Shashidhara Halady Column: ಬಾನಿನಿಂದ ಸುರಿವ ಮಳೆಹನಿಯೇ ! ಬೇಗ ಬಾ !
ನಾಲ್ಕು ದಶಕಗಳ ಹಿಂದೆ, ಹಾಲಾಡಿಯ ನಮ್ಮ ಊರಿನಿಂದ ಬಯಲು ಸೀಮೆಗೆ ಕೆಲಸ ಹುಡುಕಿಕೊಂಡು ಹೊರಟೆ. ಮೊದಲಿಗೆ ಅರಸಿಕೆರೆ ಸನಿಹದ ಹಳ್ಳಿಯೊಂದರಲ್ಲಿ ಕೆಲವು ವರ್ಷಗಳ ವಾಸ. ನಮ್ಮ ಹಳ್ಳಿ ಯಲ್ಲಿ ಮಳೆಗಾಲದ ರಭಸ, ಸೊಗಸು, ಮಾಯೆಗಳನ್ನು ನೋಡಿ ಬಂದಿದ್ದ ನನಗೆ, ಆ ಹಳ್ಳಿಯವರಿಗೆ ಮಳೆಗಾಲ ಎಂಬ ಅರಿವು, ಪರಿಕಲ್ಪನೆಯೇ ಇಲ್ಲದ್ದನ್ನು ಕಂಡು ಅಚ್ಚರಿ.
-
ಶಶಾಂಕಣ
ಬೀಚಿಯವರು ಹಿಂದೊಮ್ಮೆ ಹೇಳಿದ್ದರಂತೆ - ಅವರ ಊರಿನಲ್ಲಿ ಎರಡೇ ಕಾಲ - ಬೇಸಿಗೆ ಮತ್ತು ಬಿರುಬೇಸಿಗೆ. ಅದು ನಿಜವೂ ಹೌದು. ಆದರೆ ಮಲೆನಾಡಿನ ಅಂಚಿನಲ್ಲಿರುವ ನಮ್ಮೂರಿನಲ್ಲಿ ಸ್ಪಷ್ಟವಾಗಿ ಮೂರು ಕಾಲಗಳು: ಬೇಸಿಗೆ ಕಾಲ, ಮಳೆಗಾಲ, ಚಳಿಗಾಲ.
ಇದರಲ್ಲಿ ಮಳೆಗಾಲ ಮಾತ್ರ ಬಲು ವಿಶೇಷ, ವಿಭಿನ್ನ, ವಿಶಿಷ್ಟ, ನೋಸ್ಟಾಲ್ಜಿಕ್, ವಿಸ್ಮಯಕಾರಿ. ಒಂದೊಂದು ವರ್ಷ ನಮ್ಮ ಹಳ್ಳಿಯಲ್ಲಿ ದಿನದ 24 ಗಂಟೆ, ವಾರದ ಏಳೂ ದಿನ ಸತತವಾಗಿ ಮಳೆ ಸುರಿದದ್ದೂ ಉಂಟು!
ಜೂನ್ ಮೊದಲನೆಯ ವಾರ ಆರಂಭವಾದ ಮಳೆಗಾಲ, ಅಕ್ಟೋಬರ್ ಆದರೂ ಬಿಡದೆ, ಸದಾ ಸುರಿದು, ಊರನ್ನೆಲ್ಲಾ ಥಂಡಿಯ ಮೂಟೆಯಲ್ಲಿ ಮುಳುಗಿಸಿದ್ದುಂಟು! ಆದರೆ, ಮಲೆನಾಡು ದಾಟಿ ಒಂದೈವತ್ತು ಕಿಮೀ ಪೂರ್ವಕ್ಕೆ ಬಂದರೆ, ‘ಮಳೆಗಾಲ ಹಾಗಿರುತ್ತಾ?’ ಎಂದು ಅಚ್ಚರಿಪಡುವವರುಂಟು.
ನಾಲ್ಕು ದಶಕಗಳ ಹಿಂದೆ, ಹಾಲಾಡಿಯ ನಮ್ಮ ಊರಿನಿಂದ ಬಯಲು ಸೀಮೆಗೆ ಕೆಲಸ ಹುಡುಕಿ ಕೊಂಡು ಹೊರಟೆ. ಮೊದಲಿಗೆ ಅರಸಿಕೆರೆ ಸನಿಹದ ಹಳ್ಳಿಯೊಂದರಲ್ಲಿ ಕೆಲವು ವರ್ಷಗಳ ವಾಸ. ನಮ್ಮ ಹಳ್ಳಿಯಲ್ಲಿ ಮಳೆಗಾಲದ ರಭಸ, ಸೊಗಸು, ಮಾಯೆಗಳನ್ನು ನೋಡಿ ಬಂದಿದ್ದ ನನಗೆ, ಆ ಹಳ್ಳಿಯವರಿಗೆ ಮಳೆಗಾಲ ಎಂಬ ಅರಿವು, ಪರಿಕಲ್ಪನೆಯೇ ಇಲ್ಲದ್ದನ್ನು ಕಂಡು ಅಚ್ಚರಿ. ನಮ್ಮೂರಿ ನಲ್ಲಿ ಜುಲೈ ತಿಂಗಳಲ್ಲಿ ದಿನದ 24 ಗಂಟೆ ಮಳೆ ಬರುವುದುಂಟು ಎಂದು ನಾನು ಹೇಳಿದರೆ, ನಾನು ಬುರುಡೆ ಬಿಡುತ್ತಿದ್ದೇನೆಂದೇ ಅಲ್ಲಿನವರು ಮುಖಭಾವದಲ್ಲಿ ವ್ಯಕ್ತಪಡಿಸುತ್ತಿದ್ದರು!
