ಮನಿ ಮೈಂಡೆಡ್
ಸಾಮಾನ್ಯವಾಗಿ ವೈಟ್ ಕಾಲರ್ ಹುದ್ದೆಯಲ್ಲಿರುವವರಿಗೆ, ಅಂದರೆ ಮ್ಯಾನೇಜರ್‌ಗಳು, ಹಿರಿಯ ವ್ಯವಸ್ಥಾಪಕರು, ಸಿಇಒಗಳಿಗೆ ಕಂಪನಿಗಳು ಷೇರುಗಳನ್ನು ಕೊಡುತ್ತವೆ. ಆದರೆ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರಿಗೆ ಕೂಡ ಷೇರುಗಳನ್ನು ವಿತರಿಸುವ ಮೂಲಕ ಆನಂದ್ ಮಹೀಂದ್ರಾ ಅವರು ಸಿಹಿಸುದ್ದಿ ನೀಡಿzರೆ. ಜತೆಗೆ ಕಾರ್ಪೊರೇಟ್ ಕ್ಷೇತ್ರದಲ್ಲಿ ಹೊಸ ಮಾದರಿಯೊಂದಿಗೆ, ಇತರ ಉದ್ಯಮಿಗಳಿಗೂ ಮೇಲ್ಪಂಕ್ತಿ ಹಾಕಿಕೊಟ್ಟಿ ದ್ದಾರೆ.
ಈ ವಾರ ಎರಡು ಪ್ರತಿಷ್ಠಿತ ಕಂಪನಿಗಳ ಸುದ್ದಿಗಳು ಗಮನ ಸೆಳೆದಿವೆ! ಮೊದಲನೆಯದ್ದು, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ನಲ್ಲಿ ಈ ವರ್ಷ 12000 ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ ಎನ್ನುವ ಆಘಾತಕಾರಿ ಬೆಳವಣಿಗೆಯ ಕುರಿತಾದ ಸುದ್ದಿ. ಎರಡನೆಯದ್ದು, ಮಹೀಂದ್ರಾ ಗ್ರೂಪ್‌ನಲ್ಲಿ 14000 ಮಂದಿ ಕೆಲಸಗಾರರಿಗೆ ಕಂಪನಿಯು 400 ಕೋಟಿ ರುಪಾಯಿ ಮೌಲ್ಯದಷ್ಟು ಷೇರುಗಳನ್ನು ತಾನಾಗಿಯೇ ವಿತರಿಸಲಿದೆ ಎನ್ನುವ ಸಿಹಿ ಸುದ್ದಿ!
ಟಿಸಿಎಸ್‌ನಲ್ಲಿ 6 ಲಕ್ಷಕ್ಕೂ ಹೆಚ್ಚು ಮಂದಿ ಉದ್ಯೋಗಿಗಳಿದ್ದು, ಎರಡು ಪರ್ಸೆಂಟ್ ಮಂದಿಗೆ ಮಾತ್ರ ಗೇಟ್‌ಪಾಸ್ ನೀಡಲಾಗುತ್ತಿದೆ ಎನ್ನಬಹುದಾದರೂ, 12 ಸಾವಿರ ಎನ್ನುವುದು ದೊಡ್ಡ ಸಂಖ್ಯೆಯೇ. ಕೌಶಲದ ಕೊರತೆ ಇರುವವರನ್ನು ವಜಾ ಮಾಡಲಾಗುತ್ತಿದೆ ಎಂದು ಟಿಸಿಎಸ್ ಹೇಳಿದೆಯಾದರೂ, ಕೇಳುವಾಗ ಒಂದು ಕ್ಷಣವಾದರೂ ತಲ್ಲಣವಾಗದಿರದು.
“ಬಲಶಾಲಿಗಳು ಮಾತ್ರ ಬದುಕಿ ಉಳಿಯುತ್ತಾರೆ" ಎಂಬ ಡಾರ್ವಿನ್ನನ ಥಿಯರಿಯೂ ನೆನಪಾಗ ಬಹುದು, ಇರಲಿ. ಈ ನಡುವೆ ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು 14000ಕ್ಕೂ ಹೆಚ್ಚು ಉದ್ಯೋಗಿಗಳಿಗೆ 400-500 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ವಿತರಿಸ ಲಿದ್ದಾರೆ ಎಂದು ‘ಇಕನಾಮಿಕ್ ಟೈಮ್ಸ್’ ವರದಿ ತಿಳಿಸಿದೆ.
