ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Ranjith H Ashwath Column: ಪ್ರವಾಸೋದ್ಯಮದ ಬಗ್ಗೆ ಸರಕಾರಕ್ಕೆ ಅಲಕ್ಷ್ಯವೇಕೆ ?

ಪ್ರವಾಸೋದ್ಯಮವನ್ನು ಬೂಸ್ಟ್ ಮಾಡುವುದಕ್ಕೆ ಅಗತ್ಯವಿರುವ ಸಾರಿಗೆ ಸಂಪರ್ಕ, ಮೂಲ ಸೌಕರ್ಯ ವ್ಯವಸ್ಥೆಗೆ ಒತ್ತುನೀಡುವ ಬಗ್ಗೆ ಬಹುತೇಕರು ಆಲೋಚಿಸುವುದಿಲ್ಲ ಎನ್ನುವುದು ವಾಸ್ತವ.ಹಾಗೆಂದ ಮಾತ್ರಕ್ಕೆ ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶವಿಲ್ಲ ಎಂದಲ್ಲ. ಕರ್ನಾಟಕದಲ್ಲಿ ‘ಮರುಭೂಮಿ’ ಪ್ರವಾಸೋದ್ಯಮ ಹೊರತಾಗಿ ಇನ್ನುಳಿದ ಎಲ್ಲ ರೀತಿಯ ಪ್ರವಾಸೋದ್ಯಮಕ್ಕೆ ಅವಕಾಶವಿದೆ.

ಪ್ರವಾಸೋದ್ಯಮದ ಬಗ್ಗೆ ಸರಕಾರಕ್ಕೆ ಅಲಕ್ಷ್ಯವೇಕೆ ?

-

ಅಶ್ವತ್ಥಕಟ್ಟೆ

ಯಾವುದೇ ಸರಕಾರಗಳು ಅಧಿಕಾರಕ್ಕೆ ಬಂದರೂ ಪ್ರವಾಸೋದ್ಯಮ ಇಲಾಖೆಯು ಒಂದು ರೀತಿ ಯಾರಿಗೂ ಬೇಡವಾದ ಇಲಾಖೆಯಾಗಿರುತ್ತದೆ. ಯಾವುದೇ ಸಚಿವರಿಗೆ ಈ ಇಲಾಖೆ ಯನ್ನು ಕೊಟ್ಟರೂ ಆರಂಭದಲ್ಲಿ ಕೊಸರಾಟದಲ್ಲಿಯೇ ಅಧಿಕಾರ ವಹಿಸಿಕೊಳ್ಳುತ್ತಾರೆ. ಇಂಥ ಬಹುತೇಕ ಸಚಿವರು, ತಮ್ಮ ಕಾಲಾವಧಿಯಲ್ಲಿ ‘ಪ್ರವಾಸೋದ್ಯಮ ನೀತಿ’ಯ ಹೊರತಾಗಿ ಯಾವ ಕಾರ್ಯಕ್ರಮ ಹಾಕಿಕೊಂಡಿದ್ದಾರೆ ಎಂದರೆ ಅದಕ್ಕೆ ಉತ್ತರವಿರುವುದಿಲ್ಲ.

ಯಾವುದೇ ದೇಶವು ಅಭಿವೃದ್ಧಿಯಾಗಬೇಕೆಂದರೆ ಅಲ್ಲಿನ ರಸ್ತೆಗಳು ಮುಖ್ಯವಂತೆ. ಅದೇ ರೀತಿ ಯಾವುದೇ ದೇಶ ಖ್ಯಾತಿಗಳಿಸಬೇಕೆಂದರೆ, ಅಲ್ಲಿನ ಪ್ರವಾಸೋದ್ಯಮ ಮುಖ್ಯಪಾತ್ರ ವಹಿಸುತ್ತದೆ. ಏಕೆಂದರೆ, ಕೈಗಾರಿಕೆ, ಬಂಡವಾಳ ಹೂಡಿಕೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಶಕ್ತಿಶಾಲಿಯಾದರೂ ಆ ಕ್ಷೇತ್ರವು ಮಾತ್ರ ‘ಆಕರ್ಷಣೆ’ಯಾಗುತ್ತದೆ.

