ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr N Someshwara Column: ಸುಶ್ರುತನನ್ನು ಸ್ಮರಿಸದ ಮಧ್ಯಯುಗದ ಮುಸ್ಲಿಮರು

ಮೆಸೊಪೊಟೋಮಿಯನ್ ಪ್ರದೇಶವನ್ನು ಆಳಿದ ಬ್ಯಾಬಿಲೋನಿಯನ್ನರ ‘ಇಸಗಿಲ್-ಕಿನ್-ಅಪ್ಲಿ’ ಎಂಬ ವೈದ್ಯನು ಕ್ರಿ.ಪೂ.1069ರಲ್ಲಿ ರೋಗನಿದಾನಿಕ ಕೈಪಿಡಿ (ಡಯಾಗ್ನೋಸ್ಟಿಕ್ ಹ್ಯಾಂಡ್‌ಬುಕ್) ಎಂಬ ವೈದ್ಯಕೀಯ ಪುಸ್ತಕವನ್ನು ಬರೆದ. ಆತ ಈ ಪುಸ್ತಕದಲ್ಲಿ ಕಣ್ಣುಗಳಿಗೆ ಬರುವ 12 ರೋಗಗಳನ್ನು ಪಟ್ಟಿ ಮಾಡಿ, ಅವುಗಳ ಲಕ್ಷಣಗಳನ್ನು ಹಾಗೂ ಚಿಕಿತ್ಸೆಯನ್ನು ಸೂಚಿಸಿದ.

ಸುಶ್ರುತನನ್ನು ಸ್ಮರಿಸದ ಮಧ್ಯಯುಗದ ಮುಸ್ಲಿಮರು

-

ಹಿಂದಿರುಗಿ ನೋಡಿದಾಗ

‘ಸರ್ವೇಂದ್ರಿಯಾಣಾಂ ನಯನಂ ಪ್ರಧಾನಮ್’ ಎಂದರು ನಮ್ಮ ಹಿರಿಯರು. ನಮಗೆ ನಮ್ಮ ಹೊರ ಜಗತ್ತಿನ ಬಹುಪಾಲು ಅನುಭವವು ಕಣ್ಣುಗಳ ಮೂಲಕವೇ ಆಗುತ್ತದೆ. ಎಲ್ಲಿಯವರೆಗೆ ನಮ್ಮ ಕಣ್ಣು ಗಳು ಸ್ವಸ್ಥವಾಗಿ ಕೆಲಸ ಮಾಡುತ್ತಿರುತ್ತವೆಯೋ, ಅಲ್ಲಿಯವರೆಗೆ ನಾವು ಸ್ವಾವಲಂಬಿಗಳಾಗಿ ಬದುಕನ್ನು ನಡೆಸಲು ಸಾಧ್ಯವಾಗುತ್ತದೆ.

ನಮ್ಮ ಕಣ್ಣುಗಳಿಗೆ ಯಾವುದಾದರೂ ರೀತಿಯ ದೃಷ್ಟಿ ಸಮಸ್ಯೆ ಬಂದರೆ, ಕಣ್ಣುಗಳು ಮಾತ್ರವಲ್ಲ ನಮ್ಮ ಬದುಕಿಗೇ ಕತ್ತಲು ಕವಿಯುತ್ತದೆ. ಕಣ್ಣುಗಳ ಬಗ್ಗೆ, ಕಣ್ಣುಗಳು ಕೆಲಸ ಮಾಡುವ ಬಗ್ಗೆ, ಕಣ್ಣುಗಳಿಗೆ ಬರುವ ನಾನಾ ರೋಗಗಳ ಬಗ್ಗೆ, ಅವುಗಳಿಗೆ ದೊರೆಯುವ ಚಿಕಿತ್ಸೆಯ ಬಗ್ಗೆ ಹಾಗೂ ಕಣ್ಣಿನ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ನಾವು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಮ್ಮ ತಿಳಿವಳಿಕೆಯು ಬೆಳೆದುಬಂದ ಹಾದಿಯು ರೋಚಕವಾಗಿದೆ. ಆ ಬಗ್ಗೆ ಒಂದು ಪಕ್ಷಿನೋಟವನ್ನು ಹರಿಸೋಣ.

ಮೆಸಪೊಟೋಮಿಯ: ಮೆಸೊಪೊಟೋಮಿಯ, ಮಾನವ ನಾಗರಿಕತೆಯ ಮಹಾ ತೊಟ್ಟಿಲು. ಹಾಗಾಗಿ ಅವರು ಕಣ್ಣುಗಳ ಬಗ್ಗೆ ಅಪಾರ ಆಸಕ್ತಿಯನ್ನು ತೋರಿದ ಮೊದಲಿಗರು ಎನ್ನುವುದರಲ್ಲಿ ಆಶ್ಚರ್ಯವಿಲ್ಲ. ಮೆಸೊಪೊಟೋಮಿಯವನ್ನು ಆಳಿದ ಸುಮೇರಿಯನ್ನರು, ಕ್ರಿ.ಪೂ.2500ರ ಹೊತ್ತಿಗೆ ಕ್ಯೂನಿಫಾರಂ ಬರಹವನ್ನು ಕಲಿತು, ಜೇಡಿಮಣ್ಣಿನ ಹಲಗೆಯ ಮೇಲೆ ತಮ್ಮ ಸಮಕಾಲೀನ ಇತಿಹಾಸವನ್ನೆಲ್ಲ ದಾಖಲಿಸಿದರು.

