ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shashidhara Halady Column: ಪರಿಸರ ದಿನದ ಪ್ರಲಾಪಗಳಿಗೆ ಕೊನೆ ಎಂದು ?

‘ಇರುವುದು ಒಂದೇ ಭೂಮಿ, ಅದನ್ನು ನಮಗೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ರಕ್ಷಿಸೋಣ, ಬೇರೆ ವನ್ಯಜೀವಿಗಳಿಗೂ ಈ ಭೂಮಿ ಯಲ್ಲಿ, ಪರಿಸರದಲ್ಲಿ ಪಾಲಿದೆ, ಅವುಗಳನ್ನೂ ರಕ್ಷಿಸೋಣ: ಆ ಉದ್ದೇಶ ಕ್ಕಾಗಿ ಹಾಗೆ ಮಾಡಬೇಕು, ಹೀಗೆ ಮಾಡಬೇಕು, ಇದನ್ನು ತ್ಯಜಿಸಬೇಕು, ಅದನ್ನು ತ್ಯಜಿಸ ಬೇಕು’ ಎಂದು ಪ್ರತಿವರ್ಷ ಜೂನ್ 5ರಂದು ದೊಡ್ಡ ದನಿಯಲ್ಲಿ, ನಾಟಕೀಯವಾಗಿ ಹೇಳುತ್ತಲೇ ಬಂದಿ ದ್ದೇವೆ; ಅದಕ್ಕೆಂದು ಸಕ್ರಿಯ ಕಾರ್ಯಸೂಚಿಯನ್ನು ರೂಪಿಸಲಾಗುತ್ತದೆ

ಶಶಾಂಕಣ

ಪರಿಸರ ಎಂದರೆ ನಮಗೆಲ್ಲಾ ಅಪಾರ ಪ್ರೀತಿ; ‘ನಮ್ಮ ಪರಿಸರವನ್ನು ರಕ್ಷಿಸಬೇಕು, ಮುಂದಿನ ಪೀಳಿಗೆಗೆ ಪರಿಸರದ ಸಿರಿವಂತಿಕೆಯನ್ನು ಕಾಪಾಡಬೇಕು, ಪರಿಸರ ನಾಶವಾದರೆ ನಮ್ಮೆಲ್ಲರ ಬದುಕೇ ನಾಶ, ಬನ್ನಿ ಪರಿಸರ ರಕ್ಷಿಸೋಣ’ ಎಂದು ಯಾರಾದರೂ ಕರೆ ನೀಡಿದರೆ, ಎಲ್ಲರೂ ಕೈಜೋಡಿಸಲು ಮುಂದಾಗುತ್ತಾರೆ.

ಉತ್ತಮ ನಡೆ; ಅದರಲ್ಲಿ ಎರಡು ಮಾತಿಲ್ಲ. ಇಂತಹ ಒಂದು ಪ್ರೀತಿ, ಕಾಳಜಿಯನ್ನು ಮನಸ್ಸಿನಲ್ಲಿ ತುಂಬಿಕೊಂಡೇ ಹೇಳುತ್ತಿದ್ದೇನೆ : ‘ಪರಿಸರ ದಿನವನ್ನು ದೊಡ್ಡ ಪ್ರಚಾರದೊಂದಿಗೆ ಆಚರಿಸಲು ಆರಂಭಿಸಿದ ನಂತರ, ನಮ್ಮ ಪರಿಸರ ಇನ್ನಷ್ಟು ಹದಗೆಟ್ಟಿದೆ!’ಈ ಹೇಳಿಕೆ ಕೇಳಿ, ನಿಮ್ಮಲ್ಲಿ ಕೆಲವರಿ ಗಾದರೂ ಬೇಸರವಾದೀತು, ಈ ರೀತಿ ಹೇಳಬಾರದು, ಇದು ನಕಾರಾತ್ಮಕ ಭಾವನೆ ಎಂದು ಕೆಲವರಿಗೆ ಅನಿಸಲೂಬಹುದು.

ಆದರೆ, ಇಷ್ಟು ವರ್ಷ ನಿರಂತರವಾಗಿ, ಅವ್ಯಾಹತವಾಗಿ, ಮತಿಹೀನತೆಯಿಂದ, ದೂರಾಲೋಚನೆ ಇಲ್ಲದೇ, ಮುಂದಿನ ಸಮಸ್ಯೆಗಳ ಅರಿವಿದ್ದರೂ, ಪರಿಸರದ ನಾಶ ಈಗಲೂ ನಡೆಯುತ್ತಲೇ ಇದೆ. ಅದನ್ನು ಕಂಡು ಕಂಡು ಮೇಲಿನಂತಹ ಒಂದು ಭಾವನೆ ಮನದಲ್ಲಿ ಮೂಡಿದೆ: ಪರಿಸರ ದಿನಾಚರಣೆಯನ್ನು ಭಾರೀ ಪ್ರಚಾರದಿಂದ ನಡೆಸಲು ಆರಂಭಿಸಿದ ನಂತರ, ನಮ್ಮ ಸುತ್ತಲಿನ ಪರಿಸರ ಅಧೋಗತಿಯತ್ತ ಸಾಗುತ್ತಿದೆ.

ಈ ಪಯಣವು ಪ್ರಪಾತದತ್ತ ಸಾಗುತ್ತಾ, ಇನ್ನಷ್ಟು ಹದಗೆಡುತ್ತಲೇ ಇದೆ. ಕಳೆದ 50 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಪರಿಸರ ನಾಶವನ್ನು ಕಂಡ, ಸಾರ್ಕಾಸ್ಟಿಕ್ ಆಗಿ ಮೇಲಿನ ಹೇಳಿಕೆ ಯನ್ನು ಬರೆದಿದ್ದೇನೆ, ಅಷ್ಟೇ.

ಮೊತ್ತಮೊದಲು ಪರಿಸರ ದಿನವನ್ನು ಆಚರಿಸಲು ಆರಂಭಿಸಿದ್ದು, 1972ರ ಜೂನ್ 5ರಂದು. ಅದಕ್ಕೆ ಸ್ಪೂರ್ತಿ ಎಂದರೆ, ವಿಶ್ವಸಂಸ್ಥೆಯ ಅಂಗಸಂಸ್ಥೆಯು ಜಗತ್ತಿನಾದ್ಯಂತ ಪರಿಸರ ದಿನಾಚರಣೆಯ ಮಹತ್ವವನ್ನು ಪ್ರಚುರಪಡಿಸಿ, ಎಲ್ಲಾ ದೇಶಗಳೂ ಜೂನ್ 5ರಂದು ಪರಿಸರ ದಿನಾಚರಣೆಯನ್ನು ಮಾಡಿ ಎಂದು ನೀಡಿದ ಕರೆ. ನಮ್ಮ ದೇಶವೂ ಸೇರಿದಂತೆ ಜಗತ್ತಿನ ಹೆಚ್ಚಿನ ದೇಶಗಳು ಈ ಆಚರಣೆ ಯನ್ನು ಆರಂಭಿಸಿದವು ಮತ್ತು ಪ್ರತಿ ವರ್ಷ ಪರಿಸರ ದಿನಾಚರಣೆಗೆ ಸಂಬಂಧಿಸಿದಂತೆ ಒಂದು ನಿರ್ದಿಷ್ಠ ಧ್ಯೇಯ ವಾಕ್ಯವನ್ನು ಗೌರವದಿಂದ ಜಾರಿಗೆ ತರುತ್ತಿದ್ದೇವೆ ಎಂದು ಹೇಳಿದವು.

ಇದನ್ನೂ ಓದಿ:Shashidhara Halady Column: ಬಾನಿನಿಂದ ಸುರಿವ ಮಳೆಹನಿಯೇ ! ಬೇಗ ಬಾ !

1972ರಿಂದ ಪ್ರತಿ ವರ್ಷವೂ ಪರಿಸರಕ್ಕೆ ಸಂಬಂಧಿಸಿದಂತೆ ಒಂದೊಂದು ವಿಭಾಗಕ್ಕೆ ಒತ್ತು ಕೊಟ್ಟು ಪರಿಸರ ದಿನಾಚರಣೆ ನಡೆದಿದೆ : ಭೂಮಿ, ಪ್ಲಾಸ್ಟಿಕ್ ತ್ಯಾಜ್ಯ, ಮರುಭೂಮೀಕರಣದ ತಡೆ, ಜಲಮಾಲಿನ್ಯದ ತಡೆ - ಹೀಗೆ. ಇವೆಲ್ಲವೂ ನಮ್ಮ ಪರಿಸರವನ್ನು ಉತ್ತಮ ಪಡಿಸಲು ಕೈಗೊಂಡ ಕೈಂಕರ್ಯಗಳು.

ಆದರೆ, ನೀವೇ ನೋಡಿ, 1972ರಲ್ಲಿದ್ದ ಉತ್ತಮ ಪರಿಸರ, ಈಗ ಉಳಿದುಕೊಂಡಿದೆಯೇ? ಕಳೆದ ಅರ್ಧ ಶತಮಾನದಲ್ಲಿ, ಈ ರೀತಿ ಪರಿಸರ ದಿನಾಚರಣೆಯನ್ನು ಪ್ರತಿವರ್ಷ ನಡೆಸುತ್ತಿದ್ದರೂ, ನಮ್ಮಲ್ಲಿದ್ದ ಪರಿಸರ ನಾಶಗೊಂಡಿದೆ, ಪ್ಲಾಸ್ಟಿಕ್ ಮಾಲಿನ್ಯ ಹೆಚ್ಚಿದೆ, ವಾಯು ಮಾಲಿನ್ಯ ಅಧಿಕಗೊಂಡಿದೆ, ಜಲಮಾಲಿನ್ಯಕ್ಕೆ ಮಿತಿಯೇ ಇಲ್ಲ, ಸಮುದ್ರದ ನೀರಿನ ತನಕ ಪ್ಲಾಸ್ಟಿಕ್ ತುಣುಕುಗಳು ಸಾಗಿ ಹೋಗಿವೆ, ಇನ್ನೂ ಹಲವು ಆಯಾಮಗಳಲ್ಲಿ ನಡೆದಿರುವ ಪರಿಸರ ನಾಶ ಢಾಳಾಗಿ ಕಾಣಿಸುತ್ತಿದೆ.

