ಅಂಬೇಡ್ಕರ್ ಎಂಬ ಮಹಾಚೇತನ
ಇಬ್ಬರೂ ಭಾರತೀಯ ಸಮಾಜದ ಸುಧಾರಣೆಗಾಗಿ ಶ್ರಮಿಸಿದ ಮಹಾಚೇತನ ಗಳಾದರೂ, ಅವರ ದೃಷ್ಟಿಕೋನಗಳು ಮತ್ತು ಕಾರ್ಯತಂತ್ರಗಳಲ್ಲಿ ಒಂದಷ್ಟು ವ್ಯತ್ಯಾಸಗಳಿದ್ದವು. ಒಮ್ಮತದ ಅಂಶಗಳನ್ನು ಪರಿಗಣಿಸುವುದಾದರೆ, ಇಬ್ಬರೂ ಭಾರತೀಯ ಸಮಾಜದಲ್ಲಿದ್ದ ಅಸ್ಪೃಶ್ಯತೆ ಮತ್ತು ತಾರತಮ್ಯವನ್ನು ವಿರೋಧಿಸಿದರು, ದುರ್ಬಲ ವರ್ಗಗಳ ಏಳಿಗೆಯನ್ನು ಬಯಸಿದರು ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದರು.


ಆನಂದ ಎಸ್.ಖೋತ
ಒಂದು ಮಹಾನ್ ಕಾರ್ಯವಾಗಬೇಕಾದರೆ, ಒಂದು ಮಹಾನ್ ಚೇತನ ಉದಯಿಸಬೇಕು ಎಂಬ ಮಾತಿದೆ. ಅಸಾಧಾರಣವಾದುದನ್ನು ಸಾಧಿಸಿ ಚರಿತ್ರೆಯ ಪುಟದಲ್ಲಿ ಅಜರಾಮರರಾಗಿರುವ ಅಂಥದೊಂದು ಮಹಾನ್ ಚೇತನವೇ ಡಾ.ಬಿ.ಆರ್. ಅಂಬೇಡ್ಕರ್. ಇಂದು (ಏ.14ವಾದೀತು.
ಏಕೆಂದರೆ, ತಾವು ನೊಂದು-ಬೆಂದು, ಉರಿದು ಬೆಳಕಾಗಿ, ಕತ್ತಲೆಯಲ್ಲಿದ್ದವರನ್ನು ಬೆಳಕಿನೆಡೆಗೆ ತಂದು ನಿಲ್ಲಿಸಿದವರನ್ನು ‘ಜನಿಸಿದರು’ ಎನ್ನುವುದಕ್ಕಿಂತ ‘ಉದಯಿಸಿದರು’ ಎನ್ನುವುದೇ ಸೂಕ್ತ. 1776ರಲ್ಲಿ ಅಮೆರಿಕ ಸ್ವತಂತ್ರವಾಯಿತು, 1787ರಲ್ಲಿ ಅದರ ಸಂವಿಧಾನ ರಚಿಸಲ್ಪಟ್ಟಿತು. ಆದರೂ ಅಮೆರಿಕದ ಗುಲಾಮರಿಗೆ ಸ್ವತಂತ್ರವಾಗಲು 90 ವರ್ಷ ಬೇಕಾಯಿತು. ಒಂದೊಮ್ಮೆ ಅಬ್ರಹಾಂ ಲಿಂಕನ್ ಅಮೆರಿಕದ ಅಧ್ಯಕ್ಷರಾಗದೆ ಇದ್ದಿದ್ದರೆ, ನಾವೀಗ ನೋಡುತ್ತಿರುವ ಅಮೆರಿಕ ಇರುತ್ತಿರಲಿಲ್ಲ ವೇನೋ? ಲಿಂಕನ್‌ರ ಆಗ್ರಹದಿಂದಾಗಿ ಅಮೆರಿಕದ ಸಂವಿಧಾನದಲ್ಲಿ ಬದಲಾವಣೆ ತಂದು, ಅಲ್ಲಿನ ಗುಲಾಮರಿಗೆ ಹಕ್ಕುಗಳನ್ನು ನೀಡಲಾಯಿತು.