ಇದನ್ನೂ ಓದಿ: Dr N Someshwara Column: ಮನುಕುಲ ರಚಿಸಿದ ಸಾರ್ವಕಾಲಿಕ ಶ್ರೇಷ್ಠ ಗ್ರಂಥ: ಗ್ರೇಸ್‌ ಅನಾಟಮಿ

ಇವರು ಕಣ್ಣಿಗೆ ಬರುವ ನಾನಾ ರೋಗಗಳ ಬಗ್ಗೆ ವಿವರಿಸಿರುವರು. “ದೃಷ್ಟಿ ಎನ್ನುವುದು ದೈವೀಕ ವಾದದ್ದು. ಆದರೆ ದುಷ್ಟ ಶಕ್ತಿಗಳಿಗೆ ಕೋಪ ಬಂದಾಗ, ಅವು ನಮ್ಮ ಕಣ್ಣುಗಳಿಗೆ ನಾನಾ ಅನಾ ರೋಗ್ಯಗಳನ್ನು ಉಂಟು ಮಾಡುತ್ತವೆ. ನಿಂಗಿಷ್ಜಿದ ಎಂಬ ದೈವವು ನಮ್ಮ ದೃಷ್ಟಿಯನ್ನು ರಕ್ಷಿಸು ತ್ತದೆ. ಹಾಗಾಗಿ ನಾವು ಸದಾ ನಿಂಗಿಷ್ಜಿದ ದೈವದ ಕೃಪೆಗಾಗಿ ಪ್ರಾರ್ಥಿಸಬೇಕು" ಎನ್ನುತ್ತದೆ ಆ ಕ್ಯೂನಿಫಾರಮ್ ಬರಹ.

ಮೆಸೊಪೊಟೋಮಿಯನ್ ಪ್ರದೇಶವನ್ನು ಆಳಿದ ಬ್ಯಾಬಿಲೋನಿಯನ್ನರ ‘ಇಸಗಿಲ್-ಕಿನ್-ಅಪ್ಲಿ’ ಎಂಬ ವೈದ್ಯನು ಕ್ರಿ.ಪೂ.1069ರಲ್ಲಿ ರೋಗನಿದಾನಿಕ ಕೈಪಿಡಿ (ಡಯಾಗ್ನೋಸ್ಟಿಕ್ ಹ್ಯಾಂಡ್‌ಬುಕ್) ಎಂಬ ವೈದ್ಯಕೀಯ ಪುಸ್ತಕವನ್ನು ಬರೆದ. ಆತ ಈ ಪುಸ್ತಕದಲ್ಲಿ ಕಣ್ಣುಗಳಿಗೆ ಬರುವ ೧೨ ರೋಗ ಗಳನ್ನು ಪಟ್ಟಿಮಾಡಿ, ಅವುಗಳ ಲಕ್ಷಣಗಳನ್ನು ಹಾಗೂ ಚಿಕಿತ್ಸೆಯನ್ನು ಸೂಚಿಸಿದ.

ಕೆಂಗಣ್ಣು, ಕಣ್ಣಿನ ಊತ, ಕಣ್ಣಿನಿಂದ ಕೀವು ಸೋರುವಿಕೆ ಹಾಗೂ ಇರುಳ್ಗುರುಡತನ (ನೈಟ್ ಬ್ಲೈಂಡೆ ಡ್‌ನೆಸ್, ವಿಟಮಿನ್-ಎ ಕೊರತೆಯಿಂದ ಬರುವ ದೃಷ್ಟಿದೋಷ) ವನ್ನು ವಿವರಿಸಿದ. ಚಿಕಿತ್ಸಾ ರೂಪ ದಲ್ಲಿ ಔಷಧಗಳ ಜತೆಯಲ್ಲಿ ತಂತ್ರ-ಮಂತ್ರಗಳನ್ನು ಉಪಯೋಗಿಸಬೇಕೆಂದ. ಕಣ್ಣುಗಳಿಗೆ ಚಿಕಿತ್ಸೆ ಯನ್ನು ನೀಡುವ ‘ಅಸಿಪು’ ಎಂಬ ವೈದ್ಯ ಪುರೋಹಿತನು,

ಮಂತ್ರಗಳನ್ನು ನಿರಂತರವಾಗಿ ಜಪಿಸುತ್ತಾ ಕಣ್ಣುಗಳನ್ನು ಬಿಯರ್ (ಆಲ್ಕೋಹಾಲ್ ಸೋಂಕು ನಾಶಕ) ಅಥವಾ ಜೇನುತುಪ್ಪದಿಂದ (ಆಂಟಿಬಯೋಟಿಕ್ ಒಳಗೊಂಡ ಔಷಧ) ಚೆನ್ನಾಗಿ ತೊಳೆದು ನಂತರ ಔಷಧಗಳನ್ನು ಲೇಪಿಸುತ್ತಿದ್ದ. ಮೆಸೊಪೊಟೋಮಿಯನ್ನರ ನೇತ್ರ ವೈದ್ಯಕೀಯವು ಪ್ರಧಾನ ವಾಗಿ ಮಂತ್ರ-ತಂತ್ರಗಳಿಂದ ಕೂಡಿತ್ತು ಎಂಬುದು ನಿಜವಾದರೂ, ಅವರ ರೋಗಲಕ್ಷಣ ಅವಲೋಕನಾ ಸಾಮರ್ಥ್ಯವು ಅದ್ಭುತವಾದದ್ದು.

