SriVathsa Joshi Column: ಬ್ರಾಹ್ಮ ಮುಹೂರ್ತ, ಶುಚಿತ್ವ ಸಂಹಿತೆ ಮತ್ತು ಸ್ನಾನವಿಧಿ ವಿಜ್ಞಾನ

ಬ್ರಾಹ್ಮ ಮುಹೂರ್ತವೆಂದರೆ ಬ್ರಹ್ಮ ಜ್ಞಾನವನ್ನು ಪಡೆಯವುದಕ್ಕಾಗಿ ಅಧ್ಯಯನ ಮಾಡಲು ತಕ್ಕುದಾದ ಮುಹೂರ್ತ. ಬ್ರಹ್ಮಯೋಗ್ಯ ವಾದ ಸಮಯ. ಅರುಣೋದಯಕ್ಕಿಂತ ಸ್ವಲ್ಪ ಮೊದಲಿನ ಅವಧಿ. ಕರಾರು ವಾಕ್ಕಾಗಿ ಅದು ಯಾವ ಸಮಯವೆಂದು ಬೇರೆಬೇರೆ ಅಭಿಪ್ರಾಯಗಳಿವೆ.

Srivathsa Joshi Column - 020225

ತಿಳಿರು ತೋರಣ

ಶ್ರೀವತ್ಸ ಜೋಶಿ

srivathasjoshi@yahoo.com

ಅಗ್ನಿಪುರಾಣದಲ್ಲಿ ಈ ರೀತಿ ಒಂದು ಶ್ಲೋಕ ಇದೆಯಂತೆ (ಅಂತೆ ಎಂದಿದ್ದೇಕೆಂದರೆ ನಾನು ಅಗ್ನಿ ಪುರಾಣವನ್ನು ಓದಿದವನಲ್ಲ. ನನ್ನ ಆಸಕ್ತಿಯ ಸಂಗ್ರಹಕ್ಕೆ ಹೊಸದಾಗಿ ಸೇರಿರುವ ‘ವೈದ್ಯಕೀಯ ಸುಭಾಷಿತ ಸಾಹಿತ್ಯ’ ಗ್ರಂಥದಲ್ಲಿ ಈ ಶ್ಲೋಕದ ಆಕರ ಅಗ್ನಿಪುರಾಣ ಅಂತ ಇದೆ):

ಬ್ರಾಹ್ಮೇ ಮುಹೂರ್ತೇ ಚೋತ್ಥಾಯ ವಿಷ್ಣ್ವಾದೀನ್ ದೇವತಾನ್ ಸ್ಮರೇತ್|

ಶೌಚಂ ಕೃತ್ವಾ ಮೃದಾಚಮ್ಯ ಭಕ್ಷ್ಯಯೇದ್ದಂತಧಾವನಮ್||

ಶ್ಲೋಕದ ಸ್ಥೂಲ ಅರ್ಥವೇನೆಂದರೆ, ಬ್ರಾಹ್ಮ ಮುಹೂರ್ತದಲ್ಲಿ ನಿದ್ದೆಯಿಂದೆದ್ದು ಮೊದಲಿಗೆ ವಿಷ್ಣುವೇ ಮೊದಲಾದ ಇಷ್ಟದೇವತೆಗಳ ಸ್ಮರಣೆ ಮಾಡಬೇಕು; ತದನಂತರ ಮಲಮೂತ್ರ ವಿಸರ್ಜನೆ ಮುಗಿಸಿ ಮಣ್ಣು ಮತ್ತು ನೀರಿನಿಂದ ತೊಳೆದುಕೊಳ್ಳಬೇಕು; ಹಲ್ಲುಗಳನ್ನು ಸ್ವಚ್ಛಗೊಳಿಸುವುದಕ್ಕಾಗಿ ಕಡ್ಡಿಯನ್ನು ಜಗಿಯಬೇಕು.

ಇದನ್ನು ಸ್ವಲ್ಪ ಕೂಲಂಕಷವಾಗಿ ತಿಳಿದುಕೊಳ್ಳುವುದಾದರೆ- ಬ್ರಾಹ್ಮ ಮುಹೂರ್ತವೆಂದರೆ ಬ್ರಹ್ಮ ಜ್ಞಾನವನ್ನು ಪಡೆಯವುದಕ್ಕಾಗಿ ಅಧ್ಯಯನ ಮಾಡಲು ತಕ್ಕುದಾದ ಮುಹೂರ್ತ. ಬ್ರಹ್ಮಯೋಗ್ಯ ವಾದ ಸಮಯ. ಅರುಣೋದಯಕ್ಕಿಂತ ಸ್ವಲ್ಪ ಮೊದಲಿನ ಅವಧಿ. ಕರಾರುವಾಕ್ಕಾಗಿ ಅದು ಯಾವ ಸಮಯವೆಂದು ಬೇರೆಬೇರೆ ಅಭಿಪ್ರಾಯಗಳಿವೆ.

ಇದನ್ನೂ ಓದಿ: Srivathsa Joshi Column: ಗಣತಂತ್ರ ದಿವಸಕ್ಕೆ ಯ-ಗಣಗಳದೇ ವಿಶೇಷ ಪಥಸಂಚಲನ

ಒಂದು ಅಭಿಪ್ರಾಯದ ಪ್ರಕಾರ- ಸೂರ್ಯಾಸ್ತದಿಂದ ಸೂರ್ಯೋದಯದವರೆಗಿನ ಇಡೀ ರಾತ್ರಿ ಯನ್ನು ತಲಾ ಮೂರು ಗಂಟೆಗಳ ಮೂರು ಯಾಮಗಳಾಗಿ ವಿಂಗಡಿಸಿದರೆ ಆ ಮೂರನೆಯದೇ ಬ್ರಾಹ್ಮ ಮುಹೂರ್ತ. ಆದರೆ ಸ್ಕಂದಪುರಾಣದ ಪ್ರಕಾರ, ರಾತ್ರಿಯ ಮೂರನೆಯ ಯಾಮದ ದ್ವಿತೀ ಯಾರ್ಧ ಭಾಗ, ಅಂದರೆ ಸೂರ್ಯೋದಯಕ್ಕೆ ಮೊದಲಿನ ಒಂದೂವರೆ ಗಂಟೆ ಅವಧಿ ಬ್ರಾಹ್ಮ ಮುಹೂರ್ತ.

