Vishweshwar Bhat Column: ಎಲ್ಲಿಯ ಫ್ರಾನ್ಸ್, ಎಲ್ಲಿಯ ಕೆನಡಾ ?
ಐತಿಹಾಸಿಕವಾಗಿ, 16 ನೇ ಶತಮಾನದಲ್ಲಿ ಫ್ರೆಂಚ್ ಅನ್ವೇಷಕ ಜಾಕ್ವೆಸ್ ಕಾರ್ಟಿಯರ್ ಈ ದ್ವೀಪಗಳನ್ನು ಫ್ರಾನ್ಸ್ ಸಾಮ್ರಾಜ್ಯದ ಪರವಾಗಿ ತನ್ನ ವಶಕ್ಕೆ ತೆಗೆದುಕೊಂಡ. 17 ಮತ್ತು 18 ನೇ ಶತಮಾನಗಳಲ್ಲಿ ಬ್ರಿಟನ್ ಮತ್ತು ಫ್ರಾನ್ಸ್ ನಡುವೆ ಉತ್ತರ ಅಮೆರಿಕದ ಮೇಲೆ ಆಧಿಪತ್ಯ ಸಾಧಿಸಲು ನಡೆದ ಏಳು ವರ್ಷಗಳ ಸುದೀರ್ಘ ಯುದ್ಧಗಳ ಪರಿಣಾಮವಾಗಿ, ಫ್ರಾನ್ಸ್ ತಾನು ಹೊಂದಿದ್ದ ಇಡೀ ಕೆನಡಾ (ನ್ಯೂ ಫ್ರಾನ್ಸ್) ಭೂಭಾಗವನ್ನು ಬ್ರಿಟನ್‌ಗೆ ಬಿಟ್ಟುಕೊಡಬೇಕಾಯಿತು.
-
ಸಂಪಾದಕರ ಸದ್ಯಶೋಧನೆ
ಕೆನಡ ದೇಶದ ನ್ಯೂಫೌಂಡ್‌ಲ್ಯಾಂಡ್ ಕರಾವಳಿಯಿಂದ ಕೇವಲ 25 ಕಿಮೀ ದೂರದಲ್ಲಿರುವ ಸೇಂಟ್ ಪಿಯರೆ ಮತ್ತು ಮಿಕ್ವೆಲನ್ ಎಂಬ ಸಣ್ಣ ದ್ವೀಪಸಮೂಹವು ಭೌಗೋಳಿಕವಾಗಿ ಕೆನಡದ ಭಾಗದಂತೆ ಕಂಡರೂ, ಕಾನೂನಾತ್ಮಕವಾಗಿ ಸಂಪೂರ್ಣವಾಗಿ ಫ್ರಾನ್ಸ್ ದೇಶಕ್ಕೆ ಸೇರಿದೆ. ಕೇವಲ 6,000 ಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಈ ಸಣ್ಣ ದ್ವೀಪ ಪ್ರದೇಶವು ಉತ್ತರ ಅಮೆರಿಕ ಖಂಡದಲ್ಲಿ ಫ್ರೆಂಚ್ ಸಾರ್ವಭೌಮತ್ವ ಉಳಿದುಕೊಂಡಿರುವ ಏಕೈಕ ಭೂಭಾಗವಾಗಿದೆ.
ಈ ವಿಚಿತ್ರ ಭೌಗೋಳಿಕ ಪರಿಸ್ಥಿತಿ ಹೇಗೆ ನಿರ್ಮಾಣವಾಯಿತು ಮತ್ತು ಕೆನಡದ ತೀರದಲ್ಲಿ ಫ್ರೆಂಚ್ ಕಾನೂನುಗಳು ಹೇಗೆ ಜಾರಿಯಲ್ಲಿವೆ ಎಂಬುದು ಆಸಕ್ತಿಕರ. ಐತಿಹಾಸಿಕವಾಗಿ, 16 ನೇ ಶತಮಾನದಲ್ಲಿ ಫ್ರೆಂಚ್ ಅನ್ವೇಷಕ ಜಾಕ್ವೆಸ್ ಕಾರ್ಟಿಯರ್ ಈ ದ್ವೀಪಗಳನ್ನು ಫ್ರಾನ್ಸ್ ಸಾಮ್ರಾಜ್ಯದ ಪರವಾಗಿ ತನ್ನ ವಶಕ್ಕೆ ತೆಗೆದುಕೊಂಡ. 17 ಮತ್ತು 18 ನೇ ಶತಮಾನಗಳಲ್ಲಿ ಬ್ರಿಟನ್ ಮತ್ತು ಫ್ರಾನ್ಸ್ ನಡುವೆ ಉತ್ತರ ಅಮೆರಿಕದ ಮೇಲೆ ಆಧಿಪತ್ಯ ಸಾಧಿಸಲು ನಡೆದ ಏಳು ವರ್ಷಗಳ ಸುದೀರ್ಘ ಯುದ್ಧಗಳ ಪರಿಣಾಮವಾಗಿ, ಫ್ರಾನ್ಸ್ ತಾನು ಹೊಂದಿದ್ದ ಇಡೀ ಕೆನಡಾ (ನ್ಯೂ ಫ್ರಾನ್ಸ್) ಭೂಭಾಗವನ್ನು ಬ್ರಿಟನ್‌ಗೆ ಬಿಟ್ಟುಕೊಡಬೇಕಾಯಿತು. ಆದರೆ, 1763 ರ ಪ್ಯಾರಿಸ್ ಒಪ್ಪಂದದ ಪ್ರಕಾರ, ಕರಾವಳಿ ಭಾಗದಲ್ಲಿ ಮೀನುಗಾರಿಕೆ ನಡೆಸಲು ಫ್ರೆಂಚ್ ಮೀನುಗಾರರಿಗೆ ಅನುಕೂಲವಾಗುವಂತೆ ಈ ಸೇಂಟ್ ಪಿಯರೆ ಮತ್ತು ಮಿಕ್ವೆಲನ್ ದ್ವೀಪಗಳನ್ನು ಮಾತ್ರ ಫ್ರಾನ್ಸ್ ತನ್ನ ಬಳಿಯೇ ಉಳಿಸಿಕೊಂಡಿತು. ಕಾಲಕ್ರಮೇಣ ಕೆನಡ ಬ್ರಿಟಿಷ್ ಆಡಳಿತದಿಂದ ಸ್ವತಂತ್ರಗೊಂಡು ಬೃಹತ್ ರಾಷ್ಟ್ರವಾಗಿ ಬೆಳೆದರೂ, ಈ ದ್ವೀಪಸಮೂಹ ಮಾತ್ರ ಫ್ರಾನ್ಸ್‌ನ ನಿಯಂತ್ರಣದಲ್ಲೇ ಉಳಿಯಿತು.
ಪ್ರಸ್ತುತ, ಇದನ್ನು ಫ್ರಾನ್ಸ್‌ನ 'ಸಮುದ್ರಾಂತರ ಪ್ರದೇಶ' (French Overseas Collectivity) ಎಂದು ವರ್ಗೀಕರಿಸಲಾಗಿದೆ. ಅಂದರೆ, ಕಾನೂನಾತ್ಮಕವಾಗಿ ಇದು ಪ್ಯಾರಿಸ್‌ನಿಂದಲೇ ಆಡಳಿತಕ್ಕೊಳಪಡುತ್ತದೆ ಮತ್ತು ಇಲ್ಲಿನ ನಿವಾಸಿಗಳು ಫ್ರೆಂಚ್ ನಾಗರಿಕರಾಗಿದ್ದು, ಯುರೋಪಿಯನ್ ಯೂನಿಯನ್ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕನ್ನು ಸಹ ಹೊಂದಿದ್ದಾರೆ. ಇಲ್ಲಿನ ದೈನಂದಿನ ಜೀವನ ಸಂಪೂರ್ಣವಾಗಿ ಯುರೋಪಿಯನ್ ಮತ್ತು ಫ್ರೆಂಚ್ ಸಂಸ್ಕೃತಿಯನ್ನೇ ಪ್ರತಿಬಿಂಬಿಸುತ್ತದೆ. ಕೆನಡದಲ್ಲಿ ಕೆನಡಿಯನ್ ಡಾಲರ್ ಚಲಾವಣೆಯಲ್ಲಿದ್ದರೆ, ಈ ದ್ವೀಪಗಳಲ್ಲಿ ಅಧಿಕೃತ ನಾಣ್ಯ 'ಯುರೋ' ಆಗಿದೆ.
ಸ್ಥಳೀಯ ಆಡಳಿತ, ಶಿಕ್ಷಣ ವ್ಯವಸ್ಥೆ, ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಗಳೆಲ್ಲವೂ ಪ್ಯಾರಿಸ್ ನೀಡುವ ಮಾರ್ಗದರ್ಶನದಂತೆಯೇ ಕಾರ್ಯನಿರ್ವಹಿಸುತ್ತವೆ. ಇಲ್ಲಿನ ಶಾಲಾ ಮಕ್ಕಳು ಫ್ರಾನ್ಸ್‌ನ ರಾಷ್ಟ್ರೀಯ ಪಠ್ಯಕ್ರಮವನ್ನೇ ಅಭ್ಯಾಸ ಮಾಡುತ್ತಾರೆ ಹಾಗೂ ವಿದ್ಯುತ್ ಪ್ಲಗ್‌ಗಳಿಂದ ಹಿಡಿದು ರಸ್ತೆ ಸಂಚಾರದ ನಿಯಮಗಳವರೆಗೆ ಎಲ್ಲವೂ ಯುರೋಪಿಯನ್ ಶೈಲಿಯಲ್ಲೇ ಇವೆ. ಈ ದ್ವೀಪಸಮೂಹದ ಭಾಷೆ ಮತ್ತು ಜೀವನಶೈಲಿ ಸಂಪೂರ್ಣವಾಗಿ ಫ್ರೆಂಚ್ ಮಯವಾಗಿದೆ.
