ವಿತ್ತ ವಿದ್ವತ್ತು
ಅಜಿತ್ ಶೆಟ್ಟಿ ಹೆರಂಜೆ
ಭಾರತದ ಇತಿಹಾಸದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕೇವಲ ಸಾಮಾಜಿಕ ಕ್ರಾಂತಿಕಾರಿ ಅಥವಾ ಸಂವಿಧಾನ ಶಿಲ್ಪಿ ಎಂದು ಕರೆಯುವುದು ಅವರ ಬಹುಮುಖಿ ಪ್ರತಿಭೆಗೆ ನೀಡುವ ಅಲ್ಪ ಗೌರವ. ಅವರು ಮೂಲತಃ ಒಬ್ಬ ಶ್ರೇಷ್ಠ ಅರ್ಥಶಾಸ್ತ್ರಜ್ಞ. ಅಂಬೇಡ್ಕರ್ ಅವರ ಆರ್ಥಿಕ ಚಿಂತನೆ ಗಳು ಕೇವಲ ಸಿದ್ಧಾಂತಗಳಾಗಿರಲಿಲ್ಲ; ಅವು ಬ್ರಿಟಿಷರು ಭಾರತದ ಸಂಪತ್ತನ್ನು ವ್ಯವಸ್ಥಿತವಾಗಿ ಲೂಟಿ ಮಾಡುವುದನ್ನು ತಡೆಯಲು ಹೂಡಿದ ಬೌದ್ಧಿಕ ಯುದ್ಧತಂತ್ರಗಳಾಗಿದ್ದವು.
1920 ಮತ್ತು 1930ರ ದಶಕದಲ್ಲಿ ಅವರು ಮಂಡಿಸಿದ ಪ್ರಬಂಧಗಳು ಮತ್ತು ನೀಡಿದ ಸಾಕ್ಷ ಗಳು ಭಾರತದ ಸಾವಿರಾರು ಕೋಟಿ ರೂಪಾಯಿಗಳ ಸಂಪತ್ತನ್ನು ಬ್ರಿಟಿಷರ ಪಾಲಾಗುವುದರಿಂದ ರಕ್ಷಿಸಿದ್ದವು.
1918ರಲ್ಲಿ ಮೊದಲ ಮಹಾಯುದ್ಧ ಅಂತ್ಯಗೊಂಡಾಗ ಬ್ರಿಟನ್ ವಿಜಯೋತ್ಸವ ಆಚರಿಸುತ್ತಿದ್ದರೂ, ಒಳಗಿನಿಂದ ಅದು ಆರ್ಥಿಕವಾಗಿ ಹೈರಾಣಾಗಿತ್ತು. ಯುದ್ಧಕ್ಕಾಗಿ ಅಮೆರಿಕದಂತಹ ದೇಶಗಳಿಂದ ಪಡೆದಿದ್ದ ಬೃಹತ್ ಸಾಲವನ್ನು ತೀರಿಸಲು ಬ್ರಿಟನ್ ತನ್ನ ವಸಾಹತುಗಳ ಮೇಲೆ ಕಣ್ಣಿಟ್ಟಿತು. ಅದರಲ್ಲಿ ಪ್ರಮುಖವಾದುದು ಭಾರತ. ಭಾರತದ ಸಂಪತ್ತನ್ನು ಲಂಡನ್ನಿಗೆ ಹರಿಸಲು ಬ್ರಿಟಿಷರು ಬಳಸುತ್ತಿದ್ದ ಪ್ರಮುಖ ಅಸ್ತ್ರವೆಂದರೆ ‘ಹಣಕಾಸು ನೀತಿ’.
