ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

R T Vittalmurthy Column: ಸಿದ್ದು ಸಂಪುಟಕ್ಕೆ ಇವರೆಲ್ಲ ಸೇರಲಿದ್ದಾರೆ

ಇನ್ನು ಸಿದ್ದರಾಮಯ್ಯ ಅವರ ಸಂಪುಟಕ್ಕೆ ಸೇರಲಿರುವ ಹಿರಿಯ ಶಾಸಕರಲ್ಲಿ ಅಪ್ಪಾಜಿ ನಾಡಗೌಡ ಒಬ್ಬರು. ಹಲವು ಬಾರಿ ಶಾಸಕರಾಗಿ ಆರಿಸಿ ಬಂದರೂ ಮಂತ್ರಿಗಿರಿಯಿಂದ ದೂರವೇ ಉಳಿಯುತ್ತಿರುವ ನಾಡಗೌಡರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತರುವುದು ಸಿದ್ದರಾಮಯ್ಯ ಅವರ ಕನಸಾಗಿತ್ತಾದರೂ ಅದು ನನಸಾಗುತ್ತಿಲ್ಲ. ಹೀಗಾಗಿ ಸದ್ಯಕ್ಕೆ ನಾಡಗೌಡರು ಸಂಪುಟಕ್ಕೆ ಸೇರಲಿ ಎಂಬುದು ಸಿದ್ದರಾಮಯ್ಯನವರ ಲೆಕ್ಕಾಚಾರ.

ಮೂರ್ತಿಪೂಜೆ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಯಲಿದೆ. ದೆಹಲಿಯಿಂದ ಬರುತ್ತಿರುವ ವರ್ತಮಾನಗಳ ಪ್ರಕಾರ ಸಂಪುಟದಲ್ಲಿರುವ ಹದಿನೈದಕ್ಕೂ ಹೆಚ್ಚು ಮಂತ್ರಿಗಳು ಪಕ್ಷದ ಕೆಲಸಕ್ಕೆ ನಿಯೋಜಿತರಾಗಿ, ಅಷ್ಟೇ ಮಂದಿ ಶಾಸಕರು ಮಂತ್ರಿಗಳಾಗಲಿದ್ದಾರೆ.

ಅಂದ ಹಾಗೆ ಇದುವರೆಗೆ ಮಂತ್ರಿ ಮಂಡಲ ಪುನಾರಚನೆಯ ವಿಷಯವನ್ನು ಅಧಿಕಾರ ಹಂಚಿಕೆಗೆ ತಳುಕು ಹಾಕಲಾಗುತ್ತಿತ್ತು. ಅರ್ಥಾತ್, ಎರಡೂವರೆ ವರ್ಷ ಕಳೆದ ನಂತರ ಸಿದ್ದರಾಮಯ್ಯ ಅಧಿಕಾರ ದಿಂದ ಕೆಳಗಿಳಿಯಲಿದ್ದಾರೆ. ಅವರ ಜಾಗಕ್ಕೆ ಬೇರೆಯವರು ಬಂದ ಕಾಲಕ್ಕೆ ಸಂಪುಟ ಪುನಾರಚನೆ ಕಾರ್ಯ ನಡೆಯಲಿದೆ ಎಂಬ ಮಾತು ದಟ್ಟವಾಗಿತ್ತು. ಈ ಮಧ್ಯೆ ತಮ್ಮ ಸಂಪುಟದಲ್ಲಿರುವ ಕೆಲ ಮಂತ್ರಿಗಳ ವಿಷಯದಲ್ಲಿ ಸಿದ್ದರಾಮಯ್ಯ ಅಸಹನೆ ಹೊಂದಿದ್ದರಾದರೂ, ಅವರನ್ನು ಕೈ ಬಿಟ್ಟು ಬೇರೆಯವರನ್ನು ತೆಗೆದುಕೊಳ್ಳುವ ವಿಷಯದಲ್ಲಿ ಅವರ ಆಪ್ತರು ಉತ್ಸುಕರಾಗಿರಲಿಲ್ಲ.

