ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Srivathsa Joshi Column: ಅ.ರಾ.ಮಿತ್ರ ಅಜೇಯ 90; ಈವತ್ತು ‘ಮಿತ್ರಾರ್ಜಿತ’ ತುಂಬ್ಹೊತ್ತು !

ಮಿತ್ರಾರ್ಜಿತ ಒಂದು ಅತ್ಯಮೂಲ್ಯ ಗ್ರಂಥ. ಇದರ ವಿವಿಧ ಭಾಗಗಳಲ್ಲಿ ಮಿತ್ರರ ಅಭಿಮಾನಿಗಳು, ಸಹೋದ್ಯೋಗಿಗಳು, ಕುಟುಂಬಸ್ಥರು, ನೆರೆಕೆರೆಯವರು, ಕನ್ನಡದ ಹಾಸ್ಯಪಟುಗಳು, ಅನಿವಾಸಿ ಕನ್ನಡಿಗರು, ಕವಿಗಳು ಪ್ರೀತಿಗೌರವದಿಂದ ಅರ್ಪಿಸಿದ ಅಕ್ಷರಗುಚ್ಛಗಳಿವೆ. ಶತಾವ ಧಾನಿ ಗಣೇಶ್ ಅವರು ತಮ್ಮ ‘ವಿದ್ವದ್ವಿನೋದಗಗನದ ಮಿತ್ರ’ ಲೇಖನದಲ್ಲಿ ಅ.ರಾ.ಮಿತ್ರ ಅವರ ವಾಗ್ಮಿತೆ, ವೈದುಷ್ಯ ಮತ್ತು ವಿನೋದ ಗಳನ್ನು ಗಂಗೆ-ಯಮುನೆ-ಸರಸ್ವತಿಯರಿಗೆ ಹೋಲಿಸಿರುವುದು ವಿಶೇಷ.

ಅ.ರಾ.ಮಿತ್ರ ಅಜೇಯ 90; ಈವತ್ತು ‘ಮಿತ್ರಾರ್ಜಿತ’ ತುಂಬ್ಹೊತ್ತು !

ಅಂಕಣಕಾರ ಶ್ರೀವತ್ಸ ಜೋಶಿ

ತಿಳಿರು ತೋರಣ

srivathsajoshi@yahoo.com

ಮಿತ್ರಾರ್ಜಿತ ಒಂದು ಅತ್ಯಮೂಲ್ಯ ಗ್ರಂಥ. ಇದರ ವಿವಿಧ ಭಾಗಗಳಲ್ಲಿ ಮಿತ್ರರ ಅಭಿಮಾನಿಗಳು, ಸಹೋದ್ಯೋಗಿಗಳು, ಕುಟುಂಬಸ್ಥರು, ನೆರೆಕೆರೆಯವರು, ಕನ್ನಡದ ಹಾಸ್ಯಪಟುಗಳು, ಅನಿವಾಸಿ ಕನ್ನಡಿಗರು, ಕವಿಗಳು ಪ್ರೀತಿಗೌರವದಿಂದ ಅರ್ಪಿಸಿದ ಅಕ್ಷರಗುಚ್ಛಗಳಿವೆ. ಶತಾವಧಾನಿ ಗಣೇಶ್ ಅವರು ತಮ್ಮ ‘ವಿದ್ವದ್ವಿನೋದಗಗನದ ಮಿತ್ರ’ ಲೇಖನದಲ್ಲಿ ಅ.ರಾ.ಮಿತ್ರ ಅವರ ವಾಗ್ಮಿತೆ, ವೈದುಷ್ಯ ಮತ್ತು ವಿನೋದ ಗಳನ್ನು ಗಂಗೆ-ಯಮುನೆ-ಸರಸ್ವತಿಯರಿಗೆ ಹೋಲಿಸಿರುವುದು ವಿಶೇಷ.

ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ. ಆಕಾರದಲ್ಲಿ ಕೊಂಚ ಗಿಡ್ಡವೇ ಅಂತನಿಸುವ ವಾಮನ ಮೂರ್ತಿ ಆದ್ದರಿಂದ ಹೆಸರೂ ಹ್ರಸ್ವವಾಗಿ ‘ಅ.ರಾ.ಮಿತ್ರ’. ವಿದ್ವತ್ತು, ವಾಗ್ಮಿತೆ, ವಿನೋದ-ವ್ಯಾಖ್ಯಾನಗಳಲ್ಲಿ ವಾಮನನಲ್ಲ ತ್ರಿವಿಕ್ರಮ. ಮಿತ್ರ ಅಂದರೆ ಸೂರ್ಯ. ಹೆತ್ತವರು ಆ ಅರ್ಥದಲ್ಲೇ ಹೆಸರಿಟ್ಟದ್ದಂತೆ. ಪಾಂಡಿತ್ಯದಲ್ಲಿ ಸೂರ್ಯನಷ್ಟೇ ಪ್ರಖರ. ಎಲ್ಲರನ್ನೂ ಸಮದೃಷ್ಟಿಯಿಂದ ಕಾಣುವ, ಎಲ್ಲರ ಬಾಳಲ್ಲೂ ಪ್ರೀತಿಭರಿತ ನಗುವಿನ ಬೆಳಕನ್ನು ನೀಡುವ ಗುಣದಿಂದಲೂ ಸೂರ್ಯನ ಹೋಲಿಕೆ.

ಮಿತ್ರ ಅಂದರೆ ಸ್ನೇಹಿತ ಎಂದು ತಗೊಂಡರಂತೂ ಆಬಾಲವೃದ್ಧರಾದಿಯಾಗಿ ಎಲ್ಲರೊ ಡನೆ- ಮನೆಮಂದಿ, ಸಂಬಂಧಿಕರು, ಶಿಷ್ಯವೃಂದ, ಸಹೋದ್ಯೋಗಿಗಳು, ಸಾಹಿತ್ಯಾಭಿ ಮಾನಿಗಳು ಹಿರಿಕಿರಿಯರೆನ್ನದೆ ಪ್ರತಿಯೊಬ್ಬರೊಡನೆ- ಸ್ನೇಹಸರಸದ ಸಂವಹನ ನಡೆಸುವ ಸರಳ ಸ್ವಭಾವ.

pp7

ಅಂಕಿತನಾಮವೇ ಅನ್ವರ್ಥನಾಮವೂ ಆಗಿರುವ ಅತ್ಯಾಪ್ತ ವ್ಯಕ್ತಿತ್ವ. ಜನ್ಮದಿನಾಂಕ ಪ್ರಕಾರ ನಾಡಿದ್ದು ಫೆಬ್ರವರಿ 25ಕ್ಕೆ ಬರೋಬ್ಬರಿ 90ರ ವಯಸ್ಸು. ಎರಡು ದಿನ ಮೊದಲೇ, ಅಂದರೆ ಈವತ್ತು ಬೆಂಗಳೂರಿನಲ್ಲಿ ಮಿತ್ರರ ಮಿತ್ರವರ್ಗ ಮತ್ತು ಮಿತ್ರಬಂಧುಗಳು ಸೇರಿ ಮಿತ್ರಾ ವರಣ- ಎಂಬೊಂದು ಸೌಹಾರ್ದ ಸನ್ಮಾನ ಸಮಾರಂಭ. ‘ಮಿತ್ರಾರ್ಜಿತ’ ಎಂಬ ಅತ್ಯಂತ ಸೂಕ್ತ ಹೆಸರಿನ ಅಭಿನಂದನಾ ಗ್ರಂಥದ ಸಮರ್ಪಣ.

