ಶಶಾಂಕಣ
ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಪಠ್ಯವನ್ನೊಳಗೊಂಡ ಪಠ್ಯಕ್ರಮವನ್ನು ಪಿಯುಸಿ ತರಗತಿಗಳಲ್ಲಿ ನಾನು ಅಧ್ಯಯನ ಮಾಡಿದ್ದುಂಟು. ಮುಂದೆ ವೈದ್ಯರಾಗಬಯಸುವ ವಿದ್ಯಾರ್ಥಿಗಳು, ಎಂಜಿನಿಯರ್ ಆಗುವ ಆಸೆ ಇರುವವರು ಆಯ್ದುಕೊಳ್ಳುವ ಸೈನ್ಸ್ ವಿಭಾಗ ಅದು. ಭೌತಶಾಸ್ತ್ರ, ಜೀವಶಾಸ್ತ್ರ, ಗಣಿತ ಮೂರು ಪ್ರಮುಖ ವಿಷಯಗಳಲ್ಲಿ ನಮ್ಮ ಅಧ್ಯಯನ. ಆಗ, ನಮ್ಮ ಪಠ್ಯಕ್ರಮದಲ್ಲಿದ್ದ ಒಂದು ಪ್ರಯೋಗವನ್ನು ಬಹಳ ಕಷ್ಟದಿಂದ, ಆಸ್ಥೆಯಿಂದ ಮಾಡಿದ್ದರೂ, ಮುಂದೆ ನನ್ನ ಜೀವನದಲ್ಲಿ ಎಂದಿಗೂ ಉಪಯೋಗಕ್ಕೆ ಬರದೇ ಹೋಯ್ತು!
ಅದೇ ಕಪ್ಪೆ ಕೊಯ್ಯುವ ಪ್ರಯೋಗ! ಹತ್ತನೆಯ ತರಗತಿಯಲ್ಲಿದ್ದಾಗಲೇ, ನಮ್ಮ ತರಗತಿಯ ಅಮಾ ಯಕ, ಗ್ರಾಮೀಣ ಹಿನ್ನೆಲೆಯ ಸ್ನೇಹಿತರು ತುಸು ಬೆರಗಿನಿಂದ, ತುಸು ಭಯದಿಂದ ಹೇಳುತ್ತಿದ್ದರು: ‘ಬರುವ ವರ್ಷ ಕಪ್ಪೆ ಕೊಯ್ಯುವ ಪ್ರಯೋಗ ನಮಗೂ ಉಂಟು’. ಹಿಂದೆಂದೂ ಯಾವುದೇ ಪ್ರಾಣಿಗೆ ಹಿಂಸೆ ಕೊಡದೇ ಇರುವ ನಮ್ಮಂಥ ವಿದ್ಯಾರ್ಥಿಗಳು, ಅಂಥ ಒಂದು ಪ್ರಯೋಗವನ್ನು ನೆನಪಿಸಿ ಕೊಂಡೇ ತುಸು ಹೀಕರಿಸಿಕೊಳ್ಳುತ್ತಿದ್ದುದೂ ನಿಜ!
ಆದರೇನು ಮಾಡುವುದು, ಮುಂದಿನ ವರ್ಷ ನಾನು ಸೈನ್ಸ್ ತರಗತಿಗಳನ್ನೇ ಆಯ್ದುಕೊಂಡೆ, ಕಪ್ಪೆ ಯನ್ನು ಕೊಯ್ಯುವ ‘ಡಿಸೆಕ್ಷನ್’ ತರಗತಿಗಳಲ್ಲಿ ಅನಿವಾರ್ಯವಾಗಿ ಸಕ್ರಿಯವಾಗಿ ಭಾಗವಹಿಸಿದೆ. ಆ ಕಲೆಯಲ್ಲಿ ಪರಿಣಿತನಾದ ನಂತರ, ನಮ್ಮ ಮನೆಯಂಗಳದಲ್ಲಿ ನಾನು ಮಾಡಿದ ಒಂದು ‘ಸಾಹಸ’ ವನ್ನು ಕಂಡು, ನಮ್ಮ ಅಮ್ಮ, ಅಮ್ಮಮ್ಮ ಮತ್ತು ತಂಗಿಯರು ನಿಬ್ಬೆರಗಾಗಿಬಿಟ್ಟರು. ಅದೇನೆಂದರೆ ಕಪ್ಪೆಗಳನ್ನು ಕೈಯಲ್ಲೇ ಹಿಡಿಯುವುದು!