ಪರಿಣಾಮ, ಲಿಂಕನ್ ಅಮೆರಿಕದಲ್ಲಿ ಸಮಾನತೆಯ ಹರಿಕಾರರಾದರು. ಹಾಗೆಯೇ ಭಾರತದಲ್ಲಿ, “ನಿಮ್ಮ ಹಕ್ಕುಗಳಿಗಾಗಿ ನೀವು ಹೋರಾಡದಿದ್ದರೆ, ಅವನ್ನು ನಿಮಗೆ ನೀಡಲು ಯಾರೂ ಮುಂದೆ ಬರುವುದಿಲ್ಲ" ಎಂಬ ಧೈರ್ಯದ ಮಾತುಗಳನ್ನು ಹೇಳುತ್ತಾ, ದಮನಿತರ ದನಿ, ಕಣ್ಣು, ಶಕ್ತಿ, ಬುದ್ಧಿ ಯಾದವರು ಅಂಬೇಡ್ಕರ್. ಅವರು ಭಾರತವು ಕಂಡ ಒಬ್ಬ ಮಹಾಚೇತನ.
ಇದನ್ನೂ ಓದಿ: Thimmanna Bhagwat Column: ಯುನುಸ್ ತಾತ ಮತ್ತು ಸಪ್ತ ಸಹೋದರಿಯರು
ಅಂಬೇಡ್ಕರ್‌ರ ಜೀವನಕ್ಕೆ ಸಂಬಂಧಿಸಿದ 5 ಪ್ರಮುಖ ಸ್ಥಳಗಳನ್ನು ‘ಪಂಚತೀರ್ಥ’ ಎನ್ನಲಾಗುತ್ತದೆ ಮತ್ತು ಇವು ಅವರ ಬದುಕಿನ ವಿವಿಧ ಹಂತಗಳನ್ನು, ಅವರ ಮಹತ್ಕಾರ್ಯಗಳನ್ನು ಪ್ರತಿನಿಧಿಸುತ್ತವೆ:
೧. ಜನ್ಮಭೂಮಿ: ಮಧ್ಯ ಪ್ರದೇಶದ ಮಹೌ. 1891 ಏಪ್ರಿಲ್ 14ರಂದು ಅಂಬೇಡ್ಕರ್ ಜನಿಸಿದ ಸ್ಥಳವಿದು. ಇದನ್ನು ಈಗ ‘ಡಾ.ಅಂಬೇಡ್ಕರ್ ನಗರ’ ಎನ್ನಲಾಗುತ್ತದೆ. ಅವರು ವಾಸಿಸುತ್ತಿದ್ದ ಮನೆ ಯನ್ನು ಮಹಾರಾಷ್ಟ್ರ ಸರಕಾರವು ಖರೀದಿಸಿ ಸ್ಮಾರಕವಾಗಿ ಅಭಿವೃದ್ಧಿಪಡಿಸಿದೆ.
೨. ಶಿಕ್ಷಾಭೂಮಿ: ಲಂಡನ್. ಅಂಬೇಡ್ಕರ್ ಅವರು ‘ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್’ನಲ್ಲಿ ಉನ್ನತ ವ್ಯಾಸಂಗ ಮಾಡಿದ ಸ್ಥಳ.
೩. ದೀಕ್ಷಾಭೂಮಿ: ಮಹಾರಾಷ್ಟ್ರದ ನಾಗ್ಪುರ. ಅಂಬೇಡ್ಕರ್ ಅವರು 1956ರ ಅಕ್ಟೋಬರ್ 14ರಂದು, ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮವನ್ನು ಸ್ವೀಕರಿಸಿದ ಐತಿಹಾಸಿಕ ಸ್ಥಳವಿದು. ಇಲ್ಲಿ ಭವ್ಯವಾದ ಸ್ತೂಪವನ್ನು ನಿರ್ಮಿಸಲಾಗಿದೆ.
