ಸಂಪಾದಕರ ಸದ್ಯಶೋಧನೆ
ಪ್ರಪಂಚದಾದ್ಯಂತ ಸಾವಿರಾರು ಅಂಕಣಕಾರರಿದ್ದಾರೆ. ರಾಜಕೀಯ, ಸಮಾಜ, ಸಿನಿಮಾ, ಅಥವಾ ಕ್ರೀಡೆಯಂಥ ಸಾಂಪ್ರದಾಯಿಕ ವಿಷಯಗಳ ಬಗ್ಗೆ ಬರೆಯುವವರೇ ಹೆಚ್ಚು. ಆದರೆ, ‘ದೈನಂದಿನ ಅತ್ಯಂತ ಸಣ್ಣ, ಆಡುಮಾತಿನ ಹಾಗೂ ಕಣ್ಣಿಗೆ ಕಾಣದ ವೈಜ್ಞಾನಿಕ ಅಥವಾ ಮಾನವೀಯ ನಡೆವಳಿಕೆಗಳ ಹಿಂದಿನ ಅಸಲಿ ಮರ್ಮವೇನು?’ ಎಂಬ ಅತ್ಯಂತ ವಿಶಿಷ್ಟ ವಿಷಯವನ್ನು ಇಟ್ಟುಕೊಂಡು ವಿಶ್ವಪ್ರಸಿದ್ಧರಾದ ಅಂಕಣಕಾರರೊಬ್ಬರಿದ್ದಾರೆ. ಅವರು ಮೇರಿ ರೋಚ್. ಅಮೆರಿಕದ ಹೆಸರಾಂತ ಲೇಖಕಿ ಮತ್ತು ಅಂಕಣಕಾರರಾದ ಮೇರಿ ರೋಚ್, ವಿಜ್ಞಾನ ಮತ್ತು ಮಾನವ ಶರೀರಶಾಸ್ತ್ರದಂಥ ಕ್ಲಿಷ್ಟ ವಿಷಯಗಳನ್ನು ಸಾಮಾನ್ಯ ಜನರಿಗೆ ಕೇವಲ ಅರ್ಥವಾಗುವಂತೆ ಮಾತ್ರವಲ್ಲ, ಅತ್ಯಂತ ಹಾಸ್ಯಸ್ಪದ, ರೋಚಕ ಮತ್ತು ವಿಶಿಷ್ಟ ಶೈಲಿಯಲ್ಲಿ ಉಣಬಡಿಸುವಲ್ಲಿ ಸಿದ್ಧಹಸ್ತರು.
ಸಾಮಾನ್ಯವಾಗಿ ವಿಜ್ಞಾನ ಎಂದರೆ ಜನರಿಗೆ ಗಂಭೀರ, ಒಣ ವಿಷಯ ಮತ್ತು ಪ್ರಯೋಗಾಲಯದ ಸೂತ್ರಗಳು ನೆನಪಾಗುತ್ತವೆ. ಆದರೆ ಮೇರಿ ರೋಚ್ ಅವರ ಅಂಕಣಗಳು ಮತ್ತು ಬರವಣಿಗೆಯ ವಿಷಯಗಳೇ ತೀರ ವಿಚಿತ್ರ ಹಾಗೂ ವಿಸ್ಮಯಕಾರಿ.
ಇದನ್ನೂ ಓದಿ: Vishweshwar Bhat Column: ಎಲ್ಲಿಯ ಫ್ರಾನ್ಸ್, ಎಲ್ಲಿಯ ಕೆನಡಾ ?
