ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayak V Bhat Column: ಕಾಲಚಕ್ರದೊಳಗೊಂದು ಭರವಸೆಯ ಕಾಲ: ಯುಗಾದಿ

ಯುಗಾದಿ ಹಬ್ಬ ಬಂತೆಂದರೆ ನಮಗೆ ಮೊದಲು ನೆನಪಾಗುವುದು ಬೇಂದ್ರೆ ಅಜ್ಜನ ಈ ಹಾಡು! ಇದರೊ ಳಗೆ ಅಡಗಿರುವ ಗಹನಾರ್ಥ ತಿಳಿಯದಿದ್ದರೂ, ಇದು ಯುಗಾದಿಯ ಹಾಡಾಗಿ ಕನ್ನಡಿಗರ ಮನಸ್ಸಿನಲ್ಲಿ ನೆಲೆಯೂರಿದೆ. 12 ಮಾಸಗಳ ಪುಂಜವಾದ ಕಾಲಗತಿಯು, ಒಂದು ಸಂವತ್ಸರದಿಂದ ಇನ್ನೊಂದಕ್ಕೆ ಪದಾರ್ಪಣೆ ಮಾಡುವ ಹೊಸ ಕಾಲಘಟ್ಟವನ್ನು ಭಾರತೀಯರು ‘ಯುಗಾದಿ’ ಎಂದು ಆಚರಿಸುತ್ತಾರೆ.

ಕಾಲಚಕ್ರದೊಳಗೊಂದು ಭರವಸೆಯ ಕಾಲ: ಯುಗಾದಿ

ಅಂಕಣಕಾರ ವಿನಾಯಕ ವೆಂ ಭಟ್ಟ, ಅಂಬ್ಲಿಹೊಂಡ

Profile Ashok Nayak Mar 30, 2025 10:08 AM

ವಿದ್ಯಮಾನ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ... ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯ ತರುತಿದೆ..... ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆಯು ಅಖಿಲ ಜೀವ ಜಾತಕೆ, ಒಂದೇ ಒಂದು ಜನ್ಮದಲ್ಲಿ ಒಂದೇ ಬಾಲ್ಯ, ಒಂದೇ ಹರೆಯ ನಮಗತಷ್ಟೇ ಏತಕೋ" ಎಂಬುದು ವರಕವಿ ಬೇಂದ್ರೆಯವರ ವಾಣಿ. ಇಲ್ಲಿ ಭರವಸೆಯೂ ಇದೆ, ಬೇಸರವೂ ಇದೆ. ಅಂದರೆ, “ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ" ಎಂಬ ಸಾಲಲ್ಲಿ ‘ಭರವಸೆ’ ಇದ್ದರೆ, ಸಕಲ ಜೀವಜಾತಕೆ ವರುಷಕೊಂದು ಹೊಸತು ಜನ್ಮ ಹರುಷಕೊಂದು ಹೊಸತು ನೆಲೆ ಯನ್ನು ತಂದುಕೊಡುವ ಈ ಯುಗಾದಿಯ ಸಕಾರಾತ್ಮಕತೆಯು ಮಾನವರಾದ ನಮ್ಮನ್ನಷ್ಟೇ ಮರೆತಿದೆ ಎಂಬ ಗ್ರಹಿಕೆಯಲ್ಲಿ ‘ಬೇಸರ’ ಇದೆ.

ಯುಗಾದಿ ಹಬ್ಬ ಬಂತೆಂದರೆ ನಮಗೆ ಮೊದಲು ನೆನಪಾಗುವುದು ಬೇಂದ್ರೆ ಅಜ್ಜನ ಈ ಹಾಡು! ಇದರೊಳಗೆ ಅಡಗಿರುವ ಗಹನಾರ್ಥ ತಿಳಿಯದಿದ್ದರೂ, ಇದು ಯುಗಾದಿಯ ಹಾಡಾಗಿ ಕನ್ನಡಿಗರ ಮನಸ್ಸಿನಲ್ಲಿ ನೆಲೆಯೂರಿದೆ. 12 ಮಾಸಗಳ ಪುಂಜವಾದ ಕಾಲಗತಿಯು, ಒಂದು ಸಂವತ್ಸರದಿಂದ ಇನ್ನೊಂದಕ್ಕೆ ಪದಾರ್ಪಣೆ ಮಾಡುವ ಹೊಸ ಕಾಲಘಟ್ಟವನ್ನು ಭಾರತೀಯರು ‘ಯುಗಾದಿ’ ಎಂದು ಆಚರಿಸುತ್ತಾರೆ.