ಗದ್ದೆಗಳ ನಡುವೆ, ತೋಟದ ಅಂಚಿನಲ್ಲಿ, ಕಾಡಿನಿಂದ ಹರಿದುಬರುವ ನೀರಿನ ಒರತೆಗಳ ಸನಿಹವೇ ಇದ್ದ ನಮ್ಮ ಮನೆ, ಸದಾಕಾಲ ಥಂಡಿ ಇರುವ ಜಾಗ. ಮನೆ ಎದುರಿನ ಮಣ್ಣಿನ ಅಂಗಳದಲ್ಲಿ ದೊಡ್ಡ ದೊಡ್ಡ ವಿವಿಧ ಗಾತ್ರದ ಕಪ್ಪೆಗಳು ಓಡಾಡುವುದು ತೀರಾ ಮಾಮೂಲು; ಮಳೆಗಾಲವಿರಲಿ, ಬೇಸಗೆಯೇ ಇರಲಿ, ಕಪ್ಪೆಗಳು ಕುಪ್ಪಳಿಸುತ್ತಾ ಮನೆಯ ಕಡೆ ಬರುವುದು ನಮಗೆ ಒಂದು ಸಹಜ ನೋಟ.
ಇದನ್ನೂ ಓದಿ: Shashidhara Halady Column: ಎಚ್ದರವಿರಲಿ ಕಾಡು ಗುಡ್ಡಗಳಲ್ಲಿ ಅಲೆಯುವಾಗ !
ಸಣ್ಣ, ದೊಡ್ಡ ಗಾತ್ರದ ಕಪ್ಪೆಗಳು ಕುಪ್ಪಳಿಸಿಕೊಂಡು ಮನೆಯ ಕಡೆ ಬಂದರೆ, ಅವು ಒಳಗೆ ಬರದಂತೆ ಓಡಿಸುವುದು ಸಹ ನಮ್ಮ ಕೆಲಸ! ಈ ರೀತಿ ಅಂಗಳದಲ್ಲಿ ಕುಪ್ಪಳಿಸುತ್ತಾ ಬರುವ ಕಪ್ಪೆಗಳ ಹಿಂದೆ ಯೇ ಇನ್ನೊಂದು ಜೀವಿಯೂ ಆಗಾಗ ಬರುವುದುಂಟು! ಅದೇನೆಂದರೆ, ಹಾವು! ತಮ್ಮ ಸಹಜ ಆಹಾರವಾದ ಕಪ್ಪೆಯು, ಮನುಷ್ಯನ ಮನೆಯತ್ತ ಸಾಗುವುದನ್ನು ಕಂಡು, ರೋಷಗೊಂಡೋ ಏನೋ, ಹಾವುಗಳು ಬಿಡದಂತೆ ಕಪ್ಪೆಗಳ ಬೆನ್ನುಹತ್ತುತ್ತಿದ್ದವು!
ಕಪ್ಪೆಗಳನ್ನು ಅಟ್ಟಿಸಿಕೊಂಡು ಬರುವ ಹೈಸಾರ ಮತ್ತು ಒಳ್ಳೆ ಹಾವುಗಳು ನೇರವಾಗಿ ಮನೆಯ ಬಾಗಿಲಿನ ಹತ್ತಿರಕ್ಕೇ ಬರುತ್ತಿದ್ದುದು ಸಹ ಮಾಮೂಲು. ನಾಗರಹಾವುಗಳು ಮನೆಯ ಹತ್ತಿರ, ಒಳಗೂ ಕೂಡ ಒಮ್ಮೊಮ್ಮೆ ಬರುತ್ತಿದ್ದರೂ, ಅವು ಕಪ್ಪೆಯನ್ನು ಅಟ್ಟಿಸಿಕೊಂಡು ಬಂದ ನೆನಪಿಲ್ಲ.ನಮ್ಮ ಮನೆಯ ಅಂಗಳದಲ್ಲೇ ಒಂದು ಬಗ್ಗುಬಾವಿ ಇತ್ತು.
ಮಳೆಗಾಲ ಆರಂಭವಾಗಿ ಆರು ತಿಂಗಳುಗಳ ತನಕ ಅದರಲ್ಲಿ ಕೈಗೆಟಕುವಷ್ಟು ಆಳದಲ್ಲಿ ನೀರಿರು ತ್ತಿತ್ತು. ಬಹು ಹಿಂದೆ ಸ್ಥಳೀಯ ಕಾರ್ಮಿಕರೇ ನಿರ್ಮಿಸಿದ ಆ ಬಾವಿಯ ಒಳಗೆ, ಒರಟು ಕಲ್ಲುಗಳ ಕಟ್ಟೋಣ. ಆ ಕಲ್ಲುಗಳ ಸಂದಿಯೇ ಒಳ್ಳೆ ಹಾವುಗಳ ವಾಸಸ್ಥಳ! ಇವು ಕಚ್ಚುವುದಿಲ್ಲ; ಕಚ್ಚಿದರೂ ವಿಷವಿಲ್ಲ.