ಕಾರ್ಯಕ್ರಮ ನಡೆಯುವುದು ಭಾರತೀಯ ವಿದ್ಯಾಭವನದ ಖಿಂಚ ಸಭಾಂಗಣದಲ್ಲಿ; ಇಂಥ ದೊಂದು ಆತ್ಮೀಯ ಕಾರ್ಯಕ್ರಮವನ್ನು ಮಿಸ್ ಮಾಡ್ತಿದ್ದೇನಲ್ಲ, ಬೆಂಗಳೂರಲ್ಲಿರುತ್ತಿದ್ದರೆ ಖಂಡಿತ ಪಾಲ್ಗೊಳ್ಳುತ್ತಿದ್ದೆ- ಎಂಬ ಚಡಪಡಿಕೆ ಸದ್ಯಕ್ಕೆ ನನ್ನ ಮನಸ್ಸಿನಲ್ಲಿ. ಅಭಿನಂದನಾ ಗ್ರಂಥರಚನೆಯ ಹೊಣೆ ಹೊತ್ತವರು ಅಣಕು ರಾಮನಾಥ್ ಮತ್ತು ಸೌಮ್ಯ ಮಿತ್ರ (ಅ.ರಾ. ಮಿತ್ರರ ಸುಪುತ್ರಿ).

ಇದನ್ನೂ ಓದಿ: SriVathsa Joshi Column: ಬ್ರಾಹ್ಮ ಮುಹೂರ್ತ, ಶುಚಿತ್ವ ಸಂಹಿತೆ ಮತ್ತು ಸ್ನಾನವಿಧಿ ವಿಜ್ಞಾನ

ಕಳೆದ ತಿಂಗಳು ಒಂದು ದಿನ ರಾಮನಾಥ್‌ರಿಂದ ನನಗೆ ವಾಟ್ಸ್ಯಾಪ್ ಕರೆ. ಒಂದು ಲೇಖನ ನೀವೂ ಬರೆದುಕೊಡಬೇಕು ಎಂದು ಪ್ರೀತಿಯ ಆದೇಶ. ಅ.ರಾ.ಮಿತ್ರರ ವಿದ್ವತ್ತಿನ ಲೆವೆಲ್ ಏನು, ಅವರ ಅಭಿನಂದನಾ ಗ್ರಂಥದಲ್ಲಿ ಬರೆಯಬಹುದಾದ ವಿದ್ವಜ್ಜನರ ಪಾಂಡಿತ್ಯ ಪ್ರತಿಭೆಗಳೇನು ಅವರೆಲ್ಲರೆದುರಿಗೆ ಪುಟಗೋಸಿ ನಾನೆಷ್ಟರವನು ಎಂದು ಒಮ್ಮೆ ಹಿಂಜರಿದೆ. ಆದರೂ ಒಪ್ಪಿಕೊಂಡೆ. ರಾಮನಾಥ್ ಕೊಟ್ಟಿದ್ದ ಗಡುವಿಗಿನ್ನೂ ಎರಡು ದಿನಗಳಿರು ವಾಗಲೇ ಬರೆದು ಕಳುಹಿಸಿದೆ.

‘ಅಶ್ವತ್ಥಂ ಪ್ರಾಹುರವ್ಯಯಮ್’ ಎಂದು ಭಗವದ್ಗೀತೆಯ ಶ್ಲೋಕಭಾಗವೊಂದನ್ನು ಶೀರ್ಷಿ ಕೆಗೆ ಬಳಸಿದೆ. ನನ್ನ ಬರಹದ ಸಂಕ್ಷಿಪ್ತ ಸಂಕಲಿತ ರೂಪವನ್ನು ಇಲ್ಲಿ ನಿಮ್ಮ ಓದಿಗೆ ಒದಗಿ ಸುತ್ತಿದ್ದೇನೆ. ಅಂಥದೊಂದು ಶೀರ್ಷಿಕೆ ಏಕೆ ಮತ್ತು ಅ.ರಾ.ಮಿತ್ರರ ಬಗೆಗೆ ಗುರು ಸಮಾನ ಪೂಜ್ಯರೆಂಬ ಗೌರವಭಾವ ನನ್ನಲ್ಲಿರುವುದಕ್ಕೆ ಕಾರಣವೇನು ಎಂದು ನಿಮಗಿದ ರಿಂದ ಅಂದಾಜಾಗುತ್ತದೆ.

ಅ.ರಾ.ಮಿತ್ರರನ್ನು ನಾನು ಮೊದಲ ಬಾರಿಗೆ ಭೇಟಿಯಾದದ್ದು ಅಮೆರಿಕದಲ್ಲೇ, 2004ರಲ್ಲಿ ಫ್ಲೋರಿಡಾದ ಓರ್ಲ್ಯಾಂಡೊ ನಗರದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲಿ. ಅದಕ್ಕೆ ಮುಂಚೆ ಅವರ ಬಗ್ಗೆ ಅಲ್ಲಿಇಲ್ಲಿ ಕೇಳಿದ್ದೆ, ಓದಿದ್ದೆ. ಅವರ ಕೆಲವು ಲಲಿತಪ್ರಬಂಧಗಳನ್ನೂ, ‘ಸುಧಾ’ ದಲ್ಲಿ ಬರುತ್ತಿದ್ದ ‘ಕುಮಾರವ್ಯಾಸ ಭಾರತ ಕಥಾಮಿತ್ರ ಸರಣಿ’ಯ ಬರಹಗಳನ್ನೂ ಓದಿದ್ದೆ. ಟಿವಿಯಲ್ಲಿ ಹರಟೆ ಕಾರ್ಯಕ್ರಮಗಳಲ್ಲಿ ನೋಡಿ ಮುಖಪರಿಚಯವೂ ಇತ್ತು.