ಇದನ್ನೂ ಓದಿ: Vinayaka M Bhatta Column: ಸುಭಾಷಿತ: ಮರೆಯಾಗುತ್ತಿರುವ ಸಾರಭೂತ ಸಾಹಿತ್ಯ

ಹಾಗೆ ನೋಡಿದರೆ ಇದು ವರ್ಷಾದಿ; ಒಂದು ಯುಗಕ್ಕೆ ಬೇರೆಯದೇ ಕಾಲಮಾನವನ್ನು ಋಷಿಗಳು ನಿರ್ಧಾರ ಮಾಡಿದ್ದಾರೆ (ನಾಲ್ಕೂ ಯುಗಗಳು ಸೇರಿ 43 ಲಕ್ಷದ 20 ಸಾವಿರ ವರ್ಷಗಳು). ನಿರಂತರ ವಾಗಿ ಪ್ರವಹಿಸುವ ಕಾಲಪ್ರವಾಹದಲ್ಲಿ ನಿಲ್ದಾಣಗಳಿಲ್ಲ, ನೈರಂತರ್ಯವೇ ಕಾಲದ ಮೂಲಸ್ವಭಾವ. ಹೀಗೆ ನಿರಂತರವಾಗಿ ಪ್ರವಹಿಸುವ ಕಾಲದ (ಸಮಯದ) ಪ್ರಯಾಣದಲ್ಲಿ ಸ್ವಲ್ಪಕಾಲದ ಪಯಣಿಗ ರಾದ ನಾವು, ಹೀಗೆ ಹರಿಯುವ ಕಾಲವನ್ನು ವಿಭಾಗಿಸಿ ನೋಡುವ ವ್ಯವಸ್ಥೆಯನ್ನು ನಮ್ಮ ಅನು ಕೂಲಕ್ಕಾಗಿ ಮಾಡಿಕೊಂಡಿದ್ದೇವೆ.

2 ಪಕ್ಷಗಳು ಸೇರಿದರೆ ಮಾಸ ಅಥವಾ ತಿಂಗಳು ಎಂದೂ, ಅಂಥ 12 ಮಾಸಗಳ ಮೊತ್ತವನ್ನು 1 ಸಂವತ್ಸರವೆಂದೂ ಮತ್ತು ಇಂಥ 60 ಸಂವತ್ಸರಗಳನ್ನು 1 ಚಕ್ರವೆಂದೂ ಪರಿಮಿತಿಗೊಳಿಸಿ ಕೊಂಡಿದ್ದೇವೆ. ಮತ್ತೆ ‘ಪ್ರಭವ’ದಿಂದ ಆರಂಭವಾಗುತ್ತದೆಯೇ ವಿನಾ, ಅಲ್ಲಿಗೇ ಅದು ನಿಲ್ಲುವುದಿಲ್ಲ. ಅಂಥ ಒಂದು ಕಾಲಾಂತರದ ಪರ್ವವೇ ಯುಗಾದಿ.

vinayaka Bhatta 30325

“ದೇವರ್ಕಳುದಿಸಿ ಮರೆಯಹರು; ದೇವತ್ವ ಚಿರ | ಜಾವ ದಿನ ಬಂದು ಪೋಗುವುವು; ಕಾಲ ಚಿರ || ಜೀವದ ವ್ಯಕ್ತಿ ಸಾಯ್ವುದು; ಜೀವಸತ್ವ ಚಿರ | ಭಾವಿಸಾ ಕೇವಲವ ಮಂಕುತಿಮ್ಮ" ಎಂದಿದ್ದಾರೆ ಡಿವಿಜಿ. ಕಾಲದ ನೈರಂತರ್ಯದಲ್ಲಿ ದೇವರುಗಳು ರಾಮ-ಕೃಷ್ಣರಾಗಿ ಅವತರಿಸಿ ಮರೆಯಾಗಿದ್ದರೂ ಅವರ ದೇವಸತ್ವ ಸದಾ ಇದೆ. ಅವ್ಯಾಹತ ಕಾಲಪ್ರವಾಹದಲ್ಲಿ ಜಾವ, ದಿನ, ವಾರಗಳು ಬಂದು ಹೋಗುತ್ತವೆ; ಆದರೆ ಕಾಲ ಮಾತ್ರ ಸಾಗುತ್ತಲೇ ಇರುತ್ತದೆ.