ಆ ಹಳ್ಳಿಯ ಆಗಸದಲ್ಲಿ ಕಪ್ಪನೆ ಮೋಡಗಳು ಸಂಚರಿಸಿದರೆ ಆಷಾಢ! ಒಂದು ತಿಂಗಳಲ್ಲಿ ಮೂರು ಅಥವಾ ನಾಲ್ಕು ಬಾರಿ ಅರ್ಧ ಗಂಟೆ ಮಳೆ ಸುರಿದರೆ, ‘ಒಳ್ಳೆಯ ಮಳೆ’ ಎಂದು ಅವರು ಆಗಸ ನೋಡಿ, ಮಳೆರಾಯನಿಗೆ ನಮಸ್ಕರಿಸುತ್ತಿರುವುದನ್ನು ಕಂಡು ನನಗೆ ಸೋಜಿಗ.
ಇದನ್ನೂ ಓದಿ: Shashidhara Halady Column: ಅಬೋಲಿ ಹೂವುಗಳನ್ನು ಬೆಳೆಯುವ ಹಳ್ಳಿ !
ನಾಲ್ಕಾರು ದಿನ ಎಡೆಬಿಡದೇ ಜಡಿಮಳೆ ಸುರಿದಾಗ ಮಾತ್ರ ‘ಒಳ್ಳೆ ಮಳೆ ಮಾರಾಯ್ರೆ’ ಎನ್ನುತ್ತಿದ್ದ ನಮ್ಮ ಹಳ್ಳಿಯಿಂದ, ಈ ಬಯಲಸೀಮೆಯ ಬೆಂಗಾಡಿಗೆ ಬಂದಿಳಿದಿದ್ದ ನನಗೆ, ಅವರ ನಡವಳಿಕೆಗಳು ಅಚ್ಚರಿಗಳ ಸರಮಾಲೆ. ಈ ರೀತಿ, ಉದ್ಯೋಗ ನಿಮಿತ್ತವೋ, ಮದುವೆಯಾಗಿಯೋ ದೂರದ ಬೇರೊಂದು ಊರಿನಲ್ಲಿ ನೆಲೆಸಿದಾಗಲೇ, ಮಳೆಗಾಲದ ನೆನಪು ಬಿಡದೇ ಕಾಡುವುದು.
ಬಯಲುಸೀಮೆಯಲ್ಲೋ, ಬೀಚಿ ಹೇಳಿದ ಬಳ್ಳಾರಿಯಂತಹ ಬೆಂಗಾಡಿನಲ್ಲೋ, ಹೊತ್ತುಗೊತ್ತು-ಋತು-ಮಾಸಗಳ ವ್ಯತ್ಯಾಸವನ್ನೇ ಮರೆಯಿಸಿ ಬಿಡುವಂತಹ ಬೆಂಗಳೂರಿನಂತಹ ಮಹಾನಗ ರಗಳಲ್ಲೋ ನೆಲೆಸಿರುವವರಿಗೆ ಅಚ್ಚರಿ ಎನಿಸಬಹುದು - ನಮ್ಮ ಹಳ್ಳಿಯಲ್ಲಿ ಮೇ 28 ಮತ್ತು ಜೂನ್ 2ರ ನಡುವೆ ಪ್ರತಿವರ್ಷ ಮಳೆಗಾಲ ಪ್ರಾರಂಭವಾಗುತ್ತಿತ್ತು.
