ಜನಹಿತ
ಕೆ.ವಿ.ಚಂದ್ರಮೌಳಿ
ಮೊದಲಿಗೆ, ರಾಜ್ಯದ ಉನ್ನತ ಹಾಗೂ ಪವಿತ್ರ ಸಾಂವಿಧಾನಿಕ ಹುz ಅಲಂಕರಿಸಿರುವುದಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಸಾರ್ವಜನಿಕ ಉನ್ನತ ಹುದ್ದೆ ಕೇವಲ ಅಧಿಕಾರದ ಸ್ಥಾನವಲ್ಲ; ಅದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಸೇವೆಗಾಗಿ ಸಿಗುವ ಅಪರೂಪದ ಅವಕಾಶ. ಮುಖ್ಯಮಂತ್ರಿ ಹುzಯನ್ನು ಅನೇಕರು ಅಲಂಕರಿಸಿರಬಹುದು, ಆದರೆ ತಮ್ಮ ದೂರದೃಷ್ಟಿಯ ನಾಯಕತ್ವ, ಶ್ರೇಷ್ಠ ಆಡಳಿತ ವಿಧಾನ, ರಾಜಿ ಇಲ್ಲದ ಪ್ರಾಮಾಣಿಕತೆ ಹಾಗೂ ಜನಪರ ಕಾರ್ಯಗಳ ಮೂಲಕ ಕೆಲವೇ ನಾಯಕರು ಶಾಶ್ವತವಾಗಿ ಜನರ ನೆನಪಾಗಿzರೆ. ಅಂತಹ ಅವಕಾಶವನ್ನು ಭಗವಂತ ತಮಗೂ ಒದಗಿಸಿದ್ದಾನೆ.
ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್.ಕೆನೆಡಿ ಹೇಳಿರುವ ಪ್ರಸಿದ್ಧ ಮಾತು ಇಲ್ಲಿ ಸ್ಮರಣೀಯ: ‘ಮನೆಯ ಮೇಲ್ಛಾವಣಿಯನ್ನು ದುರಸ್ತಿ ಮಾಡಲು ಅತ್ಯುತ್ತಮ ಸಮಯವೆಂದರೆ ಸೂರ್ಯನು ಪ್ರಕಾಶಿಸುತ್ತಿರು ವಾಗಲೇ; ಮಳೆ ಬಂದ ನಂತರ ಅಲ್ಲ.’ ಆಡಳಿತದಲ್ಲಿ ಗಂಭೀರ ಬಿಕ್ಕಟ್ಟುಗಳು ಅಥವಾ ಹಣಕಾಸಿನ ತೊಂದರೆ ಸೃಷ್ಟಿಯಾಗುವ ಮುನ್ನವೇ ಸುಧಾರಣೆ ಕೈಗೊಳ್ಳುವುದು ದೂರ ದೃಷ್ಟಿ ಆಡಳಿತದ ಮೂಲತತ್ತ್ವ. ಯಾವುದೇ ಸರಕಾರವನ್ನು ಅದು ಎಷ್ಟು ಹೊಸ ಕಟ್ಟಡ ನಿರ್ಮಿ ಸಿತು ಎಂಬುದರಿಂದ ಮೌಲ್ಯಮಾಪನ ಮಾಡುವುದಿಲ್ಲ. ಜನರ ದಿನನಿತ್ಯದ ಜೀವನ ಮಟ್ಟದಲ್ಲಿ ಉಂಟುಮಾಡಿದ ಶಾಶ್ವತ ಹಾಗೂ ಗುಣಾತ್ಮಕ ಬದಲಾವಣೆಯಿಂದಲೇ ಅಳೆಯುತ್ತದೆ.
ಸಾರ್ವಜನಿಕ ಸೇವೆಯಲ್ಲಿನ ಮೂರು ದಶಕಗಳ ಅನುಭವದ ಆಧಾರದ ಮೇಲೆ, ಕರ್ನಾಟಕದ ಆಡಳಿತ ವನ್ನು ಇನ್ನಷ್ಟು ಪರಿಣಾಮಕಾರಿಯನ್ನಾಗಿಸಲು ಕೆಲವು ವಿನಮ್ರ ಸಲಹೆಗಳನ್ನು ತಮ್ಮ ಪರಿಗಣನೆಗೆ ಸಲ್ಲಿಸುತ್ತಿದ್ದೇನೆ.
ಇದನ್ನೂ ಓದಿ: K V Chandramouli Column: ಭಾರತೀಯ ಶಾಸ್ತ್ರಾರ್ಥ ಪರಂಪರೆ: ನಾವೇನು ಮಾಡೋಣ?