ಇನ್ನೂ ಒಂದು ಶಾಸ್ತ್ರದ ಪ್ರಕಾರ, ರಾತ್ರಿಯ ಮೂರನೆಯ ಯಾಮವನ್ನು ಮೂರು ಭಾಗಗಳಾಗಿಸಿದರೆ ಅದರಲ್ಲಿ ಮೂರನೆಯದು ಬ್ರಾಹ್ಮ ಮುಹೂರ್ತ. ಅಂದರೆ ಸೂರ್ಯೋದಯಕ್ಕೆ ಮೊದಲಿನ ಒಂದು ಗಂಟೆ ಅವಧಿ. ಆ ಸಮಯದಲ್ಲಿ ಎಚ್ಚರಗೊಂಡು ಇನ್ನೂ ಹಾಸಿಗೆಯಲ್ಲಿರುವಾಗಲೇ ಮೂರು ವಿಧದ ಚಿಂತನೆಗಳನ್ನು ಮಾಡಬೇಕಂತೆ.

ಒಂದನೆಯದು ದೇವತಾಚಿಂತನೆ; ಎರಡನೆಯದು ಧರ್ಮ ಮತ್ತು ಅರ್ಥಗಳಿಗಾಗಿ ಲೋಕಹಿತ-ಆತ್ಮಹಿತ ಚಿಂತನೆ; ಮೂರನೆಯದು ಆರೋಗ್ಯದ ದೃಷ್ಟಿಯಿಂದ ಜೀರ್ಣಾಜೀರ್ಣ ಅಥವಾ ಕಾಯ ಕ್ಲೇಶ ಚಿಂತನೆ. ಅದಾದಮೇಲೆ ಹಾಸಿಗೆಯಿಂದೆದ್ದು ಮೊದಲು ಬಹಿರ್ದೆಸೆಗೆ ಹೋಗಬೇಕು. ಆ ಕೆಲಸ ಮುಗಿಸಿ ಮಲದ್ವಾರವನ್ನೂ ಎಡಗೈಯನ್ನೂ ಮೊದಲಿಗೆ ಶುದ್ಧ ಮಣ್ಣಿನಿಂದ, ಆಮೇಲೆ ನೀರಿನಿಂದ ತೊಳೆದುಕೊಳ್ಳಬೇಕಂತೆ!

ಶ್ಲೋಕದಲ್ಲಿ ‘ಮೃದಾಚಮ್ಯ’ ಪದ ಅದನ್ನೇ ಹೇಳುತ್ತಿರುವುದು. ಮೃದಾ ಅಂದರೆ ಮಣ್ಣು/ಮಣ್ಣಿ ನಿಂದ ಎಂದರ್ಥ. ಹಾಗಾದರೆ ಪ್ರಾಚೀನ ಕಾಲದಲ್ಲಿ ಸಂಡಾಸ್ ಆದ್ಮೇಲೆ ಕುಂಡೆ ತೊಳೆಯುತ್ತಿದ್ದದ್ದು (ಸುಸಂಸ್ಕೃತವಾಗಿ ಹೇಳಬೇಕೆಂದರೆ- ಮಲವಿಸರ್ಜನಾನಂತರ ಪೃಷ್ಠಪ್ರಕ್ಷಾಲನ ಮಾಡುತ್ತಿದ್ದದ್ದು) ಮಣ್ಣಿನಿಂದ ಅಂತಾಯ್ತು! ಬೆಕ್ಕು-ಹುಲಿ ಮತ್ತಿತರ ಮಾರ್ಜಾಲ ಜಾತಿಯವು ಮಾತ್ರ ಹಾಗೆ ಮಾಡು ವುದು ಎಂದುಕೊಳ್ಳಬೇಕಿಲ್ಲ. ಇನ್ನು, ನೀರಿನ ಬಳಕೆಗೂ ನಿಶ್ಚಿತ ಕ್ರಮವನ್ನು ಹೇಳಲಾಗಿದೆ.

ಬಾಯಿ, ಮೂಗು, ಕಣ್ಣುಗಳನ್ನಷ್ಟೇ ಅಲ್ಲ, ಶರೀರದ ನವದ್ವಾರಗಳ ಕೊಳೆ ಮತ್ತು ದುರ್ವಾಸನೆ ಕಳೆಯುವಂತೆ ತೊಳೆಯಬೇಕು. ಆದರೆ ಗುಪ್ತಾಂಗಗಳ ತೊಳೆಯುವಿಕೆ ನದಿ-ಕೆರೆ-ಹಳ್ಳ-ಕೊಳ್ಳಗಳಲ್ಲಿ ನೇರವಾಗಿ ಮಾಡಕೂಡದು. ಜಲಮೂಲಗಳ ನೀರು ಮಲಿನವಾಗಬಾರದು. ಬದಲಿಗೆ, ಅಲ್ಲಿಂದ ತಂಬಿಗೆಯಲ್ಲಿ ನೀರು ತಂದು ತೊಳೆಯುವುದು ಸರಿಯಾದ ಕ್ರಮ.