‘ಇವತ್ತಿನ ಸ್ಥಿತಿಯಲ್ಲಿ ನೀವು ಯಾರನ್ನಾದರೂ ಸಂಪುಟದಿಂದ ಕೈ ಬಿಟ್ಟರೆ ಅವರಿಗೆ ಭ್ರಷ್ಟಾಚಾರಿ ಎಂಬ ಹಣೆ ಪಟ್ಟಿ ತಗಲುತ್ತದೆ. ಹೀಗಾಗಿ ಅವರನ್ನು ಕೈ ಬಿಟ್ಟು ಬೇರೆಯವರನ್ನು ಸಂಪುಟಕ್ಕೆ ತೆಗೆದು ಕೊಳ್ಳಲು ಸ್ವಲ್ಪ ಕಾಲ ಕಾಯಿರಿ. ಎರಡುವರೆ ವರ್ಷ ಕಳೆದ ನಂತರ ಸಂಪುಟ ಪುನಾರಚನೆಗೆ ಕೈ ಹಾಕಿ’ ಎಂಬುದು ಆಪ್ತರ ಸಲಹೆಯಾಗಿತ್ತು.

ಆದರೆ ಅವರ ಈ ಸಲಹೆಯನ್ನು ಪಾಸಿಟಿವ್ ಆಗಿ ತೆಗೆದುಕೊಂಡ ಸಿದ್ದರಾಮಯ್ಯಾಅವರು ಮುಜುಗರಕ್ಕೆ ಸಿಲುಕಬೇಕಾಯಿತು. ಕಾರಣ?ಎರಡೂವರೆ ವರ್ಷ ಕಳೆದ ಕೂಡಲೇ ನಾಯಕತ್ವ ಬದಲಾವಣೆ ಗ್ಯಾರಂಟಿ.

ಇದನ್ನೂ ಓದಿ: R T Vittalmurthy Column: ವಿಜಯೇಂದ್ರ ಬೆನ್ನಿಗೆ ಈಗ ಸಂತೋಷ್‌ ನಿಂತಿದ್ದಾರೆ

ಹೀಗಾಗಿ ಅಲ್ಲಿಯವರೆಗೆ ಸಂಪುಟ ಪುನರ್ರ‍ಚನೆಗೆ ಹೈಕಮಾಂಡ್ ಅವಕಾಶ ನೀಡುತ್ತಿಲ್ಲ ಎಂಬ ಮಾತು ಕೇಳತೊಡಗಿದ್ದು. ಆದರೆ ದಿಲ್ಲಿಯಿಂದ ಈಗ ಬರುತ್ತಿರುವ ವರ್ತಮಾನದ ಪ್ರಕಾರ ಅಧಿಕಾರ ಹಂಚಿಕೆಯ ಮಾತಿಗೂ, ಸಂಪುಟ ಪುನಾರಚನೆಗೂ ಸಂಬಂಧವಿಲ್ಲ. ಅದೇ ರೀತಿ ಸಂಪುಟದಿಂದ ಹೊರಗಿರುವ ಅರ್ಹರಿಗೆ ಜಾಗ ಮಾಡಿಕೊಡಲು ಹಲವರಿಗೆ ಕೊಕ್ ಕೊಡದೆ ವಿಧಿಯಿಲ್ಲ ಎಂಬುದು ಕಾಂಗ್ರೆಸ್ ವರಿಷ್ಟರ ಯೋಚನೆ.

ಪರಿಣಾಮ ಮಂತ್ರಿಗಿರಿಗಾಗಿ ಲಾಭಿ ಮಾಡುತ್ತಿರುವ ಶಾಸಕರು ಈಗಾಗಲೇ ದಿಲ್ಲಿ ಲೆವೆಲ್ಲಿನಲ್ಲಿ ತಮ್ಮ ಕಸರತ್ತು ಶುರು ಮಾಡಿದ್ದಾರೆ ಮತ್ತು ಸಂಪುಟದಿಂದ ತಮಗೆ ಗೇಟ್ ಪಾಸ್ ಸಿಗಲಿದೆ ಎಂಬ ಆತಂಕ ಕ್ಕೊಳಗಾದವರು ಬಚಾವಾಗಲು ಕಸರತ್ತು ನಡೆಸತೊಡಗಿದ್ದಾರೆ.