ಕಂಪನಿಯಲ್ಲಿ ಕಸ ಗುಡಿಸುವವರು, ನೆಲ ಒರೆಸುವವರು, ಯಂತ್ರೋಪಕರಣಗಳನ್ನು ಆಪರೇಟ್ ಮಾಡುವವರು, ರಿಪೇರಿ ಮಾಡುವವರು, ಕಚೇರಿ ಸಹಾಯಕರು ಕೂಡ ಷೇರುಗಳನ್ನು ದೀಪಾವಳಿ ಯ ಉಡುಗೊರೆಯಾಗಿ ಪಡೆಯಲಿದ್ದಾರೆ. ಕಸ ಗುಡಿಸುವುದು ಎಂದರೆ ಕೇವಲ ಎಂಬರ್ಥವಲ್ಲ. ಅದೂ ಶ್ರೇಷ್ಠವೇ. ಆದರೆ ತಳಮಟ್ಟದ ಕೆಲಸಗಾರರ ಕಲ್ಯಾಣಕ್ಕೆ ಷೇರುಗಳನ್ನು ಕೊಡುವುದು ಅತ್ಯಂತ ವಿಶೇಷ.
ಇದನ್ನೂ ಓದಿ: Keshava Prasad B Column: ಟ್ರಂಪ್ ಹುಚ್ಚಾಟಕ್ಕೆ ಸೊಪ್ಪು ಹಾಕದ ಬಲಿಷ್ಠ ಭಾರತ !
ಸಾಮಾನ್ಯವಾಗಿ ವೈಟ್ ಕಾಲರ್ ಹುದ್ದೆಯಲ್ಲಿರುವವರಿಗೆ, ಅಂದರೆ ಮ್ಯಾನೇಜರ್‌ಗಳು, ಹಿರಿಯ ವ್ಯವಸ್ಥಾಪಕರು, ಸಿಇಒಗಳಿಗೆ ಕಂಪನಿಗಳು ಷೇರುಗಳನ್ನು ಕೊಡುತ್ತವೆ. ಆದರೆ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರಿಗೆ ಕೂಡ ಷೇರುಗಳನ್ನು ವಿತರಿಸುವ ಮೂಲಕ ಆನಂದ್ ಮಹೀಂದ್ರಾ ಅವರು ಸಿಹಿಸುದ್ದಿ ನೀಡಿದ್ದಾರೆ.
ಜತೆಗೆ ಕಾರ್ಪೊರೇಟ್ ಕ್ಷೇತ್ರದಲ್ಲಿ ಹೊಸ ಮಾದರಿಯೊಂದಿಗೆ, ಇತರ ಉದ್ಯಮಿಗಳಿಗೂ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಷೇರು ಎಂದರೆ ಆ ಕಂಪನಿಯ ಮಾಲೀಕತ್ವದಲ್ಲಿ ಒಂದು ಭಾಗವಾಗಿರುತ್ತದೆ. ಇದು ಉದ್ಯೋಗಿಗಳಿಗೆ ಹೆಮ್ಮೆಯ ಸಂಗತಿಯೂ ಹೌದು. ಇದುವರೆಗೆ ಉನ್ನತ ಹಂತದಲ್ಲಿದ್ದ ಉದ್ಯೋಗಗಳಿಗೆ ಮಾತ್ರ ಸಿಗುತ್ತಿದ್ದ ಸ್ಟಾಕ್ಸ್, ಆನಂದ್ ಮಹೀಂದ್ರಾದಲ್ಲಿ ಈಗ ಎಲ್ಲರಿಗೂ ಸಿಗುವಂಥದ್ದು ಹೃದಯಸ್ಪರ್ಶಿ ನಿದರ್ಶನ.