ಆದರೆ ಪ್ರವಾಸಿ ತಾಣಗಳಿದ್ದರೆ, ಎಲ್ಲ ವರ್ಗದವರನ್ನು ಆಕರ್ಷಿಸುತ್ತದೆ. ಅಭಿವೃದ್ಧಿ ಹೊಂದಿದ ಯಾವುದೇ ದೇಶವನ್ನು ಅಲ್ಲಿನ ಪ್ರವಾಸಿ ತಾಣಗಳಿಂದ ವಿಶ್ವದ ಜನ ಗುರುತಿಸುತ್ತಾರೆ. ಭಾರತದ ರಾಜಧಾನಿ ದೆಹಲಿ ಎನ್ನುವುದು ಎಷ್ಟೋ ಜನರಿಗೆ ತಿಳಿದಿರುವುದಿಲ್ಲ. ಆದರೆ ದೆಹಲಿಯ 230 ಕಿಮೀ ದೂರದಲ್ಲಿರುವ ಆಗ್ರಾವನ್ನು ಇಡೀ ವಿಶ್ವ ಗುರುತಿಸುತ್ತದೆ. ಆಗ್ರಾದ ತಾಜ್‌ಮಹಲ್ ಬಹುತೇಕರ ಕಣ್ಣಲ್ಲಿ ಕಟ್ಟಿರುತ್ತದೆ.

ಅದು ಪ್ರವಾಸಿ ತಾಣಗಳಿಗೆ ಇರುವ ‘ತಾಕತ್ತು’. ವಿಶ್ವದ ಶೇ.60ಕ್ಕೂ ಹೆಚ್ಚು ರಾಷ್ಟ್ರಗಳ ಜಿಡಿಪಿಯೂ ಪ್ರವಾಸೋದ್ಯಮದ ಮೇಲೆಯೇ ನಿಂತಿದೆ. ಭಾರತದಲ್ಲಿಯೂ ಕೇರಳ, ಗೋವಾ, ಈಶಾನ್ಯ ರಾಜ್ಯಗಳು ಪ್ರವಾಸೋದ್ಯಮವನ್ನೇ ಅವಲಂಬಿಸಿವೆ. ಈ ಪ್ರಮಾಣದಲ್ಲಿ ‘ಬೇಡಿಕೆ’ ಇರುವ ಪ್ರವಾಸೋದ್ಯಮ ಕ್ಷೇತ್ರದ ಬಗ್ಗೆ ಕರ್ನಾಟಕದಲ್ಲಿ ಮೊದಲಿನಿಂದಲೂ ಅದೊಂದು ರೀತಿಯ ತಾತ್ಸಾರ ಭಾವನೆಯಿದೆ ಎಂದರೂ ತಪ್ಪಾಗುವುದಿಲ್ಲ.

ಯಾವುದೇ ಸರಕಾರಗಳು ಅಧಿಕಾರಕ್ಕೆ ಬಂದರೂ ಪ್ರವಾಸೋದ್ಯಮ ಇಲಾಖೆಯು ಒಂದು ರೀತಿಯಲ್ಲಿ ಯಾರಿಗೂ ಬೇಡವಾದ ಇಲಾಖೆಯಾಗಿರುತ್ತದೆ. ಯಾವುದೇ ಸಚಿವರಿಗೆ ಈ ಇಲಾಖೆ ಯನ್ನು ಕೊಟ್ಟರೂ ಆರಂಭದಲ್ಲಿ ಕೊಸರಾಟದಲ್ಲಿಯೇ ಅಧಿಕಾರ ವಹಿಸಿಕೊಳ್ಳುತ್ತಾರೆ. ಈ ರೀತಿ ಅಧಿಕಾರ ವಹಿಸಿಕೊಂಡಿರುವ ಬಹುತೇಕ ಸಚಿವರು, ತಮ್ಮ ಕಾಲಾವಧಿಯಲ್ಲಿ ‘ಪ್ರವಾಸೋದ್ಯಮ ನೀತಿ’ಯ ಹೊರತಾಗಿ ಯಾವ ಕಾರ್ಯಕ್ರಮ ಹಾಕಿಕೊಂಡಿದ್ದಾರೆ ಎಂದರೆ ಅದಕ್ಕೆ ಉತ್ತರವಿರುವು ದಿಲ್ಲ.