ಹಿರಿಯರು ತಮ್ಮ ಕಣ್ಣೆದುರೇ ನಾಶಗೊಂಡಿರುವ, ಈಗಲೂ ನಾಶಗೊಳ್ಳುತ್ತಿರುವ ಪರಿಸರವನ್ನು ಕಂಡು, ನಿಟ್ಟುಸಿರು ಬಿಡುತ್ತಿದ್ದಾರೆ; ಈಗಿನ ಯುವಜನತೆಯು, ಕಳೆದ 54 ವರ್ಷಗಳಲ್ಲಿ ಸಾಗಿರುವ ಈ ‘ಪಾತಾಳದತ್ತ ಪಯಣ’ವನ್ನು ಕಣ್ಣಾರೆ ನೋಡದಿದ್ದರೂ, ಅಂಕಿ ಅಂಶಗಳನ್ನು ಗಮನಿಸಿ, 1972ರಿಂದ ಹೇಗೆ ನಮ್ಮ ಪರಿಸರ ನಾಶವಾಗಿದೆ ಎಂಬುದನ್ನು ಸ್ಪಷ್ಟವಾಗಿ ಗುರುತಿಸಬಹುದು.

ವಿಶ್ವಸಂಸ್ಥೆಯ ಆಶ್ರಯದಲ್ಲಿ, ಜಗತ್ತಿನ ಸುಮಾರು 150 ದೇಶಗಳು, 5.6.1972ರಿಂದ ಪ್ರತಿವರ್ಷ ಪರಿಸರ ದಿನವನ್ನು ಆಚರಿಸುತ್ತಲೇ ಬಂದಿವೆ. ಜತೆಗೆ, ಈ ಸಂದರ್ಭದಲ್ಲಿ ಮಕ್ಕಳಿಗೆ, ಯುವಜನತೆಗೆ ಮತ್ತು ಎಲ್ಲರಿಗೂ ಪರಿಸರ ರಕ್ಷಿಸುವ ಅಗತ್ಯವನ್ನು ಕುರಿತು ತಿಳಿ ಹೇಳುತ್ತಲೇ ಇದ್ದಾರೆ. ಆದರೆ, ಭೂತಾನ್‌ನಂತಹ ಕೆಲವು ದೇಶಗಳನ್ನು ಹೊರತುಪಡಿಸಿ, ಬೇರೆಲ್ಲಾ ಕಡೆ ಈ ಪರಿಸರ ದಿನಾಚರಣೆ ಯು ಕೇವಲ ತೋರಿಕೆಗೆ, ಘೋಷಣೆ ಕೂಗಲು, ಸಂದೇಶ ವಾಕ್ಯವನ್ನು ಮಾಧ್ಯಮಗಳಲ್ಲಿ ಪ್ರಚುರ ಪಡಿಸಲು, ಫೋಟೋಶೂಟ್ʼಗೆ, ಡಂಬಾಚಾರಕ್ಕೆ, ಬೂಟಾಟಿಕೆಗೆ ಮತ್ತು ಪ್ರಚಾರಕ್ಕೆ ಮಾತ್ರ ಒತ್ತುಕೊಟ್ಟಿದೆ ಎಂದೇ, ಬಹಳ ವ್ಯಸನದಿಂದ ಹೇಳಬೇಕಾಗಿದೆ.

7

‘ಇರುವುದು ಒಂದೇ ಭೂಮಿ, ಅದನ್ನು ನಮಗೆ ಮತ್ತು ನಮ್ಮ ಮುಂದಿನ ಪೀಳಿಗೆಗೆ ರಕ್ಷಿಸೋಣ, ಬೇರೆ ವನ್ಯಜೀವಿಗಳಿಗೂ ಈ ಭೂಮಿ ಯಲ್ಲಿ, ಪರಿಸರದಲ್ಲಿ ಪಾಲಿದೆ, ಅವುಗಳನ್ನೂ ರಕ್ಷಿಸೋಣ: ಆ ಉದ್ದೇಶಕ್ಕಾಗಿ ಹಾಗೆ ಮಾಡಬೇಕು, ಹೀಗೆ ಮಾಡಬೇಕು, ಇದನ್ನು ತ್ಯಜಿಸಬೇಕು, ಅದನ್ನು ತ್ಯಜಿಸ ಬೇಕು’ ಎಂದು ಪ್ರತಿವರ್ಷ ಜೂನ್ 5ರಂದು ದೊಡ್ಡ ದನಿಯಲ್ಲಿ, ನಾಟಕೀಯವಾಗಿ ಹೇಳುತ್ತಲೇ ಬಂದಿ ದ್ದೇವೆ; ಅದಕ್ಕೆಂದು ಸಕ್ರಿಯ ಕಾರ್ಯಸೂಚಿಯನ್ನು ರೂಪಿಸಲಾಗುತ್ತದೆ, ಹಲವು ದೇಶಗಳ ಅತ್ಯುನ್ನತ ಅಧಿಕಾರ ಕೇಂದ್ರವೇ ಪರಿಸರ ರಕ್ಷಿಸಿ ಎಂದು ದೇಶವಾಸಿಗಳಿಗೆ ಕರೆ ಕೊಡುತ್ತದೆ, ಕೆಲವು ಕೆಲಸಗಳನ್ನೂ ಈ ನಿಟ್ಟಿನಲ್ಲಿ ‘ಹಮ್ಮಿಕೊಳ್ಳಲಾಗುತ್ತಿದೆ’.ಆದರೆ, ಇವೆಲ್ಲವೂ ಕೇವಲ ಬೂಟಾಟಿಕೆಯೇ, ಪ್ರಚಾರಕ್ಕಾಗಿಯೇ? ಹೌದು ಎನ್ನಲು ಹಲವು ಪುರಾವೆಗಳು ದೊರಕುತ್ತಿವೆ!