ನಾನಾ ಕಾರಣಗಳಿಂದ ಖಾಸಗಿ ವಲಯದಲ್ಲಿ ಇವತ್ತು ಉದ್ಯೋಗ ಭದ್ರತೆ ಎಂಬುದೇ ಇಲ್ಲವಾಗಿದೆ. ಕಾರಣಗಳೇನೇ ಇರಲಿ, ವಿಶ್ವಾಸಕ್ಕೆ ಹೆಸರುವಾಸಿಯಾಗಿರುವ ಟಾಟಾ ಗ್ರೂಪ್‌ನ ಮುಕುಟಮಣಿ ಯಂತಿರುವ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಕಂಪನಿಯಲ್ಲಿ ಇತ್ತೀಚೆಗೆ 12000ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವುದು ಇಡೀ ಇಂಡಸ್ಟ್ರಿಯನ್ನು ತಲ್ಲಣಗೊಳಿಸಿದೆ.
ಹನ್ನೆರಡು ಸಾವಿರ ಉದ್ಯೋಗಿಗಳ ಕುಟುಂಬದ ಕಥೆ ಏನು ಎಂಬುದನ್ನು ಆಲೋಚಿಸಿದರೆ ಆತಂಕ ಕವಿಯುವುದು ಸಹಜ. ಇಂಥ ಅಭದ್ರತೆಯೇ ಕಾಯಂ ಎನ್ನುವ ಸನ್ನಿವೇಶದಲ್ಲಿ ಅಪರೂಪಕ್ಕೊಮ್ಮೆ ಕೆಲ ಸುದ್ದಿಗಳು ತಂಗಾಳಿಯಂತೆ ಸುಳಿಯುತ್ತವೆ.
ಎಂಪ್ಲಾಯಿ ಸ್ಟಾಕ್ ಆಪ್ಷನ್ಸ್ ಪ್ಲಾನ್ (ಇಎಸ್‌ಒಪಿ) ಪದ್ಧತಿಯ ಅಡಿಯಲ್ಲಿ ಮಹೀಂದ್ರಾ ಗ್ರೂಪ್‌ನ ಮೂರು ಅಧೀನ ಕಂಪನಿಗಳು ಉದ್ಯೋಗಿಗಳಿಗೆ ಷೇರುಗಳನ್ನು ವಿತರಿಸುತ್ತಿವೆ. ಮಹೀಂದ್ರಾ ಆಂಡ್ ಮಹೀಂದ್ರಾ (ಆಟೊ ಮತ್ತು ಫಾರ್ಮ್ ಸೆಕ್ಟರ್), ಮಹೀಂದ್ರಾ ಇಲೆಕ್ಟ್ರಿಕ್ ಆಟೊ ಮೊಬೈಲ್ ಮತ್ತು ಮಹೀಂದ್ರಾ ಲಾಸ್ಟ್ ಮೈಲ್ ಮೊಬಿಲಿಟಿಯಲ್ಲಿ ಇಎಸ್‌ಒಪಿ ಜಾರಿಯಾಗುತ್ತಿದೆ.
ರಿಸ್ಟ್ರಿಕ್ಟೆಡ್ ಸ್ಟಾಕ್ ಯುನಿಟ್ಸ್ ಸ್ವರೂಪದಲ್ಲಿ ಇವುಗಳು ಸಿಗುತ್ತಿವೆ. ಅಂದರೆ ಕೆಲವೊಂದು ಷರತ್ತು ಗಳೊಂದಿಗೆ ವಿತರಿಸುತ್ತಾರೆ. ವರದಿಗಳ ಪ್ರಕಾರ, ಮಹೀಂದ್ರಾ ಗ್ರೂಪ್‌ನಲ್ಲಿ ಕನಿಷ್ಠ 12 ತಿಂಗಳು ಕೆಲಸ ಮಾಡಿದವರಿಗೆ ಇವು ದೊರೆಯಲಿವೆ. ಸಾಮಾನ್ಯವಾಗಿ ಷೇರುಗಳ ಸಂಪೂರ್ಣ ಮಾಲೀಕತ್ವವನ್ನು ಕೆಲವು ವರ್ಷಗಳ ಬಳಿಕ ಕೊಡಬಹುದು ಅಥವಾ ಪರ್ಫಾರ್ಮೆನ್ಸ್ ಅನ್ನು ಲಿಂಕ್ ಮಾಡಬಹುದು.