- ಕಡಿಮೆ ಸರಕಾರ- ಹೆಚ್ಚು ಆಡಳಿತ : Minimum Government, Maximum Governance (ಕಡಿಮೆ ಸರಕಾರ, ಗರಿಷ್ಠ ಆಡಳಿತ) ಎಂಬ ತತ್ವದ ನೈಜ ಅರ್ಥವೆಂದರೆ ಸರಕಾರದ ಗಾತ್ರ ಕುಗ್ಗಿಸುವುದಲ್ಲ. ಬದಲಾಗಿ ಸರಕಾರದ ಪ್ರತಿ ಅಂಗದ ಕಾರ್ಯಸಾಮರ್ಥ್ಯ, ನಿರ್ಧಾರ ತೆಗೆದು ಕೊಳ್ಳುವ ವೇಗ, ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸುವುದು. ಸಿಂಗಾಪುರ, ಡೆನ್ಮಾರ್ಕ್, ಫಿನ್‌ಲ್ಯಾಂಡ್, ನ್ಯೂಜಿಲೆಂಡ್, ಎಸ್ಟೋನಿ ಯಾಗಳ ಆಡಳಿತ ಮಾದರಿ ಗಮನಿಸಿದರೆ, ತಂತ್ರಜ್ಞಾನಾಧಾರಿತ ಹಾಗೂ ಸುಸಂಘಟಿತ ಆಡಳಿತದಿಂದ ಮಾತ್ರವೇ ಶ್ರೇಷ್ಠ ಸುಶಾಸನ ಸಾಧ್ಯವೆಂದು ಸ್ಪಷ್ಟವಾಗುತ್ತದೆ.
ವಿಶ್ವಸಂಸ್ಥೆ, ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ ಮತ್ತು ವಿಶ್ವ ಬ್ಯಾಂಕ್‌ಗಳ ಅಧ್ಯಯನ ವರದಿಗಳು ಸ್ಪಷ್ಟಪಡಿಸುವಂತೆ, ಸಾರ್ವಜನಿಕ ಆಡಳಿತ ವೆಚ್ಚವನ್ನು ನಿಯಂತ್ರಿಸಲು ಸಿಬ್ಬಂದಿ ಕಡಿತ ಮಾಡುವುದಕ್ಕಿಂತ ಆಡಳಿತಾತ್ಮಕ ಪುನರಾವರ್ತನೆಗಳನ್ನು ನಿವಾರಿಸುವುದು ಹಾಗೂ ಹಂಚಿಕೆ ಆಡಳಿತ ಸೇವೆಗಳನ್ನು (Shared Services) ಜಾರಿಗೆ ತರುವುದು ಅತ್ಯಂತ ವೈಜ್ಞಾನಿಕ ಹಾದಿ.
2026-27ರ ಬಜೆಟ್ ಪ್ರಕಾರ, ರಾಜ್ಯದ ಒಟ್ಟು ಸಾರ್ವಜನಿಕ ವೆಚ್ಚ ರೂ.4.13 ಲಕ್ಷ ಕೋಟಿ. ಹಣಕಾಸು ಕೊರತೆ ರೂ. 97,448 ಕೋಟಿ. ಆದಾಯ ಕೊರತೆ ರೂ.22,957 ಕೋಟಿ. ಇಂತಹ ಪರಿಸ್ಥಿತಿಯಲ್ಲಿ ನಾಗರಿಕರಿಗೆ ನೀಡುವ ಮೂಲಸೌಕರ್ಯ ಮತ್ತು ಅಭಿವೃದ್ಧಿ ವೆಚ್ಚ ಕಡಿತಗೊಳಿಸುವುದು ಸೂಕ್ತ ವಲ್ಲ. ಬದಲಾಗಿ, ಇಲಾಖೆಗಳಲ್ಲಿನ ಆಡಳಿತಾತ್ಮಕ ವೆಚ್ಚಗಳನ್ನು ವೈಜ್ಞಾನಿಕವಾಗಿ ಮರುಸಂಘಟಿಸಿ, ಸಂಪನ್ಮೂಲಗಳ ದುರುಪಯೋಗ ತಡೆಯುವುದು ಅತ್ಯಗತ್ಯ.
- ಆಡಳಿತ ಯಂತ್ರ ವಿಸ್ತರಣೆಯಲ್ಲ: ಆಡಳಿತದ ಗುಣಮಟ್ಟ ಮತ್ತು ಯಶಸ್ಸನ್ನು ಹೊಸದಾಗಿ ಸೃಷ್ಟಿಯಾಗುವ ಉನ್ನತ ಹುದ್ದೆಗಳ ಅಥವಾ ಸಚಿವಾಲಯದ ಗಾತ್ರದಿಂದ ಅಳೆಯಲಾಗುವು ದಿಲ್ಲ. ಬದಲಾಗಿ ಕೊನೆಯ ಹಂತದ ಪ್ರಜೆಗೆ ತಲುಪುವ ಸಾರ್ವಜನಿಕ ಸೇವೆಯ ಫಲಿತಾಂಶದಿಂದ ಅಳೆಯಲಾಗುತ್ತದೆ.
