ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Srivathsa Joshi Column: ಜಾಲೀಮನೆ ವೆಂಕಣ್ಣನ ಆರ್ಟ್‌ ಗ್ಯಾಲರಿ ಅಮೆರಿಕದಲ್ಲಿದ್ದಿದ್ರೆ !

ತಿಂಗಳಕಾಲ ನೀರಲ್ಲಿ ನೆನೆಸಿಟ್ಟು ತೊಳೆದರೆ ಎಲೆಯ ನಾರಿನಂಶವೆಲ್ಲ ಹೋಗಿ ಪಾರದರ್ಶಕ ಹಂದರವಷ್ಟೇ ಉಳಿದುಕೊಳ್ಳುತ್ತದೆ. ಅದನ್ನು ಒಣಗಿಸಿ ಅದರ ಮೇಲೆ ಕುಂಚದಿಂದ ಚಿತ್ರ ಬಿಡಿಸುತ್ತೇನೆ" ಎಂಬ ವಿವರಣೆಯಿಂದ ಗೊತ್ತಾಗುತ್ತದೆ ಎಂತಹ ತಾಳ್ಮೆ ತಾದಾತ್ಮ್ಯ ಬೇಕಾಗುತ್ತೆ ಇದಕ್ಕೆಲ್ಲ ಎಂದು. ಅಂದಮಾತ್ರಕ್ಕೇ ಜಾಲಿಮನೆ ವೆಂಕಣ್ಣನೆಂದರೆ ‘ಅರಳಿ ಎಲೆಗಳ ಮೇಲೆ ಕಲೆಯನ್ನು ಅರಳಿಸುವವರು’ ಎಂದು ನಿಮ್ಮ ಊಹೆಯನ್ನು ಸೀಮಿತಗೊಳಿಸಿಬೇಡಿ!

ಜಾಲೀಮನೆ ವೆಂಕಣ್ಣನ ಆರ್ಟ್‌ ಗ್ಯಾಲರಿ ಅಮೆರಿಕದಲ್ಲಿದ್ದಿದ್ರೆ !

-

ತಿಳಿರುತೋರಣ

ಅಶ್ವತ್ಥ ವೃಕ್ಷಕ್ಕೂ ಭಗವದ್ಗೀತೆಗೂ ಅವಿನಾಭಾವ ಸಂಬಂಧ. ಅವಿನಾಶಿಯಾದ ಅಶ್ವತ್ಥ ವೃಕ್ಷ ವೊಂದಿದೆ, ಅದರ ಎಲೆಗಳು ವೇದಮಂತ್ರಗಳಿದ್ದಂತೆ... ಮುಂತಾದ ವಿವರಣೆ ಬರುತ್ತದೆ ಭಗವದ್ಗೀತೆಯ 15ನೆಯ ಅಧ್ಯಾಯದಲ್ಲಿ. ಅಂತಹ ಅಶ್ವತ್ಥ ವೃಕ್ಷದ ಅಂದರೆ ಅರಳಿ ಮರದ ಒಂದೊಂದು ಎಲೆಯ ಮೇಲೆ ಭಗವದ್ಗೀತೆಯ ಒಂದೊಂದು ಶ್ಲೋಕವನ್ನು ಬರೆದು ಸಾವಿರ ಎಲೆಗಳನ್ನು ತೋರಣದಂತೆ ಸಾಲಾಗಿ ಜೋಡಿಸಿ ಒಂದು ಸುಂದರ ಕಲಾಕೃತಿಯಾಗಿಸಿದ್ದಾರೆ ಜಾಲೀಮನೆ ವೆಂಕಣ್ಣ. ಅದು ಅವರ ‘ಸ್ವಸ್ತಿಕ್ ಆರ್ಟ್ ಗ್ಯಾಲರಿ’ಯ ಒಂದು ಚಿಕ್ಕ ಸ್ಯಾಂಪಲ್ ಮಾತ್ರ. ಅಂತಹದೇ ಒಂದು ಅಶ್ವತ್ಥಪರ್ಣಮಾಲೆ ಗೀತಾತೋರಣವನ್ನು ಸೋಂದಾದಲ್ಲಿರುವ ಸ್ವರ್ಣವಲ್ಲಿ ಮಠಕ್ಕೂ ಮಾಡಿಕೊಟ್ಟಿದ್ದಾರಂತೆ.

ಅರಳಿ ಎಲೆಗಳ ಮೇಲೆಯೇ ಮೂಡಿ ಬಂದಿರುವ ಸಾವಿರಾರು ಬೇರೆ ಕಲಾಕೃತಿಗಳೂ ಅವರ ಗ್ಯಾಲರಿಯಲ್ಲಿವೆ. 2000ನೆಯ ಇಸವಿಯಲ್ಲಿ 2000 ಎಲೆಗಳ ಮೇಲೆ ಗಣೇಶ, ಯಕ್ಷಗಾನ, ಪರಿಸರ ರಕ್ಷಣೆ ಮುಂತಾಗಿ ಬೇರೆಬೇರೆ ವಿಷಯಾಧಾರಿತ ಚಿತ್ರಗಳನ್ನು ರಚಿಸಿದ್ದಿದೆ. ಆ ಕಲಾಕೃತಿಗಳನ್ನು ಬಟ್ಟೆಯ ಮೇಲೆ ನೀಟಾಗಿ ಒಂದರ ಪಕ್ಕ ಒಂದು ಜೋಡಿಸಿಟ್ಟಿದ್ದನ್ನು ಹರವಿದರೆ ಸುಮಾರು ಒಂದು ಕಿಲೋಮೀಟರ್‌ನಷ್ಟು ಉದ್ದವಿದೆ! “ಅರಳಿ ಎಲೆಯ ಮೇಲೆ ಚಿತ್ರ ಬಿಡಿಸುವ ಮೊದಲು ಎಲೆಯನ್ನು ಸಂಸ್ಕರಣೆ ಮಾಡಬೇಕಾಗುತ್ತದೆ.