ಇದನ್ನೂ ಓದಿ: Ranjith H Ashwath Column: ಬಜೆಟ್‌ ಎಂದರೆ ಬರೀ ಘೋಷಣೆಯಲ್ಲ

ಇದು ಕೇವಲ ಅಧಿಕಾರ ವಹಿಸಿಕೊಳ್ಳುವ ಸಚಿವರ ತಪ್ಪಲ್ಲ. ಯಾವುದೇ ಸರಕಾರವಾದರೂ ಪ್ರವಾಸೋದ್ಯಮಕ್ಕೆ 500 ಕೋಟಿ ರುಪಾಯಿ ಒಳಗೆ ಬಜೆಟ್ ಮೀಸಲಿಡುತ್ತದೆ.

ಪ್ರವಾಸೋದ್ಯಮವನ್ನು ಬೂಸ್ಟ್ ಮಾಡುವುದಕ್ಕೆ ಅಗತ್ಯವಿರುವ ಸಾರಿಗೆ ಸಂಪರ್ಕ, ಮೂಲ ಸೌಕರ್ಯ ವ್ಯವಸ್ಥೆಗೆ ಒತ್ತುನೀಡುವ ಬಗ್ಗೆ ಬಹುತೇಕರು ಆಲೋಚಿಸುವುದಿಲ್ಲ ಎನ್ನುವುದು ವಾಸ್ತವ.ಹಾಗೆಂದ ಮಾತ್ರಕ್ಕೆ ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶವಿಲ್ಲ ಎಂದಲ್ಲ. ಕರ್ನಾಟಕದಲ್ಲಿ ‘ಮರುಭೂಮಿ’ ಪ್ರವಾಸೋದ್ಯಮ ಹೊರತಾಗಿ ಇನ್ನುಳಿದ ಎಲ್ಲ ರೀತಿಯ ಪ್ರವಾಸೋದ್ಯಮಕ್ಕೆ ಅವಕಾಶವಿದೆ.

ಕಡಲತೀರದ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ, ವನ್ಯಜೀವಿ ಪ್ರವಾಸೋದ್ಯಮ, ಜಲಪಾತಗಳ ಪ್ರವಾಸೋದ್ಯಮ, ಪ್ರಕೃತಿ ಪ್ರವಾಸೋದ್ಯಮ ಸೇರಿದಂತೆ ವಿವಿಧ ರೀತಿಯ ಮತ್ತು ಹತ್ತು ಹಲವು ಆಯಾಮಗಳ ಪ್ರವಾಸೋದ್ಯಮ ಕರ್ನಾಟಕದಲ್ಲಿದೆ. ಆದರೆ ಅದನ್ನು ‘ವಿಶ್ವ’ಕ್ಕೆ ತೋರಿಸಬೇಕಿರುವ ವಿಷಯದಲ್ಲಿ ಕರ್ನಾಟಕ ಹಿಂದೆ ಬಿದ್ದಿದೆ ಎನ್ನುವುದು ವಿಪರ್ಯಾಸ.

ಕರೋನಾ ಬಳಿಕ ಹೆಚ್ಚಾಗಿರುವ ವೈಲ್ಡ್‌ಲೈಫ್ ಸಫಾರಿಗೆ ಕರ್ನಾಟಕದಲ್ಲಿ ಹಲವು ಅವಕಾಶ ವಿದ್ದರೂ, ಅದನ್ನು ಬಳಸಿಕೊಳ್ಳಲು ಹಿಂದೆ ಬಿದ್ದಿದ್ದೇವೆ ಎನ್ನುವುದು ಹಲವರ ಮಾತಾಗಿದೆ. ಆದರೀಗ ಅದರ ಮುಂದುವರಿದ ಭಾಗವಾಗಿ ವಿಶ್ವವಿಖ್ಯಾತ ಬಂಡೀಪುರ ಹಾಗೂ ಕಬಿನಿ ಭಾಗದಲ್ಲಿಯೂ ಸಫಾರಿಯನ್ನು ನಿರ್ಬಂಧಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಮೂರು ತಿಂಗಳ ಹಿಂದೆ ಹೆಡಿಯಾಳ ಅರಣ್ಯ ಪ್ರದೇಶದಲ್ಲಿ ಹುಲಿಗಳು ಮಾನವರ ಮೇಲೆ ದಾಳಿ ಮಾಡಿವೆ ಎನ್ನುವ ಕಾರಣಕ್ಕೆ, ಸಫಾರಿಯನ್ನು ನಿರ್ಬಂಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿತ್ತು. ಆದರೆ ಸಫಾರಿಗೂ, ಈ ದಾಳಿಗಳಿಗೂ ಯಾವುದೇ ಸಂಬಂಧವಿಲ್ಲದಿದ್ದರೂ ಈ ರೀತಿಯ ನಿರ್ಬಂಧ ದಿಂದ ಕರ್ನಾಟಕದ ಇಡೀ ಪ್ರವಾಸೋದ್ಯಮಕ್ಕೆ ಪೆಟ್ಟುಬಿದ್ದಿದೆ.

