Thimmanna Bhagwat Column: ಅತಿಯಾದ ಪರಿಸರ ವಾದ ಪ್ರಗತಿಗರ ಮಾರಕವಲ್ಲವೇ ?
ಅಭಿವೃದ್ಧಿಗಾಗಿ ಪರಿಸರ ನಾಶದ ವಿಷಯದಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ಅನೇಕ ತೀರ್ಪು ಗಳನ್ನು ನೀಡಿದೆ. ವೆಲ್ಲೋರ್ ನಾಗರಿಕ ಕಲ್ಯಾಣ ಸಮಿತಿ ವರ್ಸಸ್ ಭಾರತ ಸರಕಾರ (ಚರ್ಮ ಕೈಗಾರಿಕೆ ಯಿಂದ ಜಲ ಮಾಲಿನ್ಯ), ಎಂ.ಸಿ.ಮೆಹತಾ ವರ್ಸಸ್ ಭಾರತ ಸರಕಾರ (ಗಂಗಾ ನದಿ ಮಾಲಿನ್ಯ), ಆಂಧ್ರ ಪ್ರದೇಶ ಮಾಲಿನ್ಯ ನಿಯಂತ್ರಣ ಮಾಂಡಲಿ ವರ್ಸಸ್ ಎಂ.ವೈ.ನಾಯ್ಡು ಮುಂತಾದ ಅನೇಕ ಪ್ರಕರಣ ಗಳಲ್ಲಿ ಅಭಿವೃದ್ಧಿಯ ಕಾರಣಕ್ಕೆ ಜೀವರಕ್ಷಕ ಜಲ ಮತ್ತು ಪರಿಸರ ಮಾಲಿನ್ಯವನ್ನು ಒಪ್ಪಲಾಗದು ಎಂಬ ತೀರ್ಪುಗಳನ್ನು ಸುಪ್ರೀಂ ಕೋರ್ಟು ನೀಡಿದೆ.
-
ಕಾನೂನ್ ಸೆನ್ಸ್
ತಿಮ್ಮಣ್ಣ ಭಾಗ್ವತ್
ಸಮುದ್ರವಸನೇ ದೇವಿ ಪರ್ವತಸ್ತನಮಂಡಲೇ ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ’. ಭೂದೇವಿಗೆ ಪಾದಸ್ಪರ್ಶ ಮಾಡುವುದರಿಂದ ಆಗುವ ಅಪರಾಧಕ್ಕಾಗಿ ಕ್ಷಮೆ ಕೇಳುವ ಪರಂಪರೆ ನಮ್ಮದು. ಅರಣ್ಯವೆಂದರೆ ವನದೇವತೆ ಎಂಬ ಭಾವನೆಯೇ ನಮ್ಮ ಪರಂಪರೆ ಅರಣ್ಯಗಳಿಗೆ ನೀಡಿದ ಮಹತ್ವವನ್ನು ಹೇಳುತ್ತದೆ.
ನಿಸರ್ಗ ನೀಡಿದ ಪರಿಸರ ಸಂಪತ್ತನ್ನು ಅನುಭವಿಸುವಾಗ ಅದರ ಪಾವಿತ್ರ್ಯದ ರಕ್ಷಣೆ ಮತ್ತು ಅರಣ್ಯ, ಜಲ ಮೂಲ ಹಾಗೂ ಅವಲಂಬಿತ ಜೀವ ಸಂಕುಲವನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವದು ಪ್ರತಿಯೊಬ್ಬರ ಕರ್ತವ್ಯ. ಈ ನಿಟ್ಟಿನಲ್ಲಿ ಜಗತ್ತಿನಾದ್ಯಂತ ಅನೇಕ ಸಂಸ್ಥೆಗಳು ಪ್ರಾಮಾಣಿಕ ಹೋರಾಟ ಮಾಡುತ್ತ ಬಂದಿವೆ. ದುರಾಸೆಯಿಂದ ಪರಿಸರವನ್ನು ನಾಶಮಾಡುವ ಹಕ್ಕು ಯಾರಿಗೂ ಇಲ್ಲ ಎಂಬುದು ನಿಜವಾದರೂ ಜೀವನಕ್ಕೆ ಅಗತ್ಯವಾದ ಸಂಪರ್ಕ, ನೀರಾವರಿ, ವಿದ್ಯುತ್‌ನಂಥ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಕೆಲಮಟ್ಟಿಗಿನ ಪರಿಸರದ ನಾಶವನ್ನು ಅನಿವಾರ್ಯವಾಗಿ ಸಹಿಸಿಕೊಳ್ಳಬೇಕಾಗುತ್ತದೆ.