ಒಂದು ಕಣ್ಣಿಗೆ ಸೋಂಕು ಬಂದರೆ, ಅದು ಮತ್ತೊಂದು ಕಣ್ಣಿಗೆ ಹರಡಬಲ್ಲದು ಎಂದು ಅವರು ತಿಳಿದಿದ್ದರು. ಗಾಳಿ ಮತ್ತು ಧೂಳು ನೇತ್ರರೋಗಗಳನ್ನು ಉಲ್ಬಣಿಸುತ್ತವೆ ಎಂಬ ತಿಳಿವಳಿಕೆಯು ಅವರಿಗಿತ್ತು. ಹಾಗಾಗಿ ಮೆಸೊಪೊಟೋಮಿಯನ್ ಸಂಸ್ಕೃತಿಯ ವೈದ್ಯರು, ಕಣ್ಣುಗಳ ಆರೋಗ್ಯಕ್ಕೆ ಆದ್ಯತೆಯನ್ನು ನೀಡಿದ್ದರು ಎನ್ನಬಹುದು.

ಈಜಿಪ್ಟ್: ಈಜಿಪ್ಷಿಯನ್ನರು ನೇತ್ರ ವೈದ್ಯಕೀಯಕ್ಕೆ ಅಪಾರ ಆದ್ಯತೆಯನ್ನು ನೀಡುತ್ತಿದ್ದರು ಎನ್ನುವುದಕ್ಕೆ ಒಂದು ಪೌರಾಣಿಕ ಕಥೆಯಿದೆ. ‘ಹೋರಸ್’ ಎಂಬ ದೇವತೆಯ ಕಣ್ಣನ್ನು ‘ಸೆತ್’ ಎಂಬ ಸೈತಾನನು ಬಗೆದು ಹಾಕುತ್ತಾನೆ. ‘ಥೊತ್’ ಎಂಬ ಜ್ಞಾನದೇವತೆಯು ಕಣ್ಣನ್ನು ಮರುಜೋಡಿಸಿ ದೃಷ್ಟಿಯನ್ನು ಹಿಮ್ಮರಳಿಸುತ್ತಾನೆ. ಈ ಪೌರಾಣಿಕ ಕಥೆಯ ಆಶಯವನ್ನು ಈಜಿಪ್ಷಿಯನ್ ವೈದ್ಯರು ತಮ್ಮ ದೈನಂದಿನ ವೃತ್ತಿಜೀವನದಲ್ಲಿ ನಿರೀಕ್ಷಿಸುತ್ತಿದ್ದರು ಎನ್ನಬಹುದು.

ಈಬರ್ಸ್ ಪ್ಯಾಪಿರಸ್ (ಕ್ರಿ.ಪೂ.1550) ಎಂಬ ವೈದ್ಯಕೀಯ ಗ್ರಂಥವು ಪುರಾತನ ವೈದ್ಯಕೀಯ ಗ್ರಂಥಗಳಲ್ಲಿ ಒಂದಾಗಿದೆ. ಇದರ ೧/೫ ಭಾಗವನ್ನು ಕೇವಲ ನೇತ್ರಾರೋಗ್ಯಕ್ಕಾಗಿ ಮೀಸಲಿಡಲಾಗಿದೆ. ಕೆಂಗಣ್ಣು, ಟ್ರಕೋಮ ಮತ್ತು ಕಣ್ಣುಪೊರೆಗಳ ಬಗ್ಗೆ ಇದರಲ್ಲಿ ವಿವರವಿದೆ. ಕಣ್ಣಿನ ಕಾಯಿಲೆಗಳನ್ನು ಗುಣಪಡಿಸಲು ೧೦೦ಕ್ಕೂ ಹೆಚ್ಚು ಔಷಧಗಳನ್ನು ಇದರಲ್ಲಿ ಸೂಚಿಸಲಾಗಿದೆ.

ಅವುಗಳಲ್ಲಿ ತಾಮ್ರ ಸಂಯುಕ್ತಗಳು, ಜೇನುತುಪ್ಪ ಮತ್ತು ಮ್ಯಾಲಕೈಟ್ ಗ್ರೀನ್‌ನಂಥ ಖನಿಜಗಳನ್ನು ಪ್ರತಿಜೈವಿಕಗಳನ್ನಾಗಿ (ಆಂಟಿಬಯೋಟಿಕ್ಸ್) ಬಳಸುತ್ತಿದ್ದರು ಎನ್ನುವುದು ಗಮನೀಯ. ಈಜಿಪ್ಷಿಯ ನ್ನರು ತಮ್ಮ ನೇತ್ರವೈದ್ಯರನ್ನು ‘ಸುನು ಇರ್ತಿ’ ಎಂದು ಕರೆಯುತ್ತಿದ್ದರು. ಹಾಗಾಗಿ ಮಾನವನ ಇತಿಹಾಸದಲ್ಲಿ ‘ನೇತ್ರವೈದ್ಯಕೀಯ’ ಎಂಬ ವಿಶೇಷ ವೈದ್ಯಕೀಯ ಶಾಖೆಯನ್ನು ಆರಂಭಿಸಿದ ಕೀರ್ತಿಯು ಈಜಿಪ್ಷಿಯನ್ನರಿಗೆ ಸೇರುತ್ತದೆ ಎನ್ನಬಹುದು.