ಮೇಲ್ನೋಟಕ್ಕೆ ಗಮನಿಸಿದರೂ ಗೊತ್ತಾಗುತ್ತಿದೆ, 1972ರಲ್ಲಿ ಇದ್ದ ಪರಿಸರ ಈಗ ಇಲ್ಲ; ಕಳೆದ 50 ವರ್ಷಗಳಲ್ಲಿ ಭಾರೀ ಪ್ರಮಾಣದ ಪರಿಸರವು ವಿವಿಧ ಉದ್ದೇಶಗಳಿಗೆ, ನೆಪಗಳಿಗೆ (ಅಟಕಟ್ಟು, ಕಾಲುವೆ, ಕುಡಿಯುವ ನೀರು, ಕೃಷಿ ಭೂಮಿ ಇ) ನಾಶಗೊಂಡಿದೆ, ಗಬ್ಬೆದ್ದು ಹೋಗಿದೆ; ಅಲ್ಲಲ್ಲಿ ಕೆಲವು ಕ್ಷೇತ್ರಗಳಲ್ಲಿ ಪ್ರಗತಿ ಕಂಡರೂ, ಒಟ್ಟಾರೆ ತಕ್ಕಡಿಯಲ್ಲಿಟ್ಟು ನೋಡಿದಾಗ, ಪರಿಸರರಕ್ಷಣೆಗಿಂದ ‘ಭಕ್ಷಣೆ’ಯ ತೂಕವೇ ಅಧಿಕವಾಗಿ ಕಾಣಿಸುತ್ತಿದೆ.

ನಮ್ಮ ದೇಶದ ಪರಿಸರ ರಕ್ಷಣೆಯ ದೃಷ್ಟಿಯಿಂದ 1972 ಇನ್ನೂ ಮಹತ್ವದ ವರ್ಷ; ವಿಶ್ವಪರಿಸರ ದಿನಾಚರಣೆಯನ್ನು ಅದೇ ವರ್ಷ, ಜೂನ್ 5ರಿಂದ ನಮ್ಮ ದೇಶ ಆಚರಿಸಲು ಪ್ರಾರಂಭಿಸಿತು; ಅದೇ ವರ್ಷ, ವನ್ಯಜೀವಿ ರಕ್ಷಣಾ ಕಾಯ್ದೆಯೂ ನಮ್ಮಲ್ಲಿ ಜಾರಿಗೆ ಬಂತು; ಅದುವರೆಗೆ ನಮ್ಮ ಜನರು ಬೇಟೆ ಯಾಡುತ್ತಿದ್ದ ಅದೆಷ್ಟೋ ಪ್ರಾಣಿಗಳನ್ನು ಇನ್ನು ಮುಂದೆ ಬೇಟೆಯಾಡುವಂತಿಲ್ಲ ಎಂಬ ಕಾನೂನು ಜಾರಿಗೆ ಬಂತು; ಮುಂದಿನ ನಾಲ್ಕಾರು ವರ್ಷಗಳಲ್ಲಿ ಆ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಆರಂಭಿಸಲಾಯಿತು.

ಬಂದೂಕು ಹಿಡಿದು, ಬಲೆ ಹಾಕಿ ಅಥವಾ ವಿಷ ಕೊಟ್ಟು ಸಾಯಿಸಲಾಗುತ್ತಿದ್ದ ಹುಲಿ, ಚಿರತೆ, ತೋಳ, ಕರಡಿ ಮೊದಲಾದ ಅವೆಷ್ಟೋ ಜೀವಿಗಳು ಬೇಟೆಯಿಂದ ತಪ್ಪಿಸಿಕೊಂಡವು; ಕಳ್ಳಬೇಟೆ ಅಲ್ಲಲ್ಲಿ ನಡೆಯುತ್ತಿದ್ದರೂ, ಅದೊಂದು ದೊಡ್ಡ ಅಪರಾಧ ಎಂದು ಎಲ್ಲೆಡೆ ಪ್ರಚಾರವಾಯಿತು. ಅದರಿಂದಾಗಿ, ನಮ್ಮ ದೇಶದಲ್ಲಿ ಹಲವು ವನ್ಯಜೀವಿಗಳು ಇಂದು ಸಂಖ್ಯೆಯಲ್ಲಿ ವೃದ್ಧಿಸಿವೆ; 1972ರಲ್ಲಿದ್ದು ದಕಿಂತಲೂ ಹೆಚ್ಚು ವನ್ಯಜೀವಿಗಳು ಇಂದು ಇವೆ; ವನ್ಯಜೀವಿಗಳೊಂದಿಗೆ ಸಹಬಾಳ್ವೆ ಯು ಸಾಧ್ಯ ಮತ್ತು ಅದಕ್ಕೆ ಈ ಕಾನೂನು ಪೂರಕ ಎಂದೇ ತಿಳಿಯಲಾಗುತ್ತಿತ್ತು.