ಅಭಿವೃದ್ಧಿಗಾಗಿ ಪರಿಸರ ನಾಶದ ವಿಷಯದಲ್ಲಿ ದೇಶದ ಸರ್ವೋಚ್ಚ ನ್ಯಾಯಾಲಯ ಅನೇಕ ತೀರ್ಪು ಗಳನ್ನು ನೀಡಿದೆ. ವೆಲ್ಲೋರ್ ನಾಗರಿಕ ಕಲ್ಯಾಣ ಸಮಿತಿ ವರ್ಸಸ್ ಭಾರತ ಸರಕಾರ (ಚರ್ಮ ಕೈಗಾರಿಕೆಯಿಂದ ಜಲ ಮಾಲಿನ್ಯ), ಎಂ.ಸಿ.ಮೆಹತಾ ವರ್ಸಸ್ ಭಾರತ ಸರಕಾರ (ಗಂಗಾ ನದಿ ಮಾಲಿನ್ಯ), ಆಂಧ್ರಪ್ರದೇಶ ಮಾಲಿನ್ಯ ನಿಯಂತ್ರಣ ಮಾಂಡಲಿ ವರ್ಸಸ್ ಎಂ.ವೈ.ನಾಯ್ಡು ಮುಂತಾದ ಅನೇಕ ಪ್ರಕರಣಗಳಲ್ಲಿ ಅಭಿವೃದ್ಧಿಯ ಕಾರಣಕ್ಕೆ ಜೀವರಕ್ಷಕ ಜಲ ಮತ್ತು ಪರಿಸರ ಮಾಲಿನ್ಯವನ್ನು ಒಪ್ಪಲಾಗದು ಎಂಬ ತೀರ್ಪುಗಳನ್ನು ಸುಪ್ರೀಂ ಕೋರ್ಟು ನೀಡಿದೆ.
ಇದನ್ನೂ ಓದಿ:Thimmanna Bhagwath Column: ವಿದೇಶಿ ದೇಣಿಗೆ ನಿಯಂತ್ರಣಕ್ಕೆ ಅಮೆರಿಕದ ವಿರೋಧವೇಕೆ?
ಅಭಿವೃದ್ಧಿ ಸಮರ್ಥನೀಯವಾಗಿರಬೇಕು (Sustainable) ಎಂಬುದು ಸುಪ್ರೀಂ ಕೋರ್ಟಿನ ಸ್ಪಷ್ಟ ನಿಲುವು. ಆದರೆ ಅದರ ಅರ್ಥ ಏನೂ ಮಾಡದೆ ಸುಮ್ಮನಿರುವದು ಎಂದಲ್ಲ. ನರ್ಮದಾ ಸರೋವರ ಪ್ರಕರಣ ಈ ವಿಷಯದಲ್ಲಿ ಐತಿಹಾಸಿಕವಾದದ್ದು. ಜಲವಿದ್ಯುತ್ ಉತ್ಪಾದನೆಯ ಜೊತೆಗೆ ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳ ಸಹಸ್ರಾರು ಎಕರೆ ಭೂಮಿಗೆ ನೀರಾವರಿ ಒದಗಿಸುವ ನರ್ಮದಾ ಸರೋವರ್ ಯೋಜನೆಗೆ 1961ರ ಹೊತ್ತಿಗೆ ಆಡಳಿತಾತ್ಮಕ ಮಂಜೂರಾತಿ ದೊರೆತು ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅಡಿಗಲ್ಲು ಇಟ್ಟಿದ್ದರು.