ಅಂದು ರೂಪಾಯಿ ಮತ್ತು ಪೌಂಡ್ ನಡುವಿನ ವಿನಿಮಯ ದರವನ್ನು ಬ್ರಿಟಿಷ್ ಅಧಿಕಾರಿಗಳೇ ನಿರ್ಧರಿಸುತ್ತಿದ್ದರು, ಮತ್ತು ಅದಕ್ಕೆ ನಿರ್ದಿಷ್ಟವಾದ ಮಾನದಂಡಗಳನ್ನು ಬಳಸುತ್ತಿರಲಿಲ್ಲ. ಒಂದು ರೂಪಾಯಿಗೆ ಎಷ್ಟು ಪೌಂಡ್ ಅಥವಾ ಎಷ್ಟು ಚಿನ್ನ ನೀಡಬೇಕು ಎಂಬುದು ಬ್ರಿಟಿಷ್ ವ್ಯಾಪಾರಿಗಳ ಲಾಭಕ್ಕೆ ಅನುಗುಣವಾಗಿ ಬದಲಾಗುತ್ತಿತ್ತು. ಈ ವಿನಿಮಯ ದರದ ಆಟದಲ್ಲಿ ಭಾರತದ ರೈತರು ಬೆಳೆದ ಬೆಳೆ ಅಗ್ಗವಾಗಿ ವಿದೇಶಕ್ಕೆ ಹೋಗುತ್ತಿತ್ತು.
ಆದರೆ ಭಾರತವು ವಿದೇಶದಿಂದ ಆಮದು ಮಾಡಿಕೊಳ್ಳುವ ಸರಕುಗಳು ಅತಿಯಾದ ಬೆಲೆಗೆ ಮಾರಾಟ ವಾಗುತ್ತಿದ್ದವು. ಈ ಮೂಲಕ ಭಾರತದ ಶ್ರಮಿಕರ ಸಂಪತ್ತು ‘ಅದೃಶ್ಯ’ವಾಗಿ ಬ್ರಿಟನ್ ತಲುಪುತ್ತಿತ್ತು.
ಇದನ್ನೂ ಓದಿ: Naveen Sagar Column: ಕೋವಿಡ್ʼನಿಂದ ಬದಲಾಗದ ನಾವು ಯುದ್ಧದಿಂದ ಬದಲಾದೇವೆ ?
ಬ್ರಿಟಿಷ್ ಆರ್ಥಿಕ ಲೂಟಿಯ ಬಯಲು
1923ರಲ್ಲಿ ಅಂಬೇಡ್ಕರ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸಿನಲ್ಲಿ ಮಂಡಿಸಿದ ’The Problem of the Rupee: Its Origin and Its Solution’ ಎಂಬ ಪ್ರಬಂಧವು ಬ್ರಿಟಿಷ್ ಸರ್ಕಾರದ ನಿದ್ದೆಗೆಡಿಸಿತು. ಅಂದು ಜಗತ್ತಿನ ಖ್ಯಾತ ಅರ್ಥಶಾಸಜ್ಞ ಜಾನ್ ಮೇನಾರ್ಡ್ ಕೇ ಅವರು ಭಾರತಕ್ಕೆ ‘ಗೋಲ್ಡ್ ಎಕ್ಸ್‌ಚೇಂಜ್ ಸ್ಟಾಂಡರ್ಡ್’ ಎಂಬ ವ್ಯವಸ್ಥೆಯನ್ನು ಶಿಫಾರಸು ಮಾಡಿದ್ದರು. ಇದರ ಪ್ರಕಾರ, ಭಾರತದ ರೂಪಾಯಿ ಮೌಲ್ಯವನ್ನು ಬ್ರಿಟಿಷ್ ಪೌಂಡಿಗೆ ಜೋಡಿಸಿ, ಅದರ ಹೆಸರಿನಲ್ಲಿರುವ ಚಿನ್ನದ ಮೀಸಲನ್ನು ಲಂಡನ್ನಿನಲ್ಲಿ ಇಡಲಾಗುತ್ತಿತ್ತು.
ಅಂಬೇಡ್ಕರ್ ಅವರು ಈ ವ್ಯವಸ್ಥೆಯನ್ನು ಅತ್ಯಂತ ಕಟುವಾಗಿ ಟೀಕಿಸಿದರು. ಅವರು ಹೇಳಿದಂತೆ, ಈ ವ್ಯವಸ್ಥೆಯು ಭಾರತದ ಚಿನ್ನವನ್ನು ಲಂಡನ್ನಿನ ಬ್ಯಾಂಕುಗಳಲ್ಲಿ ಒತ್ತೆಯಾಳನ್ನಾಗಿ ಮಾಡಿದೆ. ರೂಪಾಯಿ ಮೌಲ್ಯ ಸ್ಥಿರವಾಗಿರಬೇಕಾದರೆ ಕೇವಲ ವಿನಿಮಯ ದರ ಮುಖ್ಯವಲ್ಲ, ದೇಶದ ಒಳಗೆ ವಸ್ತುಗಳ ಬೆಲೆ ಸ್ಥಿರವಾಗಿರಬೇಕು (Internal Price Stability) ಎಂದು ಅವರು ವಾದಿಸಿದರು.
