ತಿಳಿರು ತೋರಣ
“ಅರಸು ಪವಡಿಪ ತೂಗುಮಂಚದ| ಸರಪಳಿಯ ಬಳಿವಿಡಿದು ಪಟುಭೀ| ಕರವಿಷೋರಗವಾ ಗಳೊಂದುರವಣಿಸಿ ಹರಿತಂದು..." ಎಂದು ಬಸವಪುರಾಣದ ಪದ್ಯವೊಂದರಲ್ಲಿ ರೋಮಾಂಚಕಾರಿ ಚಿತ್ರಣ ಬರುತ್ತದೆ. ಹಾಂ! ಬಸವಪುರಾಣ ಎಂಬ ಪದಪುಂಜವನ್ನು ಗಮನಿಸಿದೊಡನೆ ಗಾಬರಿಗೊಳ್ಳ ಬೇಡಿ! ಪ್ರಸಕ್ತ ಕರ್ನಾಟಕದಲ್ಲಿ ಧಗಧಗ ಹೊತ್ತಿ ಉರಿಯುತ್ತಿರುವ ‘ಬಸವ’ ಪ್ರಕರಣಕ್ಕೂ ಇದಕ್ಕೂ (ಅಂದರೆ ನಾನಿಲ್ಲಿ ಬಸವಪುರಾಣವನ್ನು ಸಾಂದರ್ಭಿಕವಾಗಿ ಉಲ್ಲೇಖಿಸಿರುವುದಕ್ಕೂ) ಏನೇನೂ ಸಂಬಂಧವಿಲ್ಲ.
ನನಗದರಲ್ಲಿ ಆಸಕ್ತಿಯಂತೂ ಮೊದಲೇ ಇಲ್ಲ. ಇಲ್ಲಿರುವ ಬಸವಪುರಾಣವೇನೋ ಬಸವಣ್ಣನ ಬಗೆಗಿನದೇ ಹೌದಾದರೂ ಯಾವುದೇ ರೀತಿಯಲ್ಲಿ ಅವಹೇಳನಕ್ಕಾಗಲಿ ಅತಿಯಾದ ವೈಭವೀಕರಣ ಕ್ಕಾಗಲಿ, ಸಮರ್ಥನೆ ಗಾಗಲಿ ನಿರಾಕರಣಕ್ಕಾಗಲಿ, ಬಳಸಲಿಕ್ಕೆ ಹೊರಟಿರುವುದಲ್ಲ. ಇದೇನಿದ್ದರೂ ಟಿಪಿಕಲ್ ತಿಳಿರುತೋರಣ ಧಾಟಿಯ ಪೀಠಿಕೆ.
ನಿಜವಾಗಿ ಪ್ರತಿವಾರದ ಅಂಕಣ ಹೇಗೆ ರೂಪುಗೊಳ್ಳುತ್ತದೆಂದು ಮತ್ತೊಮ್ಮೆ ಸೋದಾಹರಣವಾಗಿ ವಿವರಿಸುವ ಒಂದು ಪ್ರಯತ್ನ ಅಷ್ಟೇ. “ಅಂಕಣ ಬರೆಯಲಿಕ್ಕೆ ನಿಮಗೆ ವಿಷಯ ಎಲ್ಲಿಂದ ಹೊಳೆಯುತ್ತದೆ?" ನಾನು ಸಾವಿರಾರು ಜನರಿಂದ ಸಾವಿರಾರು ಬಾರಿ ಎದುರಿಸಿರುವ ಪ್ರಶ್ನೆಯಿದು. ಈ ವಾರದ ‘ಸರಪಳಿ’ ಎಂಬ ಟಾಪಿಕ್ ನನಗೆ ಹೊಳೆದದ್ದು ಇತ್ತೀಚಿನ ಒಂದು ರೈಲು ಪ್ರಯಾಣದ ವೇಳೆ ‘TO STOP TRAIN PULL CHAIN’ ಫಲಕವನ್ನು ಓದಿದಾಗ. ರೈಲುಗಳಲ್ಲಿ ಅಂತಹ ಫಲಕ ಹೊಸತೇನಲ್ಲ.
ಇದನ್ನೂ ಓದಿ: Srivathsa Joshi Column: ಜಾಲೀಮನೆ ವೆಂಕಣ್ಣನ ಆರ್ಟ್ ಗ್ಯಾಲರಿ ಅಮೆರಿಕದಲ್ಲಿದ್ದಿದ್ರೆ !
