ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ranjith H Ashwath Column: ಗೊಂದಲದ ಹೇಳಿಕೆ ನಡುವೆ ಗ್ಯಾರಂಟಿಗಳೇ ಮಾಯ !

ರಾಜ್ಯದಲ್ಲಿ ಕಾಂಗ್ರೆಸ್ ನೀಡಿದ್ದ ಪಂಚ ಗ್ಯಾರಂಟಿ, ಬಿಜೆಪಿಯ ಒಳಜಗಳ, ಒಳ ಕಿತ್ತಾಟದ ಫಲ ವಾಗಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಐತಿಹಾಸಿಕ ಬಹುಮತ ಬಂದಿತ್ತು. ಬಳಿಕ ನಡೆದ ಉಪಚುನಾವಣೆ, ಪಕ್ಷೇತರ ಅಭ್ಯರ್ಥಿಗಳ ಬೆಂಬಲದೊಂದಿಗೆ 139 ಶಾಸಕರ ಬಲದೊಂದಿಗೆ ಅಧಿಕಾರ ನಡೆಸುತ್ತಿದೆ.

ಅಶ್ವತ್ಥಕಟ್ಟೆ

ಸಾಮಾನ್ಯವಾಗಿ ಮೈತ್ರಿ ಪಕ್ಷಗಳು ಸೇರಿ ಮಾಡುವ ಸಮ್ಮಿಶ್ರ ಸರಕಾರಗಳು, ಸಾಧಾರಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಾಗ ರಾಜಕೀಯ ಗೊಂದಲಗಳಿರುತ್ತವೆ. ಅಂತಹ ಸರಕಾರಗಳು ಇರುವಷ್ಟು ದಿನವೂ, ಅಸ್ಥಿರತೆಯನ್ನೇ ಹೊದ್ದು ಆಡಳಿತ ನಡೆಸುತ್ತಿರುತ್ತವೆ. ಆದರೆ ‘ಪ್ರಚಂಡ’ ಬಹುಮತದೊಂದಿಗೆ ಬರುವ ಸರಕಾರಗಳಲ್ಲಿಯೂ ಇಂತಹ ಗೊಂದಲ, ಗೋಜಲು, ಅಸ್ಥಿರತೆ ಇರಬಹುದು ಎನ್ನುವುದನ್ನು ಕರ್ನಾಟಕ ಸರಕಾರ ತೋರಿಸಿ ಕೊಡುತ್ತಿದೆ.

2023ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿದ ಕಾಂಗ್ರೆಸ್, ಬಳಿಕ ನಡೆದ ಉಪಚುನಾವಣೆಗಳಲ್ಲಿಯೂ ಗೆಲ್ಲುವ ಮೂಲಕ ಕರ್ನಾಟಕದಲ್ಲಿ ಮೂರು ದಶಕಗಳಲ್ಲಿಯೇ ಸಿಗದಷ್ಟು ಸ್ಥಾನವನ್ನು ಭದ್ರಪಡಿಸಿಕೊಂಡಿತ್ತು.

ಆದರೆ ಅಧಿಕಾರಕ್ಕೆ ಬಂದ ಎರಡೂವರೆ ವರ್ಷದ ಬಳಿಕ ಶುರುವಾದ ‘ನಾಯಕತ್ವ ಬದಲಾವಣೆ’ಯ ವಿಷಯ ಮುನ್ನೆಲೆಗೆ ಬಂದಾಗಿನಿಂದ ಯಾವುದೇ ಸಮ್ಮಿಶ್ರ ಸರಕಾರ ದಲ್ಲಿಯೂ ಇರದಷ್ಟು ಗೋಜಲು ಸೃಷ್ಟಿಯಾಗುತ್ತಿದೆ. ಈ ಗೋಜಲು ಎಷ್ಟರ ಮಟ್ಟಿಗೆ ಇದೆ ಎಂದರೆ, ರಾಜ್ಯ ಸರಕಾರದ ಸಾಧನೆಗಳೇ ಮರೆಯಾಗಿ, ಮುಖ್ಯಮಂತ್ರಿ ಬದಲಾವಣೆಯಷ್ಟೇ ಇಡೀ ರಾಜ್ಯದ ಪಾಯಿಂಟ್ ಆಫ್ ಟಾಕ್ ಆಗುವಷ್ಟರ ಮಟ್ಟಿಗೆ ಮುಟ್ಟಿದೆ.