ತಿಂಗಳಕಾಲ ನೀರಲ್ಲಿ ನೆನೆಸಿಟ್ಟು ತೊಳೆದರೆ ಎಲೆಯ ನಾರಿನಂಶವೆಲ್ಲ ಹೋಗಿ ಪಾರದರ್ಶಕ ಹಂದರವಷ್ಟೇ ಉಳಿದುಕೊಳ್ಳುತ್ತದೆ. ಅದನ್ನು ಒಣಗಿಸಿ ಅದರ ಮೇಲೆ ಕುಂಚದಿಂದ ಚಿತ್ರ ಬಿಡಿಸುತ್ತೇನೆ" ಎಂಬ ವಿವರಣೆಯಿಂದ ಗೊತ್ತಾಗುತ್ತದೆ ಎಂತಹ ತಾಳ್ಮೆ ತಾದಾತ್ಮ್ಯ ಬೇಕಾಗುತ್ತೆ ಇದಕ್ಕೆಲ್ಲ ಎಂದು. ಅಂದಮಾತ್ರಕ್ಕೇ ಜಾಲಿಮನೆ ವೆಂಕಣ್ಣನೆಂದರೆ ‘ಅರಳಿ ಎಲೆಗಳ ಮೇಲೆ ಕಲೆಯನ್ನು ಅರಳಿಸುವವರು’ ಎಂದು ನಿಮ್ಮ ಊಹೆಯನ್ನು ಸೀಮಿತಗೊಳಿಸಿಬೇಡಿ!

ನೀವೇನಾದರೂ ಹಾಗೆ ಅಂದುಕೊಂಡರೆ ದೊಡ್ಡ ತಪ್ಪಾಗುತ್ತದೆ. ಅರಳಿ ಎಲೆಗಳ ಕಲಾಕೃತಿಗಳಲ್ಲದೆ ಬೇರೆ ಸಾವಿರಾರು ವಸ್ತುಗಳು, ವಿಷಯಗಳು, ವೈವಿಧ್ಯಗಳು ಅವರ ಸಂಗ್ರಹದಲ್ಲಿವೆ. ಎಲ್ಲವನ್ನೂ ನೋಡಿ ಆಸ್ವಾದಿಸಬೇಕಾದರೆ ಕನಿಷ್ಠ ಒಂದು ಇಡೀ ದಿನ ಅವರ ಆರ್ಟ್ ಗ್ಯಾಲರಿಯನ್ನು ಸುತ್ತಾಡ ಬೇಕು. ನಾನಾದರೋ ಕೇವಲ ಒಂದು ಗಂಟೆಯ ಬಿಡುವಿನಲ್ಲಿ ಎಷ್ಟು ಸಾಧ್ಯವೋ ಅಷ್ಟನ್ನು ಮೊಗೆಮೊಗೆದು ಕಣ್ತುಂಬಿಸಿಕೊಂಡೆ. ವೆಂಕಣ್ಣನೇ ಒದಗಿಸಿದ ಮೌಖಿಕ ವಿವರಣೆಗಳನ್ನು ಆಸಕ್ತಿ ಯಿಂದ ಕೇಳಿಸಿಕೊಂಡೆ. ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಬೇಗ ಹೊರಟು ಬಂದೆ.

ಇದನ್ನೂ ಓದಿ: Srivathsa Joshi Column: ಪ್ರಾಣಿಗಳ ಮೇಲೆ ದಯೆ ಇರಲಿ, ಬಸ್ಸುಗಳ ಮೇಲೆ ಬರೆದದ್ದಿರಲಿ

ಕಣ್ಮುಚ್ಚಿಕೊಂಡರೆ ಈಗಲೂ ಅಲ್ಲಿಯ ಆರ್ಟಿಫೆಕ್ಟ್‌ಗಳೇ ಕಾಣಿಸುತ್ತವೆ. ಮಿತಭಾಷಿ, ನಿಗರ್ವಿ ಮತ್ತು ನಿಷ್ಕಲ್ಮಷ ಮನಸ್ಸಿನ ವೆಂಕಣ್ಣನೇ ಕಣ್ಮುಂದೆ ಬರುತ್ತಾರೆ. ಹಳ್ಳಿಮೂಲೆಯಲ್ಲಿ ಸೀಮಿತ ಸೌಕರ್ಯ ಸಂಪನ್ಮೂಲಗಳನ್ನು ಬಳಸಿ ಏಕವ್ಯಕ್ತಿ ಶಕ್ತಿಯಾಗಿಯೇ ಇಷ್ಟೊಂದು ಸುಂದರ ಕಲಾಕೇಂದ್ರವನ್ನು ಸೃಷ್ಟಿಸಿರುವ ಅವರೇನಾದರೂ ಅಮೆರಿಕದಲ್ಲಿ ಇಂತಹ ಆರ್ಟ್ ಗ್ಯಾಲರಿಯೊಂದನ್ನು ಅಚ್ಚುಕಟ್ಟಾಗಿ ತೆರೆದಿದ್ದರೆ... ಎಂಬ ಆಲೋಚನೆಗಳೂ ತಲೆಯಲ್ಲಿ ಹೊಳೆಯುತ್ತವೆ.

ಜಾಲೀಮನೆ ವೆಂಕಣ್ಣ. ಸ್ವಸ್ತಿಕ್ ಆರ್ಟ್ ಗ್ಯಾಲರಿ. ಶಿರಸಿಗೆ ಹತ್ತಿರದ ಹಿತ್ಲಳ್ಳಿ. ಇದುವರೆಗೆ ನಾನು ಕೇಳಿಯೇ ಇರದಿದ್ದ ಹೆಸರುಗಳು. ಇಂತಹದೊಂದು ಸಾಂಸ್ಕೃತಿಕ ಸಿರಿಭಂಡಾರದ ಪರಿಚಯ ಇದೀಗ ನನಗಾದದ್ದೂ ಒಂಥರದಲ್ಲಿ ಆಕಸ್ಮಿಕವೇ. ಎರಡು ವಾರಗಳ ಹಿಂದಿನ ಅಂಕಣದಲ್ಲಿ ಅನಂತ ತಾಮ್ಹನಕರರ ಬಗ್ಗೆ ಬರೆದಿದ್ದೆನಷ್ಟೆ? ಮೈಸೂರಲ್ಲಿ ಅವರ ಮನೆಯಲ್ಲಿ ಹೀಗೇ ಅದೂಇದೂ ಮಾತಾಡುತ್ತಿದ್ದಾಗ “ಈ ಸಲ ನನ್ನ ಭಾರತಪ್ರವಾಸದಲ್ಲಿ ಒಮ್ಮೆ ಶಿರಸಿ-ಸೋಂದಾ ಊರುಗಳಿಗೂ ಹೋಗಬೇಕೆಂದಿದ್ದೇನೆ, ಅಲ್ಲಿನ ಬಂಧುಮಿತ್ರ ರನ್ನು ಭೇಟಿಯಾಗಬೇಕೆಂದಿದ್ದೇನೆ. ಈ ಹಿಂದೆ ನಾನಲ್ಲಿಗೆ ಹೋಗಿದ್ದು ಸುಮಾರು 30-35 ವರ್ಷಗಳ ಹಿಂದೆ!" ಎಂದು ಹೇಳಿದ್ದೆ.