ಅವರ ಬರವಣಿಗೆಯ ಕೆಲವು ವಿಶಿಷ್ಟ ವಿಷಯಗಳ ಸ್ಯಾಂಪಲ್ಲುಗಳೆಂದರೆ, ಮನುಷ್ಯ ಸತ್ತ ಮೇಲೆ ಆ ದೇಹ ವಿಜ್ಞಾನದ ಪ್ರಯೋಗಗಳಿಗೆ, ಕ್ರ್ಯಾಶ್ ಟೆಸ್ಟ್‌ಗಳಿಗೆ ಅಥವಾ ವೈದ್ಯಕೀಯ ಶಿಕ್ಷಣಕ್ಕೆ ಹೇಗೆ ಬಳಕೆಯಾಗುತ್ತದೆ? ನಾವು ತಿನ್ನುವ ಆಹಾರ ಬಾಯಿಯಿಂದ ಹೊಟ್ಟೆಗೆ ಹೋಗಿ, ಜೀರ್ಣವಾಗಿ ಹೊರಬರುವವರೆಗಿನ ಸಂಪೂರ್ಣ ಪ್ರಕ್ರಿಯೆಯ ಹಿಂದಿನ ತಮಾಷೆಯ ಸತ್ಯಗಳೇನು? ಶೂನ್ಯ ಗುರುತ್ವಾಕರ್ಷಣೆಯಲ್ಲಿ ಗಗನಯಾತ್ರಿಗಳು ಶೌಚಾಲಯ ಬಳಸುವುದು ಹೇಗೆ? ಸ್ನಾನ ಮಾಡುವುದು ಹೇಗೆ? ಪ್ರಕೃತಿ ಮತ್ತು ಮಾನವ ನಡುವಿನ ಸಂಘರ್ಷದಲ್ಲಿ, ಪ್ರಾಣಿಗಳು 'ಕಾನೂನು ಭಂಗ' ಮಾಡಿದಾಗ ವಿಜ್ಞಾನ ಅದನ್ನು ಹೇಗೆ ನಿಭಾಯಿಸುತ್ತದೆ? ಹೀಗೆ ಯಾರೂ ಮುಟ್ಟಲು ಹಿಂಜರಿಯುವ ಅಥವಾ 'ಅಸಹ್ಯ' ಅಥವಾ 'ಅತಿ ಸಾಧಾರಣ' ಎಂದು ನಿರ್ಲಕ್ಷಿಸುವ ವಿಷಯಗಳನ್ನೇ ಆಯ್ದು ಕೊಂಡು, ಅದನ್ನೊಂದು ರೋಮಾಂಚಕಾರಿ ತನಿಖೆಯಂತೆ ಬರೆಯುವುದು ಮೇರಿ ಅವರ ಹೆಗ್ಗಳಿಕೆ. ಮೇರಿ ರೋಚ್ ಅಂಕಣಗಳನ್ನು ಓದುವುದು ಎಂದರೆ ಒಬ್ಬ ಆತ್ಮೀಯ ಗೆಳೆಯನ ಜತೆ ಕಾಫಿ ಕುಡಿಯುತ್ತಾ ತಮಾಷೆಯ ಕಥೆ ಕೇಳಿದಂತೆ.
ತಮ್ಮನ್ನು ತಾವು ಒಬ್ಬ ದೊಡ್ಡ ವಿಜ್ಞಾನಿ ಅಥವಾ ಪಂಡಿತೆ ಎಂದು ಅವರು ಎಂದಿಗೂ ಬಿಂಬಿಸಿ ಕೊಳ್ಳುವುದಿಲ್ಲ. ಬದಲಿಗೆ, ‘ನನಗೂ ಇದರ ಬಗ್ಗೆ ಏನೂ ಗೊತ್ತಿರಲಿಲ್ಲ, ಬನ್ನಿ ಒಟ್ಟಿಗೆ ತಿಳಿಯೋಣ’ ಎಂಬ ಕುತೂಹಲದ ಹಾದಿಯಲ್ಲಿ ಓದುಗರನ್ನು ಕರೆದೊಯ್ಯುತ್ತಾರೆ. ಅವರು ಕೇವಲ ಪುಸ್ತಕ ಗಳನ್ನು ಓದಿ ಅಥವಾ ಇಂಟರ್ನೆಟ್ ನೋಡಿ ಅಂಕಣ ಬರೆಯುವುದಿಲ್ಲ. ಸ್ವತಃ ಘಟನಾ ಸ್ಥಳಕ್ಕೆ ಹೋಗುತ್ತಾರೆ. ಶವಗಾರಗಳಿಗೆ ಭೇಟಿ ನೀಡುತ್ತಾರೆ, ಗಗನಯಾತ್ರಿಗಳ ಆಹಾರವನ್ನು ಸವಿದು ನೋಡುತ್ತಾರೆ ಮತ್ತು ವಿಜ್ಞಾನಿಗಳ ಜತೆ ಕಠಿಣ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಾರೆ.
