ವಿದ್ಯಮಾನ
ಕಳೆದ ವಾರ ಶ್ರೀವತ್ಸಜೋಶಿಯವರು ಪೂಜೆ ಅರ್ಚನೆಗಳಲ್ಲಿ ಅಕ್ಷತೆಯ ಬಹುರೂಪಗಳ, ಬಹು ಬಳಕೆಗಳ ಅಕ್ಷಯ ಗುಣಗಳ ಬಗ್ಗೆ, ಕೆಂಪಕ್ಷತೆಯನ್ನು ಬದಲಿ ವ್ಯವಸ್ಥೆಯಾಗಿ ಬಳಸುವ ಕುರಿತು ‘ಅನಿವಾರ್ಯಕ್ಕೂ ಅನುಕೂಲಕ್ಕೂ ಒದಗುವ ಬದಲಿ ಬಳಕೆ’ ಎನ್ನುವ ಶೀರ್ಷಿಕೆಯಲ್ಲಿ ಕೆಲವು ನೈಜ ಉದಾಹರಣೆಗಳ ಜೊತೆಗೆ ಸುಂದರವಾಗಿ ಬರೆದಿದ್ದರು.
ವಾಸ್ತವಿಕವಾಗಿ ಅಕ್ಷತ ಶಬ್ಧಕ್ಕೆ, ವಿಕ್ಷಿತಿಯಿಲ್ಲದ್ದು, ಅಖಂಡವಾಗಿರುವಂಥಾದ್ದು ಎನ್ನುವ ಅರ್ಥವಿದೆ. ಮಂಗಳ ಕಾರ್ಯಗಳಲ್ಲಿ ಅರಿಸಿನ ಕುಂಕುಮಗಳಿಂದ ಶೋಭಿತವಾದ ಅಕ್ಷತವಾದರೆ, ಪಿತೃಕಾರ್ಯ ಮುಂತಾದ ಅಪರ ಕಾರ್ಯದಲ್ಲಿ ಬಣ್ಣವಿಲ್ಲದ ಅಕ್ಕಿಕಾಳನ್ನು ಬಳಸುತ್ತಾರೆ. ಅಕ್ಷತಕ್ಕೆ ಅಖಂಡ ಅಕ್ಕಿಯ ಕಾಳುಗಳೇ ಮೂಲದ್ರವ್ಯವಾಗಿದೆ.
ಜೋಶಿಯವರು ಹೇಳಿದ ಹಾಗೆ, ಅರ್ಚನೆಯಿಂದ ಹಿಡಿದು ಆಶೀರ್ವಾದದ ವರೆಗೆ ನಮ್ಮ ವೈದಿಕ ವಿಧಿವಿಧಾನಗಳಲ್ಲಿ ಅಕ್ಷತೆಗೆ ನಾವು ತಿಳಿದುಕೊಂಡಿದ್ದಕ್ಕಿಂತ ವಿಷೇಷ ಸ್ಥಾನವಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ವಿವಾಹ ಸಂಪ್ರದಾಯದಲ್ಲಿ ಅಕ್ಷತಾರೋಪಣೆ ಎನ್ನುವ ಪ್ರತ್ಯೇಕ ವಿಧಿಯೇ ಇದೆ.
ಇನ್ನು ಮಹಾತ್ಮರುಗಳು ನೀಡುವ ಮಂತ್ರಾಕ್ಷತೆಯ ಮಹತ್ವವನ್ನಂತೂ ಎಷ್ಟು ಹೇಳಿದರೂ ಕಡಿಮೆ ಯೇ. ಪೂಜಾಕರ್ಮಗಳಲ್ಲಿ ಒಂದು ವಸ್ತುವಿನ ಬದಲಿಗೆ ಇನ್ನೊಂದನ್ನು ಬಳಸುವ ಪ್ರತ್ಯಾಮ್ನಾಯ ವ್ಯವಸ್ಥೆಗೆ ಇನ್ನೂ ಕೆಲವು ಉದಾಹರಣೆಗಳನ್ನು ನೋಡುವುದಾದರೆ, ನಮ್ಮ ಯಜ್ಞ-ಯಾಗಾದಿಗಳಲ್ಲಿ ವಿವಿಧ ಸಮಿಧವನ್ನು ಬಳಸಲಾಗುತ್ತದೆ. (ಸಮಿಧ ಎಂದರೆ ಹೋಮ-ಹವನಗಳಲ್ಲಿ ಯಜ್ಞಕುಂಡದ ಪವಿತ್ರ ಅಗ್ನಿಗೆ ಅರ್ಪಿಸುವ ಒಂದಂಗುಲ ಉದ್ದದ ನಿರ್ದಿಷ್ಟ ವೃಕ್ಷದ ಕಟ್ಟಿಗೆ ತುಂಡು) ಬೇರೆ ಬೇರೆ ಹೋಮಕ್ಕೆ ಬೇರೆ ಬೇರೆ ಸಮಿಧವನ್ನು ಬಳಸುತ್ತಾರೆ.