೪. ಮಹಾಪರಿನಿರ್ವಾಣ ಭೂಮಿ: ದೆಹಲಿ. ಅಂಬೇಡ್ಕರ್ ಅವರು 1956ರ ಡಿಸೆಂಬರ್ 6ರಂದು ನಿಧನರಾದ ಸ್ಥಳ. ಇಲ್ಲಿ ಅವರ ನೆನಪಿಗಾಗಿ ರಾಷ್ಟ್ರೀಯ ಸ್ಮಾರಕವನ್ನು ಸ್ಥಾಪಿಸಲಾಗಿದೆ.
೫. ಚೈತ್ಯಭೂಮಿ: ಮಹಾರಾಷ್ಟ್ರದ ಮುಂಬೈ. ಅಂಬೇಡ್ಕರ್ ಅವರ ಅಂತ್ಯಕ್ರಿಯೆ ನಡೆದ ಸ್ಥಳ. ಅಂಬೇಡ್ಕರ್‌ರ ಅನುಯಾಯಿಗಳಿಗೆ ಪವಿತ್ರ ಸ್ಥಳವಾಗಿರುವ ಇಲ್ಲಿ ಅವರ ಸ್ಮಾರಕ ಸ್ತೂಪವಿದೆ. ಅಂಬೇಡ್ಕರ್‌ರನ್ನು ಮಹಾಚೇತನವೆನ್ನಲು ಹಲವು ಕಾರಣಗಳಿವೆ. ಅವರನ್ನು 1947ರ ಆಗಸ್ಟ್ 29ರಂದು, ಸಂವಿಧಾನ ರಚನಾ ಸಭೆಯ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ವಿವಿಧ ದೇಶಗಳ ಸಂವಿಧಾನಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದ ಅಂಬೇಡ್ಕರ್, ಭಾರತದ ಅಗತ್ಯಗಳಿಗೆ ಅನುಗುಣವಾಗಿ ಅವನ್ನು ಅಳವಡಿಸಿಕೊಂಡು ನಮ್ಮ ಸಂವಿಧಾನದ ರೂಪುರೇಷೆ ಯನ್ನು ತಯಾರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಹುಟ್ಟಿನಿಂದಲೇ ತೀವ್ರ ಜಾತಿ-ತಾರತಮ್ಯ ಮತ್ತು ಅಸ್ಪೃಶ್ಯತೆಯನ್ನು ಅನುಭವಿಸಿದ ಅಂಬೇಡ್ಕರ್, ಈ ಅನ್ಯಾಯದ ವಿರುದ್ಧ ಬದುಕಿ ನುದ್ದಕ್ಕೂ ಹೋರಾಡಿದರು. ಅನೇಕ ಅಡೆತಡೆಗಳಿದ್ದರೂ ಅರ್ಥಶಾಸ್ತ್ರ, ಕಾನೂನು ಮತ್ತು ರಾಜ್ಯ ಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿಗಳನ್ನು ಪಡೆದರು. ಅವರ ಜ್ಞಾನ ಮತ್ತು ವಿದ್ವತ್ತು ಅಸಾಧಾ ರಣವಾದುದಾಗಿತ್ತು. ಅಂಬೇಡ್ಕರ್ ಮತ್ತು ಗಾಂಧೀಜಿಯ ನಡುವಿನ ಸಂಬಂಧವು ಸಂಕೀರ್ಣ ವಾದುದು. ಇಬ್ಬರೂ ಭಾರತೀಯ ಸಮಾಜದ ಸುಧಾರಣೆಗಾಗಿ ಶ್ರಮಿಸಿದ ಮಹಾಚೇತನ ಗಳಾದರೂ, ಅವರ ದೃಷ್ಟಿಕೋನಗಳು ಮತ್ತು ಕಾರ್ಯತಂತ್ರಗಳಲ್ಲಿ ಒಂದಷ್ಟು ವ್ಯತ್ಯಾಸಗಳಿದ್ದವು. ಒಮ್ಮತದ ಅಂಶಗಳನ್ನು ಪರಿಗಣಿಸುವುದಾದರೆ, ಇಬ್ಬರೂ ಭಾರತೀಯ ಸಮಾಜದಲ್ಲಿದ್ದ ಅಸ್ಪೃಶ್ಯತೆ ಮತ್ತು ತಾರತಮ್ಯವನ್ನು ವಿರೋಧಿಸಿದರು, ದುರ್ಬಲ ವರ್ಗಗಳ ಏಳಿಗೆಯನ್ನು ಬಯಸಿದರು ಮತ್ತು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದರು.
