ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Roopa Gururaj Column: ತಂದೆ - ತಾಯಿಯರನ್ನು ನಿರ್ಲಕ್ಷಿಸಬೇಡಿ

ತಾಯಿಯ ಮಾತನ್ನು ಕೇಳುತ್ತಿದ್ದಂತೆ ಚತುರ ಷಣ್ಮುಖನು ತನ್ನ ವಾಹನವಾದ ನವಿಲಿನ ಮೇಲೆ ಕುಳಿತು ತ್ರಿಲೋಕಗಳ ತೀರ್ಥಕ್ಷೇತ್ರಗಳ ದರ್ಶನಕ್ಕೆ ಹೊರಟನು, ಎಲ್ಲಾ ಕ್ಷೇತ್ರ ಗಳಲ್ಲೂ ಸ್ನಾನ ಮಾಡಿದನು. ಆದರೆ ಗಣೇಶ ಮಾತ್ರ ಷಣ್ಮುಖನಿಗಿಂತಲೂ ಬುದ್ಧಿವಂತ ನಾಗಿ, ತಂದೆ-ತಾಯಿಯ ರಿಗೆ ಮೂರು ಪ್ರದಕ್ಷಿಣೆ ಹಾಕಿ, ದೀರ್ಘದಂಡ ಪ್ರಣಾಮ ಮಾಡಿ, ಅವರೆದುರಿಗೆ ಕರ ಜೋಡಿಸಿ ನಿಂತನು. ಅಷ್ಟೊತ್ತಿಗೆ ಅಲ್ಲಿಗೆ ಬಂದ ಷಣ್ಮುಖನು ತನಗೆ ಮೋದಕ ಕೊಡಬೇಕೆಂದು ಆಗ್ರಹಿಸಿ ದನು

ತಂದೆ - ತಾಯಿಯರನ್ನು ನಿರ್ಲಕ್ಷಿಸಬೇಡಿ

ಒಂದೊಳ್ಳೆ ಮಾತು

ವೇದವ್ಯಾಸರು ತಮ್ಮ ಶಿಷ್ಯರಿಗೆ, “ಪ್ರತಿದಿನದ ಪೂಜೆಯಲ್ಲಿ ಯಾರಿಗೆ ಅಗ್ರಸ್ಥಾನ ನೀಡಬೇಕು ಎಂಬುದನ್ನು ಹೇಳುವೆನು ಕೇಳಿರಿ. ವಿಪತ್ತುಗಳನ್ನು ದೂರ ಮಾಡಲು ಸರ್ವಪ್ರಥಮವಾಗಿ ಗಣೇಶನನ್ನು ಪೂಜಿಸಬೇಕು. ಗಣೇಶ ಮತ್ತು ಷಣ್ಮುಖರು ಶಿವ-ಪಾರ್ವತಿಯರ ಇಬ್ಬರು ಪುತ್ರರು. ಒಮ್ಮೆ ದೇವತೆಗಳು ಅಮೃತದಷ್ಟು ರುಚಿಯಾದ ದಿವ್ಯಮೋದಕವನ್ನು ಪಾರ್ವತಿಗೆ ಅರ್ಪಿಸಿದರು. ಅದು ತಮಗೆ ಬೇಕೆಂದು ಇಬ್ಬರು ಬಾಲಕರೂ ತಾಯಿಯನ್ನು ಪೀಡಿಸ ತೊಡಗಿದರು. ಆಗ ಪಾರ್ವತಿಯು ಮಕ್ಕಳಿಗೆ, ‘ಈ ಮೋದಕವನ್ನು ತಿನ್ನುವವನು ಜ್ಞಾನಿ ಯೂ, ಸಕಲವಿದ್ಯಾ ಪ್ರವೀಣನೂ ಆಗಿರಬೇಕು. ಆದ್ದರಿಂದ, ನಿಮ್ಮಿಬ್ಬರಲ್ಲಿ ಧರ್ಮಾ ಚರಣೆಯಿಂದ ಶ್ರೇಷ್ಠನಾಗಿ ಯಾರು ಮೊದಲು ಬರುವಿರೋ, ಅವರಿಗೆ ಈ ಮೋದಕವನ್ನು ನೀಡುವೆ’ ಎಂದಳು.

ಇದನ್ನೂ ಓದಿ: Roopa Gururaj Column: ಸೀತಾಮಾತೆಯ ಸಹೋದರ ಯಾರು ಗೊತ್ತೇ ?

