ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vinayaka M Bhat Column: ಅಕ್ಕ, ಸಕ್ಕರೆಯ ಮನದ ಅಕ್ಕರೆಯ ರಕ್ಕಸಿ

ನಾನು ಈ ಹತ್ತು ರುಪಾಯಿಯನ್ನು ಒಬ್ಬನೇ ಖರ್ಚಂತೂ ಮಾಡಲಾರೆ ಎನ್ನುವ ನಿರ್ಣಯಕ್ಕೆ ಬಂದಿದ್ದೆ, ಎಲ್ಲಿಂದ ತಂದಿದ್ದಾನೋ ಅಲ್ಲಿಗೇ ತೆಗೆದುಕೊಂಡು ಹೋಗಿ ಇಟ್ಟು ಬರುವುದೂ ಅಷ್ಟು ಸುಲಭದ ಮಾತಾಗಿರಲಿಲ್ಲ. ಒಂದು ನಿರ್ಧಾರಕ್ಕೆ ಬಂದೆ. ನನ್ನ ಈ ಕ್ರೈಮ್‌ಗೆ ನನ್ನ ಅಕ್ಕನಿಗಿಂತ ಹೆಚ್ಚು ವಿಶ್ವಾಸಾರ್ಹ ಹಾಗೂ ಆತ್ಮೀಯ ಪಾರ್ಟ್‌ನರ್ ಸಿಗಲಿಕ್ಕಿಲ್ಲವೆಂದು ಭಾವಿಸಿ, ಅಕ್ಕಾ ನಿನಗೊಂದು ಗುಡ್‌ನ್ಯೂಸ್ ಇದೆ ಅಂದೆ, ನನ್ನತ್ರ ಹತ್ತು ರುಪಾಯಿ ಇದೆ, ನೋಡು!

ಅಕ್ಕ, ಸಕ್ಕರೆಯ ಮನದ ಅಕ್ಕರೆಯ ರಕ್ಕಸಿ

-

ವಿದ್ಯಮಾನ

ಎಪ್ಪತ್ತರ ದಶಕ, ನಾನಿನ್ನೂ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದ ಕಾಲ ಅದು, ಪ್ರಾಯಶಃ ಮೊದಲನೇ ತರಗತಿ ಇರಬೇಕು. ಊರಲ್ಲಿ ಮನೆಯಿಂದ ಶಾಲೆಗೆ ಹೊಳೆದಾಟಿ ಒಂದು ಮೈಲು ನಡೆಯಬೇಕು. ನನಗೊಬ್ಬಳು ಅಕ್ಕ, ನನಗಿಂತ ಕೇವಲ ಎರಡು ವರ್ಷ ದೊಡ್ಡವಳು. ನನ್ನನ್ನು ಶಾಲೆಗೆ ಕರೆದುಕೊಂಡು ಹೋಗಿ ಬರುವ ಜವಾಬ್ದಾರಿ ಆಕೆಯದ್ದು. ಬಿಳಿ ಅಂಗಿ ನೀಲಿ ಚಡ್ಡಿ, ಬಿಳಿ ಪಲಕ ನೀಲಿ ಸ್ಕರ್ಟ್‌ನ ಸಮವಸ್ತ್ರದ ಆ ಪ್ರಯಾಣವನ್ನು ನಾವು ತುಂಬಾ ಎಂಜಾಯ್ ಮಾಡಿದ್ದೇವೆ. ಈಗಲೂ ಮರೆಯಲಾಗದ ನಿತ್ಯ ಪಯಣ ಅದು.

ಇರಲಿ, ವಯಸ್ಸಿನ ಅಂತರ ಎರಡೇ ವರ್ಷವಾಗಿದ್ದರಿಂದ ಅಕ್ಕ ಎನ್ನುವ ವಿಧೇಯತೆಗಿಂತ ಸ್ನೇಹದ ಸಲುಗೆ ಜಾಸ್ತಿ ಇತ್ತು. ಸಣ್ಣಪುಟ್ಟ ಹೊಡೆದಾಟ ಬಡಿದಾಟಗಳು ಇದ್ದೇ ಇದ್ದವು ಬಿಡಿ, ಅವೆಲ್ಲ ಇಲ್ಲದಿದ್ದರೆ ಹೇಗೆ ಅಲ್ವಾ? ಆಗೆಲ್ಲ ಶಾಲೆಗೆ ಹೋಗುವ ಮಕ್ಕಳಿಗೆ ನಾಲ್ಕಾಣೆ ಎಂಟಾಣೆಯೂ ಕೈಖರ್ಚಿಗೆ ಸಿಗುತ್ತಿರದ ಕಾಲ, ಆ ಶಾಲೆಯ ಹತ್ತಿರ ಒಂದು ಸಣ್ಣ ಗೂಡಂಗಡಿ ಇತ್ತು.