ಭಿನ್ನಾಭಿಪ್ರಾಯದ ಅಂಶಗಳನ್ನು ನೋಡುವುದಾದರೆ, ಜಾತಿ ವ್ಯವಸ್ಥೆಯ ಮೂಲಸ್ವರೂಪವನ್ನು ಸಮರ್ಥಿಸಿಕೊಂಡ ಗಾಂಧೀಜಿ, ‘ವರ್ಣಾಶ್ರಮ ಧರ್ಮ’ವನ್ನು ನೈಸರ್ಗಿಕ ಮತ್ತು ಅವಶ್ಯಕವೆಂದು ಪರಿಗಣಿಸಿದರು. ಆದರೆ, ಕಾಲಾನಂತರದಲ್ಲಿ ಜಾತಿ ವ್ಯವಸ್ಥೆಯಲ್ಲಿ ಹುಟ್ಟಿಕೊಂಡಿದ್ದ ಅಸ್ಪೃಶ್ಯತೆ ಮತ್ತು ತಾರತಮ್ಯವನ್ನು ಅವರು ತೀವ್ರವಾಗಿ ವಿರೋಧಿಸಿದರು, ಅಸ್ಪೃಶ್ಯರನ್ನು ‘ಹರಿಜನ’ ಎಂದು ಕರೆದು ಅವರ ಉದ್ಧಾರಕ್ಕಾಗಿ ಶ್ರಮಿಸಿದರು. ಜಾತಿ ವ್ಯವಸ್ಥೆಯನ್ನು ಒಳಗಿನಿಂದಲೇ ಸುಧಾರಿಸ ಬಹುದೆಂದು ಗಾಂಽಜಿ ನಂಬಿದ್ದರು. ಆದರೆ, ಜಾತಿ ವ್ಯವಸ್ಥೆಯನ್ನೇ ಸಂಪೂರ್ಣವಾಗಿ ತಿರಸ್ಕರಿಸಿದ ಅಂಬೇಡ್ಕರ್, ಇದು ಅಸಮಾನತೆ-ತಾರತಮ್ಯ-ಶೋಷಣೆಯ ಮೂಲ ಎಂದು ವಾದಿಸಿದರು.
ಜಾತಿ ವ್ಯವಸ್ಥೆಯು ವ್ಯಕ್ತಿಯ ಅರ್ಹತೆ ಮತ್ತು ಸಾಮರ್ಥ್ಯಗಳನ್ನು ಕಡೆಗಣಿಸುತ್ತದೆ, ಸಮಾಜವನ್ನು ವಿಭಜಿಸುತ್ತದೆ ಎಂದು ಅವರು ನಂಬಿದ್ದರು ಹಾಗೂ ಜಾತಿ ವ್ಯವಸ್ಥೆಯ ನಿರ್ಮೂಲನೆಯೇ ದಲಿತರ ವಿಮೋಚನೆಗೆ ಏಕೈಕ ಮಾರ್ಗವೆಂದು ಪ್ರತಿಪಾದಿಸಿದರು.