ಕೆಲ ಅಂತಾರಾಜ್ಯ ವಿವಾದಗಳು ಬಾಕಿ ಇರುವಂತೆಯೇ 1985ರಲ್ಲಿ ವಿಶ್ವ ಬ್ಯಾಂಕ್ ಈ ಯೋಜನೆಗೆ ಸಾಲ ನೀಡಲು ಒಪ್ಪಿಗೆ ನೀಡಿತ್ತು. ಆದರೆ ಮೇಧಾ ಪಾಟ್ಕರ್ ನೇತೃತ್ವದಲ್ಲಿ ನದೀಪಾತ್ರದ ಪ್ರದೇಶ ಗಳಲ್ಲಿ ತೀವ್ರ ಜನಾಂದೋಲನವನ್ನು ಸಂಘಟಿಸಲಾಯಿತು. ಇದಕ್ಕಿಂತ ಹೆಚ್ಚಾಗಿ 1989ರಲ್ಲಿ ಅಮೆರಿಕದ ಪರಿಸರ ನೀತಿ ತe ಮತ್ತು ಕನ್ಸಲ್ಟೆಂಟ್ ಲಾರಿ ಯುಡಾಲ್ ಅವರ ಪರಿಸರ ರಕ್ಷಣಾ ನಿಧಿಯ (Environmental Defence Fund) ಆಶ್ರಯದಲ್ಲಿ, ಅಮೇರಿಕದ ಕಾಂಗ್ರೆಸ್ಸಿನ ಕಮಿಟಿಯ ಜೊತೆಗೂಡಿ ಒಂದು ವಿಚಾರಣೆಯನ್ನು (Oversight Hearing) ನಡೆಸಲಾಯಿತು.
ಆ ವಿಚಾರಣೆಯಲ್ಲಿ ಮೇಧಾ ಪಾಟ್ಕರ್, ನರ್ಮದಾ ಯೋಜನೆಯ ವಿರುದ್ಧ ಸಾಕ್ಷ್ಯ ನುಡಿದರು. ಜೊತೆಗೆ ನರ್ಮದಾ ಅಂತಾರಾಷ್ಟ್ರೀಯ ಕ್ರಿಯಾ ಸಮಿತಿ, ಫ್ರೆಂಡ್ಸ್ ಆಫ್ ದ ಅರ್ಥ್ ಇಂಟರ್ ನ್ಯಾಶನಲ್, ಜಪಾನಿನ ಓವರ್‌ಸೀಸ್ ಆರ್ಥಿಕ ನಿಧಿ ಮುಂತಾದ ಅಂತಾರಾಷ್ಟ್ರೀಯ ಸಂಸ್ಥೆಗಳ ಸಹಕಾರ ಮತ್ತು ಸಹಯೋಗ ಗಳನ್ನು ಪಡೆಯಲು ಮೇಧಾ ಪಾಟ್ಕರ್ ಯಶಸ್ವಿಯಾದರು.
ಯೋಜನೆಯನ್ನು ನಿಲ್ಲಿಸಲೇ ಬೇಕೆಂದು ಹಠ ತೊಟ್ಟಿದ್ದ ಪಾಟ್ಕರ್, ಅರ್ಧಗೊಂಡ ಯೋಜನೆ ಒಂದು ಸ್ಮಾರಕವಾಗಿ ಹಾಗೇ ಇರಲಿ. ಅದು ಏನನ್ನು ಮಾಡಬಾರದು ಎಂಬುದಕ್ಕೆ ಉದಾಹರಣೆ ಯಾಗಿ ನಿಲ್ಲುತ್ತದೆ ಎಂದು ವ್ಯಂಗ್ಯವಾಡಿದರು. ಇನ್ನೊಬ್ಬ ಪರಿಸರ ಹೋರಾಟಗಾರ ಬಾಬಾ ಅಮಟೆಯವರ ಜೊತೆಗೆ ಅವರು ಕೈಗೊಂಡ ಆಮರಣಾಂತ ಉಪವಾಸದ ಹೋರಾಟಕ್ಕೆ ವಿಶ್ವಾದ್ಯಂತ ದೊರೆತ ಪ್ರಚಾರದ ಪರಿಣಾಮವಾಗಿ ಅದಾಗಲೇ ಅರ್ಧ ಬಿಡುಗಡೆಯಾಗಿದ್ದ ವಿಶ್ವ ಬ್ಯಾಂಕ್ ಸಾಲವನ್ನು ರದ್ದು ಮಾಡಲಾಯಿತು. ಸರಕಾರ ವಿಶ್ವ ಬ್ಯಾಂಕ್ ಸಾಲವಿಲ್ಲದೆ ಯೋಜನೆಯನ್ನು ಮುಂದುವರಿಸಲು ನಿರ್ಧರಿಸಿದ್ದರಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ರಿಟ್ ಅರ್ಜಿಯನ್ನು ಸಲ್ಲಿಸಲಾಯಿತು.
