ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayaka M Bhatta Column: ಸುಭಾಷಿತ: ಮರೆಯಾಗುತ್ತಿರುವ ಸಾರಭೂತ ಸಾಹಿತ್ಯ

ಮರುದಿನ ಶಾಲೆಯಲ್ಲಿ ಬೆಳಗ್ಗೆ ಪ್ರಾರ್ಥನೆ ಮುಗಿಯುತ್ತಿದ್ದಂತೆ, ಅಂದಿನ ವಾರ್ತಾಪತ್ರಿಕೆಯ ಮುಖಪುಟ ದ ತಲೆಬರಹ ಗಳು ಮತ್ತು ಅಮರವಾಣಿಯನ್ನು (ಕನ್ನಡ ಅಥವಾ ಸಂಸ್ಕೃತದ ಒಂದು ಸೂಕ್ತಿ) ಓದಿಸಿ, ಅದರ ಸರಳ ಅರ್ಥವನ್ನು ಹೇಳಲಾಗುತ್ತಿತ್ತು. ತರಗತಿಯ ಬೋರ್ಡಿನ ಮೇಲೂ ಸುಭಾಷಿತದ ಶ್ಲೋಕವನ್ನು ಬರೆಯುವ ಪರಿಪಾಠವಿತ್ತು

ಸುಭಾಷಿತ: ಮರೆಯಾಗುತ್ತಿರುವ ಸಾರಭೂತ ಸಾಹಿತ್ಯ

ಅಂಕಣಕಾರ ವಿನಾಯಕ ವೆಂ ಭಟ್ಟ, ಅಂಬ್ಲಿಹೊಂಡ

Profile Ashok Nayak Mar 23, 2025 6:16 AM

ಹಳ್ಳಿಯಲ್ಲಿ ನಾವೆಲ್ಲಾ ಪ್ರೌಢಶಾಲೆ ಮುಗಿಸುವಲ್ಲಿಯವರೆಗೆ ಮನೆಯಲ್ಲಿ ಬಾಯಿಪಾಠ ಹೇಳುವ ಪದ್ಧತಿಯಿತ್ತು. ಬಾಯಿಪಾಠ ಎಂದರೆ, ಸಣ್ಣ ಮಕ್ಕಳಿಂದ ಸರಿವಯಸ್ಸಿನ ವರೆಗಿನ ಮಕ್ಕಳು ಮುಸ್ಸಂಜೆಯ ವೇಳೆ ಕೈಕಾಲು ಮುಖ ತೊಳೆದುಕೊಂಡು, ದೇವರಿಗೆ ನಮಸ್ಕರಿಸಿ, ಮನೆಯ ಹಿರಿಯರ (ಬಹುತೇಕವಾಗಿ ಅಜ್ಜರ) ಮುಂದೆ ಕುಳಿತು ಪುನರ್‌ಮನನ ಮಾಡಿಕೊಳ್ಳುತ್ತಿದ್ದ ಮಾಹಿತಿಯ ಭಂಡಾರ! ಅಂದರೆ, ಅಲ್ಲಿ ಕಾಗುಣಿತ, ಮಗ್ಗಿಯನ್ನು ಮಾತ್ರವಲ್ಲದೆ, ಹಿಂದೂ ಮಾಸಗಳು, ಋತು ಗಳು, ನಕ್ಷತ್ರ ಗಳು, 60ನ್ನು ತಿರುವು- ಮುರುವಾಗಿಯೂ ಕಂಠಸ್ಥ ಮಾಡಿಸುತ್ತಿದ್ದರು. ಜತೆಗೆ, ಕಾಲು-ಅರ್ಧ-ಮುಕ್ಕಾಲುಗಳ ಪಠಣವೂ ಆಗುತ್ತಿತ್ತು (ಒಂದ್ ಕಾಲ್ ಕಾಲು, ಎರಡ್ ಕಾಲ್ ಅರ್ಧ, ಮೂ ರ್ಕಾಲ್ ಮುಕ್ಕಾಲು, ನಾಲ್ಕ್ ಕಾಲ್ ಒಂದು). ನಂತರ, ‘ಭಜಗೋವಿಂದಂ’ನಂಥ ಶ್ಲೋಕಗಳು, ‘ವಿದ್ಯಾದದಾತಿ ವಿನಯಂ’ ಮುಂತಾದ ಸುಭಾಷಿತಗಳು. ನಾವು ಹೇಳುತ್ತಿರುವುದು ಶ್ರೀ ಶಂಕರಾ ಚಾರ್ಯರ ‘ಮೋಹಮುದ್ಗರ’ದ ಶ್ಲೋಕಗಳು ಅಥವಾ ಇದು ಸುಭಾಷಿತ ಪ್ರಕಾರದ ಶ್ಲೋಕ ಎಂಬ ತಿಳಿವಳಿಕೆ ಅಂದು ನಮಗೆ ಇರುತ್ತಿರಲಿಲ್ಲವಾದರೂ, ಒಂದಷ್ಟು ಸದ್ವಿಚಾರಗಳು ಅನಾಯಾಸವಾಗಿ ಕಂಠಪಾಠವಾಗಿ ಬಿಡುತ್ತಿದ್ದವು.