ಆದ್ದರಿಂದ, ಅವು ನಿಜಾರ್ಥದಲ್ಲಿ ಒಳ್ಳೆಯ ಹಾವುಗಳು! ಆದರೆ, ಕಪ್ಪೆಗಳನ್ನು ಕಂಡರೆ ಬಿಡಲಾರವು. ಹಾವಿನ ಬಾಯಿಗೆ ಸಿಲುಕಿದ ಕಪ್ಪೆಯ ಆರ್ತನಾದ ಕೇಳಿದರೆ, ಎಂಥವರಿಗಾದರೂ ಮರುಕ ಹುಟ್ಟದೇ ಇರದು. ಆದರೆ, ನಾವು ಅಂದರೆ ಮಕ್ಕಳು, ಆ ವಿದ್ಯಮಾನವನ್ನು ಸುಮ್ಮನೆ ನೋಡುತ್ತಿದ್ದೆವೇ ಹೊರತು, ಹಾವಿನ ‘ತಳ್ಳಿಗೆ’ ಹೋಗುತ್ತಿರಲಿಲ್ಲ! ಹಾವಿನ ಬಾಯಲ್ಲಿರುವ ಕಪ್ಪೆಯನ್ನು ತಪ್ಪಿಸಲು ಹೋದರೆ, ಅದು ಕಪ್ಪೆಯನ್ನು ಬಿಟ್ಟು ನಮ್ಮತ್ತ ಓಡಿಬಂದರೆ ಎಂಬ ಭಯ ಇದ್ದೇ ಇರುತ್ತಿತ್ತು ತಾನೆ!
ಒಂದು ದಿನ, ನಮ್ಮ ಅಂಗಳದಲ್ಲಿ ದೊಡ್ಡ ಗಾತ್ರದ ಕಪ್ಪೆಯೊಂದನ್ನು ನಾನು ಬರಿಗೈಯಲ್ಲಿ ಹಿಡಿದೆ! ಅದು ಅಂಗಳದ ಒಂದು ಮೂಲೆಯಲ್ಲಿ, ಗಿಡವೊಂದರ ಮರೆಯಲ್ಲಿ ಕುಳಿತಿತ್ತು; ಅದೇ ಹಿಂದಿನ ದಿನ ನಮ್ಮ ತರಗತಿಯಲ್ಲಿ ಕಪ್ಪೆಯ ಡಿಸೆಕ್ಷನ್ ಪ್ರಯೋಗ ಆಗಿತ್ತು. ಆ ಉತ್ಸಾಹದಲ್ಲಿ, ನಮ್ಮ ಮನೆ ಯಂಗಳದಲ್ಲಿದ್ದ ಕಪ್ಪೆಯ ಸೊಂಟದ ಭಾಗಕ್ಕೆ ಛಕ್ಕೆಂದು ಕೈ ಹಾಕಿ ಹಿಡಿದದ್ದನ್ನು ಕಂಡು, ಮನೆಯವರಿಗೆಲ್ಲಾ ಅಚ್ಚರಿ.
ಕಪ್ಪೆಯೊಂದನ್ನು ಬರಿಗೈಯಲ್ಲಿ ಹಿಡಿಯಬಹುದು ಎಂಬ ವಿಚಾರವೇ ಅವರಿಗೆ ವಿಸ್ಮಯ ಮೂಡಿಸಿತ್ತು. ಆ ಕಪ್ಪೆಯನ್ನು ಕೈಯಲ್ಲಿ ಹಿಡಿದ ಕೂಡಲೆ, ಆ ಕಪ್ಪೆ ತನ್ನ ಮೂತ್ರವನ್ನು ನನ್ನತ್ತ ಹಾರಿಸಿತು. ಆ ಅಮಾಯಕ ಜೀವಿಗಳು, ತಮ್ಮನ್ನು ರಕ್ಷಿಸಿಕೊಳ್ಳಲು, ಈ ರೀತಿ ಮೂತ್ರವನ್ನು ಹಾರಿಸುತ್ತವಂತೆ. ಆ ಮೂತ್ರವು ಕಣ್ಣಿಗೆ ಸಿಡಿದರೆ, ದೃಷ್ಟಿಗೆ ಹಾನಿಯಾಗಬಹುದೆಂಬ ನಂಬಿಕೆ ನಮ್ಮೂರಿನಲ್ಲಿದೆ!
