ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Prakash Hegde Column: ಅಮೆರಿಕದ ಆರ್ಥಿಕ ಪರಿವರ್ತನೆ: ಸಾಲ ಮರುಪಾವತಿಗೆ ತಂತ್ರ

ಅಮೆರಿಕ ತನ್ನ 38 ಟ್ರಿಲಿಯನ್ ಡಾಲರ್‌ಗಳ (ಪ್ರತಿ ಪ್ರಜೆಯ ಮೇಲೆ ತಲಾ 1 ಕೋಟಿ ರುಪಾಯಿ ಸಾಲ) ರಾಷ್ಟ್ರೀಯ ಸಾಲವನ್ನು ನಿಯಂತ್ರಣದಲ್ಲಿಟ್ಟು, ಸ್ಥಿರವಾಗಿ ಸಾಗಿಸುವ ತಂತ್ರಗಾರಿಕೆಯನ್ನು ಅನುಸರಿಸು ತ್ತಿದೆ. ಇದರ ಭಾಗವಾಗಿ, ನಾಲ್ಕು ಪ್ರಮುಖ ಮಾರ್ಗಗಳಲ್ಲಿ ವ್ಯವಸ್ಥಿತ ತತ್ವವನ್ನು ಅಳವಡಿಸಿಕೊಂಡಿದೆ.

ದುಡ್ಡು- ಕಾಸು

ಪ್ರಕಾಶ ಹೆಗಡೆ

ಈ ಬರಹವು ಅಮೆರಿಕದ ಇಂದಿನ ರಾಜಕೀಯ ಪರಿಸ್ಥಿತಿಗೆ ಅಥವಾ ಅಧ್ಯಕ್ಷ ಟ್ರಂಪ್ ಅವರ ವಿಚಿತ್ರ ಕ್ರಮಗಳಿಗೆ ಯಾವುದೇ ಸಂಬಂಧ ಹೊಂದಿಲ್ಲ. ಇದು, 38 ಟ್ರಿಲಿಯನ್ ಡಾಲರ್‌ಗಳಷ್ಟಿರುವ ಅಮೆರಿಕದ ರಾಷ್ಟ್ರೀಯ ಸಾಲದ ಮರುಪಾವತಿ ತಂತ್ರದ ಕುರಿತಾದ ವಿಶ್ವಾಸಾರ್ಹ ಮಾಹಿತಿಗಳ ತಟಸ್ಥ ವಿಶ್ಲೇಷಣೆ ಮಾತ್ರ.ನಾಲ್ಕು ಪ್ರಬಲ ದೇಶಗಳ ರಾಷ್ಟ್ರೀಯ ಸಾಲ ಮತ್ತು ಜಿಡಿಪಿಯ ಅನುಪಾತ ವನ್ನು ಒಮ್ಮೆ ಗಮನಿಸೋಣ. ಅಮೆರಿಕ- 38 ಟ್ರಿಲಿಯನ್ ಸಾಲ (ಜಿಡಿಪಿಯ ಶೇ.120ರಷ್ಟು), ಚೀನಾ- 16 ಟ್ರಿಲಿಯನ್ (ಜಿಡಿಪಿಯ ಶೇ.80ರಷ್ಟು), ಜಪಾನ್- 10 ಟ್ರಿಲಿಯನ್ (ಜಿಡಿಪಿಯ ಶೇ.255ರಷ್ಟು), ಭಾರತ 3.8 ಟ್ರಿಲಿಯನ್ (ಜಿಡಿಪಿಯ ಶೇ.81ರಷ್ಟು). ಉಳಿದೆಲ್ಲ ದೇಶ ಗಳಿಗಿಂತ ಭಾರತದ ಸಾಲದ ಮಟ್ಟ ಕಡಿಮೆಯಿದೆ ಎಂಬುದಿಲ್ಲಿ ಗೊತ್ತಾಗುತ್ತದೆ.