ಅದಕ್ಕವರು “ಓಹೋ ಹೌದೇ? ಈ ತಿಂಗಳಲ್ಲೇ ಸೋಂದಾಕ್ಕೆ ನಾವೂ ಹೋಗುವುದಿದೆ. ಸಾಧ್ಯವಾದರೆ ನೀವು ಅಲ್ಲಿರುವ ದಿನಗಳಿಗೆ ಹೊಂದುವಂತೆಯೇ ನಾವೂ ಬರುತ್ತೇವೆ. ಒಟ್ಟಿಗೇ ತಿರುಗಾಡೋಣ" ಎಂದಿದ್ದರು. ಆಗಲೂ ಅವರೇನೂ ಜಾಲೀಮನೆ ವೆಂಕಣ್ಣನ ಆರ್ಟ್ ಗ್ಯಾಲರಿಯ ಸುದ್ದಿಯೆತ್ತಿರಲಿಲ್ಲ. ಆಮೇಲೆ ನಾನು ನಮ್ಮೂರಿಗೆ ಭೇಟಿ, ದೀಪಾವಳಿ ಹಬ್ಬ ಆಚರಣೆಯನ್ನೆಲ್ಲ ಮುಗಿಸಿ ಬೆಂಗಳೂರಿನಲ್ಲಿ ನನ್ನ ‘ಬೇಸ್ ಕ್ಯಾಂಪ್’ ಮಾವನಮನೆಗೆ ಮರಳಿದ ಮೇಲೆ “ನವೆಂಬರ್ 17 ಮತ್ತು 18 ಈ ಎರಡು ದಿನಗಳನ್ನು ನಾನು ಶಿರಸಿ-ಸೋಂದಾ ಭೇಟಿಗೆ ನಿಗದಿಪಡಿಸಿದ್ದೇನೆ" ಎಂದು ಅನಂತ ತಾಮ್ಹನಕರರಿಗೆ ತಿಳಿಸಿದೆ.

S Joshi in Jalimane

ಅವರು ಖಾಸಗಿ ಕಾರ್ಯಕ್ರಮವೊಂದಕ್ಕೆ ಸೋಂದಾದಲ್ಲಿರಬೇಕಾದ್ದು ನವೆಂಬರ್ 22-23ರಂದು ಅಂತಿದ್ದರೂ ನನಗೋಸ್ಕರ ನಾಲ್ಕುದಿನ ಮೊದಲೇ ಶಿರಸಿಗೆ ಬಂದರು. ಸಪತ್ನೀಕರಾಗಿ, ಮೈಸೂರಿ ನಿಂದ ಕಾರಿನಲ್ಲಿ. ಅವರ ಹೆಂಡತಿಯ ತವರೂರೇ ಸೋಂದಾ, ಮಗಳಿರುವುದು ಶಿರಸಿಯಲ್ಲಿ. ಅಂದಮೇಲೆ ಆ ಸೆಳೆತವಂತೂ ಇದ್ದೇ ಇರುತ್ತದಲ್ಲ! ನಿಗದಿಯಾದಂತೆ ನವೆಂಬರ್ 17ರ ಬೆಳಗ್ಗೆಯೇ ನಾನು ಬೆಂಗಳೂರಿನಿಂದ ಶಿರಸಿ ತಲುಪಿದೆ. ಶಿರಸಿಗೆ ಹತ್ತಿರದಲ್ಲೇ ಹೆಗಡೆಕಟ್ಟಾ ಹಳ್ಳಿಯ ಗೊಡ್ವೆಮನೆ ಎಂಬಲ್ಲಿರುವ ವೀಣಾ ಹೆಗಡೆಯವರ ಮನೆಗೆ ಭೇಟಿ ನನ್ನ ಆವತ್ತಿನ ಕಾರ್ಯಕ್ರಮ.

ವೀಣಾ ಹೆಗಡೆ ಹತ್ತಿಪ್ಪತ್ತು ವರ್ಷಗಳಿಂದ ನನಗೆ ಇ-ಪರಿಚಿತ ಆತ್ಮೀಯರು. ಮುಖತಃ ಭೇಟಿ ಇದೇ ಮೊದಲು. ಅವರೊಬ್ಬ ವಿಧವಿಧ ಪ್ರಕಾರಗಳ ಚಿತ್ರ ಬಿಡಿಸುವ/ ಕಸೂತಿಗಳನ್ನು ಹೆಣೆಯುವ ಕಲಾವಿದೆ, ಭಜನೆ ಗಾಯಕಿ, ಕನ್ನಡ ಸಾಹಿತ್ಯದ ಪ್ರಗಾಢ ಓದುಗರು, ಚಿಕ್ಕಮಟ್ಟಿಗೆ ವಸ್ತುನಿಷ್ಠ ವಿಮರ್ಶಕಿ... ಹೀಗೆ ಆಲ್-ಇನ್-ವನ್ ಪ್ರತಿಭಾನ್ವಿತೆ. ಎಲ್ಲಕ್ಕಿಂತ ಹೆಚ್ಚಾಗಿ ಸರಳ ಮೃದುಸ್ವಭಾವದ ಸದ್ಗೃಹಿಣಿ. ಅವರನ್ನು ಪರಿಚಯಿಸು ತ್ತೇನೆಂದು ಅನಂತ ತಾಮ್ಹನಕರರನ್ನೂ ಕರೆದುಕೊಂಡು ಹೋದೆ. ಅಲ್ಲಿ ಉಭಯಕುಶಲೋಪರಿ ವೇಳೆ ಜಾಲೀಮನೆ ವೆಂಕಣ್ಣನ ಪ್ರಸ್ತಾವ ಬಂತು. ಅವರು ವೀಣಾ ಹೆಗಡೆಗೆ ತವರುಮನೆ ಕಡೆಯಿಂದ ಸಂಬಂಧವಂತೆ.