ಅದು ನಿರಂತರ ಹರಿಯುವ ಪ್ರವಾಹ. ನಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ಜಾವ, ದಿನ, ವಾರ, ಪಕ್ಷ, ವರ್ಷವೆಂದು ಒಂದೊಂದು ಕಾಲಮಾನಕ್ಕೆ ಹೆಸರಿಟ್ಟುಕೊಂಡಿದ್ದೇವೆ. ‘ಭಾನೂದಯಾಸ್ತ ಗಳಿನಲ್ತೆ ದಿಕ್ಕಾಲಗಳ ಮಾನಗಣಿತವು ನಮಗೆ?’- ಸೂರ್ಯನ ಉದಯ ಮತ್ತು ಮುಳುಗುವಿಕೆಯಿಂದ ದಿಕ್ಕುಗಳ ಅಳತೆ ಮತ್ತು ಕಾಲದ ಲೆಕ್ಕಾಚಾರವನ್ನು ನಾವು ಮಾಡುತ್ತೇವೆ ಎಂದು ಕಗ್ಗದ ಕವಿಯೂ ಹೇಳುತ್ತಾನೆ.

ಕಾಲ ಎಂದರೇನು, ಅದರ ವ್ಯಾಪ್ತಿ-ವಿಸ್ತಾರವೇನು? ಕಾಲವನ್ನು ಅಳೆವ ಮಾನ ಯಾವುದು? ಮುಂತಾದ ಪ್ರಶ್ನೆಗಳು ಯುಗಾಂತರಗಳಿಂದ ತತ್ವಜ್ಞಾನಿಗಳನ್ನೂ ಕಾಡುತ್ತಿವೆ. ಭೌತಿಕ ವಸ್ತುಗಳ ಚಲನೆಯಲ್ಲಿ ನಾವು ಕಾಲವನ್ನು ಅಳೆಯುತ್ತೇವೆ. ಸೂರ್ಯನನ್ನು ಸುತ್ತಲು ಭೂಮಿ ತೆಗೆದು ಕೊಳ್ಳುವ ಕಾಲವನ್ನು ‘ಒಂದು ವರ್ಷ’ ಎನ್ನುತ್ತೇವೆ. ಚಂದ್ರನು ಭೂಮಿಯನ್ನು ಸುತ್ತಲು ತೆಗೆದು ಕೊಳ್ಳುವ ಕಾಲವನ್ನು ‘ಒಂದು ತಿಂಗಳು’ ಎನ್ನುತ್ತೇವೆ, ಭೂಮಿಯು ತನ್ನದೇ ಕಕ್ಷೆಯಲ್ಲಿ ಸುತ್ತಲು ತೆಗೆದುಕೊಳ್ಳುವ ಸಮಯವನ್ನು ‘ಒಂದು ದಿನ’ ಎನ್ನುತ್ತೇವೆ.

ನಮ್ಮ ದಿನಗಳನ್ನು ಗಂಟೆ, ನಿಮಿಷ, ಸೆಕೆಂಡುಗಳಾಗಿ ವಿಭಾಗಿಸಲು ಇತರ ಭೌತಿಕ ವಸ್ತುಗಳ ಚಲನೆ ಯನ್ನು ಗಮನಿಸುತ್ತೇವೆ. ಹಾಗೆ ನೋಡಿದರೆ ಕಾಲವೊಂದಲ್ಲ, ಎಲ್ಲವೂ ಚಕ್ರಗಳೇ. ಜೀವನ್ಮರಣ, ಸುಖ-ದುಃಖ ಎಲ್ಲವೂ ಚಕ್ರೀಕೃತವಾಗಿಯೇ ಸಂಚರಿಸುತ್ತವೆ. ಕಾಲಚಕ್ರವು ಭೌತಿಕ ಲೋಕದ ಚಕ್ರೀಯ ಚಲನೆಯನ್ನು ಸೂಚಿಸುತ್ತದೆ. ಇನ್ನು ಕಾಲ ಎನ್ನುವುದು ದೇವೋತ್ತಮ ಪರಮಪುರುಷನ ಹೆಸರಾಗಿಯೂ ಬಳಕೆಯಲ್ಲಿದೆ.

ಲಯಕರ್ತನಾದ ಶಿವನನ್ನು ಮಹಾಕಾಲ, ಕಾಲಭೈರವ ಮುಂತಾಗಿ ‘ಕಾಲ’ (ನಾಮಪದ) ಎಂದು ಕರೆಯುವುದೂ ಇದೆ. ಒಂದು ಅಣುವಿನಿಂದ ಸಂಪೂರ್ಣ ಬ್ರಹ್ಮಾಂಡದವರೆಗೆ ಪ್ರತಿಯೊಂದು ಭೌತಿಕ ವಸ್ತುವಿಗೂ, ಅನುಸರಿಸಲೇಬೇಕಾದ ಒಂದು ನಿರ್ದಿಷ್ಟ ಕಾಲ-ಚಕ್ರವಿದೆ. ಹೀಗೆ ಚಕ್ರೋಪಾದಿ ಯಲ್ಲಿ ಎಲ್ಲವೂ ತಿರುಗುವುದರಿಂದ, ಎಲ್ಲವೂ ಪುನರಾವರ್ತಿಸಿದಂತೆ ನಮಗೆ ಕಾಣುತ್ತದೆ. ಇದು ಒಂಥರಾ ‘ಟ್ರೆಡ್ ಮಿಲ್’ ಮೇಲೆ ಓಡಿದಂತೆ; ನಾವು ಬೆವರಿಳಿಸಿಕೊಂಡು ಓಡುತ್ತಿರುವುದು ನಿಜವಾ ದರೂ, ಎಲ್ಲಿಗೂ ತಲುಪದಿರುವ ಹಾಗೆ, ನಾವು ಓಡುವ ರಸ್ತೆ ಮಾತ್ರವೇ ಓಡುತ್ತಿರುವ ಹಾಗೆ.