ಇತ್ತೀಚಿನ ದಶಕಗಳಲ್ಲಿ ವಿವಿಧ ಇಲಾಖೆಗಳಲ್ಲಿ ಆಯುಕ್ತರು, ನಿರ್ದೇಶಕರು, ಹೆಚ್ಚುವರಿ ಕಾರ್ಯ ದರ್ಶಿಗಳು ಹಾಗೂ ಸಲಹೆಗಾರರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ. ಪ್ರತಿಯೊಂದು ಹೊಸ ಉನ್ನತ ಹುದ್ದೆಯೂ ಅಽಕಾರಿಗಳ ವೇತನ, ಕಚೇರಿ ವ್ಯವಸ್ಥೆ, ವಾಹನಗಳು, ಸಹಾಯಕ ಸಿಬ್ಬಂದಿ ಮತ್ತು ನಿರಂತರ ನಿರ್ವಹಣೆ ಸೇರಿದಂತೆ ಭಾರಿ ಪ್ರಮಾಣದ ಆಡಳಿತ ವೆಚ್ಚವನ್ನು ಖಜಾನೆ ಮೇಲೆ ಹೇರುತ್ತದೆ. ಆದ್ದರಿಂದ, ಹಣಕಾಸು ಇಲಾಖೆ ಮತ್ತು ಡಿಪಿಎಆರ್ ಅನುಮೋದನೆಯೊಂದಿಗೆ ಕಳೆದ ಎರಡು ದಶಕಗಳಲ್ಲಿ ಸೃಷ್ಟಿಸಲಾದ ಎಲ್ಲ ಉನ್ನತ ಹುದ್ದೆಗಳ ಅಗತ್ಯ ಕುರಿತು ಪರಿಶೀಲಿಸಲು ಸ್ವತಂತ್ರ ತಜ್ಞರ ಸಮಿತಿಯನ್ನು ತಕ್ಷಣವೇ ರಚಿಸಬೇಕು.
ಈ ಸಮಿತಿ ವೈಜ್ಞಾನಿಕವಾಗಿ ಪ್ರತಿ ಹುದ್ದೆ ವೆಚ್ಚ-ಲಾಭ ವಿಶ್ಲೇಷಣೆ ನಡೆಸಬೇಕು. ಸೇನೆಯಲ್ಲಿ ಹೋರಾಡುವ ಸೈನಿಕರಿಗಿಂತ ಆಡಳಿತ ನಡೆಸುವ ಅಧಿಕಾರಿಗಳೇ ಹೆಚ್ಚಾದರೆ ಯುದ್ಧ ಗೆಲ್ಲಲು ಸಾಧ್ಯ ವಿಲ್ಲ. ಅದೇ ರೀತಿ ಸರಕಾರದಲ್ಲೂ ಕ್ಷೇತ್ರಮಟ್ಟದ ಸಿಬ್ಬಂದಿ ಕಡಿಮೆಯಾಗಿ ಮೇಲ್ವಿಚಾರಣಾ ಅಧಿಕಾರಿಗಳು ಹೆಚ್ಚಾದರೆ ಕಡತಗಳ ವಿಲೇವಾರಿ ವಿಳಂಬವಾಗುತ್ತದೆ.
- ಒಂದೇ ಆಡಳಿತ ವ್ಯವಸ್ಥೆ
ಆಡಳಿತ ವಿಜ್ಞಾನದ ಮೂಲತತ್ವವೆಂದರೆ One Purpose- One Administrative System (ಒಂದೇ ಉದ್ದೇಶಕ್ಕೆ ಒಂದೇ ಆಡಳಿತ ವ್ಯವಸ್ಥೆ). ಉದಾಹರಣೆಗೆ, ಕರ್ನಾಟಕದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗಳ ಮೂಲಭೂತ ಮತ್ತು ಅಂತಿಮ ಫಲಾನುಭವಿ ‘ರೈತ’.