ಅಲ್ಲಿ ವಿವಿಧ ಬಣ್ಣದ ಪೆಪ್ಪರಮೆಂಟ್, ಶೇಂಗಾ, ಪುಟಾಣಿ ಮುಂತಾದ ಮಕ್ಕಳನ್ನು ಸೆಳೆಯುವ ಎಲ್ಲ ವಸ್ತುಗಳೂ ಇದ್ವು. ಐದು ಪೈಸೆಗೆ ಹತ್ತು ಪೆಪ್ಪರಮಿಂಟ್ ಬರುತ್ತಿದ್ದ ಕಾಲ ಅದಾಗಿತ್ತು. ಆದರೂ ಕಿಸೆಯಲ್ಲಿ ದುಡ್ಡಿರದಿದ್ದ ಕಾರಣಕ್ಕೆ ದೂರದಿಂದ ಈ ಗೂಡಂಗಡಿಯನ್ನು ಪ್ರತಿದಿನ ನೋಡುವುದನ್ನು ಬಿಟ್ಟರೆ ಖರೀದಿ ಇರುತ್ತಿರಲಿಲ್ಲ.

ಆಸೆಯನ್ನು ಅದುಮಿಟ್ಟು ಅದುಮಿಟ್ಟು ಸಾಕಾಗಿ ಹೀಗೆ ಬಹಳ ದಿನ ಕಳೆದ ನಂತರ, ನಾನೊಂದು ಸಾಹಸಕ್ಕೆ ಕೈ ಇಟ್ಟೆ. ಅದು ಅಂಥಿಂತಾ ಸಾಹಸವಾಗಿರಲಿಲ್ಲ, ನನ್ನದೇ ಮನೆಯ ಕಪಾಟಿನಿಂದ ದುಡ್ಡನ್ನು ಕದಿಯುವ ಕೆಲಸವಾಗಿತ್ತು. ಸಾಮಾನ್ಯವಾಗಿ ಆಕಾಲದಲ್ಲಿ ಎಲ್ಲರ ಮನೆಯಲ್ಲಿ ಒಂದು, ಎರಡು, ಐದು ಹಾಗೂ ಹತ್ತು ರುಪಾಯಿಗಳ ನೋಟು ಕೈಗೆಟಕುವಷ್ಟು ಹತ್ತಿರದಲ್ಲಿ ಇರುತ್ತಿತ್ತು, ಐವತ್ತು ನೂರರ ನೋಟಿಗೆ ಹೆಚ್ಚಿನ ಭದ್ರತೆಯ ಜಾಗ ಬೇಕಾಗುತ್ತಿತ್ತು.

ಇದನ್ನೂ ಓದಿ: Vinayak M Bhat Column: ಅತಿ ವ್ಯಾಮೋಹ ಮಕ್ಕಳ ಭವಿಷ್ಯಕ್ಕೆ ಮಾರಕವಾಗಬಹುದು !

ಕತ್ತಲೆಯಲ್ಲಿ ಮಾಳಿಗೆಯ ಕಪಾಟಿನ ಬಾಗಿಲು ತೆಗೆದು ತಡಕಾಡಿದೆ, ಅಲ್ಲಿ ತುಂಬಾ ನೋಟುಗಳಿದ್ದವು ಎನ್ನುವುದು ತಿಳಿಯುತ್ತಿತ್ತಾದರೂ, ನಾನು ಎತ್ತಿಕೊಂಡಿದ್ದು ಕೇವಲ ಒಂದು ನೋಟನ್ನು ಮಾತ್ರವಾಗಿತ್ತು. ಅಷ್ಟರಮಟ್ಟಿಗೆ ನನ್ನ ಪ್ರಾಮಾಣಿಕತೆಯ ಬಗ್ಗೆ ನನಗೆ ಹೆಮ್ಮೆಯಿದೆ! ನನ್ನ ಮನಸ್ಸಿನಲ್ಲಿದ್ದದ್ದು ಒಂದೋ ಅಥವಾ ಎರಡರ ನೋಟು ನನ್ನ ಕೈಗೆ ಬರುತ್ತೆ ಅಂತ ಆದರೆ, ಕೈಗೆ ಹತ್ತರ ಹೊಸ ನೋಟು ಬಂದಿತ್ತು, ಒಂದು ರುಪಾಯಿಯ ಬದಲಿಗೆ ಹತ್ತು ರುಪಾಯಿ ಸಿಕ್ಕರೆ ಅದು ಖುಷಿಪಡುವ ವಿಷಯ, ಆದರೆ ನನಗೆ ಒಂದು ಬ್ಯಾಂಕನ್ನೇ ದರೋಡೆ ಮಾಡಿದಷ್ಟು ಆತಂಕವಾಯಿತು.

ಕಾರಣವಿಷ್ಟೇ, ಆ ಹತ್ತೂ ರುಪಾಯಿಗೆ ಶಾಲೆಯ ಹತ್ತಿರವಿದ್ದ ಗೂಡಂಗಡಿಯ ಅರ್ಧ ಸಾಮಾನು ಗಳನ್ನು ಖರೀದಿ ಮಾಡಿಬಿಡುವಷ್ಟು ದೊಡ್ಡ ದುಡ್ಡಾಗಿತ್ತು ಅದು. ನನಗೆ ಬೇಕಾದ್ದನ್ನು ಖರೀದಿಸಿ ನಾನೇನಾದರೂ ಆ ಹತ್ತು ರುಪಾಯಿಯನ್ನು ಅಂಗಡಿಯವನಿಗೆ ಕೊಟ್ಟಿದ್ದರೆ, ಮರುದಿನ ಲೋಕಲ್ ಪೇಪರಿನಲ್ಲಿ ನನ್ನ ಹೆಸರು ಫೋಟೋ ಸಮೇತ ಬರುವ ಸಂದರ್ಭವಿತ್ತು. ಹೀಗೆ ಮೂರು ನಾಲ್ಕುದಿನ ಕಳೆಯಿತು, ರಾತ್ರಿ ಮಲಗಿದರೆ ನಿದ್ರೆ ಬರ್ತಾ ಇರಲಿಲ್ಲ, ಕಾರಣ ನನ್ನ ಸ್ಕೂಲ್ ಬ್ಯಾಗಿನಲ್ಲಿ ಕದ್ದ ಮಾಲಿತ್ತಲ್ಲ!