ಇದನ್ನೂ ಓದಿ: Vinayaka M Bhatta Column: ಉಚಿತಗಳ ಹರಿಕಾರ ಮಫ್ಲರ್‌ವಾಲನ ಮಹಾಪತನ

ಮರುದಿನ ಶಾಲೆಯಲ್ಲಿ ಬೆಳಗ್ಗೆ ಪ್ರಾರ್ಥನೆ ಮುಗಿಯುತ್ತಿದ್ದಂತೆ, ಅಂದಿನ ವಾರ್ತಾಪತ್ರಿಕೆಯ ಮುಖಪುಟದ ತಲೆಬರಹ ಗಳು ಮತ್ತು ಅಮರವಾಣಿಯನ್ನು (ಕನ್ನಡ ಅಥವಾ ಸಂಸ್ಕೃತದ ಒಂದು ಸೂಕ್ತಿ) ಓದಿಸಿ, ಅದರ ಸರಳ ಅರ್ಥವನ್ನು ಹೇಳಲಾಗುತ್ತಿತ್ತು. ತರಗತಿಯ ಬೋರ್ಡಿನ ಮೇಲೂ ಸುಭಾಷಿತದ ಶ್ಲೋಕವನ್ನು ಬರೆಯುವ ಪರಿಪಾಠವಿತ್ತು.

8 ರಿಂದ 10ನೇ ತರಗತಿಯವರೆಗೆ ಸಂಸ್ಕೃತವನ್ನು ಪ್ರಥಮ ಅಥವಾ ತೃತೀಯ ಭಾಷೆಯಾಗಿ ಆಯ್ಕೆ ಮಾಡಿಕೊಂಡಿದ್ದರೆ, ಪರೀಕ್ಷೆಯ ದೆಸೆಯಿಂದಲಾದರೂ ಒಂದಷ್ಟು ಶ್ಲೋಕಗಳನ್ನು ಕಂಠಪಾಠ ಮಾಡುವ, ಅವುಗಳ ಅರ್ಥವನ್ನು ಗ್ರಹಿಸುವ ಅವಕಾಶವಿರುತ್ತಿತ್ತು. ಅಂತೂ ನಾವು ಬಾಲ್ಯ ದಿಂದಲೂ ನಮಗರಿವಿಲ್ಲದೆಯೇ ವಿವೇಕ ಚೂಡಾಮಣಿ, ಉಪದೇಶ ಸಾಹಸ್ರಿ, ಸೂಕ್ತಿಗಳು, ಅಮರ ವಾಣಿ, ಸುಭಾಷಿತಗಳ ಜತೆಗೇ ಬೆಳೆದುಬಂದಿದ್ದೇವೆ ಎನ್ನಬಹುದು.