ಹೋರಸ್ ದೇವತೆಯ ಆಲಯದ ಹೆಸರು ಕೋಮ್ ಓಮ್ಬೊ. ಅಲ್ಲಿ ನೇತ್ರಚಿಕಿತ್ಸೆಯಲ್ಲಿ ಬಳಸುತ್ತಿದ್ದ ನಾನಾ ಶಸ್ತ್ರ ವೈದ್ಯಕೀಯ ಉಪಕರಣಗಳಿವೆ. ಅವು ಇಂದಿನ ಆಧುನಿಕ ವೈದ್ಯಕೀಯ ಉಪಕರಣ ಗಳನ್ನು ಬಹುಪಾಲು ಹೋಲುತ್ತವೆ.

ಭಾರತ: ಭಾರತೀಯರು ‘ದೃಷ್ಟಿ’ ಮತ್ತು ‘ಅಂತರ್ದೃಷ್ಟಿ’ ಎಂದು, ನೋಟದ ಅರ್ಥವನ್ನು ಅಧ್ಯಾತ್ಮದೆಡೆಗೆ ವಿಸ್ತರಿಸಿದ್ದರು. ಸಂಪೂರ್ಣ ಆರೋಗ್ಯವು ಸಿದ್ಧಿಸಬೇಕಾದರೆ ದೇಹ, ಮನಸ್ಸು ಮತ್ತು ಆತ್ಮಗಳ ನಡುವೆ ಸಮತೋಲನವಿರಬೇಕು ಎಂದರು. ಅಧ್ಯಾತ್ಮದ ನೆರಳಿನಲ್ಲಿಯೇ ಭಾರತೀಯ ನೇತ್ರವೈದ್ಯಕೀಯವು ಬೆಳೆದುಬಂದಿತು.

ಸುಶ್ರುತ (ಕ್ರಿ.ಪೂ.೬೦೦) ‘ಶಸ್ತ್ರವೈದ್ಯಕೀಯದ ಪಿತಾಮಹ’ ಎಂಬ ಅಭಿದಾನಕ್ಕೆ ಪಾತ್ರನಾದವನು. ನೇತ್ರವೈದ್ಯಕೀಯಕ್ಕೆ ಸಂಬಂಧಪಟ್ಟ ಹಾಗೆ ಸುಶ್ರುತನು ನೀಡಿರುವ ಕಾಣಿಕೆಯು ಅದ್ವಿತೀಯ. ಪೌರ್ವಾತ್ಯ, ಮಧ್ಯಪ್ರಾಚ್ಯ ಹಾಗೂ ಪಾಶ್ಚಾತ್ಯ ದೇಶಗಳ ನೇತ್ರವೈದ್ಯರು, ಸುಮಾರು ೨೦೦೦ ವರ್ಷಗಳವರೆಗೆ, ಸುಶ್ರುತನು ನೀಡಿದ ಮಾರ್ಗದರ್ಶದಲ್ಲಿಯೇ ನೇತ್ರರೋಗಗಳಿಗೆ ಚಿಕಿತ್ಸೆಯನ್ನು ನೀಡುತ್ತಿದ್ದರು. ಸುಶ್ರುತನ ಹೆಗ್ಗಳಿಕೆಯೇನು ಎನ್ನುವುದನ್ನು ಸ್ಥೂಲವಾಗಿ ನೋಡೋಣ.

ಸುಶ್ರುತ ಮೊದಲ ಬಾರಿಗೆ ಕಣ್ಣು, ಕಣ್ಣಿನ ರಚನೆ ಮತ್ತು ಕಣ್ಣಿನ ಭಾಗಗಳನ್ನು ಗುರುತಿಸಿದ. ಕಣ್ಣಿನ ಬಿಳಿಯ ಭಾಗವನ್ನು ‘ಶುಕ್ಲಮಂಡಲ’ ಎಂದ. ಕಪ್ಪು ಭಾಗವನ್ನು ‘ಕೃಷ್ಣಮಂಡಲ’ ಎಂದ. ಕಣ್ಣು ರೆಪ್ಪೆಗಳು, ಅವುಗಳಲ್ಲಿರುವ ಕೂದಲು ಹಾಗೂ ಅಶ್ರುಗ್ರಂಥಿಯ ನಾಳವನ್ನು (ಟಿಯರ್ ಡಕ್ಟ್) ವಿವರಿಸಿದ. ಜತೆಗೆ ನಮ್ಮ ನೋಟಕ್ಕೆ ಕಾರಣವಾಗುವ ಭಾಗವನ್ನು ದೃಷ್ಟಿಮಂಡಲ (ಮಸೂರ) ಎಂದು ಕರೆದ.

೭೬ ನೇತ್ರರೋಗಗಳ ಪಟ್ಟಿಯನ್ನು ಮಾಡಿದ. ಕಣ್ಣು ರೆಪ್ಪೆ, ಕೂಡುಪೊರೆ (ಕಂಜಂಕ್ಟೈವ), ಬಿಳ್ಪದರ (ಸ್ಕ್ಲೀರ), ಪಾರಪಟಲ (ಕಾರ್ನಿಯ), ಕನೀನಿಕೆ (ಐರಿಸ್) ಮತ್ತು ಮಸೂರಕ್ಕೆ ಸಂಬಂಧಪಟ್ಟ ಹಲವು ರೋಗಗಳನ್ನು ವಿವರಿಸಿದ. ಕಣ್ಣುಪೊರೆಯನ್ನು ‘ಲಿಂಗನಾಶತ’ ಎಂದು ಕರೆದ.