ಈಗಲೂ ಬಹುಮಟ್ಟಿಗೆ ಆ ಕ್ಯಾಲೆಂಡರ್ ಚಾಲ್ತಿಯಲ್ಲಿದೆ. ಈಗೇನೋ ಮುಂಗಾರು ಕೇರಳವನ್ನು ಪ್ರವೇಶಿಸುವ ವಿದ್ಯಮಾನವನ್ನು ಹವಾಮಾನ ಇಲಾಖೆಯವರು ಹೇಳುತ್ತಿರುವರು. ನನ್ನ ಬಾಲ್ಯದ ದಿನಗಳಲ್ಲಿ, ಮೇ 28ರ ಸಮಯದಲ್ಲಿ ಗುಡುಗು, ಮಿಂಚು, ಸಿಡಿಲು ಮಿಶ್ರಿತ ಮಳೆ ಬರುವುದಂತೂ ಪ್ರತಿವರ್ಷದ ವಿದ್ಯಮಾನ. ಅದಕ್ಕೆ ಸರಿಯಾಗಿ ಹಳ್ಳಿಯವರು ತಮ್ಮ ತಮ್ಮ ಶಕ್ತ್ಯನುಸಾರ, ಮಳೆಗಾಲದ ತಯಾರಿಯನ್ನು ಒಂದೆರಡು ತಿಂಗಳುಗಳ ಹಿಂದಿ ನಿಂದಲೇ ಮಾಡಿಕೊಳ್ಳುತ್ತಿದ್ದರು.
ಮುಂದಿನ ಮೂರು ತಿಂಗಳುಗಳಿಗಾಗುಷ್ಟು ಸೌದೆ ಸಂಗ್ರಹ, ಹಟ್ಟಿಯಲ್ಲಿರುವ ಗಂಟಿ ಕಾಲಡಿಗೆ ಹಾಕುವ ದರಲೆ ಸಂಗ್ರಹ, ಒಂದೆರಡು ಮೂಟೆ ಉಪ್ಪಿನ ಸಂಗ್ರಹ, ಆಹಾರ ಧಾನ್ಯ ಮತ್ತು ಇತರ ತಿನಿಸುಗಳ ಸಂಗ್ರಹ, ಹಪ್ಪಳ ತಯಾರಿ ಎಲ್ಲವೂ ಮೇ 25ರ ಒಳಗೆ ಮುಗಿಯಲೇಬೇಕು.
ಏಕೆಂದರೆ ಜೂನ್ ಮೊದಲ ವಾರ ಆರಂಭವಾಗುವ ಜಡಿಮಳೆಯು, ಆ ಸುತ್ತಲಿನ ಇಡೀ ಜಗತ್ತನ್ನೇ ನೀರಿನ ಲೋಕದಲ್ಲಿ ಅದ್ದಿ, ತೋಯಿಸಿ, ಕೆಲವು ಬಾರಿ ತೇಲಿಸಿ, ತನ್ನ ಪ್ರತಾಪವನ್ನು ಕಡಿಮೆ ಮಾಡುವುದು ಮೂರು ತಿಂಗಳು ಕಳೆದ ಮೇಲೆ ಮಾತ್ರ. ಆ ಮೂರು ತಿಂಗಳುಗಳಲ್ಲಿ ಬೀಳುವ ಮಳೆಯ ಸ್ವರೂಪ, ದರ್ಶನ, ನರ್ತನವಾದರೂ ಅದೆಂತಹದ್ದು!
ಆರಂಭದ ದಿನಗಳಲ್ಲಿ ಗಾಳಿ, ಕಪ್ಪನೆಯ ಮೋಡ, ಗುಡುಗಳ ಆರ್ಭಟ. ಮೇ ತಿಂಗಳ ಕೊನೆಯಲ್ಲಿ ಎಲ್ಲೆಡೆ ಸೆಕೆಯು ಬೆವರಿಳಿಸಿ, ಬೇಯಿಸುತ್ತಿರುವಾಗ ಬೀಸಿ ಬರುವ ಗಾಳಿಯು ಆ ಒಂದು ದಿನ ಮೂಡಿ ಸುವ ತಂಪು ಅದೆಷ್ಟು ಆಪ್ಯಾಯಮಾನ! ಆ ಗಾಳಿಯ ಜತೆಯಲ್ಲೇ ಗುಟುರು ಹಾಕಿ ಬರುವ ಕಪ್ಪನೆಯ ಮೋಡಗಳು ಆಗಸವನ್ನೆಲ್ಲಾ ತುಂಬಿ ಬಿಡುತ್ತಿದ್ದವು.
ದಪ್ಪನೆಯ, ಕಪ್ಪನೆಯ ಕಾಡುಕೋಣಗಳಂತೆ ಆಕಾಶದಲ್ಲಿ ಅವು ಓಡುವ ಸೊಗಸೇ ಸೊಗಸು. ಆ ಕಪ್ಪನೆಯ ಗೂಳಿಗಳು ಪರಸ್ಪರ ಡಿಕ್ಕಿ ಹೊಡೆದು, ಗುಡುಗಿ, ಘರ್ಜಿಸಿ, ಕೋಲ್ಮಿಂಚನ್ನು ಝಳಪಿಸಿ ಮಳೆ ಸುರಿಸಲು ಆರಂಭಿಸಿದವೆಂದರೆ, ಮನೆ ಮುಂದಿನ ಗದ್ದೆ ಬೈಲಿನ ತುಂಬಾ ನೀರು ತುಂಬಿದ ನಂತರವೇ, ತುಸು ವಿರಾಮ. ಗದ್ದೆಯಂಚಿನುದ್ದಕ್ಕೂ ಸಾಗುವ ತೋಡು, ತೊರೆಗಳಲ್ಲಿ ಕೆಂಪನೆಯ ನೀರು ರಭಸದಿಂದ ಓಡಲುಪಕ್ರಮಿಸಿದ್ದೇ ತಡ, ಕಪ್ಪೆಗಳ ವಾದ್ಯಗೋಷ್ಠಿಗೆ ಬಿಡುವೇ ಇರದು!