ಅವುಗಳು ಏನೇ ಇದ್ದರೂ, ಎಂಪ್ಲಾಯಿ ಸ್ಟಾಕ್ ಆಪ್ಷನ್ಸ್ ಅನುಕೂಲಕರ. ಆದಾಯ ತೆರಿಗೆ ಮಿತಿಗೆ ಬಾರದ ಕಾರ್ಮಿಕರು ಇಎಸ್‌ಒಪಿ ಅಡಿಯಲ್ಲಿ ಪಡೆಯುವ ಷೇರುಗಳನ್ನು ಮಾರಾಟ ಮಾಡುವಾಗ ಟ್ಯಾಕ್ಸ್ ಕಟ್ಟಬೇಕಾಗಿರುವುದಿಲ್ಲ. ಮಾತ್ರವಲ್ಲದೆ 400-500 ಕೋಟಿ ರುಪಾಯಿ ಮೌಲ್ಯದ ಷೇರುಗಳು ಎಂದರೆ ಗಣನೀಯ ಮೊತ್ತವಾಗಿದೆ.
ಹೀಗಾಗಿ ಇದನ್ನು ಮಹೀಂದ್ರಾ ಇಎಸ್‌ಒಪಿ ಕ್ರಾಂತಿ ಎಂದೇ ಬಣ್ಣಿಸಲಾಗಿದೆ. ಇದರಿಂದ ಕಂಪನಿಯ ಬೆಳವಣಿಗೆಯ ಪಯಣದಲ್ಲಿ ಉದ್ಯೋಗಿಗಳಿಗೂ ಪಾಲು ಸಿಗುತ್ತದೆ. ಒಂದು ಕಾರ್ಖಾನೆ ಎಂದರೆ ಕಸ ಗುಡಿಸುವವರಿಂದ ಸಿಇಒ ತನಕ ಎಲ್ಲ ಹಂತಗಳಲ್ಲಿ ನಿಷ್ಠಾವಂತ ದುಡಿಮೆ ನಿರ್ಣಾಯಕವಾಗುತ್ತದೆ. ಉದ್ಯೋಗಿಗಳ ನಿಷ್ಠೆ, ಶ್ರದ್ಧೆ, ಪ್ರಾಮಾಣಿಕ ಶ್ರಮವನ್ನು ಗುರುತಿಸಿ ಸ್ಟಾಕ್ ಮಾಲೀಕತ್ವವನ್ನು ನೀಡುವುದು ಮಾದರಿ ನಡೆಯಾಗಿದೆ.
ಹಾಗಾದರೆ ಏನಿದು ಇಎಸ್‌ಒಪಿ? ಇದರಿಂದ ಉದ್ಯೋಗಿಗಳಿಗೆ ಏನು ಲಾಭ? ಎಂದು ನೀವು ಕೇಳಬಹುದು. ಎಂಪ್ಲಾಯಿ ಸ್ಟಾಕ್ ಆಪ್ಷನ್ಸ್ ಪ್ಲಾನ್ (ಇಎಸ್‌ಒಪಿ) ಅಡಿಯಲ್ಲಿ ಕಂಪನಿಯೊಂದು ದೀರ್ಘಕಾಲ ಕೆಲಸ ಮಾಡುವ ಉದ್ಯೋಗಿಗಳಿಗೆ ಇನ್ಸೆಂಟಿವ್ ಆಗಿ ತನ್ನ ಷೇರುಗಳನ್ನೇ ಕೊಡುತ್ತದೆ. ಅದನ್ನು ನಿರ್ದಿಷ್ಟ ಅವಧಿಯ ಬಳಿಕ ಮಾರಾಟ ಮಾಡಿ ಲಾಭಗಳಿಸಬಹುದು. ಇದರಿಂದ ಕಂಪನಿಗೆ ಕೂಡ ಲಾಭವಿದೆ.
