Roopa Gururaj Column: ಬೇಸ್ತು ಬಿದ್ದ ವ್ಯಾಪಾರಿ
ಆತ ತನ್ನ ಊರಿಗೆ ಹೋಗುವಾಗ, ದಾರಿಯ ಮಧ್ಯದಲ್ಲಿ ಒಂದು ಸಣ್ಣ ಕಾಡನ್ನು ದಾಟಿ ಹೋಗ ಬೇಕಿತ್ತು. ಬಹಳ ಸಮಯವಾಗಿ ಆಗಲೇ ಕತ್ತಲಾಗುತ್ತಾ ಬಂದಿತ್ತು. ಕಾಡುಮೃಗಗಳ ಭಯದಿಂದ ಆತ ಬೇರೆ ದಾರಿ ಕಾಣದೇ, ತನಗೆ ಪರಿಚಯವಿದ್ದ ಒಬ್ಬ ವ್ಯಾಪಾರಿಯ ಮನೆಯಲ್ಲಿ ರಾತ್ರಿ ತಂಗಿದನು. ವ್ಯಾಪಾರಿಯು ಸಜ್ಜನನಿಗೆ ಹಾಲು-ಹಣ್ಣು ಕೊಟ್ಟು, ಅವನು ಬಂದ ಕಾರಣ ವಿಚಾರಿಸಿದ
![ಬೇಸ್ತು ಬಿದ್ದ ವ್ಯಾಪಾರಿ](https://cdn-vishwavani-prod.hindverse.com/media/original_images/Kashi_Vishwanath_ok.jpg)
![ರೂಪಾ ಗುರುರಾಜ್](https://cdn-vishwavani-prod.hindverse.com/media/images/Roopa-G.2e16d0ba.fill-100x100.jpg)
ಒಂದೊಳ್ಳೆ ಮಾತು
ಕಾಶಿ ಹತ್ತಿರದ ಒಂದು ಸಣ್ಣ ಊರಿನಲ್ಲಿ ಬಡ ಸಜ್ಜನ ದಂಪತಿಯಿದ್ದರು. ಅವರಿಗೆ ಒಂದು ಹೊತ್ತಿನ ಊಟಕ್ಕೂ ಬಹಳ ತೊಂದರೆ. ಅವರಿಗೆ ಯಾವ ಕೆಲಸವೂ ಕೈ ಹತ್ತುತ್ತಿರಲ್ಲಿಲ್ಲ. ಒಂದೊಂದು ದಿನ ವಂತೂ ಉಪವಾಸವೇ ಗತಿ. ನೊಂದುಕೊಂಡ ಹೆಂಡತಿ, “ಒಮ್ಮೆ ಕಾಶಿ ವಿಶ್ವನಾಥನ ದರ್ಶನ ಮಾಡಿ ಬನ್ನಿ, ಅವನ ಕೃಪೆಯಿಂದ ನಮಗೆ ಏನಾದರೂ ಒಳ್ಳೆಯದಾಗಬಹುದು" ಎಂದು ಗಂಡನಿಗೆ ಹೇಳಿ ದಳು. ಅವಳ ಮಾತಿನಂತೆ ಆತ ಕಾಶಿಗೆ ಹೋಗಿ ವಿಶ್ವನಾಥನ ದರ್ಶನ ಮಾಡಿದ. ಅಲ್ಲಿಂದ ಹಿಂದಿ ರುಗಿ ಬರುತ್ತಿದ್ದಾಗ ಅವನಿಗೊಬ್ಬ ಸನ್ಯಾಸಿ ಸಿಕ್ಕಿದರು. ಆ ಸನ್ಯಾಸಿಯ ಬಳಿ ತನ್ನ ಕಷ್ಟವನ್ನೆ ಬಡ ಸಜ್ಜನ ಗಂಡ ಹೇಳಿಕೊಂಡನು. ಆ ಸನ್ಯಾಸಿ ಇವನಿಗೆ ಒಂದು ಶಂಖವನ್ನು ಕೊಟ್ಟು, “ಈ ಶಂಖ ಸಾಮಾನ್ಯ ವಾದುದಲ್ಲ. ಇದನ್ನು ಅಡಿಸಿದರೆ, ದಿನಕ್ಕೊಂದು ಚಿನ್ನದ ನಾಣ್ಯವನ್ನು ಕೊಡುತ್ತದೆ.