ಆದರೆ ಅಷ್ಟು ದೊಡ್ಡ ವಿದ್ವಾಂಸರನ್ನು ನೇರವಾಗಿ ಹೋಗಿ ಮಾತನಾಡಿಸಲಿಕ್ಕೆ ಸ್ವಲ್ಪ ಅಳುಕು. ಅಕ್ಕ ಸಮ್ಮೇಳನದ ವರದಿಗಾರಿಕೆಗಾಗಿ ಬೆಂಗಳೂರಿನಿಂದ ಬಂದಿದ್ದ ಪತ್ರಕರ್ತ ಸ್ನೇಹಿತ ಶ್ಯಾಮಸುಂದರ್ ಬಳಿ ನನ್ನಿಚ್ಛೆ ವ್ಯಕ್ತಪಡಿಸಿದೆ. ಪರಿಚಯ ಮಾಡಿಸುತ್ತೇನೆ ಎಂದರು. ಆ ಸಂದರ್ಭದಲ್ಲಿ ಅ.ರಾ.ಮಿತ್ರರ ಬಗ್ಗೆ ಶ್ಯಾಮಸುಂದರ್ ಮಾಡಿದ್ದ ಹೋಲಿಕೆ ಯೊಂದು ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ನಿಂತಿದೆ. ಶ್ಯಾಮ್ ಹೇಳಿದ್ದಿಷ್ಟೇ- “ಅ.ರಾ. ಮಿತ್ರರೆಂದರೆ ಪ್ರಸಕ್ತ ಕನ್ನಡ ಸಾರಸ್ವತ ಉದ್ಯಾನದಲ್ಲೊಂದು ಅಶ್ವತ್ಥವೃಕ್ಷ ಇದ್ದಂತೆ.

ಅವರನ್ನು ನೋಡಿದೊಡನೆ ಗೌರವಭಾವ ತನ್ನಿಂತಾನೇ ಮೂಡುತ್ತದೆ" ಎಂದು. ಆಮೇಲೆ ಹಾಗೆಯೇ ಆಯಿತು. ಸಮ್ಮೇಳನದ ಮುಖ್ಯ ಸಭಾಂಗಣದ ಪಕ್ಕದಲ್ಲಿ ಯಾರೊಂದಿಗೋ ಹರಟೆಯಲ್ಲಿ ತೊಡಗಿದ್ದ ಮಿತ್ರರ ಬಳಿ ಸಾರಿದೆವು. ಪರಿಚಯ ತಿಳಿಸಿದೆ. ಕೈಕುಲುಕಿದ ಮಿತ್ರರ ಸ್ಪರ್ಶದಲ್ಲಿ ಏನೋಒಂದು ವಿಶೇಷ ಆತ್ಮೀಯತೆ ಅನುಭವಕ್ಕೆ ಬಂತು. ಆ ಭೇಟಿ ನಾಲ್ಕೈದು ನಿಮಿಷಗಳದಷ್ಟೇ ಆಗಿತ್ತು.

ಹಾಸ್ಯಭಾಷಣಕ್ಕೆ ಸಮಯವಾಯ್ತೆಂದು ಆಯೋಜಕರು ಅವರನ್ನು ಕರೆದುಕೊಂಡು ಹೋದರು. ಭಾಷಣವಂತೂ ವಿದ್ವತ್ಪೂರ್ಣವೂ ಹಾಸ್ಯದ ಚಿನಕುರುಳಿಗಳಿಂದ ಕೂಡಿದ್ದೂ ಆಗಿತ್ತು. ಸಮ್ಮೇಳನ ಮುಗಿದ ಮಾರನೆದಿನವೇ ಅಲ್ಲೇ ಪಕ್ಕದ ಟಾಂಪಾ ನಗರದಲ್ಲಿ ಅ.ರಾ. ಮಿತ್ರರೊಡನೆ ಒಂದು ಅನೌಪಚಾರಿಕ ಭೇಟಿ. ಒಂದಷ್ಟು ಸ್ನೇಹಿತರು ಸೇರಿ ಎಲ್ಲರಿಗೂ ಪಕ್ಕಾ ಕನ್ನಡದಡುಗೆಯ ಒಂದು ಫಸ್ಟ್‌ಕ್ಲಾಸ್ ಮನೆಯೂಟ, ಅಲ್ಲಿ ನಗು ಹಾಸ್ಯದ ಕಲರವ.

ಅ.ರಾ.ಮಿತ್ರ ಎಂದೊಡನೆ ನನ್ನ ಮನಸ್ಸಲ್ಲಿ ಥಟ್ಟನೆ ಮೂಡುವುದು ಆ ಚಿತ್ರಣವೇ. ಅಂಥ ದೊಂದು ಸುಂದರ ಸಮಾವೇಶ ಸಾಧ್ಯವಾದದ್ದು ಸಮ್ಮೇಳನದ ಹೊತ್ತಿಗೇ ಭೀಕರವಾದ ಚಂಡಮಾರುತ ಅಪ್ಪಳಿಸಿದ್ದರಿಂದ. ಅದರ ಅಟಾಟೋಪದಿಂದಾಗಿ ಓರ್ಲ್ಯಾಂಡೊ ವಿಮಾನನಿಲ್ದಾಣವೂ ಸ್ಥಗಿತವಾಗಿದ್ದರಿಂದ. ವಾಷಿಂಗ್ಟನ್‌ಗೆ ಹಿಂದಿರುಗಲು ನಾನು ಟಾಂಪಾದಿಂದ ವಿಮಾನ ಹಿಡಿಯಬೇಕಿತ್ತು.

ಶ್ಯಾಮ್ ಕೂಡ ನನ್ನೊಂದಿಗಿದ್ದರು. ಟಾಂಪಾದಲ್ಲಿ ಅವರ ಅಕ್ಕ-ಭಾವ ನಾಗಲಕ್ಷ್ಮಿ(ನಾಗು) ಮತ್ತು ಶಂಕರ್ ಒಂದು ಚಿಕ್ಕ ದಿನಸಿ ಅಂಗಡಿ ಮತ್ತು ಎನ್.ಎಸ್ ಫುಡ್ಸ್ ದೋಸೆ ಕ್ಯಾಂಪ್ ಎಂಬ ಸಸ್ಯಾಹಾರಿ ರೆಸ್ಟೊರೆಂಟ್ ನಡೆಸಿಕೊಂಡಿದ್ದರು. ಓರ್ಲ್ಯಾಂಡೊದಿಂದ ಟಾಂಪಾ ತಲುಪಲಿಕ್ಕೆ ನನ್ನೊಬ್ಬ ಎಂಜಿನಿಯರಿಂಗ್ ಸಹಪಾಠಿ ಸಮ್ಮೇಳನಕ್ಕೆ ಬಂದಿದ್ದವನು ಮನೆಗೆ ಹಿಂದಿರುಗುತ್ತ ನಮ್ಮನ್ನೂ ಕಾರಿನಲ್ಲಿ ಕರೆದುಕೊಂಡುಹೋಗಿದ್ದು ಸಹಾಯವಾಯ್ತು.