ಅನುಭವದ ಆಧಾರದಲ್ಲಿ ಹೊಮ್ಮಿದ ಸರಳಭಾಷೆ ಮತ್ತು ದೇಶಕಾಲಾಬಾಧಿತ ಅರ್ಥಗಳನ್ನು ಹೊಂದಿರುವ ಪ್ರಾಚೀನ ಸಂಸ್ಕೃತ ಸುಭಾಷಿತಗಳು ನಿಜಕ್ಕೂ ಸೂಕ್ತಿರತ್ನಗಳು. ‘ಇವು ಮಂತ್ರಗಳೇ?’ ಅಂದರೆ ಮಂತ್ರಗಳಲ್ಲ, ‘ಕಾವ್ಯವೇ?’ ಅಂದರೆ ಪೂರ್ಣ ಒಪ್ಪಲೂ ಆಗದು. ಆದರೆ, ಅರ್ಥಾನು ಸಂಧಾನದ ದೃಷ್ಟಿಯಿಂದ, ಸಾಮಾನ್ಯ ಜನಜೀವನಕ್ಕೆ ನಿರ್ದಿಷ್ಟವಾದ ಮತ್ತು ‘ಇದಮಿತ್ಥಂ’ ಎಂದು ದಿಗ್ದರ್ಶಿಸುವ ಸಾಮರ್ಥ್ಯವನ್ನು ಸುಭಾಷಿತ ಪ್ರಕಾರದ ಸಣ್ಣ ಶ್ಲೋಕಗಳು ಹೊಂದಿರುತ್ತವೆ.

ಹೇಳಬೇಕಾದ ಸತ್ಯವನ್ನು ಪ್ರಿಯವಾಗಿಯೂ ಮಧುರವಾಗಿಯೂ ಅವು ಹೇಳಿಬಿಡುತ್ತವೆ. ಕೆಲ ಉದಾ ಹರಣೆಗಳು ಹೀಗಿವೆ: ‘ದುರ್ಜನಂ ಪ್ರಥಮಂ ವಂದೇ ಸಜ್ಜನಂ ತದನಂತರಂ| ಮುಖ ಪ್ರಕ್ಷಾಲನಾತ್ ಪೂರ್ವಂ ಗುದಪ್ರಕ್ಷಾಲನಂ ಯಥಾ||’- ಸಜ್ಜನರು ಸದಾತುಷ್ಟರು, ವಂದನೆಗೆ ಅರ್ಹರಾದರೂ ಅಪೇಕ್ಷಿಸುವವರಲ್ಲ. ಅವರಿಗೆ ಸ್ವಲ್ಪ ಹೆಚ್ಚು ಕಡಿಮೆ ಆದರೂ ನಡೆದೀತು. ಆದರೆ ದುರ್ಜನರು ಹಾಗಲ್ಲ, ಸ್ವಲ್ಪ ವ್ಯತ್ಯಾಸವಾದರೂ ಆಕಾಶ-ಪಾತಾಳ ಒಂದು ಮಾಡಿಬಿಡುವವರು.

ಹಾಗಾಗಿ ಅವರಿಗೇ ಮೊದಲು ನಮಸ್ಕರಿಸುವುದು ಒಳಿತು ಎಂದು ಹೇಳುವುದರ ಜತೆಗೆ, ಸುಭಾಷಿತ ಕಾರ ದುರ್ಜನರನ್ನು ಹೇಗೆ ಹೋಲಿಕೆ ಮಾಡುತ್ತಾನೆ ನೋಡಿ! “ಮುಖ ತೊಳೆಯದಿದ್ದರೂ ಅಥವಾ ಆಮೇಲೆ ತೊಳೆದರೂ ನಡೆದೀತು, ಆದರೆ ಗುದಪ್ರಕ್ಷಾಲನವಾಗದಿದ್ದರೆ ನಡೆಯುವುದಿಲ್ಲ ಹೇಗೋ ಹಾಗೆ" ಎನ್ನುತ್ತಾನೆ.

‘ಅಶ್ವಂ ನೈವ ಗಜಂ ನೈವ ವ್ಯಾಘ್ರಂ ನೈವಚ ನೈವಚ, ಅಜಾಪುತ್ರಂ ಬಲಿಂದದ್ಯ ದೇವೋ ದುರ್ಬಲ ಘಾತುಕಃ’- ನಾವು ಸದಾ ಬಲಿಷ್ಠರಾಗಿರಬೇಕು, ದುರ್ಬಲರನ್ನು ದೇವರೂ ರಕ್ಷಿಸುವುದಿಲ್ಲ ಎನ್ನುವ ಕಟುಸಂದೇಶವನ್ನು ಈ ಸಾಲು ಸಾರುತ್ತವೆ.