ದಲಿತರಿಗೆ ಪ್ರತ್ಯೇಕ ಮತಕ್ಷೇತ್ರಗಳನ್ನು ನೀಡುವ ವಿಷಯದಲ್ಲೂ ಇವರಿಬ್ಬರ ನಡುವೆ ಭಿನ್ನಾಭಿ ಪ್ರಾಯವಿತ್ತು. ‘ದಲಿತರಿಗೆ ರಾಜಕೀಯ ಅಧಿಕಾರ ಮತ್ತು ಪ್ರಾತಿನಿಧ್ಯದ ಖಾತ್ರಿಗೆ ಪ್ರತ್ಯೇಕ ಮತಕ್ಷೇತ್ರ ಗಳು ಅವಶ್ಯ’ ಎಂದು ಅಂಬೇಡ್ಕರ್ ವಾದಿಸಿದರೆ, ‘ಪ್ರತ್ಯೇಕ ಮತಕ್ಷೇತ್ರಗಳು ಹಿಂದೂ ಸಮಾಜವನ್ನು ಮತ್ತಷ್ಟು ವಿಭಜಿಸುತ್ತವೆ’ ಎಂದು ನಂಬಿದ್ದ ಗಾಂಧೀಜಿಯವರು ಅಂಬೇಡ್ಕರ್‌ರ ವಾದವನ್ನು ವಿರೋಧಿಸಿದರು.
1932ರಲ್ಲಿ ನಡೆದ ಪೂನಾ ಒಪ್ಪಂದವು ಈ ಭಿನ್ನಾಭಿಪ್ರಾಯದ ಫಲಿತಾಂಶವಾಗಿತ್ತು; ಇದರಲ್ಲಿ ಪ್ರತ್ಯೇಕ ಮತಕ್ಷೇತ್ರಗಳ ಬದಲಿಗೆ ಸಾಮಾನ್ಯ ಮತಕ್ಷೇತ್ರಗಳಲ್ಲಿ ದಲಿತರಿಗೆ ಮೀಸಲು ಸ್ಥಾನಗಳನ್ನು ಒದಗಿಸಲಾಯಿತು. ಮೇಲ್ಜಾತಿಗಳ ಮನಃಪರಿವರ್ತನೆ ಹಾಗೂ ನೈತಿಕ ಸುಧಾರಣೆಗಳ ಮೂಲಕ ಸಾಮಾಜಿಕ ಬದಲಾವಣೆ ತರಲು ಗಾಂಧೀಜಿ ಯತ್ನಿಸಿದರೆ, ಕಾನೂನು ಮತ್ತು ರಾಜಕೀಯ ಕ್ರಮಗಳ ಮೂಲಕ ರಚನಾತ್ಮಕ ಬದಲಾವಣೆ ತರಬೇಕೆಂದು ಅಂಬೇಡ್ಕರ್ ಪ್ರತಿಪಾದಿಸಿದರು; ಶಿಕ್ಷಣ-ಸಂಘಟನೆ- ಹೋರಾಟದ ಮೂಲಕ ದಲಿತರು ತಮ್ಮ ಹಕ್ಕುಗಳನ್ನು ಪಡೆಯಬೇಕೆಂದು ಅವರು ನಂಬಿದ್ದರು.
ದಲಿತರ ಕುರಿತಾದ ಗಾಂಧೀಜಿಯವರ ನಿಧಾನಗತಿಯ ಸುಧಾರಣಾ ಕ್ರಮಗಳನ್ನು ಅಂಬೇಡ್ಕರ್ ಟೀಕಿಸಿದರೆ, ಪ್ರತ್ಯೇಕ ಮತಕ್ಷೇತ್ರಗಳ ಕುರಿತಾದ ಅಂಬೇಡ್ಕರ್‌ರ ಬೇಡಿಕೆಯನ್ನು ಗಾಂಧೀಜಿ ವಿರೋಧಿಸಿದರು. ಈ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಈ ಇಬ್ಬರೂ ಭಾರತೀಯ ಸಮಾಜದ ಕಲ್ಯಾಣಕ್ಕಾಗಿ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದರು. ಅವರ ಸಂಬಂಧವು ಭಾರತದ ಇತಿಹಾಸದಲ್ಲಿ ಒಂದು ಮಹತ್ವದ ಅಧ್ಯಾಯವಾಗಿದ್ದು, ಇದು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ರಾಜಕೀಯ ಪ್ರಾತಿನಿಧ್ಯದ ಕುರಿತಾದ ಚರ್ಚೆಗಳಿಗೆ ಇಂದಿಗೂ ಪ್ರೇರಣೆ ನೀಡುತ್ತದೆ.