ನಾನು ಈ ಹತ್ತು ರುಪಾಯಿಯನ್ನು ಒಬ್ಬನೇ ಖರ್ಚಂತೂ ಮಾಡಲಾರೆ ಎನ್ನುವ ನಿರ್ಣಯಕ್ಕೆ ಬಂದಿದ್ದೆ, ಎಲ್ಲಿಂದ ತಂದಿದ್ದಾನೋ ಅಲ್ಲಿಗೇ ತೆಗೆದುಕೊಂಡು ಹೋಗಿ ಇಟ್ಟು ಬರುವುದೂ ಅಷ್ಟು ಸುಲಭದ ಮಾತಾಗಿರಲಿಲ್ಲ. ಒಂದು ನಿರ್ಧಾರಕ್ಕೆ ಬಂದೆ. ನನ್ನ ಈ ಕ್ರೈಮ್‌ಗೆ ನನ್ನ ಅಕ್ಕನಿಗಿಂತ ಹೆಚ್ಚು ವಿಶ್ವಾಸಾರ್ಹ ಹಾಗೂ ಆತ್ಮೀಯ ಪಾರ್ಟ್‌ನರ್ ಸಿಗಲಿಕ್ಕಿಲ್ಲವೆಂದು ಭಾವಿಸಿ, ಅಕ್ಕಾ ನಿನಗೊಂದು ಗುಡ್‌ನ್ಯೂಸ್ ಇದೆ ಅಂದೆ, ನನ್ನತ್ರ ಹತ್ತು ರುಪಾಯಿ ಇದೆ, ನೋಡು! ಎಲ್ಲಿಂದ ತಂದೆ ಮುಂತಾದ ಪ್ರಶ್ನೆಗಳು ಬೇಡಾ, ಮುಂದಿನ ಎಂಟು ದಿನವೂ ಶೆಟ್ಟರ ಅಂಗಡಿಯಲ್ಲಿ ನಾವಿಬ್ಬರೂ ಬೇಕಾದ್ದನ್ನೆಲ್ಲ ತಿಂದರೂ ಇನ್ನೂ ಅರ್ಧ ದುಡ್ಡು ಉಳಿದುಬಿಡುತ್ತದೆ, ಹಾಗೆ ಉಳಿದ ದುಡ್ಡು ನಿನಗೇ ಇರಲಿ. ನನಗೆ ಒಂದು ನಯಾ ಪೈಸೆಯೂ ಬೇಡಾ ಎಂದು ಆಕರ್ಷಕ ಡೀಲ್ ಅಕ್ಕನ ಮುಂದಿಟ್ಟೆ. ಅಕ್ಕನ ಮುಖದಲ್ಲಿ ಖುಷಿಯೇನೋ ಕಂಡಿತು, ಸರಿ ಆ ಹತ್ತು ರುಪಾಯಿ ನನಗೆ ಕೊಡು, ಅದರ ವಿನಿಯೋಗದ ಬಗ್ಗೆ ನಾನು ನಾಳೆ ಆಲೋಚನೆ ಮಾಡಿ ಹೇಳುತ್ತೇನೆ ಎಂದವಳೇ ನನ್ನ ಹತ್ತಿರವಿದ್ದ ಹತ್ತು ರುಪಾಯಿ ನೋಟನ್ನು ಕಸಿದುಕೊಂಡು ತನ್ನ ಬ್ಯಾಗಿಗೆ ಇಳಿಸಿದಳು.

Screenshot_1 ಒಕ

ನಾಲ್ಕೈದು ದಿನಗಳಿಂದ ಅನುಭವಿಸುತ್ತಿದ್ದ ಭಯಂಕರ ಒತ್ತಡ ಕಡಿಮೆಯಾದಂತಾಗಿ ಮನಸ್ಸು ನಿರಾಳವಾಯಿತು. ನಾಳೆಯಿಂದ ಪ್ರತಿದಿನ ಶೆಟ್ರ ಅಂಗಡಿಯಲ್ಲಿ ಏನೇನು ತಿನ್ನುವುದು ಎನ್ನುವ ಆಲೋಚನೆ ಆಗಲೇ ಮನಸ್ಸಿನಲ್ಲಿ ಶುರುವಾಗಿಬಿಟ್ಟಿತ್ತು. ಆದರೆ ಶಾಲೆಯಿಂದ ಮನೆಗೆ ಹೋದಾಗ ತಿನ್ನಲು ಸಿಕ್ಕಿದ್ದು ಬೇರೆಯದೇ ಬಿಸಿ ಕಜ್ಜಾಯವಾಗಿತ್ತು. ನಾನಿಟ್ಟ ಅಸೀಮ ವಿಶ್ವಾಸವನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ, ಆಕೆ ದರೋಡೆಯ ಸಂಪೂರ್ಣ ವೃತ್ತಾಂತವನ್ನು ಅಮ್ಮನಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟು, ನನ್ನ ಇಡಿ ಯೋಜನೆಯನ್ನು ಮಣ್ಣುಪಾಲು ಮಾಡಿಬಿಟ್ಟಳು. ಇದಕ್ಕಿಂತ ದೊಡ್ಡ ವಿಶ್ವಾಸಘಾತುಕತನ ಇನ್ನೊಂದಿದೆಯೇ!