ಮಂತ್ರಿ ಮಂಡಲಕ್ಕೆ ಸೇರುವವರು

ಅಂದ ಹಾಗೆ ವರ್ಷಾಂತ್ಯದಲ್ಲಿ ನಡೆಯಲಿರುವ ಪುನಾರಚನೆಯ ಸಂದರ್ಭದಲ್ಲಿ ಮಂತ್ರಿಗಳಾಗ ಲಿರುವವರ ಪೈಕಿ ಹಿರಿಯರು ಎಂದರೆ ಆರ್.ವಿ.ದೇಶಪಾಂಡೆ. ಸೀನಿಯಾರಿಟಿ ಮತ್ತು ಪವರ್‌ನ ದೃಷ್ಟಿ ಯಿಂದ ದೇಶಪಾಂಡೆಯವರು ಶುರುವಿನ ಮಂತ್ರಿಯಾಗಬೇಕಿತ್ತು. ಎಷ್ಟೇ ಆದರೂ ಈ ಹಿಂದೆ ಕೆಪಿಸಿಸಿಯನ್ನು ಮುನ್ನಡೆಸಿದ ಮತ್ತು ಹಲವು ಬಾರಿ ಮಂತ್ರಿಯಾಗಿ ಕೆಲಸ ಮಾಡಿರುವ ದೇಶಪಾಂಡೆ ಅವರು, ತಮ್ಮನ್ನು ತಾವು ಸಿಎಂ ಮೆಟೀರಿಯಲ್ಲು ಅಂತ ಘೋಷಿಸಿಕೊಂಡು ಹಲ ಕಾಲವೇ ಆಗಿದೆ.

ಪಕ್ಷದಲ್ಲಿ ಅಧಿಕಾರ ಹಂಚಿಕೆಯ ಮಾತು ಸುನಾಮಿಯಂತೆ ಮೇಲೆದ್ದ ಸಂದರ್ಭದಲ್ಲಿ ದಿಲ್ಲಿಗೆ ಹೋಗಿದ್ದ ದೇಶಪಾಂಡೆಯವರು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ್ದಲ್ಲದೆ, ತಮ್ಮ ಮನದಿಂಗಿತವನ್ನು ನೇರವಾಗಿ ತೋಡಿಕೊಂಡಿದ್ದರು.

‘ಸಾರ್, ಸಿದ್ಧರಾಮಯ್ಯನವರು ಸಿಎಂ ಹುದ್ದೆಯಿಂದ ಕೆಳಗಿಳಿಯುವುದು ನಿಜವಾದರೆ ಆ ಜಾಗಕ್ಕೆ ನೀವು ಬನ್ನಿ. ಇಲ್ಲವೇ ಸಿಎಂ ಹುದ್ದೆಗೆ ನನ್ನ ಹೆಸರನ್ನು ಸೂಚಿಸಿ’ ಅಂತ ಹೇಳಿ ಬಂದಿದ್ದರು. ಹೀಗೆ ಸಿಎಂ ಆಗುವ ಬಯಕೆಯನ್ನು ಮುಂದಿಟ್ಟು ಬಂದಿದ್ದ ದೇಶಪಾಂಡೆಯವರಿಗೆ ಮಿನಿಮಮ್ ಮಂತ್ರಿಗಿರಿಯಾದರೂ ಸಿಗದಿದ್ದರೆ ಹೇಗೆ? ಹಾಗಂತಲೇ ಮಲ್ಲಿಕಾರ್ಜುನ ಖರ್ಗೆ ಅವರು ಪುನಾರಚನೆ ಯ ಸಂದರ್ಭದಲ್ಲಿ ದೇಶಪಾಂಡೆ ಮಂತ್ರಿಯಾಗಲೇಬೇಕು ಅಂತ ಪಟ್ಟು ಹಿಡಿದಿದ್ದಾರೆ.

ಇದೇ ರೀತಿ ಸಿದ್ಧರಾಮಯ್ಯ ಸಂಪುಟಕ್ಕೆ ಸೇರಲಿರುವ ಹಿರಿಯ ನಾಯಕರೆಂದರೆ ಬಿ.ಕೆ.ಹರಿಪ್ರಸಾದ್. ಕೆಲ ದಿನಗಳ ಹಿಂದೆ ಮಂತ್ರಿ ಮಂಡಲದಲ್ಲಿರುವ ಎನ್.ಎಸ್.ಭೋಸರಾಜು ಅವರನ್ನು ವಿಧಾನ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ತಂದು, ಬಿ.ಕೆ.ಹರಿಪ್ರಸಾದ್ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಸಿದ್ದರಾಮಯ್ಯ ಬಯಸಿದ್ದರಾದರೂ ಎರಡೂವರೆ ವರ್ಷ ಮುಗಿಯಲಿ ಎಂಬ ವರಿಷ್ಠರ ಮಾತಿಗೆ ಕಟ್ಟುಬಿದ್ದು ಸುಮ್ಮನಾಗಿದ್ದರು. ಅದರೆ ಈ ಬಾರಿ ಹರಿಪ್ರಸಾದ್ ಅವರು ಮಂತ್ರಿ ಮಂಡಲಕ್ಕೆ ಸೇರುವುದು ಬಹುತೇಕ ನಿಕ್ಕಿ.