ಬ್ರಿಟಿಷರು ವಿನಿಮಯ ದರವನ್ನು ಹೆಚ್ಚಿಸಿ (High Exchange Rate), ಭಾರತದ ರಫ್ತುದಾರರಿಗೆ (ರೈತರಿಗೆ) ಸಿಗಬೇಕಾದ ಹಣವನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಅವರು ಅಂಕಿ ಅಂಶಗಳ ಸಮೇತ ಸಾಬೀತುಪಡಿಸಿದರು.
ಆರ್‌ಬಿಐ ಎಂಬ ತಡೆಗೋಡೆ
1926ರಲ್ಲಿ ಭಾರತೀಯ ಹಣಕಾಸು ಮತ್ತು ಕರೆನ್ಸಿಯ ಮೇಲಿನ ‘ರಾಯಲ್ ಕಮಿಷನ್’ (ಹಿಲ್ಟನ್ ಯಂಗ್ ಆಯೋಗ) ಭಾರತಕ್ಕೆ ಭೇಟಿ ನೀಡಿತು. ಅಂಬೇಡ್ಕರ್ ಅವರು ಈ ಆಯೋಗದ ಮುಂದೆ ನೀಡಿದ ಸಾಕ್ಷ್ಯವು ಆಧುನಿಕ ಭಾರತದ ಆರ್ಥಿಕತೆಗೆ ಅಡಿಪಾಯ ಹಾಕಿತು. ಅಂಬೇಡ್ಕರ್ ಅವರು ವಾದಿಸಿದ ಪ್ರಮುಖ ಅಂಶವೆಂದರೆ: ಭಾರತಕ್ಕೆ ಒಂದು ‘ಸ್ವಾಯತ್ತ ಕೇಂದ್ರೀಯ ಬ್ಯಾಂಕ್’ ಬೇಕು. ಅದು ಬ್ರಿಟಿಷ್ ಸರ್ಕಾರದ ಅಧೀನದಲ್ಲಿರಬಾರದು ಮತ್ತು ಖಾಸಗಿ ಬ್ಯಾಂಕರ್‌ಗಳ ಹಿತಾಸಕ್ತಿಯನ್ನು ಕಾಪಾಡಬಾರದು.
ಬದಲಿಗೆ, ಅದು ಭಾರತದ ಸಾರ್ವಜನಿಕರ ಹಿತಕ್ಕಾಗಿ ಕೆಲಸ ಮಾಡಬೇಕು ಎಂದು ತಮ್ಮ ವಾದ ವನ್ನು ತರ್ಕಬದ್ಧವಾಗಿ ಮುಂದಿಟ್ಟರು. ಅವರ ಈ ದೃಢವಾದ ನಿಲುವುಗಳಿಂದಾಗಿಯೇ 1934ರಲ್ಲಿ ಆರ್‌ಬಿಐ ಕಾಯ್ದೆ ಅಂಗೀಕಾರವಾಗಿ, 1935ರ ಏಪ್ರಿಲ್ 1ರಂದು ಭಾರತೀಯ ರಿಸರ್ವ್ ಬ್ಯಾಂಕ್ ಜನ್ಮತಾಳಿತು. ಆರ್‌ಬಿಐ ಸ್ಥಾಪನೆಯಾದ ನಂತರ, ಭಾರತದ ಹಣದ ಮುದ್ರಣ ಮತ್ತು ಚಿನ್ನದ ಮೀಸಲನ್ನು ನಿರ್ವಹಿಸುವ ಹಕ್ಕು ಬ್ರಿಟಿಷ್ ಅಧಿಕಾರಶಾಹಿಯಿಂದ ತಪ್ಪಿ ಒಂದು ಸಾಂಸ್ಥಿಕ ವ್ಯವಸ್ಥೆ ಯಾಗಿ ಭಾರತದ ಒಳಗೇ ಉಳಿಯಿತು. ಇದು ಭಾರತದ ಒಂದು ಹಂತಕ್ಕೆ ತಡೆಯಬಲ್ಲ ದೊಡ್ಡ ‘ಚೆಕ್ ಡ್ಯಾಮ’ ಆಯಿತು.