‘ದಾನಂ ಭೋಗೋ ನಾಶಸ್ತಿಸ್ರೋಗತಯೋ ಭವಂತಿ ವಿತ್ತಸ್ಯ| ಯೋ ನ ದದಾತಿ ನ ಭುಂಕ್ತೇ ತಸ್ಯ ತ್ರತಿಯಾ ಗತಿರ್ಭವತಿ’- ದಾನ, ಸ್ವತಃ ಭೋಗಿಸುವುದು ಮತ್ತು ನಾಶ ಈ ಮೂರು ಸಂಪತ್ತಿಗೆ ಇರುವ ಮೂರು ದಾರಿಗಳು. ತಾವೂ ಅನುಭವಿಸದಂಥ, ಬೇರೆಯವರಿಗೂ ದಾನ ಮಾಡದಂಥ ಸಂಪತ್ತು ಮೂರನೆಯ ಗತಿಯಾದ ನಾಶವನ್ನೇ ಹೊಂದುತ್ತದೆ.

‘ಯೌವನಂ ಧನಸಂಪತ್ತಿಃ ಪ್ರಭುತ್ವಂ ಅವಿವೇಕತಾ ಏಕೈಕಮಪ್ಯನರ್ಥಾಯ ಚತುಷ್ಟಾಯ ವಿನಾಶಯೇತ್’- ಪ್ರಾಯ, ಶ್ರೀಮಂತಿಕೆ, ಅಽಕಾರ ಮತ್ತು ಅವಿವೇಕ ಎಂಬವು ಒಂದೊಂದೇ ಅನರ್ಥಕ್ಕೆ ಸಾಧನವಾಗಿ ರುವಂಥವು, ಇನ್ನು ಇವು ನಾಲ್ಕೂ ಒಬ್ಬನಲ್ಲಿ ಸೇರಿದರೆ ವಿನಾಶ ವಾದಂತೆಯೇ ಸರಿ.

ಮಾನವ ಜೀವನವು ಮಾತನ್ನು ಅವಲಂಬಿಸಿರುತ್ತದೆ; ಮಾತಿಲ್ಲದೆ ನಮ್ಮ ಜೀವನ ನಡೆಯದು. ನಮ್ಮ ಜೀವನದ ಸೊಗಸಿಗೂ, ಸುಖಕ್ಕೂ, ನೋವಿಗೂ ನಾವಾಡುವ ಮಾತೇ ಬಹುತೇಕ ಕಾರಣ ವಾಗಿರುತ್ತದೆ. ಹಾಗೆ ಚೆನ್ನಾಗಿ ಆಡಿದ ಮಾತಿಗೆ ಸಂಸ್ಕೃತದಲ್ಲಿ ‘ಸುಭಾಷಿತ’ (ಸು: ಚೆನ್ನಾಗಿ, ಭಾಷಿತ: ಹೇಳಿದ್ದು) ಎನ್ನುತ್ತಾರೆ. ಅಂದರೆ, ಕೇಳುವುದಕ್ಕೆ ಇಂಪಾಗಿಯೋ, ಸುಂದರ ಪದಗಳನ್ನು ಪೋಣಿಸಿ ಯೋ ಅಥವಾ ಆಕರ್ಷಕವಾಗಿಯೋ ಆಡಿದ್ದು ಮತ್ತು ಬದುಕಿನ ಸಾರವನ್ನು ಸುಂದರವಾಗಿ, ಅರ್ಥಪೂರ್ಣವಾಗಿ ನೋಡಿ ಹೇಳಿದ ವಿವೇಕದ ವಚನ. ಹೀಗಾಗಿ ಸಂಸ್ಕೃತದಲ್ಲಿ ‘ಸುಭಾಷಿತ’ ಎಂಬ ವಿಶಿಷ್ಟ ಸಾಹಿತ್ಯ ಪ್ರಕಾರವೇ ಅನಾದಿಯಿಂದ ಬೆಳೆದು ನಿಂತಿದೆ.