ವಿವಾಹ, ವಿಚ್ಛೇದನ, ಆಸ್ತಿ ಹಕ್ಕು ಮುಂತಾದ ವಿಷಯಗಳಲ್ಲಿ ‘ಹಿಂದೂ ಕೋಡ್ ಬಿಲ್’ ಮಹಿಳೆ ಯರಿಗೆ ಪುರುಷರಷ್ಟೇ ಸಮಾನ ಹಕ್ಕುಗಳನ್ನು ನೀಡುತ್ತದೆ ಎಂದು ಪ್ರತಿಪಾದಿಸಿದ ಅಂಬೇಡ್ಕರ್, ಸಮಾಜದಲ್ಲಿ ಸಾಮಾಜಿಕ ನ್ಯಾಯವನ್ನು ಸ್ಥಾಪಿಸಲು, ಸಮಾಜವನ್ನು ಆಧುನೀಕರಣಗೊಳಿಸಲು ಹಾಗೂ ಮಹಿಳೆಯರಿಗೆ ಘನತೆ-ಸ್ವಾತಂತ್ರ್ಯವನ್ನು ನೀಡಲು ಈ ವಿಧೇಯಕವು ನೆರವಾಗುತ್ತದೆ ಎಂದು ನಂಬಿದ್ದರು. ಆದರೆ ಈ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತವಾದಾಗ ಅಂಬೇಡ್ಕರ್ ಬೇಸರ ಗೊಂಡರು. ಈ ವಿಧೇಯಕವನ್ನು ವಿಳಂಬಗೊಳಿಸಿದ ಮತ್ತು ಅದರ ಪ್ರಮುಖ ಅಂಶಗಳನ್ನು ದುರ್ಬಲಗೊಳಿಸಿದ ಸರಕಾರದ ಧೋರಣೆಗೆ ಪ್ರತಿಭಟಿಸಿ 1951ರಲ್ಲಿ ಕಾನೂನು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ತಮ್ಮದೇ ಆದ ಸ್ಪಷ್ಟ ಅಭಿಪ್ರಾಯಗಳನ್ನು ಹೊಂದಿದ್ದ ಅಂಬೇಡ್ಕರ್, “ಧರ್ಮಾಧಾರಿತ ವೈಯಕ್ತಿಕ ಕಾನೂನುಗಳನ್ನು ರದ್ದುಪಡಿಸಬೇಕು ಮತ್ತು ಎಲ್ಲ ನಾಗರಿಕರಿಗೂ ಒಂದೇ ರೀತಿಯ ಕಾನೂನು ಇರಬೇಕು" ಎಂದು ವಾದಿಸಿ, ಈ ಪರಿಕಲ್ಪನೆಯನ್ನು ಬಲವಾಗಿ ಬೆಂಬಲಿಸಿದರು. ವೈಯಕ್ತಿಕ ಕಾನೂನುಗಳು ಮಹಿಳೆಯರನ್ನು ಕೀಳಾಗಿ ಕಾಣುತ್ತವೆ, ಲಿಂಗ ಅಸಮಾನತೆಯನ್ನು ಶಾಶ್ವತಗೊಳಿಸುತ್ತವೆ ಎಂದು ನಂಬಿದ್ದ ಅವರು, ವಿವಾಹ, ವಿಚ್ಛೇದನ, ಆಸ್ತಿ ಹಕ್ಕು ಮತ್ತು ದತ್ತು ಮುಂತಾದ ವಿಷಯಗಳಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡುವ ಏಕರೂಪ ನಾಗರಿಕ ಸಂಹಿತೆಯು ಲಿಂಗನ್ಯಾಯವನ್ನು ಖಾತ್ರಿಪಡಿಸುತ್ತದೆ ಎಂದು ಪ್ರತಿಪಾದಿಸಿದರು.