ಕಳೆದ ಶನಿವಾರವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಸಹಸ್ರ ದಿನಗಳನ್ನು ಪೂರೈಸಿದೆ. ಈ ಸಮಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರಕಾರದ ಸಾಧನೆಯನ್ನು ಜನರ ಮುಂದೆ ಮಂಡಿಸಿದ್ದು, ಅದರಲ್ಲಿ ಪ್ರಮುಖವಾಗಿ, ಪಂಚಗ್ಯಾರಂಟಿ ಯೋಜನೆಗಳಿಗೆ ಕಳೆದ ಎರಡುವರೆ ವರ್ಷದಲ್ಲಿ 118000‌ ಕೋಟಿ ರು. ಖರ್ಚು ಮಾಡಿರುವ ಬಗ್ಗೆ, 2.20 ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿರುವ ಬಗ್ಗೆ ಮಾಹಿತಿ ನೀಡಿದರು.

ಇದನ್ನೂ ಓದಿ: Ranjith H Ashwath Column: ಪ್ರವಾಸೋದ್ಯಮದ ಬಗ್ಗೆ ಸರಕಾರಕ್ಕೆ ಅಲಕ್ಷ್ಯವೇಕೆ ?

ಇದರೊಂದಿಗೆ ಜಿಡಿಪಿ ಬೆಳವಣಿಗೆಯಲ್ಲಿ ಕರ್ನಾಟಕ ನಂ.1ಆಗಿರುವ ಬಗ್ಗೆ, ಜಿಎಸ್‌ಟಿ ಸಂಗ್ರಹದಲ್ಲಿ ದಾಖಲೆ ಬರೆಯುತ್ತಿರುವ ಬಗ್ಗೆ ಮಾತನಾಡಿದ್ದರು. ಇದರೊಂದಿಗೆ ಕಳೆದ ಎರಡು ವರ್ಷ ಒಂಬತ್ತು ತಿಂಗಳ ಅವಧಿಯಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳ ಪೈಕಿ 243 ಭರವಸೆಗಳನ್ನು ಈಡೇರಿಸಿರುವ ಬಗ್ಗೆ ಮಾತನಾಡಿದ್ದರು!

ಆದರೆ ಸರಕಾರ ನೀಡಿರುವ ಭರವಸೆಯಲ್ಲಿ ಈ ಪ್ರಮಾಣದಲ್ಲಿ ಭರವಸೆ ಈಡೇರಿಸಿರುವ ಬಗ್ಗೆ ರಾಜ್ಯದ ಬಹುಪಾಲು ಜನರಿಗೆ ತಿಳಿದಿಲ್ಲ ಎನ್ನುವುದು ವಾಸ್ತವ. ಏಕೆಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸರಕಾರ ನಡೆಯುತ್ತಿದ್ದರೂ, ಪ್ರಮಾಣ ವಚನ ಸ್ವೀಕರಿಸಿದ ದಿನದಿಂದಲೂ ಸಿಎಂ ಕುರ್ಚಿಯ ಹಗ್ಗ-ಜಗ್ಗಾಟ ನಡೆಯುತ್ತಲೇ ಇದೆ.

ಬಹುತೇಕ ಸಚಿವರು, ತಮ್ಮತಮ್ಮ ಇಲಾಖೆಯಲ್ಲಿ ಆಗಿರುವ ಬೆಳವಣಿಗೆಯ ಬಗ್ಗೆ ಮಾಹಿತಿ ನೀಡುವ ಅಥವಾ ಹೊಸ ಯೋಜನೆಗಳ ಬಗ್ಗೆ ಮಾತನಾಡಿದ್ದಕ್ಕಿಂತ ಹೆಚ್ಚು ಮುಖ್ಯಮಂತ್ರಿ ಯಾರಿರಬೇಕು ಎನ್ನುವ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ್ದೇ ಹೆಚ್ಚು. ಇದರೊಂದಿಗೆ ಗ್ಯಾರಂಟಿ ಯೋಜನೆಯ ಕಾರಣಕ್ಕೆ ಬಹುತೇಕ ಶಾಸಕರಿಗೆ ಸೂಕ್ತ ರೀತಿಯ ಅನುದಾನ ಲಭ್ಯವಾಗುತ್ತಿಲ್ಲ.