ನಮ್ಮ ಮಾತು ಸತ್ಯವಾಗಿಯೂ, ಹಿತವಾಗಿಯೂ, ಬದುಕಿಗೆ ಪೂರಕವಾಗುವಂತೆಯೂ ಇರಬೇಕು. ಆ ಮಾತು ಮಧುರವಾಗಿದ್ದಾಗ ಮಾತ್ರವೇ ಅದರಲ್ಲಡಗಿರುವ ತತ್ವಗಳು ಎಲ್ಲ ವರ್ಗದವರಿಗೂ ಸ್ವೀಕಾ ರಾರ್ಹವಾಗುತ್ತದಲ್ಲವೇ? ಕಟು ಮಾತಾಡಿದರೆ ಕೇಳುವವರಾರು? ಹೀಗೆ ಹೊರಗಿನಿಂದ ಮೃದು-ಮಧುರ ವಾಗಿದ್ದು, ಒಳಗೆ ಔಷಧಿಯ ಗುಣಗಳನ್ನು ಹೊಂದಿರುವಂಥ ಸುಭಾಷಿತಗಳ ಉದ್ದೇಶವೂ, ಸಂಸ್ಕಾರ ಪೂರ್ಣ ಮತ್ತು ಆರೋಗ್ಯವಂತ ಸಮಾಜದ ನಿರ್ಮಾಣವೇ ಆಗಿದೆ.

‘ಭಾಷಾಸು ಮುಖ್ಯಾ ಮಧುರಾ ದಿವ್ಯಾ ಗೀರ್ವಾಣ ಭಾರತೀ| ತಸ್ಮಾದ್ಧಿ ಕಾವ್ಯಂ ಮಧುರಂ ತಸ್ಮಾದಪಿ ಸುಭಾಷಿತಮ್’- ಅಂದರೆ, ಭಾಷೆಗಳಲ್ಲಿ ಮುಖ್ಯವೂ ಮಧುರವೂ ದಿವ್ಯವೂ ಆದುದು ಸಂಸ್ಕೃತ ಭಾಷೆ; ಈ ಭಾಷೆಯಲ್ಲಿರುವ ಕಾವ್ಯವು ಮಧುರ, ಅದಕ್ಕಿಂತಲೂ ಸುಭಾಷಿತ ಇನ್ನೂ ಮಧುರ’ ಎನ್ನುವುದು ಈ ಶ್ಲೋಕದ ಭಾವ. ಸುಭಾಷಿತವೊಂದು ತನ್ನ ಬಗ್ಗೆ ತಾನೇ ಹೇಳಿಕೊಂಡ ಮತ್ತೊಂದು ಪರಿಯಿದು: ‘ದ್ರಾಕ್ಷಾ ಮ್ಲಾನಮುಖೀ ಜಾತಾ ಶರ್ಕರಾ ಚಾಶ್ಮತಾಂ ಗತಾ | ಸುಭಾಷಿತರಸಸ್ಯಾಗ್ರೇ ಸುಧಾ ಭೀತಾ ದಿವಂಗತಾ’- ಅಂದರೆ ಸುಭಾಷಿತ ರಸದ ಮುಂದೆ ದ್ರಾಕ್ಷಿ ಫಲವು ಖಿನ್ನವಾಗಿ ಮುಖ ಕೆಳಗೆ ಮಾಡಿತು, ಸಕ್ಕರೆ ಕಲ್ಲಾಗಿಹೋಯಿತು (ಕಲ್ಲುಸಕ್ಕರೆ); ಅಮೃತವು ಇಲ್ಲಿನ್ನು ತನ್ನನ್ನು ಕೇಳು ವವರು ಯಾರೂ ಇರುವುದಿಲ್ಲವೆಂದು ಹೆದರಿ ಸ್ವರ್ಗಕ್ಕೆ ಓಡಿಹೋಯಿತು ಎಂದರ್ಥ.