ಈ ಹಿಂದೆ ನೂರಾರು ಬಾರಿ ನೋಡಿರುವುದೇ. ಅಷ್ಟೇ ಅಲ್ಲ, ‘ರೈಲು ಪ್ರವಾಸದ ಕನಸು’ ಎಂಬೊಂದು ಮಕ್ಕಳ ಪದ್ಯದಲ್ಲಿ, ಮುಂಡಾಜೆ ರಾಮಚಂದ್ರ ಭಟ್ಟರು ಬರೆದಿದ್ದರಲ್ಲಿ, ರೈಲಿನೊಳಗಿನ ಆ ಸರಪಳಿಯಿಂದಲೇ ಕಥಾನಕಕ್ಕೆ ಬಿಗ್ ಟ್ವಿಸ್ಟ್. “ನೋಡಿದೆ ಸುತ್ತಲು ಬೇಸರವಾಯ್ತು| ಮೇಲ್ಗಡೆ ಒಂದು ಸರಪಳಿಯಿತ್ತು|| ಅಕ್ಷರವೇನೋ ಬರೆದಿತ್ತು| ಎಳೆಯಿರಿ ಸರಪಳಿ ಎಂದಿತ್ತು|| ಕೂತಲ್ಲಿಂದ ಬೇಗನೆ ಎದ್ದೆ| ತೂಗುವ ಸರಪಳಿಯನು ನಾನೆಳೆದೆ|| ಕುಳಿತಿದ್ದಾ ಜನ ನನ್ನನೆ ನೋಡಲು| ಬಂಡಿಯು ಒಂದೇ ಬಾರಿಗೆ ನಿಲ್ಲಲು|| ಆಗಿನ ಮೋಜನು ಕೇಳಣ್ಣ| ಬಲು ಹೆದರಿಕೆ ತಾನಾಯ್ತಣ್ಣ|| ಟೊಣಪ್ಪ ನೊಬ್ಬ ನನ್ನೆಡೆ ಬಂದ| ಸರಪಳಿಯೇತಕೆ ಎಳೆದೆ? ಎಂದ|| ಅವನಾ ಕರಿ ಉಡುಪನು ನಾ ನೋಡಿ| ಅಮ್ಮಾ ಎಂದೆನು ಭಯದಿಂ ಕೂಡಿ" ಎಂಬ ಸಾಲುಗಳಲ್ಲಿ ಕಣ್ಣಿಗೆ ಕಟ್ಟುವಂಥ ವರ್ಣನೆ. ತುಂಟ ಹುಡುಗ ಕನಸಿನಲ್ಲಿ ಒಬ್ಬಂಟಿಯಾಗಿ ರೈಲನ್ನೇರಿ ಮುಂಬೈಗೆ ಹೊರಟಿರುತ್ತಾನೆ.
ಒಂದಷ್ಟು ಹೊತ್ತು ರೈಲು ಹಾದಿಯ ಅಕ್ಕಪಕ್ಕದ ದೃಶ್ಯಗಳನ್ನು ಸವಿಯುತ್ತಾನೆ. ಆಮೇಲೆ ಬೋರ್ ಎನಿಸಿದಾಗ ಅಲ್ಲೇ ಮೇಲ್ಗಡೆ ನೇತಾಡುತ್ತಿದ್ದ ಸರಪಳಿಯತ್ತ ಅವನ ಗಮನ ಹರಿಯುತ್ತದೆ. ‘ಸರಪಳಿ ಎಳೆಯಿರಿ’ ಎಂದು ಬರೆದಿದ್ದನ್ನೋದಿ ಎಳೆದೇ ಬಿಡುತ್ತಾನೆ. ರೈಲು ನಿಲ್ಲುತ್ತದೆ. ಟಿ.ಸಿ ಬಂದು ಗದರಿಸುತ್ತಾನೆ. ಹುಡುಗ ಭಯದಿಂದ ಅಮ್ಮಾ ಎಂದು ಚೀರುತ್ತಾನೆ. ಕನಸಿನಿಂದ ಹೊರಬರುತ್ತಾನೆ. ಕೋಳಿ ಕೂಗುತ್ತದೆ. ಹುಡುಗನ ನಿದ್ದೆಯೂ ಮುಗಿಯುತ್ತದೆ, ಪದ್ಯವೂ ಮುಗಿಯುತ್ತದೆ.
ರೈಲಿನಲ್ಲಿ TO STOP TRAIN PULL CHAIN ಫಲಕ ನೋಡಿದಾಗೆಲ್ಲ ನನಗೆ ಆ ರೈಲುಪ್ರವಾಸದ ಕನಸಿನ ಪದ್ಯವೇ ನೆನಪಾಗುವುದು. ಆದರೆ ಮೊನ್ನೆ ಮಾತ್ರ ಬೇರೊಂದು ಆಲೋಚನೆ ಹೊಳೆಯಿತು. ಸರಪಳಿ ಎಳೆದರೆ ರೈಲು ನಿಲ್ಲುತ್ತದಂತೆ; ಸರಪಳಿ ಎಂಬ ವಿಷಯವನ್ನೇ ಎಳೆದರೆ? ತಿಳಿರುತೋರಣ ಅಂಕಣದಲ್ಲಿ ಒಂದು ಅಕ್ಷರರೈಲು ಹೊರಡಿಸಬಹುದಲ್ವಾ! ಎಂದು. ಸರಿ, ‘ಸರಪಳಿ’ ಎಂಬ ವಿಷಯವೇನೋ ಸಿಕ್ಕಿತು.
ಅಂಕಣದ ಮೊದಲ ಪ್ಯಾರಗ್ರಾಫನ್ನು ಅ ಅಕ್ಷರದಿಂದ ಆರಂಭಿಸಲಿಕ್ಕೆ ಸೂಕ್ತವಾದ ಸರಕು ಸಿಗಬೇಕಲ್ಲ!? ಅದೂ ಸೆರೆಂಡಿಪಿಟಿ ಎಂಬಂತೆ- ಏನನ್ನೋ ಹುಡುಕಲಿಕ್ಕೆ ಹೋದಾಗ ಇನ್ನೇನೋ ಅಮೃತಬಳ್ಳಿಯಂತೆ ಕಾಲಿಗೆ ತೊಡರಿದ್ದು- ಸಿಕ್ಕಿತು. ಸರಪಳಿ ಎಂಬ ಶಬ್ದಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಬೃಹತ್ ನಿಘಂಟುವಿ ನಲ್ಲಿ ಏನೇನೆಲ್ಲ ಅರ್ಥಗಳನ್ನು ವ್ಯಾಖ್ಯಾನವನ್ನು ಕೊಟ್ಟಿದ್ದಾರೆ ಎಂದು ನಾನು ಹುಡುಕಿದ್ದು.
