನ ಉದ್ದಕ್ಕೂ ಹಳು, ಮುಂಡುಕನ ಗಿಡ, ಕುಸುಬನ ಗಿಡ ಎಲ್ಲವೂ ಬೆಳೆದಿದ್ದವು. ನಮ್ಮ ಜತೆಯಲ್ಲಿ ಆಡುತ್ತಿದ್ದ, ಪಕ್ಕದ ಮನೆಯ ಸುಬ್ಬಣ್ಣ ಆ ಚಿನ್ನಿಯನ್ನು ಹುಡುಕುತ್ತಾ ಆ ತೋಡಿನಂಚಿಗೆ ಹೋದ.
‘ಹಾವು ಕಚ್ಚಿತೋ’ ಎಂದು ಕೂಗುತ್ತಾ ಅವನು ವಾಪಸು ಬಂದಿದ್ದಷ್ಟೇ ಗೊತ್ತು; ನಾವೆಲ್ಲರೂ ಮನೆಗೆ ಓಡಿದೆವು. ಪಂಡಿತರನ್ನು ಕರೆಸಿದರು. ಸುಬ್ಬಣ್ಣನನ್ನು ಕಾಲಿನ ಮೇಲೆ ಮಲಗಿಸಿಕೊಂಡು, ನಾರು-ಬೇರಿನ ರಸವನ್ನು ಅವರು ಕುಡಿಸುತ್ತಿದ್ದ ದೃಶ್ಯ ನೆನಪಿದೆ; ಚಿಮಿಣಿ ಬೆಳಕಿನಲ್ಲೇ ಸುಬ್ಬಣ್ಣ ಮಲಗಿದ್ದು, ಆ ನಂತರ ಆತ ನಮ್ಮನ್ನು ಅಗಲಿದ್ದು ಎಲ್ಲವೂ ಮಸುಕಾಗಿ ನೆನಪಿದೆ.
ಹಳ್ಳಿಯ ಜೀವನವು ಸುಂದರ ಎಂಬುದರಲ್ಲಿ ಅನುಮಾನವಿಲ್ಲವಾದರೂ, ದೂರದ ಗ್ರಾಮೀಣ ಪ್ರದೇಶದ ಜನರು ಇಂಥ ರಿಸ್ಕ್‌ಗಳನ್ನು ಎದುರಿಸುತ್ತಲೇ ಜೀವನ ಸಾಗಿಸಬೇಕಾದ ಅನಿವಾರ್ಯತೆ ಇತ್ತು; ಈಚಿನ ದಶಕಗಳಲ್ಲಿ ನಮ್ಮೂರಿನಲ್ಲಿ ಆಸ್ಪತ್ರೆಯಾಗಿರುವುದರಿಂದ, ಅಷ್ಟರ ಮಟ್ಟಿಗೆ ಪರವಾಗಿಲ್ಲ. ಬೇಸಗೆಯ ಸಮಯದಲ್ಲಿ, ನೆಲದ ತಾಪಮಾನ ಏರುವುದರಿಂದಾಗಿ, ಹಾವು ಮೊದ ಲಾದವುಗಳು ನೆಲದ ಮೇಲೆ ಓಡಾಡುವಾಗ, ಇಂಥದೊಂದು ರಿಸ್ಕ್ ಈಗಲೂ ಇದೆ. ಒಂದು ರೀತಿ ಯಲ್ಲಿ ನೋಡಿದರೆ, ನಮ್ಮ ಮನೆ ಅಂಗಳವು ಹಾವು ಮತ್ತು ಕಪ್ಪೆಗಳ ಪ್ಲೇಗ್ರೌಂಡ್ ಎನ್ನಬಹುದು!
ಇಲ್ಲಿ ‘ಪ್ಲೇ’ ಎಂದರೆ, ಕಪ್ಪೆಯು ಹಾವಿನೊಂದಿಗೆ ಆಡಲೇಬೇಕಾದ ಜೀವನ್ಮರಣದ ಆಟ. ಅಂಗಳದ ಒಂದು ತುದಿಯಲ್ಲಿ ಬಗ್ಗುಬಾವಿ; ಒರಟು ಕಲ್ಲುಗಳನ್ನೇ ಜೋಡಿಸಿ ಅದಕ್ಕೆ ಕಟ್ಟಪ್ಪಣೆ ಮಾಡಲಾ ಗಿದ್ದರಿಂದ, ಆ ಕಲ್ಲುಗಳ ಸಂದಿಯಲ್ಲಿ ಹತ್ತಿಪ್ಪತ್ತು ಒಳ್ಳೆ ಹಾವುಗಳು (ವಿಷರಹಿತ) ವಾಸಿಸುತ್ತಿದ್ದವು!