ಈ ನಡುವೆ ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂದು ಸಹಸ್ರಾರು ಜನ ಯೋಜನೆಯ ಪರವಾಗಿ ಹೋರಾಟ ನಡೆಸಿದರು. ನರ್ಮದಾ ಬಚಾವ್ ಆಂದೋಲನದಲ್ಲಿ ವಿದೇಶೀ ಕೈವಾಡವಿದೆ ಎಂಬ ಆರೋಪ ಕೂಡಾ ಕೇಳಿ ಬಂತು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟು ವಿಸ್ತೃತವಾದ ಆದೇಶ ನೀಡಿತು. ಯೋಜನೆಯ ಅನುಷ್ಠಾನದಿಂದ ಜಲವಿದ್ಯುತ್ ಉತ್ಪಾದನೆ ಯಾಗುವದರ ಜೊತೆಗೆ ವಿಶಾಲವಾದ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯುವದರಿಂದ ದೇಶದ ಆಹಾರ ಧಾನ್ಯ ಉತ್ಪಾದನೆಯಲ್ಲಿ ಹೆಚ್ಚಳ ವಾಗುತ್ತದೆ.
ಯೋಜನೆಯಿಂದ ನಿರ್ವಸಿತರಾಗುವ ಗ್ರಾಮಗಳು ಮತ್ತು ಬುಡಕಟ್ಟು ಜನರ ವಿಷಯದಲ್ಲಿ ಅರ್ಜಿ ದಾರರು ಉತ್ಪ್ರೇಕ್ಷಿತ ಅಂಕಿ ಅಂಶಗಳನ್ನು ಒದಗಿಸಿದ್ದಾರೆ ಮತ್ತು ಅಂಥ ನಿರ್ವಸಿತರಿಗೆ ಒದಗಿಸಲಾಗುತ್ತಿರುವ ಪುನರ್ವಸತಿ ಮತ್ತು ಆರ್ಥಿಕ ಪ್ಯಾಕೇಜ್‌ನಿಂದ ಹಿಂದೆ ಅವರು ವಾಸಿಸುತ್ತಿದ್ದು ದಕ್ಕಿಂತಲೂ ಉತ್ತಮ ಜೀವನ ಮಟ್ಟ ಅವರಿಗೆ ದೊರೆಯಲಿದೆ ಎಂಬ ವಾದವನ್ನು ಸುಪ್ರೀಂ ಕೋರ್ಟು ಪುರಸ್ಕರಿಸಿತು.
ಜನಸಮುದಾಯದ ಹಿತ ದೃಷ್ಟಿಯಿಂದ ಸರಕಾರ ಅಭಿವೃದ್ಧಿ ಕಾರ್ಯಗಳನ್ನು ನಡೆಸಬೇಕಾಗುತ್ತದೆ. ಹಾಗೆ ಮಾಡುವಾಗ ಯೋಜನೆಯ ಸಾಧಕ- ಬಾಧಕಗಳನ್ನು ತಜ್ಞರ ಸಮಿತಿಗಳು ಪರಿಶೀಲಿಸಿದ ನಂತರವೇ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ. ಅಂಥ ಅಭಿವೃದ್ಧಿಪರ ನಿರ್ಣಯಗಳನ್ನು ಕೈಗೊಳ್ಳುವಾಗ ಸರಕಾರ ಅಗತ್ಯ ಕಾನೂನು ಕ್ರಮ ಹಾಗೂ ಸೂಕ್ತ ಪ್ರಕ್ರಿಯೆಗಳನ್ನು ಅನುಸರಿಸಿ ದ್ದಲ್ಲಿ, ಕೋರ್ಟುಗಳು ಆ ಪ್ರಕ್ರಿಯೆ ಯಲ್ಲಿ ಹಸ್ತಕ್ಷೇಪ ಮಾಡಬಾರದು.