ಆದರೆ, ಕಳೆದ ಒಂದೆರಡು ದಶಕಗಳಲ್ಲಿ, ಮಾನವ ವನ್ಯಜೀವಿ ಸಂಘರ್ಷ ಜಾಸ್ತಿಯಾಗುತ್ತಿದೆ; ಚಿಕ್ಕಮ ಗಳೂರು, ಹಾಸನ, ಮಹದೇಶ್ವರಬೆಟ್ಟ, ಸಕಲೇಶಪುರ, ಆನೆಕಲ್ಲು ಮೊದಲಾದ ಕಡೆ ಹುಲಿ, ಆನೆ, ಚಿರತೆ ಮೊದಲಾದ ಪ್ರಾಣಿಗಳು ಜನರನ್ನು ಸಾಯಿಸುತ್ತಿರುವ ಸುದ್ದಿ ಹೆಚ್ಚು ಬೆಳಕಿಗೆ ಬರಲಾರಂಭಿ ಸಿದೆ. ವನ್ಯಜೀವಿಗಳು ಹೆಚ್ಚಳಗೊಂಡರೂ, ಅವು ವಾಸಿಸುವ ಸ್ಥಳ ಕಿರಿದಾಗುತ್ತಲೇ ಹೋಗುತ್ತಿದೆ, ದೊಡ್ಡ ಕಾಡು, ಕುರುಚಲು ಕಾಡು, ಹುಲ್ಲು ಕಲ್ಲುಮಿಶ್ರಿತ ಹುಲ್ಲುಗಾವಲು, ಇಂತಹ ಎಲ್ಲಾ ಪರಿಸರವನ್ನು ಮನುಷ್ಯನು ಕೃಷಿ, ಸೈಟ್, ರಸ್ತೆ, ಅಟಕಟ್ಟು, ಸೇತುವೆ, ನದಿಸಂಪರ್ಕ ಮೊದಲಾದ ಯೋಜನೆಗಳಿಗೆ ನಿರಂತರವಾಗಿ ನಾಶಮಾಡುತ್ತಾ, ತನ್ನ ವ್ಯಾಪ್ತಿಯನ್ನು ವೇಗವಾಗಿ ಹಿಗ್ಗಿಸಿಕೊಳ್ಳು ತ್ತಾ ಸಾಗಿದ್ದರಿಂದ, ವನ್ಯಜೀವಿಗಳ ಸಂಖ್ಯೆ ಜಾಸ್ತಿಯಾದರೂ, ಅವುಗಳೊಂದಿಗೆ ಸಂಘರ್ಷ ಜಾಸ್ತಿಯಾಗಿ, ಇಂದು ‘ವನ್ಯಜೀವಿಗಳು ನಮ್ಮ ಪ್ರಗತಿಗೆ ಮಾರಕವೇ?’ ಎಂಬ ಅಭಿಪ್ರಾಯ ಗಳು ಅಲ್ಲಲ್ಲಿ ವ್ಯಕ್ತವಾಗಲು ತೊಡಗಿದೆ.

ಇದು ಪರಿಸರ ರಕ್ಷಣೆಯ ಆಶಯಕ್ಕೆ ತದ್ವಿರುದ್ಧ ಎನಿಸುವುದಿಲ್ಲವೆ? ಪ್ರತಿ ವರ್ಷ ನಡೆಸುತ್ತಿರುವ ಪರಿಸರ ದಿನಾಚರಣೆಯ ತತ್ವಕ್ಕೆ ಪೂರ್ತಿ ವಿರುದ್ಧ ದಿಕ್ಕಿನಲ್ಲಿ ಮನುಷ್ಯನ ಪ್ರಗತಿ ಮತ್ತು ವನ್ಯಜೀವಿ ಗಳೊಂದಿಗೆ ಮುಖಾಮುಖಿ (ಸಂಘರ್ಷ)ನಡೆಯುತ್ತಿದೆ!