ಆಫ್ರಿಕಾದ ಮರುಭೂಮಿಯ ಕೆಲವು ಕಪ್ಪೆಗಳ ಮೂತ್ರವು ಸಾಕಷ್ಟು ಪ್ರಬಲ ಎನ್ನಲಾಗಿದೆ; ತಮ್ಮನ್ನು ಹಿಡಿಯಲುಬರುವ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು, ಕಣ್ಣಿಗೆ ತಗುಲಿದರೆ ತೀವ್ರ ಉರಿ ಉಂಟು ಮಾಡಲು ಈ ರೀತಿ ಮೂತ್ರವನ್ನು ಸಿಡಿಸುವ ಅಭ್ಯಾಸವನ್ನು ಕಪ್ಪೆಗಳು ಬೆಳೆಸಿಕೊಂಡಿವೆ. ಆದರೆ, ಅದು ವಿಷಕಾರಿ ಏನಲ್ಲ, ಆದ್ದರಿಂದ ಹೆಚ್ಚಿನ ಭಯ ಬೇಕಿಲ್ಲ.
ಕೆಲವು ಕಪ್ಪೆಗಳ ಚರ್ಮದಿಂದ ಒಸರುವ ದ್ರವವು, ವಿಷಕಾರಿ ಆಗಬಲ್ಲದು, ಮುಖ್ಯವಾಗಿ ಸಾಕುಪ್ರಾಣಿ ಗಳಿಗೆ. ಆದರೆ, ಮನುಷ್ಯನಿಗೆ ಇವುಗಳಿಂದ ತೊಂದರೆ ಇಲ್ಲ. ಆ ದಿನ ಅಂಗಳದಲ್ಲಿದ್ದ ಅಮಾಯಕ ಕಪ್ಪೆಯನ್ನು ನಾನು ಕೈಲಿ ಹಿಡಿದದ್ದು, ಅದನ್ನು ಕಂಡು ನನ್ನ ತಂಗಿಯರು ಬೆರಗಾಗಿದ್ದು, ಇದನ್ನೆಲ್ಲಾ ಗಮನಿಸಿದ ನಮ್ಮ ಅಮ್ಮಮ್ಮ, ಕೆಂಪು ಕಣ್ಣು ಮಾಡಿ ಗದರಿದರು “ಛೀ, ಅದೆಂತಕೆ ಹಿಡಿದಿದ್ದೀಯಾ? ಬಿಡು, ಪಾಪದ್ದು".
ಜತೆಗೆ “ಅದರ ಮೂತ್ರ ಕಣ್ಣಿಗೆ ತಾಗಿದರೆ, ಅಪಾಯ; ಮೈ ಕೈಗೆ ತಾಗಿದರೆ ನವೆ, ತುರಿಕೆ, ಅಲರ್ಜಿ ಆಗಬಹುದು" ಎಂದು ಹೆದರಿಸಿದರು. ಅಮ್ಮಮ್ಮ ಗದರಿದ ತಕ್ಷಣ ಕೈ ಬಿಟ್ಟೆ. ಬದುಕಿದೆಯಾ ಬಡ ಜೀವವೇ ಎಂದುಕೊಳ್ಳುತ್ತಾ, ಆ ಕಪ್ಪೆಯು ಇನ್ನೊಂದಿಷ್ಟು ಉಚ್ಚೆ ಹಾರಿಸುತ್ತಾ, ಕುಪ್ಪಳಿಸುತ್ತಾ ಗಿಡಗಳ ಕಡೆಗೆ ಸಂತಸದಿಂದ ಓಡಿತು.
ಈ ರೀತಿ ಬರಿಗೈಯಲ್ಲಿ ಕಪ್ಪೆ ಹಿಡಿಯಲು ನನಗೆ ಸ್ಪೂರ್ತಿ, ನಮ್ಮ ಕಾಲೇಜಿನಲ್ಲಿದ್ದ ಜೀವಶಾಸ್ತ್ರ ಉಪನ್ಯಾಸಕರಾದ ದೇವೇಗೌಡರು. ಜೀವ ವಿಜ್ಞಾನದ ಮಾಹಿತಿ ಪಡೆಯಲು, ಕಪ್ಪೆಗಳನ್ನು ಕೊಯ್ದು, ಅವುಗಳ ಅಂಗಾಂಗಗಳನ್ನು ನಾವು ಪಿಯುಸಿ ವಿದ್ಯಾರ್ಥಿಗಳು ಗುರುತಿಸಬೇಕಿತ್ತು. ಆಗಿನ ದಿನಗಳಲ್ಲಿ ಪಿಯುಸಿ ತರಗತಿಗಳ ಪಠ್ಯಕ್ರಮದಲ್ಲಿ ಇದು ಪ್ರಮುಖ ಚಟುವಟಿಕೆ; ‘ಕಪ್ಪೆಯ ಡಿಸೆಕ್ಷನ್ ತರಗತಿ ಇದೆ’ ಎಂದು ಒಂದು ವಾರಕ್ಕೂ ಮೊದಲೇ ಮಕ್ಕಳಿಗೆ ತಿಳಿಸುತ್ತಿದ್ದರು.