ಕೇವಲ ಒಂದೆರಡು ವಾರಗಳ ಹಿಂದೆ ಇಡೀ ಭೂಮಿಯನ್ನೇ ಬಿಸಿ ಮಾಡಿದ್ದ ಸುಡುಸುಡು ಬಿಸಿಲಿನ ದಿನಗಳಲ್ಲಿ ಈ ಕಪ್ಪೆಗಳು ಅಡಗಿ ಕುಳಿತಿದ್ದಾದರೂ ಎಲ್ಲಿ? ಇತ್ತ ಆಗಸದಲ್ಲಿ ಗುಡುಗು, ಮಿಂಚಿ ನಿಂದೊಡಗೂಡಿದ ಮಳೆ ಮೋಡಗಳ ಪರಿಶೆ ಸೇರಿದ ಕೂಡಲೆ, ನೆಲದಾಳದ ತಮ್ಮ ಠಾವಿನಿಂದ ಹೊರಬಂದು, ಒಂದೇ ಸಮನೆ ವಟಗುಟ್ಟತೊಡಗುತ್ತವೆ. ನಮ್ಮ ಮನೆ ಮುಂದಿನ ಅಗೇಡಿಯಲ್ಲಿ ಎರಡು ಇಂಚು ನೀರು ನಿಂತಿದ್ದೇ ತಡ, ನೂರಾರು ಕಪ್ಪೆಗಳು ರಾತ್ರಿಯಿಡೀ ಕೂಗಲು ಆರಂಭಿಸುತ್ತವೆ!
ಅವುಗಳ ವಟವಟ ಸದ್ದು ಅದೆಷ್ಟು ನಿರಂತರ ಮತ್ತು ಏಕತಾನತೆಯನ್ನು ತುಂಬುತ್ತದೆಂದರೆ, ತಲೆಚಿಟ್ಟು ಹಿಡಿಸಿ, ರೇಜಿಗೆ ಹುಟ್ಟಿಸುವಷ್ಟು! ಜತೆಗೆ ಇಷ್ಟೊಂದು ದೊಡ್ಡ ದನಿಯಲ್ಲಿ ಒಂದೇ ಸವನೆ ಕೂಗಲು ಆ ನೂರಾರು ಕಪ್ಪೆಗಳಿಗೆ ಹೇಳಿಕೊಟ್ಟವರು ಯಾರು ಎಂಬ ವಿಸ್ಮಯ!
ಆದರೆ, ಮಾಯಕದಿಂದ ಅವತರಿಸಿದ ಮಳೆಗಾಲವು ನಮ್ಮೂರಿನ ಇಳೆಗೆ ಮಾಡುವ ಮೋಡಿಯನ್ನು ಕಂಡಾಗ ಮಾತ್ರ, ಅಂತಹ ಸಣ್ಣ ಪುಟ್ಟ ರೇಜಿಗೆಗಳಗೆಲ್ಲ ಮಾಯ! ಮೊದಲ ಮಳೆಯೊಂದಿಗೆ ಬೀಸುವ ಗಾಳಿಯಿಂದಾಗಿ, ಮನೆ ಹಿಂದಿನ ಕಾಟು ಮಾವಿನ ಮರದ ತುದಿಯಲ್ಲಿದ್ದ ನೂರಾರು ಹಣ್ಣುಗಳು ಕೆಳಗೆ ಉದುರಿಬಿದ್ದು, ಅವನ್ನು ಬುಟ್ಟಿ ತುಂಬಾ ತುಂಬಿಸಿಕೊಂಡು ಮನೆಗೆ ತರುವ ಕೆಲಸ ಮಕ್ಕಳದ್ದು.