ಇದೆಲ್ಲವನ್ನೂ ಯಾಜ್ಞವಲ್ಕ್ಯಸ್ಮೃತಿ, ಅಷ್ಟಾಂಗಹೃದಯ, ಶಶಿಲೇಖಾ, ಮಿತಾಕ್ಷರಾ ಮುಂತಾದ ಶಾಸಗ್ರಂಥಗಳಲ್ಲಿ ಸಂಸ್ಕೃತ ಶ್ಲೋಕಗಳ ಮೂಲಕ ಹೇಳಲಾಗಿದೆ. ಭಕ್ಷ್ಯಯೇದ್ದಂತಧಾವನಮ್ ಎಂಬ ಪದವನ್ನೂ ಗಮನಿಸಬೇಕು. ಧಾವನ ಅಂದರೆ ತೊಳೆಯುವುದು. ಇಲ್ಲಿ ದಂತಧಾವನ ಪದ ಹಲ್ಲುಜ್ಜುವ ಕಡ್ಡಿ ಎಂಬರ್ಥದಲ್ಲಿ ಬಳಕೆಯಾಗಿದೆ. ಅರ್ಕ(ಎಕ್ಕ), ನ್ಯಗ್ರೋಧ(ಆಲ), ಖದಿರ(ಕಾಚು), ಕರಂಜ(ಹೊಂಗೆ), ಕಕುಭ(ಮತ್ತಿ), ಬಕುಲ(ರಂಜೆ) ಇತ್ಯಾದಿ ಗಿಡಗಳ ಕಡ್ಡಿ. ಅದನ್ನು ಟೂಥ್‌ಬ್ರಷ್ನಂತೆ ಹಲ್ಲುಗಳನ್ನು ಉಜ್ಜಲಿಕ್ಕೆ ಬಳಸುವುದಲ್ಲ, ಬದಲಿಗೆ ಹಲ್ಲುಗಳಿಂದ ಜಗಿಯುವುದು.

ಭಕ್ಷ್ಯಯೇತ್ ಅಂದರೆ ತಿನ್ನಬೇಕು ಅಂತಲ್ಲ, ಕಚಕಚನೆ ಜಗಿದು ಕಡ್ಡಿ ಮೃದುವಾದ ಮೇಲೆ ಹಲ್ಲುಗಳ ಮುಂಭಾಗ ಹಿಂಭಾಗಗಳನ್ನು ಸ್ವಚ್ಛಗೊಳಿಸಲಿಕ್ಕೆ ಟೂಥ್‌ಬ್ರಷ್‌ನಂತೆಯೂ ಬಳಸಬಹುದು. ಹಲ್ಲು ಜ್ಜುವ ಈ ಕೆಲಸವು ಮಲಮೂತ್ರವಿಸರ್ಜನ ಮತ್ತು ಮುಖಮಾರ್ಜನದ ಬಳಿಕವೇ ಆಗಬೇಕು. ಮನು ಸ್ಮೃತಿಯ ಈ ಶ್ಲೋಕವೂ ಅದನ್ನೇ ಹೇಳುತ್ತದೆ:

ಮೈತ್ರಂ ಪ್ರಸಾಧನಂ ಸ್ನಾನಂ ದಂತಧಾವನಮಂಜನಮ್|

ಪೂರ್ವಾಹ್ಣ ಏವ ಕುರ್ವೀತ ದೇವತಾನಾಂ ಚ ಪೂಜನಮ್||

ಇಲ್ಲಿ ಮೈತ್ರ ಅಂದರೆ ಮಲವಿಸರ್ಜನೆ ಎಂಬರ್ಥ! ಅದು ಹೇಗೆ? ಸುಶ್ರುತ ಹೇಳಿರುವಂತೆ ಮನುಷ್ಯ ಶರೀರದಲ್ಲಿ ಒಂದೊಂದು ಅಂಗಕ್ಕೆ ಒಬ್ಬೊಬ್ಬ ಅಽದೇವತೆ ಇರುತ್ತಾರೆ. ಗುದದ್ವಾರಕ್ಕೆ ಮಿತ್ರ (ಸೂರ್ಯ) ಅಧಿದೇವತೆ. ಹಾಗಾಗಿ ಗುದದ್ವಾರದಿಂದ ಆಗುವ ಕ್ರಿಯೆ ಮೈತ್ರ. ಇಡೀ ಶ್ಲೋಕದ ಅರ್ಥ ವೇನೆಂದರೆ- ಮಲವಿಸರ್ಜನೆ ಪ್ರಸಾಧನ(ಶರೀರವನ್ನು ಸುಶೋಭಿತಗೊಳಿಸುವುದು), ಸ್ನಾನ, ದಂತ ಧಾವನ, ಅಂಜನ(ಕಣ್ಣುಗಳಿಗೆ ಕಾಡಿಗೆ ಹಚ್ಚಿಕೊಳ್ಳುವುದು), ದೇವರ ಪೂಜೆ ಮಾಡುವುದು... ಇವೆಲ್ಲ ವೂ ಬೆಳಗ್ಗೆಯೇ ಆಗಬೇಕಾದ ಕೆಲಸಗಳು.

ಒಟ್ಟಿನಲ್ಲಿ, ನಮ್ಮ ದಿನಚರಿಯಲ್ಲಿ ಮೊತ್ತಮೊದಲ ಕೆಲಸ ಶೌಚ ಎನ್ನುವುದನ್ನು ಪುರಾತನ ಧರ್ಮ ಶಾಸ್ತ್ರ ವೈದ್ಯಕಶಾಸ್ತ್ರಗಳೆಲ್ಲವೂ ಒತ್ತಿಹೇಳಿವೆ. ಅದನ್ನೇ ಒಂದು ತಮಾಷೆಯ ಸುಭಾಷಿತವಾಗಿಯೂ ಹೇಳುವುದಿದೆ:

ದುರ್ಜನಂ ಪ್ರಥಮಂ ವಂದೇ ಸಜ್ಜನಂ ತದನಂತರಮ್|

ಮುಖಪ್ರಕ್ಷಾಲನಾತ್ಪೂರ್ವಂ ಗುದಪ್ರಕ್ಷಾಲನಂ ಯಥಾ||

ಅಂದರೆ, ಯಾವುದಾದರೂ ಜನಸಮೂಹದಲ್ಲಿ ಪರಿಚಿತ ದುಷ್ಟನೊಬ್ಬನಿದ್ದರೆ, ಕೃತಕವಾಗಿ ಯಾದರೂ ಸರಿ ಅವನಿಗೆ ಮೊದಲು ಸಲಾಂ ಹೊಡೆದು (ಅವನ ಅಹಂ ಅನ್ನು ತಣಿಸಿ) ಆಮೇಲಷ್ಟೇ ಅಲ್ಲಿರುವ ಸಜ್ಜನರ ಜತೆ ಕಾಲಕಳೆಯಬೇಕು ಎಂಬ ನೀತಿಬೋಧನೆ.