ಮೊದಲನೆಯದಾಗಿ ನಿಷ್ಠಾವಂತ ಕೆಲಸಗಾರರನ್ನು ಕಂಪನಿಯಲ್ಲಿಯೇ ದೀರ್ಘಾವಧಿಗೆ ಉಳಿಸಿ ಕೊಳ್ಳಬಹುದು. ಉತ್ಪಾದಕತೆಯನ್ನು ಹೆಚ್ಚಿಸಬಹುದು. ಜತೆಗೆ ಗ್ರಾಹಕರ ವಿಶ್ವಾಸ ವೃದ್ಧಿಗೆ ಅದು ಕಾರಣವಾಗುತ್ತದೆ. ಮಹೀಂದ್ರಾ ಆಂಡ್ ಮಹೀಂದ್ರಾ ಗ್ರೂಪ್ ಭಾರತದ ಕಾರ್ಪೊರೇಟ್ ವಲಯದ ದಿಗ್ಗಜ ಕಂಪನಿಗಳಲ್ಲೊಂದಾಗಿದೆ. ಥಾರ್‌ನಂಥ ಬ್ಲಾಕ್‌ಬಸ್ಟರ್ ಎಸ್‌ಯುವಿಯನ್ನು ಅದು ತಯಾರಿಸಿ ಯಶಸ್ವಿಯಾಗಿದೆ. ಹೀಗಾಗಿ ಕಂಪನಿಯ ಷೇರು ಮೌಲ್ಯವು ಕಳೆದ ಐದು ವರ್ಷಗಳಲ್ಲಿ 12 ಪಟ್ಟು ವೃದ್ಧಿಸಿದೆ. ಒಟ್ಟು ಮಾರುಕಟ್ಟೆ ಮೌಲ್ಯ 3,92,925 ಕೋಟಿ ರುಪಾಯಿಗೆ ಏರಿಕೆಯಾಗಿದೆ. ಪ್ರತಿ ಷೇರಿನ ದರ 3190 ರುಪಾಯಿ ಆಗಿದೆ.
ಅಂದ ಹಾಗೆ ಆನಂದ್ ಮಹೀಂದ್ರಾ ಗ್ರೂಪ್ 2025ರ ಏಪ್ರಿಲ್ -ಜೂನ್ ತ್ರೈಮಾಸಿಕದಲ್ಲಿ ಒಟ್ಟು 4083 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಒಟ್ಟು 45,529 ಕೋಟಿ ರುಪಾಯಿ ಆದಾಯವನ್ನು ತನ್ನದಾಗಿಸಿಕೊಂಡಿದೆ. ಈ ರೀತಿ ತಳ ಹಂತದಲ್ಲಿ ಕೆಲಸ ಮಾಡುವ ಸಿಬ್ಬಂದಿಗೂ ಸ್ಟಾಕ್ ಗಳನ್ನು ಕೊಡುವ ಮೂಲಕ ಮಹೀಂದ್ರಾ ಗ್ರೂಪ್ ಹೊಸ ಪದ್ಧತಿಗೆ ನಾಂದಿ ಹಾಡಿದೆ. ಭಾರತದಲ್ಲಿ ಇಎಸ್ ಒಪಿ ಹೊಸತೇನೂ ಅಲ್ಲ. ಮುಖ್ಯವಾಗಿ ಸ್ಟಾರ್ಟಪ್‌ಗಳಲ್ಲಿ ಸಾಮಾನ್ಯ. ಈ ಹಿಂದೆ ಫ್ಲಿಪ್‌ಕಾರ್ಟ್, ಸ್ವಿಗ್ಗಿ, ಜೊಮ್ಯಾಟೊ ಕಂಪನಿಗಳು ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಇಎಸ್‌ಒಪಿಯನ್ನು ಜಾರಿಗೊಳಿಸಿದ್ದವು.
ಜೆಎಸ್‌ಡಬ್ಲ್ಯು ಎನರ್ಜಿ ಮತ್ತು ಜೆಎಸ್‌ಡಬ್ಲ್ಯು ಸ್ಟೀಲ್ ಕಂಪನಿ ಕೂಡ 2021ರಲ್ಲಿ 16000 ಉದ್ಯೋಗಿ ಗಳಿಗೆ 1000 ಕೋಟಿ ರುಪಾಯಿ ಮೌಲ್ಯದ ಇಎಸ್‌ಒಪಿ ಯೋಜನೆ ರೂಪಿಸಿತ್ತು. ಇದೀಗ ಮಹೀಂದ್ರಾ ಸರದಿ. ಇದರೊಂದಿಗೆ ಚೇರ್ಮನ್ ಆನಂದ್ ಮಹೀಂದ್ರಾ ಅವರು ಯುವ ವೃತ್ತಿಪರರಿಗೆ ಉದ್ಯಮ ಶೀಲತೆಯನ್ನು ಮೈಗೂಡಿಸಿಕೊಳ್ಳಲು ಸ್ಫೂರ್ತಿ ನೀಡಿದ್ದಾರೆ.