“ಲೋಹದ ಬಳೆಗಳನ್ನು ಜೋಡಿಸಿ ಮಾಡಿದ ಹಗ್ಗದಂತಹ ಸಾಧನ; ಶೃಂಖಲೆ" ಎಂದು ಮೊದಲ ಅರ್ಥ. ಅದರ ಪಕ್ಕದಲ್ಲೇ “ಅರಸು ಪವಡಿಪ ತೂಗುಮಂಚದ ಸರಪಳಿಯ ಬಳಿವಿಡಿದು..." ಪದ್ಯದ ಸಾಲು. ಅದು ಸಾಹಿತ್ಯಿಕವಾಗಿ ‘ಸರಪಳಿ’ ಎಲ್ಲಿ-ಹೇಗೆ ಬಳಕೆಯಾಗಿದೆ ಎಂಬುದಕ್ಕೆ ಉದಾಹರಣೆ.
ಸಾಲಿನ ಪಕ್ಕದಲ್ಲೇ ಆವರಣದೊಳಗೆ ‘(ಬಸಪು. 45-21) ಎಂಬ ಸಂಕೇತ. ಬಸಪು ಎಂದರೆ ಬಸವ ಪುರಾಣ. 45-21 ಎಂದರೆ 45ನೆಯ ಅಧ್ಯಾಯ ಅಥವಾ ಸಂಧಿಯಲ್ಲಿ 21ನೆಯ ಪದ್ಯ. ಬಸವಪುರಾಣ ಗ್ರಂಥ ನನ್ನ ಬಳಿ ಇದೆಯಾ? ನಾನಿದುವರೆಗೆ ಅದನ್ನು ಓದಿದ್ದೀನಾ? ಬಸವನಾಣೆಗೂ ಇಲ್ಲ!
ಆದರೆ archive dot org ಎಂಬ ಅಂತರ್ಜಾಲ ಅಕ್ಷರಾಂಬುಧಿ ಇದೆಯಲ್ಲ, ಅದರಲ್ಲಿದೆ ‘ಭೀಮಕವಿ ವಿರಚಿತ ಬಸವಪುರಾಣ’ ಗ್ರಂಥ. ಶ್ರೀ ಬಾಲಲೀಲಾ ಮಹಾಂತಶಿವಯೋಗೀಶ್ವರ ಗ್ರಂಥಮಾಲೆಯ 70ನೆಯ ಕುಸುಮ. ಅದರ 45ನೆಯ ಸಂಧಿಯೇ ‘ವೇಮನಾರಾಧ್ಯರ ಕಥೆ’. ಅದರ 21ನೇ ಪದ್ಯದಲ್ಲಿವೆ ಮೇಲೆ ಉಲ್ಲೇಖಿಸಿದ ‘ಅರಸು ಪವಡಿಪ... ಸಾಲುಗಳು. ಸರಿ, ಅ ದಿಂದ ಆರಂಭಿಸಲಿಕ್ಕೆ ಒಳ್ಳೆಯದೊಂದು ಪದ್ಯದ ಸಾಲೇನೋ ಸಿಕ್ಕಿತು. ಆದರೆ ಹಳಗನ್ನಡ-ನಡುಗನ್ನಡ ಕಾಲಘಟ್ಟದ ಅದು ನಮಗೆಲ್ಲ ಅರ್ಥವಾಗಬೇಕಲ್ಲ? ಬಸವಪುರಾಣ ಗ್ರಂಥವಿಡೀ ಬರೀ ಷಟ್ಪದಿಗಳಷ್ಟೇ ಇವೆಯೇ ಹೊರತು ಅರ್ಥ ವ್ಯಾಖ್ಯಾನ ಏನೂ ಇಲ್ಲ.
ಚಿಂತೆ ಬೇಡ. ಗೂಗಲ್ ಗುರುಕುಲದಲ್ಲಿ ಅದಕ್ಕೂ ಸಂಪನ್ಮೂಲಗಳಿವೆ! “14ನೆಯ ಶತಮಾನದಲ್ಲಿ ಬಾಳಿದ್ದನೆನ್ನಲಾದ ವೀರಶೈವ ಕವಿ ಭೀಮಕವಿ ರಚಿಸಿದ ಬಸವಪುರಾಣವು 12ನೆಯ ಶತಮಾನದ ಸಮಾಜಸುಧಾರಕ ಬಸವಣ್ಣನವರ ಜೀವನ ಚರಿತ್ರೆ, ಪವಾಡಗಳು ಮತ್ತು ವೀರಶೈವ ಸಿದ್ಧಾಂತ ಗಳನ್ನು ವಿವರಿಸುವ ಮಹತ್ತ್ವವಾದೊಂದು ಪುರಾಣಕಾವ್ಯ.
ತೆಲುಗು ಕವಿ ಪಾಲ್ಕುರಿಕೆ ಸೋಮನಾಥನ ‘ಬಸವಪುರಾಣಮು ಕೃತಿಯನ್ನು ಆಧರಿಸಿದ ಸ್ವತಂತ್ರ ಕನ್ನಡ ರೂಪಾಂತರ. ಬಸವಣ್ಣನವರ ಚರಿತ್ರೆಯ ಜೊತೆಗೆ ಸಮಕಾಲೀನ ಶರಣರ ಹಾಗೂ ಪುರಾತನ ಶಿವಭಕ್ತರ ಭಕ್ತಿ ಮತ್ತು ಪವಾಡಗಳ ಉಪಕಥೆಗಳನ್ನು ರಸವತ್ತಾಗಿ ನಿರೂಪಿಸುತ್ತದೆ..." ಮುಂತಾದ ವಿವರಗಳನ್ನು ಗೂಗಲ್ ಗುರುಕುಲದ ಜೆಮಿನಿ ಟೀಚರ್ ಸಹ ಒದಗಿಸಬಲ್ಲರು. ಅಂತಹದೊಂದು ಕಥೆಯೇ ವೇಮನಾರಾಧ್ಯರ ಕಥೆ.