ವೈದ್ಯಕೀಯ ಸುಭಾಷಿತ ಸಾಹಿತ್ಯ ನಿಜಕ್ಕೂ ಒಂದು ಬಹುಮೂಲ್ಯ ನಿಽಯೆನ್ನಬಹುದಾದ ಗ್ರಂಥ. ಮೂರು ವಾರಗಳ ಹಿಂದೆ ಮಜ್ಜಿಗೆ ಸ್ಪೆಷಲ್ ಲೇಖನದಲ್ಲಿ ಮಜ್ಜಿಗೆಯನ್ನು ಕುರಿತ ಅಷ್ಟೆಲ್ಲ ಶ್ಲೋಕ ಗಳು ನನಗೆ ಸಿಕ್ಕಿದ್ದು ಈ ಗ್ರಂಥದಿಂದಲೇ. ಅಂತೆಯೇ ಸ್ನಾನವಿಧಿಗೆ ಸಂಬಂಧಿಸಿದಂತೆ ಒಂದಿಡೀ ಅಧ್ಯಾಯವೇ ಈ ಗ್ರಂಥದಲ್ಲಿದೆ. ಶುಚಿತ್ವದ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೊಂದು ಅಧ್ಯಾಯ.

ಅವುಗಳಿಂದ ಕೆಲವು ಶ್ಲೋಕಗಳನ್ನಾದರೂ, ಕನಿಷ್ಠ ಅವುಗಳ ಕನ್ನಡ ಭಾವಾರ್ಥವನ್ನಾದರೂ, ಇಂದಿನ ಅಂಕಣಬರಹದಲ್ಲಿ ದಾಖಲಿಸಬೇಕೆಂದಿದ್ದೇನೆ. ಪ್ರಸಕ್ತ ಮಹಾಕುಂಭಮೇಳದಲ್ಲಿ ‘ಸ್ನಾನ’ ವೇ ಪ್ರಮುಖ ಅಂಶವೆಂದಮೇಲೆ ಸಂದರ್ಭೋಚಿತವೇ ಆಗುತ್ತದೆಯಷ್ಟೆ.

“ಹೀನಕೃತ್ಯಗಳ ಮಾಡುತ ನದಿಯಲಿ ಸ್ನಾನವ ಮಾಡಿದರೇನು ಫಲ?" ಎಂದು ಪುರಂದರದಾಸರು ಪ್ರಶ್ನಿಸಿದ್ದಾರೆ; “ಉದಯ ಕಾಲದೊಳೆದ್ದು ಗಡಗಡ ನಡುಗುತ ನದಿಯಲಿ ಮಿಂದೆನೆಂದು ಹಿಗ್ಗುತಲಿ... ಮದ ಮತ್ಸರ ಕ್ರೋಧ ಒಳಗೆ ತುಂಬಿಟ್ಟುಕೊಂಡು ಬದಿಯಲಿದ್ದವರಿಗಾಶ್ಚರ್ಯದೋರುವುದು" ಎಂದು ಲೇವಡಿ ಮಾಡಿದ್ದಾರೆ. “ಮೀಪರೇ ಪೋಪರೇ| ಪಾಪವೇನದು ಕೆಸರೇ| ಮೀಪರೇ ಮೈಯ ಮಲ, ಪೋಪುದಾ ಪಾಪ| ಲೇಪವಾಗಿಕ್ಕು" ಎಂದು ಸರ್ವಜ್ಞ ವಚನ.

“ಪೊಡೆಯೊಳ್ ತುಂಬಿರೆ ಪಂಕ ಮೇಲೆ ತೊಳೆಯಲ್ ತಾಂ ಶುದ್ಧನೇನಪ್ಪನೇ? ಕಡುಪಾಪಂ ಬಲುಮೀಯಲಾತ ಶುಚಿಯೇ? ಕಾಕಾಳಿಯೇಂ ಮೀಯದೇ!" ಎಂದು ಸೋಮೇಶ್ವರ ಶತಕದಲ್ಲೂ ಬರುತ್ತದೆ. ನಿರ್ಮಲಚಿತ್ತವೇ ಮಡಿ ಎನ್ನುವುದಂತೂ ಹೌದೇಹೌದು. ಆದರೂ, ಮನಸ್ಸಿನ ನಿರ್ಮ ಲತೆಗೆ ಅಂದರೆ ಭಾವಶುದ್ಧಿಗೆ ಶಾರೀರಿಕ ಸ್ವಚ್ಛತೆಯೂ ಅಗತ್ಯವಿದೆ.

ಅದು ಸ್ನಾನವಿಲ್ಲದೆ ಸಂಭವಿಸುವುದಿಲ್ಲ. ಆದ್ದರಿಂದಲೇ ಶರೀರಸಂಬಂಧ ಮತ್ತು ಮನಸ್ಸಂಬಂಧ ವಾದ ಕಾರ್ಯಗಳ ಶುದ್ಧಿಗಾಗಿ ಸ್ನಾನವಿಧಿಯನ್ನು ಹೇಳಲಾಗಿದೆ.