ಆದಾಗ್ಯೂ, ಈ ಪ್ರತಿಯೊಂದು ಇಲಾಖೆಯಲ್ಲೂ ಪ್ರತ್ಯೇಕ ಕಾರ್ಯದರ್ಶಿಗಳು, ಆಯುಕ್ತಾಲಯಗಳು, ಪ್ರತ್ಯೇಕ ಮಾನವ ಸಂಪನ್ಮೂಲ ವಿಭಾಗ, ಮಾಹಿತಿ ತಂತ್ರeನ ವಿಭಾಗ ಹಾಗೂ ಪ್ರತ್ಯೇಕ ಖರೀದಿ ವ್ಯವಸ್ಥೆಗಳಿವೆ. ಇದರಿಂದ ಒಂದೇ ರೀತಿಯ ಕೆಲಸಕ್ಕೆ ಮರುಕಳಿಸುವ ಭಾರಿ ವೆಚ್ಚವಾಗುತ್ತಿದೆ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ ಮತ್ತು ವಿಶ್ವ ಬ್ಯಾಂಕ್‌ನ ಅಧ್ಯಯನಗಳು ತೋರಿಸು ವಂತೆ ಹಂಚಿಕೆ ಆಡಳಿತ ಸೇವಾ ಮಾದರಿ ( Shared Services Model ) ಅಳವಡಿಸಿಕೊಂಡರೆ ಆಡಳಿತ ನಿರ್ವಹಣಾ ವೆಚ್ಚವನ್ನು 20-30%ರಷ್ಟು ತಗ್ಗಿಸಬಹುದು.
ಈ ಹಿನ್ನೆಲೆಯಲ್ಲಿ ಇಲಾಖೆಗಳನ್ನು ಆಡಳಿತಾತ್ಮಕವಾಗಿ ಏಕೀಕರಿಸಿ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಗಳ ಆಡಳಿತಾತ್ಮಕ ಸಮನ್ವಯಕ್ಕಾಗಿ ಸಮಗ್ರ ಕೃಷಿ ಮತ್ತು ಗ್ರಾಮೀಣ ಉತ್ಪಾದನಾ ಪ್ರಾಧಿಕಾರ ಹಾಗೂ ಕಾರ್ಮಿಕ, ಕೈಗಾರಿಕೆ, ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಸಂಬಂಧಿತ ಇಲಾಖೆಗಳ ಸಮಗ್ರ ನಿರ್ವಹಣೆಗೆ ಸಮಗ್ರ ಕಾರ್ಮಿಕ, ಕೈಗಾರಿಕೆ ಮತ್ತು ಉದ್ಯೋಗ ಪ್ರಾಧಿಕಾರ ಸ್ಥಾಪಿಸಬಹುದು. ಇದು ಇಲಾಖೆಗಳ ತಾಂತ್ರಿಕ ಕಾರ್ಯನಿರ್ವಹಣೆ ಅಥವಾ ವಿಷಯ ತಜ್ಞರ ವಿಲೀನವಲ್ಲ.
ಕೇವಲ ಮೇಲ್ಮಟ್ಟದ ಆಡಳಿತಾತ್ಮಕ ಮತ್ತು ಬೆಂಬಲಿತ ಸೇವೆಗಳ ಏಕೀಕರಣ ಮಾತ್ರ. ಯಾವುದೇ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕದೆ, ಸ್ವಾಭಾವಿಕ ನಿವೃತ್ತಿ ಹಾಗೂ ಪರಿಣಾಮಕಾರಿ ಮರುನಿಯೋಜನೆ ಮೂಲಕ ವೆಚ್ಚವನ್ನು ಗಣನೀಯವಾಗಿ ಕಡಿತಗೊಳಿಸಬಹುದು.
- ಭ್ರಷ್ಟಾಚಾರ ನಿರ್ಮೂಲನೆ: ಭ್ರಷ್ಟಾಚಾರವು ಆಡಳಿತದ ಮೇಲಿನ ಜನರ ವಿಶ್ವಾಸ ಸಂಪೂರ್ಣ ವಾಗಿ ಧ್ವಂಸಗೊಳಿಸುವ ಗಂಭೀರ ಪಿಡುಗು. ಭ್ರಷ್ಟಾಚಾರವನ್ನು ಕೇವಲ ‘ನಿಯಂತ್ರಿಸುವುದು’ ಗುರಿಯಾಗಬಾರದು; ಬದಲಾಗಿ ಅದನ್ನು ‘ನಿರ್ಮೂಲನೆ ಮಾಡುವುದು’ ಸ್ಪಷ್ಟ ಸಂಕಲ್ಪವಾಗ ಬೇಕು. ಇದಕ್ಕಾಗಿ ಪ್ರತಿಯೊಂದು ಇಲಾಖೆಯಲ್ಲೂ ಸಂಪೂರ್ಣ ಆನ್ ಲೈನ್ ಅನುಮೋದನೆ, ಕಡತಗಳ ಡಿಜಿಟಲ್ ಟ್ರ್ಯಾಕಿಂಗ್, ಕಡ್ಡಾಯ ಸಮಯಬದ್ಧ ಸೇವಾ ವಿತರಣೆ, ಸಾರ್ವಜನಿಕ ಸಾಮಾಜಿಕ- ಕಾರ್ಯಕ್ಷಮತಾ ಲೆಕ್ಕಪರಿಶೋಧನೆ ಮತ್ತು ಸ್ವತಂತ್ರ ದೂರು ನಿವಾರಣಾ ವ್ಯವಸ್ಥೆ ಜಾರಿಯಾಗಬೇಕು.