ಮುತ್ತುಗ ಫಲಾಶ, ಖೈರ, ಉತ್ತರಣಿ, ಅರಳಿ, ಅತ್ತಿ, ಶಮಿ, ಆಲ, ಗರಿಕೆ ಹಾಗೂ ದರ್ಬೆ ಮುಂತಾದವು ಗಳನ್ನು ಸಮಿಧವಾಗಿ ಬಳಸಲಾ ಗುತ್ತದೆ. ಹಾಗೊಮ್ಮೆ ಅಗತ್ಯವಿರುವ ವೃಕ್ಷದ ಸಮಿಧಗಳು ಲಭ್ಯವಿಲ್ಲದಿದ್ದರೆ ಅಥವಾ ಖಾಲಿಯಾಗಿ ಬಿಟ್ಟಿದ್ದರೆ, ತುಟ್ಟಿ ಭರ್ತಿಗೆ ಬಳಸುವುದು ಅತ್ತಿ ಸಮಿಧವನ್ನು, ಅಕ್ಷತೆಯಂತೆ ಎಲ್ಲ ಸಮಿಧಕ್ಕೂ ಪ್ರತ್ಯಾಮ್ನಾಯವಾಗಬಲ್ಲದ್ದು ಅತ್ತಿ ವೃಕ್ಷದ ಸಮಿಧ. ಇನ್ನು, ದಾನದ ವಿಷಯದಲ್ಲಿಯೂ ಹಾಗೆಯೇ, ಉದಾಹರಣೆಗೆ ಗೋದಾನ, ಕೆಲವು ಸಂದರ್ಭಗಳಲ್ಲಿ ಸಾಲಂಕೃತ ಗೋದಾನವನ್ನು ಹೇಳಿದ್ದಾರೆ.
ಇದನ್ನೂ ಓದಿ: Vinayaka M Bhat Column: ಅಕ್ಕ, ಸಕ್ಕರೆಯ ಮನದ ಅಕ್ಕರೆಯ ರಕ್ಕಸಿ
ಅದು ಸಾಧ್ಯವಿಲ್ಲದಿದ್ದಾಗ ಏನು ಮಾಡುವುದು ಎನ್ನುವುದಕ್ಕೂ ಪ್ರತ್ಯಾಮ್ನಾಯ ವ್ಯವಸ್ಥೆಯನ್ನು ಹೇಳಲಾಗಿದೆ. ‘ಅಸ್ಯಾಃ ಪ್ರತ್ಯಕ್ಷ ಗೋಪ್ರತಿನಿಧಿ ಭೂತಾಯಾಃ ಕೌಪ್ಯ (ಬೆಳ್ಳಿ) / ದರ್ಭ ಗೋಪ್ರತಿನಿಧಿ ದಾನಂ ಕರಿಷ್ಯೆ’ ಪ್ರತ್ಯಕ್ಷ ಹಸುವನ್ನು ದಾನ ಮಾಡಲು ಸಾಧ್ಯವಾಗದ ಕಾರಣ, ಗೋವಿನ ಪ್ರತಿನಿಧಿಯಾಗಿ ಬೆಳ್ಳಿ/ದರ್ಭೆಯ ಹಸುವನ್ನು ಗೋದಾನದ ರೂಪದಲ್ಲಿ ಯಥಾಶಕ್ತಿ ದಕ್ಷಿಣೆ ಯೊಂದಿಗೆ ಬ್ರಾಹ್ಮಣರಿಗೆ ದಾನ ಮಾಡುವುದಿದೆ.
ಪ್ರತ್ಯಾಮ್ನಾಯಕ್ಕೆ ಮತ್ತೊಂದು ಪರಿಚಿತ ಉದಾಹರಣೆ ಹೇಳುವುದಾದರೆ, ಸಾಮಾನ್ಯವಾಗಿ ಅನ್ನದಿಂದ ಪಿತೃಗಳಿಗೆ ಪಿಂಡವನ್ನು ಮಾಡಲಾಗುತ್ತದೆ. ಶ್ರೀರಾಮನು ವನವಾಸದಲ್ಲಿದ್ದಾಗ, ತಂದೆ ದಶರಥ ಮಹಾರಾಜನ ಮರಣದ ಸುದ್ದಿಯನ್ನು ಕೇಳುತ್ತಾನೆ. ಚಿತ್ರಕೂಟದ ಮಂದಾಕಿನಿ ತಟದಲ್ಲಿ ತಂದೆಗೆ ಪಿತೃತರ್ಪಣ ಹಾಗೂ ಶ್ರಾದ್ಧ ವಿಧಿಗಳನ್ನು ನೆರವೇರಿಸುತ್ತಾನೆ. ಆ ಸಮಯದಲ್ಲಿ ರಾಜ ವೈಭೋಗದ ಯಾವುದೇ ಪದಾರ್ಥಗಳು ಲಭ್ಯವಿಲ್ಲದ ಕಾರಣ, ಕಾಡಿನಲ್ಲಿ ತನಗೆ ಆಹಾರವಾಗಿದ್ದ ಇಂಗುಡಿ ವೃಕ್ಷದ ಹಣ್ಣಿನ ತಿರುಳು, ಕಾಡುಹಣ್ಣು, ಗೆಡ್ಡೆ-ಗೆಣಸುಗಳನ್ನೇ ಪಿಂಡವಾಗಿ ತಂದೆಗೆ ಅರ್ಪಿಸುತ್ತಾನೆ.