ಸಫಾರಿ ನಿರ್ಬಂಧದಿಂದ ಕಬಿನಿ, ಬಂಡೀಪುರ ಸುತ್ತಮುತ್ತಲಿನ ರೆಸಾರ್ಟ್‌ಗಳಲ್ಲಿ ಪ್ರವಾಸಿಗರ ಸಂಖ್ಯೆ ‘ಶೂನ್ಯ’ಕ್ಕೆ ಬಂದಿಳಿದಿದೆ. ಇದರಿಂದ ಜರ್ಜರಿತರಾಗಿರುವ ಮಾಲೀಕರು ಸಫಾರಿ ಪುನರಾರಂಭಿಸ ದಿದ್ದರೆ ರೆಸಾರ್ಟ್‌ಗಳನ್ನು ಮುಚ್ಚಬೇಕಾದ ಪರಿಸ್ಥಿತಿಗೆ ಬಂದಿದ್ದಾರೆ. ಬಂಡೀಪುರ, ಕಬಿನಿ ಭಾಗದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಕುಟುಂಬದ ಬದುಕು ಈ ರೆಸಾರ್ಟ್, ಹೋಮ್ ಸ್ಟೇಗಳ ಮೇಲೆ ನಿಂತಿದೆ.

Screenshot_9 T

ಅವೈಜ್ಞಾನಿಕವಾಗಿ ಸ್ಥಗಿತಗೊಳಿಸಿರುವ ಸಫಾರಿಯನ್ನು ಆರಂಭಿಸದಿದ್ದರೆ, ಮುಂದಿನ ದಿನದಲ್ಲಿ ಸಿಬ್ಬಂದಿಗಳ ಸಂಖ್ಯೆಯನ್ನು ಕಡಿತಗೊಳಿಸಬೇಕಾದ ಹಾಗೂ ರೆಸಾರ್ಟ್‌ಗಳನ್ನು ಮುಚ್ಚಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಹೀಗಾದರೆ, 10 ಸಾವಿರಕ್ಕೂ ಹೆಚ್ಚು ಜನರು, ಎರಡು ಸಾವಿರಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬರುವುದು ನಿಶ್ಚಿತ ಎನ್ನುವುದು ಸತ್ಯ.

ಹಾಗೆ ನೋಡಿದರೆ, ಹುಲಿಗಳು ವಾಸಿಸುವ ಕಾಡಿನ ಅಂಚಿನಲ್ಲಿ, ಅಭಯಾರಣ್ಯಗಳಲ್ಲಿ ಈ ರೀತಿಯ ದಾಳಿಗಳು ಹೊಸದೇನಲ್ಲ. ಉತ್ತರಾಖಂಡದಲ್ಲಿರುವ ಕಾರ್ಬೆಟ್, ರಾಜಸ್ಥಾನದಲ್ಲಿರುವ ರಣತಂಬೋರ್, ಮಧ್ಯಪ್ರದೇಶದ ಕನ್ಹಾ, ಪಶ್ಚಿಮ ಬಂಗಾಳದಲ್ಲಿರುವ ಸುಂದರ್‌ಬನ್ ಕಾಡುಗಳಲ್ಲಿ ಕರ್ನಾಟಕದಲ್ಲಿನ ದಾಳಿಗಿಂತ ಹೆಚ್ಚಾಗಿಯೇ ಹುಲಿ ದಾಳಿಗಳಾಗುತ್ತಿವೆ. ಆದರೆ ಎಂದಿಗೂ ಅಲ್ಲಿ ಸಫಾರಿಗಳನ್ನು ನಿಲ್ಲಿಸಿಲ್ಲ. ಅದರಲ್ಲಿಯೂ ಕರ್ನಾಟಕದಲ್ಲಿ ಆಗಿರುವ ಹುಲಿಗಳ ದಾಳಿಗೂ ಸಫಾರಿ ಗೂ ಸಂಬಂಧವೇ ಇಲ್ಲ.