ದ್ರಾಕ್ಷಿಯ ಗೊಂಚಲು ಸ್ವಾಭಾವಿಕವಾಗಿ ಇರುವುದೇ ಕೆಳಮುಖವಾಗಿ. ಕಲ್ಲುಸಕ್ಕರೆಯಂತೂ ಪ್ರತ್ಯೇಕ ವಾಗಿ ಇದ್ದೇ ಇದೆ, ಸಕ್ಕರೆ ಕಲ್ಲಾದದ್ದಲ್ಲ. ಅಮೃತ ಇರುವುದೇ ಸ್ವರ್ಗದಲ್ಲಿ, ಹೆದರಿ ಇಲ್ಲಿಂದ ಓಡಿ ಹೋದದ್ದಲ್ಲ. ಆದರೆ ಸುಭಾಷಿತವು ಅದನ್ನು ಪ್ರಸ್ತುತಪಡಿಸುವ ರೀತಿ ಅದ್ಭುತ. ಅದನ್ನೇ ಇನ್ನೊಂ ದು ಸುಭಾಷಿತ ಹೀಗೆಂದಿದೆ: ‘ಪೃಥಿವ್ಯಾಂ ತ್ರೀಣಿ ರತ್ನಾನಿ ಜಲಮನ್ನಂ ಸುಭಾಷಿತಂ | ಮೂಢೈಃ ಪಾಷಾಣಖಂಡೇಷು ರತ್ನಸಂಜ್ಞಾ ವಿಽಯತೇ||’- ಅಂದರೆ, ನೀರು, ಅನ್ನ ಮತ್ತು ಒಳ್ಳೆಯ ಮಾತು ಗಳು ಮಾತ್ರ ಭೂಮಿಯಲ್ಲಿನ ಮೂರು ಶ್ರೇಷ್ಠ ರತ್ನಗಳು; ಆದರೆ ಮೂರ್ಖರು ಕಲ್ಲಿನ ಚೂರುಗಳನ್ನು ರತ್ನ ಎಂದು ಕರೆಯುತ್ತಿರುವುದು ವಿಷಾದಕರ ಎಂದರ್ಥ.

ಬೆಳ್ಳಿ, ಬಂಗಾರ, ವಜ್ರ, ಹರಳು ಮುಂತಾದವನ್ನು ಇಲ್ಲಿ ಕಲ್ಲಿನ ಚೂರುಗಳು ಎಂದು ಜರಿದಂತಾ ಯಿತು. ಲೋಕೋಕ್ತಿ ಅಥವಾ ನಾಣ್ಣುಡಿ ಸೂಕ್ತಿಗಳು ಹಾಗೂ ಗಾದೆಗಳು ಬೇರೆ ಬೇರೆ, ಅವು ಸುಭಾ ಷಿತಗಳಲ್ಲ. ಸಂಸ್ಕೃತದ ವಿಶಿಷ್ಟ ಸಾಹಿತ್ಯ ಪ್ರಕಾರವಾದ ಸುಭಾಷಿತದ ಸಂದೇಶವು ಸಾಮಾನ್ಯವಾಗಿ ಉಪದೇಶ, ಸೂತ್ರ, ಸಲಹೆ, ಸತ್ಯ ಅಥವಾ ಒಗಟುಗಳಿಂದ ಕೂಡಿರುತ್ತದೆ.

ಈ ಸುಭಾಷಿತಗಳು ಸಾಮಾನ್ಯವಾಗಿ ಸಣ್ಣ ಸ್ಮರಣೀಯ ಶ್ಲೋಕಗಳ ರೂಪದಲ್ಲಿದ್ದು, ಇವು 4 ಪಾದ ಗಳಲ್ಲಿ, ಕೆಲವೊಮ್ಮೆ 2 ಪಾದಗಳಲ್ಲಿಯೂ ಇರುತ್ತವೆ. ಸುಭಾಷಿತವು, ಭಾರತದ ಪ್ರಾಚೀನ ಮತ್ತು ಮಧ್ಯಕಾಲೀನ ಯಗದಿಂದ ಉಳಿದುಕೊಂಡು ಬಂದಿರುವ ಅನೇಕ ಸೃಜನಶೀಲ ಕೃತಿಪ್ರಕಾರಗಳಲ್ಲಿ ಒಂದಾಗಿದೆ. ಕೆಲವು ಲೇಖಕರು ಸುಭಾಷಿತಗಳನ್ನು, ಸಕ್ಕರೆ ಲೇಪಿತ ಕಹಿಔಷಧಿಗಳೊಂದಿಗೆ ಅವುಗಳ ಯೋಗ್ಯತೆಯನ್ನು ಪರಿಗಣಿಸಿ ಹೋಲಿಸುತ್ತಾರೆ.

