ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

Roopa Gururaj Column: ಆಂಜನೇಯನ ಭಕ್ತರಿಗೆ ಶನಿಕಾಟವಿಲ್ಲ

ಹಠವಾದಿ ಶನಿಗೆ ಕೋಪ ಬಂದು, ಕರಾಳ ರೂಪವನ್ನು ತಳೆದು ಹನುಮನ ಇನ್ನೊಂದು ಭುಜದ ಮೇಲೇರಿದ. ಹನುಮನಿಗೂ ಕೋಪ ಬಂದು ತನ್ನ ಬಾಲದಿಂದ ಶನಿಯನ್ನು ಸುತ್ತಿದ. ಆದರೂ ಶನಿಯ ಅಹಂಕಾರ ಕಡಿಮೆಯಾಗಲಿಲ್ಲ. ಜೋರಾಗಿ ನಕ್ಕ ಆತ, “ಎಲೈ ವಾನರ, ನನಗೆ ನೀನೇನೂ ಮಾಡಲಾಗದು

ಆಂಜನೇಯನ ಭಕ್ತರಿಗೆ ಶನಿಕಾಟವಿಲ್ಲ

ಒಂದೊಳ್ಳೆ ಮಾತು

ಒಮ್ಮೆ ಶನಿದೇವನಿಗೆ, ದೃಷ್ಟಿ ಮಾತ್ರದಿಂದಲೇ ಜನರನ್ನು ಕಷ್ಟಕೋಟಲೆಗಳಿಗೆ ತಳ್ಳುವ ಶಕ್ತಿ ತನಗಲ್ಲದೆ ಇನ್ನಾರಿಗಿದೆ ಎಂಬ ಅಹಂಕಾರ ನೆತ್ತಿಗೇರಿತು. ಇದೇ ಮದದಲ್ಲಿ ತೇಲುತ್ತಿದ್ದ ಅವನು ಒಮ್ಮೆ, ಕಣ್ಣು ಮುಚ್ಚಿಕೊಂಡು ರಾಮಧ್ಯಾನದಲ್ಲಿ ತಲ್ಲೀನನಾಗಿದ್ದ ಆಂಜನೇಯನ ಮೇಲೆ ತನ್ನ ವಕ್ರದೃಷ್ಟಿಯನ್ನು ಬೀರಿದ. ಆದರೆ ಅದರಿಂದ ಆಂಜನೇಯನಿಗೆ ಏನೂ ಆಗಲಿಲ್ಲ. ಕೋಪಗೊಂಡ ಶನಿ, “ಕಣ್ಣು ತೆರೆದು ನೋಡು, ನಿನ್ನ ಸುಖ-ಸಂತೋಷ-ನೆಮ್ಮದಿ ಯನ್ನು ಹಾಳುಮಾಡಲು ಬಂದಿರುವೆ. ನನ್ನನ್ನು ಎದುರಿಸುವ ಶಕ್ತಿ ನಿನಗಿಲ್ಲ. ನೋಡೀಗ, ನಾನು ನಿನ್ನ ರಾಶಿಯಲ್ಲಿ ಪ್ರವೇಶ ಮಾಡುತ್ತೇನೆ. ಆಗ ನನ್ನ ಶಕ್ತಿಯೇನೆಂದು ನಿನಗೆ ಗೊತ್ತಾ ಗುತ್ತದೆ" ಎಂದ.