ಹಾಗಾದಲ್ಲಿ ನ್ಯಾಯಾಂಗ ತನ್ನ ವ್ಯಾಪ್ತಿಯನ್ನು ಮೀರಿದಂತೆ ಆಗುತ್ತದೆ. ಮತ್ತು ಹಾಗೆ ಹಸ್ತಕ್ಷೇಪ ಮಾಡಿದರೆ ಪ್ರತೀ ಯೋಜನೆಗೂ ಕೋರ್ಟುಗಳ ಅನುಮತಿ ಪಡೆಯಬೇಕಾಗ ಬಹುದು. ದೇಶವನ್ನು ಮುನ್ನಡೆಸುವದು ಕಾರ್ಯಾಂಗ ಮತ್ತು ಶಾಸಕಾಂಗಗಳ ಕೆಲಸವೇ ಹೊರತು ನ್ಯಾಯಾಂಗದ್ದಲ್ಲ ಎಂದು ಆದೇಶಿಸಿತು. ಅಂತಿಮವಾಗಿ 2017ರಲ್ಲಿ ಪ್ರಧಾನಿ ಮೋದಿಯವರು ಸರ್ದಾರ್ ಸರೋವರ ಆಣೆಕಟ್ಟನ್ನು ಉದ್ಘಾಟಿಸಿದರು. ಇದೀಗ ಸಹಸ್ರಾರು ಎಕರೆಗಳಿಗೆ ನೀರಾವರಿ ಒದಗಿಸುತ್ತಿರುವ ಈ ಯೋಜನೆಯ ವಿರುದ್ಧ ಪರಿಸರವಾದಿಗಳು ನಡೆಸಿದ ಹೋರಾಟದ ಕಾರಣದಿಂದ ಯೋಜನೆ ಫಲ ನೀಡಲು ಹಲವು ದಶಕಗಳ ವಿಳಂಬವಾಯಿತು. ಇಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಗಳು ಸಕ್ರಿಯವಾಗಿ ಪಾಲ್ಗೊಂಡು ಅಭಿವೃದ್ಧಿ ಯೋಜನೆಗೆ ವಿಶ್ವ ಬ್ಯಾಂಕ್ ನೆರವನ್ನು ರದ್ದುಗೊಳಿಸಲು ಕಾರಣ ವಾದದ್ದು ಇಂಥ ಹೋರಾಟಗಳ ನೈತಿಕತೆಯನ್ನೇ ಪ್ರಶ್ನಿಸುವಂತೆ ಮಾಡುತ್ತದೆ. ಇಂತದ್ದೇ ಕೆಲವು ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟು ದೇಶದ ಹಿತಾಸಕ್ತಿ ಮತ್ತು ಪರಿಸರದ ನಡುವಿನ ಪ್ರಶ್ನೆ ಬಂದಾಗ ಸಮತೋಲನದ ತೀರ್ಪುಗಳನ್ನು ನೀಡಿದೆ.
2016ರಲ್ಲಿ ಕೇರಳದ ವಿಝಿಂಜಂನಲ್ಲಿ ಕೈಗೊಳ್ಳಲಾದ ಅಂತಾರಾಷ್ಟ್ರೀಯ ಬಂದರಿನ ವಿಷಯದ ಪ್ರಕರಣದಲ್ಲಿ ‘ದೇಶದ ಹಿತಾಸಕ್ತಿಗಾಗಿ ಸ್ಥಾಪಿಸಲಾಗುವ ಯೋಜನೆಗಳನ್ನು ಕೆಲವೇ ಮೀನುಗಾರರ ಹಿತಾಸಕ್ತಿಯ ಕಾರಣಕ್ಕೆ ನಿಲ್ಲಿಸಲು ಆದೇಶ ನೀಡಲಾಗುವದಿಲ್ಲ’ ಎಂದಿತು. 2021ರ ಸೆಂಟ್ರಲ್ ವಿಸ್ತಾ ಪ್ರಕರಣ ಮತ್ತು ಚಾರ್ ಧಾಮ್ ಹೈವೇ ಪ್ರಕರಣಗಳಲ್ಲಿ ಕೂಡಾ ದೇಶದ ಒಟ್ಟಾರೆ ಅಭಿವೃದ್ಧಿ ಮತ್ತು ರಕ್ಷಣೆಯ ಹಿತಾಸಕ್ತಿಯ ಕಾರಣವಿದ್ದಾಗ ಪರಿಸರದ ಕುರಿತ ಸಂಗತಿಗಳಿದ್ದರೂ ಅಂಥ ಯೋಜನೆ ಗಳನ್ನು ಅನುಮತಿಸಬೇಕಾಗುತ್ತದೆ ಎಂದು ಆದೇಶ ನೀಡಿದೆ.