ತಾಯಿಯ ಮಾತನ್ನು ಕೇಳುತ್ತಿದ್ದಂತೆ ಚತುರ ಷಣ್ಮುಖನು ತನ್ನ ವಾಹನವಾದ ನವಿಲಿನ ಮೇಲೆ ಕುಳಿತು ತ್ರಿಲೋಕಗಳ ತೀರ್ಥಕ್ಷೇತ್ರಗಳ ದರ್ಶನಕ್ಕೆ ಹೊರಟನು, ಎಲ್ಲಾ ಕ್ಷೇತ್ರ ಗಳಲ್ಲೂ ಸ್ನಾನ ಮಾಡಿದನು. ಆದರೆ ಗಣೇಶ ಮಾತ್ರ ಷಣ್ಮುಖನಿಗಿಂತಲೂ ಬುದ್ಧಿವಂತ ನಾಗಿ, ತಂದೆ-ತಾಯಿಯರಿಗೆ ಮೂರು ಪ್ರದಕ್ಷಿಣೆ ಹಾಕಿ, ದೀರ್ಘದಂಡ ಪ್ರಣಾಮ ಮಾಡಿ, ಅವರೆದುರಿಗೆ ಕರ ಜೋಡಿಸಿ ನಿಂತನು. ಅಷ್ಟೊತ್ತಿಗೆ ಅಲ್ಲಿಗೆ ಬಂದ ಷಣ್ಮುಖನು ತನಗೆ ಮೋದಕ ಕೊಡಬೇಕೆಂದು ಆಗ್ರಹಿಸಿದನು.

ಆಗ ಪಾರ್ವತಿಯು, ‘ಸಂಪೂರ್ಣ ಪುಣ್ಯನದಿ ಸ್ನಾನ, ಸಕಲ ದೇವತೆಗಳಿಗೂ ಮಾಡಿದ ನಮಸ್ಕಾರ, ವ್ರತ, ಜಪ-ತಪಾದಿಗಳು ಈ ಯಾವುದೂ ಮಾತಾ-ಪಿತರಿಗೆ ನಮಸ್ಕರಿಸಿದಾಗ ದಕ್ಕುವ ಪುಣ್ಯ-ಲಕ್ಕೆ ಸರಿಸಾಟಿಯಾಗಲಾರದು. ಆದ್ದರಿಂದ ಗಣೇಶನಿಗೇ ಈ ಮೋದಕ ಸಲ್ಲಬೇಕು ಹಾಗೂ ಮುಂದೆ ಎಲ್ಲಾ ಪೂಜಾಕಾರ್ಯಗಳಲ್ಲೂ ಗಣೇಶನಿಗೇ ಮೊದಲ ಪೂಜೆ’ ಎಂದು ಹೇಳಿ ಅವನಿಗೆ ಮೋದಕವನ್ನು ನೀಡಿದಳು.

ಆದ್ದರಿಂದಲೇ, ಯಜ್ಞ-ಯಾಗಾದಿಗಳು, ಪೂಜೆ- ಪುನಸ್ಕಾರಗಳು ಯಾವ ದೇವರಿಗೇ ಸಂಬಂಧ ಪಟ್ಟಿರಲಿ, ಮೊದಲು ಗಣೇಶನನ್ನು ಪೂಜಿಸಬೇಕು. ಅದರಿಂದ ಫಲವೂ ಹೆಚ್ಚು ಹಾಗೂ ಆ ಕಾರ್ಯಗಳು ನಿರ್ವಿಘ್ನವಾಗಿ ನೆರವೇರುವುವು. ಗಣೇಶ ಚತುರ್ಥಿಯಂದು ಬೆಳಗ್ಗೆ ಉಪವಾಸ ವಿದ್ದು ಅವನ ಪೂಜೆಯ ನಂತರವಷ್ಟೇ ಊಟ ಮಾಡಬೇಕು.

ಗಣೇಶನನ್ನು ನಾನಾ ವಿಧದ ಸ್ತೋತ್ರಗಳಿಂದ ಭಕ್ತಿಪೂರ್ವಕವಾಗಿ ಪೂಜಿಸಬೇಕು. ಗಣಪತಿ, ವಿಘ್ನರಾಜ, ಲಂಬೋದರ, ವಕ್ರತುಂಡ, ಗಜಾನನ, ದ್ವಯಮಾತುರ, ಹೇರಂಬ, ಏಕದಂತ, ಗಣಾಧೀಪ, ವಿನಾಯಕ, ಚಾರುಕರ್ಣ ಮತ್ತು ಭವಾತ್ಮಜ ಈ ಹನ್ನೆರಡು ನಾಮಗಳನ್ನು ಪ್ರಾತಃಕಾಲದಲ್ಲೇ ಜಪಿಸಿದರೆ, ಜೀವನದಲ್ಲಿ ಯಾವ ವಿಘ್ನಗಳೂ ಬಾಧಿಸುವುದಿಲ್ಲ.