ಆ ಹಣ್ಣುಗಳನ್ನು ಹಿಂಡಿ, ರಸ ತೆಗೆದು ಮಾವಿನ ರಸದ ‘ಹಣ್‌ಚಟ್’ ಮಾಡಿ, ಅಕಸ್ಮಾತ್ ಬಿಸಿಲು ಬಂದರೆಒಣಗಿಸಿ, ಬಿಸಿಲಿಲ್ಲದಿದ್ದರೆ ಒಲೆ ಮೇಲ್ಭಾಗದ ಹಲಗೆಯ ಮೇಲಿಟ್ಟು ಗರಂ ಮಾಡಿ, ಒಣ ದೂಪದ ಎಲೆಯಲ್ಲಿ ಕಟ್ಟಿಡುವ ಕೆಲಸ ಅಮ್ಮಮ್ಮನದ್ದು. ಜಿರಾಪತಿ ಮಳೆ ಸುರಿವ ಆಷಾಡದಲ್ಲಿ ಆ ‘ಹಣ್‌ಚಟ್’ನ್ನು ಅರೆದು, ಚಟ್ನಿ ಅಥವಾ ಸಾಸಿವೆ ಮಾಡುವ ಕೈರುಚಿ ಅಮ್ಮನದ್ದು!
ಮೊದಲ ಒಂದೆರಡು ದಿನ ಮಳೆ ಬಿದ್ದ ಕೂಡಲೆ, ಮನೆ ಹಿಂದಿನ ಹಾಡಿಯಲ್ಲಿ ನೂರಾರು ಮೊಳಕೆ ಗಳು. ನೆಲದಲ್ಲಿ ಮುದುಡಿ ಮಲಗಿದ್ದ ಅದೆಷ್ಟೋ ಬೀಜಗಳು, ಪುಟಾಣಿ ಎಲೆಯನ್ನು ಒಡಮೂಡಿಸಿ ಕೊಂಡು, ಮೇಲಕ್ಕೆದ್ದು ಚಿಮ್ಮುವ ಆ ಜೀವನೋತ್ಸಾಹವನ್ನು ವರ್ಣಿಸುವುದಾದರೂ ಹೇಗೆ!
ಅವುಗಳ ನಡುವೆ, ಎರಡು ದೊಡ್ಡ ಪಕಳೆಗಳನ್ನು ಅಂಟಿಸಿಕೊಂಡು, ಒಂದಿಂಚು ಎತ್ತರದ ಪುಟ್ಟ ಗಿಡವಾಗಿ ಪ್ರತ್ಯಕ್ಷವಾಗುವ ಗೋಡಂಬಿ ಬೀಜವನ್ನು ಕಂಡ ಮಕ್ಕಳು, ಗೋಡಂಬಿ ಪಕಳೆಯನ್ನು ಆರಿಸಿ ಸ್ವಾಹಾ ಮಾಡುವುದುಂಟು. ಇಳೆಗೆ ಸುರಿದ ಮಳೆಯ ಸೇಚನದಿಂದ ಮನೆ ಸುತ್ತಲಿನ ನೆಲ, ಹಾಡಿ, ಹಕ್ಕಲು, ಕಾಡು ಎಲ್ಲೆಡೆ ಒಮ್ಮೆಗೇ ಹಸಿರಿನ ಸಿರಿಯೇ ಪ್ರತ್ಯಕ್ಷವಾಗುತ್ತದೆ - ಒಂದೊಂದು ಗಿಡದ ಚಿಗುರು ಒಂದೊಂದು ಬಣ್ಣ - ಹಸಿರು, ಎಲೆಹಸಿರು, ತಿಳಿಹಸಿರು, ಕಡು ಹಸಿರು - ಇವುಗಳ ಮಧ್ಯೆ ದೊಡ್ಡದಾದ ಬಿಳಿ ಎಲೆ ಬಿಡುವ ಗುಳ ಸೊಪ್ಪಿನ ಬಳ್ಳಿಯೂ, ದೂರದಿಂದಲೇ ಹಸಿರು ಕಾಡಿಗೆ ಬಿಳಿಯ ಎಲೆಗಳ ತೋರಣಕಟ್ಟಿದಂತೆ ಕಾಣುತ್ತವೆ.
ಜೂನ್‌ನಲ್ಲಿ ನಿರಂತರ ಸುರಿವ ಮಳೆಯು ಆ ಎಳೆಯ ಚಿಗುರುಗಳಿಗೆ ಕಿರಿಕಿರಿ ಮಾಡುವುದೂ ನಿಜ. ಆದರೆ ಬಿರು ಬೇಸಗೆಯ ಬೆನ್ನ ಹಿಂದೆಯೇ ಸುರಿವ ಸೋನೆ ಮಳೆಯನ್ನು ಗಿಡಗಂಟಿಗಳು, ಸಸ್ಯಕೋಟಿ ಯು ಸಂಭ್ರಮದಿಂದ ಸ್ವಾಗತಿಸುವ ಪರಿಯೇ ಅದ್ಭುತ!