ಯಃಕಶ್ಚಿತ್ ಹತ್ತು ರುಪಾಯಿಯ ವ್ಯವಹಾರಕ್ಕೆ, ಕೋಟಿ ಬಾಳುವ ನನ್ನ ಮರ್ಯಾದೆ ತೆಗೆಯುವುದೇ? ಅಲ್ಲಿಂದ, ಜೀವನದಲ್ಲಿ ಕಡುವೈರಿಯನ್ನಾದರೂ ನಂಬಬಹುದು, ಆದರೆ ಇಂಥಾ ಕ್ರೈಮ್ ಸ್ಟೋರಿಯಲ್ಲಿ ಅಕ್ಕನನ್ನು ಮಾತ್ರ ಪಾತ್ರವಾಗಿಸಬಾರದು ಎನ್ನುವ ಸಿದ್ಧಾಂತಕ್ಕೆ ಬಂದೆ. ಇದು ಒಂದು ಉದಾಹರಣೆಯಷ್ಟೇ, ಹೀಗೆ ಅನೇಕ ಬಾರಿ ಆಕೆ ನನಗೆ ನಿರ್ದಯವಾಗಿ ಗುದ್ದಿ ಬುದ್ಧಿ ಕಲಿಸಿದ್ದಿದೆ ಬಿಡಿ. ಹೀಗೆ ಅಕ್ಕ ತಮ್ಮ ಒಟ್ಟಿಗೆ ಕಾಲೇಜಿಗೆ ಹೋಗುವುದು ಇನ್ನೂ ಅಪಾಯಕಾರಿ, ತಮ್ಮ ಶಾಲೆಯಲ್ಲಿ ಯಾವ ಹುಡುಗಿಗೆ ಲೈನ್ ಹೊಡೆಯುತ್ತಿದ್ದಾನೆ, ಕಾಲೇಜ್ ಕಂಪೌಂಡ್‌ನಿಂದ ಎಷ್ಟು ಹೊತ್ತು ಹೊರಗಿದ್ದ, ಯಾವೆಲ್ಲ ದಾರಿತಪ್ಪಿದ ಮಕ್ಕಳ ಜೊತೆಗೆ ಇವನ ಓಡಾಟವಿದೆ ಮುಂತಾದ ಎಲ್ಲ ವಿವರಗಳು ಆವತ್ತಿಂದಾವತ್ತೇ ಪ್ರಾಮಾಣಿಕವಾಗಿ ತಲುಪಬೇಕಾದ ಜಾಗವನ್ನು ತಲುಪುತ್ತೆ.

ಏನು ಮಾಡುವುದು? ಹೇಳಿ ಕೇಳಿ ಅಕ್ಕ ಅವಳು. ಒಡಹುಟ್ಟಿದವರಲ್ಲಿ ಅಕ್ಕನಿಗೆ ವಿಶೇಷ ಸ್ಥಾನ ಮಾನವಿದೆ. ತಮ್ಮ-ತಂಗಿಯರ ಕಥೆ ಬೇರೆ ಅವರು ಯಾವಾಗಲೂ partner in crime ಆಗಬಹುದು, ಅಣ್ಣನನ್ನು ಮ್ಯಾನೇಜ್ ಮಾಡುವುದು ಅಷ್ಟು ಕಷ್ಟವೆನಿಸದು, ಆದರೆ ಅಕ್ಕ ಹಾಗಲ್ಲ, ಅವಳೊಂದು ಬಿಡಿಸಲಾಗದ ಒಗಟು, ಕಗ್ಗಂಟು. ಆಕೆ ಒಮ್ಮೆ ಅಕ್ಕ ಆಗ್ತಾಳೆ, ಇನ್ನೊಮ್ಮೆ ಅಮ್ಮನಾಗ್ತಾಳೆ ಮತ್ತೊಮ್ಮೆ ಅಪ್ಪ ಆಗ್ತಾಳೆ, ಮತ್ತೆ ಕೆಲವೊಮ್ಮೆ ಟೀಚರ್ ಆಗ್ತಾಳೆ, ಮಗದೊಮ್ಮೆ ಸ್ನೇಹಿತೆಯಾಗ್ತಾಳೆ ಹಾಗೂ ತಮ್ಮತಂಗಿಯರಿಗಿಂತ ಚಿಕ್ಕವಳಂತೆಯೂ ಆಡ್ತಾಳೆ. ಅಕ್ಕನೆಂದರೆ ಒಂಥರಾ ವಿಶ್ವರೂಪಿ.