ಜಪಾನ್‌ನಲ್ಲಿ ನಾಗರಿಕರೇ ಸರಕಾರದ ಸಾಲದ ವಾರಸುದಾರರಾಗಿರುವುದರಿಂದ, ಅಪಾರ ರಾಷ್ಟ್ರೀಯ ಸಾಲವನ್ನು ಜಪಾನ್ ನಿರ್ವಹಿಸಬಲ್ಲದು; ಆದರೆ ದೀರ್ಘಾವಧಿಯಲ್ಲಿ ಜನಸಂಖ್ಯೆಯ ಕುಸಿತವಾಗುತ್ತಿರುವುದು ಅಪಾಯದ ತೂಗುಕತ್ತಿಯಂತಿದೆ. ಚೀನಾದ ಸಾಲ ವೇಗವಾಗಿ ಹೆಚ್ಚು ತ್ತಿದ್ದರೂ, ಅದನ್ನು ಸರಕಾರದ ಕಠಿಣ ನಿಯಂತ್ರಣ ಮತ್ತು ಬಂಡವಾಳ ಹರಿವಿನ ನಿರ್ಬಂಧಗಳ ಮೂಲಕ ನಿಯಂತ್ರಿಸಲಾಗುತ್ತಿದೆ.

ಭಾರತವು ತನ್ನ ಸಾಲವನ್ನು ಆರ್ಥಿಕ ಬೆಳವಣಿಗೆ, ಅನುಕೂಲಕರ ಜನಸಾಂಖ್ಯಿಕ ಸ್ಥಿತಿ ಮತ್ತು ದೇಶೀಯ ಸಾಲದ ಮೂಲಕ ಸಮರ್ಥವಾಗಿ ನಿರ್ವಹಿಸುತ್ತದೆ. ಅಮೆರಿಕದ ರಾಷ್ಟ್ರೀಯ ಸಾಲವೂ ಬಾಂಡ್‌ಗಳ ಹೂಡಿಕೆದಾರರಿಗೆ ಮೇಲ್ನೋಟಕ್ಕೆ ಅಷ್ಟೇನೂ ಆತಂಕವನ್ನು ಉಂಟುಮಾಡುವುದಿಲ್ಲ.

ಅಮೆರಿಕ ತನ್ನ 38 ಟ್ರಿಲಿಯನ್ ಡಾಲರ್‌ಗಳ (ಪ್ರತಿ ಪ್ರಜೆಯ ಮೇಲೆ ತಲಾ 1 ಕೋಟಿ ರುಪಾಯಿ ಸಾಲ) ರಾಷ್ಟ್ರೀಯ ಸಾಲವನ್ನು ನಿಯಂತ್ರಣದಲ್ಲಿಟ್ಟು, ಸ್ಥಿರವಾಗಿ ಸಾಗಿಸುವ ತಂತ್ರಗಾರಿಕೆಯನ್ನು ಅನುಸರಿಸುತ್ತಿದೆ. ಇದರ ಭಾಗವಾಗಿ, ನಾಲ್ಕು ಪ್ರಮುಖ ಮಾರ್ಗಗಳಲ್ಲಿ ವ್ಯವಸ್ಥಿತ ತತ್ವವನ್ನು ಅಳವಡಿಸಿಕೊಂಡಿದೆ. ಅವುಗಳೆಂದರೆ, ತನ್ನ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವುದು, ಆದಾಯ ವನ್ನು ವರ್ಧಿಸಿಕೊಳ್ಳುವುದು, ವೆಚ್ಚವನ್ನು ನಿಯಂತ್ರಿಸುವುದು ಮತ್ತು ಡಾಲರ್‌ನ ಜಾಗತಿಕ ಪ್ರಭುತ್ವ ವನ್ನು ಬಳಕೆ ಮಾಡುವುದು.

ಇದನ್ನೂ ಓದಿ: Prakash Hegde Column: ಅಮೆರಿಕಕ್ಕೆ ಗ್ರೀನ್‌ಲ್ಯಾಂಡ್‌ನ ಉಸಾಬರಿ ಏಕೆ?

ರಾಷ್ಟ್ರದ ಬಲವಾದ ಹಣಕಾಸು ಮಾರುಕಟ್ಟೆಗಳು, ಉನ್ನತ ತಂತ್ರಜ್ಞಾನ ಆಧಾರಿತ ಆರ್ಥಿಕತೆ ಮತ್ತು ವಲಸೆ ಮೂಲಕ ಹೆಚ್ಚುತ್ತಿರುವ ಕೆಲಸಗಾರರ ಜನಸಂಖ್ಯೆ ಮುಂತಾದವು ದೇಶದ ಜಿಡಿಪಿ ಯನ್ನು ದೀರ್ಘಾವಧಿಯಲ್ಲಿ ಹೆಚ್ಚಿಸುತ್ತವೆ. ಜತೆಗೆ, ಅಮೆರಿಕದ ಸೈನಿಕ ಹಾಗೂ ಭೂರಾಜಕೀಯ ವ್ಯವಸ್ಥೆಗಳು ಹೂಡಿಕೆದಾರರಲ್ಲಿ ಸ್ಥಿರವಾದ ವಿಶ್ವಾಸವನ್ನು ಹುಟ್ಟಿಸುತ್ತವೆ. ಮೇಲೆ ತಿಳಿಸಿದ ವಿಶ್ಲೇಷಣೆಯು ಅಮೆರಿಕದ ಆದರ್ಶಪ್ರಾಯ ವ್ಯವಸ್ಥೆಯ ಮುಖ. ಆದರೆ ಈ ವ್ಯವಸ್ಥೆಯ ಇನ್ನೊಂದು ಮುಖವನ್ನೂ ಆರ್ಥಿಕ ತಜ್ಞರು ಪರಿಚಯಿಸುತ್ತಾರೆ.