ಸಾರ್ವಜನಿಕ ಸಂಪರ್ಕ ಹೆಚ್ಚಿರುವ ಇಲಾಖೆಗಳಲ್ಲಿ ಸ್ವತಂತ್ರ ‘ವಿಭಾಗೀಯ ಲೋಕಪಾಲ’ ( Departmental Ombudsman) ಅಥವಾ Integrity Commissioner ಹುದ್ದೆಗಳನ್ನು ಸ್ಥಾಪಿಸುವು ದನ್ನು ಪರಿಶೀಲಿಸಬೇಕು. ಸಿಂಗಾಪುರದ ಮಾಜಿ ಪ್ರಧಾನಿ ಲೀ ಕ್ವಾನ್ ಯೂ ಅವರ ಪ್ರಸಿದ್ಧ ಮಾತು: ‘ನೀವು ಭ್ರಷ್ಟಾಚಾರದ ವಿರುದ್ಧ ನಿಜವಾಗಿಯೂ ಹೋರಾಡಲು ಬಯಸಿದರೆ, ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರನ್ನು ಜೈಲಿಗೆ ಕಳುಹಿಸಲು ಸಿದ್ಧರಿರಬೇಕು.’ ಪಾರದರ್ಶಕತೆ, ಉತ್ತರದಾಯಿತ್ವ, ತಂತ್ರಜ್ಞಾನ, ಸ್ವತಂತ್ರ ಮೇಲ್ವಿಚಾರಣೆ ಮತ್ತು ಶೂನ್ಯ ಸಹಿಷ್ಣುತೆ ಎಂಬ ಐದು ಸ್ತಂಭಗಳ ಮೇಲಷ್ಟೇ ಪ್ರಾಮಾಣಿಕ ಆಡಳಿತ ನಿರ್ಮಿಸಲು ಸಾಧ್ಯ.
- ಕ್ಷೇತ್ರಮಟ್ಟದ ಸೇವೆಗೆ ಆದ್ಯತೆ: ಸರ್ಕಾರದ ನೈಜ ಮುಖ ಮತ್ತು ಯಶಸ್ಸು ಕಾಣುವುದು ವಿಧಾನಸೌಧದ ಕೊಠಡಿಗಳಲ್ಲಲ್ಲ; ಬದಲಾಗಿ ಗ್ರಾಮೀಣ ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲಾ ಕೊಠಡಿ, ತಾಲೂಕು ಕಚೇರಿ ಹಾಗೂ ರೈತರ ಜಮೀನುಗಳಲ್ಲಿ. ನಾಗರಿಕರಿಗೆ ಸರಕಾರದ ಸೇವೆಯ ಪ್ರತ್ಯಕ್ಷ ಅನುಭವ ಸಿಗುವುದು ಕ್ಷೇತ್ರಮಟ್ಟದಲ್ಲಿಯೇ ಹೊರತು ಮುಖ್ಯ ಕಚೇರಿಗಳಲ್ಲಿ ಅಲ್ಲ. ಆದ್ದರಿಂದ ಆಡಳಿತ ರಚನೆಯು ‘ಸರಳ ಮುಖ್ಯ ಕಚೇರಿ- ಸಶಕ್ತ ಕ್ಷೇತ್ರಮಟ್ಟ’ ಎಂಬ ತತ್ವದ ಮೇಲೆ ಪುನಾರಚಿತವಾಗಬೇಕು. ಪ್ರಸ್ತುತ ಕೃಷಿ ವಿಸ್ತರಣಾಧಿಕಾರಿಗಳು, ಪಶುವೈದ್ಯರು, ಶಾಲಾ ಶಿಕ್ಷಕರು, ಪ್ಯಾರಾಮೆಡಿಕಲ್ ಸಿಬ್ಬಂದಿ ಹಾಗೂ ಕಂದಾಯ ಸಿಬ್ಬಂದಿ ಕೊರತೆ ತೀವ್ರವಾಗಿದೆ. ಆದರೆ ಮುಖ್ಯ ಕಚೇರಿಗಳಲ್ಲಿ ಮೇಲ್ವಿಚಾರಣಾ ಹುದ್ದೆಗಳು ಹೆಚ್ಚುತ್ತಿವೆ.