ಹೀಗೆ ಒಂದು ವಸ್ತುವಿನ ಅಭಾವದಲ್ಲಿ ಪ್ರತ್ಯಾ ಮ್ನಾಯ ವಾಗಿ ಬೇರೊಂದು ವಸ್ತುವನ್ನು ಬಳಸುವುದನ್ನು ನಮ್ಮ ಪೂಜೆಗಳಲ್ಲಿ ಬಹಳಷ್ಟು ಕಾಣುತ್ತೇವೆ. ಪ್ರಯೋಗಕರ್ತರುಗಳು ಈ ಪ್ರತ್ಯಾ ಮ್ನಾಯಗಳಿಗೆ ತಮ್ಮ ಒಪ್ಪಿಗೆಯ ಮುದ್ರೆಯನ್ನೂ ಒತ್ತಿದ್ದಾರೆ.
‘ಪೂರ್ಣಾತ್ ಜಾಯತೇ ಇತಿ ಪೂಜಾ’ ಪೂರ್ಣತೆಯಿಂದ ಅಥವಾ ಕೃತಜ್ಞತೆಯ ಭಾವದಿಂದ ಹುಟ್ಟುವ, ಭಕ್ತನ ಹೃದಯದಲ್ಲಿ ಭಗವಂತನ ಕುರಿತು ಮೂಡುವ ಪೂರ್ಣ ಭಾವ ಅಥವಾ ಕೃತಜ್ಞತೆಯಿಂದ ಹೊರಹೊಮ್ಮುವ ಆರಾಧನೆಯ ಕ್ರಮವನ್ನು ಪೂಜೆ ಎಂದು ಕರೆಯಲಾಗುತ್ತದೆ. ‘ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕi ಪ್ರಯಚ್ಛತಿ ತದಹಂ ಭಕ್ತ್ಯುಪಹೃತಮಶ್ನಾಮಿ ಪ್ರಯತಾತ್ಮನಃ’.
‘ಮುತ್ತು ರತ್ನ ಮುಂತಾದ ಆಡಂಬರಗಳಿಲ್ಲದೇ, ಪ್ರಾಕೃತಿಕವಾಗಿ ಸುಲಭಕ್ಕೆ ದೊರೆಯುವ ಎಲೆಯನ್ನಾಗಲಿ, ಹೂವನ್ನಾಗಲಿ, ಹಣ್ಣನ್ನಾಗಲಿ ಅಥವಾ ಕೇವಲ ನೀರನ್ನಾಗಲಿ ಶುದ್ಧ ಮನಸ್ಸಿನಿಂದ ಮತ್ತು ಭಕ್ತಿಯಿಂದ ನನಗೆ ಅರ್ಪಿಸಿದರೂ ಆ ಭಕ್ತಿಪೂರ್ವಕವಾಗಿ ಕೊಟ್ಟಂತಹ ಕೊಡುಗೆಯನ್ನು ನಾನು ಪ್ರೀತಿಯಿಂದ ಸ್ವೀಕರಿಸುತ್ತೇನೆ’ ಎಂದು ಭಗವಂತ ಭಗವದ್ಗೀತೆಯಲ್ಲಿ ಹೇಳಿರುವುದು ನಮಗೆ ತಿಳಿದೇ ಇದೆ.
‘ಒಂದು ದಳ ಶ್ರೀತುಳಸಿ ಬಿಂದು ಗಂಗೋದಕವ ಇಂದಿರಾರಮಣಗರ್ಪಿತವೆನ್ನಲು ಒಂದೆ ಮನದಲಿ ಸಿಂಧುಶಯನ ಮುಕುಂದಯೆನೆ ಎಂದೆಂದು ವಾಸಿಪನಾ ಮಂದಿರದೊಳಗೆ’ ಎಂದು ಪುರಂದರ ದಾಸರೂ ಗೀತಾವಾಕ್ಯಕ್ಕೆ ಪುಷ್ಟಿಯೊದಗಿಸಿರುವುದೂ ನಮ್ಮ ಮುಂದಿದೆ. ಆದರೆ, ಪುರಾತನರು ಭೌತಿಕ ಪೂಜೆಗೊಂದು ಕ್ರಮವನ್ನು ನಿಯಮ ಮಾಡಿಟ್ಟಿದ್ದಾರೆ.