ಇದು, ಸಹ ಸರಕಾರದ ಸಾಧನೆಗಳಿಗೆ ‘ಕರಿ ನೆರಳಿನಂತೆ’ ಕಾಡುತ್ತಿದೆ ಎಂದರೆ ತಪ್ಪಾಗುವು ದಿಲ್ಲ. ರಾಜ್ಯ ಸರಕಾರದ ಪಂಚಗ್ಯಾರಂಟಿ ಯೋಜನೆಗಳು ರಾಜ್ಯ ಶೇ.80ರಷ್ಟು ಜನರನ್ನು ಒಂದಲ್ಲ ಒಂದು ರೀತಿ ತಲುಪುತ್ತಿದ್ದರೂ, ಗ್ಯಾರಂಟಿ ಯೋಜನೆ ಜನರ ಮನಸ್ಸಿನಲ್ಲಿ ನೆಲೆ ನಿಲ್ಲದಿರಲು ಕಾರಣವೂ ಇದೇ ಆಗಿದೆ.

Siddu adn DKS

ರಾಜ್ಯದಲ್ಲಿ ಕಾಂಗ್ರೆಸ್ ನೀಡಿದ್ದ ಪಂಚ ಗ್ಯಾರಂಟಿ, ಬಿಜೆಪಿಯ ಒಳಜಗಳ, ಒಳ ಕಿತ್ತಾಟದ ಫಲವಾಗಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಐತಿಹಾಸಿಕ ಬಹುಮತ ಬಂದಿತ್ತು. ಬಳಿಕ ನಡೆದ ಉಪಚುನಾವಣೆ, ಪಕ್ಷೇತರ ಅಭ್ಯರ್ಥಿಗಳ ಬೆಂಬಲದೊಂದಿಗೆ 139 ಶಾಸಕರ ಬಲದೊಂದಿಗೆ ಅಧಿಕಾರ ನಡೆಸುತ್ತಿದೆ.

ಇನ್ನೊಂದೆಡೆ ಪ್ರತಿಪಕ್ಷ ಬಿಜೆಪಿಯಲ್ಲಿರುವ ಸಮಸ್ಯೆ, ಮೈತ್ರಿ ಪಕ್ಷ ಜೆಡಿಎಸ್ ನಲ್ಲಿರುವ ಆಂತರಿಕ ಸಮಸ್ಯೆಯಿಂದ, ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸರಕಾರವನ್ನು ಪ್ರಶ್ನಿಸುವು ದಕ್ಕೆ ಪ್ರಬಲ ಪ್ರತಿಪಕ್ಷವಿಲ್ಲವಾಗಿದೆ. ಕಳೆದ ಎರಡುವರೆ ವರ್ಷದಲ್ಲಿ ಸರಕಾರದ ವಿರುದ್ಧ ಕೇಳಿ ಬಂದ ಹತ್ತಾರು ಆರೋಪಗಳನ್ನು ಸೂಕ್ತ ರೀತಿಯಲ್ಲಿ ಎತ್ತಿಕೊಳ್ಳದೇ ‘ಟಚ್ ಆಂಡ್ ಗೋ’ ರೀತಿ ಮಾಡಿದ್ದರಿಂದ ರಾಜ್ಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಹತ್ತಾರು ಆರೋಪಗಳು ಬಂದಷ್ಟೇ ವೇಗವಾಗಿ ಕಾಣೆಯಾದವು.