ಅವಳ ಎಲ್ಲ ವೇಷಗಳಿಗೂ ಪ್ರೇಕ್ಷಕ ಮಾತ್ರ ತಮ್ಮತಂಗಿಯರೇ. ಆಕೆಯ ಎಲ್ಲ ಹೊಸ ಪ್ರಯೋಗಗಳು ನಡೆಯುವುದು ತನ್ನ ತಂಗಿ ತಮ್ಮನ ಮೇಲೆಯೇ. ತಮ್ಮ ತಂಗಿಯರ ಬಗ್ಗೆ ಆಕೆಗೆ ವಿಚಿತ್ರ ನಿರೀಕ್ಷೆ ಗಳಿರುತ್ತವೆ ಮತ್ತು ಆ ನಿರೀಕ್ಷೆಗಳು ಪ್ರತಿದಿನವೂ ಬದಲಾಗುತ್ತಿರುತ್ತವೆ, ಇವಳ ನಿರೀಕ್ಷೆಯ ತಾಳಕ್ಕೆ ತಮ್ಮತಂಗಿಯರು ಕುಣಿಯಲು ಹೆಣಗಾಡಬೇಕಾಗುತ್ತದೆ.

ಪ್ರಪಂಚದ ಆದರ್ಶಗಳೆಲ್ಲ ತನ್ನ ತಮ್ಮತಂಗಿಯಲ್ಲಿರಬೇಕು ಎಂದು ನಿರೀಕ್ಷಿಸುತ್ತಾಳೆ. ತಾನು ಅಪ್ಪಅಮ್ಮನಿಗೆ ಏನು ಬೇಕಾದರೂ ಗಿಜರಬಹುದು, ಅದೇ ತಮ್ಮ ತಂಗಿ ಅಪ್ಪ ಅಮ್ಮನಿಗೆ ರೆಸ್ಪೆಕ್ಟ್ ಕೊಡಬೇಕು ಎಂದು ನಿರೀಕ್ಷಿಸುತ್ತಾಳೆ. ಅವಳು ಎಷ್ಟೇ ನಿಷ್ಠುರವಾಗಿ ಮಾತನಾಡಿದರೂ ತಮ್ಮತಂಗಿ ಬೇಸರ ಮಾಡಿಕೊಳ್ಳುವ ಹಾಗಿಲ್ಲ, ಅದೇ ಅವರು ಅಕ್ಕನಿಗೆ ಸ್ವಲ್ಪ ವ್ಯತ್ಯಾಸ ಮಾಡಿ ಮಾತನಾಡಿ ದರೂ ಭೂಮ್ಯಾಕಾಶ ಒಂದು ಮಾಡಿಬಿಡುತ್ತಾಳೆ.

ತಮ್ಮ ಅವನ ಪಾಡಿಗೆ ಅವನಿದ್ದಾಗ ತಾನು ಬಂದು ಆತನ ಕೂದಲೆಳೆಯಬಹುದು, ಜಿಗುಟಬಹುದು, ತಳ್ಳಬಹುದು, ಕ್ರಿಕೆಟ್ ಪಂದ್ಯದ ಕುತೂಹಲ ಘಟ್ಟದಲ್ಲಿ ಟಿವಿ ಬಂದ್ ಮಾಡಿಬಿಡಬಹುದು, ಹೀಗೆ ಆಕೆ ಏನು ಬೇಕಾದರೂ ಮಾಡಬಹುದು, ಅದೇ ಅಕ್ಕ ಸುಮ್ಮನೇ ಕುಳಿತಿರುವಾಗ ತಮ್ಮ ಅಥವಾ ತಂಗಿಯ ಕಿರುಬೆರಳು ಸೋಂಕಿದರೂ ಸಾಕು, ಮನೆಯ ಅಲಕಲವಾಗಿಬಿಡುತ್ತದೆ.

ಅವಳ ಶೃಂಗಾರ ಸಾಧನಗಳನ್ನಂತೂ ತಮ್ಮ-ತಂಗಿ ಯಾರೂ ಕಣ್ಣೆತ್ತಿ ನೋಡುವ ಹಾಗೂ ಇಲ್ಲ, ಹಾಗಂತ ತನಗೇ ಮನಸ್ಸು ಬಂತೆಂದರೆ, ತಮ್ಮನನ್ನೂ ತಂಗಿಯಂತೆ ಕಾಣುವ ಹಾಗೆ, ತಂಗಿಯನ್ನು ತಮ್ಮನಂತೆ ಕಾಣುವ ಹಾಗೆ ತಾನೇ ಮೇಕ್‌ಅಪ್ ಮಾಡಬಲ್ಲ ಪ್ರತಿಭೆ ಅವಳದ್ದು. ತಾನು ಎಷ್ಟು ಬೇಕಾದರೂ ಅನ್ನಬಹುದು, ಹೀಯಾಳಿಸಬಹುದು ಕಾಲೆಳೆಯಬಹುದು ಆದರೆ ಬೇರೆಯವ ರ್ಯಾರೂ ತನ್ನ ತಮ್ಮ ತಂಗಿಗೆ ಒಂದು ಮಾತೂ ಹೇಳುವ ಹಾಗಿಲ್ಲ, ಅಕ್ಕನಾದವಳು ಅದನ್ನು ಮಾತ್ರ ಸುತರಾಂ ಸಹಿಸುವುದಿಲ್ಲ.

ಅಕ್ಕನೆಂದರೆ ಹೊರಗೆ ಕೋಪ, ಒಳಗೆ ಕರುಣೆ, ತಪ್ಪು ಮಾಡಿದಾಗ ಅಮ್ಮನಿಗಿಂತ ಹೆಚ್ಚು ಬೈಯು ತ್ತಾಳೆ, ಆದರೆ ಅಮ್ಮನೇ ಹೊಡೆಯಲು ಬಂದಾಗ, ಸ್ವಯಂಪ್ರೇರಣೆಯಿಂದ ತಮ್ಮ ತಂಗಿಯ ಪರ ವಕಾಲತ್ತು ವಹಿಸುತ್ತಾಳೆ. ತಮ್ಮತಂಗಿಯರಿಗೆ ಕಷ್ಟ ಬಂದಾಗ ಇಡೀ ಪ್ರಪಂಚದ ಎದುರು ತಾನೊಬ್ಬಳೇ ಧೈರ್ಯವಾಗಿ ನಿಲ್ಲುತ್ತಾಳೆ.