ಅನಂತ ತಾಮ್ಹನಕರರಿಗಾದರೋ “ಸಮಾನ-ಶೀಲ-ವ್ಯಸನೇಷು ಸಖ್ಯಮ್." ಅಂದರೆ, ಜಾಲೀಮನೆ ವೆಂಕಣ್ಣ ಸಹ ಅನಂತ ತಾಮ್ಹನಕರರಂತೆಯೇ ಮದ್ಯವ್ಯಸನಿ... ಅಲ್ಲಲ್ಲ ಮದ್ಯದ ಖಾಲಿ ಶೀಷೆಗಳ ಸಂಗ್ರಹವೆಂಬ ಒಳ್ಳೆಯ ವ್ಯಸನವುಳ್ಳವರು. ಅಲ್ಲದೇ ಈ ಹಿಂದೆ ಒಮ್ಮೆ ಶಿರಸಿಯ ಕೃಷ್ಣ ಪದಕಿಯವರ ಮೂಲಕ ಪರಿಚಯವಾಗಿ ಅನಂತ ತಾಮ್ಹನಕರರು ಜಾಲೀಮನೆ ವೆಂಕಣ್ಣನ ಆರ್ಟ್ ಗ್ಯಾಲರಿಯನ್ನು ನೋಡಿದ್ದ ವರು. ಅವರಿಬ್ಬರು ಮಾಡಿದ ವರ್ಣನೆಯಿಂದಲೇ ನನ್ನ ಆಸಕ್ತಿ ಕೆರಳಿತು.

ಮಾರನೆದಿನದ ನನ್ನ ಟೈಂಟೇಬಲ್‌ನಲ್ಲಿ ಜಾಲೀಮನೆ ವೆಂಕಣ್ಣನ ಆರ್ಟ್ ಗ್ಯಾಲರಿಗೆ ಭೇಟಿಯನ್ನು ಕಡ್ಡಾಯವಾಗಿ ಹೊಂದಿಸಿಕೊಳ್ಳಲೇಬೇಕು ಎಂದು ಗುರುತುಹಾಕಿಕೊಂಡೆ. ಹೇಗೂ ಮಂಗಳವಾರ ರಾತ್ರಿ ಹಾಲ್ಟ್‌ಗೆ ನಾನೂ ಅನಂತ ತಾಮ್ಹನಕರರೂ ಒಂದೇಕಡೆ- ಸೋಂದಾದಲ್ಲಿ ಗಂಗಾಧರ ಪರಾಂಜಪೆಯವರ ಮನೆಯಲ್ಲಿ- ಇರುತ್ತೇವೆಂದು ಮೊದಲೇ ಪ್ಲಾನ್ ಆಗಿತ್ತು. ಸೋಂದಾದಿಂದ ಶಿರಸಿಗೆ ಮರಳುವಾಗ ವೆಂಕಣ್ಣನ ಭೇಟಿ ಎಂದು ಅವರೂ ಟಿಕ್ ಮಾಡಿಕೊಂಡರು.

ನವೆಂಬರ್ 18ರ ಬುಧವಾರ ಬೆಳಗ್ಗೆ ಸೋಂದಾದಲ್ಲಿ ವಾದಿರಾಜಮಠಕ್ಕೆ ಭೇಟಿ. ಅಲ್ಲೇ ಪಕ್ಕದಲ್ಲಿರುವ ಪರಾಂಜಪೆ ಬಂಧುಗಳ ಮನೆಯಲ್ಲಿ ಬೆಳಗಿನ ಉಪಾಹಾರ. ಅಲ್ಲಿನ ಸೊಸೆಯಂದಿರಾದ ವಸಂತಿ, ಲತಾ ಮೂಲತಃ ನಮ್ಮೂರಿನವರು ಮತ್ತು ಶಾಲಾ ಸಹಪಾಠಿಗಳು ಆದ್ದರಿಂದ ನನಗೆ ತುಸು ಹೆಚ್ಚೇ ಪ್ರೀತಿಭರಿತ ಒತ್ತಾಯಪೂರ್ವಕ ಆದರಾತಿಥ್ಯ. ತವರೂರ ಸವಿನೆನಪುಗಳ ಮೆಲುಕು. ಚಹ ಸೇವನೆ ಫೋಟೊ ಸೆಷನ್ ಎಲ್ಲ ಆದಮೇಲೆ ನಾನೂ ಅನಂತ ತಾಮ್ಹನಕರರೂ ಕಾರಿನಲ್ಲಿ ಶಿರಸಿ ಕಡೆ ಹೊರಟೆವು.