ಕಂಪನಿಯ ಷೇರುಗಳ ಮಾಲೀಕತ್ವ ನೀಡುವುದರಿಂದ ಸಿಬ್ಬಂದಿಯಲ್ಲಿ ತಾನೂ ಒಬ್ಬ ಮಾಲೀಕ, ತನಗೂ ಬದ್ಧತೆ, ಶ್ರದ್ಧೆ, ನಿಷ್ಠೆ ಇದೆ ಎಂಬ ಭಾವನೆ ಬರುತ್ತದೆ. ಒಂದು ಒಳ್ಳೆಯ ಉದ್ಯೋಗಿಗಳ ಪಡೆ ಯನ್ನು ಉಳಿಸಿಕೊಳ್ಳುವ ರಚನಾತ್ಮಕ ಕಾರ್ಯತಂತ್ರವಾಗಿ ಕಾರ್ಪೊರೇಟ್ ಕಂಪನಿಗಳು ಇಎಸ್‌ಒಪಿ ಯನ್ನು ನೀಡಬಹುದು ಎಂಬ ದಿಟ್ಟ ಸಂದೇಶವನ್ನು ಅವರು ರವಾನಿಸಿದ್ದಾರೆ.
ಸ್ಟಾರ್ಟಪ್‌ಗಳು ಇಎಸ್‌ಒಪಿಯನ್ನು ನೀಡುವುದು ವಿಶೇಷವೇನಲ್ಲ. ಏಕೆಂದರೆ ಪ್ರತಿಭಾವಂತ ಉದ್ಯೋಗಿಗಳನ್ನು ಉಳಿಸಿಕೊಳ್ಳುವ ದೊಡ್ಡ ಸವಾಲು ಅವುಗಳಿಗೆ ಇರುತ್ತವೆ. ತಪ್ಪಿದರೆ ಅದು ಸ್ಟಾರ್ಟಪ್‌ನ ಅಸ್ತಿತ್ವಕ್ಕೇ ಸಂಚಕಾರವಾಗಿ ಪರಿಣಮಿಸಬಹುದು. ಆದರೆ ದೊಡ್ಡ ಕಂಪನಿಗಳಲ್ಲಿ ಪರಿಸ್ಥಿತಿ ಹಾಗಿರುವುದಿಲ್ಲ. ನೀನಲ್ಲದಿದ್ದರೆ ಮತ್ತೊಬ್ಬ ಎಂಬ ಧೋರಣೆ ಅಲ್ಲಿ ಇದ್ದರೆ ಅಚ್ಚರಿಪಡ ಬೇಕಿಲ್ಲ. ಈ ಹಿನ್ನೆಲೆಯಲ್ಲಿ ಮಹೀಂದ್ರಾ ಕಂಪನಿಯ ನಿದರ್ಶನ ಮಹತ್ವ ಪಡೆಯುತ್ತದೆ.