ಸ್ನಾನಮೂಲಾಃ ಕ್ರಿಯಾಃ ಸರ್ವಾಃ ಸ್ಮೃತಿಶ್ರುತ್ಯುದಿತಾ ನೃಣಾಂ|

ತಸ್ಮಾತ್ ಸ್ನಾನಂ ನಿಷೇವೇತ ಶ್ರೀಪುಷ್ಟ್ಯಾರೋಗ್ಯ ವರ್ಧನಮ್||

ಅಂದರೆ, ಮನುಷ್ಯರ ಎಲ್ಲ ಕ್ರಿಯೆಗಳಿಗೂ ಸ್ನಾನವೇ ಮೂಲ. ತೇಜಸ್ಸು, ಪುಷ್ಟಿ, ಆರೋಗ್ಯಗಳನ್ನು ಹೆಚ್ಚಿಸುವ ಸ್ನಾನವನ್ನು ನಿತ್ಯವೂ ಮಾಡಬೇಕು. ಸ್ನಾನವೆಂದರೆ ಮೈಮೇಲೆ/ತಲೆಮೇಲೆ ನೀರು ಹಾಕ್ಕೊಳ್ಳೋದು ಎಂಬ ಸೀಮಿತ ಅರ್ಥವನ್ನಷ್ಟೇ ನಾವು ಹೆಚ್ಚಾಗಿ ಪರಿಗಣಿಸುತ್ತೇವೆ. ಆದರೆ ನಿಜವಾಗಿ ಸ್ನಾನ ಏಳು ವಿಧಗಳದ್ದಿರುತ್ತದೆ:

ಮಾಂತ್ರಂ ಭೌಮಂ ತಥಾಗ್ನೇಯಂ ವಾಯವ್ಯಂ ದಿವ್ಯಮೇವ ಚ|

ವಾರುಣಂ ಮಾನಸಂ ಚೈವ ಸಪ್ತ ಸ್ನಾನಾನ್ಯನುಕ್ರಮಾತ್||

ಆಪೋಹಿಷ್ಠಾದಿ ಮಂತ್ರಗಳನ್ನು ಹೇಳಿಕೊಂಡು ಮಾಡುವುದು ಮಾಂತ್ರ ಸ್ನಾನ. ಮಣ್ಣಿನ ಲೇಪನ ದಿಂದಾದುದು ಭೌಮಸ್ನಾನ. ಆಯುರ್ವೇದ ಚಿಕಿತ್ಸಾಕ್ರಮಗಳಲ್ಲೂ ಇದು ಬರುತ್ತದೆ. ಭಸ್ಮದ ಸ್ನಾನವೇ ಆಗ್ನೇಯ ಸ್ನಾನ. ಕುಂಭಮೇಳದಲ್ಲಿ ಕಂಡುಬರುವ ಕೆಲ ನಾಗಾಸಾಧುಗಳು ಮಾಡುತ್ತಾರಲ್ಲ ಅದೇ.

ಹಸುವಿನ ಪಾದಧೂಳಿಯ ಸ್ನಾನಕ್ಕೆ ವಾಯವ್ಯಸ್ನಾನ ಎಂದು ಹೆಸರು. ಬಿಸಿಲಿದ್ದಾಗಲೇ ಮಳೆ ಬಂದರೆ, ಆ ಮಳೆನೀರಲ್ಲಿ ನೆಂದರೆ ಅದುವೇ ದಿವ್ಯಸ್ನಾನ. ಮತ್ತೆ ನಾವೆಲ್ಲ ಸಾಮಾನ್ಯವಾಗಿ ಸ್ನಾನ ಎಂದು ಯಾವುದನ್ನು ಕರೆಯುತ್ತೇವೋ ಅದು ವಾರುಣ ಸ್ನಾನ. ಆತ್ಮಚಿಂತನೆ ಮಾಡುವುದು ಮಾನಸ ಸ್ನಾನ. ಈ ಎಲ್ಲದರಲ್ಲಿ ವಾರುಣಸ್ನಾನವೇ ಶ್ರೇಷ್ಠ. ಏಕೆಂದರೆ ಜಲದ ಸಂಸ್ಪರ್ಶ, ಸ್ನಾನ-ಪಾನ ದರ್ಶನಾದಿಗಳಿಂದ ಬಾಹ್ಯ ಮತ್ತು ಅಭ್ಯಂತರ ಉಭಯರೀತಿಗಳಿಂದಲೂ ಪರಿಶುದ್ಧರಾಗಿ ಮನುಷ್ಯರು ಸಿದ್ಧಿಯನ್ನು ಪಡೆಯುತ್ತಾರೆ.

ಸಾಧ್ಯವಿದ್ದಷ್ಟೂ ಮಟ್ಟಿಗೆ ಹೊರಾಂಗಣ ಪ್ರದೇಶದಲ್ಲಿ ತಣ್ಣೀರಿನಿಂದಲೇ ಸ್ನಾನ ಮಾಡಬೇಕು. ಆದ್ದರಿಂದಲೇ ನದಿಗಳಲ್ಲಿ, ಪವಿತ್ರ ತೀರ್ಥಕ್ಷೇತ್ರಗಳಲ್ಲಿ, ಕೆರೆಗಳಲ್ಲಿ, ಸರೋವರಗಳಲ್ಲಿ, ಮಡು ಮತ್ತು ಝರಿಗಳಲ್ಲಿ- ದಿನನಿತ್ಯವೂ ಇವುಗಳ ಪೈಕಿ ಯಾವುದಾದರೂ ಒಂದು ಸ್ಥಳದಲ್ಲಿ- ಸ್ನಾನ ಮಾಡಬೇಕೆಂದು ಶಾಸದಲ್ಲಿ ಹೇಳಿರುವುದು.

ಇದಕ್ಕೆ ಕಾರಣವೇನೆಂದರೆ ಹಗಲಲ್ಲಿ ಸೂರ್ಯನ ಕಿರಣಗಳಿಂದ ತಾಪಗೊಂಡು, ರಾತ್ರಿಯಲ್ಲಿ ಚಂದ್ರನ ಕಿರಣಗಳಿಂದ ಶೀತಗೊಂಡು, ಕಾಲಾನುಗುಣವಾಗಿ ಪಕ್ವಗೊಂಡು, ಕಾಲುಷ್ಯಾದಿ ದೋಷ ದೂರವಾಗಿ, ಅಗಸ್ತ್ಯ ನಕ್ಷತ್ರದ ಉದಯದಿಂದ ನಿರ್ವಿಷಗೊಂಡ ಪರಿಶುದ್ಧವೂ ಶುಚಿಪೂರ್ಣವೂ ಆದ ನೀರು ಹಂಸೋದಕ ಎನಿಸುತ್ತದೆ.