ಭಾರತವು ಧರ್ಮನಿರಪೇಕ್ಷ ರಾಷ್ಟ್ರವಾಗಿರಬೇಕು ಮತ್ತು ಧರ್ಮವು ಕಾನೂನು ವಿಷಯಗಳ ಮೇಲೆ ಪ್ರಭಾವ ಬೀರಬಾರದು ಎಂದು ಪ್ರತಿಪಾದಿಸಿದ ಅಂಬೇಡ್ಕರ್, ಏಕರೂಪ ನಾಗರಿಕ ಸಂಹಿತೆಯು ರಾಷ್ಟ್ರೀಯ ಏಕತೆಯನ್ನು ಉತ್ತೇಜಿಸುತ್ತದೆ, ಧಾರ್ಮಿಕ-ಸಾಂಸ್ಕೃತಿಕ ಭಿನ್ನತೆಗಳನ್ನು ಮೀರಿ ಎಲ್ಲ ಭಾರತೀಯರನ್ನೂ ಒಂದೇ ಕಾನೂನಿನ ಅಡಿಯಲ್ಲಿ ತರುತ್ತದೆ ಎಂದು ವಾದಿಸಿದರು. ಂಥದೊಂದು ಸಂಹಿತೆಯು ಅಪೇಕ್ಷಣೀಯವಾಗಿದ್ದರೂ ಅದನ್ನು ತಕ್ಷಣವೇ ಜಾರಿಗೊಳಿಸುವುದು ಸೂಕ್ತವಲ್ಲ ಎಂಬುದು ಅಂಬೇಡ್ಕರ್‌ರ ಅಭಿಪ್ರಾಯವಾಗಿತ್ತು. ಸಂವಿಧಾನ ರಚನೆಯ ಸಂದರ್ಭದಲ್ಲಿ ಈ ವಿಷಯದ ಬಗ್ಗೆ ವ್ಯಾಪಕ ಭಿನ್ನಾಭಿಪ್ರಾಯಗಳಿದ್ದವು.
ಹೀಗಾಗಿ ಅದನ್ನು ರಾಜ್ಯನೀತಿಯ ನಿರ್ದೇಶಕ ತತ್ವಗಳ ಭಾಗವಾಗಿ (ವಿಧಿ 44) ಸೇರಿಸಲಾಯಿತು. ಭವಿ ಷ್ಯದ ಸೂಕ್ತ ಸಮಯದಲ್ಲಿ, ಸಮಾಜದಲ್ಲಿ ಒಮ್ಮತ ಮೂಡಿದ ನಂತರ ಅದನ್ನು ಜಾರಿಗೊಳಿಸಬಹುದು ಎಂಬುದು ಅವರ ನಿಲುವಾಗಿತ್ತು. ದಲಿತರ ಹಕ್ಕುಗಳ ಪ್ರಬಲ ದನಿಯಾಗಿದ್ದ, ಅವರ ಘನತೆ-ಸಮಾನತೆಗಾಗಿ ನಿರಂತರ ಹೋರಾಡಿದ ಅಂಬೇಡ್ಕರ್ ಅವರು ಭಾರತದಲ್ಲಿ ಜನಿಸಿದ ಒಂದು ಮಹಾಚೇತನ. ಅವರನ್ನು ನಿರಂತರ ನೆನೆಯೋಣ, ಗೌರವಿಸೋಣ.
(ಲೇಖಕರು ಉಪನ್ಯಾಸಕರು)