ಉತ್ತರ ಅಮೆರಿಕದ ಇಂಗ್ಲಿಷ್ ಪ್ರಾಬಲ್ಯದ ನಡುವೆಯೂ ಇಲ್ಲಿನ ಜನರು ಪ್ಯಾರಿಸ್ ಫ್ರೆಂಚ್ ಭಾಷೆಯನ್ನೇ ತಮ್ಮ ಮಾತೃಭಾಷೆಯಾಗಿ ಬಳಸುತ್ತಾರೆ. ಇಷ್ಟೇ ಅಲ್ಲದೆ, ಕೆನಡದಿಂದ ಇಲ್ಲಿಗೆ ಪ್ರಯಾಣಿಸುವಾಗ ಕೆನಡಿಯನ್ ನಾಗರಿಕರೂ ಸೇರಿದಂತೆ ಎಲ್ಲರೂ ಪಾಸ್‌ಪೋರ್ಟ್ ತೋರಿಸಿ ಇಮಿಗ್ರೇಷನ್ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ ಅರ್ಥಾತ್, ಕೆನಡದ ತೀರದಿಂದ ಕೆಲವೇ ನಿಮಿಷಗಳ ದೋಣಿ ಪ್ರಯಾಣದಲ್ಲಿ ನೀವು ಸಂಪೂರ್ಣವಾಗಿ ಯುರೋಪಿಯನ್ ಯೂನಿಯನ್ ಭೂಭಾಗಕ್ಕೆ ಕಾಲಿಡುತ್ತೀರಿ. ಅಮೆರಿಕದಲ್ಲಿ 1920 ರ ದಶಕದಲ್ಲಿ ಮದ್ಯಪಾನ ನಿಷೇಧ ಜಾರಿಯಲ್ಲಿ ದ್ದಾಗ, ಈ ದ್ವೀಪಸಮೂಹವು ಜಗತ್ತಿನ ಗಮನ ಸೆಳೆದಿತ್ತು.
ಬ್ರಿಟನ್ ಮತ್ತು ಕೆನಡದ ನಿಯಮಗಳಿಗೆ ಒಳಪಡದ ಈ ಫ್ರೆಂಚ್ ದ್ವೀಪವನ್ನು ಕಳ್ಳಭಟ್ಟಿ ಮದ್ಯ ಸರಬರಾಜು ಮಾಡುವ ಪ್ರಮುಖ ಕೇಂದ್ರವನ್ನಾಗಿ ಬಳಸಿಕೊಳ್ಳಲಾಯಿತು. ಪ್ರಸಿದ್ಧ ಗ್ಯಾಂಗ್‌ಸ್ಟರ್ ಅಲ್ ಕಪೋನ್ ಕೂಡ ಕೆನಡದ ಕರಾವಳಿಯಲ್ಲಿದ್ದ ಈ ಫ್ರೆಂಚ್ ದ್ವೀಪದ ಮೂಲವೇ ಮದ್ಯವನ್ನು ಅಮೆರಿಕಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಎಂಬುದು ಐತಿಹಾಸಿಕವಾಗಿ ದಾಖಲಾಗಿದೆ. ಆರ್ಥಿಕವಾಗಿ ಈ ದ್ವೀಪ ಗಳು ದೀರ್ಘಕಾಲದಿಂದ ಅಟ್ಲಾಂಟಿಕ್ ಸಾಗರದ 'ಕಾಡ್' ಮೀನುಗಾರಿಕೆಯನ್ನೇ ನೆಚ್ಚಿಕೊಂಡಿದ್ದವು. ಆದರೆ 1990 ರ ದಶಕದಲ್ಲಿ ಮೀನುಗಳ ಸಂಖ್ಯೆ ಕ್ಷೀಣಿಸಿದಾಗ ಕೆನಡ ಮತ್ತು ಫ್ರಾನ್ಸ್ ನಡುವೆ ಜಲ ಗಡಿ ಹಾಗೂ ಮೀನುಗಾರಿಕೆಯ ಹಕ್ಕುಗಳ ಕುರಿತು ತೀವ್ರ ವಿವಾದ ಉಂಟಾಯಿತು.