ಆದ್ದರಿಂದ, ಕಾಲ-ಚಕ್ರವು ವಸ್ತುಗಳ ಚಲನೆಗೆ ಮಾತ್ರವಲ್ಲ, ಅದರ ಒಟ್ಟಾರೆ ಅವಧಿಗೂ, ಅದರ ಆಯಸ್ಸಿಗೂ ಸಂಬಂಽಸಿದೆ. ಭೂಮಿ, ಸೂರ್ಯ, ಚಂದ್ರ, ನಕ್ಷತ್ರಗಳು, ಗ್ರಹಗಳು, ನಮ್ಮ ದೇಹಗಳು ಮುಂತಾದವು ಕಾಲಕ್ರಮೇಣ ಕಣ್ಮರೆಯಾಗುತ್ತವೆ ಮತ್ತು ಅವುಗಳ ನಿರ್ದಿಷ್ಟ ಅವಧಿಗಳೆಲ್ಲ ಕಾಲ ಚಕ್ರಗಳು. ಆದರೂ ನಮ್ಮೆಲ್ಲ ವಿಶ್ಲೇಷಣೆ ಮತ್ತು ಅಳತೆಗಳು ಕಾಲವನ್ನು ಕುರಿತ ಗೊಂದಲವನ್ನು ಕಡಿಮೆ ಮಾಡುವುದಿಲ್ಲ.

ಮಾನವ ನಿರ್ಮಿತ ಅಥವಾ ನಿರ್ಣೀತ ಸಮಯ ಮಾನಕಗಳೇ ಕಾಲವಲ್ಲ; ಕಾಲಕ್ಕೆ ಆದಿ-ಅಂತ್ಯ ಗಳಿಲ್ಲದಿರುವುದರಿಂದ ಅದನ್ನು ಅಳತೆ ಮಾಡಲಾಗದು. ಕಾಲವನ್ನು ನಾವು ನೇರವಾಗಿ ನೋಡು ವುದು ಸಾಧ್ಯವಿಲ್ಲವಾದರೂ ವೈದಿಕ ಸಾಹಿತ್ಯದ ನೆರವಿನಿಂದ ಕಾಲದ ಪ್ರಭಾವಗಳನ್ನು ವೀಕ್ಷಿಸುವ ಮೂಲಕ ಹೆಚ್ಚು ಅರಿಯಬಹುದು.

ಕಾಲದಒಟ್ಟಾರೆ ಪರಿಣಾಮವನ್ನು ‘ನಾಶ’ ಎಂದು ಕರೆಯುವುದಿದೆ-‘ಕಾಲೋ ಜಗದ್ಭಕ್ಷಕಃ’ ಎನ್ನು ತ್ತಾರಲ್ಲ ಹಾಗೆ. ಮನುಷ್ಯನ ಹುಟ್ಟಿನಿಂದ ಸಾವಿನವರೆಗೆ ಅವನ ಕಾಲವೆಂದು ಕರೆಯುವ ಹಾಗೂ ಇಲ್ಲ. ಪುನರ್ಜನ್ಮದಲ್ಲಿ ನಂಬಿಕೆಯಿಟ್ಟುಕೊಂಡಿರುವ ಸನಾತನಿಗಳಾದ ನಮಗೆ ಸಾವು ಎನ್ನುವುದೂ ಅಂತ್ಯವಲ್ಲ, ಅದು ಮತ್ತೊಂದು ಜೀವನದ ಆರಂಭ ಮಾತ್ರ.