ಆದರೂ, ನಿರ್ಬಂಧಿಸಿರುವುದು ಏಕೆ ಎನ್ನುವುದಕ್ಕೆ ಸರಕಾರದ ಬಳಿ ಉತ್ತರವಿಲ್ಲ. ಅರಣ್ಯ ಇಲಾಖೆ ಯ ಈ ತೀರ್ಮಾನವನ್ನು ಪ್ರಶ್ನಿಸಬೇಕಿದ್ದ ಪ್ರವಾಸೋದ್ಯಮ ಇಲಾಖೆ ‘ಮೌನ’ವಾಗಿದೆ. ಆದರೆ ಈ ಮೌನದಿಂದ ಕರ್ನಾಟಕದ ಬೊಕ್ಕಸಕ್ಕೆ ಬಹುದೊಡ್ಡ ನಷ್ಟವಾಗುತ್ತಿದೆ ಎನ್ನುವುದನ್ನು ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ.

ಅಂಕಿ-ಅಂಶಗಳ ಪ್ರಕಾರ, ಬಂಡೀಪುರ-ನಾಗರಹೊಳೆ ಸಫಾರಿಯಿಂದಲೇ ನಿತ್ಯ 25 ಲಕ್ಷಕ್ಕೂ ಹೆಚ್ಚು ಆದಾಯ ಬರುತ್ತಿತ್ತು. ಅಂದರೆ ತಿಂಗಳಿಗೆ ಕನಿಷ್ಠ 7.5 ಕೋಟಿ ರು. ಆದಾಯವಿತ್ತು. ಕಳೆದ ಮೂರು ತಿಂಗಳಿನಿಂದ ಸಫಾರಿ ಸ್ಥಗಿತವಾಗಿರುವುದರಿಂದ ಕನಿಷ್ಠ ಎಂಟು ಕೋಟಿ ಆದಾಯ ನಷ್ಟವಾಗಿದೆ. ಇದರೊಂದಿಗೆ ಈ ಭಾಗದಲ್ಲಿರುವ ರೆಸಾರ್ಟ್‌ಗಳು, ಹೋಂ ಸ್ಟೇಗಳು ಪ್ರವಾಸಿಗರಿಲ್ಲದೆ ಭಾರಿ ನಷ್ಟ ಅನುಭವಿಸುತ್ತಿವೆ.

ಇದು ಹೀಗೇ ಮುಂದುವರಿದರೆ ಈ ರೆಸಾರ್ಟ್‌ಗಳು ಮುಚ್ಚುವ ಸ್ಥಿತಿಗೆ ಬರಲಿದೆ. ಇದಿಷ್ಟೇ ಅಲ್ಲದೆ, ಕರ್ನಾಟಕದ ಪ್ರವಾಸೋದ್ಯಮ ಸಂಸ್ಕೃತಿ ಮರೆಯಾದರೆ, ಮರುಸ್ಥಾಪಿಸುವುದು ತೀರಾ ಕಷ್ಟದ ಕೆಲಸ. ಬಂಡೀಪುರ, ಕಬಿನಿಗೆ ಆಗಮಿಸುವ ವಿದೇಶಿಗರಿಂದಲೇ ಕರ್ನಾಟಕದಲ್ಲಿ ವಾರ್ಷಿಕವಾಗಿ ಸರಾಸರಿ 125 ಕೋಟಿ ರು. ವಹಿವಾಟು ಆಗುತ್ತಿತ್ತು. ಆದರೆ ಇದೀಗ ಕರ್ನಾಟಕದಲ್ಲಿ ಈ ಸಫಾರಿ ಇಲ್ಲವೆಂದು ನೆರೆಯ ಕೇರಳದ ವಯನಾಡು, ತಮಿಳುನಾಡಿನ ಮಧುಮಲೈಗೆ ಅನೇಕ ವಿದೇಶಿಗರು ಮುಖ ಮಾಡಿದ್ದಾರೆ.

ಇದು ಭವಿಷ್ಯದ ಕರ್ನಾಟಕ ಪ್ರವಾಸೋದ್ಯಮದ ದೃಷ್ಟಿಯಿಂದ ಭಾರಿ ಹೊಡೆತ ಎನ್ನುವುದು ಸ್ಪಷ್ಟ. ಬಂಡೀಪುರ ಹಾೂ ನಾಗರಹೊಳೆ ಸಫಾರಿಯನ್ನು ನಿರ್ಬಂಧಿಸಿರುವ ಅರಣ್ಯ ಇಲಾಖೆಯ ದೃಷ್ಟಿಯಲ್ಲಿ ಈ ಸಫಾರಿ ಮಾತ್ರ ನಿಲ್ಲಿಸಲಾಗಿದೆ.