ವೆಂಕಣ್ಣನಿಗೆ ಫೋನ್ ಮಾಡಿದಾಗ ಅವರೂ ಶಿರಸಿಗೆ ಯಾವುದೋ ಕೆಲಸದ ಮೇಲೆ ಹೊರಟಿದ್ದರಾದರೂ ನಮಗೋಸ್ಕರ ಅದನ್ನು ಮುಂದೂಡಿ ಕಾಯುತ್ತಿರುತ್ತೇನೆ ಎಂದರು. ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ... ಅಲ್ಲಲ್ಲಿ ತಿರುವುಗಳು ಮತ್ತು ನಡುನಡುವೆ ಅಷ್ಟಿಷ್ಟು ಹೊಂಡಗಳೂ ಇರುವ ರಸ್ತೆಯಲ್ಲಿ ಕಾರ್ ಡ್ರೈವ್ ಮಾಡಿಕೊಂಡು ಹೋಗುವುದೂ ಒಂದು ರೋಚಕ ಅನುಭವವೇ. ಹತ್ತೂವರೆಗೆಲ್ಲ ನಾವು ಚವ್ವತ್ತಿ ಎಂಬ ಹಳ್ಳಿಯನ್ನು ದಾಟಿ ಎಡಕ್ಕೆ ಹೊರಳುವ ರಸ್ತೆಯಲ್ಲಿ ಮೂರು ಕಿಮೀ ಕ್ರಮಿಸಿ ‘ಸ್ವಸ್ತಿಕ್ ಆರ್ಟ್ ಗ್ಯಾಲರಿ’ ಎಂಬ ಫಲಕವಿದ್ದ ಜಾಗಕ್ಕೆ ತಲುಪಿದೆವು. ಅಲ್ಲಿಯೇ ಕಾರ್ ನಿಲ್ಲಿಸಿ ಗೇಟ್ ತೆರೆದು, ಸುಮಾರು ಹತ್ತಿಪ್ಪತ್ತು ಅಡಿಗಳಷ್ಟು ಆಳಕ್ಕಿಳಿಯುವ ಕಾಲ್ದಾರಿ ಮೂಲಕ ಸಾಗಿ ವೆಂಕಣ್ಣನ ಮನೆಯಂಗಳ ತಲುಪಿದೆವು. ಅಂಗಳದಲ್ಲಿ ನಿಂತುಕೊಂಡಿದ್ದ ವೆಂಕಣ್ಣ ನಮ್ಮನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಮುಂದಿನ ಒಂದು ಗಂಟೆಯ ಕಾಲ ಒಂದು ಅನೂಹ್ಯ ಅಸದೃಶ ಕಲಾಲೋಕದಲ್ಲಿ ಸಂಚರಿಸಿದ ಅನುಭವ. ಅಂಗಳದಲ್ಲಿ ಅಶ್ವತ್ಥ ಆಲ ಬೇಲ ತೆಂಗು ಕಂಗು ಮುಂತಾದವುಗಳ ಬೋನ್ಸಾಯ್ ಗಿಡಗಳಿವೆ. ಹಳೆಯ ಎತ್ತಿನ ಬಂಡಿಯ ಚಕ್ರಗಳು ಮತ್ತು ಟ್ರ್ಯಾಕ್ಟರ್ ಗಾಲಿಗಳು ಬಣ್ಣಬಳಿದುಕೊಂಡು ಕಲಾಕೃತಿಗಳಾಗಿವೆ. ಕ್ಯಾಲ್ಸಿಯಂ ಸ್ಯಾಂಡೋಜ್ ಮಾತ್ರೆಗಳ ಎರಡಡಿ ಎತ್ತರದ ಖಾಲಿ ಡಬ್ಬವೊಂದು ನವಿಲುಗರಿಗಳನ್ನಿಡಲಿಕ್ಕೆ ವೇಸ್ ಆಗಿದೆ. ಬಗೆಬಗೆಯ ಹಕ್ಕಿಗೂಡುಗಳಂಥ ರಚನೆಗಳು, ಹಳೆಯ ಫ್ಲಾಸ್ಕ್ ಅಥವಾ ವಾಟರ್ ಬಾಟಲ್‌ಗಳ ದಿಂಡು ಲೋಲಕಗಳಾಗಿವೆ. ಬಣ್ಣ ಬಳಿದ ಬೆತ್ತದ ಬುಟ್ಟಿಗಳು ಗೋಡೆಗೆ ಅಂಟಿಕೊಂಡಿವೆ. ನಿರುಪಯುಕ್ತವೆಂದು ಯಾರೋ ಬಿಸಾಡಿದ, ಎಲ್ಲೋ ಸಿಕ್ಕಿದ ವಸ್ತುಗಳೆಲ್ಲ ವೆಂಕಣ್ಣನ ಅಂಗಳದಲ್ಲಿ ಅತ್ಯಾಕರ್ಷಕ ಕಲಾಕೃತಿಗಳಾಗಿ ಪುನರ್ಜನ್ಮ ಪಡೆದಿವೆ. ಜೊತೆಗೇ ಸಜೀವ ಹೂಗಿಡಗಳೂ ಸೇರಿ ಅಂಗಳದ ಅಂದವನ್ನು ಹೆಚ್ಚಿಸಿವೆ. ಇದು ಆರ್ಟ್ ಗ್ಯಾಲರಿಯ ಮುಂಭಾಗದ ಮೊದಲ ನೋಟವಷ್ಟೇ.

ಅಲ್ಲಿಂದ ವೆಂಕಣ್ಣ ನಮ್ಮನ್ನು ಮನೆಯೊಳಕ್ಕೆ ಕರೆದುಕೊಂಡು ಹೋದರು. ಇಡೀ ಮನೆಯೇ ಒಂದು ವಸ್ತುಸಂಗ್ರಹಾಲಯ. ವಿಭಾಗವಾರು ಜೋಡಿಸಿಟ್ಟಿರುವ ಕಲಾಕೃತಿಗಳು. ಮಹಡಿಯ ಮೇಲೆ ಒಂದು ಕೋಣೆಯಲ್ಲಿ ಕಾಷ್ಠಶಿಲ್ಪಗಳು. ಯಾವುದೇ ಬೇರು, ಬೊಡ್ಡೆ, ಟೊಂಗೆಗಳು ಅಂಕುಡೊಂಕಾಗಿ ಸೊಂಡಿಲಿನಂತೆ ಕಂಡುಬಂದರೆ ಅದನ್ನು ವೆಂಕಣ್ಣ ಮನೆಗೆ ತಂದು ಅದರಲ್ಲಿ ಗಣೇಶನ ಕಲ್ಪನೆ ಮೂಡಿಸುತ್ತಾರೆ. ಅಂತಹ ಗಣೇಶಮೂರ್ತಿಗಳು ಕನಿಷ್ಠ ಐವತ್ತಾದರೂ ಇವೆ. ಅಂತೆಯೇ ಬೇರೆ ಆಕಾರ ಗಾತ್ರಗಳ ಕಾಷ್ಠಶಿಲ್ಪಗಳೂ ಹಲವಾರು ಇವೆ.