ಮನುಷ್ಯನಿಗೆ ರೋಗಜನಕ ಸೂಕ್ಷ್ಮಜೀವಿಗಳ ಅಸ್ತಿತ್ವವು ತಿಳಿಯುವ ಮೊದಲೇ ಆತ ಸ್ವಚ್ಛತೆಯ ನಿಯಮಗಳನ್ನು ಪರಿಪಾಲಿಸಲೇಬೇಕಾದ ಅಗತ್ಯವನ್ನು ಒತ್ತಿ ಹೇಳಿದ. ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಣ್ಣುಗಳನ್ನು ಯಾವಾಗಲು ಸ್ವಚ್ಛವಾದ ನೀರಿನಿಂದ ತೊಳೆಯಬೇಕು; ವಿನಾಕಾರಣ ಗಾಳಿ, ಧೂಳಿಗೆ ಕಣ್ಣುಗಳನ್ನೊಡ್ಡಬಾರದು, ಕಣ್ಣುಗಳನ್ನು ಉಜ್ಜಬಾರದು, ಹಿತ-ಮಿತ ಆಹಾರವನ್ನು ಸೇವಿಸಬೇಕು ಹಾಗೂ ಸ್ವಸ್ಥವಾಗಿ ನಿದ್ರಿಸಬೇಕು ಎಂದು ಕಟ್ಟಪ್ಪಣೆಯನ್ನು ನೀಡಿದ.

ಸುಶ್ರುತ ಸುಮಾರು ೧೨೦ ವಿವಿಧ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ರೂಪಿಸಿದ. ಇಂದು ನಾವು ಸುಶ್ರುತನ ಉಪಕರಣಗಳಲ್ಲಿ ಅಲ್ಪಸ್ವಲ್ಪ ಬದಲಾವಣೆಯನ್ನು ಮಾಡಿಕೊಂಡು ಇಂದಿಗೂ ಬಳಸು ತ್ತಿದ್ದೇವೆ. ಸುಶ್ರುತ ತನ್ನ ಉಪಕರಣಗಳನ್ನು ಕಬ್ಬಿಣ ಮತ್ತು ಕಂಚಿನಿಂದ ತಯಾರಿಸಿದ. ಅವುಗಳನ್ನು ಹೇಗೆ ಹರಿತಗೊಳಿಸಬೇಕು ಹಾಗೂ ಹೇಗೆ ಸ್ವಚ್ಛಗೊಳಿಸಬೇಕು ಎನ್ನುವ ಬಗ್ಗೆ ಮಾರ್ಗದರ್ಶನವನ್ನು ನೀಡಿದ.

ಪ್ರಾಣಿಗಳ ಅಂಗಗಳ ಮೇಲೆ, ಹಣ್ಣುಗಳ ಮೇಲೆ, ಚರ್ಮದ ಚೀಲದ ಮೇಲೆ, ಪ್ರಾಣಿಮೂತ್ರಾಶಯದ ಮೇಲೆ ವಿದ್ಯಾರ್ಥಿಗಳು ಶಸಪ್ರಯೋಗವನ್ನು ಮಾಡಿ, ಶಸ್ತ್ರಚಿಕಿತ್ಸಾ ತಂತ್ರಗಳನ್ನು ಕಲಿಯಬೇಕು ಎಂದ.

ಸುಶ್ರುತ ಮಹರ್ಷಿಗಳು ಮಸೂರವನ್ನು ‘ಲಿಂಗ’ ಅಥವಾ ‘ದೃಷ್ಟಿಪಟಲ’ ಎಂದು ಕರೆದರು. ದೃಷ್ಟಿಮಂದವಾವ ಆರಂಭ ಹಂತವನ್ನು ‘ತಿಮಿರ’ (ಕತ್ತಲು) ಎಂದು, ಎಳೆಯ ಪೊರೆಯನ್ನು ‘ಕಚ’ ಎಂದು ಹಾಗೂ ಬಲಿತಪೊರೆಯನ್ನು ‘ಲಿಂಗನಾಶತ’ ಎಂದು ಗುರುತಿಸಿದರು. ಕಣ್ಣುಪೊರೆಯ ಶಸಚಿಕಿತ್ಸೆಯನ್ನು ಲೇಖನ ಕರ್ಮ, ಭೇದನ ಕರ್ಮ, ಲಿಂಗನಾಶ ನೇತ್ರಕರ್ಮ ಎಂದು ಕರೆದರು. ಈ ಶಸ್ತ್ರಚಿಕಿತ್ಸೆಯಲ್ಲಿ ಬಳಸುವ ವಿಶೇಷ ಬಾಗು ಸೂಜಿಯನ್ನು ‘ಜಬಾಮುಖಿ ಶಲಾಕ’ ಎಂದು ಕರೆದರು.

ಪಾಶ್ಚಾತ್ಯ ವೈದ್ಯಕೀಯವು ಸುಶ್ರುತನ ಶಸಚಿಕಿತ್ಸಾ ತಂತ್ರವನ್ನು ‘ಕೌಚಿಂಗ್’ ಎಂದು ಕರೆಯಿತು. ಇದನ್ನು ಕನ್ನಡದಲ್ಲಿ ‘ದೂಡುವಿಕೆ’ ಎನ್ನಬಹುದು. ಅಪಾರದರ್ಶಕ ಮಸೂರವನ್ನು ಸ್ವಸ್ಥಾನದಿಂದ ಬೇರ್ಪಡಿಸಿ, ಹಿಂದಕ್ಕೆ ದೂಡುವುದು ಈ ಶಸ್ತ್ರಚಿಕಿತ್ಸೆಯ ಸಾರವಾಗಿದೆ.