ಮೊದಲು ಪೂಜೆಗೆ ಕುಳಿತುಕೊಳ್ಳುವ ನೆಲವನ್ನು ಗೌರವಿಸಬೇಕು, ಕುಳಿತುಕೊಳ್ಳುವ ಆಸನವನ್ನು ಗೌರವಿಸಬೇಕು. ನೀರು ಮುಂತಾದ ಪೂಜಾ ಪರಿಕರಗಳನ್ನು ಪೂರ್ವದಲ್ಲಿ ಪೂಜಿಸಬೇಕು. ಘಂಟೆಗೆ ಪೂಜಿಸಬೇಕು ಹೀಗೆ ಒಂದು ವ್ಯವಸ್ಥಿತವಾದ ಕ್ರಮವನ್ನು ಹೇಳಲಾಗಿದೆ. ಮುಂದೆ ಆರಾಧ್ಯ ದೇವರಿಗೆ ಅರ್ಘ್ಯ ಪಾದ್ಯ, ಸ್ನಾನಾಚಮನ, ಗಂಧ ದೂಪದೀಪ ನೈವೇದ್ಯಾದಿಗಳಿಂದ ಶೋಡಷೋಪಚಾರ ಪೂಜೆ ಮಾಡುವ ವ್ಯವಸ್ಥೆ ನಮ್ಮಲ್ಲಿದೆ. ಹಾಗೆ ಪೂಜೆಮಾಡುವಾಗ ಅದರಲ್ಲಿ ಪುಷ್ಪ ಪೂಜೆ ಹಾಗೂ ಪತ್ರಪೂಜೆ ಅಂತ ಕಲ್ಪೋಕ್ತವಾದ ಪೂಜೆಗಳಲ್ಲಿ ಬರುತ್ತದೆ.
ಅಲ್ಲಿ ಉಲ್ಲೇಖಿಸಿದ ಪತ್ರೆ, ಪುಷ್ಪಗಳಲ್ಲಿ ಅನೇಕ ಹೂವುಗಳ, ಪತ್ರೆಗಳ ಹೆಸರನ್ನೇ ನಾವು ಕೇಳಿರುವು ದಿಲ್ಲ, ಈ ಪೂಜಾ ವಿಧಿಗಳನ್ನು ರಚಿಸಿದ ಕಾಲದಲ್ಲಿ ಅವುಗಳ ಲಭ್ಯತೆ ಇತ್ತು ಅಂತ ಕಾಣುತ್ತದೆ. ಆದರೆ ಈಗ ಅದು ಲಭ್ಯವಿರಲಿಕ್ಕಿಲ್ಲ. ಆಗೆಲ್ಲ, ಪೂಜಾ ಪುಸ್ತಕದಲ್ಲಿ ಉಲ್ಲೇಖಿಸಿದ ಪತ್ರೆ ಪುಷ್ಪಗಳ ಹೆಸರನ್ನು ಓದುತ್ತಾ, ಲಭ್ಯವಿರುವ ನಾಲ್ಕೈದು ಬಗೆಯ ಹೂವನ್ನು ಹಾಗೂ ಬಿಲ್ವ, ಶಮಿ ಮುಂತಾದ ಒಂದೆರಡು ಬಗೆಯ ಪತ್ರೆಗಳನ್ನೇ ಸಮರ್ಪಿಸುವುದು ವಾಡಿಕೆಯಾಗಿದೆ.
ಭಾರತೀಯರು ನಂಬಿರುವ ದೇವತಾ ಪೂಜಾ ಪದ್ಧತಿಯ ತಿರುಳು ಅಂದರೆ, ಅದು ಪೂಜೆ ಮಾಡಿಸಿ ಕೊಳ್ಳುವ ಭಗವಂತನನ್ನು ‘ನಮ್ಮಂತೆ ಅವನು (ಸಃ ಅಹಂ)’ ಎನ್ನುವ ಭಾವದಿಂದ ಪೂಜಿಸುವುದು. ’ದೇಹೋ ದೇವಾಲಯಃ ಪ್ರೋಕ್ತೋ ದೇವೋ ಜೀವಃ ಸದಾಶಿವಃ ತ್ಯಜೇಜ್ಞಾನ ನಿರ್ಮಾಲ್ಯಂ ಸೋಹಂಭಾವೇನ ಪೂಜಯೇತ’.
ನಾವು ಸ್ನಾನ, ಅಲಂಕಾರ ಎಲ್ಲ ಮಾಡಿಕೊಳ್ಳುತ್ತೇವೆ ಅಂತಾದರೆ ಅದನ್ನು ನಮ್ಮ ಅರ್ಚನಾ ಮೂರ್ತಿಗೂ ಮಾಡಬೇಕು. ನಮಗೆ ಹಸಿವಾಗುತ್ತದೆ ಅಂತಾದರೆ, ನಮ್ಮ ದೇವರಿಗೂ ಹಸಿವಾಗ ಬಹುದು. ಹಾಗಾಗಿ ನೈವೇದ್ಯ ಮಾಡಬೇಕು. ಅದೂ ಏನನ್ನು? ನಾವು ಏನು ಊಟ ಮಾಡುತ್ತೇವೆಯೋ ಅದನ್ನೇ ನೈವೇದ್ಯ ಮಾಡಬೇಕು. ಎಂಥ ಸುಂದರ ಪರಿಕಲ್ಪನೆ ನೋಡಿ! “ಯದನ್ನಃ ಪುರುಷೋ ಭ ವತಿ ತದನ್ನಾಸ್ತಸ್ಯ ದೇವತಾಃ" ಎನ್ನುವುದು ವಾಲ್ಮೀಕಿ ರಾಮಾಯಣದ ಅಯೋಧ್ಯಾಕಾಂಡದ ಅತ್ಯಂತ ಪ್ರಸಿದ್ಧ ಹಾಗೂ ಅರ್ಥಗರ್ಭಿತವಾದ ಸೂಕ್ತಿಯಾಗಿದೆ. “ ಮನುಷ್ಯನು ಯಾವ ಆಹಾರವನ್ನು ಸೇವಿಸುತ್ತಾನೋ, ಅವನ ದೇವತೆಗಳೂ ಅದೇ ಆಹಾರವನ್ನು ಸ್ವೀಕರಿಸುತ್ತಾರೆ".