ವೇಮನಾರಾಧ್ಯರು ಅಪ್ರತಿಮ ಶಿವಭಕ್ತರು ಹಾಗೂ ಆರಾಧ್ಯ ಪರಂಪರೆಯ ಶ್ರೇಷ್ಠ ಗುರುಗಳಾಗಿದ್ದ ವರು. ಅವರು ಶಿವ ಮತ್ತು ಶಿವಭಕ್ತರನ್ನು ಬಿಟ್ಟು ಲೌಕಿಕ ಅಧಿಕಾರ ಹೊಂದಿರುವ ಯಾವುದೇ ರಾಜ-ಮಹಾರಾಜರಿಗೆ ತಲೆಬಾಗುವವರಲ್ಲ ಅಥವಾ ಅವರನ್ನು ಓಲೈಸಿ ಆಶೀರ್ವದಿಸುವವರಲ್ಲ. ಹೀಗಿರಲು ಒಮ್ಮೆ ಆ ಪ್ರದೇಶದ ರಾಜನು ತನ್ನ ಅಧಿಕಾರ ಮತ್ತು ಸಂಪತ್ತಿನ ಅಹಂಕಾರದಿಂದ ವೇಮನಾರಾಧ್ಯರ ಬಳಿಗೆ ಬರುತ್ತಾನೆ.
ತಾನು ರಾಜನೆಂಬ ಗರ್ವದಿಂದ, “ನಾವು ನಮಿಸಿದಾಗ ನೀವು ಸುಮ್ಮನಿದ್ದು ನಮ್ಮನ್ನು ಹರಸದಿರಲು ಕಾರಣವೇನು? ನಮ್ಮನ್ನು ಹರಸಲು ಬೇರೆ ವಿದ್ವಾಂಸರಿಲ್ಲವೇ? ನೀವೇ ಲೋಕಕ್ಕೆ ಗುರುಗಳೇ?" ಎಂದು ಅಹಂಕಾರದ ಮಾತುಗಳನ್ನಾಡುತ್ತಾನೆ. ಶಿವಭಕ್ತರಿಗೆ ಸಿಗಬೇಕಾದ ಗೌರವಕ್ಕಿಂತ ತನ್ನ ರಾಜಪದವಿಯೇ ದೊಡ್ಡದೆಂದು ಭಾವಿಸಿದ ರಾಜನ ಅಹಂಕಾರವನ್ನು ವೇಮನಾರಾಧ್ಯರು ತಿರಸ್ಕರಿಸುತ್ತಾರೆ.
ಶಿವನ ಕೃಪೆಯಿಲ್ಲದೆ ಕೇವಲ ಲೌಕಿಕ ಅಧಿಕಾರದಿಂದ ಯಾರೂ ಶ್ರೇಷ್ಠರಾಗಲು ಸಾಧ್ಯವಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಡುತ್ತಾರೆ. ಕಥೆಯ ಮುಂದುವರಿದ ಭಾಗದಲ್ಲಿ, ರಾಜನ ಅಹಂಕಾರಕ್ಕೆ ತಕ್ಕ ಶಾಸ್ತಿಯಾಗಿ ಅವನು ಸಂಕಷ್ಟಕ್ಕೆ ಸಿಲುಕಿದಾಗ ಕೊನೆಗೆ ತನ್ನ ತಪ್ಪಿನ ಅರಿವಾಗಿ ವೇಮನಾರಾಧ್ಯರ ಪಾದಕ್ಕೆ ಶರಣಾಗುತ್ತಾನೆ.
ರಾಜನು ಸಂಕಷ್ಟದಲ್ಲಿ ಸಿಲುಕುವ ಸನ್ನಿವೇಶವೇ ‘ಅರಸು ಪವಡಿಪ... ಪದ್ಯದಲ್ಲಿ ವರ್ಣನೆಯಾಗಿರು ವುದು. ವೇಮನಾರಾಧ್ಯರ ಭಕ್ತಿಯನ್ನು ಹೀಯಾಳಿಸಿ “ನೀವು ಹೇಳಿದಂತೆ ನಾಳೆಯ ದಿನವೇ ನಾನು ಸತ್ತರೆ, ನೀವೇ ಈ ಲೋಕಕ್ಕೆ ನಿಜವಾದ ಗುರುಗಳೆಂದು ಒಪ್ಪಿಕೊಳ್ಳುತ್ತೇನೆ" ಎಂದು ಸವಾಲು ಹಾಕಿ ರಾಜನು ತನ್ನ ಅರಮನೆಯ ಅಂತಃಪುರಕ್ಕೆ ಬಂದಿರುತ್ತಾನೆ. ತನ್ನ ರಾಣಿಯೊಂದಿಗೆ ಪ್ರೇಮದ ಮಾತುಗಳನ್ನಾಡುತ್ತ ಹೊಸ ಬಗೆಯ ಪ್ರಣಯ ಕ್ರೀಡೆಗಳಲ್ಲಿ ಮಗ್ನನಾಗುತ್ತಾನೆ. ಆ ಬಳಿಕ ದಣಿವಾಗಿ ಇಬ್ಬರೂ ನಿದ್ರೆಗೆ ಜಾರಿರುತ್ತಾರೆ. ರಾಜನು ಗಾಢ ನಿದ್ರೆಯಲ್ಲಿದ್ದಾಗ ಆತ ಮಲಗಿದ್ದ ತೂಗುಮಂಚದ ಸರಪಳಿಯನ್ನು ಹಿಡಿದುಕೊಂಡು ಅತ್ಯಂತ ಭಯಂಕರವಾದ ಹಾಗೂ ತೀಕ್ಷ್ಣ ವಿಷವುಳ್ಳ ಸರ್ಪವೊಂದು ರಭಸದಿಂದ ಹರಿದು ಬರುತ್ತದೆ.