ಈ ರೀತಿ ಸರಕಾರದ ವಿರುದ್ಧ ನಕಾರಾತ್ಮಕ ಅಂಶಗಳು ಸದ್ದಾಗದ ರೀತಿಯಲ್ಲಿ ವಾತಾವರಣ ಸಿಗುವುದು ತೀರಾ ಅಪರೂಪ. ಹಾಗೇ ನೋಡಿದರೆ, ಕೇಂದ್ರ ಸರಕಾರವನ್ನು ವಿರೋಧಿಸಲು ಪ್ರಬಲ ಒಕ್ಕೂಟ ಹೇಗಿಲ್ಲವೋ, ಹಾಗೇ ಕರ್ನಾಟಕದ ಮಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವನ್ನು ಪ್ರಶ್ನಿಸುವ ‘ಸೂಕ್ತ’ ಪ್ರತಿಪಕ್ಷವಾಗಿ ಬಿಜೆಪಿ, ಜೆಡಿಎಸ್ ಎರಡುವರೆ ವರ್ಷ ಕಳೆದರೂ ರೂಪುಗೊಂಡಿಲ್ಲ.

ಇಂತಹ ಪೂರಕ ವಾತಾವರಣದ ಹೊರತಾಗಿಯೂ ಕಾಂಗ್ರೆಸ್ ನಾಯಕರ ‘ನಿರಂತರ’ ಹೇಳಿಕೆಗಳಿಂದ ತಾವೇ ಪ್ರತಿಪಕ್ಷಗಳಿಗೆ, ಸಾರ್ವಜನಿಕರಿಗೆ ‘ಆಹಾರ’ವನ್ನು ಒದಗಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ‘ಮೌನ’ವಾಗಿರುವಂತೆ ಹೇಳಿದ್ದರ ಹೊರತಾಗಿಯೂ ಶಾಸಕರು, ನಾಯಕರು ತಮ್ಮ ತಮ್ಮ ನಾಯಕರ ಪರವಾಗಿ ಹೇಳಿಕೆ ನೀಡುತ್ತಾ ಹೋಗುತ್ತಿರುವುದು ಪಕ್ಷಕ್ಕೆ ನಿಜಕ್ಕೂ ನುಂಗಲಾರದ ತುತ್ತಾಗಿದೆ.

ಕಾಂಗ್ರೆಸ್‌ನ ಹೈಕಮಾಂಡ್ ಅದೆಷ್ಟೇ ವೀಕ್ ಆಗಿದ್ದರೂ, ಮುಖ್ಯಮಂತ್ರಿ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯನ್ನು ಕರ್ನಾಟಕ ನಾಯಕರ ಹೇಳಿಕೆಗಳನ್ನು ನೋಡಿ ಕೊಂಡು ತೀರ್ಮಾನಿಸುವುದಿಲ್ಲ. ಇವರು ನೀಡುವ ಹೇಳಿಕೆಗಳಿಂದ ತಮ್ಮ ನಾಯಕರ ಕುರ್ಚಿಗಳು ಭದ್ರವಾಗುವುದೂ ಇಲ್ಲ, ಬದಲಾಗುವುದೂ ಇಲ್ಲ ಎನ್ನುವುದು ಸ್ಪಷ್ಟ. ಈ ವಾಸ್ತವಾಂಶ ಹೇಳಿಕೆಗಳನ್ನು ನೀಡುತ್ತಿರುವ ನಾಯಕರಿಗೂ ಗೊತ್ತಿಲ್ಲ ಎಂದಲ್ಲ.

ಆದರೆ ರಾಜ್ಯ ಕಾಂಗ್ರೆಸ್‌ನಲ್ಲಿರುವ ಈ ಗೊಂದಲವನ್ನು ಜೀವಂತವಾಗಿರಿಸಬೇಕೆಂಬ ‘ಏಕಮಾತ್ರ’ ಕಾರಣಕ್ಕೆ ದಿನಕ್ಕೊಂದು ಹೇಳಿಕೆ ಕೊಡುತ್ತಾ ಓಡಾಡುತ್ತಿದ್ದಾರೆ. ಕರ್ನಾಟಕದಲ್ಲಿ ಆಗುತ್ತಿರುವ ಈ ಗೊಂದಲವನ್ನು ನಿವಾರಿಸಬೇಕಿದ್ದ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ‘ಸಮಯದೂಡುವ’ ಪ್ರಯತ್ನದಲ್ಲಿದ್ದಾರೆ. ಈ ಕಾರಣಕ್ಕಾಗಿಯೇ, ಕೆಲ ತಿಂಗಳ ಕಾಲ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ‘ಸಮಯ’ವನ್ನೇ ನೀಡಲಿಲ್ಲ.