ಭೌತಿಕವಾಗಿ ಎಷ್ಟು ಬೆಲೆಬಾಳುವಂತದ್ದು ಎನ್ನುವುದಕ್ಕಿಂತ, ಅದನ್ನು ಕೊಡುವಾಗ ನಮ್ಮಲ್ಲಿರುವ ಶ್ರದ್ಧೆ ಮತ್ತು ಪ್ರಾಮಾಣಿಕತೆ ಮುಖ್ಯ. ಪರಿಸ್ಥಿತಿಗೆ ತಕ್ಕಂತೆ ಲಭ್ಯವಿರುವ ಅತ್ಯಂತ ಸರಳ ವಸ್ತುವನ್ನೇ ದೇವರಿಗೆ ಅರ್ಪಿಸಿದರೂ ಅದು ಪವಿತ್ರವಾದುದೇ ಆಗಿರುತ್ತದೆ. ಇಲ್ಲಿ ಭಾವ ಮುಖ್ಯ, ಪೂಜಾ ದ್ರವ್ಯಗಳಿಗೆ ನಂತರದ ಸ್ಥಾನ. ‘ ಭಾವಗ್ರಾಹಿ ಜನಾರ್ದನ’ ಅಂತ ಮಾತಿದೆಯಲ್ಲ.
ಪೂಜೆ ಮಾಡುವವ, ಪೂಜಾ ಸಾಮಗ್ರಿಗಳು ಎಲ್ಲವೂ ಭಗವಂತನ ಸೃಷ್ಟಿಯೇ ಆಗಿರುವಾಗ ನಾವು ಕೊಡುವುದೇನು? ಆತ ಸ್ವೀಕರಿಸುವುದೇನು?’ ‘ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೊ ಹರಿಯ ಕರುಣದಲಾದ ಭಾಗ್ಯವ ಹರಿಸಮರ್ಪಣೆ ಮಾಡಿ ಬದುಕಿರ’ ಎನ್ನುವಂತೆ ಅವನದ್ದೇ ವಸ್ತುವನ್ನು ಅವನಿಗೇ ಸಮರ್ಪಣೆ ಮಾಡಿ, ಫಲವಿದು ಬಾಳ್ದುದಕೆ ಎನ್ನುವುದಷ್ಟೇ ಆಸ್ತಿಕ ಜನರು ಮಾಡಬೇಕಾದ ಕೆಲಸವಾಗಿದೆ.
ಹೀಗೆ ಅನುಕೂಲಸಿಂದುವಿನಿಂದಾಗುವ, ಇತಿಮಿತಿಗಳಿರುವ ಬಾಹ್ಯ ಪೂಜೆಗೇ ಪ್ರತ್ಯಾಮ್ನಾಯವಾಗಿ ನ್ಯೂನಾತಿರೇಕಗಳ ಗೊಡವೆಯಿಲ್ಲದ ಮಾನಸಿಕ ಪೂಜಾ ವ್ಯವಸ್ಥೆಯನ್ನು ಕಲ್ಪಿಸಿ, ಪೂಜಾಕರ್ಮಕ್ಕೆ ಅನೂಹ್ಯ ವ್ಯಾಖ್ಯಾನ ಮಾಡಿದವರು ಆದಿಗುರು ಶ್ರೀ ಶಂಕರಾಚಾರ್ಯರು. ನಾಳೆ ಒಂದುದಿನ, ಪೂಜೆಗೆ ಅಗತ್ಯವಿರುವ ಪರಿಕರಗಳು ಯಾವುದೂ ಸಿಗಲಿಕ್ಕಿಲ್ಲ, ಅಥವಾ ಪೂಜೆ ಮಾಡಿಸುವವರು ಸಿಗಲಿಕ್ಕಿಲ್ಲ, (ಈಗಲೇ ಅಂಥಾ ಪರಿಸ್ಥಿತಿಯನ್ನು ಕಾಣುತ್ತಿದ್ದೇವೆ) ಮುಂದೆ ಇನ್ನೂ ದುಸ್ತರ ಸಂದರ್ಭ ಗಳನ್ನು ನಾವು ನೋಡಬೇಕಾಗಿ ಬರಬಹುದು. ಆದರೂ ಪೂಜೆ ಮಾಡಬೇಕು ಎನ್ನುವವರಿಗೆ ಒಂದು ಸೌಲಭ್ಯವನ್ನು ಆಚಾರ್ಯರು ಒದಗಿಸಿದರು.