ಇನ್ನು ಸಿದ್ದರಾಮಯ್ಯ ಅವರ ಸಂಪುಟಕ್ಕೆ ಸೇರಲಿರುವ ಹಿರಿಯ ಶಾಸಕರಲ್ಲಿ ಅಪ್ಪಾಜಿ ನಾಡಗೌಡ ಒಬ್ಬರು. ಹಲವು ಬಾರಿ ಶಾಸಕರಾಗಿ ಆರಿಸಿ ಬಂದರೂ ಮಂತ್ರಿಗಿರಿಯಿಂದ ದೂರವೇ ಉಳಿಯು ತ್ತಿರುವ ನಾಡಗೌಡರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತರುವುದು ಸಿದ್ದರಾಮಯ್ಯ ಅವರ ಕನಸಾಗಿತ್ತಾ ದರೂ ಅದು ನನಸಾಗುತ್ತಿಲ್ಲ. ಹೀಗಾಗಿ ಸದ್ಯಕ್ಕೆ ನಾಡಗೌಡರು ಸಂಪುಟಕ್ಕೆ ಸೇರಲಿ ಎಂಬುದು ಸಿದ್ದರಾಮಯ್ಯನವರ ಲೆಕ್ಕಾಚಾರ.

ಈ ಮಧ್ಯೆ ಹಾಲಿ ಸಂಪುಟದಲ್ಲಿರುವ ಅಲ್ಪಸಂಖ್ಯಾತರ ಪೈಕಿ ಒಬ್ಬರನ್ನು ತೆಗೆದು ಸಲೀಂ ಅಹ್ಮದ್ ಅವರನ್ನು ಸೇರಿಸಿಕೊಳ್ಳುವ ಲೆಕ್ಕಾಚಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರಲ್ಲಿದೆ. ಅಂದ ಹಾಗೆ ಸಿದ್ದರಾಮಯ್ಯ ಸಂಪುಟಕ್ಕೆ ಸಲೀಂ ಅಹ್ಮದ್ ಸೇರಲಿ ಎಂಬುದು ಡಿ.ಕೆ.ಶಿವಕುಮಾರ್ ಇಚ್ಚೆಯಾಗಿತ್ತಾದರೂ ಅದು ಸಾಧ್ಯವಾಗಿರಲಿಲ್ಲ.

ರಾಜೀವ್ ಗಾಂಧಿಯವರ ಕಾಲದಲ್ಲಿಯೇ ಬೆಳಕಿಗೆ ಬಂದು ಪ್ರಭಾವಿಯಾಗಿದ್ದ ಸಲೀಂ ಅಹ್ಮದ್ ಯಾವತ್ತೋ ಮಂತ್ರಿಯಾಗಬೇಕಿದ್ದ ಮೆಟೀರಿಯಲ್ಲು. ಈಗ ಅವರಿಗೆ ಮಂತ್ರಿಯಾಗುವ ಕಾಲ ಕೂಡಿ ಬಂದಂತಿದೆ.

ಇನ್ನು ಮೈಸೂರು ಜಿಲ್ಲೆಯಿಂದ ಮಂತ್ರಿಗಳಾಗಿರುವವರ ಪೈಕಿ ಒಬ್ಬರನ್ನು ಕೈ ಬಿಟ್ಟು, ಮತ್ತೊಬ್ಬ ನಾಯಕ ತನ್ವೀರ್ ಸೇಠ್ ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸುವುದು ಬಹುತೇಕ ನಿಶ್ಚಿತ. ಅಂದ ಹಾಗೆ ಸರಕಾರ ಅಸ್ತಿತ್ವಕ್ಕೆ ಬಂದ ಕಾಲದಲ್ಲಿ ತನ್ವೀರ್ ಮಂತ್ರಿಯಾಗಬೇಕಿತ್ತಾದರೂ, ಆ ಸಂದರ್ಭ ದಲ್ಲಿ ಅವರು ಸಿದ್ದು ವಿರೋಧಿ ಕ್ಯಾಂಪಿನಲ್ಲಿದ್ದರು.