ಆದರೆ ಪ್ರವಾಸೋದ್ಯಮ ಕ್ಷೇತ್ರದ ದೃಷ್ಟಿಯಲ್ಲಿ, ವಿದೇಶಿ ಪ್ರವಾಸಿಗರು, ಉತ್ತರ ಭಾರತದ ಪ್ರವಾಸಿಗರ ದೃಷ್ಟಿಯಲ್ಲಿ ಕರ್ನಾಟಕದ ಇಡೀ ಪ್ರವಾಸೋದ್ಯಮ ಸಮಸ್ಯೆಯಾಗಿದೆ ಎನ್ನುವ ರೀತಿಯಲ್ಲಿದೆ. ಏಕೆಂದರೆ, ವಿದೇಶಗಳಿಂದ ಬರುವುದು ಕೇವಲ ಬಂಡೀಪುರದ ಸಫಾರಿಗೆಂದಲ್ಲ. ತಿಂಗಳ ಲೆಕ್ಕದಲ್ಲಿ ಕರ್ನಾಟಕಕ್ಕೆ ಆಗಮಿಸುವ ವಿದೇಶಿಗರು ಬಂಡೀಪುರಕ್ಕೆ ಬಂದವರು ಮೈಸೂರು, ಹಳೇಬೀಡು-ಪಟ್ಟದಕಲ್ಲು ಅಲ್ಲಿಂದ ಹಂಪಿ, ಬಾದಾಮಿ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟು ಆಮೇಲೆ ವಾಪಸಾಗುತ್ತಾರೆ.

ಇದೇ ರೀತಿ ಉತ್ತರ ಭಾರತದಿಂದ ವಾರಗಟ್ಟಲೇ ರಾಜ್ಯಕ್ಕೆ ಆಗಮಿಸುವವರು, ಕೇವಲ ಬಂಡೀಪುರಕ್ಕೆ ಬರುವುದಿಲ್ಲ. ಬದಲಿಗೆ ಬಂಡೀಪುರಕ್ಕೆ ಬಂದು ಇಲ್ಲಿನ ಸಫಾರಿ ವೀಕ್ಷಿಸಿ ಬಳಿಕ ಕರ್ನಾಟಕದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಾರೆ. ಆದರೀಗ ಕರ್ನಾಟಕದಲ್ಲಿ ಸಫಾರಿ ಇಲ್ಲ ಎಂದರೆ ಅವರು ಕರ್ನಾಟಕದ ಬದಲಿಗೆ, ಬೇರೆ ರಾಜ್ಯಗಳಿಗೆ ತೆರಳುವ ಸಾಧ್ಯತೆ ಇರುತ್ತದೆ.

ಅದರಲ್ಲಿಯೂ ಬಂಡೀಪುರ ಹಾಗೂ ನಾಗರಹೊಳೆಗೆ ಹೊಂದಿಕೊಂಡಿರುವ ತಮಿಳುನಾಡಿನ ಮಧು ಮಲೈ ಹಾಗೂ ಕೇರಳದ ವಯನಾಡಿಗೆ ಕರ್ನಾಟಕ ಅರಣ್ಯ ಇಲಾಖೆಯ ಅವೈಜ್ಞಾನಿಕ ತೀರ್ಮಾನ ಬಹುದೊಡ್ಡ ಲಾಭವನ್ನು ನೀಡುತ್ತದೆ. ಏಕೆಂದರೆ, ಕರ್ನಾಟಕದಲ್ಲಿ ಸಫಾರಿಗಳು ನಿರ್ಬಂಧ ವಾದರೂ, ಇದೇ ಅಭಯಾರಣ್ಯದ ಮುಂದುವರಿದ ಭಾಗವಾಗಿರುವ ಮಧುಮಲೈ ಹಾಗೂ ವಯನಾಡಿನಲ್ಲಿ ಸಫಾರಿ ಮುಂದುವರಿದಿದೆ.

ಆದ್ದರಿಂದ ಇಲ್ಲಿಯ ಬದಲು ಅಲ್ಲಿಗೆ ತೆರಳುತ್ತಾರೆ. ನಿರ್ಬಂಧ ಹೀಗೇ ಮುಂದುವರಿದರೆ, ಬಂಡೀಪುರ-ನಾಗರಹೊಳೆಗೆಂದೇ ಬರುವ ಐದು ಸಾವಿರಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು ಕೇರಳ, ತಮಿಳು ನಾಡಿನತ್ತ ಮುಖಮಾಡುವುದರಲ್ಲಿ ಸಂದೇಹವಿಲ್ಲ.