ಉಳ್ಳವರೇನೋ ಶಿವಾಲಯವನ್ನೇ ಕಟ್ಟುತ್ತಾರೆ, ಇಲ್ಲದವರ ಕಥೆಯೇನು ಹಾಗಾದರೆ ಎನ್ನುವ ಪ್ರಶ್ನೆಗೆ ಜಗದ್ಗುರು ಶ್ರೀ ಶಂಕರಭಗತ್ಪಾದಾಚಾರ್ಯರು ಮಾನಸ ಪೂಜೆಯ ಅಪರೂಪದ ಉಪಾಯವನ್ನು ದಯಪಾಲಿಸಿದರು. 33ಕೋಟಿ ದೇವತೆಗಳಿರುವ ನಮ್ಮ ಸನಾತನ ಧರ್ಮದಲ್ಲಿ ಆಚರಣೆಗೆ ಸಹಕಾರಿಯಾಗುವಂತೆ ಪ್ರಧಾನವಾಗಿ ಐದು ದೇವತೆಗಳ ಪೂಜೆ ಮಾಡುವುದನ್ನು ನಿಯಮಿಸಿದವರು ಶ್ರೀ ಶಂಕರ ಭಗವತ್ಪಾದಾಚಾರ್ಯರು.
ಅಷ್ಟೇ ಅಲ್ಲದೇ ಪೂಜೆ ಆರಾಧನೆಯಲ್ಲಿ ಕರ್ಮ, ಜ್ಞಾನ ಹಾಗೂ ಭಕ್ತಿ ಈ ಮೂರನ್ನೂ ಸಮೀಕರಿಸಿದ ಸೂತ್ರವನ್ನು ನೀಡಿದವರು ಅವರು. ಹರಿಹರರನ್ನೂ ಸೇರಿ ದೇವರುಗಳಲ್ಲಿ ಬೇಧ ತೋರಬಾರದು ಎಂದು ಸಾರಿ, ಆರಾಧನೆಯಲ್ಲಿ ಏಕತೆಯ ಸಿದ್ಧಾಂತವನ್ನು ಮೊದಲು ಮಂಡಿಸಿದವರು ಶ್ರೀ ಆಚಾರ್ಯರು. ಅವರ ಭಾಷ್ಯಗ್ರಂಥಗಳು ಜಿಜ್ಞಾಸೆಯ ಕಡಗೋಲಿನಿಂದ ಕಡೆದು ಉತ್ಪನ್ನವಾದ ನವನೀತವಾದರೆ, ಸ್ತೋತ್ರಗಳು ಭಕ್ತಿಯ ಅನುಭವದಿಂದ ಸ್ವಾಭಾವಿಕವಾಗಿ ಹೊರಹೊಮ್ಮಿದ ದುಗ್ಧವಾಗಿದೆ.
ಏಕಶ್ಲೋಕಿಯಿಂದ ಹಿಡಿದು ಪಂಚಕ, ಅಷ್ಟಕ ಮುಂತಾದ ಅಸಂಖ್ಯ ಮನೋಜ್ಞ ಸ್ತೋತ್ರಗಳನ್ನು ಆಚಾರ್ಯರು ರಚಿಸಿದ್ದಾರೆ. ಅವುಗಳಲ್ಲಿ ಶಿವ ಮಾನಸ ಪೂಜಾ ಸ್ತೋತ್ರ ಬಹಳ ವಿಶಿಷ್ಟವಾದದ್ದಾ ಗಿದೆ. ಶಿವ ಮಾನಸ ಪೂಜಾ ಎನ್ನುವುದು ಭೌತಿಕ ವಸ್ತುಗಳಿಲ್ಲದೆಯೂ ಮನಸ್ಸಿನ ಶಿವನಿಗೆ ಭಕ್ತಿಯಿಂದ ಅರ್ಚನೆ ಸಲ್ಲಿಸಲು ಉತ್ತಮ ಮಾರ್ಗವಾಗಿದೆ.
ಬಾಹ್ಯ ಪೂಜೆಗಿಂತ ಅಂತರಂಗದ ಪೂಜೆ ಶ್ರೇಷ್ಠವೂ ಹೌದು, ಕಷ್ಟವೂ ಹೌದು. ಏಕೆಂದರೆ ಇದರಲ್ಲಿ ಮನಸ್ಸು ಅತ್ತಿತ್ತ ಓಡಾಡದೇ ಸಂಪೂರ್ಣವಾಗಿ ಭಗವಂತನ ಮೇಲೆಯೇ ಕೇಂದ್ರೀಕೃತವಾಗಿರ ಬೇಕಾಗುತ್ತದೆ. ‘ರತ್ನೈಃಕಲ್ಪಿತಮಾಸನಂಹಿಮಜಲೈಃ ಸ್ನಾನಂ ಚ ದಿವ್ಯಾಂಬರಂ ನಾನಾರತ್ನ ವಿಭೂಷಿತಂ ಮೃಗಮದಾಮೋದಾಂಕಿತಂ ಚಂದನಮ, ಜಾತಿ ಚಂಪಕ ಬಿಲ್ವ ಪತ್ರರಚಿತಂ ಪುಷ್ಪಂ ಚ ಧೂಪಂ ತಥಾ, ದೀಪಂ ದೇವ ದಯಾನಿಧೇ ಪಶುಪತೇ ಹೃತ್ಕಲ್ಪಿತಂ ಗೃಹ್ಯತಾಮ’ ಎಂದು ಪ್ರಾರಂಭವಾಗುವ ಮಾನಸಿಕ ಪೂಜಾ ಸ್ತೋತ್ರವು ಐದು ಶ್ಲೋಕಗಳ ಗುಚ್ಛವಾಗಿದೆ. ಈ ಸ್ತೋತ್ರಗಳು ಮನಸ್ಸಿನ ಶಿವನಿಗೆ ಭಕ್ತಿಯಿಂದ ವೈಭವೋಪೇತವಾಗಿ ಅರ್ಚನೆ ಸಲ್ಲಿಸಬಹುದು ಎನ್ನುವುದನ್ನು ಸಾರುತ್ತದೆ.
