Roopa Gururaj Column: ಸರಳತೆಗೆ, ಸೇವಾ ಮನೋಭಾವಕ್ಕೆ ಸಿಕ್ಕ ಗೌರವ
ಕ್ಯಾನ್ಸರ್ ರೋಗಿಗಳ ಪಾಲಿನ ಆಶಾಕಿರಣವೇ ಡಾ. ವಿಜಯಲಕ್ಷ್ಮಿ ದೇಶಮಾನೆ. ಕಲಬುರಗಿ ಮೂಲದ ಹೆಸರಾಂತ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮೀ ದೇಶಮಾನೆ ಅವರಿಗೆ 2025ರ ಪದ್ಮಶ್ರೀ ಪುರಸ್ಕಾರ ಒಲಿದು ಬಂದಿದೆ. ತರಕಾರಿ ಮಾರಾಟ ಮಾಡುವ ಕುಟುಂಬದಿಂದ ಕ್ಯಾನ್ಸರ್ ಸರ್ಜನ್, ಪದ್ಮಶ್ರೀ ಪುರ ಸ್ಕಾರದವರೆಗೆ ವಿಜಯಲಕ್ಷ್ಮೀಯವರು ಸಾಗಿದ ದಾರಿಯುದ್ದಕ್ಕೂ ಬರೀ ಕಷ್ಟಗಳ ಸರಮಾಲೆ ಹೊತ್ತೇ ಸಾಧಿಸಿದವರು. ಕ್ಯಾನ್ಸರ್ ರೋಗಿಗಳ ಪಾಲಿನ ಧನ್ವಂತರಿ ಎಂದೇ ಖ್ಯಾತಿ ಗಳಿಸಿದವರು
ಒಂದೊಳ್ಳೆ ಮಾತು
ರೂಪಾ ಗುರುರಾಜ್
ಕಾಟನ್ ಸೀರೆ, ಸದಾ ಹೆಗಲು ಮುಚ್ಚುವ ಸೆರಗು, ಹಣೆಯಲ್ಲಿ ಕುಂಕುಮ, ಮುಖದಲ್ಲೊಂದು ಮಾಸದ ನಗು. ಸದಾಸೀದ ಹೆಣ್ಣು ಮಗಳು. ಹಮ್ಮು ಬಿಮ್ಮು ಬಿಡಿ, ಗಟ್ಟಿಯಾಗಿ ಮಾತನಾಡಿದ್ದೂ ಕೇಳಿದವರಿಲ್ಲ. ಸಣ್ಣ ಮನೆಯೊಂದರಲ್ಲಿ ಸರಳ ಜೀವನ. ಕೃಷ್ಣನ ಪರಮಭಕ್ತೆ. ಕೈಯಲ್ಲಿ ಸ್ಟೆತಾ ಸ್ಕೋಪ್ ಹಿಡಿದು ಆಕೆ ನಡೆದು ಬರುತ್ತಿದ್ದರೆ, ಜೀವನ್ಮರಣದ ನಡುವೆ ಹೋರಾಡುತ್ತಿರುವ ರೋಗಿಗಳ ಕಣ್ಣಲ್ಲಿ ಭರವಸೆಯ ಬೆಳಕು.
ಕ್ಯಾನ್ಸರ್ ರೋಗಿಗಳ ಪಾಲಿನ ಆಶಾಕಿರಣವೇ ಡಾ. ವಿಜಯಲಕ್ಷ್ಮಿ ದೇಶಮಾನೆ. ಕಲಬುರಗಿ ಮೂಲ ದ ಹೆಸರಾಂತ ಕ್ಯಾನ್ಸರ್ ತಜ್ಞೆ ಡಾ. ವಿಜಯಲಕ್ಷ್ಮೀ ದೇಶಮಾನೆ ಅವರಿಗೆ 2025ರ ಪದ್ಮಶ್ರೀ ಪುರಸ್ಕಾ ರ ಒಲಿದು ಬಂದಿದೆ. ತರಕಾರಿ ಮಾರಾಟ ಮಾಡುವ ಕುಟುಂಬದಿಂದ ಕ್ಯಾನ್ಸರ್ ಸರ್ಜನ್, ಪದ್ಮಶ್ರೀ ಪುರಸ್ಕಾರದವರೆಗೆ ವಿಜಯಲಕ್ಷ್ಮೀಯವರು ಸಾಗಿದ ದಾರಿಯುದ್ದಕ್ಕೂ ಬರೀ ಕಷ್ಟಗಳ ಸರಮಾಲೆ ಹೊತ್ತೇ ಸಾಧಿಸಿದವರು. ಕ್ಯಾನ್ಸರ್ ರೋಗಿಗಳ ಪಾಲಿನ ಧನ್ವಂತರಿ ಎಂದೇ ಖ್ಯಾತಿ ಗಳಿಸಿದವರು.