ರಾಜನ ಕೈಯನ್ನು ಕಚ್ಚುತ್ತದೆ. ಹೀಗೆ ರೋಮಾಂಚಕಾರಿ ಕಥೆಯೊಂದು ‘ಸರಪಳಿ’ಯ ಉಲ್ಲೇಖ ದೊಡನೆ ಅಂಕಣಕ್ಕೆ ಒದಗಿಬರುತ್ತದೆ. ಅದು ಒಳ್ಳೆಯ ತಳಪಾಯವಾಯ್ತು. ಇನ್ನು ಕಟ್ಟಡವನ್ನು ಎಬ್ಬಿಸಬೇಕಲ್ಲ? ‘ಸರಪಳಿ’ಯ ವಿಚಾರದಲ್ಲಿ ಅದೇನೂ ಕಷ್ಟಕರವಲ್ಲ. ಸರಪಳಿ ಅಥವಾ ಸಂಕೋಲೆ ನಮ್ಮ ದೈನಂದಿನ ಆಗುಹೋಗುಗಳಲ್ಲಿ ಚಿರಪರಿಚಿತ ವಸ್ತುವೇ. ತೊಟ್ಟಿಲನ್ನು ತೂಗುಹಾಕಿದ ಸರಪಳಿ ಬಹುಶಃ ನಾವೆಲ್ಲ ಜೀವನದಲ್ಲಿ ನೋಡಿದ ಮೊತ್ತಮೊದಲ ಸರಪಳಿ. ಅದಾದ ಮೇಲೆ ನಾಯಿಯನ್ನು, ಕೊಟ್ಟಿಗೆಯಲ್ಲಿ ದನ-ಕರುಗಳನ್ನು ಕಟ್ಟಿದ ಸರಪಳಿ.
ರೈಲುಪ್ರಯಾಣದ ವೇಳೆ ನಮ್ಮ ಸೂಟ್ಕೇಸ್ ನಮ್ಮನ್ನು ಬಿಟ್ಟು ಹೋಗದಂತೆ ಅದನ್ನು ಕೆಳಗಿನ ಬರ್ತ್ನ ಕಾಲುಗಳಿಗೆ ಕಟ್ಟುವ ಸರಪಳಿ. ರೈಲನ್ನು ನಿಲ್ಲಿಸಲು ಉಪಯೋಗಿಸಬಹುದಾದ ಆದರೆ ತುರ್ತು ಅಗತ್ಯವಿಲ್ಲದೆ ಉಪಯೋಗಿಸಬಾರದ ಸರಪಳಿ. ಹಳೆಯ ಕಾಲದ ಪಾಯಿಖಾನೆಗಳಲ್ಲಿ ನೀರನ್ನು ಫ್ಲಷ್ ಮಾಡಲು ಸರಪಳಿ.
ಟಿ.ವಿ ಮಹಾಭಾರತದಲ್ಲಿ ವಸುದೇವ-ದೇವಕಿಯರನ್ನು ಕಂಸನು ಕಟ್ಟಿಹಾಕಿದ ಸರಪಳಿ... ಹೀಗೆ ವಿವಿಧ ಸರಪಳಿಗಳನ್ನು ನೋಡಿರುತ್ತೇವೆ ನಾವು. ಇವೆಲ್ಲ ಭೌತಿಕ ಸರಪಳಿಗಳು. ಇನ್ನೊಂದಿದೆ- ಭಾವನಾತ್ಮಕ ಸರಪಳಿ. ಸ್ವಾತಂತ್ರ್ಯಪೂರ್ವದಲ್ಲಿ ನಾವು ಭಾರತೀಯರು ಬ್ರಿಟಿಷರ ದಾಸ್ಯಶೃಂಖಲೆಯಲ್ಲಿದ್ದೆವು ಎಂದು ಹೇಳುವಲ್ಲಿ ಬರುವ ‘ಶೃಂಖಲಾ’ ಸಂಸ್ಕೃತ ಪದದ ಕನ್ನಡ ರೂಪವೇ ಸಂಕೋಲೆ. ದಾಸ್ಯ, ಗುಲಾಮಗಿರಿಯ ಸಂಕೋಲೆ ಕಠಿನದ್ದಾದರೆ ಸ್ನೇಹ-ಪ್ರೇಮದ ಸಂಕೋಲೆ ಆಪ್ಯಾಯಮಾನವಾದುದು. ಶುಭಮಂಗಳ ಚಿತ್ರದ ಶೀರ್ಷಿಕೆಗೀತೆಯ ‘ಬದುಕೇ ಸುಮಧುರ ಸ್ನೇಹ ಸಂಕೋಲೆ...’ ಸಾಲನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಭೌತಿಕ, ಭಾವನಾತ್ಮಕ ಸರಪಳಿಗಳ ಹಾಗೆಯೇ ಜೈವಿಕ ಸರಪಳಿ, ಸರಬರಾಜು ಸರಪಳಿ (ಸಪ್ಲೈ ಚೈನ್), ಆಹಾರ ಸರಪಳಿಗಳ ಬಗ್ಗೆಯೂ ನಾವೆಲ್ಲ ಕೇಳಿಯೇಇರುತ್ತೇವೆ. ಮತ್ತೆ ಸೋಷಿಯಲ್ ಮೀಡಿಯಾದಲ್ಲಿ -ರ್ವರ್ಡೆಡ್ ಮೆಸೇಜುಗಳ ಮತ್ತು ಇಮೇಲ್ಗಳ ಸರಪಳಿ. “ಇದನ್ನು ಓದಿಮುಗಿಸಿದ ಹತ್ತು ಸೆಕೆಂಡುಗಳೊಳಗೆ ಕನಿಷ್ಠ ಹತ್ತು ಮಂದಿಗೆ ಮತ್ತು ಐದು ಗ್ರೂಪುಗಳಿಗೆ ಫಾರ್ವರ್ಡಿಸಿದರೆ ಬಚಾವಾದ್ರಿ.