ಪಕ್ಕದಲ್ಲೇ ಬಗೆಬಗೆ ನಮೂನೆಯ ಮುಖವರ್ಣಿಕೆಗಳು, ಹೆಲ್ಮೆಟ್‌ಗೆ ಬಣ್ಣ ಬಳಿದು ಮಾಡಿದ ಮುಖವಾಡಗಳು. ಆ ವಿಭಾಗಕ್ಕೆ ಗೊಂಬೆಮನೆ ಎಂದು ಹೆಸರಿಟ್ಟಿದ್ದಾರೆ. ಇನ್ನೊಂದು ಕೋಣೆಯ ಒಂದು ಬದಿಯಲ್ಲಿ ಸಾಲಾಗಿ ಜೋಡಿಸಿಟ್ಟ ಕಪಾಟುಗಳಲ್ಲಿ ವಿವಿಧ ಆಕಾರ ಮತ್ತು ಗಾತ್ರದ ಖಾಲಿ ಶೀಷೆಗಳು. ಮದ್ಯದ ಶೀಷೆಗಳಷ್ಟೇ ಅಲ್ಲ, ಅತ್ತರಿನ ಮತ್ತು ಔಷಧಿಗಳ ಸಾವಿರಾರು ಬಾಟ್ಲಿಗಳಿವೆ. ಇಪ್ಪತ್ತೈದು ವರ್ಷಗಳ ಹಿಂದೆ ಯಾರದೋ ಮನೆಯಲ್ಲಿ ವಿಚಿತ್ರ ರೀತಿಯ ಬಾಟ್ಲಿಯೊಂದನ್ನು ನೋಡಿ ತಾನೂ ಇಂಥವನ್ನು ಸಂಗ್ರಹಿಸಬೇಕು ಎಂದು ವೆಂಕಣ್ಣನಿಗೆ ಸ್ಪೂರ್ತಿ ಬಂದಿದ್ದಂತೆ. ಈಗ ಅವರ ಸಂಗ್ರಹ ಬೃಹದಾಕಾರ ಬೆಳೆದಿರುವುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ.

ಮದ್ಯದ ಬಾಟ್ಲಿಗಳನ್ನು ಮುಟ್ಟುವುದಕ್ಕೂ ಮಡಿವಂತಿಕೆ ತೋರಿಸುತ್ತಿದ್ದ ಮನೆಮಂದಿಯ ವಿರೋಧ ಮತ್ತು ಬಂಧುಗಳ ಅಪಹಾಸ್ಯಗಳನ್ನು ಧೈರ್ಯದಿಂದ ಎದುರಿಸಿ ವೆಂಕಣ್ಣ ಈ ‘ಶೀಷ್‌ಮಹಲ್ ಕಟ್ಟಿದ್ದಾರೆ. ಅಲ್ಲೇ ಪಕ್ಕದ ಒಂದು ಕಪಾಟಿನಿಂದ ಕೆಲವು ತೆಂಗಿನಕಾಯಿಗಳನ್ನು ತೆಗೆದು ತೋರಿಸಿದರು. ಸಾಮಾನ್ಯವಾಗಿ ತೆಂಗಿನಕಾಯಿಗೆ ಮೂರು ಕಣ್ಣುಗಳಿರುವುದಾದರೆ ಇವರ ಬಳಿ ನಾಲ್ಕು ಕಣ್ಣುಗಳ ತೆಂಗಿನಕಾಯಿ ಇದೆ. ಅವರದೇ ತೋಟದಲ್ಲಿ ಸಿಕ್ಕಿದ್ದಂತೆ. ಐದು ಕಣ್ಣುಗಳ ಮತ್ತು ಎರಡು ಕಣ್ಣುಗಳ ತೆಂಗಿನಕಾಯಿಗಳೂ ಇವೆ, ಸ್ನೇಹಿತರಿಂದ ಸಂಪಾದಿಸಿದ್ದಂತೆ. ಪಕ್ಕದ ಇನ್ನೊಂದು ಕೋಣೆಯಲ್ಲಿ ಮರದ ಹಳೆಯ ಪಾತ್ರೆಗಳು, ಮರಿಗೆಗಳು, ಮಸಾಲೆಡಬ್ಬಿ, ಶ್ಯಾವಿಗೆ ಅಚ್ಚು ಮೊದಲಾದ ಅಡುಗೆ ಪರಿಕರಗಳು, ಲ್ಯಾಂಟರ್ನ್, ಪೆಟ್ರೊಮ್ಯಾಕ್ಸ್ ಮತ್ತಿತರ ದೀಪವ್ಯವಸ್ಥೆಗಳು, ಗ್ರಾಮೊಫೋನ್, ರೇಡಿಯೊ ಇತ್ಯಾದಿ ಪಳೆಯುಳಿಕೆ ವಸ್ತುಗಳು. ವೆಂಕಣ್ಣನ ಮಗ ಅಕ್ಷಯ ಹೆಗಡೆ ಸಹ ಒಬ್ಬ ಚಿತ್ರಕಲಾವಿದ. ಆತ ಬಿಡಿಸಿದ ದೊಡ್ಡದೊಡ್ಡ ಕ್ಯಾರಿಕೇಚರ್ ಪೇಂಟಿಂಗ್‌ಗಳನ್ನು ಒಂದು ಕೋಣೆಯಲ್ಲಿ ಜೋಡಿಸಿಟ್ಟಿದ್ದಿದೆ. ಅವುಗಳ ಪೈಕಿ ಕೆಲವು ಚಿತ್ರಗಳಂತೂ ಜೀವಂತ ವ್ಯಕ್ತಿಯೇ ನಿಂತಿರುವರೇನೋ ಎನ್ನುವಷ್ಟು ಸಹಜ ಮತ್ತು ಸುಂದರ. ಅಕ್ಷಯ ಹೆಗಡೆ ಬೆಂಗಳೂರಿನಲ್ಲಿ ಚಿತ್ರಕಲಾಮಾಧ್ಯಮಕ್ಕೆ ಸಂಬಂಽಸಿದ ಶಿಕ್ಷಣ ಪಡೆದು ವೃತ್ತಿಯಲ್ಲಿದ್ದಾರಂತೆ. ವೆಂಕಣ್ಣ ಒಬ್ಬ ಅಪ್ಪಟ ಮೋದಿ ಅಭಿಮಾನಿ ಎನ್ನುವುದೂ ಅವರ ಆರ್ಟ್ ಗ್ಯಾಲರಿಯಲ್ಲಿ ತಿಳಿದುಬರುತ್ತದೆ. ಕಳೆದ 10-12 ವರ್ಷಗಳಲ್ಲಿ ಮೋದಿಯವರ ಸರ್ಕಾರದ ಸಾಧನೆಯ ಸುದ್ದಿಗಳು, ವಿಶೇಷ ಭಾವಚಿತ್ರಗಳು, ಮತ್ತು ವ್ಯಂಗ್ಯಚಿತ್ರಗಳು ಪತ್ರಿಕೆಗಳಲ್ಲಿ ಪ್ರಕಟವಾದವುಗಳ ತುಣುಕುಗಳನ್ನು ಸಂಗ್ರಹಿಸಿ, ಸಾಂಕೇತಿಕವಾಗಿ ಒಂದು ಅಶ್ವತ್ಥದೆಲೆಯನ್ನೂ ಸೇರಿಸಿ ಲ್ಯಾಮಿನೇಟ್ ಮಾಡಿದ ನೂರಾರು ಹಾಳೆಗಳನ್ನು ಸಂಗ್ರಹಿಸಿಡಲಾಗಿದೆ. ಆರ್ಟ್ ಗ್ಯಾಲರಿಯ ಸಂದರ್ಶಕರಿಗೆ ವೆಂಕಣ್ಣ ಅದನ್ನು ಹೆಚ್ಚಿನ ಅಭಿಮಾನದಿಂದ ತೋರಿಸುತ್ತಾರೆ.