ಒಂದರಿಂದ ಮೂರನೇ ಶ್ಲೋಕಗಳು, ಮನಸ್ಸಿನ ರತ್ನಖಚಿತ ಸಿಂಹಾಸನ, ಹಿಮಜಲದ ಸ್ನಾನ, ದಿವ್ಯವಸಗಳು, ಆಭರಣಗಳು, ಗಂಧ, ಪುಷ್ಪ, ಧೂಪ, ದೀಪ, ಪಾಯಸ, ಹಣ್ಣು-ಹಂಪಲುಗಳು ಹಾಗೂ ಚಾಮರ-ನೃತ್ಯ- ಗಾನಗಳೊಂದಿಗೆ ಶಿವನಿಗೆ ವಿಧವಿಧವಾಗಿ ಉಪಚಾರ ಮಾಡುವುದಾಗಿದೆ. ನಾಲ್ಕನೇ ಶ್ಲೋಕವು, ‘ನನ್ನ ಆತ್ಮವೇ ಶಿವ, ಬುದ್ಧಿಯೇ ಗಿರಿಜೆ, ಪ್ರಾಣಗಳೇ ಶಿವಗಣಗಳು, ನನ್ನ ದೇಹವೇ ಶಿವನ ದೇಗುಲ; ನಾನು ಮಾಡುವ ಎಲ್ಲ ಓಡಾಟ ಪ್ರದಕ್ಷಿಣೆ, ಆಡುವ ಮಾತುಗಳೆಲ್ಲ ಸ್ತೋತ್ರ ಮತ್ತು ನನ್ನ ನಿದ್ರೆಯೇ ಸಮಾಧಿ ಸ್ಥಿತಿ’ ಎಂದು ಅಬೇಧವನ್ನು ಸಾರುತ್ತದೆ.
‘ಉಳ್ಳವರು ಶಿವಾಲಯವ ಮಾಡುವರು ನಾನೇನ ಮಾಡಲಿ ಬಡವನಯ್ಯ, ಎನ್ನ ಕಾಲೇ ಕಂಬ ದೇಹವೆ ದೇಗುಲ ಶಿರವೇ ಹೊನ್ನ ಕಳಶವಯ್ಯ’ ಎಂದು ಮುಂದೆ ಶಿವಶರಣರೂ ಇದೇ ಧಾಟಿಯಲ್ಲಿ ವಚನಗಳನ್ನು ರಚಿಸಿರುವುದು. ಐದನೇ ಶ್ಲೋಕವು ಕೈ-ಕಾಲುಗಳಿಂದ, ಮಾತಿನಿಂದ, ದೇಹದಿಂದ ಅಥವಾ ಮನಸ್ಸಿನಿಂದ ತಿಳಿದೋ ತಿಳಿಯದೆಯೋ ಮಾಡಿದ ಎಲ್ಲಾ ಅಪರಾಧಗಳಿಗೆ ಕ್ಷಮೆಯನ್ನು ಯಾಚಿಸುವ ಕ್ಷಮಾಪಣಾ ಸ್ತೋತ್ರವಾಗಿದೆ.
ಶರೀರ ಭಾವದಿಂದ ಗ್ರಹಿಸುವವರಿಗೆ ವಿವಿಧ ಪರಿಕರಗಳನ್ನು ಕಲ್ಪಿಸಿ ಪೂಜಿಸುವ ಮೊದಲ ಮೂರು ಶ್ಲೋಕಗಳು ಮೀಸಲು, ಆತ್ಮಭಾವದಿಂದ ಅದ್ವೈತವನ್ನು ನೋಡುವವರಿಗೆ ನಾಲ್ಕನೇ ಶ್ಲೋಕ, ಆತ್ಮವೇ ಶಿವ, ಬುದ್ಧಿಯೇ ಗಿರಿಜೆ, ಪ್ರಾಣಗಳೇ ಶಿವಗಣಗಳು, ನನ್ನ ದೇಹವೇ ದೇಗುಲ ಅಂತ ಹೇಳಿದ ಮೇಲೆ, ಪೂಜೆ ಮಾಡಿಸಿಸಿಕೊಳ್ಳುವವರು ಯಾರು? ಮಾಡುವವರು ಯಾರು? ನಾನೇ ಅವನಾದ ಮೇಲೆ, ನನ್ನ ನಡಿಗೆಯಲ್ಲವೂ ಪವಿತ್ರ ಪ್ರದಕ್ಷಿಣೆಯೇ ಆಗುತ್ತದೆ.