ಪ್ರತಿಯೊಂದು ಕಾಲಚಕ್ರದೊಳಗೆ ಕೇವಲ ನಾಶಗುಣ ಮಾತ್ರವಲ್ಲದೆ, ಸೃಷ್ಟಿ-ಸ್ಥಿತಿ-ಲಯಗಳೆಲ್ಲವೂ ಇರುತ್ತವೆ. ಕಾಲದ ಪ್ರಭಾವದಲ್ಲಿ ಪ್ರತಿಯೊಂದಕ್ಕೂ ಸೃಷ್ಟಿಯ, ನಿರ್ವಹಣೆಯ ಮತ್ತು ವಿನಾಶದ ನಿರ್ದಿಷ್ಟ ಕಾರ್ಯಕ್ರಮವಿದೆ. ಶ್ರೀಮದ್ಭಾಗವತದ ಪ್ರಕಾರ, ಸ್ವತಃ ವಿಶ್ವವು ನಿರ್ದಿಷ್ಟ ಕಾಲದಲ್ಲಿ ಸೃಷ್ಟಿಯಾಯಿತು. 310 ಲಕ್ಷ ಕೋಟಿ ಸೌರವರ್ಷಗಳಿಗೆ ಸಮನಾದಷ್ಟು ಕಾಲವಿರುತ್ತದೆ ಮತ್ತು ನಂತರ ವಿನಾಶ ಹೊಂದುತ್ತದೆ. ನಂತರ ಕಾಲವು ಪುನರ್‌ಸೃಷ್ಟಿಯನ್ನು ತರುತ್ತದೆ ಮತ್ತು ಚಕ್ರವು ಪುನರಾರಂಭಗೊಳ್ಳುತ್ತದೆ.

ಹೀಗೆ, ಒಟ್ಟಾರೆ ಪರಿಣಾಮವು ವಿನಾಶವಾದರೂ, ಭೌತಿಕ ಲೋಕವು ಮರುಸೃಷ್ಟಿ ಮತ್ತು ವಿನಾಶ ವನ್ನು ಅನುಭವಿಸುತ್ತಾ ಸಾಗುತ್ತದೆ. ಒಟ್ಟಾರೆ, ನಾವೆಲ್ಲರೂ ತಿಳಿದಿರುವಂತೆ ಕಾಲವು ನೋವಿನ ವಾಹಕ. ಅದು ನಮ್ಮನ್ನು ಸುತ್ತುವರಿಯುತ್ತದೆ, ಬಂಽಸುತ್ತದೆ ಮತ್ತು ಕ್ರಮೇಣ ನಮ್ಮ ಬಳಿ ಇರುವು ದನ್ನೆಲ್ಲ ನಾಶಪಡಿಸುತ್ತದೆ.

ಇನ್ನೊಂದು ಅರ್ಥದಲ್ಲಿ ಕಾಲ ಪರಿಹಾರಕವೂ ಹೌದು. ನಾವು ಅನುಭವಿಸುವ ಸಂತೋಷಕ್ಕೂ ದುರಿತಕ್ಕೂ ಕಾಲ ಖಂಡಿತ ಅಂತ್ಯವನ್ನು ಒದಗಿಸುತ್ತದೆ. ಮೈ-ಮನಸ್ಸುಗಳಿಗಾಗುವ ಗಾಯಗಳಿಗೆ ಕಾಲವೇ ಔಷಧವನ್ನು ನೀಡುತ್ತದೆ.

ಹೀಗೆ ಕಾಲ ನಿರ್ದಯಿ, ಅದಕ್ಕೆ ಭೇದಭಾವಗಳಿಲ್ಲ. ರಾಮ-ಕೃಷ್ಣರೂ ಕಾಲವನ್ನು ಮೀರಿ ನಿಲ್ಲದೆ ಗೌರವಿಸಿದವರೇ. ರಾಮಾಯಣ- ಮಹಾಭಾರತಗಳನ್ನೂ ಕಾಲ ತನ್ನ ಗರ್ಭದೊಳಗೆ ಸೇರಿಸಿ ಕೊಂಡಾಗಿದೆ, ಹಾಗಿದ್ದಾಗ ನಮ್ಮನ್ನೂ ಒಂದು ದಿನ ಅದು ‘ಸ್ವಾಹಾ’ ಮಾಡುವುದರಲ್ಲಿ ಅನುಮಾನ ವಿಲ್ಲ.