ಹಾಗೆ ನೋಡಿದರೆ, 1972ರಲ್ಲಿ ಆರಂಭಗೊಂಡ ವಿಶ್ವಪರಿಸರ ದಿನದ ಆಶಯವು ಮಹೋನ್ನತ ವಾದುದು; ವಿಶ್ವಸಂಸ್ಥೆಯ ಆಶ್ರಯದಲ್ಲಿ ಆರಂಭಗೊಂಡ ಈ ದಿನದ ಆಚರಣೆಯನ್ನು ಪ್ರತಿ ವರ್ಷ ಒಂದೊಂದು ದೇಶವು ಆಚರಿಸುವ ಆತಿಥ್ಯವನ್ನು ಹೊತ್ತುಕೊಂಡವು; ನಮ್ಮ ದೇಶವೂ ಎರಡು ಬಾರಿ (1975 ಮತ್ತು 2018) ಇಂತಹ ಆತಿಥ್ಯವನ್ನು ವಹಿಸಿದೆ. ಆದರೆ, ‘ಆತಿಥ್ಯದ ಹೊಣೆ’ ಹೊರುವ, ತುಸು ಆಡಂಬರ ಎನಿಸುವ ಈ ಪ್ರಕ್ರಿಯೆಯ ಹಿಂದೆ ಇರುವುದು ತೋರಿಕೆಯ ಶಿಷ್ಟಾಚಾರ ಮಾತ್ರ!

ಹಾಗೆಂದು, ಈಗ ಕೆಲವರಿಗೆ ಅರಿವಾಗುತ್ತಿದೆ. ವಿಶ್ವ ಪರಿಸರ ದಿನಾಚರಣೆಯ ಆಶಯಗಳು ಮಹತ್ ಇರಬಹುದು, ಆದರೆ ಫಲಿತಾಂಶ ಮಾತ್ರ ಬಹುಪಾಲು ಸೊನ್ನೆ ಎಂದು ಕಳೆದ ಅರ್ಧ ಶತಮಾನದ ಅಂಕಿ ಅಂಶಗಳು ಹೇಳುತ್ತಿವೆ. ಇಂತಹ ಆಚರಣೆಯ ಪ್ರಚಾರ ಮತ್ತು ಪ್ರತಿವರ್ಷ ಅದನ್ನು ಒಂದೊಂದು ದೇಶ ಆತಿಥ್ಯ ವಹಿಸುತ್ತದೆ ಎಂಬ ಪ್ರಚಾರವು ಕೇವಲ ಶಿಷ್ಟಾಚಾರ ಎಂಬುದಕ್ಕೆ ಪುರಾವೆ ಇದೆ : ನಮ್ಮ ದೇಶವು ಎರಡು ಬಾರಿ ಇದರ ಆತಿಥ್ಯವನ್ನು ವಹಿಸಿದರೆ, ಬಾಂಗ್ಲಾದೇಶವು ಒಟ್ಟು ಒಂಬತ್ತು ಬಾರಿ ಆತಿಥ್ಯ ವಹಿಸಿದೆ!

ನಮ್ಮ ದೇಶದಲ್ಲಿ ಹುಲಿ ಯೋಜನೆ ಮೊದಲಾದ ಕೆಲವು ಯಶಸ್ವಿ (ತಾತ್ಕಾಲಿಕ) ಯೋಜನೆ ಗಳನ್ನಾದರೂ ಹೆಸರಿಸ ಬಹುದೇನೋ, ಆದರೆ ಪರಿಸರದಿನಾಚರಣೆಯನ್ನು ಒಂಬತ್ತು ಬಾರಿ ಆತಿಥ್ಯ ವಹಿಸಿದ್ದರಿಂದಾಗಿ, ಬಾಂಗ್ಲಾದೇಶದ ಪರಿಸರದ ರಕ್ಷಣೆಗೆ ಯಾವುದೇ ಲಾಭವಾಗಿಲ್ಲ. ಅಲ್ಲಿನ ಸುಂದರ್‌ಬನ ಪರಿಸರವು ಮೊದಲಿಗಿಂತಲೂ ತೀವ್ರ ಹಾನಿಗೊಳಗಾಗಿದೆ ಮತ್ತು ಪಕ್ಕದಲ್ಲೇ ನಮ್ಮ ದೇಶದಲ್ಲಿ ಮುಂದುವರಿದಿರುವ ಆ ವನದ ಭಾಗವನ್ನು ರಕ್ಷಿಸಲು, ನಮ್ಮ ದೇಶದ ಮೇಲೆ ಹೆಚ್ಚಿನ ಒತ್ತಡವಾಗುತ್ತಿದೆ.

ಇದು ಒಂದು ಉದಾಹರಣೆ ಮಾತ್ರ; ಪರಿಸರ ದಿನಾಚರಣೆಯ ಆತಿಥ್ಯ ವಹಿಸುವ, ಹೆಚ್ಚಿನ ಪ್ರಚಾರದ ಒಂದು ವಿದ್ಯಮಾನವು, ಕೇವಲ ಶಿಷ್ಟಾಚಾರ ಮತ್ತು ಪ್ರಚಾರದ ಪ್ರಭಾವಳಿಗೆ ಸಿಲುಕಿದೆಯೇ ಹೊರತು, ಅದರಿಂದ ನಿಜವಾಗಿಯೂ ಪರಿಸರದ ರಕ್ಷಣೆ ನಡೆಯುತ್ತಿಲ್ಲ ಎಂಬುದಕ್ಕೆ ಇದೊಂದು ಪುಟ್ಟ ಉದಾಹರಣೆ.