ಗದ್ದೆ, ಬಯಲು, ತೊರೆ, ತೋಡು, ಹಾಡಿ, ಕಾಡು, ಬಾವಿಗಳಲ್ಲಿ ಒಮ್ಮೆಗೇ ತುಂಬಿದ ಮಳೆ ನೀರನ್ನು ಕಂಡು, ಪ್ರಾಣಿ-ಕೀಟ ಪ್ರಪಂಚ ಸಂಭ್ರಮಿಸುವ ಪರಿ ಬೇರೊಂದೇ ಮಜಲಿನದು. ಅಷ್ಟು ದಿನ ಕಾಣದ, ದೂರದ ಮಾಯದ ಲೋಕದಲ್ಲೆಲ್ಲೋ ಅಡಗಿ ಕುಳಿತಿದ್ದ ಮಿಣುಕುಹುಳಗಳು, ಮಳೆಗಾಲದ ರಾತ್ರಿಗಳಲ್ಲಿ ತಮ್ಮ ಸಭೆಯನ್ನು ನಡೆಸುವ ಶೈಲಿಗೆ ಆ ಭೂರಮೆಯೇ ಸಂತಸದಿಂದ ನರ್ತಿಸ ತೊಡಗಬಹುದು!
ಸಂಜೆ ಎಂಟು ಗಂಟೆಯ ಸಮಯದಲ್ಲಿ ತೋಡಿನ ಅಂಚಿನ ಮರವೊಂದನ್ನು ಮುತ್ತಿ ಕೂರುವ ಮಿಣುಕುಹುಳಗಳು, ಸೀರಿಯಲ್ ಸೆಟ್ ಬೆಳಕಿನಂತೆ ಆಗಾಗ ಹೊಮ್ಮಿಸುವ ಬೆಳಕು, ಆ ಕತ್ತಲ ಲೋಕ ದಲ್ಲಿ ಚಿನ್ನದ ಪ್ರಭೆಯನ್ನು ತುಂಬುತ್ತದೆ. ಝಗ್ ಎಂದು ನೂರಾರು ಕೀಟಗಳು ತಮ್ಮ ಬಾಲದಿಂದ ಒಟ್ಟಾಗಿ ಬೀರುವ ಬೆಳಕು, ನಿರಂತರವಾಗಿ ಒಂದೆರಡು ಗಂಟೆಗಳ ಕಾಲ ಮುಂದುವರಿದು, ಅಲ್ಲೊಂದು ಅಲೌಕಿಕ ಜಗತ್ತನ್ನೇ ಸೃಷ್ಟಿಸುತ್ತದೆ.
ಮರವನ್ನು ಆತು ಕೂತ ಮಿಣುಕುಹುಳಗಳ ಸಂಗಾತಿಗಳು ಒಮ್ಮೆಮ್ಮೆ ಆಚೀಚೆ ಹಾರಾಡುತ್ತಾ, ಬೆಳಕು ಬೀರಿ, ‘ನೀ ಸುರಿವ ರಭಸಕ್ಕೆ ನಾವು ಹೆದರುವುದಿಲ್ಲ’ ಎಂದು ಆ ಕತ್ತಲ ರಾತ್ರಿಯಲ್ಲಿ ಮಳೆರಾಯನಿಗೇ ಸವಾಲು ರೀತಿ ತುಸು ಕಾವ್ಯಾತ್ಮಕ!
ಒಂದೆರಡು ವಾರ ಮಳೆ ಸುರಿದ ನಂತರ, ರೈತರು ಬತ್ತದ ಗದ್ದೆಯಲ್ಲಿ ಹೂಟಿ ಮಾಡಲು ಆರಂಭಿಸು ತ್ತಾರೆ. ಕಂಬಳಿ ಕೊಪ್ಪೆಯನ್ನು ತಲೆಗೆ ಸಿಕ್ಕಿಸಿಕೊಂಡು ಸುರಿಮಳೆಯಲ್ಲೇ ಕೋಣಗಳ ಹಿಂದೆ ಗದ್ದೆ ಯಲ್ಲಿ ಸುತ್ತುತ್ತಾ, ಗದ್ದೆಯನ್ನು ಕೆಸರು ಮಾಡಿ, ನಾಟಿಗೆ ಹಸನುಗೊಳಿಸುವ ಈ ರೈತನನ್ನು ಕಂಡೇ ಅಲ್ಲವೇ ಕುವೆಂಪು ಉದ್ಗರಿಸಿದ್ದು -‘ಉಳುವಾ ಯೋಗಿಯ ನೋಡಲ್ಲಿ!’ ನೆರೆ ಬಂದರೂ, ಗದ್ದೆ ಉಳುವ ನೇಗಲ ಯೋಗಿಯು, ‘ಓ ಓ’ ಎಂದು ಏರುದಿನದಲ್ಲಿ ಒಳಲು ಹಾಕುತ್ತಿರುವಾಗಲೇ, ಮಹಿಳೆಯರು ಬೆತ್ತದ ಬುಟ್ಟಿ ಹಿಡಿದು ಏಡಿ ಸಂಗ್ರಹಿಸಲು ತೋಡಿನಲ್ಲಿ ಓಡಾಡುವುದುಂಟು.