ಅಮೆರಿಕವು ಈ ಮೊದಲು ಕೈಗೊಂಡ ವ್ಯವಸ್ಥಿತ ಕ್ರಮಗಳೇ ಈ ಗ್ರಹಿಕೆಗೆ ಪೂರಕ. 1933ರ ಕಾಲಘಟ್ಟ ದಲ್ಲಿ ಜಗತ್ತಿಗೆ ಅಪ್ಪಳಿಸಿದ, ‘ಮಹಾನ್ ಆರ್ಥಿಕ ಬಿಕ್ಕಟ್ಟು’ ಎಂದೇ ಕರೆಯಲಾಗುವ ಸಂಕಷ್ಟದಿಂದ ಅಮೆರಿಕವನ್ನು ಹೊರ ಸೆಳೆಯಲು, ಅದರ ಆಗಿನ ಅಧ್ಯಕ್ಷ ರೂಸ್‌ವೆಲ್ಟ್ ಅವರು ಚಿನ್ನದ ವಿಷಯ ದಲ್ಲಿ ಕಠಿಣ ಕ್ರಮವನ್ನು ಕೈಗೊಂಡರು.

‘ಎಕ್ಸಿಕ್ಯುಟಿವ್ ಆರ್ಡರ್ 6102’ರ ಮೂಲಕ, ಅಮೆರಿಕದ ನಾಗರಿಕರು ಹೊಂದಿದ್ದ ಎಲ್ಲ ಚಿನ್ನವನ್ನು ಪ್ರತಿ ಔನ್ಸ್‌ಗೆ 20.67 ಡಾಲರ್ ದರದಲ್ಲಿ ಸರಕಾರಕ್ಕೆ ಕಡ್ಡಾಯವಾಗಿ ಮಾರಾಟ ಮಾಡಬೇಕೆಂದು ಆದೇಶಿಸಲಾಯಿತು. ಇದೊಂದು ವಿವಾದಾತ್ಮಕ ಆದೇಶವಾಗಿತ್ತು. ನಂತರ ಗೋಲ್ಡ್ ರಿಸರ್ವ್ ಕಾಯಿದೆ (1934) ಜಾರಿಗೆ ಬಂದು, ಚಿನ್ನದ ಮೌಲ್ಯವನ್ನು ಪ್ರತಿ ಔನ್ಸ್‌ಗೆ 35 ಡಾಲರ್‌ಗೆ ಏರಿಸಿದಾಗ (ಶೇ.69ರಷ್ಟು ಮೌಲ್ಯವರ್ಧನೆ), ಸರಕಾರದ ಖಜಾನೆಯ ಮೌಲ್ಯವು ಒಮ್ಮೆಲೇ 2.8 ಬಿಲಿಯನ್ ಡಾಲರ್‌ನಷ್ಟು ಹೆಚ್ಚಾಗಿ, ಆರ್ಥಿಕ ಪುನರುತ್ಥಾನಕ್ಕೆ ದೊಡ್ಡ ಬಂಡವಾಳ ಲಭ್ಯವಾಯಿತು.

P Hegde 1

ಡಾಲರ್ ಮೌಲ್ಯ ಕಡಿಮೆಯಾಗಿ, ರಫ್ತು ಮತ್ತು ಹಣದ ಚಲಾವಣೆಯಲ್ಲಿ ಏರಿಕೆ ದಾಖಲಾಯಿತು. ರೂಸ್‌ವೆಲ್ಟ್ ಅವರ ಚಿನ್ನದ ಮರುಮೌಲ್ಯ ನಿರ್ಧಾರ ನೀತಿಯು ವಿವಾದಾತ್ಮಕವಾಗಿದ್ದರೂ, ಅಮೆರಿಕದ ಆರ್ಥಿಕತೆಯ ಪುನರ್ಜನ್ಮಕ್ಕೆ ನಿರ್ಣಾಯಕ ಹೆಜ್ಜೆಯಾಗಿ ಪರಿಣಮಿಸಿತು.