ಡಿ.ಕೆ.ಶಿವಕುಮಾರ್ ಅವರೊಂದಿಗೆ ಮುಖಾಮುಖಿಯಾಗಲೇಬೇಕಾದ ಸಂದರ್ಭದಲ್ಲಿ ‘ವಿಲ್ ಕಾಲ್ ಯು ಸೂನ್’ ಎಂದಷ್ಟೇ ಹೇಳಿ ಕೈತೊಳೆದುಕೊಂಡರು. ಇದಾದ ಬಳಿಕ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಕಾದುಕೂತು ರಾಹುಲ್ ಗಾಂಧಿ ಅವರನ್ನು ಭೇಟಿಯಾದಾಗಲೂ ‘ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ’ ಎನ್ನುವ ಹೇಳಿಕೆ ನೀಡಿದ್ದಾರೆಯೇ ಹೊರತು, ಯಾವುದೇ ಸ್ಪಷ್ಟನೆ ನೀಡಿಲ್ಲ.

ರಾಹುಲ್ ಗಾಂಧಿ ಅವರ ಈ ನಡೆಯಿಂದ, ಸಹಜವಾಗಿಯೇ ದಿನಕ್ಕೊಂದು ಹೇಳಿಕೆ, ಗಾಳಿಸುದ್ದಿ ಹರಿದಾಡಲು ಶುರುವಾಗಿದೆ. ರಾಹುಲ್ ಗಾಂಧಿ ಕರ್ನಾಟಕ ನಾಯಕತ್ವಕ್ಕೆ ಸಂಬಂಧಿಸಿದಂತೆ ಯಾವುದೇ ಹೇಳಿಕೆ ನೀಡಿಲ್ಲವಾದರೂ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕಡೆಯಿಂದ ಕರ್ನಾಟಕದ ನಾಯಕರಿಗೆ ‘ಮೌನ’ ವಾಗಿರುವಂತೆ ಹಲವು ಬಾರಿ ಹೇಳಿಸಿದ್ದಾರೆ.

ಸುರ್ಜೇವಾಲ, ಮಲ್ಲಿಕಾರ್ಜುನ ಖರ್ಗೆ ಅವರಂತೂ ‘ಹೇಳಿಕೆ ನೀಡಿದರೆ ಕಠಿಣ ಕ್ರಮ’ ಎನ್ನುವ ಎಚ್ಚರಿಕೆ ನೀಡಿದ್ದರೂ, ಶಾಸಕರುಗಳು ತಮ್ಮ ತಮ್ಮ ನಾಯಕನ ಪರವಾಗಿ ವಕಾಲತ್ತು ವಹಿಸುವುದನ್ನು ಬಿಟ್ಟಿಲ್ಲ. ಈ ಹಿಂದೆ ದೆಹಲಿಯಿಂದ ‘ಕಾಗದ’ದಲ್ಲಿ ಬರುತ್ತಿದ್ದ ಸಂದೇಶವನ್ನು ಕಣ್ಣಿಗೆ ಒತ್ತಿಕೊಂಡು ಹೋಗುತ್ತಿದ್ದ ಕಾಂಗ್ರೆಸಿನಲ್ಲಿ ಇದೀಗ, ಬಹಿರಂಗ ಎಚ್ಚರಿಕೆಗೂ ಬಗ್ಗದ ಪರಿಸ್ಥಿತಿ ಬಂದಿದೆ.