ಹಾಗೆಯೇ ಒಂದೆರಡು ಚಲನಚಿತ್ರಗಳು ಮತ್ತು ಸಾಕ್ಷ್ಯಚಿತ್ರಗಳನ್ನು ಅವರ ಆರ್ಟ್ ಗ್ಯಾಲರಿಯಲ್ಲಿ ಚಿತ್ರೀಕರಣ ಮಾಡಿದ್ದರ ಬಗ್ಗೆಯೂ ವೆಂಕಣ್ಣನಿಗೆ ಹೆಮ್ಮೆಯಿದೆ. ‘ಒಂದು ಸನ್ನೆ ಒಂದು ಮಾತು’ ಎಂಬ ಕನ್ನಡ ಚಲನಚಿತ್ರದಲ್ಲಂತೂ ವೆಂಕಣ್ಣನೇ ನಾಯಕಿಯ ಅಜ್ಜನ ಪಾತ್ರ ನಿರ್ವಹಿಸಿದ್ದಾರಂತೆ. ಆರ್ಟ್ ಗ್ಯಾಲರಿಯ ಬಗ್ಗೆ ಸುಧಾದಲ್ಲೊಂದು ನುಡಿಚಿತ್ರವೂ ಪ್ರಕಟವಾಗಿದೆಯಂತೆ. ಗ್ಯಾಲರಿಯನ್ನು ವೀಕ್ಷಿಸಲಿಕ್ಕೆ ಬರುವವರನ್ನು ವೆಂಕಣ್ಣ ಪ್ರೀತಿಯಿಂದಲೇ ನೋಡಿಕೊಳ್ಳುತ್ತಾರೆ.

“ಪ್ರವೇಶ ಉಚಿತ. ಪ್ರೀತಿಯಿಂದ ಕೊಟ್ಟರೆ ತಕರಾರಿಲ್ಲ... ಕೊಟ್ಟಷ್ಟು ಕಲಾವಿದರಿಗೆ ಸಲ್ಲುತ್ತದೆ" ಎಂದು ಒಂದೆರಡು ಕಡೆ ಫಲಕವನ್ನೂ ನಾನು ಗಮನಿಸಿದೆ. ಆದರೆ ನಮ್ಮಿಬ್ಬರ ಪರವಾಗಿ ಅನಂತ ತಾಮ್ಹನಕರರು ಸಾಂಕೇತಿಕವಾಗಿ ಪುಟ್ಟದೊಂದು ಮೊತ್ತವನ್ನು ಕೊಡಲಿಕ್ಕೆ ಹೋದಾಗ ಮೊದಲಿಗೆ ತೆಗೆದುಕೊಳ್ಳಲು ಒಪ್ಪದ ವೆಂಕಣ್ಣ ತೀರ ಸಂಕೋಚಪಟ್ಟು ಕೊನೆಗೂ ಸ್ವೀಕರಿಸಿದರು. ಅವರ ನಿಸ್ಪೃಹತೆ ನಿಷ್ಕಲ್ಮಷ ನಗುಮುಖದ ಹಿಂದೆ ಅವ್ಯಕ್ತವಾದ ನೋವೂ ಮಡುಗಟ್ಟಿದ್ದಿದೆ ಎಂದು ಅವರನ್ನು ಹತ್ತಿರದಿಂದ ಬಲ್ಲವರಿಗಷ್ಟೇ ಗೊತ್ತಿರುವುದು. ವಯಸ್ಸು 70 ದಾಟಿರುವ ವೆಂಕಣ್ಣ ಆ ಮನೆಯಲ್ಲಿ ವೃದ್ಧೆ ತಾಯಿಯೊಂದಿಗೆ ವಾಸಿಸುತ್ತಾರೆ. ಹೆಂಡತಿ ಹತ್ತು ವರ್ಷಗಳ ಹಿಂದೆ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಅಗಲಿದ್ದಾರೆ.

ಮಗಳು ಐದಾರು ವರ್ಷಗಳ ಹಿಂದೆ ಬಂದೆರಗಿದ ಒಂದು ವಿಚಿತ್ರ ವ್ಯಾಧಿಯಿಂದ ಈಗಲೂ ಚೇತರಿಸಿ ಕೊಂಡಿಲ್ಲ. ಅಳಿಯ ಆಕೆಯ ಆರೈಕೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆನ್ನುವುದೇ ಒಂದು ಸಮಾಧಾನದ ಅಂಶ. ಆದರೂ ಈ ಎಲ್ಲ ನೋವುಗಳು ಬಹುಶಃ ವೆಂಕಣ್ಣನನ್ನು ಆಗಾಗ ಕಾಡುತ್ತವೆ. ಇಷ್ಟು ಅಗಾಧ ಸಂಗ್ರಹವನ್ನು ತನ್ನ ನಂತರ ಯಾರು ನೋಡಿಕೊಳ್ಳುತ್ತಾರೋ ಎಂಬ ಪ್ರಶ್ನೆಗೂ ಅವರಲ್ಲಿ ಉತ್ತರವಿಲ್ಲ. ವೆಂಕಣ್ಣನ ಬದುಕಿನ ಆ ಮುಖದ ಬಗ್ಗೆ ತಿಳಿದುಕೊಂಡಾಗ ನಮಗೂ ಬೇಸರವೆನಿಸುತ್ತದೆ.