ಬಡಪಾಯಿ ಕಪ್ಪೆಗಳು ಅಲ್ಲೆಲ್ಲಾದರೂ ಸುಳಿದರೆ, ಅವುಗಳನ್ನು ಹಿಡಿದು ತಿನ್ನಲು ಕಾಯುತ್ತಿದ್ದವು. ಅಂಗಳದ ಒಂದು ತುದಿಯಿಂದ ಕುಪ್ಪಳಿಸುತ್ತಾ ಬರುವ ಕಪ್ಪೆಯು, ಇನ್ನೊಂದು ತುದಿಗೆ, ಅಂದರೆ ನಮ್ಮ ಮನೆಯತ್ತ ಬರುವುದು ರೂಢಿ; ಅದನ್ನು ಅಟ್ಟಿಸಿಕೊಂಡು ಬರುವ ಹಾವು, ಕಪ್ಪೆಯನ್ನು ಗಬಕ್ಕನೆ ಕಚ್ಚಿಕೊಂಡು, ವಾಪಸು ತನ್ನ ಠಾವಾದ ಬಗ್ಗು ಬಾವಿಯ ಕಲ್ಲುಗಳ ಸಂದಿಗೆ ಓಡುವು ದುಂಟು. ಆಗ, ಅದರ ಬಾಯಲ್ಲಿ ಸಿಕ್ಕಿಕೊಂಡ ಕಪ್ಪೆಯ ‘ಓಂಕ್ ವಾಂಕ್’ ಎಂದು ಆರ್ತನಾದ ಮಾಡುವಾಗ ಅದನ್ನು ನೋಡಿದ ನಮ್ಮಂಥ ಮಕ್ಕಳಿಗೆ ಕನಿಕರ ಮೂಡುತ್ತಿತ್ತು.
ಹಾವು ಅಟ್ಟಿಸಿಕೊಂಡು ಬಂದಾಗ, ಕಪ್ಪೆಯು ನಮ್ಮ ಅಡುಗೆ ಮನೆಯತ್ತ ಧಾವಿಸಿ ಬರುತ್ತಿದ್ದವು ಎಂದೆನಲ್ಲ, ಅದು ಇಂದಿಗೂ ನನಗೆ ಒಂದು ಪುಟ್ಟವಿಸ್ಮಯವಾಗಿಯೇ ಕಾಣಿಸುತ್ತದೆ. ಬೇಸಗೆಯಲ್ಲಿ ನಾಗರಹಾವುಗಳು ಸಹ ನಮ್ಮ ಮನೆಯೊಳಗೆ ಬರುತ್ತಿದ್ದುದು ಮಾಮೂಲು. ಪರೀಕ್ಷೆಗೆಂದು ಓದಲು ನಮಗೆ ಒಂದು ತಿಂಗಳು ರಜೆ ಕೊಡುತ್ತಿದ್ದರಲ್ಲ, ಆಗ ಉಪ್ಪರಿಗೆಯಲ್ಲಿ ಕುರ್ಚಿ ಹಾಕಿಕೊಂಡು ಓದುತ್ತಾ ಕೂರುವುದು ನನ್ನ ಅಭ್ಯಾಸ.
ಆ ಜಾಗದ ಪಕ್ಕದಲ್ಲಿ ಒಂದು ಪುಟ್ಟ ಕಿಟಕಿ. ಅಲ್ಲೇನೋ ಸರಿದಂತಾಯಿತು. ಏನೆಂದು ಅತ್ತ ನೋಡಿದರೆ, ನಾಗರಹಾವು! ‘ಅಯ್ಯೋ ಇಲ್ಲಿಗೆ ಹಾವು ಬಂದಿದೆ’ ಎಂದು ಕೂಗಿದರೆ, ‘ಅದು ನಿನಗೇನೂ ಮಾಡೊಲ್ಲ, ನಿನ್ನ ಪಾಡಿಗೆ ನೀನು ಓದಿಕೊ’ ಎನ್ನುತ್ತಿದ್ದರು ನಮ್ಮ ಅಮ್ಮಮ್ಮ. ನಮ್ಮ ಉಪ್ಪರಿಗೆ ಮಾಡಿನ ಜಂತಿಯ ಸಂದಿಯಲ್ಲಿ ಮನೆ ಮಾಡಿಕೊಂಡಿದ್ದ ಇಲಿಗಳನ್ನು ಹಿಡಿದು ತಿನ್ನಲು ಆ ನಾಗರಹಾವು ಬಂದಿತ್ತು; ಈ ರೀತಿ ಅವು ಓಡಾಡುವುದು ಮಾಮೂಲು ಎಂಬುದೇ ನಮ್ಮ ಹಿರಿಯರ ಅಭಿಪ್ರಾಯ.