ಇಲ್ಲವಾದರೆ ಈ ಜನ್ಮದಲ್ಲಿ ಅನುಭವಿಸಿ ಮುಗಿಯದಂಥ ಕಷ್ಟಕೋಟಲೆಗಳು ಬಂದೆರಗುತ್ತವೆ, ಘನಘೋರ ನರಕವಾಸವು ನಿಮ್ಮದಾಗುತ್ತದೆ" ಎಂದು ಧಮ್ಕಿ ಬೇರೆ. ಮತ್ತೆ ಅದನ್ನೆಲ್ಲ ನಂಬು ವವರೂ ಇದ್ದಾರೆ! ಮತ್ತೊಂದು ನಮೂನೆಯ ಸರಪಳಿ ಇದೆ, ನನ್ನಂತೆ ಪದವಿನೋದದ ಹುಚ್ಚಿನವರಿಗೆ ಮಾತ್ರ ಅರ್ಥವಾಗುವಂಥದ್ದು. ಪದಗಳನ್ನು ಸರಪಳಿಯಂತೆ ಜೋಡಿಸುವುದು. ಒಂದೆರಡು ಉದಾಹರಣೆ ಕೊಡುತ್ತೇನೆ.
ಕನ್ನಡ ಚಲನಚಿತ್ರಗಳ ಹೆಸರುಗಳನ್ನು ಸರಪಳಿಯಾಗಿ ಜೋಡಿಸಿ ವಾಕ್ಯ ಮಾಡಿದರೆ- ‘ನಮ್ಮ ಮನೆ ಬೆಳಗಿದ ಸೊಸೆ ತಂದ ಸೌಭಾಗ್ಯ ಜ್ಯೋತಿ’; ‘ದೂರದ ಬೆಟ್ಟದ ಹುಲಿಯ ಹಾಲಿನ ಮೇವು’; ‘ನವ ಜೀವನ ಚೈತ್ರದ ಪ್ರೇಮಾಂಜಲಿ’. ಇದೇ ಟೆಕ್ನಿಕನ್ನು ಬಳಸಿ, ಭಾರತದ ನಾಲ್ಕು ಪ್ರಮುಖ ಆಂಗ್ಲ ದಿನಪತ್ರಿಕೆಗಳನ್ನು ಹೆಸರಿಸಿ ಎಂದು ಕೇಳಿದರೆ ಸರಪಳಿಯುತ್ತರ- ‘ದ ಹಿಂದುಸ್ತಾನ್ ಟೈಮ್ಸ್ ಆಫ್ ಇಂಡಿಯನ್ ಎಕ್ಸ್ಪ್ರೆಸ್’! ಇಂತಹ ಸರಪಳಿಗಳನ್ನು ನೀವೂ ಕಟ್ಟಬಹುದು. ಅಥವಾ, ‘ಸಂಕೋಲಾ ಹಲವಾರುಚಿಕರಪತ್ರಮೈತ್ರಿ ಮೂರ್ತಿ’ ರೀತಿಯ ಸರಪಳಿಯನ್ನು ಪ್ರತ್ಯೇಕ ಕೊಂಡಿಗಳಾಗಿಸ ಬಹುದು.
“ಸುಹಾಸಮೀರಮೇಶಂಕರಂಗಣೇಶ ಶಾಂಕರುಣಾಕರವಿನೋದರ್ಶನರಹರಿಶಿಕೇಶಶಿಧರಜನೀಶ" ಎಂಬ ಅಕ್ಷರಸಪರಳಿಯಲ್ಲಿ ಕಟ್ಟಿಹಾಕಿರುವ ಹದಿನೈದು ಹುಡುಗರನ್ನು ಗುರುತಿಸಿ ಬಿಡಿಸಿಕೊಂಡು ತರಬಹುದು. “ಚಿತ್ಕಲಾವತಿರುಮಲಾಂ ಬನಶಂಕರಿತುಲಸೀತಾದೇವಿಮಲಾಲತಾಂಗಿರಿಜಾಹ್ನವಿಭಾರ್ಗ ವಿನುತಾ" ಎಂಬ ಅಕ್ಷರ ಸರಪಳಿಯಲ್ಲಿ ಅಡಗಿರುವ ಹದಿನೈದು ಸುರಸುಂದರಿ ಹುಡುಗಿಯರಿಗೆ ಅವರನ್ನು ಜೋಡಿಯಾಗಿಸಿ ಮದುವೆ ಮಾಡಬಹುದು! ಹಾಗೆಯೇ ಒಂದು ಸರಪಳಿ ಜಾಣ್ಮೆಲೆಕ್ಕವೂ ಇದೆ.