ಪಟ್ಟುಬಿಡದ ತಾರ್ಕಿಕ ವ್ಯಕ್ತಿ
ಅಂಬೇಡ್ಕರ್ ಅವರ ತರ್ಕ ಎಷ್ಟು ಪ್ರಬಲವಾಗಿತ್ತೆಂದರೆ ಸ್ವತಃ ಬ್ರಿಟಿಷ್ ಅಧಿಕಾರಿಗಳೇ ಮಾರು ಹೋದರು. ಅವರ ಗುರು ಎಡ್ವಿನ್ ಕ್ಯಾನನ್ ಅಂಬೇಡ್ಕರ್ ಅವರ ಬಹುತೇಕ ವಾದಗಳನ್ನು ಒಪ್ಪದಿದ್ದರೂ ‘ಅವರ ವಿಚಾರಗಳಲ್ಲಿ ಪ್ರಚೋದನಕಾರಿ ತಾಜಾತನ ಇದೆ’ ಎಂದು ಹೊಗಳಿದರು. ಬ್ರಿಟಿಷ್ ಹಣಕಾಸು ಸದಸ್ಯ ಸರ್ ಬೇಸಿಲ್ ಬ್ಲ್ಯಾಕೆಟ್‌ಗೆ ಅಂಬೇಡ್ಕರ್ ತರ್ಕ ದೊಡ್ಡ ತಲೆ ನೋವಾ ಯಿತು.
ಅರ್ಥಶಾಸ್ತ್ರಜ್ಞ ನರೇಂದ್ರ ಜಾಧವ್ ದಾಖಲಿಸಿದಂತೆ ಬ್ರಿಟಿಷ್ ಆಂತರಿಕ ದಾಖಲೆಗಳಲ್ಲಿ ಅಂಬೇಡ್ಕರ್ ಅವರನ್ನು ‘ಅತ್ಯಂತ ಕಠಿಣ ತಾರ್ಕಿಕ ವ್ಯಕ್ತಿ’ ಎಂದು ಉಲ್ಲೇಖಿಸಲಾಗಿದೆ. ವೈಸ್‌ರಾಯ್ ವೇವಲ್ ಡೈರಿಯಲ್ಲಿ ಅಂಬೇಡ್ಕರ್ ಅವರ ಆರ್ಥಿಕ ಚತುರತೆ ಬ್ರಿಟಿಷ್ ಖಜಾನೆಗೆ ಹೇಗೆ ಸಂಕಷ್ಟ ತರುತ್ತದೆ ಎಂದು ಆತಂಕದಿಂದ ದಾಖಲಿಸಿದ್ದಾರೆ.
ಬ್ರಿಟಿಷ್ ಸಾಮ್ರಾಜ್ಯಶಾಹಿ ಭಾರತವನ್ನು ಆರ್ಥಿಕ ಗುಲಾಮ ಗಿರಿಯಲ್ಲಿ ಇರಿಸಲು ಹೆಣೆದ ಕರೆನ್ಸಿ ನೀತಿಗೆ ತರ್ಕಬದ್ಧ ಅಂಕಿ ಅಂಶಗಳ ಮೂಲಕ ಮೊದಲ ಬೌದ್ಧಿಕ ಕೊಡಲಿ ಪೆಟ್ಟು ನೀಡಿದ ಅರ್ಥ ಶಾಸ್ತ್ರಜ್ಞ ಅಂಬೇಡ್ಕರ್ ಎಂಬ ಮಾತು ಅಕ್ಷರಶಃ ಸತ್ಯ.