ಇದು ಸ್ನಾನ-ಪಾನ-ಈಜುವಿಕೆಗೆ ಅಮೃತದಂತೆಯೇ ಹಿತಕಾರಿ. ಬಿಸಿನೀರಿನ ಸ್ನಾನ ಒಂದೊಮ್ಮೆ ಹಿತಕರ ಎನಿಸಿದರೂ ಸ್ವಾವಲಂಬನ, ಸ್ವಾಸ್ಥ್ಯರಕ್ಷಣ, ಶೀತಸಹಿಷ್ಣುತೆ ದೃಷ್ಟಿಯಿಂದ ತಣ್ಣೀರ ಸ್ನಾನವೇ ಶ್ರೇಯಸ್ಕರ. ಪ್ರತಿದಿನ ತಣ್ಣೀರ ಸ್ನಾನ ಕಷ್ಟವೆನಿಸುವವರು ಕನಿಷ್ಠಪಕ್ಷ ಸಂಕ್ರಾಂತಿ ಯಂದು, ಪ್ರತಿ ಭಾನುವಾರ, ಪ್ರತಿ ಸಪ್ತಮಿ ತಿಥಿಯಂದಾದರೂ ತಣ್ಣೀರ ಸ್ನಾನ ಮಾಡಬೇಕು. “ಠಂಡೇ ಠಂಡೇ ಪಾನೀ ಸೇ ನಹಾನಾ ಚಾಹಿಯೇ..." ಎಂದು ಸಂಜೀವ ಕುಮಾರ್ ಅಭಿನಯದ, ಮಹೇಂದ್ರ ಕಪೂರ್ ಗಾಯನದ ಹಿಂದಿ ಚಿತ್ರಗೀತೆಯನ್ನೂ ಇಲ್ಲಿ ಸ್ಮರಿಸಬಹುದಾಗಿದೆ.

ಸ್ನಾನದಿಂದಾಗುವ ಹತ್ತು ಪ್ರಯೋಜನಗಳೇನೆಂದು ತಿಳಿಸುವ ಒಂದು ಸುಂದರ ಶ್ಲೋಕವಿದೆ, ಚಾಣಕ್ಯನೀತಿಯಲ್ಲಿ ಬರುತ್ತದೆ:

ಸ್ನಾನಂ ನಾಮ ಮನಃಪ್ರಸಾದಜನನಂ ದುಃಸ್ವಪ್ನವಿಧ್ವಂಸನಂ|

ಶೌಚಸ್ಯಾಯತನಂ ಮಲಾಪಹರಣಂ ಸಂವರ್ಧನಂ ತೇಜಸಃ|

ರೂಪದ್ಯೋತಕರಂ ರಿಪುಪ್ರಮಥನಂ ಕಾಮಾಗ್ನಿಸಂದೀಪನಂ|

ನಾರೀಣಾಂ ಚ ಮನೋಹರಂ ಶ್ರಮಹರಂ ಸ್ನಾನೇ ದಶೈತೇ

ಗುಣಾಃ||

ಅಂದರೆ, ಸ್ನಾನವು ಮನಸ್ಸಿಗೆ ಪ್ರಸನ್ನತೆಯನ್ನು ಉಂಟುಮಾಡುತ್ತದೆ; ಕೆಟ್ಟ ಸ್ವಪ್ನಗಳನ್ನು ಹೋಗ ಲಾಡಿಸುತ್ತದೆ; ಶುಚಿತ್ವಕ್ಕೆ ಆವಾಸಸ್ಥಾನ; ಮಲವನ್ನು(ಕೊಳೆಯನ್ನು) ಹೋಗಲಾಡಿಸುತ್ತದೆ; ದೇಹದ/ಮುಖದ ತೇಜಸ್ಸನ್ನು ಹೆಚ್ಚಿಸುತ್ತದೆ; ರೂಪವನ್ನು ಬೆಳಗಿಸುತ್ತದೆ; ನಮ್ಮ ದೇಹವನ್ನು ಆಕ್ರಮಿಸಿರುವ ಆಲಸ್ಯವೆಂಬ ಶತ್ರುವನ್ನು ನಾಶಪಡಿಸುತ್ತದೆ; ಕಾಮಾಗ್ನಿಯನ್ನು ಉದ್ದೀಪನಗೊಳಿಸುತ್ತದೆ; ಸ್ತ್ರೀಯರ

ಮನಸ್ಸನ್ನು ಅಪಹರಿಸುವಂತೆ ಅಂದರೆ ಮನಸ್ಸನ್ನು ಗೆಲ್ಲುವಂತೆ ಮಾಡುತ್ತದೆ; ಎಲ್ಲಕ್ಕಿಂತ ಮುಖ್ಯ ವಾಗಿ ಶ್ರಮವನ್ನು ಹೋಗಲಾಡಿಸಿ ಮೈಮನಗಳನ್ನು ಉಲ್ಲಸಿತಗೊಳಿಸುತ್ತದೆ.

ಸ್ನಾನದ ಈ ಹತ್ತು ಗುಣಲಾಭಗಳು ನಮ್ಮೆಲ್ಲರ ಅನುಭವಕ್ಕೂ ಬರುವಂಥವೇ. ಇದರಲ್ಲಿ ‘ದುಃಸ್ವಪ್ನ ವಿಧ್ವಂಸನ’ಕ್ಕೆ ವ್ಯಾಖ್ಯಾನ ಈರೀತಿ ಇದೆ: ಕನಸುಗಳು, ಅದರಲ್ಲೂ ದುಃಸ್ವಪ್ನಗಳು ಸಾಮಾನ್ಯವಾಗಿ ರಾತ್ರಿಯ ಕೊನೆಯ ಯಾಮದಲ್ಲಿ ಬರುವುದು ಹೆಚ್ಚು. ಏಕೆಂದರೆ ಆಗಲೇ ನಾವು ನಿದ್ರೆಯ ಗಾಢಾ ವಸ್ಥೆಗೆ ತಲುಪುವುದು. ಅದಕ್ಕೋಸ್ಕರವೇ ಬ್ರಾಹ್ಮ ಮುಹೂರ್ತದಲ್ಲೇ ಎದ್ದು ಶೌಚ ಸ್ನಾನಾದಿಗಳನ್ನು ಮುಗಿಸಬೇಕು ಎಂದಿರುವುದು. ಆಗ ದುಃಸ್ವಪ್ನ ಬರುವ ಪ್ರಮೇಯವೇ ಇಲ್ಲವಲ್ಲ!