ಜಾಗತಿಕ ಮಟ್ಟದಲ್ಲಿ ಗಮನಿಸಿದರೆ, 1972ರ ನಂತರ, ಹಲವು ಆಯಾಮದಲ್ಲಿ ಪರಿಸರದ ತೀವ್ರ ಹಾನಿ ಮುಂದುವರಿದಿದೆ. ಜಗತ್ತಿಗೆ ಶುದ್ಧ ಆಮ್ಲಜನಕ ನೀಡುವ ‘ಶ್ವಾಸಕೋಶ’ ಎಂಬ ಹೆಗ್ಗಳಿಕೆ ಪಡೆದಿರುವ ಅಮೆಜಾನ್ ಅರಣ್ಯ ಪ್ರದೇಶವು, 1972ರಿಂದ ಇಂದಿನ ತನಕ ಸಾಕಷ್ಟು ನಲುಗಿದೆ; ಅಂಕಿ ಅಂಶಗಳ ಪ್ರಕಾರ, ಕಳೆದ ಶತಮಾನದಲ್ಲಿ 1972ರ ತನಕ ಅಮೆಜಾನ್ ಅರಣ್ಯವು ಶೇ.2ರಷ್ಟು ನಾಶವಾಗಿದ್ದರೆ, ನಂತರದ 50 ವರ್ಷಗಳಲ್ಲಿ ಸುಮಾರು ಶೇ.20ರಷ್ಟು ನಾಶವಾಗಿದೆ!

ಕಳೆದ 50 ವರ್ಷಗಳಲ್ಲಿ, ಅಮೆಜಾನ್ ಅರಣ್ಯ ಪ್ರದೇಶವು ಮೂಲ ವ್ಯಾಪ್ತಿಗಿಂತ ಸುಮಾರು ಒಂದನೇ ಐದರಷ್ಟು ಭಾಗ ನಾಶಗೊಂಡಿದ್ದು, ಇವೆಲ್ಲವೂ ‘ವಿಶ್ವ ಪರಿಸರ ದಿನಾಚರಣೆ’ಯು ದೊಡ್ಡ ಪ್ರಚಾರ ದಿಂದ ನಡೆಯುತ್ತಿರುವ ಅವಧಿಯಲ್ಲೇ ಎಂಬುದು ಬೇಸರದ ವಿಚಾರ. ಅಮೆಜಾನ್ ಅರಣ್ಯವನ್ನು ದೊಡ್ಡ ಪ್ರಮಾಣದಲ್ಲಿ ಹೊಂದಿರುವ ಬ್ರೆಜಿಲ್ ಸಹ ಎರಡು ಬಾರಿ ವಿಶ್ವಪರಿಸರ ದಿನಾಚಣೆಯ ಆತಿಥ್ಯದ ಹೊಣೆಯನ್ನು ಹೊತ್ತಿತ್ತು!

ಆದರೆ, ಪ್ರಯೋಜನ ಮಾತ್ರ ಅಷ್ಟಕ್ಕಷ್ಟೆ. ಅತ್ತ, ಜಗತ್ತಿನ ಪರಿಸರ ನಾಶಕ್ಕೆ ಅತಿ ಹೆಚ್ಚು ಕೊಡುಗೆ ಯನ್ನು, ಕೊಳಕನ್ನು (ತಲಾವಾರು) ಕೊಡುತ್ತಿರುವ ಯು.ಎಸ್. ದೇಶವು, ತನ್ನ ದೇಶದ ಪರಿಸರವನ್ನು ರಕ್ಷಿಸಲು ಸಾಕಷ್ಟು ಜಾಗ್ರತೆ ತೆಗೆದುಕೊಂಡರೂ, ಜಗತ್ತಿನ ಪರಿಸರದ ಕಾಳಜಿಗೆ ಎರಡನೆಯ ಸ್ಥಾನ ನೀಡಿದೆ. ಪೆಟ್ರೋಲ್, ಡೀಜಲ್ ಮೊದಲಾದ ತೈಲವನ್ನು ಸುಡುವ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂಬ ಜಾಗತಿಕ ಒತ್ತಾಯಕ್ಕೆ ಆ ದೊಡ್ಡ ದೇಶ ನೀಡುತ್ತಿರುವ ಬೆಲೆ ಅಷ್ಟಕ್ಕಷ್ಟೇ.

ಅವೆಷ್ಟೋ ಪರಿಸರ ರಕ್ಷಣಾ ಕ್ರಮಗಳನ್ನು ನೇರವಾಗಿ ತಿರಸ್ಕರಿಸುವ ದಾಢಸಿತನವನ್ನು ಹೊತ್ತಿರುವ ಯು.ಎಸ್., ತನ್ನ ನಾಗರಿಕರ ಹಿತಕ್ಷಣೆಗೆ, ತನ್ನ ದೇಶದೊಳಿಗೆ ಪರಿಸರ ಉಳಿಸಲು, ಇಡೀ ಜಗತ್ತಿನ ಜನರ ಬದುಕನ್ನೇ ಸಂಕಷ್ಟಕ್ಕೆ ಗುರಿಯಾಗಿಸಲು ಹಿಂದೆ ಮುಂದೆ ನೋಡುವುದಿಲ್ಲ. ಅಲ್ಲಿಗೆ, ವಿಶ್ವ ಪರಿಸರ ದಿನದ ಆಶಯಕ್ಕೆ ದೊಡ್ಡ ದೇಶಗಳು ನೀಡುತ್ತಿರುವ ಬೆಲೆ ಎಷ್ಟು ಎಂದು ಗೊತ್ತಾಯಿತು!