ಪರಿಣಾಮ, ಸುರ್ಜೇವಾಲಾ ಅವರಂತವರು ಬಯಸಿದರೂ ತನ್ವೀರ್ ಸೇಠ್‌ಗೆ ಅದು ಒಲಿದಿರಲಿಲ್ಲ. ಆದರೆ ತನ್ವೀರ್ ಸೇಠ್ ಈಗ ಸಿದ್ದು ಕ್ಯಾಂಪಿಗೆ ನುಗ್ಗಿದ್ದಾರೆ. ಮತ್ತದೇ ಕಾರಣಕ್ಕಾಗಿ ಅವರು ಮಂತ್ರಿ ಯಾಗುವುದು ನಿಶ್ಚಿತವಾಗಿದೆ. ಈ ಮಧ್ಯೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಶಾಸಕ ಬಿ.ಕೆ.ಸಂಗಮೇಶ್ ಈ ಬಾರಿ ಮಂತ್ರಿಯಾಗುವುದು ಬಹುತೇಕ ನಿಚ್ವಳ. ನಾಲ್ಕು ಬಾರಿ ಶಾಸಕರಾದರೂ ಒಂದಿಂದು ಕಾರಣದಿಂದ ಸಂಗಮೇಶ್ ಅವಕಾಶ ಕಳೆದುಕೊಳ್ಳುತ್ತಾ ಬಂದಿದ್ದರು. ಆದರೆ ಈ ಸಲ ಅವರಿಗೆ ಹಲವು ಅಂಶಗಳು ಪ್ಲಸ್ ಆಗಿರುವುದರಿಂದ ಮಂತ್ರಿಯಾಗುವ ಅವಕಾಶ ಹೆಚ್ಚು.

ಇನ್ನು ಮಂತ್ರಿಗಿರಿಗಾಗಿ ಜಪಿಸುತ್ತಲೇ ಇರುವ ಬಸವರಾಜ ರಾಯರಡ್ಡಿ ಈ ಬಾರಿ ಮಂತ್ರಿಯಾಗ ಲಿದ್ದಾರೆ. ಈ ಹಿಂದೆ ಜನತಾದಳ ಸರಕಾರದಿಂದ ಹಿಡಿದು ಹಲವು ಬಾರಿ ಮಂತ್ರಿಯಾಗಿ ಕೆಲಸ ಮಾಡಿರುವ ರಾಯರಡ್ಡಿ ಅವರು ಕಳೆದ ಬಾರಿಯೇ ಮಂತ್ರಿಯಾಗಬೇಕಿತ್ತು. ಆದರೆ ರಾಹುಲ್ ಗಾಂಧಿ ಅವರು ರಾಯಚೂರಿನ ಭೋಸರಾಜು ಮಂತ್ರಿಯಾಗಲೇಬೇಕು ಎಂದು ಪಟ್ಟು ಹಿಡಿದಿದ್ದರಿಂದ ರಾಯರಡ್ಡಿ ಹೆಸರು ಹಿಂದೆ ಸರಿದಿತ್ತು.

ಆದರೆ ಈ ಸಲ ಅವರು ಮಂತ್ರಿಯಾಗುವುದು ಬಹುತೇಕ ನಿಚ್ಚಳ. ಇನ್ನು ಕೋಲಾರ ಜಿಯಿಂದ ನಾರಾಯಣಸ್ವಾಮಿ ಇಲ್ಲವೇ ರೂಪಕಲಾ ಅವರ ಹೆಸರು ಮಂತ್ರಿಗಿರಿಯ ರೇಸಿನಲ್ಲಿವೆ. ಇದೇ ರೀತಿ ಕೊಡಗು ಜಿಯ ಪೊನ್ನಣ್ಣ ಮತ್ತು ಚಳ್ಳಕೆರೆಯ ರಘುಮೂರ್ತಿ ಮತ್ತು ಬಳ್ಳಾರಿಯ ನಾಗೇಂದ್ರ ಅವರು ಮಂತ್ರಿಗಿರಿಗೆ ಹತ್ತಿರವಾಗಿದ್ದು ಉತ್ತರ ಕರ್ನಾಟಕ ಪಾಕೀಟಿನಿಂದ ಹಂಪನಗೌಡ ಅವರ ಹೆಸರು ಮಂತ್ರಿಗಿರಿಗೆ ಹತ್ತಿರವಾಗಿದೆ.