ಹೀಗಿರುವಾಗ ನಮಗೇಕೆ ಒತ್ತಂಬರ? ಇದ್ದಷ್ಟು ದಿನ ಆರಾಮವಾಗಿದ್ದು ಒಂದು ದಿನ ಕಾಲದ ಬಾಯಿಗೆ ತುತ್ತಾದರಾಯಿತಲ್ಲಾ? ಎಂದು ಎಲ್ಲವನ್ನೂ ಕಾಲದ ಕೈಗೇ ಬಿಟ್ಟು ಕೂರುವಂತೆಯೂ ಇಲ್ಲ. ವಿವೇಕಯುತ ಮನುಷ್ಯಜನ್ಮವನ್ನು ವರವಾಗಿ ಪಡೆದಿರುವ ನಾವು, ನಮ್ಮ ಜನ್ಮ ಸಾರ್ಥಕ್ಯ ಕ್ಕಾಗುವ ಕೆಲಸದಲ್ಲಿ ತೊಡಗಿಸಿಕೊಂಡು ಕೀರ್ತಿ ಸಂಪಾದಿಸಿ, ಹಾಗೆ ಗಳಿಸಿದ ಕೀರ್ತಿಯನ್ನು ಶೇಷ ವಾಗಿ ಬಿಟ್ಟು, ಕೇವಲ ಅವಶೇಷವಾಗದೆ, ಕೀರ್ತಿಶೇಷರಾಗಬೇಕಿದೆ.

ಹಾಗಾಗಿಯೇ ಕಾಲದ ನಿರಂತರ ಪ್ರವಾಹದಲ್ಲಿ, ಯುಗಾದಿ- ಸಂಕ್ರಾಂತಿಗಳನ್ನು ಹಬ್ಬವಾಗಿ ಆಚರಿಸುವ ಕಾಲಘಟ್ಟದಲ್ಲಿ ಅರೆಕ್ಷಣ ನಿಂತು, ಹಿಂದಿನ ಒಂದು ವರ್ಷದ ಅವಧಿಯಲ್ಲಿನ ನಮ್ಮ ನಡವಳಿಕೆಯ ವಿಮರ್ಶೆ ಮಾಡಿಕೊಂಡು (ಕಿನ್ನುಮೇ ಪಶಿಭಿಸ್ತುಲ್ಯಮ, ಕಿನ್ನು ಸತ್ಪುರುಷೈರಪಿ), ಮುಂದಿನ ವರ್ಷದಲ್ಲಿ ಇನ್ನೂ ಭಿನ್ನವಾದ, ಅಧಿಕ ಲೋಕಹಿತದ ಏನನ್ನು ಸಾಧಿಸಬಹುದು ಎಂದು ಯೋಚಿಸುವ ಸಮಯವಾಗಿದೆ.

ಒಂದು ರೀತಿಯಲ್ಲಿ ನಮ್ಮ ‘ಪರ್ಫಾರ್ಮೆನ್ಸ್ ಅಪ್ರೈಸಲ್’ಮಾಡಿಕೊಳ್ಳುವ ಸಮಯ ಇದಾಗಬೇಕಿದೆ. ಹಾಗೆಯೇ, ‘ಎಲ್ಲವೂ ಕಾಲದ ವಶದಲ್ಲಿರುವಾಗ ಪುರುಷ ಪ್ರಯತ್ನಕ್ಕೆಲ್ಲಿಯ ಬೆಲೆ?’ ಎಂಬ ನಕಾರಾ ತ್ಮಕ ಚಿಂತನೆಗೊಳಗಾಗುವ ನಮಗೆ, ‘ಉತ್ಸಾಹ, ಪುರುಷ ಪ್ರಯತ್ನ ಮತ್ತು ಲೋಕಹಿತ ಪ್ರಜ್ಞೆಗಳೇ ಪಾಲಿಸಲಿಕ್ಕಿರುವ ಧರ್ಮ’ ಎಂದು ಬೋಧಿಸುವ, ಸಂಕೀರ್ಣ ಸ್ಥಿತಿಯಲ್ಲಿ ಸಾಗುತ್ತಿರು ವನಮ್ಮ ಜೀವನಕ್ಕೆ ಭರವಸೆ ಒದಗಿಸುವ ರಸಋಷಿಯ ಕೆಲವು ಮಾತುಗಳನ್ನು ಈ ಸಂದರ್ಭದಲ್ಲಿ ಒಮ್ಮೆ ನೋಡುವುದೊಳಿತು- ‘ಎಲ್ಲ ನಾಶನವೆಲ್ಲಕಾಲವಶವಾದೊಡಂ | ಕ್ಷುಲ್ಲಕನು ನರನಾದೊಡಂ ಕಾಲನಿದಿರೊಳ್ || ಉಸವೇ ಧರ್ಮ; ಕೊಲ್ಲಿಪನೆ ಬೆಳೆಯಿಪನು | ಹುಣಗಿ ಬೆಳೆವುದಲ?’- ಭೂಮಿಯ ಮೇಲಿನ ಹುಲ್ಲು, ಪ್ರಕೃತಿಯ ಕಾರಣದಿಂದ ಚಿಗುರಿ, ಪ್ರಕೃತಿಯ ಕಾರಣದಿಂದಲೇ ಒಣಗಿ ನಾಶವಾ ದರೂ ಮತ್ತೆ ಪ್ರಕೃತಿಯ ಕಾರಣದಿಂದಲೇ ಚಿಗುರುವಂತೆ ಜಗತ್ತಿನ ಎಲ್ಲವೂ ಕಾಲವಶವಾಗಿ ನಾಶ ವಾಗುತ್ತದೆಯೆಂದರೆ, ನಾಶಮಾಡುವವನೂ ಸೃಷ್ಟಿಕರ್ತನೂ ಒಬ್ಬನೇ ಎಂದಾದರೆ, ಪ್ರಕೃತಿ ಮತ್ತು ಕಾಲನೆದುರು ಬಹಳ ಬಲಹೀನರಾಗಿ, ಅಲ್ಪರಾಗಿ ಕಾಣುವ ಮನುಷ್ಯರು, ಬದುಕುವಾಗ ಉತ್ಸಾಹ ದಿಂದ ಇರುವುದೇ ಧರ್ಮ ಎಂದು ಗುಂಡಪ್ಪನವರು ಸಾರಿದ್ದಾರೆ.