ಈ ಡಿಸೆಕ್ಷನ್ ಪಾಠ ಮಾಡಿಸುವುದೆಂದರೆ, ಉಪನ್ಯಾಸಕರಿಗೆ ಮತ್ತು ಶಿಕ್ಷಣ ಸಂಸ್ಥೆಗೂ ಸಾಕಷ್ಟು ದೊಡ್ಡ ಕೆಲಸವೇ. ಇದಕ್ಕೆ ತಯಾರಿಯಾಗಿ, ಒಂದು ದೊಡ್ಡ ಮರದ ಪೆಟ್ಟಿಗೆಯಲ್ಲಿ ಐವತ್ತಕ್ಕೂ ಹೆಚ್ಚು ಕಪ್ಪೆಗಳನ್ನು ಅದಾವುದೋ ಊರಿನಿಂದ ತರಿಸಿ, ಲ್ಯಾಬ್‌ನಲ್ಲಿ ಇರಿಸಿದ್ದರು. ನಮ್ಮ ಶಾಲೆಯ ಸುತ್ತಮುತ್ತ ಕಾಡುಪ್ರದೇಶ, ತುಸು ದೂರದಲ್ಲಿ ಗದ್ದೆಗಳಿದ್ದರೂ, ಅಲ್ಲೆಲ್ಲಾ ಸಾಕಷ್ಟು ಕಪ್ಪೆ ಗಳಿದ್ದರೂ, ಶಾಲೆಯ ಅಗತ್ಯಕ್ಕೆ ತಕ್ಕಷ್ಟು ಕಪ್ಪೆಗಳನ್ನು ಸಮಯಕ್ಕೆ ಸರಿಯಾಗಿ ಹಿಡಿದು ಕೊಡು ವವರು ಬೇಕಲ್ಲ. ಆದ್ದರಿಂದಲೇ, ದೂರದ ಪಟ್ಟಣದಿಂದ, ಹಲವು ಕಪ್ಪೆಗಳನ್ನು ತರಿಸುತ್ತಿದ್ದರು!
50 ರಿಂದ 100 ಸಂಖ್ಯೆಯಲ್ಲಿ ಅವುಗಳನ್ನು ಸಂಗ್ರಹಿಸಿಡುವುದು ಉದ್ದನೆಯ ಮರದ ಪೆಟ್ಟಿಗೆ ಯಲ್ಲಿ.ಆ ದೊಡ್ಡ ಮರದ ಪೆಟ್ಟಿಗೆಯನ್ನು ತೆರೆದಾಗ, ಒಮ್ಮೊಮ್ಮೆ ಒಂದೆರಡು ಕಪ್ಪೆಗಳು ಕುಪ್ಪಳಿಸಿ ಹೊರಗೆ ನೆಗೆಯುವುದಿತ್ತು. ಆಗ, ನಮ್ಮ ಉಪನ್ಯಾಸಕರಾದ ದೇವೇಗೌಡರು ಛಕ್ಕೆಂದು ಅವುಗಳ ಸೊಂಟದ ಭಾಗ ಹಿಡಿದು, ಪುನಃ ಮರದ ಪೆಟ್ಟಿಗೆಗೆ ತುಂಬುತ್ತಿದ್ದರು.
ಅವರು ಬರಿಗೈಯಲ್ಲಿ ಕಪ್ಪೆಗಳನ್ನು ಹಿಡಿದದ್ದನ್ನು ಮೊದಲ ಬಾರಿ ಕಂಡಾಗ, ನನಗಂತೂ ತುಂಬಾ ಅಚ್ಚರಿ, ವಿಸ್ಮಯ! ಅವರು ಮಾಡಿದ ಆ ಕೆಲಸವೇ, ನನ್ನ ಕಪ್ಪೆ ಹಿಡಿಯುವ ಸಾಹಸಕ್ಕೆ ಸ್ಪೂರ್ತಿ!ನಮ್ಮ ತರಗತಿಯಲ್ಲಿ ಕಪ್ಪೆ ಡಿಸೆಕ್ಷನ್‌ಗೆ ಒಂದು ದಿನ ನಿಗದಿಯಾಗುತ್ತಿತ್ತು. ಆ ದಿನ ನಮ್ಮ ಕಾಲೇಜಿನ ಪ್ರಿನ್ಸಿಪಾಲರಾದ ಪಿ.ಎಸ್.ಕಾರಂತರಿಂದ ನಮಗೆ ವಿಶೇಷ ಮಾರ್ಗದರ್ಶನ. ಅವರ ಮಾತುಗಳನ್ನು, ಪಾಠಗಳನ್ನು ಕೇಳುವುದೆಂದರೆ ಒಂದು ವಿಶೇಷ ಅನುಭವ.