ಅಂಬೇಡ್ಕರ್ ನೀತಿ
ಅಂಬೇಡ್ಕರ್ ಅವರ ಪ್ರಯತ್ನಗಳು ಕೊಳ್ಳೆಯನ್ನು ಸಂಪೂರ್ಣವಾಗಿ ತಡೆಯಲಿಲ್ಲ, ಆದರೆ ಭಾರತ ವನ್ನು ಗುಡಿಸಿ ಗುಂಡಾಂತರ ಮಾಡುವ ಬ್ರಿಟಿಷರ ಯೋಜನೆ ಫಲಕಾರಿಯಾಗಲಿಲ್ಲ. ಭಾರತದ ಹಣದ ಹೊಳೆಗೆ ಅವರ ನೀತಿ ‘ಚೆಕ್ ಡ್ಯಾಮ್’ ಹಾಕಿತು. ವಿದ್ವಾಂಸರ ಸಂಶೋಧನೆಯ ಪ್ರಕಾರ ಬ್ರಿಟಿಷರು ಇಂದಿನ ಲೆಕ್ಕಾಚಾರದಲ್ಲಿ ಸುಮಾರು 44.6 ಟ್ರಿಲಿಯನ್ ಸಂಪತ್ತನ್ನು ಕೊಳ್ಳೆ ಹೊಡೆದರು. ಆದರೆ ಆರ್‌ಬಿಐ ಸ್ಥಾಪನೆಯಿಂದ ಬ್ರಿಟಿಷರ ಪ್ರತಿ ವ್ಯವಹಾರವು ಸಾಂಸ್ಥಿಕ ಚೌಕಟ್ಟಿನೊಳಗೆ ಬಂದು ಲೆಕ್ಕಪತ್ರದಲ್ಲಿ ದಾಖಲಾಯಿತು. ಅಲ್ಲಿಯವರೆಗೆ ಅವರು ಮಾಡುತ್ತಿದ್ದ ನಗ್ನ ಲೂಟಿಗೆ ತಡೆ ಬಿತ್ತು; ಯುದ್ಧದ ಹೆಸರಿನಲ್ಲಿ ಭಾರತದ ಸಂಪತ್ತನ್ನು ಬಳಸಿಕೊಂಡರೆ ಅದನ್ನು ‘ಬಾಕಿ ಸಾಲ’ ಎಂದು ಕಾಗದದ ಮೇಲಾದರೂ ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಬ್ರಿಟನ್ನಿಗೆ ಎದುರಾಯಿತು.
ಅಷ್ಟೇ ಅಲ್ಲ, ಕರೆನ್ಸಿ ಮುದ್ರಣಕ್ಕೆ ಆರ್‌ಬಿಐ ಅಳವಡಿಸಿದ ಕಟ್ಟುನಿಟ್ಟಾದ ಮೀಸಲು ವ್ಯವಸ್ಥೆಯು ( Reserve Framework) ಬ್ರಿಟಿಷರ ಮನಬಂದಂತೆ ಹಣ ಮುದ್ರಿಸುವ ದಾರಿಯನ್ನು ಮುಚ್ಚಿತು. ಇದರ ಪರಿಣಾಮವಾಗಿಯೇ, ಭಾರತ ಬಿಟ್ಟು ಹೋಗುವಾಗ ಬ್ರಿಟಿಷರು ಭಾರತದ ಅಧಿಕೃತ ಸಾಲಗಾರರಾಗಿ ನಿಲ್ಲಬೇಕಾಯಿತು.
ವಸಾಹತುಶಾಹಿ ಇತಿಹಾಸದಲ್ಲಿ ಬೇರೆ ಯಾವ ದೇಶದಲ್ಲಿಯೂ ಆಗದ ಇಂತಹ ಮುಜುಗರ ಬ್ರಿಟನ್ನಿಗೆ ಎದುರಾಗಲು ಅಂಬೇಡ್ಕರ್ ರೂಪಿಸಿದ ಆರ್ಥಿಕ ತಡೆಗೋಡೆಯೇ ಕಾರಣ. ಭಾರತದ ರೂಪಾಯಿ ಮೌಲ್ಯವು ಸ್ಥಿರತೆ ಕಾಪಾಡಿಕೊಂಡಿತು. ಒಟ್ಟಾರೆ ಬ್ರಿಟನ್ 1.7 ಬಿಲಿಯನ್ ಪೌಂಡ್ ಮರುಪಾವತಿ ಮಾಡಬೇಕಾಯಿತು. ಅಂಬೇಡ್ಕರ್ ನೀತಿಯ ಭದ್ರ ಬುನಾದಿ ಮತ್ತು ದಿಕ್ಸೂಚಿ ಬಲದಿಂದ ಭಾರತ ಐಎಂಎಫ್ ಮತ್ತು ವಿಶ್ವ ಬ್ಯಾಂಕಿನ ಸ್ಥಾಪಕ ಸದಸ್ಯರಾಯಿತು.