‘ಯತಃ ಸರ್ವಾಣಿ ಭೂತಾನಿ ಭವಂತ್ಯಾದಿ ಯುಗಾಗಮೇ, ಯಸ್ಮಿಂಶ್ಚ ಪ್ರಲಯಂ ಯಾಂತಿ ಪುನರೇವ ಯುಗಕ್ಷಯೇ’ ಎನ್ನುವ ಭೀಷ್ಮರ ಪ್ರಸಿದ್ಧ ಮಾತೂ ಇದೇ ಅರ್ಥದಲ್ಲಿದೆ. ‘ನವನವ ಪ್ರಶ್ನೆಗಳು; ನವನವ ಪರೀಕ್ಷೆಗಳು | ದಿವಸಾಬ್ದಯುಗ ಚಕ್ರ ತಿರುತಿರುಗಿದಂತೆ || ಪ್ರವಹಿಪ್ಪುವದರಂತೆ ಪೌರುಷ ಹಿತಪ್ರಜ್ಞೆ | ಅವಿರತದ ಚೈತನ್ಯ’- ದಿನ, ವರುಷ, ಯುಗಗಳು ಕಳೆದಂತೆ ಮನುಷ್ಯನ ಮನಸ್ಸಿನಲ್ಲಿ ಹೊಸ ಪ್ರಶ್ನೆಗಳು ಉದ್ಭವಿಸುತ್ತವೆ, ಅವನು ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾನೆ.

ಹೀಗೆ ಆತ್ಮಹಿತವನ್ನು ವೃದ್ಧಿಸಿಕೊಳ್ಳಲು, ಆ ಪರತತ್ವದ ಚೈತನ್ಯವು ನಿರಂತರ ಕೃಷಿ ಮಾಡುತ್ತಲೇ ಇರುತ್ತದೆ ಎನ್ನುವುದೇ ಈ ಕಗ್ಗದ ತಾತ್ಪರ್ಯ. ‘ಋತುಚಕ್ರ ತಿರುಗುವುದು ಕಾಲನೆದೆ ಮರುಗುವುದು ಮೃತನ ಮಣ್ಣಿಂದ ಹೊಸಹುಲ್ಲು ಬೆಳೆಯುವುದು ಕ್ಷಿತಿ ಗರ್ಭ ಧರಿಸುವಳು ಮತ್ತುದಿಸುವುದು ಜೀವ ಸತತ ಕೃಷಿಯೋ ಪ್ರಕೃತಿ’- ಋತುಗಳ ಚಕ್ರ ತಿರುಗುತ್ತಲೇ ಇರುತ್ತದೆ. ಕಾಲನು ತನ್ನ ಪದಾಘಾತದಲ್ಲಿ ಮೃತರಾಗುವವರ ನೆನೆದು ಮರುಗುತ್ತಾನೆ.

ಹಾಗೆ ಮೃತರಾದವರು ಮಣ್ಣಾದ ಮೇಲೆ ಆ ಭೂಮಿಯ ಮೇಲೆ ಮತ್ತೆ ಹೊಸಹುಲ್ಲು ಹುಟ್ಟುತ್ತದೆ. ಈ ಧರೆ ಮತ್ತೆ ಗರ್ಭಧರಿಸಿ ಹೊಸ ಪಲ್ಲವಗಳಿಗೆ ಎಡೆಮಾಡಿಕೊಡುತ್ತಾಳೆ, ಮತ್ತೆ ಮತ್ತೆ ಹೊಸಜೀವ ಉದಯಿಸುವ ನಿರಂತರ ಕೃಷಿಯೇ ಈ ಪ್ರಕೃತಿ.