ಈ ಆಯಾಮದಲ್ಲಿ ಅರಣ್ಯ ಇಲಾಖೆ ಆಲೋಚಿಸದೆ, ತನ್ನ ಅವೈಜ್ಞಾನಿಕ ತೀರ್ಮಾನಕ್ಕೆ ಈಗಲೂ ಜೋತುಬಿದ್ದಿದೆ. ಹಾಗೆ ನೋಡಿದರೆ, ಅರಣ್ಯ ಇಲಾಖೆಯು ನಿರ್ಬಂಧ ವಿಧಿಸುವ ಬದಲು ಹುಲಿ ದಾಳಿ ಹೆಚ್ಚಾಗಿರುವ ಹೆಡಿಯಾಳ ಭಾಗದಲ್ಲಿ ಹೆಚ್ಚುವರಿ ಅರಣ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಿ, ವನ್ಯಪ್ರಾಣಿ-ಮಾನವ ಸಂಘರ್ಷ ತಡೆಗೆ ಕ್ರಮವಹಿಸಬಹುದಾಗಿತ್ತು. ಆದರೆ ಅದನ್ನು ಮಾಡದೆ ಸಫಾರಿಯನ್ನು ನಿರ್ಬಂಧಿಸಿದ್ದಾರೆ.

ಇದನ್ನು ಪ್ರಶ್ನಿಸಬೇಕಾದ ಪ್ರವಾಸೋದ್ಯಮ ಇಲಾಖೆಯೂ ದಿವ್ಯಮೌನ ವಹಿಸಿದೆ. ರೆಸಾರ್ಟ್ ಮಾಲೀಕರು, ಹೋಂ ಸ್ಟೇ ಮಾಲೀಕರು ಒತ್ತಡ ಹೇರುತ್ತಿದ್ದರೂ, ಅದು ಅರಣ್ಯ ಇಲಾಖೆಯ ಸಚಿವರು, ಅಧಿಕಾರಿಗಳಿಗೆ ಕಿವಿ ಬೀಳುವಷ್ಟು ಗಟ್ಟಿಯಾಗಿಲ್ಲ. ಮುಖ್ಯಮಂತ್ರಿಗಳು ಸಫಾರಿ ಆರಂಭಿಸುವಂತೆ ಸೂಚನೆ ನೀಡಿದರೂ, ಅರಣ್ಯ ಇಲಾಖೆಯವರು ‘ತಾಂತ್ರಿಕ ವರದಿಯ’ ನೆಪದಲ್ಲಿ ದಿನದೂಡುತ್ತಿದ್ದಾರೆ.

ಹೆಚ್ಚು ಒತ್ತಡ ಹೇರಿದರೆ, ಹುಲಿಗಳ ದಾಳಿಯಿಂದ ಆಗಿರುವ ಸಾವು-ನೋವಿನ ಲೆಕ್ಕವನ್ನು ಲಿಂಕ್ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ. ಆದರೆ ಹುಲಿ-ಮಾನವ ಸಂಘರ್ಷದ ಬಗ್ಗೆ ಮಾತನಾಡುವ ಬಹುತೇಕ ಅಧಿಕಾರಿಗಳಿಗೆ, ಬಂಡೀಪುರ ಸಫಾರಿಗೂ ಹೆಡಿಯಾಳ ಪ್ರದೇಶಕ್ಕೂ 40 ಕಿ.ಮೀ. ಅಂತರ ವಿರುವುದು ತಿಳಿದಿಲ್ಲ ಎನ್ನುವುದು ವಾಸ್ತವ!

ಪ್ರವಾಸಿಗಳು ಬಯಸುವ ‘ವಿಭಿನ್ನ’ ಪ್ರವಾಸೋದ್ಯಮ ವಿಷಯದಲ್ಲಿ ಕರ್ನಾಟಕವು ಇತರೆ ರಾಜ್ಯ ವಷ್ಟೇ ಅಲ್ಲದೆ, ಹಲವು ದೇಶಗಳಿಗಿಂತ ಮುಂದಿದೆ. ಆದರೆ ಇವುಗಳನ್ನು ಯಾವ ರೀತಿ ಬಳಸಿಕೊಳ್ಳು ತ್ತೇವೆ ಎನ್ನುವುದರ ಮೇಲೆ ಪ್ರವಾಸಿಗರ ಸಂಖ್ಯೆ, ಅದರಿಂದಾಗುವ ಲಾಭ-ನಷ್ಟಗಳು ತೀರ್ಮಾನ ವಾಗುತ್ತದೆ.