ಸರಳವಾಗಿ, ವಿದ್ಯಾರ್ಥಿಗಳ ಮನಮುಟ್ಟುವಂತೆ ವಿಜ್ಞಾನದ ವಿಷಯಗಳನ್ನು ವಿವರಿಸುವ ಕಲೆ ಅವರಿಗೆ ಕರಗತವಾಗಿತ್ತು. ಕಪ್ಪೆಗಳನ್ನು ಹಿಡಿದು, ಅವುಗಳಿಗೆ ಮತ್ತು ಬರಿಸಿ, ಅವುಗಳ ಕಾಲಿಗೆ ಪುಟ್ಟ ಮೊಳೆ ಬಡಿದು ಒಂದು ಪುಟ್ಟ ಮರದ ಹಲಗೆಗೆ ಜೋಡಿಸಿ, ಹರಿತವಾದ ಸ್ಟೀಲ್ ಉಪಕರಣಗಳಿಂದ ಅವುಗಳ ಹೊಟ್ಟೆ ಬಗೆದು, ಒಳಗಿರುವ ಒಂದೊಂದೇ ಅಂಗಾಂಗಗಳನ್ನು ಉಪನ್ಯಾಸಕರು ವಿವರಿಸು ತ್ತಿದ್ದರು. ಅದಾದ ನಂತರ, ಪ್ರತಿ ವಿದ್ಯಾರ್ಥಿಯೂ ಒಂದೊಂದು ಕಪ್ಪೆಯನ್ನು ಕೊಯ್ಯಬೇಕಿತ್ತು!
ಇದಕ್ಕಾಗಿ, ಎಲ್ಲರೂ ಡಿಸೆಕ್ಷನ್ ಬಾಕ್ಸ್ ಖರೀದಿಸಬೇಕು ಎಂಬ ನಿಯಮ! ಹರಿತವಾದ ಪುಟಾಣಿ ಕತ್ತರಿಗಳು, ಚಾಕುಗಳು ಮತ್ತಿತರ ಸ್ಟೀಲ್ ಪರಿಕರಿಗಳಿದ್ದ ಡಿಸೆಕ್ಷನ್ ಬಾಕ್ಸ್ ಹಿಡಿದೆವು ಎಂದರೆ, ನಾವು ಮುಂದೆ ವೈದ್ಯರಾಗಲು ತಯಾರಿ ಮಾಡುತ್ತಿದ್ದೇವೆ ಎಂದೇ ಅರ್ಥ.
ಆದರೆ, ನಾವು ಗ್ರಾಮೀಣ ವಿದ್ಯಾರ್ಥಿಗಳು, ಹೆಚ್ಚಿನವರು ಕೆಳ ಮಧ್ಯಮವರ್ಗದವರು. ಆಗಿನ ಕಾಲಕ್ಕೆ ಆ ಡಿಸೆಕ್ಷನ್ ಬಾಕ್ಸ್ ಖರೀದಿ ಎಂದರೆ ನಮಗೆ ಬಲು ದುಬಾರಿ ಎನಿಸುತ್ತಿತ್ತು. ಆ ದಿನಗಳಲ್ಲಿ ಒಂದು ಬಾಕ್ಸ್‌ಗೆ ಸುಮಾರು 60 ರುಪಾಯಿ ಬೆಲೆ ಇತ್ತು ಎಂಬ ನೆನಪು. ಅದನ್ನು ಖರೀದಿಸಲು ಹಣವನ್ನು ಹೊಂದಿಸುವುದು ಹೇಗೆ ಎಂದು ಯೋಚಿಸುತ್ತಿದ್ದಾಗ, ನನ್ನ ತೊಳಲಾಟ ಕಂಡು ಕನಿಕರಗೊಂಡ ನನ್ನ ಒಬ್ಬ ಸಹಪಾಠಿಯು, “ನನ್ನ ಬಳಿ ಈ ರೀತಿಯ ಎರಡು ಬಾಕ್ಸ್‌ಗಳಿವೆ; ಒಂದು ನನಗೆ, ಇನ್ನೊಂದು ಸಹ ಚೆನ್ನಾಗಿದೆ. ನನ್ನ ಅಣ್ಣನು ಪಿಯುಸಿ ಓದುತ್ತಿದ್ದ ಕಾಲದಲ್ಲಿ ಖರೀದಿಸಿದ್ದು, ಅದು ಬೇಕಾ?" ಎಂದು ವಿಚಾರಿಸಿದ.