ಟಾಂಪಾದಲ್ಲೂ ಚಂಡಮಾರುತದ ದಾಂಧಲೆ ಇತ್ತು. ಗಾಳಿಮಳೆಯಿಂದ ಕೆಲವೆಡೆ ಪವರ್‌ ಕಟ್ ಆಗಿತ್ತು. ನಾಗು-ಶಂಕರ್ ಮನೆಗೆ ನಾವು ಫೋನ್ ಮಾಡಿದ್ದಾಗ ಮನೆಯಲ್ಲಿ ಕರೆಂಟ್ ಇಲ್ಲ, ನಾವೂ ನಮ್ಮ ಅಂಗಡಿಗೆ ಬಂದಿರುತ್ತೇವೆ, ಅಲ್ಲಿಗೇ ಬನ್ನಿ ಅಡುಗೆ ಮಾಡಿ ಎಲ್ಲರೂ ಊಟ ಮಾಡೋಣ ಎಂದಿದ್ದರು. ನಾವು ಅಲ್ಲಿ ತಲುಪಿದ ಸ್ವಲ್ಪ ಹೊತ್ತಿಗೇ ನಾಗು ಅವರ ಬಾಲ್ಯಸ್ನೇಹಿತೆಯೊಬ್ಬರು ಸಮ್ಮೇಳನ ಮುಗಿಸಿ ನ್ಯೂಜೆರ್ಸಿಗೆ ಸಂಜೆಯ ವಿಮಾನದಲ್ಲಿ ಪ್ರಯಾಣಿಸಬೇಕಾದವರು ಸ್ನೇಹದ ಸ್ಮರಣೆಯಿಂದ ಅಲ್ಲಿಗೆ ಬಂದರು.

ಸ್ವಲ್ಪ ಹೊತ್ತಿನಲ್ಲೇ, ಅ.ರಾ.ಮಿತ್ರರನ್ನು ಕರೆದುಕೊಂಡು ಡಾ. ಯು.ಬಿ.ವಾಸುದೇವ್-ಪೊನ್ನಮ್ಮ ದಂಪತಿಯೂ ಬಂದರು. ಅಯಾಚಿತವಾಗಿ ಅಲ್ಲೊಂದು ಸ್ನೇಹಸಮಾವೇಶ ಏರ್ಪಾಡಾಯಿತು. “ಬನ್ನಿ ಬನ್ನಿ, ಇವತ್ತು ನಮ್ಮ ದೋಸೆಕ್ಯಾಂಪ್ ನಲ್ಲಿ ದೋಸೆ ಮಾಡಿಲ್ಲ, ಆದರೆ ಬಿಸಿಬಿಸಿ ಅನ್ನ-ಹುಳಿ ಮಾಡಿ ಬಡಿಸುತ್ತೇನೆ" ಎಂದು ನಗುಮೊಗದ ಸ್ವಾಗತ, ನಾಗು ಅವರಿಂದ.

ಮೋಡ ಕವಿದ ವಾತಾವರಣ, ಜಿಟಿಜಿಟಿ ಮಳೆಯೂ ಸುರಿಯುತ್ತಿತ್ತು. ಬೆಳಗ್ಗೆಯಿಂದ ಏನೂ ತಿಂಡಿಯಿಲ್ಲದೆ, ನಮಗೆಲ್ಲರಿಗೂ ಅದಾಗಲೇ ಮಧ್ಯಪ್ರದೇಶದಲ್ಲಿ ಕೋಲಾಹಲ ಶುರು ವಾಗಿತ್ತು. ಮಧ್ಯಾಹ್ನ ಗಂಟೆ ಒಂದೂವರೆ-ಎರಡಾಗುತ್ತ ಬಂದಿದ್ದರಿಂದ ಏಕ್‌ದಂ ಹೊಟ್ಟೆ ಹಸೀತಿತ್ತು. ಅನ್ನ-ಹುಳಿ ಆಗುವವರೆಗೂ ಬಾಯಾಡಿಸುವುದಕ್ಕಾಗಿ ಹಪ್ಪಳ-ಸಂಡಿಗೆ ಕರಿದುಕೊಟ್ಟರು ನಾಗು. ಟಿವಿಯಲ್ಲಿ ಉದಯ ಚಾನೆಲ್‌ನಲ್ಲಿ ಅಣ್ಣಾವ್ರ ಬಭ್ರುವಾಹನ ಸಿನೆಮಾ ಬರುತ್ತಿತ್ತು.

ಕರುಂಕುರುಂ ಸಂಡಿಗೆ ಮೆಲ್ಲುತ್ತಾ ಹರಟುತ್ತ ಸಮ್ಮೇಳನ ರಸಗಳಿಗೆಗಳ ಮೆಲುಕುಹಾಕುತ್ತ ಇದ್ದಂತೆ ಅನ್ನ-ಹುಳಿ ರೆಡಿಯಾಯ್ತು. ಅಪರೂಪಕ್ಕೆ ಇಷ್ಟೆಲ್ಲ ಆತ್ಮೀಯರು, ಅತಿಥಿಗಳು ತಮ್ಮಲ್ಲಿಗೆ ಬಂದು ಜತೆಯಾಗಿ ಊಟ ಮಾಡುವ ವಿಚಾರವೇ ನಾಗು-ಶಂಕರ್ ದಂಪತಿಗೆ ಧನ್ಯತಾಭಾವದ ಸಂತಸ ತಂದಿತ್ತು. ಹಪ್ಪಳ-ಸಂಡಿಗೆ ಟ್ರೇಗಳೆರಡೂ ಖಾಲಿಯಾಗುತ್ತ ಬಂದಿದ್ದವು.

“ಅನ್ನ-ಹುಳಿ-ಮೊಸರು ಮಾತ್ರ ಯಾಕೆ, ಮೊನ್ನೆಮೊನ್ನೆ ಭಾರತದಿಂದ ಫ್ರೆಷ್ ಆಗಿ ತರಿಸಿದ ರಾಗಿ ಹಿಟ್ಟಿದೆ, ಮುದ್ದೆ ಮಾಡಲೇ, ಇಷ್ಟವಿದೆಯೇ ಯಾರಿಗಾದ್ರೂ?" ಅಂತ ನಾಗು ಕೇಳೊದೇ ತಡ- ಅ.ರಾ.ಮಿತ್ರ ಸೇರಿದಂತೆ ಒಕ್ಕೊರಲಿಂದ ಎಲ್ಲರ ಅಂಗೀಕಾರ ರಾಗಿಮುದ್ದೆಗೆ! ಸರಿ, ರಾಗಿಮುದ್ದೆಯೂ ತಯಾರಾಯ್ತು. ಹಪ್ಪಳ-ಸಂಡಿಗೆ ಕರಿಯಲು ಹೇಗೂ ಎಣ್ಣೆ ಬಿಸಿ ಮಾಡಿ ದ್ದೇ ಇದೆ, ಒಂದಿಷ್ಟು ಬಾಳಕಮೆಣ್ಸು ಕೂಡ ಕರಿದುಬಿಡು ಎಂದರು ಶಂಕರ್. ಗರಿಗರಿ ಬಾಳಕಮೆಣ್ಸು ಕರಿದು ತಟ್ಟೆಯಲ್ಲಿ ರೆಡಿಯಾಗಿ ಬಂತು. ರಾಗಿಮುದ್ದೆ ತಿನ್ನುತ್ತೇನೆಂದು ಮೊದಲು ಹೇಳಿದ್ದ ಅ.ರಾ.ಮಿತ್ರ ತನ್ನ ಪ್ರಿಫರೆನ್ಸನ್ನು ಮುದ್ದೆಯಿಂದ ಬಾಳಕಮೆಣ್ಸಿಗೆ ಬದಲಿಸಿದರು. ಬಾಳಕಮೆಣ್ಸು ಇದ್ದರೆ ಬೇರೇನೂ ಬೇಡವಂತೆ ಅವರಿಗೆ.