ಇದರಿಂದ ನೀನು, ನಿನ್ನ ಸಂಸಾರ ಸುಖವಾಗಿರಬಹುದು" ಎಂದು ಹೇಳಿದರು. ತಾನು ಕಾಶಿಗೆ ಬಂದು ವಿಶ್ವನಾಥನ ದರ್ಶನ ಮಾಡಿದ್ದಕ್ಕೂ ಆ ಪರಮೇಶ್ವರ ತನಗೆ ಒಳ್ಳೆಯದೇ ಮಾಡಿದ ಎಂದುಕೊಂಡು ಸನ್ಯಾಸಿಗಳಿಗೆ ನಮಸ್ಕರಿಸಿ, ಅವರಿಂದ ಶಂಖವನ್ನು ತೆಗೆದುಕೊಂಡು, ಸಂತೋಷದಿಂದ ತನ್ನ ಹಳ್ಳಿಗೆ ಹೊರಟ ಆ ಬಡ ಸಜ್ಜನ.
ಇದನ್ನೂ ಓದಿ: Roopa Gururaj Column: ಸರಳತೆಗೆ, ಸೇವಾ ಮನೋಭಾವಕ್ಕೆ ಸಿಕ್ಕ ಗೌರವ
ಆತ ತನ್ನ ಊರಿಗೆ ಹೋಗುವಾಗ, ದಾರಿಯ ಮಧ್ಯದಲ್ಲಿ ಒಂದು ಸಣ್ಣ ಕಾಡನ್ನು ದಾಟಿ ಹೋಗ ಬೇಕಿತ್ತು. ಬಹಳ ಸಮಯವಾಗಿ ಆಗಲೇ ಕತ್ತಲಾಗುತ್ತಾ ಬಂದಿತ್ತು. ಕಾಡುಮೃಗಗಳ ಭಯದಿಂದ ಆತ ಬೇರೆ ದಾರಿ ಕಾಣದೇ, ತನಗೆ ಪರಿಚಯವಿದ್ದ ಒಬ್ಬ ವ್ಯಾಪಾರಿಯ ಮನೆಯಲ್ಲಿ ರಾತ್ರಿ ತಂಗಿದನು. ವ್ಯಾಪಾರಿಯು ಸಜ್ಜನನಿಗೆ ಹಾಲು-ಹಣ್ಣು ಕೊಟ್ಟು, ಅವನು ಬಂದ ಕಾರಣ ವಿಚಾರಿಸಿದ.
ಮುಗ್ಧನಾದ ಅವನು, ಸನ್ಯಾಸಿಯಿಂದ ತಾನು ಶಂಖ ಪಡೆದ ವಿಚಾರವನ್ನೆ ಚಾಚೂ ತಪ್ಪದೇ ಹೇಳಿ ಬಿಟ್ಟ. ಆ ಶಂಖವನ್ನು ಹೇಗಾದರೂ ತಾನು ಪಡೆದುಕೊಳ್ಳಬೇಕೆಂದು ಈ ವ್ಯಾಪಾರಿ ಹೊಂಚು ಹಾಕ ಲು ಪ್ರಾರಂಭಿಸಿದ. ರಾತ್ರಿ ಸಜ್ಜನ ವ್ಯಕ್ತಿ ಮಲಗಿ ಗೊರಕೆ ಹೊಡೆಯಲು ಶುರುಮಾಡಿದ. ಈ ದುರಾಸೆ ವ್ಯಾಪಾರಿ ಮೆಲ್ಲಗೆ ಅವನ ಬಳಿಗೆ ಬಂದು, ಅವನಲ್ಲಿದ್ದ ಶಂಖವನ್ನು ತೆಗೆದುಕೊಂಡು, ಅದರ ಬದಲಿಗೆ ತನ್ನಲಿದ್ದ ಇನ್ನೊಂದು ಶಂಖವನ್ನು ತಂದಿಟ್ಟು ತಾನೂ ಮಲಗಿಬಿಟ್ಟ.