ಸದಾ ನಿಯಂತ್ರಿಸಲು ನೋಡುವ ಅವಳ ಕೋಪದ ಹಿಂದೆಯೇ, ತಾಯಿಯಂತಹ ನಿಷ್ಕಲ್ಮಶವಾದ ವಾತ್ಸಲ್ಯವೂ ಅಡಗಿರುತ್ತದೆ. ಅದಕ್ಕೇ ತಾನೆ ಆಕೆಯನ್ನು ಮನೆಯ ಎರಡನೇ ಅಮ್ಮ ಅಂತ ಕರೆಯೋದು? (ಇವಳ ಆಟಾಟೋಪದ ಮುಂದೆ ಒಮ್ಮೊಮ್ಮೆ ಅಮ್ಮನೇ ಎರಡನೆಯವಳಾಗುವುದೂ ಇದೆ) ‘ಜ್ಯೇಷ್ಠಾ ಭಗಿನೀ ಮಾತುಃ ಸಕಲಂ ವಾತ್ಸಲ್ಯಂ ಧಾರಯತಿ| ಸಾ ಕೇವಲಂ ಭಗಿನೀ ನ ಅಪಿ ತು ದ್ವಿತೀಯಾ ಮಾತಾ ಭವತಿ’ ಅಕ್ಕ ತನ್ನ ಒಡಹುಟ್ಟಿದವರ ಮೇಲೆ ತಾಯಿಯಂತೆಯೇ ವಾತ್ಸಲ್ಯ ವನ್ನು ಹೊಂದಿರುತ್ತಾಳೆ.

ಆಕೆ ಕೇವಲ ಅಕ್ಕ ಮಾತ್ರವಲ್ಲ, ಒಡಹುಟ್ಟಿದವರ ಪಾಲಿಗೆ ಎರಡನೇ ತಾಯಿಯೇ ಆಗಿzಳೆ ಎಂದು ಸಂಸ್ಕೃತ ಸುಭಾಷಿತಕಾರನೂ ಹಿರಿಯಕ್ಕನ ಹಿರಿಮೆಯನ್ನು ಹಾಡಿಹೊಗಳಿದ್ದಾನೆ. ಅಕ್ಕನಿಗೆ ಇನ್ನೂ ಒಂದು ಹೆಚ್ಚುಗಾರಿಕೆಯಿದೆ, ಅದು ಅವಳ ಪ್ರಾಮಾಣಿಕತೆ, ವಿಶ್ವಾಸಾರ್ಹತೆ ಹಾಗೂ ನೈತಿಕ ಬದ್ಧತೆ. ಮನೆಯಲ್ಲಿ ಅಪ್ಪನಿಗೆ ಹಿರಿಯ ಮಗಳ ಮಾತೆಂದರೆ ಮುಗಿಯಿತು, ಅದು ಆತನಿಗೆ ಉಚ್ಚ ನ್ಯಾಯಾಲಯದ ತೀರ್ಪಿಗಿಂತ ಮೇಲು, ಅಮ್ಮನ ಮಾತನ್ನೂ ಅಪ್ಪ ಬದಿಗೆ ಸರಿಸಬಲ್ಲ, ಆದರೆ ತನ್ನ ಹಿರಿಯ ಮಗಳ ಮಾತು ಮಾತ್ರ ನಡೆಯಲೇ ಬೇಕು.

ಅಕ್ಕನ ಮದುವೆಗೆ ಮೊದಲು ತಮ್ಮನೇನಾದರೂ ಅಮ್ಮನಲ್ಲಿ ಅಕ್ಕನ ಬಗ್ಗೆ ದೂರು ಹೇಳಲು ಹೋದರೆ, ಅಮ್ಮ ಹೇಳೋದು ಸುಮ್ನಿರೋ ನೀನು, ಇನ್ನೆಷ್ಟು ದಿನ ಇರ್ತಾಳೆ ಈ ಮನೆಯಲ್ಲಿ ಆಕೆ? ನಾಳೆ ಮದುವೆಯಾಗಿ ಗಂಡನ ಮನೆಗೆ ಹೋಗುವವಳು ಪಾಪ, ಅದೇ ಮದುವೆಯಾದ ಮೇಲಾದರೆ, ಎಲ್ಲಾ ವರ್ಷಕ್ಕೆ ಒಂದೆರಡು ಬಾರಿ ಅಮ್ಮನ ಮನೆಗೆ ಅಂತ ಬರ್ತಾಳೆ, ಬಂದಾಗೆಲ್ಲ ನಿನ್ನದ್ದು ಏನು ತೀಟೆ ಅವಳತ್ರ? ಒಟ್ಟಿನಲ್ಲಿ ಅಕ್ಕ ಎನ್ನುವವಳು ಕುಟುಂಬದ ದಂಡಸಂಹಿತೆಯ ಪರಿಧಿಯಿಂದ ಯಾವಾಗಲೂ ಹೊರಗೇ ಇರುತ್ತಾಳೆ. ಕನ್ನಡದಲ್ಲಿ ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಎನ್ನುವ ಮಾತಿದೆ.