ದೆಹಲಿಯ ಎನ್‌ವಿರೊನಿಕ್ಸ್ ಟ್ರಸ್ಟ್ ಎಂಬ ಹೆಸರಿನ ಎನ್ ಜಿಒ, ದೇಶದಲ್ಲಿ ನಡೆಯುವ ಅಭಿವೃದ್ಧಿ ಯೋಜನೆಗಳ ವಿರುದ್ಧ ಪ್ರತಿಭಟನೆ ನಡೆಸುವವರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡುತ್ತಿತ್ತು. ಸದರಿ ಎನ್‌ಜಿಒದ ಲೆಕ್ಕ ಪತ್ರಗಳ ಪರಿಶೀಲನೆ ಮಾಡುವಾಗ ಆ ಸಂಸ್ಥೆ ವಿದೇಶೀ ದೇಣಿಗೆಗಳನ್ನು ಪಡೆದದ್ದು ಗಮನಕ್ಕೆ ಬಂದದ್ದರಿಂದ ಆದಾಯಕರ ಇಲಾಖೆ ನೋಟೀಸು ನೀಡಿತ್ತು.
ನೋಟೀಸಿನ ವಿರುದ್ಧ ಸಲ್ಲಿಸಲಾದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟು ಮತ್ತು ಸುಪ್ರೀಂ ಕೋರ್ಟ್‌ಗಳು ನೋಟೀಸಿಗೆ ತಡೆಯಾಜ್ಞೆ ನೀಡಲು ನಿರಾಕರಿಸಿದವು. ಅಲ್ಲದೆ ಸದರಿ ಎನ್‌ಜಿಒದ ವಿರುದ್ಧ ಎಫ್ʼಸಿಆರ್‌ಎ ಕಾಯಿದೆಯ ಉಲ್ಲಂಘನೆ ಕುರಿತು ಸಿಬಿಐ ಚಾಜ್ ಶೀಟ್ ಕೂಡಾ ಸಲ್ಲಿಸಲಾಗಿದೆ. ಪರಿಸರ, ವನ್ಯಜೀವಿಗಳು ಎಂಬ ಹೆಸರಿನಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿ ಯೊಡ್ಡುವ ಅಜೆಂಡಾ ಹೊಂದಿರುವ ಇನ್ನೂ ಕೆಲವು ಎನ್‌ಜಿಒಗಳು ದೇಶದಲ್ಲಿ ಕಾರ್ಯನಿರತ ವಾಗಿವೆ ಎಂದು ವರದಿಯಾಗಿದೆ.
ಕರ್ನಾಟಕದ ವಾಣಿಜ್ಯ ರಾಜಧಾನಿ ಎಂಬ ಹೆಸರು ಪಡೆದ ಹುಬ್ಬಳ್ಳಿಯಿಂದ ಕರಾವಳಿಯ ಅಂಕೋಲಾಕ್ಕೆ ರೈಲು ಮಾರ್ಗ ರಚನೆಗೆ 1997-98ರಲ್ಲೇ ಒಪ್ಪಿಗೆ ದೊರೆತು 2000ನೇ ಇಸವಿ ಮೇ ತಿಂಗಳಲ್ಲಿ ಅಡಿಗಲ್ಲು ಸಮಾರಂಭ ನಡೆದರೂ, ಪರಿಸರವಾದಿಗಳ ತೀವ್ರ ಹೊರಾಟದಿಂದ ಯೋಜನೆಯ ಅನುಷ್ಠಾನ ನೆನೆಗುದಿಗೆ ಬಿದ್ದಿತ್ತು. 2016ರಲ್ಲಿ ಯೋಜನೆಗೆ ಪುನಃ ಚಾಲನೆ ನೀಡಲು ಪ್ರಯತ್ನಿಸಲಾಯಿತಾದರೂ 2020ರಲ್ಲಿ ಈ ಯೋಜನೆಯ ವಿಷಯದಲ್ಲಿ ವಿವಿಧ ರಿಟ್ ಅರ್ಜಿ ಗಳನ್ನು ಕರ್ನಾಟಕ ಹೈಕೋರ್ಟಿನಲ್ಲಿ ಸಲ್ಲಿಸಲಾಯಿತು.