ಆನಂದ್ ಮಹೀಂದ್ರಾ ಅವರ ಮತ್ತೊಂದು ವಿಶೇಷತೆ ಏನೆಂದರೆ, ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪ್ರತಿದಿನ ಒಂದಿಂದು ಸ್ವಾರಸ್ಯವನ್ನು, ತಮ್ಮ ಅನುಭವಗಳನ್ನು, ಸಲಹೆಗಳನ್ನು ನೀಡುತ್ತಾರೆ. ಅಪರೂಪದ ಸಾಧಕರ ಬಗ್ಗೆ ಬರೆಯುತ್ತಾರೆ. ರಾಷ್ಟ್ರೀಯ ಹಿತಾಸಕ್ತಿಯ ವಿಚಾರಗಳ ಕುರಿತು ಪ್ರಸ್ತಾಪಿಸುತ್ತಾರೆ. ಉದಾಹರಣೆಗೆ ಟ್ರಂಪ್ ಅವರು ಭಾರತದ ವಿರುದ್ಧ 50 ಪರ್ಸೆಂಟ್ ಟಾರಿಫ್ ಘೋಷಿಸಿದ್ದಕ್ಕೆ ಆನಂದ್ ಮಹೀಂದ್ರಾ ಮಾಡಿರುವ ಪೋಸ್ಟ್ ನಲ್ಲಿ, “ಈ ಸವಾಲನ್ನು ಉತ್ತಮ ಅವಕಾಶವಾಗಿ ಬಳಸಿಕೊಳ್ಳಬಾರದೇಕೆ? 1991ರ ವಿದೇಶಿ ವಿನಿಮಯ ಸಂಗ್ರಹದ ತೀವ್ರ ಕೊರತೆಯ ಬಿಕ್ಕಟ್ಟಿನಲ್ಲಿ ದೇಶವು ಚಾರಿತ್ರಿಕ ಉದಾರೀಕರಣದ ಮೂಲಕ ಕ್ರಾಂತಿಕಾರಕ ಬೆಳವಣಿಗೆಯನ್ನು ಹೊಂದಿತು. ಈಗಿನ ಟ್ರಂಪ್ ಟಾರಿಫ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ಎರಡು ಪ್ರಬಲ ಪರಿವರ್ತನೀಯ ಹೆಜ್ಜೆಗಳನ್ನು ಇಡಬೇಕು" ಎಂದು ಆಸಕ್ತಿಕರ ಸಲಹೆ ನೀಡಿದ್ದಾರೆ.
ಹಾಗಾದರೆ ಅವರು ಏನೆನ್ನುತ್ತಾರೆ?- ಭಾರತವು ಪ್ರಬಲವಾದ ಉದ್ಯಮ, ವ್ಯಾಪಾರ ಸ್ನೇಹಿ ಸುಧಾರಣೆ ಕ್ರಮಗಳನ್ನು ಜಾರಿಗೊಳಿಸಬೇಕು. ಎಲ್ಲ ಹೂಡಿಕೆಗಳಿಗೂ, ನಿಜಕ್ಕೂ ಪರಿಣಾಮಕಾರಿಯಾದ ಏಕ ಗವಾಕ್ಷಿ ಕ್ಲಿಯರಿಂಗ್ ವ್ಯವಸ್ಥೆಯನ್ನು ಅಳವಡಿಸಬೇಕು. ರಾಜ್ಯ ಸರಕಾರಗಳು ಹಲವಾರು ಹೂಡಿಕೆ ಗಳನ್ನು ನಿಯಂತ್ರಿಸುತ್ತವೆ. ಈ ವಿಷಯದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಏಕಗವಾಕ್ಷಿ ಯೋಜನೆಯಡಿ ಯಲ್ಲಿ ಕೇಂದ್ರ-ರಾಜ್ಯ ಸರಕಾರಗಳ ಸಮನ್ವಯ ಕ್ರಮಗಳು ಅವಶ್ಯಕ.
ಹೂಡಿಕೆಯ ಯೋಜನೆಗಳು ತ್ವರಿತಗತಿಯಲ್ಲಿ, ಸರಳವಾಗಿ ಮತ್ತು ಗ್ರಹಿಕೆಗೆ ನಿಲುಕುವಂತಿದ್ದರೆ ಜಾಗತಿಕ ಬಂಡವಾಳದ ಹರಿವನ್ನೂ ಹೆಚ್ಚಿಸಬಹುದು. ಜಗತ್ತು ಇವತ್ತು ವಿಶ್ವಾಸಾರ್ಹ ಪಾಲು ದಾರಿಕೆಯನ್ನು ಎದುರು ನೋಡುತ್ತಿದೆ. ಇದು ಮೊದಲ ಹೆಜ್ಜೆ ಎನ್ನುವ ಆನಂದ್ ಮಹೀಂದ್ರಾ, ಎರಡನೆಯ ಕ್ರಾಂತಿಕಾರಕ ಸಲಹೆಯನ್ನು ಕೊಟ್ಟಿದ್ದಾರೆ. ಅದು ಯಾವುದೆಂದರೆ- ಪ್ರವಾಸೋದ್ಯಮ ವನ್ನು ವಿದೇಶಿ ವಿನಿಮಯ ಸಂಗ್ರಹ (ಫೊರೆಕ್ಸ್) ಗಳಿಕೆಯ ಪ್ರಮುಖ ಮೂಲವಾಗಿಸುವುದು.