ವಿವಿಧ ವಿಷಯಗಳೊಂದಿಗೆ ವ್ಯವಹರಿಸುವ ಸುಭಾಷಿತವು, ಪ್ರತಿಯೊಬ್ಬರಿಗೂ ಸಂಬಂಧಿಸ ಬಹುದಾದ ದೈನಂದಿನ ಅನುಭವಗಳ ವಿಷಯಗಳನ್ನು ಒಳಗೊಂಡಿರುತ್ತದೆ, ನಿರರ್ಗಳವಾಗಿಯೂ ಕಾವ್ಯಾತ್ಮಕವಾಗಿಯೂ, ಪರಿಪೂರ್ಣವಾಗಿಯೂ ಇರುತ್ತದೆ. ಅದರ ಭಾವನೆ, ಕಲ್ಪನೆ ಮತ್ತು ಸತ್ವಗಳನ್ನು ಸುಭಾಷಿತಕಾರರು ನಿಜಜೀವನದಿಂದಲೇ ಪಡೆದಿರುತ್ತಾರೆ ಮತ್ತು ಆ ತತ್ವಗಳ ಫಲ ವನ್ನು ಅನುಭವದ ಆಧಾರದಲ್ಲಿ ಇತರರಿಗೆ ನೀಡಲು ಯತ್ನಿಸಿದ್ದಾರೆ.

ಸುಭಾಷಿತದ ಕಾವ್ಯಾತ್ಮಕ ನಿರೂಪಣಾ ಶೈಲಿಯನ್ನು ‘ಮುಕ್ತಕ’ ಎಂದೂ ಕರೆಯಲಾಗುತ್ತದೆ, ಏಕೆಂ ದರೆ ಅದರ ಅರ್ಥವು ಸ್ವತಃ ಸಿದ್ಧವಾದುದಾಗಿದೆ. ಈ ಕಾವ್ಯರೂಪವನ್ನು ಪರ್ಷಿಯನ್ ಭಾಷೆಯ ರುಬಾಯಿ ಅಥವಾ ಜಪಾನಿನ ಟಂಕಾಗೆ ಕೆಲವರು ಹೋಲಿಸಿದ್ದೂ ಇದೆ. ಸಾಯಣನ ‘ಸುಭಾಷಿತ ಸುಧಾನಿಧಿ’ ಮತ್ತು ‘ಸಮಯೋಚಿತ ಪದ್ಯಮಾಲಿಕಾ’ ಮುಂತಾದ, ಸುಭಾಷಿತ ಗಳನ್ನೊಳಗೊಂಡ ಜ್ಞಾನಸಾಹಿತ್ಯದ ಕೃತಿಗಳನ್ನು ಹೊರತುಪಡಿಸಿ ಹೆಚ್ಚಿನ ಸುಭಾಷಿತಗಳ ಲೇಖಕರು ಯಾರೆಂದು ತಿಳಿದುಬರುವುದಿಲ್ಲ.

‘ಸುಭಾಷಿತ ಮಂಜರಿ’, ‘ಸುಭಾಷಿತ ರತ್ನಭಾಂಡಾಗಾರ’ ಮುಂತಾದ ಸಂಗ್ರಹ ಕೃತಿಗಳು ನಮಗಿಂದು ಲಭ್ಯವಿವೆ. ಭರ್ತೃಹರಿ, ಚಾಣಕ್ಯ, ಕಾಳಿದಾಸ, ಭವಭೂತಿ ಮುಂತಾದ ಪ್ರಾಚೀನ ವಿದ್ವಾಂಸರೂ ತಮ್ಮ ಕೃತಿಗಳ ನೈತಿಕ ಮೌಲ್ಯಗಳನ್ನು ಅಭಿವ್ಯಕ್ತಿಸಲು ಈ ಸುಭಾಷಿತಗಳನ್ನು ಪರಿಣಾಮಕಾರಿ ಯಾಗಿ ಬಳಸಿಕೊಂಡಿದ್ದಾರೆ ಎನ್ನಲಾಗಿದೆ.