ಇದನ್ನೂ ಓದಿ: Roopa Gururaj Column: ತಂದೆ - ತಾಯಿಯರನ್ನು ನಿರ್ಲಕ್ಷಿಸಬೇಡಿ

ಅದಕ್ಕೆ ಆಂಜನೇಯ, “ನಾನು ನನ್ನ ಪ್ರಭುವಿನ ಧ್ಯಾನದಲ್ಲಿರುವೆ, ತೊಂದರೆ ಕೊಡಬೇಡ" ಎಂದ ವಿನಯದಿಂದ. ಆದರೆ ಮೊಂಡುಬಿದ್ದ ಶನಿ, “ಎಲೈ ವಾನರನೇ, ನಿನಗೆ ಹೀಗೆಲ್ಲಾ ಹೇಳಿದರೆ ಅರ್ಥವಾಗದು, ನಿನ್ನ ಹೆಗಲೇರುವೆ" ಎಂದು ಹನುಮನ ಹೆಗಲು ಹಿಡಿದು ತನ್ನೆಡೆಗೆ ತಿರುಗಿಸಲು ನೋಡಿದ. ಹನುಮನಿಗೆ ಆ ಕ್ಷಣ ನಿಗಿನಿಗಿ ಉರಿಯುವ ಕೆಂಡದ ಮೇಲೆ ನಿಂತಂತಾಗಿ ತನ್ನ ಭುಜವನ್ನು ಒಮ್ಮೆಲೇ ಕೊಡವಿಕೊಂಡು ಶನಿಯಿಂದ ಬಿಡಿಸಿಕೊಂಡ.

ಹಠವಾದಿ ಶನಿಗೆ ಕೋಪ ಬಂದು, ಕರಾಳ ರೂಪವನ್ನು ತಳೆದು ಹನುಮನ ಇನ್ನೊಂದು ಭುಜದ ಮೇಲೇರಿದ. ಹನುಮನಿಗೂ ಕೋಪ ಬಂದು ತನ್ನ ಬಾಲದಿಂದ ಶನಿಯನ್ನು ಸುತ್ತಿ ದ. ಆದರೂ ಶನಿಯ ಅಹಂಕಾರ ಕಡಿಮೆಯಾಗಲಿಲ್ಲ. ಜೋರಾಗಿ ನಕ್ಕ ಆತ, “ಎಲೈ ವಾನರ, ನನಗೆ ನೀನೇನೂ ಮಾಡಲಾಗದು.

ನೀನಿರಲಿ, ನಿನ್ನ ಪ್ರಭು ಶ್ರೀರಾಮನೂ ಏನೂ ಮಾಡಲಾರ" ಎಂದ. ತನ್ನ ಪ್ರಭುವನ್ನೇ ಗೇಲಿ ಮಾಡಿದ ಶನಿಯ ಮೇಲೆ ಕೋಪಗೊಂಡ ಹನುಮ, “ಏನಂದೇ, ನನ್ನ ಪ್ರಭುವಿಗೇ ಸವಾಲು ಹಾಕುವೆಯಾ?" ಎಂದು ಹೇಳುತ್ತಾ ಬಾಲದ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿ ಶನಿಯನ್ನು ಸುತ್ತಿ ಮೇಲೆತ್ತಿ ಬಂಡೆಗಳ ಮೇಲೆ ಹಾಕಿ ಅಪ್ಪಳಿಸಿದ, ಪರ್ವತಗಳ ಮೇಲೆ ಹಾಕಿ ಚಚ್ಚಿದ.

ಗಿರಗಿರನೆ ತಿರುಗಿಸಿ ನೆಲದ ಮೇಲೆ ಕುಕ್ಕಿದ. ಶನಿಗೆ ಜೀವವೇ ಬಾಯಿಗೆ ಬಂದಂತಾಯಿತು. ಆದರೆ ಎಷ್ಟು ಬೇಡಿದರೂ ಹನುಮ ಕೇಳುವ ಸ್ಥಿತಿಯಲ್ಲಿರಲಿಲ್ಲ. “ನನ್ನನ್ನು ಕಾಪಾಡಿ" ಎಂದು ದೇವತೆಗಳಿಗೆ ಮೊರೆಯಿಟ್ಟ ಶನಿ. ಆದರೆ ಅವರು ಸಹಾಯಕ್ಕೆ ಬರಲಿಲ್ಲ. ಶನಿಗೆ ತನ್ನ ತಪ್ಪಿನ ಅರಿವಾಗಿ ಹನುಮನಲ್ಲಿ ಕ್ಷಮೆಯಾಚಿಸಿದ. “ನನ್ನದು ಅಪರಾಧವಾಯಿತು, ಇನ್ನೆಂ ದೂ ನಿನ್ನ ತಂಟೆಗೆ ಬರುವುದಿಲ್ಲ. ನಿನ್ನ ನೆರಳಿನಿಂದಲೇ ದೂರ ಹೋಗುವೆ, ನನ್ನ ಉದ್ಧಟ ತನವನ್ನು ಮನ್ನಿಸು" ಎಂದು ಅಂಗಲಾಚಿದ.