ಆದರೆ ಪ್ರವಾಸೋದ್ಯಮವನ್ನು ಆದ್ಯತಾ ವಲಯವನ್ನಾಗಿಯೇ ಮಾಡಿಕೊಳ್ಳದೆ, ಪ್ರವಾಸೋದ್ಯಮ ಇಲಾಖೆಯನ್ನು ‘ಹೆಚ್ಚುವರಿ’ ಹೊಣೆಗಾರಿಕೆಯ ರೀತಿಯಲ್ಲಿ ಹಂಚಿಕೆ ಮಾಡಿ, ಸರಕಾರಗಳು ಬದಲಾದಂತೆ ಒಂದೊಂದು ನೀತಿ ಮಾಡುವುದರಿಂದ ಬಹುದೊಡ್ಡ ಲಾಭವಾಗುತ್ತದೆ ಎನಿಸುವು ದಿಲ್ಲ.

ಇನ್ನಾದರೂ ಕರ್ನಾಟಕ ಸರಕಾರಕ್ಕೆ ಪ್ರವಾಸೋದ್ಯಮ ‘ಆದ್ಯತಾ’ ಕ್ಷೇತ್ರವಾಗಲಿ. ಸದ್ಯ ‘ಟ್ರೆಂಡ್’ ನಲ್ಲಿರುವ ‘ಇಕೋ-ಟೂರಿಸಂ’ ಬೆಳೆಸುವುದಕ್ಕೆ ಇನ್ನ್ಯಾವುದೋ ನೀತಿ ಜಾರಿಗೊಳಿಸುವು ದಕ್ಕಿಂತ, ಯಾರದ್ದೋ ಒತ್ತಡಕ್ಕೆ ಮಣಿದು ‘ಅವೈಜ್ಞಾನಿಕ’ ಕಾರಣ ನೀಡಿ ಸ್ಥಗಿತಗೊಳಿಸಿರುವ ಬಂಡೀಪುರ ಹಾಗೂ ನಾಗರಹೊಳೆ ಸಫಾರಿಗಳನ್ನು ಪುನರಾರಂಭಿಸಬೇಕು.

ಇದನ್ನು ಮಾಡದೆ, ತಾಂತ್ರಿಕ ಸಮಿತಿಯ ವರದಿ, ರೈತರ ಸಂಘದ ವಿರೋಧ ಮತ್ತೊಂದು ಮಗದೊಂದು ಎಂದುಕೊಂಡು ಸಮಯ ಕಳೆಯುತ್ತ ಕೂತರೆ, ಕರ್ನಾಟಕದ ವಿಷಯದಲ್ಲಿ ದೇಶ-ವಿದೇಶದಲ್ಲಿರುವ ಪ್ರವಾಸಿ ಸಂಸ್ಕೃತಿಯ ಆಸಕ್ತಿ ಕಡಿಮೆಯಾಗಲಿದೆ. ಒಮ್ಮೆ ಈ ರೀತಿಯಾದರೆ ಇದನ್ನು ಸರಿಪಡಿಸಲು ದಶಕಗಳೇ ಬೇಕಾಗುತ್ತವೆ ಎನ್ನುವುದು ವಾಸ್ತವ. ಆದ್ದರಿಂದ ಅರಣ್ಯ ಇಲಾಖೆಯ ಈ ಅವೈಜ್ಞಾನಿಕ ತೀರ್ಮಾನಕ್ಕೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಇಲಾಖೆ ಹಾಗೂ ಸಚಿವಾಲಯಗಳು ಇನ್ನಾದರೂ ಧ್ವನಿ ಎತ್ತಬೇಕಿದೆ. ಇಲ್ಲದೆ ಹೋದರೆ, ಕರ್ನಾಟಕದ ಪ್ರವಾಸೋ ದ್ಯಮಕ್ಕಿರುವ ಛಾಪು ತಗ್ಗುವುದರಲ್ಲಿ ಅನುಮಾನವಿಲ್ಲ.