ಇದನ್ನೂ ಓದಿ: Roopa Gururaj Column: ಭಕ್ತಿಯಿಂದ ಸಮರ್ಪಿಸಿಕೊಂಡಾಗ ಮುಕ್ತಿ ನೀಡುವ ಭಗವಂತ
ಅದಕ್ಕೆ ಕಾರಣ ಅವರ ಶ್ರದ್ಧೆ, ಶ್ರಮ, ತ್ಯಾಗ, ಮಾನವೀಯ ಕಳಕಳಿ, ವೈದ್ಯವೃತ್ತಿಯನ್ನೇ ಉಸಿರಾಗಿಸಿ ಕೊಂಡು ಬದುಕಿದ ಅಪರೂಪದ ವೈದ್ಯೆ ಎಂಬ ಹೆಗ್ಗಳಿಕೆ. ಎಂ.ಬಿ.ಬಿ.ಎಸ್, ಎಂ.ಎಸ್ (ಜನರಲ್ ಸರ್ಜರಿ) ಎಫ್.ಎ.ಐ.ಎಸ್ ಪದವಿ ಪಡೆದು ಕಿದ್ವಾಯಿ ಮೆಮೋರಿಯಲ್ ಇನ್ಸಿಟ್ಯೂಟ್ ಆಫ್ ಎನ್ನಾಲಜಿಯಲ್ಲಿ ಸರ್ಜರಿಯ ಪ್ರಾಧ್ಯಾಪಕರಾಗಿದ್ದ ಅವರು ಕಿದ್ವಾಯಿ ನಿರ್ದೇಶಕಿಯಾಗಿಯೂ ಕೆಲಸ ನಿರ್ವಹಿಸಿದ್ದಾರೆ. ವಿಜಯಲಕ್ಷ್ಮಿಯವರ ಹೆತ್ತವರು ಕಲಬುರಗಿಯ ಕೊಳಗೇರಿ ಪ್ರದೇಶದಲ್ಲಿ ವಾಸವಾಗಿದ್ದರು.
ತಂದೆ ಬಾಬುರಾವ್ ಕಟ್ಟಿಗೆ ಕಡಿಯುವುದು, ಕೂಲಿ ಮಾಡುತ್ತಾ, ಮಿಲ್ ಒಂದರಲ್ಲಿ ಕಾರ್ಮಿಕನಾಗಿ ಸೇರಿದರು. ತಾಯಿ ರತ್ನಮ್ಮ ತರಕಾರಿ ಮಾರಾಟದಿಂದ ಕುಟುಂಬಕ್ಕೆ ನೆರವಾಗಿದ್ದರು. ಬಾಬುರಾವ್-ರತ್ನಮ್ಮ ದಂಪತಿಗೆ ವಿಜಯಲಕ್ಷ್ಮಿ ಸೇರಿದಂತೆ ಏಳು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ. ದಿನದ ದುಡಿಮೆಯನ್ನೇ ನೆಚ್ಚಿಕೊಂಡು ಬದುಕುತ್ತಿದ್ದ ಕುಟುಂಬದಲ್ಲಿ ವಿಜಯಲಕ್ಷ್ಮಿ ಅವರು ವೈದ್ಯೆಯಾಗಿ ಬಡವರಿಗೆ ಒಳ್ಳೆಯ ಸೇವೆ ಒದಗಿಸಬೇಕು ಎಂಬುದು ಹೆತ್ತವರ ದೊಡ್ಡ ಕನಸು.
ಕಲಬುರಗಿಯ ಚಕ್ರಕಟ್ಟಾ ಮಾರುತಿ ಮಂದಿರದ ಬಳಿ ತರಕಾರಿ ಮಾರುತ್ತಾ ಜೀವನ ಸಾಗಿಸುತ್ತಿದ್ದ ತಾಯಿಯೊದಿಗೆ ತರಕಾರಿ ಮಾರುತ್ತಲೇ ಕನ್ನಡ ಮೀಡಿಯಂನಲ್ಲಿ ಹೈಸ್ಕೂಲ್ ಶಿಕ್ಷಣ ಪೂರೈಸಿದ ವಿಜಯಲಕ್ಷಿಯವರು, ನಂತರ ಹುಬ್ಬಳ್ಳಿಯಿಂದ ವೈದ್ಯಕೀಯ ಪದವಿ ಪಡೆದರು. ಮಗಳು ವೈದ್ಯಳಾಗ ಬೇಕೆಂಬ ಆಸೆಗೆ ತಾಯಿ ರತ್ನಮ್ಮ ತಮ್ಮ ಮಂಗಳಸೂತ್ರ ಮಾರಿ ಅದರಿಂದ ಬಂದ ಹಣದಿಂದ ವಿಜಯಲಕ್ಷ್ಮಿಯವರ ವೈದ್ಯಕೀಯ ಶಿಕ್ಷಣದ ಶುಲ್ಕ ಭರಿಸಿದ್ದರು.