ಅಮೆರಿಕದ ಫೆಡರಲ್ ರಿಸರ್ವ್ 2008ರಿಂದ 2022ರವರೆಗೆ ನಾಲ್ಕು ಬಾರಿ, ಆರ್ಥಿಕ ಬಿಕ್ಕಟ್ಟು ಮತ್ತು ಕೋವಿಡ್ ಕುಸಿತದ ವೇಳೆ ‘ಕ್ವಾಂಟಿಟೇಟಿವ್ ಈಸಿಂಗ್’ ನೀತಿಯನ್ನು ಜಾರಿಗೆ ತಂದು, 120 ಟ್ರಿಲಿಯನ್ ಡಾಲರ್ ಮೌಲ್ಯದ ಸರಕಾರಿ ಬಾಂಡ್‌ಗಳನ್ನು ಖರೀದಿಸಿತು. ಇದರಿಂದ ಮಾರುಕಟ್ಟೆಗೆ ಅಪಾರ ಲಿಕ್ವಿಡಿಟಿ ಸೇರಿ, ಷೇರು ಮಾರುಕಟ್ಟೆ ‘ಬಬಲ್’ ಕಂಡು, ಅತಿಯಾದ ಹಣದುಬ್ಬರವು ಸೃಷ್ಟಿ ಯಾಯಿತು.

ಅಮೆರಿಕದ ಆರ್ಥಿಕತೆಯನ್ನು ಕುಸಿತದಿಂದ ತಪ್ಪಿಸಿದ ಕ್ರಾಂತಿಕಾರಿ ನೀತಿ ಇದಾಗಿತ್ತು. ಇವೆರಡೂ ವಿವಾದಾತ್ಮಕ ಹಣಕಾಸು ನೀತಿಗಳು ಉದಾಹರಣೆಗಳಷ್ಟೇ. ಈಗ ಅಮೆರಿಕ ಸರಕಾರ 38 ಟ್ರಿಲಿಯನ್ ಡಾಲರ್ ಹೊರೆಯನ್ನು ಕಡಿತಗೊಳಿಸಲು ಇನ್ನೊಂದು ವಿವಾದಾತ್ಮಕ ನೀತಿಯ ಮೊರೆ ಹೋಗು ತ್ತಿರುವ ಸೂಚನೆಗಳು ಕಾಣುತ್ತಿವೆ.

ಅಮೆರಿಕದ ರಾಷ್ಟ್ರೀಯ ಸಾಲವು ನಾಗಾಲೋಟದಲ್ಲಿ ಏರುತ್ತಿದೆ. ವರ್ಷಕ್ಕೆ ಬಡ್ಡಿಯ ಮೊತ್ತವೇ 1 ಟ್ರಿಲಿಯನ್ ಡಾಲರ್‌ನಷ್ಟಿದೆ. ಮಿತವ್ಯಯ ಕ್ರಮದಿಂದ ಸರಕಾರದ ಯಾವುದೇ ಖರ್ಚನ್ನು ಕಡಿಮೆ ಮಾಡುವ ಸ್ಥಿತಿಯಲ್ಲಿ ಅಮೆರಿಕದ ಆಡಳಿತಗಾರರಿಲ್ಲ. ಅಂತೆಯೇ, ತೆರಿಗೆಯ ಪ್ರಮಾಣಗಳು ಈಗಾಗಲೇ ಅತಿ ಹೆಚ್ಚಿರುವುದರಿಂದ, ತೆರಿಗೆಗಳನ್ನು ಹೆಚ್ಚಿಸುವುದು ಸಹ ವಿವೇಕಯುತ ಕ್ರಮವಲ್ಲ.