ಅಸಿಡಿಟಿ-ಗಿಸಿಡಿಟಿಗಳನ್ನೆಲ್ಲ ಮರೆತು ಅದನ್ನು ಸವಿಯುತ್ತಾರವರು. ಆಮೇಲೆ ಸ್ವಲ್ಪ ರಾಗಿ ಮುದ್ದೆ-ಹುಳಿ ಕೂಡ ತಗೊಂಡರಾದರೂ ಮಿತ್ರ ಆವತ್ತು ಪರಮಾನಂದದಿಂದ ಉಂಡದ್ದು ಬಾಳಕಮೆಣ್ಸು ಕಲೆಸಿದ ಅನ್ನ. ನಿಜಹೇಳಬೇಕೆಂದರೆ ಮೂರು ದಿನಗಳ ಅಕ್ಕ ಸಮ್ಮೇಳನದ ಊಟ-ಉಪಚಾರಗಳ ತೂಕ ಒಂದಾದರೆ ಅಷ್ಟೇ ತೂಕ ಟಾಂಪಾದಲ್ಲಿ ಆವತ್ತು ನಾವೆಲ್ಲ ಆರಾಮಾಗಿ ಹರಟುತ್ತ ಉಂಡ ಸುಗ್ರಾಸ ಭೋಜನ. ಅಮೆರಿಕದಲ್ಲಿ, ಅದೂ ಅ.ರಾ.ಮಿತ್ರರ ಜತೆಯಲ್ಲಿ ಕುಳಿತು ರಾಗಿಮುದ್ದೆ ಬಾಳಕಮೆಣ್ಸು ಅನ್ನ-ಹುಳಿ ಹಪ್ಪಳ-ಸಂಡಿಗೆ ಮೆಲ್ಲುವು ದಕ್ಕೆ, ಶ್ಯಾಮಸುಂದರ್ ಹೇಳಿದ್ದ ಅಶ್ವತ್ಥವೃಕ್ಷ ಹೋಲಿಕೆಯನ್ನು ಮತ್ತೆ ನೆನಪಿಸುವುದಾದರೆ ಅಶ್ವತ್ಥಕಟ್ಟೆ ಬಳಿ ವನಭೋಜನ ಮಾಡಲಿಕ್ಕೆ, ಅದೃಷ್ಟ ಇರಬೇಕಲ್ಲವೇ!

ಅ.ರಾ.ಮಿತ್ರರೊಡನೆ ಆತ್ಮೀಯತೆ, ಒಂದು ತೆರನಾದ ಸಲುಗೆ ಬೆಳೆಯಲಿಕ್ಕೆ ಆ ಅನೌಪ ಚಾರಿಕ ಭೋಜನಕೂಟ ನನಗೆ ಸಹಕಾರಿಯಾಯ್ತು. ಮರುವರ್ಷ 2005ರ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ನನ್ನ ಮೊತ್ತಮೊದಲ ಪುಸ್ತಕ ‘ವಿಚಿತ್ರಾನ್ನ’ ಬಿಡುಗಡೆ. ಅದರ ವ್ಯವಸ್ಥೆಗೂ ನಾನು ಶ್ಯಾಮ್ ನೆರವು ಪಡೆದಿದ್ದೆ. ಸಮಾರಂಭದ ಅಧ್ಯಕ್ಷತೆ ವಹಿಸಲಿಕ್ಕೆ ತಕ್ಕುದಾದ ಗಣ್ಯರು ಯಾರು ಎಂಬ ಪ್ರಶ್ನೆಯೇ ಉದ್ಭವಿಸಲಿಲ್ಲ. ಅಶ್ವತ್ಥಸದೃಶ ಅ.ರಾ.ಮಿತ್ರರೇ ಡೀ ಫಾಲ್ಟ್ ಚಾಯ್ಸ್. ಅವರನ್ನು ಸಂಪರ್ಕಿಸಿದಾಗ ಸಂತೋಷದಿಂದ ಒಪ್ಪಿಕೊಂಡರು.

ಆಗಷ್ಟೇ ಮುದ್ರಣವಾಗಿ ಬಂದಿದ್ದ ಪುಸ್ತಕದ ಒಂದು ಪ್ರತಿಯನ್ನು ಅವರಿಗೆ ತಲುಪಿಸಿದೆವು. ಸಮಾರಂಭದ ದಿನ ಸಮಯಕ್ಕೆ ಸರಿಯಾಗಿ ಬಸವನಗುಡಿಯ ವಾಡಿಯಾ ಸಭಾಂಗಣ ದ್ವಾರದಲ್ಲಿದ್ದರು ಅ.ರಾ.ಮಿತ್ರ! ಅವರನ್ನೆದುರುಗೊಂಡ ನನಗೆ ಅಲ್ಲಿಯೇ ‘ಛಂದೋಮಿತ್ರ’ ಪುಸ್ತಕದ ಪ್ರತಿಯನ್ನು ಉಡುಗೊರೆಯಾಗಿ ಕೊಟ್ಟರು. ಚಹ-ಕಾಫಿ ಲಘೂಪಹಾರದ ಬಳಿಕ ಕಾರ್ಯಕ್ರಮ ಆರಂಭ.