ಬಿಡಿಸಲಿಕ್ಕಾಗುತ್ತದೋ ನೋಡಿ. ರಂಗಪ್ಪನ ಬಳಿ ಏಳು ಕೊಂಡಿಗಳಿರುವ ಒಂದು ಚಿನ್ನದ ಸರಪಳಿ ಇದೆ. ಬ್ರೇಸ್ಲೆಟ್ನ ಒಂದು ತುಣುಕು ಅಂತಿಟ್ಕೊಳ್ಳಿ. ಅದರಿಂದ ಒಂದೊಂದೇ ಕೊಂಡಿಯನ್ನು ಅವನು ವರ್ಷಕ್ಕೊಂದರಂತೆ ಏಳು ವರ್ಷಗಳೊಳಗೆ ಗಿರವಿಯಂಗಡಿಯವನಿಗೆ ಪಾವತಿಸಬೇಕಾಗಿದೆ. ಷರತ್ತೇನೆಂದರೆ ಸರಪಳಿಯನ್ನು ಏಳು ಪ್ರತ್ಯೇಕ ಕೊಂಡಿಗಳಾಗಿ ಮುರಿಯುವಂತಿಲ್ಲ. ಆದಷ್ಟು ಕಡಿಮೆ ಸಂಖ್ಯೆಯ ತುಂಡುಗಳನ್ನಾಗಿ ಮಾಡಬೇಕು.
ಗಿರವಿಯಂಗಡಿಯವನಿಗೆ ಆಯಾ ವರ್ಷಗಳಿಗೆ ಒಟ್ಟು ಎಷ್ಟು ಕೊಂಡಿಗಳನ್ನು ಪಾವತಿಸಿರಬೇಕೋ ಅಷ್ಟನ್ನು ಮಾತ್ರ ಪಾವತಿಸಿರಬೇಕು. ಹೆಚ್ಚಿಲ್ಲ ಕಡಿಮೆಯಿಲ್ಲ. ಹಾಗಾದರೆ ರಂಗಪ್ಪನು ಆ ಸರಪಳಿಯನ್ನು ಎಷ್ಟು ತುಂಡುಗಳಾಗಿ ಮುರಿಯಬೇಕು? ಏಳು ವರ್ಷಗಳಲ್ಲಿ ಗಿರವಿಯಂಗಡಿ ಯವನಿಗೆ ಹೇಗೆ ಪಾವತಿ ಮಾಡಬೇಕು? ಉತ್ತರವನ್ನೂ ಹೇಳಿಬಿಡುತ್ತೇನೆ: ರಂಗಪ್ಪನು ಚಿನ್ನದ ಸರಪಳಿಯನ್ನು ತಲಾ 1, 2, ಮತ್ತು 4 ಕೊಂಡಿಗಳಿರುವ ಒಟ್ಟು ಮೂರು ತುಂಡುಗಳಾಗಿಸಬೇಕು.
ಮೊದಲ ವರ್ಷ 1 ಕೊಂಡಿಯ ತುಂಡನ್ನು ಗಿರವಿಯಂಗಡಿಯವನಿಗೆ ಪಾವತಿಸಬೇಕು. ಎರಡನೇ ವರ್ಷ 2 ಕೊಂಡಿಗಳಿರುವ ತುಂಡನ್ನು ಪಾವತಿಸಿ 1 ಕೊಂಡಿಯ ತುಂಡನ್ನು ಹಿಂಪಡೆಯಬೇಕು. ಮೂರನೇ ವರ್ಷ ಅದನ್ನು ಪಾವತಿಸಬೇಕು. ನಾಲ್ಕನೇ ವರ್ಷ 4 ಕೊಂಡಿಗಳ ತುಂಡನ್ನು ಪಾವತಿಸಿ 1 ಮತ್ತು 2ರದ್ದನ್ನು ಹಿಂಪಡೆಯಬೇಕು.
ಐದನೆಯ ವರ್ಷ ಮತ್ತೆ 1, ಆರನೆಯ ವರ್ಷ 2 ಕೊಟ್ಟು 1 ವಾಪಸ್, ಏಳನೆಯ ವರ್ಷ ಆ 1ನ್ನು ಪಾವತಿಸಿದರೆ ಲೆಕ್ಕಾಚಾರ ಚುಕ್ತಾ. ರಂಗಪ್ಪ ‘ಥಿಂಕ್ ಔಟ್ಸೈಡ್ ದ ಬಾಕ್ಸ್ ಮಾಡಿದ್ದರಿಂದ ಷರತ್ತನ್ನು ಪಾಲಿಸಿದಂತಾಗುತ್ತದೆ. ಥಿಂಕ್ ಔಟ್ಸೈಡ್ ದ ಬಾಕ್ಸ್ ಎಂದಾಗ ನನಗೆ ಇನ್ನೂ ಒಂದು ಸರಪಳಿ ಅಥವಾ ಸಂಕೋಲೆ ನೆನಪಾಗುತ್ತಿದೆ.
ಹಿರಿಯ ಅಮೆರಿಕನ್ನಡಿಗ ಅಣ್ಣಾಪುರ ಶಿವಕುಮಾರ ಅವರು ಶಿಕಾಗೋದಲ್ಲಿ ವಿದ್ಯಾರಣ್ಯ ಕನ್ನಡ ಕೂಟದ ‘ಡಿಂಡಿಮ’ ವಾರ್ತಾಪತ್ರದ ಸಂಪಾದಕರಾಗಿದ್ದಾಗ ಓದುಗರಿಂದ ಬೇರೆಬೇರೆ ಚಟುವಟಿಕೆ ಗಳನ್ನು ಮಾಡಿಸುತ್ತಿದ್ದರು. ಮೆದುಳಿಗೆ ಮೇವು ಒದಗಿಸುತ್ತಿದ್ದರು. ಒಮ್ಮೆ “ಸಂಕೋಲೆಯೊಳಗಿಂದ ಸಿಡಿದೆದ್ದು ಬಾ!" ಎಂಬ ಸಾಲನ್ನು ಕೊಟ್ಟು ಅದರಿಂದ ಕೊನೆಗೊಳ್ಳುವ ಕವಿತೆ ರಚಿಸುವಂತೆ ಓದುಗರಿಗೆ ಪಂಥಾಹ್ವಾನ ನೀಡಿದ್ದರು.