ಇಕ್ಕಳದ ಹಿಡಿತದ ಏಡಿಗಳೂ ಅಷ್ಟೆ - ಬೇಸಿಗೆಯಲ್ಲಿ ಭೂಮಿಯ ಆಳದಲ್ಲೆಲ್ಲೋ ಅಡಗಿ ಕುಳಿತು, ತೋಡಿನಲ್ಲಿ ನೀರು ಹರಿಯಲು ಆರಂಭಿಸಿದ ಕೂಡಲೇ ಹೊರಬಂದು, ಗದ್ದೆಯಂಚಿನಲ್ಲಿ ಬಿಲ ತೋಡುವ ತಮ್ಮ ಕರಾಮತ್ತು ಆರಂಭಿಸುತ್ತವೆ. ಅವುಗಳ ನಡುವೆಯೇ, ಗದ್ದೆಯ ನೀರಿನಲ್ಲಿ, ಅಂಚಿನಲ್ಲಿ ತೆವಳುವ ಜಾಗಟೆ ಹುಳಗಳ (ಬಸವನ ಹುಳ) ಮೆರವಣಿಗೆ, ಇವುಗಳನ್ನು ಹಿಡಿದು ಪದಾರ್ಥ ಮಾಡುವುದೆಂದರೆ, ಕೃಷಿಕ ಮಹಿಳೆಯ ನೆಚ್ಚಿನ ಹವ್ಯಾಸ.
ಮಳೆಗಾಲದಲ್ಲಿ, ತರಕಾರಿ ದೊರಕದ ದಿನಗಳಲ್ಲಿ ಜಾಗಟೆಯಂತಹ ಮೃದ್ವಂಗಿಗಳನ್ನು ರುಚಿಕರ ಪದಾರ್ಥ (ಸಾಂಬಾರು) ಮಾಡುವುದು ಕೆಲವರಿಗೆ ಅನಿವಾರ್ಯವೂ ಹೌದು. ಈ ನೀರಿನ ಜಗತ್ತಿನಲ್ಲಿ ಸಂಭ್ರಮದಿಂದ ಈಜಾಡುವ ಮತ್ತೊಂದು ಜೀವ ಸಂಕುಲವೆಂದರೆ ‘ಒಳ್ಳೆ ಹಾವು’ಗಳು. ತೋಡು, ಗದ್ದೆಗಳ ನಡುವೆ ಹರಿದು, ತೆವಳಿ, ನೆಗೆದು, ಈಜಿ ಓಡಾಡುವ ಈ ಒಳ್ಳೆ ಹಾವುಗಳು ನಿಜಕ್ಕೂ ಒಳ್ಳೆಯವೇ - ಅಂದರೆ, ಅವು ಅಕಸ್ಮಾತ್ ಕಚ್ಚಿದರೂ ವಿಷವಿಲ್ಲ!
ಗದ್ದೆಯಲ್ಲಿ ಒಳ್ಳೆ ಹಾವು ಹರಿದು ಬಂದರೆ, ಕಾಲಿನಿಂದಲೇ ನೀರು ಚಿಮ್ಮಿಸಿ ಅದನ್ನು ಬೆದರಿಸಿ, ಓಡಿಸಿ, ತನ್ನ ಉಳುಮೆಯನ್ನು ಮುಂದುವರೆಸುತ್ತಾನೆ ನಮ್ಮೂರಿನ ಉಳುವಾ ಯೋಗಿ. ಕೆಸರು ತುಂಬಿದ ಗದ್ದೆಯಲ್ಲಿ ಈ ಹಿಂದೆ ನಾಟಿ ಮಾಡಿದ್ದ, ಗದ್ದೆ ಅಂಚಿನಲ್ಲಿ ಆಗಾಗ ಹುಲ್ಲು ಕತ್ತರಿಸುತ್ತಿದ್ದ ನಮ್ಮ ಅಮ್ಮಮ್ಮನಿಗೆ ಎರಡು ಬಾರಿ ಒಳ್ಳೆ ಹಾವು ಕಚ್ಚಿತ್ತಂತೆ!
‘ಸ್ವಲ್ಪ ನಂಜು, ತುರಿಕೆ ಬಿಟ್ಟರೆ ಬೇರೇನೂ ಆಗಿಲ್ಲ’ ಎಂದು ಹಾವು ಕಚ್ಚಿದ ಜಾಗವನ್ನು ತೋರಿಸುತ್ತಾ, ಆಗಾಗ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಒಂದೆರಡು ವಾರ ಸುರಿವ ಮಳೆಯಲ್ಲೇ ಕೃಷಿ ಕೆಲಸ ಮಾಡಿ, ಗದ್ದೆ ನಾಟಿ ಮಾಡಿದ ನಂತರ ನಮ್ಮೂರಿನ ಎಲ್ಲರಿಗೂ ಬಿಡುವು. ಆದರೆ ಮಳೆರಾಯನಿಗೆ ಮಾತ್ರ ಬಿಡುವಿಲ್ಲ.