ಬೆಳಗ್ಗೆ ಎದ್ದ ಸಜ್ಜನ, ವ್ಯಾಪಾರಿಗೆ ಧನ್ಯವಾದ ತಿಳಿಸಿ, ಶಂಖದೊಡನೆ ತನ್ನ ಊರಿಗೆ ತಲುಪಿದ. ಹೆಂಡ ತಿಗೆ ಎಲ್ಲ ಹೇಳಿ ಶಂಖವನ್ನು ಎಷ್ಟೇ ಅಲ್ಲಾಡಿಸಿದರೂ ಚಿನ್ನದ ನಾಣ್ಯ ಬೀಳಲೇ ಇಲ್ಲ. ಇದೆ ಆ ವ್ಯಾಪಾರಿಯ ಕೆಲಸವೆಂದು ಬ್ರಾಹ್ಮಣನಿಗೆ ಗೊತ್ತಾಗಿ ಹೋಯಿತು. ‘ಛೇ, ನಾನೆಂಥಾ ಕೆಲಸ ಮಾಡಿ ಬಿಟ್ಟೆ. ಅವನಿಗೆ ಇದನ್ನೆ ಹೇಳುವ ಅವಶ್ಯಕತೆ ಇರಲಿಲ್ಲ. ಶಂಖ ಸಿಕ್ಕ ಖುಷಿಯಲ್ಲಿ ಎಲ್ಲವನ್ನೂ ಅವನಿಗೆ ಹೇಳಿ ನಾನೇ ತಪ್ಪು ಮಾಡಿಬಿಟ್ಟೆ’ ಎಂದುಕೊಂಡು, “ಈಗಲೇ ಅವನಲ್ಲಿಗೆ ಹೋಗಿ ನನ್ನ ಶಂಖವನ್ನು ಕೇಳಿ ತೆಗೆದುಕೊಂಡು ಬರುತ್ತೇನೆ" ಎಂದು ಹೆಂಡತಿಗೆ ಹೇಳಿ ಹೊರಟ.
ಅವನ ಹೆಂಡತಿ ಸ್ವಲ್ಪ ಜಾಣೆ. ಗಂಡನನ್ನು ಆಕೆ ತಡೆದು, “ತಕ್ಷಣವೇ ಹೋಗುವುದು ಬೇಡ, ಈಗ ಹೋಗಿ ನೀವು ಕೇಳಿದರೆ, ಅವನು ನನಗೆ ಗೊತ್ತೇ ಇಲ್ಲ ಎನ್ನಬಹುದು. ಇನ್ನೆರಡು ದಿನ ಬಿಟ್ಟು, ಇದೇ ಶಂಖವನ್ನು ತೆಗೆದುಕೊಂಡು ಹೋಗಿ, ‘ಇದು ಸನ್ಯಾಸಿಗಳು ನನಗೆ ಪುನಃ ಕೊಟ್ಟ ಶಂಖ. ಇದು ದಿನಕ್ಕೆ ಎರಡು ಚಿನ್ನದ ನಾಣ್ಯಗಳನ್ನು ಕೊಡುತ್ತದೆ’ ಎಂದು ಹೇಳಿ. ಆಗ ದುರಾಸೆಯಿಂದ ಆ ವ್ಯಾಪಾರಿ ಈ ಶಂಖವನ್ನೇ ತೆಗೆದುಕೊಳ್ಳುತ್ತಾನೆ. ನೀವು ಬಿಟ್ಟು ಬಂದ ಶಂಖವನ್ನು ತಂದಿಡುತ್ತಾನೆ" ಎಂದು ಹೇಳಿದಳು.
ಅವಳು ಹೇಳಿದಂತೆಯೇ ಆಯಿತು. ದುರಾಸೆಯ ಆಸಾಮಿ ಬೇಸ್ತುಬಿದ್ದ! ವ್ಯಾಪಾರಿಯ ಕೆಟ್ಟತನ ಅವನಿಗೆ ಸರಿಯಾದ ಬುದ್ಧಿ ಕಲಿಸಿತ್ತು! ಇತರರಿಗೆ ಕೇಡು ಬಗೆದರೆ ನಮಗೆ ಕೇಡು ತಪ್ಪಿದ್ದಲ್ಲ ಎನ್ನುವುದಿಲ್ಲವೇ? ನೆನಪಿಟ್ಟುಕೊಳ್ಳಿ, ಮತ್ತೊಬ್ಬರಿಗೆ ಕೆಟ್ಟದ್ದು ಮಾಡಿ ನಾವು ಎಂದೂ ಸುಖವಾಗಿ ರಲು ಸಾಧ್ಯವಿಲ್ಲ.