ಕಣ್ಣುಪೊರೆಯ ಚಿಕಿತ್ಸೆಯನ್ನು ಮಾಡಿಸಿಕೊಳ್ಳುವ ರೋಗಿಯು ಬೆಳಕಿಗೆ ಎದುರಾಗಿ ಕುಳಿತು ಕೊಳ್ಳಬೇಕು. ಕಣ್ಣಿಗೆ ಔಷಧಯುಕ್ತ ಬೆಣ್ಣೆಯನ್ನು ಲೇಪಿಸಿ, ಕಣ್ಣನ್ನು ಮೆತುಗೊಳಿಸುತ್ತಿದ್ದರು. ನಂತರ ಕಣ್ಣಿನ ಬಿಳಿಯ ಭಾಗವು ಕಪ್ಪುಭಾಗವನ್ನು ಸೇರುವ ಅಂಚಿನಲ್ಲಿ ಅಥವಾ ಸಂಧಿಸ್ಥಾನದಲ್ಲಿ ಲಿಂಬಸ್) ಬಾಗುಸೂಜಿಯ ಮೂಲಕ ಚುಚ್ಚಿ, ಅಪಾರದರ್ಶಕವಾಗಿರುವ ಮಸೂರವನ್ನು ಸ್ವಸ್ಥಾನ ದಲ್ಲಿ ಕಳಚಿ, ಹಿಂದಕ್ಕೆ ದೂಡುತ್ತಿದ್ದರು. ರೋಗಿಯು ತನಗೆ ಬೆಳಕು ಕಾಣುತ್ತಿದೆ ಎನ್ನುತ್ತಿರುವಂತೆಯೇ ಕಣ್ಣಿಗೆ ಪಟ್ಟಿಯನ್ನು ಕಟ್ಟಿ ಕತ್ತಲಕೋಣೆಯಲ್ಲಿ ಮಲಗಿಸುತ್ತಿದ್ದರು. ಕಾಲಕಾಲಕ್ಕೆ ಔಷಧಗಳನ್ನು ಲೇಪಿಸಿ, ಪಥ್ಯಾಹಾರವನ್ನು ವಿಧಿಸುತ್ತಿದ್ದರು.

ಕಣ್ಣುಪೊರೆಯ ಶಸ್ತ್ರಚಿಕಿತ್ಸೆಯು ಯಶಸ್ವಿಯಾಗಬೇಕಾದರೆ, ಸೂಕ್ತ ರೋಗಿಯನ್ನು ಮಾತ್ರ ಆಯ್ಕೆ ಮಾಡಬೇಕು, ಶಸವೈದ್ಯನ ಕೈಬೆರಳುಗಳು ಅನಗತ್ಯವಾಗಿ ಕಂಪಿಸದೆ ಸ್ಥಿರವಾಗಿರಬೇಕು ಹಾಗೂ ರೋಗಿಯ ಸಾಮಾನ್ಯ ಆರೋಗ್ಯವು ಚೆನ್ನಾಗಿರಬೇಕು ಎಂದರು. ಹಣಕ್ಕಾಗಿ ಎಂದಿಗೂ ಅನರ್ಹ ರೋಗಿಯ ಮೇಲೆ ಶಸಪ್ರಯೋಗ ಮಾಡಬಾರದು ಎಂಬ ಎಚ್ಚರಿಕೆಯನ್ನೂ ನೀಡಿದ್ದು ಸುಶ್ರುತ ಮಹರ್ಷಿಗಳ ಹೆಗ್ಗಳಿಕೆಯಾಗಿದೆ.

8ನೆಯ ಶತಮಾನದಲ್ಲಿ ಅರಬ್ಬರು ಬಾಗ್ದಾದ್ ನಗರದ ಅಬ್ಬಾಸಿದ್ ಖಲೀಫರ ಆಶ್ರಯದಲ್ಲಿ ಸುಶ್ರುತ ಸಂಹಿತೆಯನ್ನು ‘ಕಿತಾಬ್ ಸುಶ್ರುದ್’ ಎಂಬ ಹೆಸರಿನಲ್ಲಿ ಅರಾಬಿಕ್ ಭಾಷೆಗೆ ಅನುವಾದಿಸಿದರು. ಆದರೆ ಇವರು ಸುಶ್ರುತ ಸಂಹಿತೆ ಮತ್ತು ಚರಕ ಸಂಹಿತೆಗಳನ್ನು ಅನುವಾದಿಸಿದ ಮೇಲೆ, ಅವುಗಳಲ್ಲಿ ರುವ ವಿಚಾರಗಳನ್ನು ತೆಗೆದುಕೊಂಡು, ಅವು ತಮ್ಮದೇ ಎಂಬಂತೆ, ಅಲ್-ರಾಜ಼ಿ ‘ಕಿತಾಬ್ ಅಲ್-ಹವಿ’, ಅಲಿ ಇಬ್ನ್ ಅಲಿ ಅಬ್ಬಾಸ್ ಅಲ್ ಮೌಜಿಸಿ ‘ಕಿತಾಬ್ -ಅಸ್ಲ್-ಮಲಿಕಿ’ ಹಾಗೂ ಅವಿಸೆನ್ನ ‘ಕ್ಯಾನನ್ ಆಫ್ ಮೆಡಿಸಿನ್’ ಎಂಬ ಗ್ರಂಥಗಳನ್ನು ರಚಿಸಿದರು. ಆದರೆ ಅವರು ಎಲ್ಲಿಯೂ ಭಾರತೀಯ ಮೂಲಕೃತಿಗಳನ್ನು ಸ್ಮರಿಸಲೇ ಇಲ್ಲ. ‌