ಪುಸ್ತಕದ ಹೆಸರೇ ವಿಚಿತ್ರಾನ್ನ, ಅದಕ್ಕೆ ತಕ್ಕುದಾಗಿ ಪುಸ್ತಕದ ಕಟ್ಟನ್ನು ಬಾಣಲೆಯಿಂದ ತೆಗೆದು ಲೋಕಾರ್ಪಣೆ! ಕನ್ನಡಸಾಹಿತ್ಯ ಸಮಾರಾಧನೆಯಲ್ಲಿ ಅಂಥದೊಂದು ಪ್ರಯೋಗ ಸಾಕಾರವಾದದ್ದು ಅ.ರಾ.ಮಿತ್ರರ ಅಮೃತಹಸ್ತದಿಂದ- ಅದೇ, ಅಶ್ವತ್ಥಸದೃಶ ಹಿರಿಜೀವದ ಸಾನ್ನಿಧ್ಯ, ಶುಭಾಶಂಸನೆಗಳಿಂದ- ಎಂದು ನನಗೆ ಯಾವತ್ತಿಗೂ ಹೆಮ್ಮೆ. ಸಭೆಯ ಅಧ್ಯಕ್ಷ ರಾದ್ದರಿಂದ ಮಿತ್ರರ ಭಾಷಣ ಕೊನೆಗೆ ಇದ್ದದ್ದು.

ಅದಕ್ಕೆ ಮೊದಲು ಸಿ.ಆರ್.ಸಿಂಹ ಮತ್ತು ವಿಶ್ವೇಶ್ವರ ಭಟ್ಟರಿಂದ ರಸವತ್ತಾದ ಭಾಷಣಗಳು. “ನಾನು ಭಾಷಣ ಮಾಡಲಿಕ್ಕೆಂದು ಬರೆದು ತಂದಿದ್ದ ಚೀಟಿಯನ್ನು ಕದ್ದು ಪಾಲು ಮಾಡಿ ಕೊಂಡು ಇವರಿಬ್ಬರೂ ಭರ್ಜರಿ ಭಾಷಣ ಹೊಡೆದಿದ್ದಾರೆ. ಈಗ ನಾನು ಹೇಳುವುದೇನೂ ಉಳಿದಿಲ್ಲ!" ಟಿಪಿಕಲ್ ಅ.ರಾ.ಮಿತ್ರ ನಗೆಬಾಂಬ್. ಸಭೆಯಿಡೀ ಘೊಳ್ಳೆಂದು ನಗು, ಚಪ್ಪಾಳೆ. ಆಮೇಲೆ ಭಾಷಣದುದ್ದಕ್ಕೂ ನಡುನಡುವೆ ನಗೆಬಾಂಬ್‌ಗಳು ಸಿಡಿಯುತ್ತಲೇ ಇದ್ದವು.

ಹಿಂದಿನ ವರ್ಷವಷ್ಟೇ ಅಕ್ಕ ಸಮ್ಮೇಳನದ ಬಳಿಕ ಟಾಂಪಾದಲ್ಲಿ ನಾವೆಲ್ಲ ಸೇರಿ ರಾಗಿ ಮುದ್ದೆ, ಬಾಳಕಮೆಣ್ಸು ಚಪ್ಪರಿಸಿದ್ದನ್ನು ಪ್ರಸ್ತಾವಿಸಲಿಕ್ಕೆ ಅವರು ಮರೆಯಲಿಲ್ಲ. ವಿಚಿತ್ರಾ ನ್ನವೆಂಬ ಈ ವಿಚಿತ್ರ ಪುಸ್ತಕವು ಅಗೆವ ಬುದ್ಧಿಗೆ ಅನಂತ ಅವಕಾಶ ಕೊಡುವಂಥದ್ದು ಎಲ್ಲರೂ ಓದಿ ಪ್ರೋತ್ಸಾಹಿಸಿ ಎಂದು ಹರಸಲಿಕ್ಕೂ ಮರೆಯಲಿಲ್ಲ. ಅವರು ಸ್ವಹಸ್ತಾಕ್ಷರ ದೊಡನೆ ಉಡುಗೊರೆಯಾಗಿ ಕೊಟ್ಟ ಛಂದೋಮಿತ್ರ ಪುಸ್ತಕವಂತೂ ನನ್ನದೊಂದು ಅಮೂಲ್ಯ ಆಸ್ತಿ. ಛಂದಸ್ಸಿನ ವಿಚಾರಗಳನ್ನು ತಿಳಿದುಕೊಳ್ಳಲಿಕ್ಕಷ್ಟೇ ಅಲ್ಲ, ಛಂದೋಬದ್ಧ ಹಾಸ್ಯದಿಂದ ಮನಸ್ಸನ್ನು ಉಲ್ಲಸಿತಗೊಳಿಸಲಿಕ್ಕೂ ನಾನು ಆಗೊಮ್ಮೆ ಈಗೊಮ್ಮೆ ಅದರ ಪುಟಗಳನ್ನು ತಿರುವುವುದುಂಟು. ಪದವಿನೋದ(ಪನ್) ಹುಚ್ಚು ನನಗೂ ಇರುವುದರಿಂದ ಅ.ರಾ.ಮಿತ್ರರಂಥ ಪನ್-ಡಿತರ ಮಾರ್ಗದರ್ಶನ ಪನ್-ಗುಂ ಲಂಘಯತೇ ಗಿರಿಂ ಎನ್ನು ವಷ್ಟು ಬಲ ಕೊಡುತ್ತದೆನ್ನುವುದುಂಟು. ಅಂಥ ಗುರುಸಮಾನ ಮಿತ್ರರಿಗೀಗ 90ರ ಸಂಭ್ರಮ.

‘ನವತಿ’(ಸುಸಂಸ್ಕೃತ 90 ನಾಟ್‌ಔಟ್) ಬಳಿಕ ‘ಶತಮಾನಂ ಭವತಿ’ಯನ್ನೂ ಮಿತ್ರರು, ಅವರ ಅಭಿಮಾನಿ ಬಂಧುಮಿತ್ರರು ಸಂಭ್ರಮದಿಂದ ಎದುರುಗೊಳ್ಳುವಂತೆ ದೀರ್ಘಾ ಯುರಾರೋಗ್ಯ ಕರುಣಿಸಲೆಂದು ಭಗವಂತನಲ್ಲಿ ನನ್ನ ಹಾರೈಕೆ.

ಪಾಲ್ಗೊಳ್ಳಲಾಗುತ್ತಿಲ್ಲವೆಂಬ ಚಡಪಡಿಕೆ ಎಂದೆನಷ್ಟೆ? ಹಾಗಿದೆ ಕಾರ್ಯಕ್ರಮ ಸ್ವರೂಪ ಮತ್ತು ಸೂಚಿ! ಬೆಳಗ್ಗೆಯಿಂದ ಸಂಜೆಯವರೆಗೂ ಭರಪೂರ ಮನೋರಂಜನೆ. ಭಾಗವ ಹಿಸುತ್ತಿರುವವರ ಪಟ್ಟಿಯೂ ಆಕರ್ಷಕ. ಚಂದ್ರಶೇಖರ ಕಂಬಾರರಿಂದ ಉದ್ಘಾಟನೆ, ಟಿ.ವಿ.ವೆಂಕಟಾಚಲ ಶಾಸಿ ಮತ್ತು ರಾ.ಗಣೇಶರಿಂದ ಅಭಿನಂದನಾ ಗ್ರಂಥದ ಬಿಡುಗಡೆ, ಅ.ರಾ.ಮಿತ್ರರ ವಿವಿಧ ಸಾಹಿತ್ಯಕೃತಿಗಳ ಬಗ್ಗೆ ಅವಲೋಕನ- ಸೂರ್ಯಪ್ರಕಾಶ ಪಂಡಿತ್, ಸಿ.ಸೋಮಶೇಖರ, ವೈ.ವಿ.ಗುಂಡೂರಾವ್, ಎಂ.ಎಸ್.ನರಸಿಂಹಮೂರ್ತಿ ಮುಂತಾದವ ರಿಂದ.