ನಮ್ಮ ದೇಶದಲ್ಲಿ ಪರಿಸರ ದಿನಾಚರಣೆ ನಡೆಸುವ ಜೂನ್ ೫ ದಿನಾಂಕಕ್ಕೆ, ಒಂದು ಸಣ್ಣ ಭಾವನಾ ತ್ಮಕ ಸಂಬಂಧವೂ ಇದೆ. ಪ್ರತಿವರ್ಷ ಮಾನ್ಸೂನ್ ಮಳೆಗಳು ನಮ್ಮಲ್ಲಿ ಆರಂಭವಾಗುವುದು ಜೂನ್ ಸಮಯದಲ್ಲಿ. ಪರಿಸರ ದಿನದ ಸಮಯಕ್ಕಾಗಲೇ, ದಕ್ಷಿಣ ಭಾರತದ ದೊಡ್ಡ ಭಾಗ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಮಳೆ ಸುರಿದು, ನೆಲವೆಲ್ಲಾ ಹಸಿರಾಗುತ್ತದೆ, ಒಣಗಿದ ಗಿಡಮರಗಳು ಹಸಿರೊಡೆಯುತ್ತವೆ.

ನಮ್ಮ ರಾಜ್ಯದ ಮಟ್ಟಿಗಂತೂ ಇದು ಎದ್ದು ಕಾಣುವ ಸಕಾರಾತ್ಮಕ ವಿದ್ಯಮಾನವೂ ಹೌದು. ಆದರೆ, ಪರಿಸರ ದಿನಾಚರಣೆಯ ‘ನಾಟಕ’ ಮುಗಿದ ನಂತರ, ಸರಕಾರವೂ ಸೇರಿದಂತೆ ಹೆಚ್ಚಿನವರು ಪರಿಸರ ರಕ್ಷಣೆಯನ್ನು ಮರೆತೇ ಬಿಡುತ್ತಾರೆ. ಎತ್ತಿನ ಹೊಳೆ ಯೋಜನೆಯ ನೆಪ, ಮೇಕೆದಾಟು ಯೋಜನೆಯ ನೆಪ, ಕ್ರಿಕೆಟ್ ಸ್ಟೇಡಿಯಂ ಯೋಜನೆಯ ನೆಪ, ಗಣಿಗಾರಿಕೆಯ ನೆಪ, ವಿದ್ಯುತ್ ಇನ್ನೂ ಬೇಕು ಎಂಬ ನೆಪ, ಪ್ಯಾಕಿಂಗ್ ಸುಲಭ ಎಂಬ ನೆಪ, ಬೇಸಗೆಯಲ್ಲಿ ಎಸಿ ಕೂಲರ್ ಬೇಕೇ ಬೇಕು ಎಂಬ ನೆಪ - ಎಲ್ಲಾ ನೆಪಗಳನ್ನು ಮುಂದೊಡ್ಡಿ, ಸುಖ ಜೀವನ ಮತ್ತು ‘ಅಭಿವೃದ್ಧಿ ಕಾಮಗಾರಿ’ಯೇ ಮುನ್ನೆಲೆಗೆ ಬಂದು, ನಮ್ಮ ಪರಿಸರ ಹಿನ್ನೆಲೆಗೆ ಸರಿಯುತ್ತದೆ! ಅದರ ಪರಿಣಾಮವನ್ನು, ನೇರ ಪರಿಸರ ನಾಶವನ್ನು 1972ರಿಂದ ಇಲ್ಲಿಯ ತನಕ ಕಾಣುತ್ತಲೇ ಬಂದಿದ್ದೇವೆ; ಅದರ ಫಲವನ್ನು ನಮ್ಮಲ್ಲಿ ಹಲವರು ಅದಾಗಲೇ ಉಣ್ಣುತ್ತಿದ್ದೇವೆ, ಮುಂದಿನ ಪೀಳಿಗೆಯು ಅನುಭವಿಸಲೇಬೇಕಾಗಿದೆ. ಅಷ್ಟರ ಮಟ್ಟಿಗೆ, ಪ್ರತಿವರ್ಷ ಆಚರಿಸುವ ‘ಪರಿಸರ ದಿನ’ದ ಪ್ರಭಾವ ನಮ್ಮ ಮೇಲಾಗಿದೆ. ಹೌದೋ ಅಲ್ಲವೋ ನೀವೇ ಯೋಚಿಸಿ.

ಶಶಿಧರ ಹಾಲಾಡಿ

View all posts by this author