ಕವಿತೆ ರಚನೆಯ ಖಯಾಲಿ ಅಥವಾ ಪ್ರತಿಭೆ ಇಲ್ಲದ ನನ್ನನ್ನೂ ಒಂದು ಪ್ರಯತ್ನ ಮಾಡುವಂತೆ ಉತ್ತೇಜಿಸಿದ್ದರು. ಅವರು ನಿರೀಕ್ಷಿಸಿದ್ದಾದರೋ ಭಾವನಾತ್ಮಕ ಸಂಕೋಲೆಗಳನ್ನು ಮುರಿದು ಹೊರಗೆ ಬರಬೇಕು ಎಂಬಂಥ ಸಂದೇಶವುಳ್ಳ ಕವಿತೆಗಳನ್ನು. ನಾನಂತೂ ಅಲ್ಲೂ ಪದವಿನೋದವನ್ನೇ ಪ್ರಯೋಗಿಸಿದೆ.
ನನ್ನ ಕವಿತೆ ಹೀಗಿತ್ತು: “ಶಿಸ್ತುಸಂಯಮ ಕಟ್ಟುನಿಟ್ಟಿನ ವ್ರತ| ಉಪವಾಸ ಸತ್ಯಾಗ್ರಹ ಅನವರತ| ಎಷ್ಟು ದಿನ ಹೀಗೇ ತಡಕೊಳ್ಳುವುದು| ಕೊನೆಗೊಮ್ಮೆ ರೋಷ ಕುದಿಯಿತು| ಬಾಪುವಿಗೇ ಎದುರು ಮಾತಾಡಿದರು| ಸಂಕೋಲೆಯೊಳಗಿಂದ ಸಿಡಿದೆದ್ದು ಬಾ!" ಇದರ ಕೊನೆಯ ಸಾಲು ಬಾ ಎಂದು ಕ್ರಿಯಾಪದದಿಂದಲ್ಲದೆ ಗಾಂಧಿಪತ್ನಿ ಕಸ್ತೂರಬಾ ಅವರ ಹ್ರಸ್ವ ನಾಮಧೇಯ ‘ಬಾ’ ಎಂದು ಕೊನೆಗೊಂಡಿದೆ.
ಥಿಂಕ್ ಔಟ್ ಸೈಡ್ ದ ಬಾಕ್ಸ್ ಎಂಬಂತೆ ಯೋಚಿಸಿ ನಾನು ಆ ಸಾಲನ್ನು ಹೊಸೆದದ್ದಾಗಿತ್ತು. ಅಣ್ಣಾಪುರ ಶಿವಕುಮಾರ್ ಅದನ್ನು ತುಂಬ ಇಷ್ಟಪಟ್ಟಿದ್ದರು. ಕೊನೆಯಲ್ಲಿ, ಚಂದದಿಂದ ಅಂಕಣ ಬರಹವನ್ನು ಮುಗಿಸಲಿಕ್ಕೆ ಒಂದು ರಸಪ್ರಶ್ನೆ. ಚಂದದಿಂದ ಎಂದಿದ್ದು ಬೇಕಂತಲೇ, ಛಂದದಿಂದ ಎನ್ನಬೇಕಾದಲ್ಲಿ. ಪ್ರಾಥಮಿಕ ಶಾಲೆಯಲ್ಲಿ ಛಂದಸ್ಸಿನ ಮೂಲಭೂತ ಅಂಶಗಳನ್ನು ಕಲಿಯುವಾಗ, ಗುರು-ಲಘು ಮಾತ್ರೆಗಳನ್ನು ಎಣಿಸುತ್ತ ಪದ್ಯದ ಸಾಲುಗಳಿಗೆ ಪ್ರಸ್ತಾರ ಹಾಕುವಾಗ “ಗುರುಲಘು ಮೂರಿರೆ ಮನ ಗಣ; ಗುರುಲಘು ಮೊದಲಲ್ಲಿ ಬರಲು ಭಯ ಗಣ; ಗುರುಲಘು ನಡುವಿರೆ ಜರ ಗಣ; ಗುರುಲಘು ಕೊನೆಯಲ್ಲಿ ಬರಲು ಸತ ಗಣಮಕ್ಕುಂ..." ಎಂಬ ಪದ್ಯವನ್ನೂ ಕಲಿತಿದ್ದು ನಿಮಗೆ ನೆನಪಿರಬಹುದು. ಹಾಗೆಯೇ, ಎಂಟು ಗಣಗಳನ್ನು ತಿಳಿದುಕೊಳ್ಳುವುದಕ್ಕೆ ಇನ್ನೂ ಒಂದು ಸರಳ ಸರಪಳಿ ಸೂತ್ರ ಇದೆ. ಯಾವುದೆಂದು ಹೇಳಬಲ್ಲಿರಾ? ಅದು ನಿಮಗೆ ಇನ್ನೂ ನೆನಪಿದೆಯಾದರೆ ಈ ನವೆಂಬರ್ ಕನ್ನಡ ಮಾಸದಲ್ಲಿ ಕನ್ನಡ ಭಾಷೆಯ ಅರಿವಿನ ಬಗೆಗೆ ನೀವು ತುಸು ಹೆಚ್ಚೇ ಹೆಮ್ಮಪಟ್ಟುಕೊಳ್ಳಬಹುದು. ಸಿರಿಗನ್ನಡಂ ಗೆಲ್ಗೆ