ಆಗ ಕೊಂಚ ಶಾಂತನಾದ ಹನುಮ, “ಶನಿದೇವಾ, ಕೇವಲ ನನ್ನ ನೆರಳಿನಿಂದ ದೂರ ಹೋಗುವುದಲ್ಲ, ನನ್ನ ಭಕ್ತರ ನೆರಳಿನಿಂದಲೂ ದೂರ ಇರುವೆ ಎಂದು ವಚನ ಕೊಡು" ಎಂದ. ಆಗ ಶನಿಯು, “ಹಾಗೇ ಆಗಲಿ, ಇನ್ನೆಂದೂ ನಿನ್ನ ಭಕ್ತರ ಮೇಲೆ ನನ್ನ ವಕ್ರದೃಷ್ಟಿ ಯನ್ನು ಬೀರುವುದಿಲ್ಲ, ಹಾಗೆಯೇ ಅವರ ನೆರಳಿನ ಹತ್ತಿರವೂ ಸುಳಿಯುವುದಿಲ್ಲ" ಎಂದು ವಚನ ಕೊಟ್ಟ. ನಂತರ ಹನುಮನು ತನ್ನ ಬಾಲದ ಹಿಡಿತದಿಂದ ಶನಿಯನ್ನು ಬಿಡುಗಡೆ ಮಾಡಿದ. ಆದರೆ ತನ್ನ ದೇಹ ನುಜ್ಜುಗುಜ್ಜಾಗಿದ್ದರಿಂದ ಶನಿಯು ನೋವಿನಿಂದ ನರಳು ತ್ತಿದ್ದ.

ಹನುಮನಿಗೆ ಕರುಣೆಯುಕ್ಕಿ, ಎಳ್ಳೆಣ್ಣೆಯನ್ನು ಶನಿದೇವನ ಅಂಗಾಲಿಗೆ ತಾನೇ ತಿಕ್ಕಿದ. ಇದ ರಿಂದಾಗಿ ಶನಿದೇವನ ಮೈ ಕೈ ನೋವು ಕಡಿಮೆಯಾಯಿತು, ಅವನ ಅಹಂಕಾರವೂ ತಗ್ಗಿತು. ಈ ಕಾರಣದಿಂದಲೇ ಶನಿದೇವನಿಗೆ ಎಳ್ಳೆಣ್ಣೆ ನೀಡುವ ಕ್ರಮವಿದೆ. ಅಂದರೆ, ಎಳ್ಲೆಣ್ಣೆಯಲ್ಲಿ ನೆನೆಸಿದ ಎಳ್ಳುತುಂಬಿದ ಪುಟ್ಟ ಬಟ್ಟೆಗಂಟಿಗೆ ದೀಪ ಹಚ್ಚುವುದರಿಂದ ಶನಿದೇವ ತೃಪ್ತನಾಗಿ ಭಕ್ತರ ಕಷ್ಟವನ್ನು ಪರಿಹರಿಸುತ್ತಾನೆ.

ತಾನು ಕೊಟ್ಟ ಮಾತಿನಂತೆ ಆಂಜನೇಯನ ಭಕ್ತರ ಮೇಲೆ ತನ್ನ ವಕ್ರದೃಷ್ಟಿಯನ್ನು ಶನಿ ಬೀರುವುದಿಲ್ಲ. ಅವರ ನೆರಳಿನ ಹತ್ತಿರವೂ ಸುಳಿಯುವುದಿಲ್ಲ. ಹನುಮನ ಪೂಜೆ ಮಾಡಿದರೆ ಶನಿಕಾಟದ ಭಯವಿಲ್ಲ ಎಂದು ಹಿರಿಯರು ಹೇಳುವುದು ಈ ಕಾರಣಕ್ಕೇ. ಇಂಥ ಕಥೆಗಳನ್ನು ನಮ್ಮ ಮಕ್ಕಳಿಗೆ ಹೇಳುತ್ತಿದ್ದರೆ, ಅವರಿಗೆ ಭಗವಂತನ ಇರುವಿಕೆ ಮತ್ತು ಶಕ್ತಿಯಲ್ಲಿನ ನಂಬಿಕೆ ನೂರು ಪಟ್ಟಾಗುತ್ತದೆ.