ಹೀಗೆ ಹಲವು ಸಂದರ್ಭಗಳಲ್ಲಿ ಮನೆಯೊಳಗೆ, ಮನೆಯ ಸರಹದ್ದಿನಲ್ಲಿ ನಾಗರಹಾವುಗಳು ಓಡಾಡುವುದು ನಮ್ಮ ಬಾಲ್ಯದ ದಿನಚರಿಯ ಭಾಗವೇ ಆಗಿತ್ತು. ಒಂದು ಬಾರಿ, ಚಾವಣಿಯ ಮೇಲೆ ಬಂದಿದ್ದ ನಾಗರಹಾವು ನಿಧಾನವಾಗಿ ಅತ್ತಿತ್ತ ಸರಿದು, ಅಲ್ಲೇ ಒಂದು ವಯರಿನ ಮೇಲೆ ಇದ್ದ ಸೂರಕ್ಕಿಯ ಗೂಡಿನತ್ತ ಧಾವಿಸಿತು!
ಪಾಪ, ಮೊಟ್ಟೆ ಇಟ್ಟಿದ್ದವೋ ಏನೋ, ಎರಡು ಸೂರಕ್ಕಿಗಳು ಆ ಹಾವನ್ನು ನೋಡುತ್ತಾ, ಗೂಡಿನ ಬಳಿ ಆರ್ತನಾದ ಮಾಡುವಂತೆ ಕೂಗುತ್ತಿದ್ದವು. ಸೂರಕ್ಕಿ ಗೂಡಿನ ಬಳಿ ಬಂದ ಆ ಹಾವಿನ ವರ್ತನೆ, ಅದಕ್ಕೆ ಪ್ರತಿಯಾಗಿ ಸೂರಕ್ಕಿಗಳು ಕೂಗಿದ ರೀತಿ, ನಂತರ ಆ ಗೂಡನ್ನೇ ಅವು ಬಿಟ್ಟು ಹೋದ ಪರಿ, ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.
ಈ ರೀತಿ ಒಂದು ನಾಗರಹಾವು, ಆಗಾಗ ನಮ್ಮ ಮನೆಯ ಮೇಲಕ್ಕೇರಿ, ಇಲಿಗಳನ್ನು ಹುಡುಕುತ್ತಾ ಓಡಾಡುತ್ತಿತ್ತು. ಪ್ರತಿ ಬೇಸಗೆಯಲ್ಲಿ 2-3 ಬಾರಿಯಾದರೂ ಹಾವಿನ ಗೃಹಸಂಚಾರ ಇರುತ್ತಿತ್ತು. ಊರಿನವರು ಯಾವುದೇ ಕಾರಣಕ್ಕೂ ನಾಗರ ಹಾವನ್ನು ಹೊಡೆಯುತ್ತಿರಲಿಲ್ಲವಾದ್ದರಿಂದ, ನಮ್ಮ ಹಳ್ಳಿ ಅವುಗಳ ಸಾಮ್ರಾಜ್ಯವಾಗಿತ್ತು ಎನ್ನಬಹುದು.