ಈ ಯೋಜನೆಯ ಅನುಷ್ಠಾನದ ಪರವಾಗಿ ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸೇವಾ ಸಮಿತಿಯವರು ಕೂಡಾ ರಿಟ್ ಅರ್ಜಿಗಳನ್ನು ಸಲ್ಲಿಸಿದ್ದರು. ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸಲಹೆಯ ಪ್ರಕಾರ ಪರಿಷ್ಕೃತ ಯೋಜನೆಯನ್ನು ಸಿದ್ಧಪಡಿಸಿ ಮಂಡಳಿಯ ಆದೇಶಗಳನ್ನು ಪಾಲಿಸಲಾಗುವದೆಂದು ರೈಲ್ವೆ ಇಲಾಖೆಯು ಅಫಿಡವಿಟ್ ಸಲ್ಲಿಸಿದ ಹಿನ್ನೆಲೆಯಲ್ಲಿ ಅಂಥ ಎಲ್ಲ ರಿಟ್ ಅರ್ಜಿಗಳನ್ನು 2023ರಲ್ಲಿ ಕರ್ನಾಟಕ ಹೈಕೋರ್ಟು ವಿಲೇವಾರಿ ಮಾಡಿದೆ. ಇದೀಗ ಈ ಯೋಜನೆಯನ್ನು ವಿಶೇಷ ಯೋಜನೆಯೆಂದು (ಎಸ್‌ಆರ್‌ಪಿ) ಪರಿಗಣಿಸಿ ಕೇಂದ್ರ ಸರಕಾರ ಅಧಿಸೂಚನೆ ಹೊರಡಿಸಿದ್ದರಿಂದ ಯೋಜನೆ ಆರಂಭವಾಗಬಹುದೆಂಬ ಭರವಸೆ ಮೂಡಿತ್ತು.
ಈ ರೈಲು ಪ್ರಾರಂಭವಾದರೆ ಉದ್ದಿಮೆ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ದೊರೆತು ಜಿಲ್ಲೆಯ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂಬುದು ಜಿಲ್ಲೆಯ ಜನರ ಬಹುದಿನದ ಕನಸು. ಕಾರವಾರ ಬಂದರಿನ ಮೂಲಕ ಉತ್ತರ ಕರ್ನಾಟಕದ ಕೃಷಿ ಮತ್ತು ಉದ್ಯಮಗಳ ಸರಕುಗಳ ಆಮದು-ರಫ್ತಿಗೆ ಕೂಡಾ ಈ ಯೋಜನೆ ಸಹಾಯಕವಾಗುತ್ತದೆ. ಆದರೆ ಪ್ರಸಿದ್ಧ ಚಲನಚಿತ್ರ ತಾರೆ ಮತ್ತು ಇಕೋ-ವಾಚ್ ಎಂಬ ಎನ್‌ಜಿಒದ ಸಂಸ್ಥಾಪಕ, ಸುರೇಶ್ ಹೆಬ್ಳಿಕರ್‌ರವರು ಈ ಯೋಜನೆಯ ವಿರುದ್ಧ ನೀಡಿದ ಹೇಳಿಕೆ ಉತ್ತರ ಕನ್ನಡದ ಜನರಿಗೆ ಪುನಃ ಆತಂಕ ಮೂಡಿಸಿದೆ. ದೇಶದ ಹಿತಾಸಕ್ತಿ ಯಿಂದ ಸೀಬರ್ಡ್ ನೌಕಾ ನೆಲೆ ಮತ್ತು ಅನೇಕ ಜಲವಿದ್ಯುತ್ ಯೋಜನೆಗಳಿಗಾಗಿ ಜಿಲ್ಲೆಯ ಜನ ಅಪಾರ ತ್ಯಾಗ ಮಾಡಿದ್ದಾರೆ. ಕೈಗಾದಲ್ಲಿ ನಿರ್ಮಿಸಲಾದ ಅಣುಸ್ಥಾವರವಂತೂ ಜಿಲ್ಲೆಯ ಜನರಿಗೆ ಹಾಗೂ ಜಲಚರಗಳಿಗೆ ಅಣುವಿಕಿರಣದ ಆತಂಕವನ್ನು ಒಡ್ಡಿದೆ. ಜಿಲ್ಲೆಯಲ್ಲಿ ಈ ವರೆಗೆ ಸ್ಥಾಪನೆ ಯಾದ ಕೇವಲ ಮುಳುಗಿಸುವ ಮತ್ತು ತೊಲಗಿಸುವ ಯೋಜನೆಗಳ ವಿಷಯದಲ್ಲಿ ಜಾಣ ಮೌನ ತೋರಿದ ಕೆಲವು ಪರಿಸರ ಪ್ರೇಮಿಗಳು, ರೈಲ್ವೆ ಮತ್ತು ರಸ್ತೆ ಅಭಿವೃದ್ಧಿಯ ವಿಷಯದಲ್ಲಿ ಮಾತ್ರ ಯಾಕೆ ಅತೀ ಪರಿಸರ ಕಾಳಜಿ ತೋರುತ್ತಾರೆ ಎಂಬುದು ಅರ್ಥವಾಗದ ವಿಷಯ.