ಕೆಲ ಶಾಸಕರಿಗೆ ಬಹಿರಂಗ ಹೇಳಿಕೆ ನೀಡಿದ್ದಕ್ಕೆ ‘ಶೋಕಾಸ್ ನೋಟಿಸ್’ ನೀಡಿದರೂ ಅದಕ್ಕೆ ಉತ್ತರಿಸುವ ಬದಲು, ಪುನಃ ಹೇಳಿಕೆ ನೀಡುವಷ್ಟರ ಮಟ್ಟಿಗೆ ಬಂದಿದ್ದಾರೆ. ಶಾಸಕರು ಈ ರೀತಿಯ ನಿತ್ಯ ಹಾದಿ-ಬೀದಿಯಲ್ಲಿನ ಹೇಳಿಕೆಗಳಿಂದ ಸರಕಾರ ‘ಸ್ಥಿರ’ವಾಗಿಲ್ಲ ಎನ್ನುವ ಮಾತುಗಳು ಜನರ ನಡುವೆ ಕೇಳಿಬರುತ್ತಿದೆ.

ಸರಕಾರದ ಸಹಸ್ರ ದಿನಗಳ ಸಂಭ್ರಮವಿರಲಿ, ಸಿದ್ದರಾಮಯ್ಯ ಅವರ ಸುದೀರ್ಘ ಮುಖ್ಯಮಂತ್ರಿ ಎನ್ನುವ ದಾಖಲೆಯಿರಲಿ, ಸರಕಾರ ಕಳೆದ ಎರಡುವರೆ ವರ್ಷದಲ್ಲಿ ಜಾರಿಗೊಳಿಸಿರುವ ‘ಜನಪರ’ ಯೋಜನೆಗಳಿರಲಿ, ಇಡೀ ದೇಶಕ್ಕೆ ಮಾದರಿ ಎನಿಸಿರುವ ಗ್ಯಾರಂಟಿ ಯೋಜನೆಗಳ ಯಶಸ್ಸಾಗಲಿ ಜನರಿಗೆ ತಲುಪುತ್ತಲೇ ಇಲ್ಲ.

ಬದಲಿಗೆ, ಮುಖ್ಯಮಂತ್ರಿ ಯಾರು, ಬದಲಾವಣೆ ಯಾವಾಗ? ಯಾವ ಶಾಸಕ- ಯಾರ ಪರ ಎನ್ನುವ ಏಕಮಾತ್ರ ವಿಷಯದ ಮೇಲೆ ಕಳೆದ ನಾಲ್ಕು ತಿಂಗಳಿನಿಂದ ಚರ್ಚೆಗಳು ನಡೆಯುತ್ತಿವೆ.

ಕರ್ನಾಟಕದಲ್ಲಿ ಶುರುವಾಗಿರುವ ಈ ಬೆಳವಣಿಗೆ ಪಕ್ಷಕ್ಕೆ, ಸರಕಾರಕ್ಕೆ ಮಾರಕ ಎನ್ನುವ ಸ್ಪಷ್ಟತೆ ರಾಜ್ಯ ನಾಯಕರಿಂದ ಹಿಡಿದು ಪಕ್ಷದ ಹೈಕಮಾಂಡ್‌ವರಗೆ ಗೊತ್ತಿದ್ದರೂ ಅದನ್ನು ನಿಯಂತ್ರಿಸುವುದು ಹೇಗೆ ಎನ್ನುವ ವಿಷಯದಲ್ಲಿ ತೀರ್ಮಾನ ಕೈಗೊಳ್ಳಲು ಹೈಕಮಾಂಡ್ ಸಿದ್ಧವಿಲ್ಲದ ಕಾರಣ, ಸಮಸ್ಯೆ ಇತ್ಯರ್ಥವಾಗುತ್ತಿಲ್ಲ.