ಇವರ ಮಂತ್ರಿಗಿರಿ ಭದ್ರ

ಹೀಗೆ ಸಿದ್ದರಾಮಯ್ಯ ಸಂಪುಟಕ್ಕೆ ಸೇರುವವರ ಬ್ರಿಗೇಡ್ ಸಿದ್ಧವಾಗುತ್ತಿದ್ದರೆ, ಮತ್ತೊಂದೆಡೆ ಹೊರ ಬೀಳುವವರ ಪಡೆ ಸಜ್ಜಾಗುತ್ತಿದೆ. ಈ ಪೈಕಿ ಸಂಪುಟಕ್ಕೆ ಸೇರುವವರ ಹೆಸರುಗಳನ್ನು ಗಮನಿಸಿದರೆ ಸಂಪುಟದಿಂದ ಹೊರಬೀಳುವವರು ಯಾರು?ಎಂಬುದು ಬಹುತೇಕ ಸ್ಪಷ್ಟವಾಗುತ್ತದೆ. ಉದಾ ಹರಣೆಗೆ ಆರ್.ವಿ.ದೇಶಪಾಂಡೆ ಅವರ ಹೆಸರನ್ನೇ ಗಮನಿಸಿ.

ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಏಕಕಾಲಕ್ಕೆ ಬ್ರಾಹ್ಮಣ ಕೋಟಾ ಮತ್ತು ಕಾರವಾರ ಜಿಯ ಕೋಟಾ ಭರ್ತಿಯಾಗುತ್ತದೆ ಎಂಬುದು ವರಿಷ್ಠರ ಲೆಕ್ಕಾಚಾರ. ಈ ಲೆಕ್ಕಾಚಾರದ ಆಳಕ್ಕಿಳಿದರೆ ಸಂಪುಟದಿಂದ ಹೊರಬೀಳುವವರ ಮುಖ ಬಹುತೇಕ ಸ್ಪಷ್ಟವಾಗುತ್ತದೆ. ಉಳಿದಂತೆ ಸಂಪುಟದಲ್ಲಿ ಭದ್ರವಾಗಿರುವ ಮತ್ತೊಂದು ಬ್ರಿಗೇಡ್‌ನ ರೂಪ ಸ್ಪಷ್ಟವಾಗಿದ್ದು, ಈ ಬ್ರಿಗೇಡ್‌ನಲ್ಲಿ ಘಟಾನುಘಟಿ ನಾಯಕರಿದ್ದಾರೆ.

ಡಿ.ಕೆ.ಶಿವಕುಮಾರ್, ಡಾ.ಜಿ.ಪರಮೇಶ್ವರ, ಡಾ.ಎಚ್.ಸಿ.ಮಹಾದೇವಪ್ಪ, ರಾಮಲಿಂಗರೆಡ್ಡಿ, ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್, ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡ, ಜಮೀರ್ ಅಹ್ಮದ್, ಎಸ್.ಎಸ್.ಮಲ್ಲಿಕಾರ್ಜುನ್, ಈಶ್ವರ್ ಖಂಡ್ರೆ ಅವರೆಲ್ಲ ಸಿದ್ದು ಬ್ರಿಗೇಡ್‌ನಲ್ಲಿ ಭದ್ರವಾಗಿರಲಿದ್ದಾರೆ.