ಟೂರಿಸಂ ನಮ್ಮಲ್ಲಿ ಅತ್ಯಂತ ಕಡೆಗಣನೆಗೆ ಒಳಗಾಗಿರುವ ಕ್ಷೇತ್ರವಾಗಿದೆ. ಆದರೆ ಇದನ್ನೇ ವಿದೇಶಿ ವಿನಿಮಯ ಗಳಿಕೆ ಮತ್ತು ಉದ್ಯೋಗ ಸೃಷ್ಟಿಯ ಪ್ರಮುಖ ಮೂಲವನ್ನಾಗಿಸಬಹುದು. ನಾವು ವೀಸಾ ಪ್ರಕ್ರಿಯೆಯನ್ನು ಗಣನೀಯವಾಗಿ ಚುರುಕುಗೊಳಿಸಬೇಕು. ಪ್ರವಾಸಿಗರಿಗೆ ನೀಡುವ ಸೌಲಭ್ಯಗಳನ್ನು ಹೆಚ್ಚಿಸಬೇಕು. ಪ್ರವಾಸೋದ್ಯಮದ ವಿಶೇಷ ಕಾರಿಡಾರ್‌ಗಳನ್ನು ನಿರ್ಮಿಸಬೇಕು.
ಪ್ರವಾಸಿ ತಾಣಗಳಲ್ಲಿ ಸೌಲಭ್ಯ, ಭದ್ರತೆ, ನೈರ್ಮಲ್ಯ ಮತ್ತು ಆರೋಗ್ಯ ವ್ಯವಸ್ಥೆಗಳನ್ನು ಕಲ್ಪಿಸಿ ಕೊಡಬೇಕು. ದೇಶಾದ್ಯಂತ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಹಣಕಾಸು ನೆರವು ಸಕಾಲಕ್ಕೆ ಸಿಗಬೇಕು. ಮೂಲಸೌಕರ್ಯ ಹೂಡಿಕೆ ಇನ್ನೂ ವೃದ್ಧಿಸಬೇಕು.
ಪಿಎಲ್ಐ ಯೋಜನೆಗಳನ್ನು ವಿಸ್ತರಿಸಬೇಕು. ಬೇರೆ ದೇಶಗಳು ತಮ್ಮನ್ನು ಮೊದಲು ಮುಂದಿಡುತ್ತವೆ ಎಂದು ಭಾವಿಸುವುದು ಬೇಡ. ನಾವು ನಮ್ಮ ದೇಶವನ್ನು ಎಂದೆಂದಿಗೂ ಶ್ರೇಷ್ಠವಾಗಿಸೋಣ, ಬಲಾಢ್ಯವಾಗಿ ಕಟ್ಟೋಣ ಎಂದು ಸ್ಫೂರ್ತಿಯುತ ಸಲಹೆ ನೀಡಿದ್ದಾರೆ ಆನಂದ್ ಮಹೀಂದ್ರಾ.
“ನಾಯಕರಾದವರು ಯಾವತ್ತೂ ಹಿಂತಿರುಗಿ ನೋಡುವುದಿಲ್ಲ, ಅಕ್ಕ ಪಕ್ಕ ನೋಡುವುದಿಲ್ಲ, ಅವರು ಮುಂದೇನು ಎಂಬುದನ್ನು ಮಾತ್ರ ಕಾಣುತ್ತಾರೆ" ಎನ್ನುವುದು ಆನಂದ್ ಅವರದ್ದೇ ನುಡಿ. ಅದರಂತೆ ಯೇ ಅವರು ನಡೆಯುತ್ತಿದ್ದಾರೆ ಕೂಡಾ.