ಆ ಹಾವುಗಳನ್ನು ಪೂಜಿಸುತ್ತಿದ್ದ ಹಳ್ಳಿಯವರು, ಅವುಗಳಿಗೆ ರಾಜಮರ್ಯಾದೆ ನೀಡುತ್ತಿದ್ದುದಂತೂ ನಿಜ. ಮನೆಯ ಬಳಿ ಸುಳಿಯುವ ನಾಗರಹಾವನ್ನು, ಮನುಷ್ಯರ ರೀತಿ ಮಾತನಾಡಿಸುತ್ತಾ, ‘ನೀನು ಎಂತಕೆ ಇಲ್ಲಿಗೆಲ್ಲಾ ಬರುವುದು? ಮಕ್ಕಳು-ಮರಿ ಓಡಾಡುವ ಜಾಗ ಇದು. ನಿನ್ನ ದಾರಿ ಹಿಡಿದು ಕೊಂಡು ಹೋಗು’ ಎಂದು ಕೈ ತೋರಿಸಿ, ಕೆಲವು ಬಾರಿ ನಮಸ್ಕರಿಸುತ್ತಿದ್ದರು. ಸ್ವಲ್ಪ ಸಮಯದ ಬಳಿಕ ನಾಗರಹಾವು ತನ್ನ ದಾರಿ ಹಿಡಿದು ಹೋಗುತ್ತಿತ್ತು!
ಅದಕ್ಕೆ ಮನುಷ್ಯರ ದನಿ ಅರ್ಥ ವಾಗುವ ಸಾಧ್ಯತೆ ಇಲ್ಲವಾದರೂ, ಅಮಾಯಕ ಹಳ್ಳಿಗರು, ಅಂಥ ತಮ್ಮ ಮಾತಿನಿಂದ ಅದನ್ನು ದೂರ ಕಳಿಸಬಹುದು ಎಂದು ನಿಜಕ್ಕೂ ನಂಬಿದ್ದರು. ಮನೆಯ ತುಸು ದೂರದಲ್ಲಿರುವ ನಾಗರ ಬನದಲ್ಲಿ, ನಾಗನ ಕಲ್ಲನ್ನು ಪೂಜಿಸಿ, ತನು ಹಾಕುವ ಪದ್ಧತಿಯೂ ನಮ್ಮ ಹಳ್ಳಿಯಲ್ಲಿತ್ತು.
ನಮ್ಮ ಮನೆಗೆ ತುಸು ದೂರದಲ್ಲಿದ್ದ ಒಂದು ನಾಗರ ಬನದಲ್ಲಿ ಇಂಥ ಪೂಜೆ ಇತ್ತು. ಅದರಾಚೆ ಹಕ್ಕಲು, ಕಾಡು; ಅಲ್ಲೊಂದು ‘ಕಾಡ್ಯನ ಮನೆ’ ಇತ್ತು. ಅದಕ್ಕೆ ನಿಯತವಾಗಿ ಪೂಜೆ ಇಲ್ಲದಿದ್ದರೂ, ಅದಕ್ಕೆ ಸಂಬಂಽಸಿದ ‘ಒಕ್ಕಲು’, ವರ್ಷ ಕ್ಕೊಮ್ಮೆಯೋ, ಬೇರಾವುದೋ ಸಂದರ್ಭದಲ್ಲೋ ಬಂದು ಅಲ್ಲಿ ಪೂಜೆ ಮಾಡುತ್ತಿದ್ದುದನ್ನು ಕಾಣಬಹುದಿತ್ತು.
ನಾಗರಹಾವು ಮತ್ತು ಕಾಳಿಂಗ ಸರ್ಪ ಎರಡೂ ಪೂಜ್ಯ ಎಂಬ ಭಾವನೆ ಇರುವ ಮಲೆನಾಡು ಮತ್ತು ಕರಾವಳಿಯ ಬದುಕಿನಲ್ಲಿ, ಆ ಉರಗಗಳಿಗೆ ವಿಶಿಷ್ಟ ಸ್ಥಾನ ಇರುವುದಂತೂ ಖಚಿತ. ಇಂಥ ಸಂದರ್ಭ ದಲ್ಲಿ, ಯಾರಾದರೂ ಕಾಳಿಂಗ ಸರ್ಪಗಳನ್ನು ವಾಣಿಜ್ಯಕ ಉದ್ದೇಶಕ್ಕೆ ಬಳಸುತ್ತಿದ್ದಾರೆಂದರೆ, ಅಥವಾ ಕಾನೂನುಬಾಹಿರವಾಗಿ ಫೊಟೋ ಶೂಟ್‌ಗೆ ಬಳಸುತ್ತಿದ್ದಾರೆ ಎಂಬ ವಿಚಾರ ನಿಜವಾಗಿದ್ದಲ್ಲಿ, ಅದು ನಿಜಕ್ಕೂ ಖಂಡನಾರ್ಹ.
 
            