ಹಾಗಾಗಿ ಯುರೋಪಿಯನ್ನರು ಮುಸ್ಲಿಮರ ವೈದ್ಯಕೀಯ ಸಾಮರ್ಥ್ಯಕ್ಕೆ ಬೆರಗಾಗಿ ೧೮ನೆಯ ಶತಮಾನದವರೆಗೆ, ಸುಮಾರು 2000 ವರ್ಷಗಳವರೆಗೆ ಸುಶ್ರುತನ ದೂಡುವಿಕೆಯ ವಿಧಾನವನ್ನೇ ಅನುಸರಿಸಿದರು. 1835ರಲ್ಲಿ ಟಿ.ಎ. ವೈಸ್ ಎಂಬುವವರು ಸುಶ್ರುತ ಸಂಹಿತೆಯನ್ನು ನೇರವಾಗಿ ಸಂಸ್ಕೃತದಿಂದ ಇಂಗ್ಲಿಷಿಗೆ ಅನುವಾದಿಸಿದಾಗ ಮಾತ್ರ ಮುಸ್ಲಿಂ ವೈದ್ಯರ ಕೃತಿಚೌರ್ಯವು ಹೊರ ಬಿದ್ದಿತು.

ಚೀನಾ: ಚೀನಿ ವೈದ್ಯಕೀಯದಲ್ಲಿ ‘ಹಾಂಗ್ಡಿ ನೀಜಿಂಗ್’ (ಕ್ರಿ.ಪೂ.೨೦೦) ಎಂಬುದು ಒಂದು ಮಹಾನ್ ಗ್ರಂಥ. ಯಕೃತ್ತಿನಿಂದ ಕಣ್ಣುಗಳಿಗೆ ಹರಿಯುವ ‘ಷಿ’ ಎನ್ನುವ ಶಕ್ತಿಯ ಹರಿಯುವಿಕೆಯಲ್ಲಿ ಉಂಟಾ ಗುವ ಏರುಪೇರೇ ಕಣ್ಣಿನ ರೋಗಗಳಿಗೆ ಕಾರಣವೆಂದು ಅದು ನಂಬಿತ್ತು. ಕಣ್ಣಿನ ಲಕ್ಷಣಗಳನ್ನು ಆಧರಿಸಿ ರೋಗನಿದಾನವನ್ನು ಮಾಡುತ್ತಿದ್ದರು. ಸೂಜಿಚಿಕಿತ್ಸೆ (ಆಕ್ಯುಪಂಕ್ಚರ್) ಹಾಗೂ ಮೂಲಿಕಾ ಔಷಧಗಳನ್ನು ನೀಡಿ ನೇತ್ರರೋಗಗಳನ್ನು ನಿಯಂತ್ರಿಸುತ್ತಿದ್ದರು.

ಗ್ರೀಸ್ ಮತ್ತು ರೋಮ್: ಮೆಸೊಪೊಟೋಮಿಯನ್ ಹಾಗೂ ಈಜಿಪ್ಷಿಯನ್ ವೈದ್ಯಕೀಯದ ಉತ್ತಮಾಂಶಗಳನ್ನೆಲ್ಲ ಮೈಗೂಡಿಸಿಕೊಂಡು ಗ್ರೀಕ್ ವೈದ್ಯಕೀಯವು ಬೆಳೆಯಿತು. ಹಿಪ್ಪೋಕ್ರೇಟ್ಸ್ ನೇತ್ರರೋಗಗಳಿಗೆ ದೈವ/ದೆವ್ವದ ಕೋಪ ಕಾರಣವಲ್ಲವೆಂದ. ಅವು ಸಹಜವಾಗಿ ದೇಹದಲ್ಲಾಗುವ ಏರುಪೇರುಗಳಿಂದ ಸಂಭವಿಸುತ್ತವೆ ಎಂದ. ಆಫ್ತಾಲ್ಮಿಯ (ನೇತ್ರ ಉರಿಯೂತ) ಹಾಗೂ ಹೈಪೋ ಪಯಾನ್ (ಕಣ್ಣಲ್ಲಿ ಕೀವು) ಎಂಬ ಶಬ್ದಗಳನ್ನು ರೂಪಿಸಿದ.