ಯಾವುದೇ ಪಕ್ಷದಲ್ಲಿ ಈ ರೀತಿಯ ಗೊಂದಲಗಳು ಉದಯಿಸುವುದು ಹೊಸದೇನಲ್ಲ. ಈ ರೀತಿಯ ಗೊಂದಲಗಳು ಉಂಟಾದ ಸಮಯದಲ್ಲಿ ಪಕ್ಷದ ಹೈಕಮಾಂಡ್ ಮಧ್ಯಪ್ರವೇಶಿಸಿ, ಎಲ್ಲವನ್ನೂ ಇತ್ಯರ್ಥಪಡಿಸುತ್ತದೆ. ಕಾಂಗ್ರೆಸ್‌ನಲ್ಲಿ ಈ ಹಿಂದೆ ಈ ರೀತಿಯ ಗಲಾಟೆಗಳು ಶುರುವಾಗುವ ಮೊದಲೇ ಎಲ್ಲವನ್ನೂ ತಣ್ಣಗಾಗಿಸಿರುವ ಅನೇಕ ಉದಾಹರಣೆಗಳಿವೆ.

ಆದರೆ ಇಂದಿನ ಮಟ್ಟಿಗೆ ಕಾಂಗ್ರೆಸ್ ಹೈಕಮಾಂಡ್, ತಮ್ಮ ನಿರ್ಧಾರವನ್ನು ಸ್ಪಷ್ಟವಾಗಿ ಹೇಳುವ ಪರಿಸ್ಥಿತಿಯಲ್ಲಿಯೂ ಉಳಿದಿಲ್ಲ. ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಇಬ್ಬರಲ್ಲಿ ಯಾರ ಪರವಾಗಿಯೇ ತೀರ್ಮಾನ ಕೈಗೊಂಡರೆ, ಇನ್ನೊಬ್ಬರು ಎಲ್ಲಿ ಬೇಸರಿ ಕೊಂಡು, ತಾವು ಅಧಿಕಾರದಲ್ಲಿರುವ ಇರುವ ಏಕೈಕ ಬಲಿಷ್ಠ ರಾಜ್ಯವನ್ನು ಕಳೆದುಕೊಳ್ಳಲು ಸಿದ್ಧರಿಲ್ಲ.

ಹಾಗೆಂದು, ಹೈಕಮಾಂಡ್ ತೀರ್ಮಾನ ತಿಳಿಸದೇ ಇದ್ದರೆ ಡಿ.ಕೆ.ಶಿವಕುಮಾರ್ ತಿರುಗಿ ಬೀಳದಿದ್ದರೂ, ‘ಮೌನ’ಕ್ಕೆ ಶರಣಾಗುವುದು ನಿಶ್ಚಿತ. ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆ, ವಿಧಾನಪರಿಷತ್ ಚುನಾವಣೆ, ಎದುರಾಗಲಿರುವ ಎರಡು ಉಪಚುನಾವಣೆ ಯಲ್ಲಿ ಈ ಮೌನವೂ ಕಾಂಗ್ರೆಸ್ ದುಬಾರಿಯಾಗುವುದು ನಿಶ್ಚಿತ.

ದೇಶದೆಲ್ಲೆಡೆ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದರೂ ಕರ್ನಾಟಕದಲ್ಲಿ ‘ಬಲಿಷ್ಠ’ ವಾಗುತ್ತಿರುವ ‘ಖುಷಿ’ ಒಂದೆಡೆ ಯಾದರೆ, ಇಲ್ಲಿರುವ ಬಲಿಷ್ಠ ನಾಯಕರ ನಡುವಿನ ಕಿತ್ತಾಟವನ್ನು ನಿಭಾಯಿಸುವುದು ಹೇಗೆ ಎನ್ನುವ ಪ್ರಶ್ನೆಗೆ ಉತ್ತರವಿಲ್ಲವಾಗಿದೆ. ಹೈಕಮಾಂಡ್ ತಮ್ಮ ಮೌನವನ್ನು ಈ ಹಂತದಲ್ಲಿಯಾದರೂ ಮುರಿದು ಸ್ಪಷ್ಟನೆ ನೀಡದೇ ಹೋದರೆ ಭವಿಷ್ಯದಲ್ಲಿ ಇನ್ನಷ್ಟು ಬೆಲೆ ತೆರಬೇಕಾಗುತ್ತದೆ ಎನ್ನುವುದು ಸ್ಪಷ್ಟವಾಗಿದೆ.

ರಂಜಿತ್​ ಎಚ್​ ಅಶ್ವತ್ಥ್

View all posts by this author