ಉಪನಯನ, ವಿವಾಹಾದಿ ಮಂಗಳಕಾರ್ಯಗಳಲ್ಲಿ ಗಣೇಶನನ್ನು ಪೂಜಿಸಿದರೆ ಅವು ನಿರ್ವಿಘ್ನವಾಗಿ ನೆರವೇರಿ, ಅಕ್ಷಯಪುಣ್ಯ ಪ್ರಾಪ್ತಿಯಾಗುವುದು. ಪೂಜಾ ಕಲಶಗಳಲ್ಲಿ ‘ಗಣಾ ನಾಂ ತ್ವಾಂ’ ಎಂಬ ಮಂತ್ರದಿಂದ ಗಣೇಶನನ್ನು ಆವಾಹನೆ ಮಾಡಿ ಪೂಜಿಸಿದರೆ, ಕಾರ್ಯ ದಲ್ಲಿ ಸಂಪೂರ್ಣ ಸಿದ್ಧಿ ದೊರೆಯುವುದು, ಇದರಿಂದ ಸದ್ಗತಿಯೂ ಪ್ರಾಪ್ತಿಯಾಗುವುದು" ಎಂದು ಗಣೇಶನ ಮಹಿಮೆಯನ್ನು ವಿವರಿಸಿದರಂತೆ.

ತಂದೆ-ತಾಯಿಯರಿಗೆ ಮೂರು ಪ್ರದಕ್ಷಿಣೆ ಹಾಕಿ, ಅವರಲ್ಲೇ ಪ್ರಪಂಚವನ್ನೂ ಅದರ ಎಲ್ಲ ಒಳಿತನ್ನೂ ಕಂಡ ಗಣೇಶನ ಗುಣವು ಅವನನ್ನು ‘ಪ್ರಥಮ ಪೂಜಿತ’ನನ್ನಾಗಿಸಿತು. ನಾವು ಜೀವನದಲ್ಲಿ ಏನೇ ಸಾಧನೆ ಮಾಡಲಿ, ತಾಯಿ-ತಂದೆಯರಿಗೆ ಗೌರವ ನೀಡದಿದ್ದರೆ, ಆ ಸಾಧನೆ ಎಲ್ಲಾ ಶೂನ್ಯ. ಆಧುನಿಕ ಮಕ್ಕಳು ಬೆಳೆಯುತ್ತಾ ವಿದ್ಯಾವಂತರಾಗುತ್ತಾ, ತಂದೆ-ತಾಯಿಯರ ಬಗ್ಗೆ ಒಂದು ರೀತಿಯ ವಿಲಕ್ಷಣ ಧೋರಣೆಯನ್ನು ಬೆಳೆಸಿಕೊಂಡುಬಿಡುತ್ತಾರೆ.

ತಮಗೇ ಹೆಚ್ಚು ಗೊತ್ತಿರುವುದು, ತಂದೆ-ತಾಯಿಯರ ರೀತಿ-ನೀತಿಗಳು ಹಳೆಯ ಕಾಲದವು, ಅವರು ನಮ್ಮಂತೆ ಬದಲಾಗಬೇಕು, ಇಲ್ಲದಿದ್ದರೆ ಪ್ರಪಂಚ ಅವರನ್ನು ಒಪ್ಪಿಕೊಳ್ಳುವುದಿಲ್ಲ ಎಂಬ ನಿಲುವಿಗೆ ಅವರು ಬಂದುಬಿಡುತ್ತಾರೆ. ಆದರೆ, ನಮಗಿನ್ನೂ ನಿಲ್ಲಲುಬಾರದ, ಒಂದಗುಳು ತಿನ್ನಲೂ ಆಗದ ಸ್ಥಿತಿಯಿಂದ ನಮ್ಮನ್ನು ಸಾಕಿ-ಸಲಹಿ-ಬೆಳೆಸಿದ ತಂದೆ-ತಾಯಿ ಯರು ನಮಗೆ ಏನೆಲ್ಲಾ ಸೌಲಭ್ಯಗಳನ್ನು ಕೊಟ್ಟು, ಸ್ವತಂತ್ರವಾಗಿ ನಮ್ಮ ಕಾಲ ಮೇಲೆ ನಾವು ನಿಲ್ಲುವಂತೆ ಮಾಡಲಿಲ್ಲವೇ? ಹತ್ತಿದ ಮೇಲೆ ಏಣಿಯನ್ನು ತಳ್ಳಿದಂತೆ, ತಂದೆ ತಾಯಿ ಯರನ್ನು ಉಪೇಕ್ಷಿಸಬೇಡಿ. ಹೀಗೆ ಮಾಡಿದ ಯಾರೂ ಜೀವನದಲ್ಲಿ ಉದ್ಧಾರವಾಗಿಲ್ಲ.