ಅಲೆಗ್ಸಾಂಡ್ರಿಯದ ಹೆರೋಫಿಲಸ್ ಮತ್ತು ಎರಾಸಿಸ್ಟ್ರಾಸ್ (ಕ್ರಿ.ಪೂ.೩ನೆಯ ಶತಮಾನ) ಮೊದಲ ಬಾರಿಗೆ ಮನುಷ್ಯರ ಶವವನ್ನು ವಿಚ್ಛೇದಿಸಿ, ಕಣ್ಣಿನ ರಚನೆಯನ್ನು ಅಧ್ಯಯನ ಮಾಡಿದರು. ಕಣ್ಣಿನಿಂದ ಮಿದುಳಿಗೆ ಸಾಗುವ ಅಕ್ಷಿನರದ ಪಥವನ್ನು ಗುರುತಿಸಿದರು. ಪೆರ್ಗಮಾನಿನ ಗ್ಯಾಲನ್, ಈ ಅಧ್ಯಯನವನ್ನು ಮುಂದುವರಿಸಿದ. ಮಿದುಳಿನಿಂದ ಕಣ್ಣುಗಳಿಗೆ ಬರುವ ಶಕ್ತಿಯು ನೋಟ ಸಾಮರ್ಥ್ಯವನ್ನು ನೀಡುತ್ತದೆ ಎಂದು ತಪ್ಪಾಗಿ ವರ್ಣಿಸಿದ. ಅದು ಏನೇ ಇರಲಿ, ಪಾಶ್ಚಾತ್ಯ ನೇತ್ರವೈದ್ಯಕೀಯಕ್ಕೆ ಇವರೆಲ್ಲರೂ ಭದ್ರವಾದ ಬುನಾದಿಯನ್ನು ಹಾಕಿದರು ಎಂಬ ವಿಚಾರವು ನಿರ್ವಿವಾದವಾಗಿದೆ.

ಇಸ್ಲಾಮಿಕ್ ಸುವರ್ಣಯುಗ: ೮-೧೩ನೆಯ ಶತಮಾನಗಳಲ್ಲಿ ವೈದ್ಯಕೀಯವು ಪರ್ಷಿಯ, ಅರೇಬಿಯ ಮತ್ತು ಆಂಡುಲೂಸಿಯಗಳಲ್ಲಿ ಪ್ರವರ್ಧಮಾನಕ್ಕೆ ಬಂದು ಇಸ್ಲಾಂ ವೈದ್ಯಕೀಯ ಸುವರ್ಣಯುಗವನ್ನು ಆರಂಭಿಸಿತು. ಅಲಿ ಇಬ್ನ್ ಇಸ ಅಲ್ ಕಹಾಲ್ 130 ನೇತ್ರರೋಗಗಳನ್ನು ಹಾಗೂ ಅವುಗಳ ಚಿಕಿತ್ಸೆಯನ್ನು ಕ್ರೋಡೀಕರಿಸಿ ‘ತದ್ಕಿರಾತ್ ಅಲ್-ಕಹಾಲಿನ್’ ಎಂಬ ಗ್ರಂಥವನ್ನು ಬರೆದ. ಅಮರ್ ಅಲ್ ಮಾಸಿಲಿ, ಒಂದು ಸಿರಿಂಜನ್ನು ರೂಪಿಸಿ, ಕಣ್ಣಿನ ಕಪ್ಪು-ಬಿಳುಪು ಸಂಧಿಸ್ಥಾನ ದಲ್ಲಿ ಸೂಜಿಯನ್ನು ಚುಚ್ಚಿ, ಒಳಗಿದ್ದ ಕಣ್ಣಪೊರೆಯನ್ನು ಹೀರಿ ಹೊರತೆಗೆದ.

ಮಧ್ಯ ಯುರೋಪ್: ಗ್ಯಾಲನ್ ಮಾಡಿದ್ದ ತಪ್ಪುಗಳನ್ನೆಲ್ಲ ಸರಿಪಡಿಸಿ, ಕಣ್ಣಿನ ಸರಿಯಾದ ರಚನೆ ಯನ್ನು ಆಂಡ್ರಿಯಸ್ ವೆಸಾಲಿಯಸ್ ವಿವರಿಸಿದ. ಲಿಯೋನಾರ್ಡೋ ಡ ವಿಂಚಿಯಂತೂ ಕಣ್ಣಿನ ರಚನೆಯನ್ನು ಸೊಗಸಾಗಿ ಚಿತ್ರಿಸಿದ. ಇವನು ಬರೆದ ಅಕ್ಷಿಪಟಲವಂತೂ ಆಧುನಿಕ ವಿಜ್ಞಾನದ ವಿವರಣೆಯನ್ನು ಹೋಲುತ್ತದೆ. ಇದು ನೇತ್ರವೈದ್ಯಕೀಯಕ್ಕೆ ವಿಶೇಷವಾಗಿ ಕಣ್ಣುಪೊರೆಗೆ ಸಂಬಂಧಿ ಸಿದ 5000 ವರ್ಷಗಳ ಸಂಕ್ಷಿಪ್ತ ಇತಿಹಾಸವಾಗಿದೆ.

ವರ್ತಮಾನ: ಇಂದು ಕಣ್ಣಿನ ಪೊರೆಯನ್ನು ನಿವಾರಿಸಲು ಅತ್ಯುತ್ತಮ ಲಾಸಿಕ್ ಶಸ್ತ್ರಚಿಕಿತ್ಸೆ ಎಲ್ಲೆಡೆ ದೊರೆಯುತ್ತಿದೆ. ಇಂದಿನ ಮೈಕ್ರೋಸ್ಕೋಪ್, ಲೇಸರ್ ಕಿರಣಗಳು ಮತ್ತು ಕೃತಕ ಬುದ್ಧಿಮತ್ತೆ ಯು ಸ್ಕ್ಯಾಲ್‌ಪೆಲ್ ಮುಂತಾದ ಉಪಕರಣಗಳಿಗೆ ವಿಶ್ರಾಂತಿಯನ್ನು ನೀಡಿದೆ. ಜೀನ್ ಥೆರಪಿಯು ಅಂಧತ್ವವನ್ನು ಸಂಪೂರ್ಣವಾಗಿ ನಿವಾರಿಸುವ ಭರವಸೆಯನ್ನು ನೀಡಿದೆ.