ಮಾತೆಲ್ಲವೂ ಸ್ತೋತ್ರವಾಗುತ್ತವೆ, ಮಾಡುವ ಕರ್ಮಗಳೆಲ್ಲವೂ ಶಂಭುವಿನ ಆರಾಧನೆಯಲ್ಲದೇ ಇನ್ನೇನಾಗಲು ಸಾಧ್ಯ? ಇಲ್ಲಿ ಶ್ರೀ ಶಂಕರಾಚಾರ್ಯರು ಜೀವ ಮತ್ತು ದೇವರ ನಡುವಿನ ಐಕ್ಯತೆ ಯನ್ನು ಸೂಕ್ಷ್ಮವಾಗಿ ಸಾರುತ್ತಾರೆ. ಆದ್ಯ ಶಂಕರಾಚಾರ್ಯರು ಬೋಧಿಸಿದ ಮಾನಸ ಪೂಜೆಯನ್ನು ಯಾರು ಬೇಕಾದರೂ, ಎಲ್ಲಿ ಬೇಕಾದರೂ ಮಾಡಬಹುದು. ಈ ಪೂಜೆಗೆ ಯಾವುದೇ ಹಣ, ಪತ್ರೆ, ಪುಷ್ಪ,ನೈವೇದ್ಯ ಅಥವಾ ನಿರ್ದಿಷ್ಟ ಸ್ಥಳದ ಅಗತ್ಯವಿಲ್ಲ.
ಪ್ರಯಾಣ ಮಾಡುವಾಗ, ಕಚೇರಿಯಲ್ಲಿರುವಾಗ ಅಥವಾ ಅನಾರೋಗ್ಯದ ಸಮಯದಲ್ಲಿಯೂ ಸಹ ಕಣ್ಣು ಮುಚ್ಚಿ ಮನಸ್ಸಿನ ಶಿವನನ್ನು ಆರಾಧಿಸಬಹುದು. ಮನಸ್ಸು ಅತ್ಯಂತ ಚಂಚಲವಾದದ್ದು. ಆದರೆ ಮಾನಸ ಪೂಜೆಯಲ್ಲಿ ಚಿನ್ನದ ಪಾತ್ರೆ, ಪಾಯಸ, ರತ್ನದ ಸಿಂಹಾಸನಗಳನ್ನು ಮನಸ್ಸಿನ ಸೃಷ್ಟಿಸಬೇಕಾಗಿರುವುದರಿಂದ, ಚಂಚಲ ಮನಸ್ಸು ಬೇರೆಡೆಗೆ ಹೋಗದೆ ಭಗವಂತನ ಧ್ಯಾನದಲ್ಲಿ ಲೀನವಾಗುತ್ತದೆ.
ಭೌತಿಕ ಪೂಜೆಯಲ್ಲಿ “ ನಾನು ಇಷ್ಟು ಖರ್ಚು ಮಾಡಿದೆ, ಇಷ್ಟು ದೊಡ್ಡ ಪೂಜೆ ಮಾಡಿದೆ" ಎಂಬ ಅಹಂಕಾರ ಬರಬಹುದು. ಆದರೆ ಮಾನಸ ಪೂಜೆಯಲ್ಲಿ ಎಲ್ಲವೂ ಭಗವಂತ ನೀಡಿದ ಕಲ್ಪನಾ ಶಕ್ತಿಯಿಂದಲೇ ನಡೆಯುವುದರಿಂದ ಅಹಂಕಾರಕ್ಕೆ ಜಾಗವಿರುವುದಿಲ್ಲ. ಹಾಗಾಗಿ, ಶಿವ ಮಾನಸ ಪೂಜಾ ಸ್ತೋತ್ರ ಕೇವಲ ಒಂದು ಸ್ತೋತ್ರವಲ್ಲ; ಇದು ಭಕ್ತನನ್ನು ಭೌತಿಕ ಆಡಂಬರದಿಂದ ಆಂತರಿಕ ಪ್ರಜ್ಞೆಯ ಕಡೆಗೆ ಕೊಂಡೊಯ್ಯುವ ಅತ್ಯುನ್ನತ ಆಧ್ಯಾತ್ಮಿಕ ಸಾಧನವಾಗಿದೆ.
ಶ್ರೀವತ್ಸ ಜೋಶಿಯವರು ಎತ್ತಿದ ಬದಲಿ ವ್ಯವಸ್ಥೆಯ ವಿಷಯ, ಶ್ರೀ ಶಂಕರಾಚಾರ್ಯರು ಬಾಹ್ಯ ಪೂಜೆಗೆ ಪ್ರತ್ಯಾಮ್ನಾಯವಾಗಿ ಕಲ್ಪಿಸಿದ ಮಾನಸ ಪೂಜೆಯವರೆಗೆ ನನ್ನನ್ನು ಕರೆದು ತಂತು.