ಸಂಪನ್ಮೂಲಗಳು ಆಡಳಿತ ಯಂತ್ರವನ್ನು ಅನುಸರಿಸಬಾರದು. ಅವು ನಾಗರಿಕರ ಅಗತ್ಯಗಳನ್ನು ಅನುಸರಿಸಬೇಕು. ಮುಖ್ಯ ಕಚೇರಿಗಳಲ್ಲಿನ ಅನಗತ್ಯ ಮತ್ತು ಪುನರಾವರ್ತಿತ ಹುzಗಳನ್ನು ಮರು ಸಂಘಟಿಸಿ, ಅದರಿಂದ ಉಳಿತಾಯವಾಗುವ ಸಂಪನ್ಮೂಲಗಳನ್ನು ಕೊನೆಯ ಮೈಲಿ ತಲುಪಿಸುವ ಕ್ಷೇತ್ರ ಸಿಬ್ಬಂದಿ ಭರ್ತಿಗೆ ಬಳಸಬೇಕು.
6.ಪಾರದರ್ಶಕ ವರ್ಗಾವಣೆ ನೀತಿ: ಸ್ಥಿರತೆ, ಪಾರದರ್ಶಕತೆ ಮತ್ತು ಅರ್ಹತೆ- ಇವು ಶ್ರೇಷ್ಠ ಸಾರ್ವ ಜನಿಕ ಸೇವೆಯ ಮೂರು ಮುಖ್ಯ ಆಧಾರಸ್ತಂಭಗಳು. ರಾಜ್ಯದ ಎಲ್ಲಾ ಇಲಾಖೆಗಳಿಗೂ ಅನ್ವಯ ವಾಗುವಂತೆ ಏಕರೂಪದ ಏಕೀಕೃತ ರಾಜ್ಯ ವರ್ಗಾವಣೆ ನೀತಿ ಜಾರಿಗೆ ತರಬೇಕು. ಪ್ರತಿ ಅಧಿಕಾರಿಗೆ ಕನಿಷ್ಠ 3 ವರ್ಷ ಕಡ್ಡಾಯ ಸೇವಾವಧಿ, ಆನ್‌ಲೈನ್ ವರ್ಗಾವಣೆ ಕೌನ್ಸೆಲಿಂಗ್ ಮತ್ತು ಖಾಲಿ ಹುzಗಳ ಡಿಜಿಟಲ್ ಪ್ರಕಟಣೆ ಕಡ್ಡಾಯವಾಗಬೇಕು.
ಇದು ವರ್ಗಾವಣೆ ದಂಧೆಗೆ ಶಾಶ್ವತ ತೆರೆ ಎಳೆಯುತ್ತದೆ. ಪದೋನ್ನತಿಯಲ್ಲಿ ಕೇವಲ ಸೇವಾವಧಿ ಹಿರಿಯತೆಗೆ ಗೌರವ ನೀಡುವುದಷ್ಟೇ ಅಲ್ಲದೆ, ಅಧಿಕಾರಿಯ ಕಾರ್ಯಕ್ಷಮತೆ, ಪ್ರಾಮಾಣಿಕತೆ, ನವೀನ ಚಿಂತನೆ ಹಾಗೂ 360 ಡಿಗ್ರಿ ಮೌಲ್ಯಮಾಪನಕ್ಕೆ ಹೆಚ್ಚಿನ ತೂಕ ನೀಡಬೇಕು. ಲೀ ಕ್ವಾನ್ ಯೂ ಅವರ ಆಡಳಿತ ಸಿದ್ಧಾಂತದಂತೆ, ಒಂದು ರಾಷ್ಟ್ರದ ಗುಣಮಟ್ಟವನ್ನು ಅಲ್ಲಿನ ಸಾರ್ವಜನಿಕ ಸೇವೆಯ ಗುಣಮಟ್ಟ ನಿರ್ಧರಿಸುತ್ತದೆ.