ಒಂದು ವೇಳೆ ಅಮೆರಿಕವು ಸಾಲದ ಬಡ್ಡಿ ಅಥವಾ ಕಂತನ್ನು ಮರುಪಾವತಿ ಮಾಡಲು ಹಿಂಜರಿದರೆ, ಜಗತ್ತಿನ ಆರ್ಥಿಕತೆಯನ್ನು ತತ್ತರಿಸುವಂತೆ ಮಾಡುವ ಅಣುಬಾಂಬ್ ಸಮಾನವಾದ ಅಲ್ಲೋಲ ಕಲ್ಲೋಲದ ಪರಿಸ್ಥಿತಿ ಸೃಷ್ಟಿಯಾಗುವುದರಲ್ಲಿ ಸಂಶಯವಿಲ್ಲ. 2025ರ ಡಿಸೆಂಬರ್ 10ರಂದು, ಅಮೆರಿಕದ ಫೆಡರಲ್ ರಿಸರ್ವ್ 40 ಬಿಲಿಯನ್ ಡಾಲರ್ ಮೌಲ್ಯದ ಸರಕಾರಿ ಬಾಂಡ್‌ಗಳನ್ನು ಖರೀದಿಸಲು ತೀರ್ಮಾನಿಸಿದೆ.

ಇದು ಹಿಂದೆ ಅವಲಂಬಿಸಿದ್ದ ‘ಕ್ವಾಂಟಿಟೇಟಿವ್ ಈಸಿಂಗ್’ ಮಾದರಿಯ ಸಾಲದ ಸುಸ್ಥಿರತೆಗಾಗಿನ ತಾತ್ಕಾಲಿಕ ಬಲವರ್ಧಕ ಕ್ರಮವೆಂದು ಅದು ಹೇಳಿದೆ. ಹಣಕಾಸು ತಜ್ಞರ ಪ್ರಕಾರ, ಅಮೆರಿಕ ತನ್ನ ದೊಡ್ಡ ಸಾಲವನ್ನು ಅಳಿಸುವ ಹೊಸ ವಿಧಾನದ ಪ್ರಧಾನ ಚಲನೆಯಿದು. ಅಂದರೆ ಪೂರ್ಣ ಪ್ರಮಾಣದ ಸಾಲವನ್ನು ಮಾನಿಟೈಸೇಷನ್ ಮಾಡುವ ಆಧುನಿಕ ಹಣಕಾಸು ತತ್ವ. ಈ ವಿಧಾನ ದಲ್ಲಿ, ಸರಕಾರವು ತಾನು ಮುದ್ರಿಸಿದ ಹೊಸ ಹಣದಿಂದ ಮಾರುಕಟ್ಟೆಯಲ್ಲಿ ತನ್ನದೇ ಬಾಂಡ್‌ ಗಳನ್ನು ಖರೀದಿಸುತ್ತದೆ.

ಹೀಗೆ, ಸರಕಾರ ತಾನು ಪಡೆದಿದ್ದ ಸಾಲವನ್ನು ತಾನೇ ತೀರಿಸಿದಂತೆ ಕಾಣುತ್ತದೆ. ಇದು ಇತಿಹಾಸ ದಲ್ಲೇ ಕಾಣದಷ್ಟು ಸುಧಾರಿತ, ಭವ್ಯ ಪ್ರಮಾಣದ ಸಾಲನಿರ್ವಾಣ ತಂತ್ರ. ಋಣಾತ್ಮಕ ಪರಿಣಾಮ ವಾಗಿ, ಡಾಲರ್ ಮೌಲ್ಯ ಕುಸಿದು, ಜನರು ಮತ್ತು ದೇಶಗಳು ಹೂಡಿಕೆ ಮಾಡಿರುವ ಡಾಲರ್ ಮತ್ತು ಅಮೆರಿಕ ಬಾಂಡ್‌ಗಳ ಮೌಲ್ಯವೂ ಕುಸಿಯುತ್ತದೆ.

ಈ ಪ್ರಕ್ರಿಯೆ ಮುಗಿದ ನಂತರ, ಅಮೆರಿಕ ಸರಕಾರದ ಖಾತೆಯಲ್ಲಿ 38 ಟ್ರಿಲಿಯನ್ ಡಾಲರ್ ಸಾಲವೇ ಇಲ್ಲದಂತೆ ತೋರುತ್ತದೆ. ತಜ್ಞರ ಮುಂದುವರಿದ ವಿಶ್ಲೇಷಣೆಯಂತೆ, ಆ ನಂತರ ಅಮೆರಿಕ ಹಿಂದೆ ಮಾಡಿದಂತೆ ತನ್ನ ಬಂಗಾರದ ಸಂಗ್ರಹ ಮತ್ತು ಕ್ರಿಪ್ಟೋ ಆಸ್ತಿಗಳ ಮೌಲ್ಯವನ್ನೇ ಹೆಚ್ಚಿಸಬಹುದು. ಅಮೆರಿಕದ ಪೋರ್ಟ್‌ನಾಕ್ಸ್‌ನಲ್ಲಿ ಇರುವ ಸುಮಾರು 8000 ಟನ್ ಬಂಗಾರದ ಮೌಲ್ಯವು ಪ್ರತಿ ಔನ್ಸ್‌ಗೆ 44.22 ಡಾಲರ್ ಎಂದು ದಾಖಲಾಗಿದೆ. ಇದನ್ನು ಇಂದಿನ ಮಾರುಕಟ್ಟೆ ಬೆಲೆ 3800 ಡಾಲರ್ ಪ್ರತಿ ಔನ್ಸ್‌ಗೆ ಮೌಲ್ಯೀಕರಿಸಿದರೆ, ಇದರ ಒಟ್ಟು ಮೌಲ್ಯ ನೇರವಾಗಿ 1 ಟ್ರಿಲಿಯನ್‌ಗೆ ಏರುತ್ತದೆ.