ಬಿಜೆಪಿ-ಆರೆಸ್ಸೆಸ್ ನಲ್ಲಿ ಹೊಸ ಕೂಗು

ಈ ಮಧ್ಯೆ ಬಿಜೆಪಿ-ಆರೆಸ್ಸೆಸ್‌ನಲ್ಲಿ ಹೊಸ ಕೂಗು ಶುರುವಾಗಿದ್ದು,ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರೇ ಮೂಲ. ಅರ್ಥಾತ್, ಈ ಇಬ್ಬರು ನಾಯಕರು 75 ವರ್ಷದ ಗಡಿ ದಾಟಿದ್ದು, ಗಡಿ ದಾಟಿದ ನಂತರವೂ ಅಧಿಕಾರದಲ್ಲಿ ಮುಂದುವರೆ ದಿರುವುದು ದೊಡ್ಡ ಕೂಗಿಗೆ ಕಾರಣವಾಗಿದೆ.

ಅಂದ ಹಾಗೆ ಇತ್ತೀಚಿನ ವರ್ಷಗಳಲ್ಲಿ 75 ವರ್ಷದ ಗಡಿ ತಲುಪಿದವರನ್ನು ಗೌರವಯುತವಾಗಿ ಬೀಳ್ಕೊಡುವ ಕೆಲಸ ಬಿಜೆಪಿ ಮತ್ತು ಸಂಘಪರಿವಾರದಲ್ಲಿ ನಡೆಯುತ್ತಿತ್ತು. ಹೀಗೆ ವಯಸ್ಸಿನ ಕಾರಣ ನೀಡಿ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಹಿರಿಯ ನಾಯಕರಿಗೆ ಟಿಕೆಟ್ ನಿರಾಕರಿಸಲಾಗಿತ್ತಲ್ಲದೆ, ಮತ್ತದನ್ನು ಸಮರ್ಥಿಸಿಕೊಳ್ಳುವ ಕೆಲಸವೂ ಆಗಿತ್ತು. ಆದರೆ ಈಗ ಪ್ರಧಾನಿ ನರೇಂದ್ರ ಮೋದಿ ಮತ್ತು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ 75 ಗಡಿ ದಾಟಿ ನಿರಾತಂಕ ವಾಗಿ ಮುಂದುವರೆದಿರುವುದು ಚರ್ಚೆಗೆ ಗ್ರಾಸವಾಗಿದೆ.

ಈ ಪೈಕಿ ಮೋಹನ್ ಭಾಗವತ್ ನಿವೃತ್ತರಾಗಿದ್ದರೆ, ದತ್ತಾತ್ರೇಯ ಹೊಸಬಾಳೆ ಅವರಷ್ಟೇ ಅಲ್ಲದೆ, ಮಹಾರಾಷ್ಟ್ರದ ಅತುಲ್ ಕುಲಕರ್ಣಿ, ಕರ್ನಾಟಕದ ಮುಕುಂದ್ ಜೀ ಅವರು ಸೇರಿದಂತೆ ಹಲವರ ಹೆಸರುಗಳು ಫ್ರಂಟ್ ಲೈನಿಗೆ ಬರುತ್ತಿದ್ದವು.

ಇದೇ ರೀತಿ ಪಕ್ಷದ ವಯಸ್ಸಿನ ನೆಪ ಮುಂದೊಡ್ಡಿ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್ ಅವರಂತಹ ನಾಯಕರಿಗೆ ಟಿಕೆಟ್ ನಿರಾಕರಿಸದೆ ಇದ್ದಿದ್ದರೆ ಕಳೆದ ಚುನಾವಣೆಯಲ್ಲಿ ಕರ್ನಾಟಕ ಬಿಜೆಪಿ ಮತ್ತಷ್ಟು ಸುಸ್ಥಿತಿಯಲ್ಲಿರುತ್ತಿತ್ತು ಎಂಬುದು ಈಗ ಕೇಳುತ್ತಿರುವ ಕೂಗು. ಪರಿಣಾಮ, ಕರ್ನಾಟಕ ಸೇರಿದಂತೆ ದೇಶದ ಬಹುತೇಕ ರಾಜ್ಯಗಳಲ್ಲಿ ನಿವೃತ್ತಿಯತ್ತ ಮುಖ ಮಾಡಿದ್ದ ಬಹುತೇಕ ನಾಯಕರು ಈಗ ಯೂ ಟರ್ನ್ ಹೊಡೆದಿದ್ದು ಈಗಿನ ಚರ್ಚೆಗೆ ಮತ್ತಷ್ಟು ಬಿರುಸು ತುಂಬಿದ್ದಾರೆ.

ಆರ್‌.ಟಿ. ವಿಠ್ಠಲಮೂರ್ತಿ‌

View all posts by this author