ಸೂಕ್ತಿ, ಸುಭಾಷಿತ, ಅಮರವಾಣಿಗಳ ಬಗ್ಗೆ ಈಗ ಹೇಳಿದ್ದೇಕೆಂದರೆ, ಇತ್ತೀಚೆಗೆ ನಾವು ಭಾಷಣ ಮಾಡುವಾಗ, ಲೇಖನ ಬರೆಯುವಾಗ ವಿದೇಶಿ ತತ್ತ್ವಜ್ಞಾನಿಗಳ/ಲೇಖಕರ ಇಂಗ್ಲಿಷ್ ಸೂಕ್ತಿಗಳನ್ನು ಹೆಚ್ಚಾಗಿ ಬಳಸುವ ಚಾಳಿಯನ್ನು ರೂಢಿಸಿಕೊಂಡುಬಿಟ್ಟಿದ್ದೇವೆ. ಹಾಗಂತ, ವಿದೇಶಿ ತತ್ವಗಳು ನಮಗೆ ಬೇಡ ಅಂತಲ್ಲ. ‘ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ’- ಅಂದರೆ ಯಾವುದೇ ಮೂಲೆಯಿಂದ ಸರಿಯಾದ ಜ್ಞಾನ ಹರಿದುಬಂದರೆ ನಮಗದು ಸ್ವೀಕಾರಾರ್ಹ ಎನ್ನುವುದನ್ನು ಋಗ್ವೇದ ನಮಗೆ ಕಲಿಸಿದೆ. ಆದರೆ ನಮ್ಮಲ್ಲೇ ಬಂಗಾರವಿರುವಾಗ ಇತರ ನಿಮ್ನಲೋಹಗಳ ಆಭರಣಗಳನ್ನು ಧರಿಸಿ ಸಂಭ್ರಮಿಸುವುದರಲ್ಲಿ ಏನು ಹೆಚ್ಚುಗಾರಿಕೆಯಿದೆ?

‘ಸುಲಿದ ಬಾಳೆಯ ಹಣ್ಣಿನಂದದಿ ಕಳೆದ ಸಿಗುರಿನ ಕಬ್ಬಿನಂದದಿ ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊಳು ತನ್ನ ಮೋಕ್ಷವ ಗಳಿಸಿ ಕೊಂಡೊಡೆ ಸಾಲದೇ?’ ಎಂದು ಮಹ ಲಿಂಗರಂಗ ಹೇಳಿರುವ ಹಾಗೆ, ನಮ್ಮಲ್ಲೇ ಬೇಕಾದಷ್ಟಿರುವಾಗ ಪರಕೀಯ ತತ್ವಗಳಿಂದಾಗುವುದೇನಿದೆ? ನಮ್ಮ ಭಾಷಿಕರಲ್ಲಿ ಉತ್ತಮವಾದ ಸೂಕ್ತಿಗಳು, ಹಿತವಚನ ಗಳು ಇಲ್ಲವೆಂದು ನಮ್ಮ ಕಲ್ಪನೆಯಿರಬಹುದು; ಆದರೆ ಕನ್ನಡದಂಥ ನಮ್ಮ ದೇಶಭಾಷೆಗಳಲ್ಲಿಯೂ ಜೀವನದಿಗ್ದರ್ಶಕ ಸುಭಾಷಿತಗಳಿಗೆ ಸಮನಾದ ಸೂಕ್ತಿಸಾಹಿತ್ಯಗಳಿವೆ.

ಮಹಲಿಂಗರಂಗರ ‘ಅನುಭವಾಮೃತ’, ಸರ್ವಜ್ಞನ ವಚನಗಳು, ಶಿವಶರಣರ ವಚನಗಳು, ಮಂಕು ತಿಮ್ಮನ ಕಗ್ಗ ಇತ್ಯಾದಿಗಳನ್ನು ಇಲ್ಲಿ ಉದಾಹರಿಸಬಹುದು. ಹೀಗೆ ಸಣ್ಣ ಸಣ್ಣ ನುಡಿಗಳಲ್ಲಿ ಮಹ ತ್ತರ ತತ್ವಗಳನ್ನು ಸರಳವಾಗಿ ಸಾರಿ, ಮಂದಾಧಿಕಾರಿಗಳಿಗೂ ಅದರ ಸತ್ವವು ತಲುಪುವಂತೆ ರಚಿಸ ಲ್ಪಟ್ಟಿರುವ ಸುಭಾಷಿತಗಳು ಮತ್ತು ಸೂಕ್ತಿಗಳ ಅಪಾರ ಸಂಗ್ರಹ ನಮ್ಮಲ್ಲಿವೆ. ಇಂಥ ಜ್ಞಾನಭಂಡಾರ ವನ್ನು ನಾವು ಅಭ್ಯಸಿಸುವ, ಬಳಸುವ, ಉಳಿಸುವ ಮನಸ್ಸು ಮಾಡಬೇಕು, ತನ್ಮೂಲಕ ಜೀವನದ ಉತ್ತಮಿಕೆಯನ್ನು ಕಾಣಬೇಕು ಎಂಬುದೇ ಈ ಲೇಖನದ ಆಶಯ.