ಸ್ವತಂತ್ರ ಭಾರತಕ್ಕೆ ಆರ್ಥಿಕ ಪ್ರಾಣವಾಯು
ಪಟ್ನಾಯಕ್ ಅವರ ಸಂಶೋಧನೆಯಿಂದ 44.6 ಟ್ರಿಲಿಯನ್ ಡಾಲರ್ ಕಲೋನಿಯಲ್ ಲೂಟಿ ಎಂದು ಪ್ರಮಾಣೀಕರಿಸಿದೆ. ಇದರ ನಡುವೆಯೂ ಆರ್‌ಬಿಐನಲ್ಲಿ, ರೂ.1700 ಕೋಟಿಯಷ್ಟು ಸಂಪತ್ತು, 225 ಟನ್ ಚಿನ್ನ, ವಿದೇಶಿ ಭದ್ರತಾ ಠೇವಣಿ ರೂಪದಲ್ಲಿ ಉಳಿಯಿತು. ಇಂದಿನ ಮೌಲ್ಯ ದಲ್ಲಿ ಸುಮಾರು ರೂ.೨೨ ಲಕ್ಷ ಕೋಟಿ ಅಥವಾ 260-280 ಬಿಲಿಯನ್ ಡಾಲರ್ ಎಂದು ಅಂದಾಜಿಸ ಬಹುದು. ಆಗಿನ ಚಿನ್ನದ ದರ ಪ್ರತಿ 10 ಗ್ರಾಮಿಗೆ ರೂ.88 ಇತ್ತು. ಆದರೆ ಈ ಕುರಿತು ಇನ್ನಷ್ಟು ಸಂಶೋಧನೆಗಳಾದರೆ ಮಾತ್ರ ನಿಖರ ಮೊತ್ತ ತಿಳಿಯಲು ಸಾಧ್ಯ.
1947-48ರ ಮೊದಲ ಬಜೆಟ್ ಕೇವಲ ರೂ.197 ಕೋಟಿ. ಅಂದರೆ ಅಂಬೇಡ್ಕರ್ ಉಳಿಸಿದ ರೂ.1700 ಕೋಟಿ ಅಂದಿನ ಬಜೆಟಿಗಿಂತ 8.6 ಪಟ್ಟು ಹೆಚ್ಚು. ಇದೇ ಹಣದಿಂದ ಸ್ವತಂತ್ರ ಭಾರತ ಸೈನ್ಯ ಕಟ್ಟಿತು, ಸರ್ಕಾರಿ ನೌಕರರ ಸಂಬಳ ಕೊಟ್ಟಿತು, ಪಂಚವಾರ್ಷಿಕ ಯೋಜನೆಗಳಿಗೆ ಬಂಡವಾಳ ಹಾಕಿತು ಮತ್ತು ಪಾಕಿಸ್ತಾನ ವಿಭಜನೆಯ ಸಂದರ್ಭದಲ್ಲಿ ಬ್ರಿಟನ್‌ನಿಂದ 1.7 ಬಿಲಿಯನ್ ಪೌಂಡ್ ವಾಪಸ್ ಪಡೆಯಿತು. ಅಂಬೇಡ್ಕರ್ ಈ ಮೂಲಕ ಸ್ವತಂತ್ರ ಭಾರತಕ್ಕೆ ಆರ್ಥಿಕ ಪ್ರಾಣವಾಯು ನೀಡಿದರು. ಅವರ ರಕ್ಷಣೆ ಇಲ್ಲದಿದ್ದರೆ ಸ್ವಾತಂತ್ರ್ಯ ಸಿಕ್ಕಿ ಎರಡೇ ವರ್ಷದಲ್ಲಿ ಭಾರತ ನೇಪಾಳ, ಕ್ಯೂಬಾ, ಶ್ರೀಲಂಕಾದಲ್ಲಿ ಆದಂತೆ ಖಾಲಿ ಖಜಾನೆ, ಅಸ್ಥಿರ ರೂಪಾಯಿ ಮತ್ತು ವಿದೇಶಿ ಸಾಲದ ಸಂಕೋಲೆ ಯಲ್ಲಿ ಸಿಲುಕುತ್ತಿತ್ತು.