ಹೌದು ಎಂದೆ. ಆತ ಅದನ್ನು ತಂದುಕೊಟ್ಟ. ಪರೀಕ್ಷೆ ಮುಗಿದ ನಂತರ ವಾಪಸ್ ಕೊಡುವುದು ಎಂಬ ಒಪ್ಪಂದದೊಂದಿಗೆ. ಅಂತೂ, ಫಳಫಳ ಹೊಳೆಯುವ ಸ್ಟೀಲ್‌ನ ಪರಿಕರ, ಚಾಕು, ಚೂರಿ, ಕತ್ತರಿ, ದಬ್ಬಳಗಳಿದ್ದ ಡಿಸೆಕ್ಷನ್ ಬಾಕ್ಸ್ ನನ್ನ ಕೈಸೇರಿತು. ಆದರೆ, ನನಗೋ, ಆ ಅಮಾಯಕ ಕಪ್ಪೆ ಗಳನ್ನು ಕತ್ತರಿಸುವುದು ಎಂದರೆ ಬಹಳ ರೇಜಿಗೆ, ಹಿಂಸೆ.
ಆದರೇನು ಮಾಡುವುದು, ಅದು ನಮ್ಮ ಫೈನಲ್ ಪರೀಕ್ಷೆಗೆ ಅಂಕಗಳನ್ನು ನಿರ್ಧರಿಸುವ ಪ್ರಮುಖ ಪ್ರಶ್ನೆ, ಚಟುವಟಿಕೆ! ನಾವೆಲ್ಲಾ ಮುಂದೆ ಡಾಕ್ಟರಾಗುವುದಾದರೆ, ನಮಗೆಲ್ಲಾ ಈಗಿನಿಂದಲೇ ಈ ಮೂಲಕ ತರಬೇತಿ ಸಿಗುತ್ತಿದೆ ಎಂದು, ಡಿಸೆಕ್ಷನ್ ಮೊದಲ ದಿನ, ಪ್ರವೇಶಿಕೆಯ ರೂಪದಲ್ಲಿ ಮಾತ ನಾಡಿದ್ದ, ಪ್ರಾಂಶುಪಾಲರಾದ ಪಿ.ಎಸ್.ಕಾರಂತರು ಒತ್ತಿಹೇಳಿದ್ದರು.
ಪ್ರಾಣಿಶಾಸ್ತ್ರ ಕಲಿಯುವ ಪೀಠಿಕೆಯ ರೂಪದಲ್ಲಿ, ಕಪ್ಪೆಯ ದೇಹದ ಒಳಗಿನ ವಿವಿಧ ಭಾಗಗಳನ್ನು ನಾವೇ ಕತ್ತರಿಸಿ ನೋಡುವುದರ ಮೂಲಕ, ಜ್ಞಾನವನ್ನು ಪಡೆಯಬೇಕು ಎಂಬುದು ಆ ಸಿಲೆಬಸ್‌ನ ಉದ್ದೇಶ. ಆದರೆ, ನಮ್ಮ ತರಗತಿಯವರೆಲ್ಲರೂ ಮುಂದೆ ಡಾಕ್ಟರಾಗುವುದು ನಿಜವೇ? ಖಂಡಿತಾ ಇಲ್ಲ!
ಪಕ್ಕಾ ಗ್ರಾಮೀಣ ಪ್ರದೇಶದ ನಾವು, ಪಿಯುಸಿ ಮುಗಿದ ನಂತರ ವೈದ್ಯರಾಗುವ ಕನಸನ್ನು ಕಂಡಿ ರಲಿಲ್ಲ. ಆದರೆ ಪ್ರಾಂಶುಪಾಲರು ಹೇಳಿದ ನಂತರ, ಪಠ್ಯಕ್ರಮದಲ್ಲಿ ಸೇರ್ಪಡೆಗೊಂಡ ನಂತರ, ‘ಡಿಸೆಕ್ಷನ್’ ಮಾಡದೇ ಇರಲು ಸಾಧ್ಯವೆ? ಅಂತೂ ಹಿಂಜರಿಕೆಯಿಂದಲೇ ಕಪ್ಪೆ ಕೊಯ್ದೆ. ಉಪನ್ಯಾಸಕ ರಾದ ದೇವೇಗೌಡರು, ಆ ದಿನ ಲ್ಯಾಬ್‌ನಲ್ಲಿ ಹತ್ತಾರು ಡಿಸೆಕ್ಷನ್‌ಗಳಿಗೆ ಮಾರ್ಗದರ್ಶನ ನೀಡಿದರು.