ತರಕಾರಿ ಮಾರುತ್ತಲೇ ಓದುತ್ತಾ, ಡಾಕ್ಟರ್ ಪದವಿ ಪಡೆದ ಡಾ. ವಿಜಯಲಕ್ಷ್ಮೀ ದೇಶಮಾನೆ ಕ್ಯಾನ್ಸರ್ ಸರ್ಜನ್ ಆಗಿ ಮಾಡಿರುವ ಸಾಧನೆ, ಸಾಗಿದ ದಾರಿ, ಏರಿದ ಎತ್ತರ ಎಂತಹವರಿಗೂ ಮಾದರಿ. ರೋಗಿ ಗಳ ಸೇವೆಯನ್ನೇ ಪರಮ ಧ್ಯೇಯವಾಗಿಸಿಕೊಂಡಿದ್ದ ಡಾ. ವಿಜಯಲಕ್ಷ್ಮಿ, ದಿನದ ಬಹುತೇಕ ಸಮಯ ಆಸ್ಪತ್ರೆಯಲ್ಲೇ ಕಳೆಯುತ್ತಿದ್ದರು.
ಸಮಯದ ಪರಿವೆಯೇ ಇಲ್ಲದೇ ಚಿಕಿತ್ಸೆ ನೀಡಬೇಕೆಂಬ ಉದ್ದೇಶಕ್ಕೆ ಡಾ. ವಿಜಯಲಕ್ಷ್ಮಿ ವಾಚ್ ಕಟ್ಟುತ್ತಲೇ ಇರಲಿಲ್ಲವಂತೆ. ಅವರು ಗಳಿಸಿದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ದೇಶ, ವಿದೇಶಗಳಲ್ಲೂ ಅವರ ಸಾಧನೆ ಹೆಗ್ಗುರುತಾಗಿದೆ. ತಮ್ಮ ಬದುಕನ್ನೇ ವೈದ್ಯ ವೃತ್ತಿಗೆ ಸಮರ್ಪಿಸಿದ ಡಾ. ವಿಜಯಲಕ್ಷ್ಮಿ, ವೈದ್ಯೋ ನಾರಾಯಣೋ ಹರಿ ಎನ್ನುವ ವಾಕ್ಯಕ್ಕೆ ಅನ್ವರ್ಥವಾಗಿ ಬದುಕಿದವರು.
ಬದುಕಿನಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದು ತಮ್ಮ ಸೇವೆಯನ್ನೇ ಗುರಿಯಾಗಿಸಿಕೊಂಡು ಇಂದಿಗೂ ಸಮಾಜದ ನಡುವೆ, ತಮ್ಮ ಸರಳತೆಯಿಂದ ಮೇರು ಶಿಖರವಾಗಿ ನಿಂತಿರುವ ಡಾಕ್ಟರ್ ವಿಜಯಲಕ್ಷ್ಮಿ ಎಂತಹ ಹೆಣ್ಣು ಮಕ್ಕಳ ಸಂತತಿ ಸಾವಿರವಾಗಲಿ.
ನಮ್ಮ ಮನೆಯ ಮಕ್ಕಳಿಗೆ ಯಾವುದೋ ಇಂಗ್ಲಿಷ್ ಚಿತ್ರದ ಸ್ಪೈಡರ್ ಮ್ಯಾನ್, ಸೂಪರ್ ಮ್ಯಾನ್ ಚಿತ್ರರಂಗದ ನಾಯಕ ನಟರು, ನಟಿ ಯರು ಮಾದರಿಯಾಗದೆ ಇಂತಹ ಸಾಧಕರ ಬದುಕನ ಪರಿಚಯಿಸಬೇಕು. ಇವರನ್ನು ನೋಡುತ್ತಾ ನಮ್ಮ ಮಕ್ಕಳು ಗುರು-ಗುರಿ ಎರಡನ್ನೂ ಗೌರವಿಸುತ್ತಾ ಬದುಕುವುದನ್ನು ಕಲಿಯಬೇಕು.