ಎಂ.ಕೃಷ್ಣೇಗೌಡ, ಎಸ್.ಆರ್.ರಾಮಸ್ವಾಮಿ, ಎಸ್.ಆರ್.ಲೀಲಾ ಮುಂತಾದವರ ಭಾಷಣ ಗಳು. ನಡುವೆ ಗೀತ-ನೃತ್ಯ-ಚಿತ್ರ-ಹಾಸ್ಯ-ಗಮಕ ರುಚಿಕರ ವ್ಯಂಜನಗಳು. ಒಟ್ಟಿನಲ್ಲಿ ಹದಿ ನಾರಾಣೆ ಸದಭಿರುಚಿಯ ಸಾಂಸ್ಕೃತಿಕ ಉತ್ಸವ. ಮಿತ್ರರೊಡನೆ ಭೋಜನ. ನನ್ನ ಚಡಪ ಡಿಕೆ ಅರ್ಥವಾಗಿರಬಹುದು ರಾಮನಾಥ್‌ಗೆ. ಮುದ್ರಣಕ್ಕೆ ಸಿದ್ಧವಾದ ‘ಮಿತ್ರಾರ್ಜಿತ’ದ ಮೃದುಪ್ರತಿಯನ್ನು ನನಗೆ ಓದಲಿಕ್ಕೆ ಕೊಟ್ಟರು; ಕವರ್-ಟು-ಕವರ್ ಓದಿಮುಗಿಸಿದೆ ಒಂದೇದಿನದಲ್ಲಿ!

ಮಿತ್ರಾರ್ಜಿತ ಒಂದು ಅತ್ಯಮೂಲ್ಯ ಗ್ರಂಥ. ಸಾಹಿತ್ಯ ರಶ್ಮಿ, ಉದ್ಯೋಗ ರಶ್ಮಿ, ರಾಗ ರಶ್ಮಿ, ಮೈತ್ರಿ ರಶ್ಮಿ, ವಿನೋದ ರಶ್ಮಿ, ಆಂಗ್ಲ ರಶ್ಮಿ, ವಿದೇಶ ರಶ್ಮಿ, ಕಾವ್ಯ ರಶ್ಮಿ ಎಂದು ವಿವಿಧ ಭಾಗಗಳಲ್ಲಿ ಅನುಕ್ರಮವಾಗಿ ಮಿತ್ರರ ಅಭಿಮಾನಿಗಳು, ಸಹೋದ್ಯೋಗಿಗಳು, ಕುಟುಂಬ ಸ್ಥರು, ನೆರೆಕೆರೆಯವರು, ಕನ್ನಡದ ಹಾಸ್ಯಪಟುಗಳು, ಆಂಗ್ಲದಲ್ಲಿ ಬರೆದವರು, ಅನಿವಾಸಿ ಕನ್ನಡಿಗರು, ಕವಿಗಳು ಪ್ರೀತಿಗೌರವದಿಂದ ಅರ್ಪಿಸಿದ ಅಕ್ಷರಗುಚ್ಛಗಳು. ಶತಾವಧಾನಿ ಯವರ ‘ವಿದ್ವದ್ವಿನೋದಗಗನದ ಮಿತ್ರ’ ಲೇಖನದಲ್ಲಿ “ಅ.ರಾ.ಮಿತ್ರ ಅವರ ವಾಗ್ಮಿತೆ, ವೈದುಷ್ಯ ಮತ್ತು ವಿನೋದಗಳೆಂಬ ಗಂಗೆ-ಯಮುನೆ-ಸರಸ್ವತಿಯರು ಎಂಥ ರಸಪ್ರಯಾಗ ವನ್ನು ಸೃಷ್ಟಿಸಬಲ್ಲವು!

ಅವರ ಸಾಹಿತ್ಯಕೇಂದ್ರಿತ ಭಾಷಣಗಳಲ್ಲಿ ಕಾವ್ಯದ ಕಾಶೀಪೀತಾಂಬರಕ್ಕೆ ಹಾಸ್ಯದ ಜರಿ ಯಂಚು ಹೊಳೆಹೊಳೆದು ಹೆಣೆದುಕೊಳ್ಳುತ್ತದೆ, ಹಾಸ್ಯಕೇಂದ್ರಿತ ಭಾಷಣಗಳಲ್ಲಿ ನಗೆಯ ರೇಷ್ಮೆಯೆಳೆಯೊಡನೆ ಕಾವ್ಯೋಕ್ತಿಗಳ ಹೊನ್ನಿನ ಎಳೆಗಳು ಜತೆಗೂಡಿ ನೇಯ್ದುಕೊ ಳ್ಳುತ್ತವೆ. ಎಲ್ಲಿಯೂ ಔಚಿತ್ಯದ ಗಡಿ ಮೀರಿ ಅನರ್ಥವಾಗುವುದಿಲ್ಲ" ಎಂಬ ಬಣ್ಣನೆ; “ಮಿತ್ರರದು ಸಹಜವಾದ ಹಾಸ್ಯಪ್ರe; ನಗೆಜವನಿಕೆಯಲ್ಲಿ ಮುಖ ಮರೆಸಿಕೊಂಡ ಭಾಷಾ ಪಾಂಡಿತ್ಯ. ನಾನಾ ಪ್ರಕಾರದ ಸಾಹಿತ್ಯದ ಸಂಸ್ಕಾರದಿಂದ ಮನಸ್ಸು ಸಂಪದ್ಯುಕ್ತ.

ಜತೆಗೆ ಲೋಕಜ್ಞಾನ ಮತ್ತು ವಯೋಮಾನದಿಂದ ಪ್ರಾಪ್ತವಾಗಿರುವ ಮಾಗುವಿಕೆಯೂ ಕೂಡಿಕೊಂಡಿವೆ. ಮೌಖಿಕ ಕಥನ ಸಂಪ್ರದಾಯಕ್ಕೆ ಹೇಳಿಮಾಡಿಸಿದ ವ್ಯಕ್ತಿತ್ವವಿದು" ಎಂಬುದು ಎಚ್ಚೆಸ್ವಿ ಅಭಿಪ್ರಾಯವಾದರೆ, ಮಲ್ಲೇಪುರಂ ಜಿ.ವೆಂಕಟೇಶ್ “ಅ.ರಾ.ಮಿತ್ರರ ಮಾನವೀಯ ಸಂವೇದನೆಯನ್ನು ಹಲವು ಬಾರಿ ಕಂಡಿದ್ದೇನೆ, ಅನುಭವಿಸಿದ್ದೇನೆ.