ಸ್ನಾನ ಯಾವಾಗ ಮಾಡಬಾರದು ಎಂಬುದಕ್ಕೂ ನೀತಿನಿಯಮಗಳಿವೆ.

ನ ಸ್ನಾನಮಾಚರೇದ್ಭುಕ್ತ್ವಾ ನಾತುರೋ ನ ಮಹಾನಿಶಿ|

ನ ವಾಸೋಭಿಃ ಸಹಾಜಸ್ರಂ ನಾವಿಜ್ಞಾತೇ ಜಲಾಶಯೇ||

ಅಂದರೆ, ಊಟವಾದ ತತ್‌ಕ್ಷಣ ಸ್ನಾನ ಮಾಡಬಾರದು. ಕಾಯಿಲೆಯಿರುವಾಗ ಸ್ನಾನ ಮಾಡ ಬಾರದು. ಅರ್ಧರಾತ್ರಿಯಲ್ಲಿ ಸ್ನಾನ ಮಾಡುವುದೂ ನಿಷಿದ್ಧ. ಹೆಚ್ಚು ಬಟ್ಟೆ ಧರಿಸಿ ಸ್ನಾನ ಮಾಡಬಾ ರದು (ಪೂರ್ತಿ ನಗ್ನರಾಗಿಯೂ ಸ್ನಾನ ಮಾಡಬಾರದು). ಅಂತೆಯೇ, ಅಪರಿಚಿತವಾದ ಜಲ ಮೂಲ ಗಳಲ್ಲಿ ಸ್ನಾನ ಮಾಡುವುದು ಒಳ್ಳೆಯದಲ್ಲ. ಕಾಯಿಲೆಯಿರುವಾಗ ಸ್ನಾನ ಮಾಡಬಾರದೆಂದಾದರೆ ಬೇರಾವ ರೀತಿಯಿಂದ ಶುಚಿತ್ವ ಸಾಧಿಸಬಹುದು ಎನ್ನುವುದಕ್ಕೂ ಒಂದು ಶ್ಲೋಕವಿದೆ.

ಅಶಿರಸ್ಕಂ ಭವೇತ್ಸ್ನಾನಂ ಸ್ನಾನಾಶಕ್ತೌ ತು ರೋಗಿಣಾಂ|

ಆರ್ದ್ರೇಣ ವಾಸಸಾ ವಾ ಸ್ಯಾನ್ಮಾರ್ಜನಂ ದೈಹಿಕಂ ವಿದುಃ

ಅಂದರೆ, ರೋಗಿಗಳು ತಲೆಸ್ನಾನ ಮಾಡಲಾಗದು ಆದ್ದರಿಂದ ಒದ್ದೆಬಟ್ಟೆಯಿಂದ ಮೈ ಒರೆಸಿಕೊಳ್ಳ ಬಹುದು. ನೀರಿನಿಂದಾಗುವ ವಾರುಣಸ್ನಾನ ಸಾಧ್ಯವಿಲ್ಲದ ಸಂದರ್ಭಗಳಲ್ಲಿ ಭಸ್ಮಧಾರಣದ ಆಗ್ನೇಯಸ್ನಾನ; ಅದೂ ಅಸಾಧ್ಯವಾದರೆ ಮಾಂತ್ರಸ್ನಾನ. ಏಕೆಂದರೆ,

ನ ಜಲಾಪ್ಲುತದೇಹಸ್ಯ ಸ್ನಾನಮಿತ್ಯಭಿಧಿಯತೇ|

ನ ಸ್ನಾತೋ ಯೋ ದಮಸ್ನಾತಃ ಶುಚಿಶುದ್ಧಮನೋಮಲಃ||

ಅರ್ಥಾತ್- ನೀರಿನಿಂದ ಶರೀರವು ಒದ್ದೆಗೊಂಡಮಾತ್ರಕ್ಕೇ ಅದು ಸ್ನಾನವೆನಿಸದು. ಇಂದ್ರಿಯಗಳನ್ನು ನಿಗ್ರಹಿಸಿ, ಮನಸ್ಸಿನ ಕೊಳೆಯನ್ನು ದೂರಮಾಡಿಕೊಂಡು ಶುಚಿವಂತನೂ ಶುದ್ಧನೂ ಆದವನೇ ನಿಜವಾಗಿ ಸ್ನಾನ ಮಾಡಿದವನು. ಶುಚಿತ್ವದ ಪ್ರಾಮುಖ್ಯವನ್ನು ತಿಳಿಸುವ ಕೆಲವು ವಿಚಾರಗಳಿವೆ. ಅಹಿಂಸಾ ಸತ್ಯಮಸ್ತೇಯಂ ಶೌಚಮಿಂದ್ರಿಯನಿಗ್ರಹಃ|

ದಾನಂ ದಮೋ ದಯಾ ಕ್ಷಾಂತಿಃ ಸರ್ವೇಷಾಂ

ಧರ್ಮಸಾಧನಂ||

ಇದರರ್ಥ- ಅಹಿಂಸೆ, ಕಳ್ಳತನ ಮಾಡದಿರುವಿಕೆ, ಶೌಚ, ಬಾಹ್ಯ ಮತ್ತು ಆಂತರಿಕ ಇಂದ್ರಿಯನಿಗ್ರಹ, ದಯೆ, ದಾನ, ಮತ್ತು ಕ್ಷಮಾಗುಣ ಇವು ಧರ್ಮಪಥದ ಸಾಧನಗಳು. ಇದನ್ನೇ ಬಸವಣ್ಣನವರು- ಕಳಬೇಡ ಕೊಲಬೇಡ ಹುಸಿಯ ನುಡಿಯಲು ಬೇಡ... ಇದೇ ಅಂತರಂಗಶುದ್ಧಿ ಇದೇ ಬಹಿರಂಗಶುದ್ಧಿ ಎಂದರು.