ಮೊದಲ ಬಾರಿ ಸಂದ ಗೌರವ
ಅಂಬೇಡ್ಕರ್ ಅವರ ಈ ಮಹತ್ವದ ಕಾರ್ಯ ಸ್ವತಂತ್ರ ಭಾರತದ ಇತಿಹಾಸದಲ್ಲಿ ಬಹಳ ಕಡಿಮೆ ಚರ್ಚೆಗೆ ಒಳಗಾಯಿತು. ಅವರ ವಿಚಾರದ ಲೇಖನ, ಪ್ರಬಂಧ, ಸಂಶೋಧನೆಗಳು ಬಹುಪಾಲು ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ವಿಷಯಗಳಿಗೆ ಮಾತ್ರ ಸೀಮಿತವಾಯಿತು. ಇದು ಭಾರತದ ಬೌದ್ಧಿಕ ಚರಿತ್ರೆಯ ದೊಡ್ಡ ನಷ್ಟ. ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಯ ಕುರಿತು 2015ರಲ್ಲಿ ಮಾತನಾಡಿದ ಪ್ರಧಾನ ಮಂತ್ರಿ ಮೋದಿ, ಅಂಬೇಡ್ಕರ್ ಅವರ ಆರ್ಥಿಕ ಚಿಂತನೆ ಮತ್ತು ದೃಷ್ಟಿಕೋನ ಇನ್ನೂ ಸಂಪೂರ್ಣವಾಗಿ ಅರ್ಥವಾಗಿಲ್ಲ ಎಂದು ಹೇಳಿದರು. ಬಹುಶಃ ಇದನ್ನು ಅರಿತೇ 2016ರ ಡಿಸೆಂಬರ್ 31ರಂದು ಭೀಮ್ ಆಪ್ ಲಾಂಚ್ ಮಾಡುವಾಗ ಅದಕ್ಕೆ ಬಾಬಾಸಾಹೇಬ್ ಅವರ ಹೆಸರಿಟ್ಟು, ಅಂಬೇಡ್ಕರ್ ಅವರ ಆರ್ಥಿಕ ಕೊಡುಗೆಯ ಕುರಿತು ಭಾರತದ ಕರೆನ್ಸಿ ವ್ಯವಸ್ಥೆ, ಕೇಂದ್ರೀಯ ಬ್ಯಾಂಕಿನ ಕಲ್ಪನೆ ಮತ್ತು ಫೆಡರಲ್ ವ್ಯವಸ್ಥೆಯ ಹಣಕಾಸು ಚೌಕಟ್ಟು - ಇವೆಲ್ಲದರಲ್ಲೂ ಒಬ್ಬ ಮಹಾನ್ ವ್ಯಕ್ತಿಯ ದರ್ಶನ ಸ್ಪಷ್ಟವಾಗಿ ಕಾಣುತ್ತದೆ. ಆ ಮಹಾನ್ ವ್ಯಕ್ತಿ ಬೇರೆ ಯಾರೂ ಅಲ್ಲ ಎಂದು ಹೇಳಿದರು.
ಸ್ವಾತಂತ್ರ್ಯದ ನಂತರ ಅಂಬೇಡ್ಕರ್ ಅವರ ಆರ್ಥಿಕ ಕೊಡುಗೆಯನ್ನು ಅಧಿಕೃತವಾಗಿ ಗುರುತಿಸಿ ಗೌರವಿಸಿದ ಮೊದಲ ಪ್ರಧಾನ ಮಂತ್ರಿ ಮೋದಿ. ಯೋಚಿಸಿ- ಯಾಕೆ ಅಂಬೇಡ್ಕರ್ ಅವರನ್ನು ಕೇವಲ ಸಾಮಾಜಿಕ ನ್ಯಾಯಕ್ಕೆ ಸೀಮಿತ ಮಾಡಿದರು? Indeed, it is Ambedkar Way & India's Way.