ಈ ರಿ-ಸೆಟ್ ನಂತರ ಅಮೆರಿಕಕ್ಕೆ ಜಾಗತಿಕ ಮಟ್ಟದಲ್ಲಿ ಅಸಾಮಾನ್ಯ ಆರ್ಥಿಕ ಮುನ್ನಡೆ ಲಭ್ಯ ವಾಗಬಹುದು. ಆದರೆ ಡಾಲರ್ ಮೇಲಿನ ನಂಬಿಕೆಗೆ ಅತಿದೊಡ್ಡ ಹೊಡೆತ ಬೀಳಬಹುದು. ಈ ವಿಶೇಷ ತಂತ್ರವನ್ನು ಅನೇಕ ದೇಶಗಳು ಈಗಾಗಲೇ ಊಹಿಸಿ, ತಕ್ಕುದಾದ ಹಣಕಾಸು ನೀತಿಗಳನ್ನು ರೂಪಿಸಿಕೊಳ್ಳುತ್ತಿವೆ.

ರಷ್ಯಾ, ಚೀನಾ, ಜಪಾನ್, ಸೌದಿ ಅರೇಬಿಯಾ ಹಾಗೂ ಭಾರತ ದೇಶಗಳು ತಮ್ಮ ಕರೆನ್ಸಿಯಿಂದಲೇ ವ್ಯಾಪಾರಗಳನ್ನು ರೂಢಿಸಿಕೊಂಡು, ಅಮೆರಿಕದ ಡಾಲರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುತ್ತಿವೆ. ಇನ್ನೊಂದೆಡೆ, ಅಮೆರಿಕನ್ ಸರಕಾರಿ ಬಾಂಡ್‌ಗಳ ಮೇಲಿನ ಹೂಡಿಕೆಯನ್ನು ಜಪಾನ್, ಚೀನಾ ಮತ್ತು ಐರೋಪ್ಯ ಒಕ್ಕೂಟದ ರಾಷ್ಟ್ರಗಳು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳುತ್ತಿವೆ.

ದೇಶಗಳು ಮತ್ತು ಜನರು, ಚಿನ್ನ-ಬೆಳ್ಳಿಯ ಮೇಲೆ ತಮ್ಮ ಹೂಡಿಕೆಗಳನ್ನು ಹೆಚ್ಚಿಸಿ, ಹೂಡಿಕೆಗಳ ಬ್ಯಾಸ್ಕೆಟ್ ಪೋರ್ಟ್ಫೋಲಿಯೋದಲ್ಲಿ ತ್ವರಿತ ಬದಲಾವಣೆಗಳನ್ನು ಮಾಡುತ್ತಿದ್ದಾರೆ. ನಾವೆಲ್ಲಾ ನೋಡುತ್ತಿರುವಂತೆಯೇ ಭಾರತವು ತನ್ನ ನೀತಿಯನ್ನು ಜಾಗರೂಕತೆಯಿಂದ ಮಾರ್ಪಾಟು ಮಾಡಿ ಕೊಳ್ಳುತ್ತಿದೆ. ಡಾಲರ್‌ನ ಮೇಲೆ ಅವಲಂಬಿತ ಭಾರತೀಯರು ಈ ವಿಷಯದಲ್ಲಿ ಎಚ್ಚರಿಕೆ ವಹಿಸುವ ಅವಶ್ಯಕತೆಯಿದೆ.

(ಲೇಖಕರು ಚಾರ್ಟರ್ಡ್ ಅಕೌಂಟೆಂಟ್)