ಮುಂದಿನ ಎರಡು ಮೂರು ತಿಂಗಳು ಮಳೆಯದೇ ರಾಜ್ಯ - ಒಮ್ಮೊಮ್ಮೆ ನಾಲ್ಕಾರು ದಿನ ಹೊಳ ಕಂಡರೂ, ಮತ್ತೆ ಆರಂಭವಾಗುವ ಮಳೆಯು, ಆಷಾಢದಲ್ಲಿ ಚಳಿ ಸುಳಿಯನ್ನೇ ತಂದಿಟ್ಟು ಬಿಡುತ್ತದೆ. ಮಳೆ ಸುರಿದ ನಂತರ ಹಸಿರಾಗುವ ಭೂರಮೆಯ ಚಂದವೇನೋ ಅದ್ಭುತ, ಅನನ್ಯ ಎನಿಸಬಹುದು. ಆದರೆ ನಿರಂತರ ಮಳೆಯ ಆಷಾಢದ ದಿನಗಳು, ನಮ್ಮ ಹಳ್ಳಿಯವರಿಗೆ ಸಂಕಷ್ಟ ಗಳನ್ನು ತಂದಿಡುವ ಕಾಲವೂ ಹೌದು.
ಜ್ವರ, ಕೆಮ್ಮು, ನೆಗಡಿಗಳ ಕಾಟ ಒಂದೆಡೆಯಾದರೆ, ವಯಸ್ಸಾದವರಿಗೆ ಅವೇ ಮಾರಣಾಂತಿಕ ವಾಗುವುದೂ ಉಂಟು. ಕೃಷಿ ಕಾರ್ಮಿಕರಿಗೆ ಕೂಲಿ ದೊರೆಯದೇ, ಕಷ್ಟಗಳು ಎದುರಾಗುವ ದಿನಗಳೂ ಮಳೆಗಾಲದಲ್ಲಿ ಎದುರಾಗುವುದುಂಟು. ಅಂತಹ ದಿನಗಳಲ್ಲಿ ಗುಡ್ಡೆಗಳಲ್ಲಿ ಬೆಳೆದ ಅಣಬೆ ಸಂಗ್ರಹಿಸಿ, ಕೆಸು ಮುಂತಾದ ತಮ್ಮಷ್ಟಕ್ಕೇ ಬೆಳೆಯುವ ಎಲೆಗಳನ್ನು, ಬೇಸಿಗೆಯಲ್ಲಿ ಒಣಗಿಸಿಟ್ಟ ಗೆಣಸು, ಹಲಸಿನ ಬೀಜವನ್ನು ಬೇಯಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಕುಟುಂಬಗಳೂ ಇದ್ದವು. ಈಗ ಅಂತಹ ಕಡು ಕಷ್ಟದ ಸಂದರ್ಭ ಕಡಿಮೆ - ಸರಕಾರ ನೀಡುವ ರೇಷನ್ ಕೃಪೆಯಿಂದಾಗಿ.
ಅಂದಹಾಗೆ, ಜಿರ್ ಎನ್ನುತ್ತಾ ಜಿರಾಪತಿ ಮಳೆ ಸುರಿವಾಗ, ನಮ್ಮ ಹಳ್ಳಿಮನೆ ಮುಂದಿನ ಗದ್ದೆ ಸಾಲನ್ನು ಅದರಾಚೆಯ ಹಾಡಿ, ಕಾಡನ್ನು ನೋಡುವ ಅನುಭವವೇ ಬಹು ಆಪ್ಯಾಯಮಾನ. ಬೇಸಿಗೆಯಲ್ಲಿ ಮಾಡಿಟ್ಟ ಹಲಸಿನ ಹಪ್ಪಳವನ್ನು ಸುಟ್ಟು, ಅದರ ಮೇಲೆ ಸುಟ್ಟ ಗೋಡಂಬಿ ಯನ್ನಿಟ್ಟುಕೊಂಡು ತಿನ್ನುತ್ತಾ, ಸೋನೆ ಮಳೆಯ ನಿರಂತರ ಗಾನವನ್ನು ಕೇಳುವ, ವೀಕ್ಷಿಸುವ ಆ ಕ್ಷಣಗಳ ಅನುಭೂತಿಗೆ, ಬೇರೆಲ್ಲಿದೆ ಹೋಲಿಕೆ! ಆ ಒಂದು ಭಾವಪ್ರಪಂಚವನ್ನು ನಾನಿಂದು ಶಾಶ್ವತವಾಗಿ ಕಳೆದುಕೊಂಡಿದ್ದೇನೆ.