ಅಂದರೆ, ಮನೆಯಲ್ಲಿ ಹಿರಿಯವಳು ಮಗಳಾಗಿದ್ದರೆ ಮುಂದೆ ಹುಟ್ಟುವ ಮಕ್ಕಳಿಗೆಲ್ಲ ಅವಳೇ ಮಾದರಿ ಯಾಗಿರಬೇಕು, ಅವಳ ನಡತೆ ಅಷ್ಟು ಮಾದರಿಯಾಗಿರಬೇಕು, ನಂತರ ಹುಟ್ಟಿದವರು ಅವಳನ್ನು ನೋಡಿ ಕಲಿಯಬೇಕು ಎನ್ನುವುದು ಈ ಮಾತಿನ ಸಾರ. ಹಿರಿಯಣ್ಣನ ಚಾಳಿ ಮನೆ ಮಂದಿಗೆಲ್ಲ ಅಂತ ಹೇಳುವುದಿಲ್ಲ ನೋಡಿ! ಕಾರಣ ಕೇವಲ ಅಕ್ಕನಿಗೆ ಮಾತ್ರ ತನ್ನ ನಂತರ ಹುಟ್ಟಿದವರನ್ನು ತನ್ನ ಚಾಳಿಗೆ ಅಳವಡಿಸಲು ಸಾಧ್ಯ, ಅಣ್ಣನಿಗೆ ಅದು ಸಾಧ್ಯವಿಲ್ಲ.

ಮನಶ್ಶಾಸ್ತ್ರದ ಪ್ರಕಾರ Eldest Daughter Syndrome ಅಥವಾ Eldest Sister Syndrome ಅಂತ ಒಂದು Syndrome ಇದೆಯಂತೆ. ಎಲ್ಲ ಜವಾಬ್ದಾರಿಗಳೂ ನನ್ನ ಮೇಲೆಯೇ ಇವೆ ಎನ್ನುವ ಹೈಪರ್-ರೆಸ್ಪಾನ್ಸಿಬಿಲಿಟಿ, ಅತಿ ಪ್ರಾಮಾಣಿಕತೆ, ಎಲ್ಲವೂ ನನ್ನ ಮೇಲೆಯೇ ಅವಲಂಬಿತವಾಗಿದೆ, ಎಲ್ಲವೂ ನನಗೇ ತಿಳಿದಿದೆ, ಬೇರೆ ಯಾರಿಗೂ ಏನೂ ತಿಳಿವಳಿಕೆಯಿಲ್ಲ ಎನ್ನುವ ಮನಸ್ಥಿತಿ, ಚಿಕ್ಕವರ ಕೆಲಸದಲ್ಲಿ ಮೈಕ್ರೋ ಮ್ಯಾನೇಜ್ ಮೆಂಟ್ ಮಾಡುವುದು, ಎಲ್ಲದರಲ್ಲೂ ಇತರರಿಂದ Perfection ಬಯಸುವುದು,

ಕಿರಿಯರು ಸದಾ ತನ್ನ ನಿಯಂತ್ರಣದಲ್ಲಿರಬೇಕು ಎಂದು ಬಯಸುವುದು ಇತ್ಯಾದಿಗಳು ಈ Syndrome ನ ಲಕ್ಷಣಗಳು, ಈ ಗುಣಲಕ್ಷಣಗಳನ್ನು ಹೊಂದಿದವರು ಸಮಾಜದಲ್ಲಿ ನಮಗೆ ಬೇಕಾದಷ್ಟು ಸಿಗುತ್ತಾರೆ ಅಥವಾ ಅನೇಕ ಸಂದರ್ಭಗಳಲ್ಲಿ ನಾವೂ ಬೇರೆಯವರಲ್ಲಿ ಹೀಗೆ ನಡೆದುಕೊಳ್ಳುವುದೂ ಇದೆ. ಇರಲಿ, ‘ಸಕ್ಕರೆ ಮನದ ಅಕ್ಕರೆಯ ರಕ್ಕಸಿ’ ಎನ್ನುವ ಮಾತು ಅಕ್ಕನಿಗೆ ಎಷ್ಟು ಅದ್ಭುತವಾಗಿ ಹೊಂದಾಣಿಕೆಯಾಗುತ್ತೆ ಅಲ್ವಾ! ಅಕ್ಕ ಎಂಬ ಜೀವಿ ಹೊರಗಣ್ಣಿಗೆ ಎಷ್ಟೇ ನಿರ್ದಯಿಯಾಗಿ, ಸದಾ ಸಣ್ಣಪುಟ್ಟ ವಿಷಯಕ್ಕೆ ಜಗಳವಾಡುವ ರಕ್ಕಸಿಯಂತೆ ಕಂಡರೂ, ಅವಳ ಮನಸ್ಸಿನಲ್ಲಿ ಅಕ್ಕರೆ ಮತ್ತು ಕಾಳಜಿಯೂ ಅಷ್ಟೇ ಅಗಾಧವಾಗಿರುತ್ತೆ.