ಪುರಂದರದಾಸರು “ದಾನ ಧರ್ಮಂಗಳ ಮಾಡುವುದೆ ಸ್ನಾನ; ಜ್ಞಾನ ತತ್ತ್ವಂಗಳ ತಿಳಿವುದೆ ಸ್ನಾನ; ಹೀನ ಪಾಪಂಗಳ ಬಿಡುವುದೆ ಸ್ನಾನ; ಧ್ಯಾನದಿ ಮಾಧವನ ನೋಡುವುದೆ ಸ್ನಾನ" ಎಂದರು. ಮನಃ ಶೌಚ, ಕರ್ಮಶೌಚ, ಕುಲಶೌಚ, ಶರೀರಶೌಚ, ಮತ್ತು ವಾಕ್‌ಶೌಚ- ಈ ಐದು ವಿಧದ ಶುಚಿತ್ವಗಳಲ್ಲಿ ಸರ್ವಶ್ರೇಷ್ಠವಾದದ್ದು ಮನಃಶೌಚ. ಜ್ಞಾನ, ತಪಸ್ಸು, ಅಗ್ನಿ, ಆಹಾರ, ಮಣ್ಣು, ಮನಸ್ಸು, ನೀರು, ಉಪಾಂಜನ, ವಾಯು, ಕರ್ಮ, ಸೂರ್ಯ, ಮತ್ತು ಕಾಲ- ಇವು ಮನುಷ್ಯನ ಸರ್ವಾಂಗಶುದ್ಧಿಗೆ ಕಾರಣ ಮತ್ತು ಪ್ರೇರಣ. ನೀರಿನಿಂದ ಶರೀರಶುದ್ಧಿ, ಸತ್ಯದಿಂದ ಮನಃಶುದ್ಧಿ, ವಿದ್ಯೆ-ತಪಸ್ಸುಗಳಿಂದ ಆತ್ಮಶುದ್ಧಿ, ಮತ್ತು ಜ್ಞಾನದಿಂದ ಬುದ್ಧಿಯ ಶುದ್ಧಿ ಆಗುತ್ತದೆ. ಇಂದ್ರಿಯನಿಗ್ರಹವೆಂಬ ಸ್ನಾನಘಟ್ಟ ವುಳ್ಳ, ಸತ್ಯವೆಂಬ ಜಲರಾಶಿ ತುಂಬಿರುವ, ಶೀಲವೆಂಬ ದಡ ಇರುವ, ದಯೆಯೆಂಬ ಅಲೆಗಳಿರುವ, ಆತ್ಮಜ್ಞಾನವೆಂಬ ನದಿಯಲ್ಲಿ ನಾವು ಸ್ನಾನ ಮಾಡಬೇಕಂತೆ. ಇದರಿಂದಲೇ ಅಂತಃಶುದ್ಧಿ ಸಾಧ್ಯ ವಾಗುವುದೇ ಹೊರತು ಕೇವಲ ಜಲಸ್ನಾನದಿಂದ ಅಲ್ಲ.

ಅಂಥ ಅಂತಃಶೌಚದಿಂದ ನಮಗೆ ಸತ್ತ್ವಶುದ್ಧಿ, ಸುಮನಸ್ಕತೆ, ಮನಸ್ಸಿನ ಏಕಾಗ್ರತೆ, ಇಂದ್ರಿಯ ಜಯ, ಆತ್ಮದರ್ಶನಗಳನ್ನು ಹೊಂದುವ ಯೋಗ್ಯತೆ ಬರುವುದು; ವ್ಯಕ್ತಿತ್ವ ಮಾಗುವುದು ಮತ್ತು ಪರಿಪಕ್ವ ವಾಗುವುದು.

ಶುಚಿತ್ವದ ಬಗೆಗಿನದೇ ಇದೊಂದು ಶ್ಲೋಕದಿಂದ ಸಮಾಪ್ತಿಗೊಳಿಸೋಣ. ಇದರಲ್ಲಿ ಅಕ್ಷರ ಚಮತ್ಕಾರ ಎಷ್ಟು ಸೊಗಸಾಗಿದೆ ನೋಡಿ!

ಯೋ ವರ್ತತೇ ಶುಚಿತ್ವೇನ ಸ ವೈಶ್ವಾನರ ಉಚ್ಯತೇ|

ಯೋ ವರ್ತತೇಧಿಶುಚಿತ್ವೇನ ಸ ವೈ ಶ್ವಾ ನರ ಉಚ್ಯತೇ||

ಮೊದಲ ಸಾಲು: ಯಾರು ಶುಚಿತ್ವಸಂಪನ್ನನೋ ಅವನು ಸಾಕ್ಷಾತ್ ವೈಶ್ವಾನರ(ಅಗ್ನಿ) ಎನಿಸುವನು, ಅಗ್ನಿಯಂತೆ ತೇಜಸ್ವಿಯಾಗುವನು. ಎರಡನೆಯ ಸಾಲಿನಲ್ಲಿ ಒಂದು ಅವಗ್ರಹ ಚಿಹ್ನೆ(ಧಿ) ಸೇರಿಸಿ ಶುಚಿತ್ವವನ್ನು ಅಶುಚಿತ್ವ ಮಾಡಿದ್ದು, ವೈಶ್ವಾನರ ಪದವನ್ನು ತುಂಡರಿಸಿದ್ದು. ಯಾವನು ಅಶುಚಿ ತ್ವವುಳ್ಳವನೋ ಅಂಥವನು ಶ್ವಾನರೂಪಿ(ನಾಯಿಯಂಥ) ಮನುಷ್ಯ ಎನಿಸುವನು ಎಂಬ ಅರ್ಥ ಬಂದಿರುವುದು!

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Rajath Kishan (2)
7:07 AM January 30, 2025

BBK11 Rajath Kishan: ನಂದೂ ಹಳೆ ಕತೆಗಳಿವೆ.. ಆದರೆ ಆ ಹುಡುಗಿಯ ಫೋಟೊ ಬಿಡಬಾರದಿತ್ತು: ರಜತ್