ಇಷ್ಟೊಂದು ಅಪರೂಪದ ಅಮೂಲ್ಯ ವಸ್ತುಗಳನ್ನು ಇನ್ನಷ್ಟು ಕ್ರಮಬದ್ಧವಾಗಿ ಜೋಡಿಸಿ, ವಸ್ತು ಸಂಗ್ರಹಾಲಯದ ಬಗ್ಗೆ ಸಾಕಷ್ಟು ಪ್ರಚಾರ ಮಾಡಿ, ಯಥೋಚಿತ ಪ್ರವೇಶ ಶುಲ್ಕವಿಟ್ಟು ಸಾರ್ವಜನಿಕ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿ, ಒಟ್ಟಾರೆಯಾಗಿ ಆ ಆರ್ಟ್ ಗ್ಯಾಲರಿಯನ್ನು ಯೋಗ್ಯ ರೀತಿಯಲ್ಲಿ ನಿರ್ವಹಿಸುವವರಿದ್ದರೆ ಎಷ್ಟು ಚಂದವಾದೀತು! ಅದಕ್ಕೇ ನನಗೆ ಅನಿಸಿದ್ದು ವೆಂಕಣ್ಣನೇನಾದರೂ ಅಮೆರಿಕದಲ್ಲಿದ್ದಿದ್ದರೆ ಈ ವಸ್ತುಸಂಗ್ರಹಾಲಯವು ವಾಷಿಂಗ್ಟನ್ ನಲ್ಲಿರುವ ಸ್ಮಿತ್‌ಸೋನಿಯಂ ಸಂಸ್ಥೆ ನಡೆಸುವ ವರ್ಲ್ಡ್‌ಕ್ಲಾಸ್ ಮ್ಯೂಸಿಯಮ್‌ಗಳಿಗೆ ಯಾವುದೇ ರೀತಿಯಲ್ಲಿ ಕಮ್ಮಿಯಿಲ್ಲದ್ದಾಗುತ್ತಿತ್ತು. ವೆಂಕಣ್ಣನಿಗೆ ಅಂಥದೊಂದು ಕನಸು ಇದೆಯೋ ಇಲ್ಲವೋ. ನಾನು ಅಮೆರಿಕದಿಂದ ರಜೆಯಲ್ಲಿ ಬಂದವನು ಎಂದು ತಿಳಿದುಕೊಂಡ ವೆಂಕಣ್ಣ ತಾನೂ ಅಮೆರಿಕಕ್ಕೆ ಕನಿಷ್ಠ ಒಮ್ಮೆ ಭೇಟಿಕೊಡುವುದಕ್ಕಾದರೂ ಇರಲೆಂದು ವೀಸಾ ಮಾಡಿಟ್ಟುಕೊಂಡಿರುವುದರ ಬಗ್ಗೆ ಹೇಳಿದರು. ಅಮೆರಿಕದಲ್ಲಿರುವ ಅವರ ಅಣ್ಣನ ಮಕ್ಕಳ ಒತ್ತಾಯಕ್ಕೆ ಮಾಡಿಸಿದ್ದಂತೆ. ನನ್ನತ್ತ ನೋಡಿ ನಸುನಗುತ್ತ “ಯಾರಿಗೆ ಗೊತ್ತು ಅಮೆರಿಕದಲ್ಲಿ ನಿಮ್ಮನ್ನೊಮ್ಮೆ ಭೇಟಿಯಾದರೂ ಆದೇನು!" ಎನ್ನುವಾಗ ಅವರ ಕಂಗಳಲ್ಲೊಂದು ಹೊಳಪಿತ್ತು.

ಮತ್ತೆ ವಾಸ್ತವಕ್ಕೆ ಮರಳಿದರು. ನಾವಿನ್ನು ಹೋಗಿಬರುತ್ತೇವೆ ಎಂದಾಗ ಹಳ್ಳಿಗರ ಪರಿಶುದ್ಧ ಪ್ರೀತಿಯ ಪ್ರತಿಫಲನವೆಂಬಂತೆ ನಮ್ಮನ್ನು ಬರಿಗೈಯಲ್ಲಿ ಹೋಗಗೊಡದೆ ಅಂಗಳದಲ್ಲಿ ಒಣಗುತ್ತಿದ್ದ ಕೊಬ್ಬರಿಗಿಟಕುಗಳಿಂದ ನಾಲ್ಕಾರನ್ನು ಪ್ಯಾಕ್ ಮಾಡಿ ಕೈಗಿತ್ತರು. ಸಾಧ್ಯವಾದರೆ ಅಮೆರಿಕಕ್ಕೂ ಒಯ್ಯಿರಿ ಎಂದು ಕೂಡ ಹೇಳಿದರು. ಎಣೆಯಿಲ್ಲದ ಅವರ ಜೀವನಪ್ರೀತಿಯನ್ನು ಕಂಡು ನಾನು ನಿಜವಾಗಿಯೂ ಮೂಕವಿಸ್ಮಿತನಾಗಿದ್ದೆ. ಆರ್ಟ್ ಗ್ಯಾಲರಿಯನ್ನು ನೋಡಿದ ಮಹದಾನಂದವಿದ್ದರೂ ತುಸು ಭಾರವಾದ ಹೃದಯದಿಂದಲೇ ನಾವಲ್ಲಿಂದ ಹೊರಟು ಶಿರಸಿಗೆ ಪ್ರಯಾಣ ಬೆಳೆಸಿದೆವು. ಈ ಅಂಕಣಬರಹ ಪ್ರಕಟವಾಗುವ ಹೊತ್ತಿಗೆ ನಾನು ಅಮೆರಿಕಕ್ಕೆ ಹಿಂದಿರುಗುತ್ತ ವಿಮಾನದಲ್ಲಿರುತ್ತೇನೆ.

ವೆಂಕಣ್ಣ ಮತ್ತು ಅವರ ಆರ್ಟ್ ಗ್ಯಾಲರಿ ಮಾತ್ರ ಚಿರಕಾಲ ನನ್ನ ಚಿತ್ತಭಿತ್ತಿಯಲ್ಲಿ ಉಳಿಯಲಿವೆ. ನೀವು ವೆಂಕಣ್ಣನಿಗೊಂದು ಹಲೋ ಹೇಳುತ್ತೀರಾದರೆ, ಗ್ಯಾಲರಿ ವೀಕ್ಷಿಸಬಯಸುತ್ತೀರಾದರೆ ಸಂಪರ್ಕ: 94821 85724