‘ಜನಿಸಿದುದು ಮೃತಿಯನೆಳಸದೆ ಕುಲವ ಬೆಳೆಸುವುದು| ಒಣಗಿದಂತಿರುವ ತೃಣಮೂಲ ಮೊಳೆ ಯುವುದು|| ಮನುಜರಳಿವರು ಮರುಸಂತಾನ ನಿಂತಿಹುದು| ಅಣಗದಾತ್ಮದ ಸತ್ವ’- ಹುಟ್ಟಿದವರು ಯಾರೂ ಕೂಡಲೇ ಸಾಯದೇ ತಮ್ಮ ಕುಲವನ್ನು ಬೆಳೆಸಲು ಇಚ್ಛಿಸುತ್ತಾರೆ. ನೋಡಲು ಒಣಗಿ ದಂತಿದ್ದರೂ ಮಳೆಯಾದಾಗ ಹೇಗೆ ತನ್ನ ಒಡಲಿಂದ ಜೀವಂತವಾಗಿ ಚಿಗುರು ಹಸಿರೊಡೆದು ನಲಿ ಯುವ ಹಸಿರು ಹುಲ್ಲಂತೆ, ಮನುಷ್ಯರು ಸತ್ತರೂ ಅವರ ಸಂತತಿ ಈ ಭೂಮಿಯಲ್ಲಿ ನಿಂತಿದೆ.

ಈ ಜಗದಾತ್ಮದ ಸತ್ವ ಈ ಜಗತ್ತಿನಲ್ಲಿ ಎಂದಿಗೂ ಕಡಿಮೆಯಾಗದು. ಈ ಭೂಮಿಗೆ ಎಷ್ಟು ವಯಸ್ಸಾ ಗಿದೆಯೋ, ಈ ಭೂಮಿಯ ಮೇಲೆ ಮೊದಲ ಮಾನವ ಎಂದು ಬಂದನೋ ನಮಗೆ ಗೊತ್ತಿಲ್ಲ. ಆದರೂ ಅಂದಿನಿಂದ ಇಂದಿನ ತನಕ ಮಾನವ ಸಂತತಿಯಂತೂ ಉಳಿದಿದೆ. ಮಾನವರು ಬರುವ ಮುನ್ನ ಇದ್ದ ಪ್ರಾಣಿ-ಪಕ್ಷಿಗಳ ಹಲವಾರು ಪ್ರಭೇದಗಳು ಇಂದು ಸಂಪೂರ್ಣ ನಾಶವಾಗಿವೆ.

ಆದರೆ ಬೇರೆ ಬೇರೆ ಪ್ರಾಣಿ-ಪಕ್ಷಿಗಳು ಉದ್ಭವವಾಗಿವೆ! ಹೀಗೆ ನಿರಂತರ ಚಕ್ರ ನಡೆದುಬಂದಿದೆ. ಇಲ್ಲಿ
ಮಾನವ ತಾನು ನಿರಂತರವಾಗಿ ಇರಲಾಗದಿದ್ದರೂ ತನ್ನ ಸಂತತಿಯಿಂದ ಕುಲವನ್ನು ಬೆಳೆಸು ತ್ತಿದ್ದಾನೆ. ಭೂಮಿಯಲ್ಲಿ ಒಂದು ಒಣಹುಲ್ಲಿನ ಬೇರು ಒಂದು ಮಳೆಯಾದರೆ ಚಿಗುರೊಡೆದು ಧರೆಗೆಲ್ಲ ಹಸಿರ ಹೊದಿಕೆಯನ್ನು ಹೊದಿಸುವಂತೆ, ಆ ಪರಮಾತ್ಮ ತತ್ವ ಈ ಜಗತ್ತಿನಲ್ಲಿ ನಿರಂತರ, ನಿತ್ಯ ಮತ್ತು ಅನಂತವಾಗಿರುವ ಸತ್ಯ. ಕಾಲಪುರುಷ ಖಳನಾಯಕನಲ್ಲ, ಅವಕಾಶಗಳ ಆಕಾಶವನ್ನೇ ಒದಗಿಸುವ ಜಗನ್ನಾಯಕ ಎನ್ನುವ ಉತ್ಸಾಹ ತುಂಬುವ ಗುಂಡಪ್ಪನವರ ಮಾತುಗಳೊಂದಿಗೆ ‘ವಿಶ್ವಾವಸು’ವಿನ ಹೊಸದೊಂದು ಯುಗಾದಿಯನ್ನು ಸ್ವಾಗತಿಸೋಣ, ಅನುಭವಿಸೋಣ.