ರೈಲು ಯೋಜನೆ ನಿಂತರೆ ಲಾರಿ ಮತ್ತು ಖಾಸಗಿ ಬಸ್ ಮಾಲಿಕರಿಗೆ ಮಾತ್ರ ಲಾಭವಾಗಬಹುದು ಹೊರತು ಜನಸಾಮಾನ್ಯರಿಗಲ್ಲ ಎಂಬುದು ಅವರಿಗೆ ತಿಳಿಯದ ವಿಷಯವಲ್ಲ. ಬೇಡ್ತಿ, ಶರಾವತಿ ನದಿಗಳನ್ನು ತಿರುಗಿಸುವ ಯೋಜನೆಗಳಲ್ಲಿ ಕೂಡಾ ಅವರಿಗೆ ಯಾವದೇ ಪರಿಸರ ನಾಶ ಕಾಣಲಿಲ್ಲ. ಹಾವೇರಿ-ಶಿರಸಿ-ಕುಮಟಾ ರಸ್ತೆಯ ಅಗಲೀಕರಣದ ವಿಷಯದಲ್ಲೂ ಕೆಲ ಪರಿಸರವಾದಿಗಳು ಹೈಕೋರ್ಟ್ ಮೆಟ್ಟಲೇರಿ ಯೋಜನೆಗೆ ತಡೆ ತಂದ ಕಾರಣಕ್ಕೆ ಯೋಜನೆ ವಿಳಂಬವಾಗಿರುವದು ಸರ್ವವೇದ್ಯ.
ಹುಬ್ಬಳ್ಳಿ-ಅಂಕೋಲಾ ರೈಲಿಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಮತ್ತು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಗಳ ಒಪ್ಪಿಗೆ ಇನ್ನೂ ದೊರೆತಿಲ್ಲ ಎನ್ನಲಾಗಿದೆ. ಈ ಹಂತದಲ್ಲಿ ಯಾರಾದರೂ ಪುನಃ ಕೋರ್ಟ್ ಮೆಟ್ಟಲೇರಿದರೆ ಹರೋಹರ. ಅತೀ ಹಿಂದುಳಿದಿರುವ ಉತ್ತರ ಕನ್ನಡ ಜಿಲ್ಲೆ ಉತ್ತರವಿಲ್ಲದ ಉತ್ತರ ಕನ್ನಡವಾಗಿ ಮೊದಲಿನಿಂದಲೂ ಕೇವಲ ಅರಣ್ಯ ಪ್ರದೇಶವಾಗಿಯೇ ಉಳಿದಿದೆ. ಜಿಲ್ಲೆಯ ಜನ ಅಭಿವೃದ್ಧಿಯ ಆಸೆ ಬಿಟ್ಟು ವಲಸೆ ಹೋಗುತ್ತಿದ್ದಾರೆ. ಈ ಹಂತದಲ್ಲಿ ಕನಸಿನ ರೈಲ್ವೆ ಯೋಜನೆಗೆ ಯಾರೂ ಅಡ್ಡಗಾಲು ಹಾಕದಿರಲಿ ಎಂಬುದು ಜನಸಾಮಾನ್ಯರ ಆಸೆ.