ಅಕ್ಕನ ಪ್ರೀತಿ ಅಭಿಮಾನಕ್ಕೆ ಸರಿತೂಕದ ವಸ್ತು ಯಾವುದೂ ಇಲ್ಲ, ಅಕ್ಕನ ಪ್ರೀತಿಯನ್ನು ಅನುಭವಿಸುವುದೆಂದರೆ ಅದು ಅಕಾಲದಲ್ಲಿ ಸುರಿವ ಮಳೆಯಲ್ಲಿ ಮಿಂದೆದ್ದಂತೆ, ನಡುಮಳೆಗಾಲದ ಜಲಪಾತದ ಧಾರೆಯಲ್ಲಿ ಕೊಚ್ಚಿಹೋದಂತೆ, ಹುಲಿಯಿಂದ ಮುದ್ದು ಮಾಡಿಸಿಕೊಂಡು ಮೈ ಪರಚಿಸಿಕೊಂಡಂತೆ. ಪ್ರೀತಿಯಲ್ಲಿಯೂ ಹಣ್ಣುಗಾಯಿ ನೀರುಗಾಯಿ ಆಗಬೇಕೆನ್ನುವವರು ಅಕ್ಕನ ಸಹವಾಸ ಮಾಡಬೇಕು. ಈಗ ನನ್ನ ಮನೆಯಲ್ಲಿ ಇರುವ ಅಕ್ಕ ತಮ್ಮನನ್ನು ಸೂಕ್ಷ್ಮವಾಗಿ ಗಮನಿಸುತ್ತೇನೆ, ತಮ್ಮನಾಗಿರುವ ನನ್ನ ಮಗನಲ್ಲಿ ನಿತ್ಯ ನನ್ನನ್ನೇ ನಾನು ನೋಡುತ್ತೇನೆ.

ಎಪ್ಪತ್ತರ ದಶಕದ ನನ್ನ ಅಕ್ಕನಿಗೂ, ಎರಡು ಸಾವಿರದ ಇಪ್ಪತ್ತಾರರ ಅವನ ಅಕ್ಕನಿಗೂ ಕಿಂಚಿತ್ತೂ ವ್ಯತ್ಯಾಸವಿಲ್ಲ. ಅಕ್ಕ ಅಂದೂ, ಇಂದೂ, ಮುಂದೂ, ಎಂದೆಂದೂ ಅಕ್ಕನೇ. ಅಕ್ಕ ಬದಲಾಗಿzಳೆ ‘ಅಕ್ಕತನ’ ಒಂಚೂರೂ ಬದಲಾಗಲೇ ಇಲ್ಲ ಎನ್ನುವ ತೀರ್ಮಾನಕ್ಕೆ ಬಂದಿದ್ದೇನೆ. ನಾನು ವರ್ಣಿಸಿದ ಅಕ್ಕನಿಗಿಂತ ವ್ಯತಿರಿಕ್ತವಾದ ಅಕ್ಕ ನಿಮಗಾರಿಗಾದರೂ ಇದ್ದರೆ ತಿಳಿಸಿ. ಯಾರಿಗೆ ಅಕ್ಕನಿಲ್ಲವೋ ಅವರದ್ದು ಅಪೂರ್ಣ ಜೀವನವೇ ಸರಿ, ಅಂಥವರು ಅಕ್ಕನ ಅನುರಾಗವನ್ನು ಅನುಭವಿಸಲು ಮತ್ತೊಂದು ಜನ್ಮಕ್ಕಾಗಿ ದೇವರಲ್ಲಿ ಪ್ರಾರ್ಥಿಸುವುದೊಳಿತು. ಈ ಲೇಖನವನ್ನು ಬರೆದು ಮುಗಿಸುವ ಹೊತ್ತಿಗೆ, ಕಾಕತಾಳೀಯವೆಂಬಂತೆ ಮೊನ್ನೆ ಶುಕ್ರವಾರ ಮಹಾನ್ ಸಿನೆಮಾದ ‘ಒಡಹುಟ್ಟಿದವಳೇ’ ಎನ್ನುವ ಸುಂದರ ಹಾಡೊಂದು ಬಿಡುಗಡೆಯಾಗಿದೆ.

ವಿ.ನಾಗೇಂದ್ರ ಪ್ರಸಾದ ರಚಿಸಿರುವ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ ಹಾಗೂ ಸಿದ್ ಶ್ರೀರಾಮ್ ಹಾಡಿದ್ದಾರೆ. ಈ ಹಾಡಿನ ಕಾಡುವ ಕೆಲವು ಸಾಲುಗಳು ಹೀಗಿವೆ. ‘ಜೊತೆಯಾಗಲು ಜೊತೆ ಹುಟ್ಟಿದ ಬೆಲೆಕಟ್ಟದ ಅನುಬಂಧದ ಒಡಹುಟ್ಟಿದವಳೇ.... ನಾ ನಿನ್ನ ಸ್ವಂತ ಸೋದರ ಈ ಬಂಧ ದೇವರಾ ವರ ನಿರಂತರ..... ತಾಯಿಯಾದ ನಂತರ ನೀನೆ ತಾಯಿಯಲ್ಲವೇ.. ಹೃದಯದಾ ನಕಲು ನೀ ಎರಡನೇ ಹೃದಯ ನೀ... ಯಾರಿದ್ದರು ಇರದಿದ್ದರೂ ನೀನಿದ್ದರೆ ಸಂಪತ್ತದು....ಬದುಕಿನಾ ಬಲವು ನೀ..... ಒಡಹುಟ್ಟಿದವಳೇ’