- ಹಂಚಿಕೆ ಆಡಳಿತ ಸೇವೆಗಳು : 21ನೇ ಶತಮಾನದ ಸುಶಾಸನದ ಕೇಂದ್ರಬಿಂದು ಡಿಜಿಟಲ್ ತಂತ್ರಜ್ಞಾನ. ಪ್ರತಿಯೊಂದು ಇಲಾಖೆಯಲ್ಲೂ ಪ್ರತ್ಯೇಕವಾಗಿ ಮಾನವ ಸಂಪನ್ಮೂಲ ನಿರ್ವಹಣೆ, ಲೆಕ್ಕಪತ್ರ, ಕಾನೂನು, ಮಾಹಿತಿ ತಂತ್ರಜ್ಞಾನ ಹಾಗೂ ಖರೀದಿ ವಿಭಾಗಗಳು ಕಾರ್ಯನಿರ್ವಹಿಸು ತ್ತಿರುವುದರಿಂದ ಆಡಳಿತ ವೆಚ್ಚ ಹೆಚ್ಚುತ್ತಿದೆ. ಇವುಗಳನ್ನು ಹಂಚಿಕೆ ಆಡಳಿತ ಸೇವಾ ಮಾದರಿ ಅಡಿಯಲ್ಲಿ ಏಕೀಕರಿಸಿದರೆ ಕಾರ್ಯಕ್ಷಮತೆ ಹೆಚ್ಚಿ ಆಡಳಿತ ವೆಚ್ಚವನ್ನು 20-30% ಕಡಿಮೆ ಮಾಡಬಹುದು.
ಸಿಂಗಾಪುರದ Whole- of- Government (WOG) ಮಾದರಿ ಹಾಗೂ ಎಸ್ಟೋನಿಯಾದ Once- Only Principle ಜಾಗತಿಕವಾಗಿ ಯಶಸ್ವಿ ಆಡಳಿತ ಮಾದರಿಗಳು.
ಮುಂಬರುವ ದಿನಗಳಲ್ಲಿ 5 ಪ್ರಮುಖ ಡಿಜಿಟಲ್ ಸ್ತಂಭಗಳನ್ನು ಕಡ್ಡಾಯವಾಗಿ ಜಾರಿಗೆ ತರಬೇಕು: e-Office: ಸಚಿವಾಲಯದಿಂದ ತಾಲೂಕು ಮಟ್ಟದವರೆಗೆ 100% ಡಿಜಿಟಲ್ ಕಡತ ನಿರ್ವಹಣೆ. Paperless Secretariat : ಕಾಗದರಹಿತ ಹಾಗೂ ಪಾರದರ್ಶಕ ಕಾರ್ಯಾಲಯ.
AI- Assisted Decision Support System: ಕಡತಗಳ ಶೀಘ್ರ ಪರಿಶೀಲನೆಗೆ ಎಐ ಬಳಕೆ.
Integrated Citizen Services Portal: ನಾಗರಿಕರಿಗೆ ಒಂದೇ ಡಿಜಿಟಲ್ ವಿಂಡೋ ಮೂಲಕ ಎಲ್ಲಾ ಸೇವೆಗಳು.
Shared Government Services Centre: ಎಲ್ಲಾ ಇಲಾಖೆಗಳ ಸಾಮಾನ್ಯ ಆಡಳಿತ ವೆಚ್ಚ ತಗ್ಗಿಸಲು ಏಕೀಕೃತ ಸೇವಾ ಕೇಂದ್ರ.
- ಅಭಿವೃದ್ಧಿ ವೆಚ್ಚಕ್ಕೆ ಆದ್ಯತೆ : 2026-27ರ ರಾಜ್ಯ ಬಜೆಟ್‌ನ 4.13 ಲಕ್ಷ ಕೋಟಿ ಒಟ್ಟು ವೆಚ್ಚ, ರೂ. 97,448 ಕೋಟಿ ಹಣಕಾಸು ಕೊರತೆ ಮತ್ತು ರೂ.22,957 ಕೋಟಿ ಆದಾಯ ಕೊರತೆಯ ಹಿನ್ನೆಲೆಯಲ್ಲಿ, ಸರಕಾರ ವೆಚ್ಚ ಮಾಡುವ ಪ್ರತಿಯೊಂದು ರೂಪಾಯಿಯೂ ರಾಜ್ಯದಲ್ಲಿ ಉತ್ಪಾದಕ ಆಸ್ತಿಯನ್ನು ನಿರ್ಮಿಸಬೇಕು. ಕೇವಲ ತತ್ಕಾಲದ ಉಚಿತ ವೆಚ್ಚಗಳಿಗಿಂತ ನೀರಾವರಿ ಯೋಜನೆಗಳು, ಗುಣಮಟ್ಟದ ಶಿಕ್ಷಣ, ಆಧುನಿಕ ಆರೋಗ್ಯ ಮೂಲಸೌಕರ್ಯ, ಸಾರಿಗೆ ಮತ್ತು ಕೌಶಲ್ಯಾಭಿವೃದ್ಧಿಗೆ ಹೂಡಿಕೆ ಮಾಡುವುದರಿಂದ ಅರ್ಥವ್ಯವಸ್ಥೆಯಲ್ಲಿ ಸುಸ್ಥಿರ Multiplier Effect (ಗುಣಕ ಪರಿಣಾಮ) ಉಂಟಾಗುತ್ತದೆ.