ಅವರ ವಚೋವಿಲಾಸದ ಭಂಗಿ-ಭಣಿತಗಳಿಗೂ ಬೆರಗಾಗಿದ್ದೇನೆ. ಅವರಲ್ಲಿ ವಿದ್ವತ್ತು-ಸಹೃದಯತೆಗಳು ಒಂದಕ್ಕೊಂದು ಒಡನಾಡಿಗಳಾಗಿ ಇರುವುದನ್ನು ಹತ್ತಾರು ಬಾರಿ ಕಂಡಿ ದ್ದೇನೆ. ಅವರು ಉತ್ತಮ ಬೋಧಕರೆಂದು ಅವರಿವರಿಂದ ಕೇಳಿ ತಿಳಿದಿದ್ದೇನೆ. ಛಂದೋ ಪರಿಜ್ಞಾನ, ವಿಷಯಸಂಪತ್ತಿ, ವಿಮರ್ಶಾಕೌಶಲ, ಶಾಸ್ತ್ರಜ್ಞಾನ ಇಂಥವೆಲ್ಲ ಒಬ್ಬರಲ್ಲೇ ಐಕ್ಯಗೊಂಡಿರುವುದನ್ನು ಕಂಡು ಮೂಕವಿಸ್ಮಿತನಾಗಿದ್ದೇನೆ.

ಆದರೆ, ಇಷ್ಟೆಲ್ಲ ಸಂಪತ್ತು ಅವರಿಗಿದ್ದರೂ ಅವೆಲ್ಲವೂ ಮಾತಿನ ಗಾಳಿಯಲ್ಲಿ ತೂರಿ ಹೋದ ವಲ್ಲಾ, ಅವು ಬರಹರೂಪವನ್ನು ತಾಳಲಿಲ್ಲವಲ್ಲ ಎಂಬುದು ನನ್ನ ಸಂಕಟ" ಎನ್ನುತ್ತಾರೆ. ಮಿತ್ರರನ್ನು ‘ಅರಿವಿನ ಬೊಕ್ಕಸ’ ಎಂದು ಸಿ.ಎನ್.ಕೃಷ್ಣಮಾಚಾರ್ ಬಣ್ಣಿಸಿದರೆ “ಪಾಂಡಿ ತ್ಯದ ಕಬ್ಬಿಣದ ಕಡಲೆಗೆ ಘಮ್ಮೆನ್ನುವ ಹಾಸ್ಯದ ಒಗ್ಗರಣೆ ಬೆರೆಸಿ ವಿನೋದದ ಗುಗ್ಗರಿ ಯನ್ನು ಹಂಚುವುದರಲ್ಲಿ ಇವರನ್ನು ಮೀರಿದ ಇನ್ನೊಬ್ಬರಿಲ್ಲ" ಎಂಬುದು ರಾಮ ನಾಥ್ ಅಂಬೋಣ.

ಕೃಷ್ಣೇಗೌಡರಂತೂ ಶೀರ್ಷಿಕೆಯಲ್ಲೇ “ಅವರು ನನ್ನ ಗುರು ತಂದೆ, ಅವರು ನನ್ನ ಗುರು ತೆಂದೆ" ಎಂದಿದ್ದಾರೆ. ಇದಾವುದೂ ಮುಖಸ್ತುತಿಯಲ್ಲ, ಮಿತ್ರರಿಗದರ ಆಸೆ-ಅವಶ್ಯಕತೆಗಳೂ ಇಲ್ಲ. ಆದರೆ ಎಲ್ಲರಿಗೂ ಅದೆಂಥ ನಿರ್ವ್ಯಾಜ ಪ್ರೀತಿಯನ್ನು ಅವರು ಹಂಚಿದ್ದಾರೆ ಮತ್ತು ಮಿತ್ರಾರ್ಜಿತವಾಗಿ ಅಷ್ಟೇ ಪ್ರೀತಿಯನ್ನು ಎಲ್ಲರಿಂದಲೂ ಪಡೆದಿದ್ದಾರೆಂಬುದು ಪ್ರತಿ ಅಕ್ಷರ ದಲ್ಲೂ ತುಳುಕುವ ಆರ್ದ್ರತೆಯಿಂದ ನಮಗೆ ಅರಿವಾಗುತ್ತದೆ. ಸಾತ್ತ್ವಿಕವಾದೊಂದು ಅಸೂಯೆಯೂ ಉಂಟಾಗುತ್ತದೆ!

ನನ್ನ ಪ್ರಕಾರ ‘ಮಿತ್ರಾರ್ಜಿತ’ದಲ್ಲಿ ಮುಕುಟಪ್ರಾಯವಾದುದು ಮಿತ್ರರ ಮಗಳು ಸೌಮ್ಯ ಅವರ “ಸೂರ್ಯ(ಮಿತ್ರ)ನಿಗೇ ಟಾರ್ಚ್?!" ಲಹರಿ. ಅದನ್ನೋದಿ ಮಿತ್ರರ ಬಗೆಗೆ ನಮ್ಮಲ್ಲಿ ರುವ ಗೌರವ ಎವರೆಸ್ಟ್‌ನ ಎತ್ತರಕ್ಕೇರುತ್ತದೆ. ಬೇರೆಲ್ಲ ಲೇಖನಗಳಲ್ಲಿ ಅಲ್ಲೊಂದು ಇಲ್ಲೊಂದು ಪ್ಯಾರಗ್ರಾಫ್ ಹೈಲೈಟ್ ಮಾಡಿ ಮರುಓದಿಗೆ ಗುರುತಿಸಿಟ್ಟ ನಾನು ಸೌಮ್ಯರ ಇಡೀ ಲೇಖನ ಯಥಾವತ್ತಾಗಿ ಪ್ರೌಢಶಾಲೆಯಲ್ಲೋ ಕಾಲೇಜಿನಲ್ಲೋ ಕನ್ನಡದ ವಿದ್ಯಾರ್ಥಿ ಗಳ ಪಾಠಪುಸ್ತಕದಲ್ಲಿ ಸೇರಬೇಕು ಎನ್ನುತ್ತೇನೆ. ಮಿತ್ರಾರ್ಜಿತದ ಸಾಹಿತ್ಯಸರಕು ಕನ್ನಡಿಗರೆಲ್ಲರ ಅರ್ಜಿತವೂ ಹೌದು.