ಈ ಪ್ರತ್ಯಕ್ಷ ಅನುಭವ ಅವರ ಅಂಕಣಗಳಿಗೆ ಅಪಾರ ಜೀವ ನೀಡುತ್ತದೆ. ರೋಚ್ ಬರವಣಿಗೆಯ ಅತಿ ದೊಡ್ಡ ಆಕರ್ಷಣೆ ಎಂದರೆ ಅವರ 'ಫುಟ್‌ನೋಟ್‌ಗಳು'. ಪ್ರಮುಖ ಲೇಖನದ ಮಧ್ಯೆ ಸಿಗದ ಅತ್ಯಂತ ತಮಾಷೆಯ ಮತ್ತು ರೋಚಕ ಸಣ್ಣ ಮಾಹಿತಿಗಳನ್ನು ಪುಟದ ಕೆಳಗೆ ಅಡಿಟಿಪ್ಪಣಿಯಾಗಿ ನೀಡುತ್ತಾರೆ.
ಹಲವು ಬಾರಿ ಮೂಲ ಲೇಖನಕ್ಕಿಂತ ಈ ಅಡಿಟಿಪ್ಪಣಿಗಳೇ ಓದುಗರನ್ನು ಹೆಚ್ಚು ನಗಿಸುತ್ತವೆ! ಮೇರಿ ರೋಚ್ ತಮ್ಮ ವಿಶಿಷ್ಟ ಅಂಕಣಗಳ ಆಧಾರದ ಮೇಲೆಯೇ ಹಲವು ಜಾಗತಿಕ ಬೆಸ್ಟ್ ಸೆಲ್ಲರ್ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಪ್ರತಿಯೊಂದು ಪುಸ್ತಕದ ಶೀರ್ಷಿಕೆಯೇ ಅವರ ವಿಶಿಷ್ಟತೆಗೆ ಸಾಕ್ಷಿ - 'ಸ್ಟಿಫ್' (Stiff: The Curious Lives of Human Cadavers): ಮಾನವ ಶವಗಳು ವಿಜ್ಞಾನಕ್ಕೆ ಹೇಗೆ ನೆರವಾಗುತ್ತವೆ ಎಂಬುದರ ಸುತ್ತಲಿನ ಕಥನ. ಅತ್ಯಂತ ಸೂಕ್ಷ್ಮ ವಿಷಯವನ್ನು ಗೌರವಯುತವಾಗಿ, ಆದರೆ ತೀವ್ರ ಹಾಸ್ಯದೊಂದಿಗೆ ನಿರೂಪಿಸಿದ ಪರಿ ಅನನ್ಯ. 'ಗಲ್ಪ್' (Gulp: Adventures on the Alimentary Canal) ಮಾನವ ಜೀರ್ಣಾಂಗ ವ್ಯೂಹದ ವಿಚಿತ್ರ ಮತ್ತು ರೋಚಕ ಪಯಣ. 'ಪ್ಯಾಕಿಂಗ್ ಫಾರ್ ಮಾರ್ಸ್' (Packing for Mars) ಬಾಹ್ಯಾಕಾಶ ಪಯಣದಲ್ಲಿ ಮಾನವ ಶರೀರ ಮತ್ತು ಮನಸ್ಸು ಎದುರಿಸುವ ತಮಾಷೆಯ ಹಾಗೂ ಕಠಿಣ ಸವಾಲುಗಳು.
'ಫಜ್' (Fuzz: When Nature Breaks the Law) ಕಾಡಾನೆಗಳು, ಕರಡಿಗಳು ಅಥವಾ ಕೋತಿಗಳು ಮನುಷ್ಯರ ಜಾಗಕ್ಕೆ ಅತಿಕ್ರಮಣ ಮಾಡಿದಾಗ ಹುಟ್ಟಿಕೊಳ್ಳುವ ವಿಜ್ಞಾನ ಮತ್ತು ಕಾನೂನಿನ ತೊಡಕುಗಳು. ತಮ್ಮ ವಿಶಿಷ್ಟ ವಿಷಯ ಆಯ್ಕೆ, ಲಘು ಹಾಸ್ಯ ಮತ್ತು ಅದ್ಭುತ ವರದಿಗಾರಿಕೆಯಿಂದ ಮೇರಿ ರೋಚ್ ಇಡೀ ವಿಶ್ವದ ಅಂಕಣ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರತ್ಯೇಕ ಮತ್ತು ವಿಶಿಷ್ಟ ಚಾಪನ್ನು ಮೂಡಿಸಿದ್ದಾರೆ