ವಿಶ್ವ ಬ್ಯಾಂಕ್, ಅಂತರರಾಷ್ಟ್ರೀಯ ಹಣಕಾಸು ನಿಧಿ ಹಾಗೂ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ ಯ ಸಮಗ್ರ ಅಧ್ಯಯನಗಳು ಈ ದೃಷ್ಟಿಕೋನವನ್ನು ಬೆಂಬಲಿಸುತ್ತವೆ. ಕೌಟಿಲ್ಯನು ಅರ್ಥ ಶಾಸ್ತ್ರದಲ್ಲಿ ಪ್ರತಿಪಾದಿಸಿದ ಆಡಳಿತ ತತ್ವ ಇಂದಿಗೂ ಮಾರ್ಗದರ್ಶಕ: ‘ಪ್ರಜಾಸುಖೇ ಸುಖಂ ರಾಜ್ಞಃ, ಪ್ರಜಾನಾಂ ಚ ಹಿತೇ ಹಿತಮ | ನಾತ್ಮಪ್ರಿಯಂ ಹಿತಂ ರಾಜ್ಞಃ, ಪ್ರಜಾನಾಂ ತು ಪ್ರಿಯಂ ಹಿತಮ್’ ಅಂದರೆ, ಪ್ರಜೆಗಳ ಸುಖವೇ ಆಡಳಿತಗಾರನ ಸುಖ. ಪ್ರಜೆಗಳ ಹಿತವೇ ಆಡಳಿತದ ಪರಮ ಗುರಿಯಾಗಿರಬೇಕು.
ಇದೇ ತತ್ವವನ್ನು ಮಹಾತ್ಮ ಗಾಂಧೀಜಿ, ಜಾನ್ ಎಫ್.ಕೆನೆಡಿ, ಪೀಟರ್ ಡ್ರಕ್ಕರ್, ಜಾನ್ ಮೇನಾರ್ಡ್ ಕೇ ಹಾಗೂ ಲೀ ಕ್ವಾನ್ ಯೂ ಪ್ರತಿಪಾದಿಸಿದ್ದಾರೆ. ಕರ್ನಾಟಕ ಇಂದು ಹೊಸ ಅವಕಾಶಗಳ ದ್ವಾರದಲ್ಲಿದೆ. ವೈಜ್ಞಾನಿಕ ಆಡಳಿತ, ಹಣಕಾಸಿನ ವಿವೇಕ, ತಂತ್ರಜ್ಞಾನಾಧಾರಿತ ಸೇವಾ ವಿತರಣೆ ಮತ್ತು ಪ್ರಾಮಾಣಿಕ ಸಾರ್ವಜನಿಕ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ನಮ್ಮ ರಾಜ್ಯವು ದೇಶಕ್ಕೆ ಮಾದರಿಯಾಗುವ ಸಾಮರ್ಥ್ಯವನ್ನು ಹೊಂದಿದೆ. ಈ ಪತ್ರದಲ್ಲಿನ ಅಭಿಪ್ರಾಯಗಳು ಯಾವುದೇ ವ್ಯಕ್ತಿ ಅಥವಾ ಇಲಾಖೆ ವಿರುದ್ಧದ ಟೀಕೆಗಳಲ್ಲ.
ಸಾರ್ವಜನಿಕ ಸೇವೆಯಲ್ಲಿ ಮೂರು ದಶಕಗಳ ಅನುಭವದ ಆಧಾರದ ಮೇಲೆ, ರಾಜ್ಯದ ದೀರ್ಘ ಕಾಲೀನ ಹಿತಾಸಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಸಲ್ಲಿಸುತ್ತಿರುವ ಪ್ರಾಮಾಣಿಕ ಸಲಹೆಗಳಷ್ಟೇ. ತಮ್ಮ ಸರಕಾರ ಈ ಸಲಹೆಗಳನ್ನು ಸೂಕ್ತವಾಗಿ ಪರಿಶೀಲಿಸಿ, ಸಾರ್ವಜನಿಕ ಹಿತದೃಷ್ಟಿಯಿಂದ ಕಾರ್ಯರೂಪಕ್ಕೆ ತಂದಲ್ಲಿ, ಜನಕೇಂದ್ರಿತ ಹಾಗೂ ದೂರದೃಷ್ಟಿಯ ಸುಧಾರಣೆಗಳ ಹೊಸ ಅಧ್ಯಾಯ ಆರಂಭಿಸಿದ ಮುಖ್ಯಮಂತ್ರಿ ಯಾಗಿ ತಾವು ಶಾಶ್ವತವಾಗಿ ಸ್ಮರಿಸಲ್ಪಡುವಿರಿ