ಅರಿವಳಿಕೆ ನೀಡಿದ ಕಪ್ಪೆಯನ್ನು ಅಂಗಾತನೆ ಮಲಗಿಸಿ, ಚರ್ಮ ಕತ್ತರಿಸಿ, ಅವುಗಳ ದೇಹದೊಳಗಿನ ಹೃದಯವನ್ನು, ಅದು ಡವಗುಟ್ಟುವುದನ್ನು, ಇತರ ಅಂಗಗಳನ್ನು ನೋಡು ವುದು, ಅದರ ವಿವರಗಳನ್ನು ಉಪನ್ಯಾಸಕರಿಂದ ಕೇಳುವುದು. ಈ ರೀತಿ ಡಿಸೆಕ್ಷನ್ ಕ್ಲಾಸ್ ಹಲವು ದಿನ ನಡೆಯಿತು. ಪರೀಕ್ಷೆಯಲ್ಲೂ ಆ ಕುರಿತಾದ ನಿಗದಿತ, ಅಂಕ ಗಳಿಸಿದೆ. ಆದರೆ, ಅಂಥ ಒಂದು ಪ್ರಮುಖ ಪ್ರಯೋಗ ಚಟುವಟಿಕೆಯಿಂದ, ಮುಂದೆ ನನಗೆ ಯಾವ ಉಪಯೋಗವೂ ಆಗಲಿಲ್ಲ, ನಾನು ಡಾಕ್ಟರ್ ಆಗಲಿಲ್ಲ.
ಈಗಿನ ಪಠ್ಯಕ್ರಮದಲ್ಲಿ, ಪಿಯುಸಿ ತರಗತಿಗಳಲ್ಲಿ ಕಪ್ಪೆ ಕೊಯ್ಯುವ ಚಟುವಟಿಕೆ ಇಲ್ಲವಂತೆ! ಇಂಥ ಚಟುವಟಿಕೆಯು ಪರಿಸರಕ್ಕೆ ಹಾನಿಕರ ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ಎಂದು ನಿರ್ಧರಿಸಿದ ಸಂಬಂಧಪಟ್ಟ ಇಲಾಖೆಯು, 2014ರಿಂದ ವಿದ್ಯಾರ್ಥಿಗಳು ಕಪ್ಪೆ ಕೊಯ್ಯುವ ಚಟುವಟಿಕೆಯನ್ನು ನಿಷೇಧಿಸಿದೆ.
ಜತೆಗೆ, ಇಂಟರ್ನೆಟ್ ಮತ್ತು ಕಂಪ್ಯೂಟರ್‌ಗಳು ಲಭ್ಯವಿರುವ ಈ ಕಾಲದಲ್ಲಿ, ಇತರ ಹಲವು ಮಾರ್ಗಗಳಿಂದ ಪ್ರಾಣಿಗಳ ದೇಹದೊಳಗಿನ ವಿವರಗಳನ್ನು, ಭಾವಿ ಡಾಕ್ಟರುಗಳು ಪಡೆದುಕೊಳ್ಳ ಬಹುದಲ್ಲವೆ!
ಪಿಯುಸಿ ವಿದ್ಯಾರ್ಥಿಯಾಗಿದ್ದಾಗ ನಾನು ಹೊಳೆ ಯುವ ಚಾಕು, ಕತ್ತರಿಗಳನ್ನು ಹಿಡಿದು, ಕಪ್ಪೆ ಯನ್ನು ಕತ್ತರಿಸಿದ್ದು, ಅದರ ದೇಹದೊಳಗಿನ ಅಂಗಾಂಗಗಳನ್ನು ಅಧ್ಯಯನ ಮಾಡಿದ್ದು, ಅದಕ್ಕಾಗಿ ಸಾಕಷ್ಟು ಶ್ರಮ ಪಟ್ಟಿದ್ದು, ಇವೆಲ್ಲವನ್ನೂ ಈಗ ನೆನಪಿಸಿಕೊಂಡರೆ, ಬೆರಗು ಹುಟ್ಟುತ್ತದೆ, ಸಣ್ಣಗೆ ನಗು ಸಹ ಬರುತ್ತದೆ!