ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lokesh Kaayarga Column: ಮತ್ತದೇ ಬೊಫೋರ್ಸ್‌ ಫಿರಂಗಿ ಸದ್ದು !

ಅಮೆರಿಕದ ಖಾಸಗಿ ಗೂಢಚರ, ಫೇರ್ ಫಾಕ್ಸ್ ಗ್ರೂಪ್‌ನ ಮುಖ್ಯಸ್ಥ ಮೈಕೆಲ್ ಹೆರ್ಷ್‌ಮನ್ ಬೊಫೋರ್ಸ್ ಹಗರಣ ಸಂಬಂಧ 2017ರಲ್ಲಿ ನೀಡಿದ ಹೇಳಿಕೆ ಆಧರಿಸಿ, ಹೆಚ್ಚಿನ ಮಾಹಿತಿ ಕೋರಿ ಸಿಬಿಐ ಅಮೆರಿಕದ ಮುಂದೆ ನ್ಯಾಯಾಂಗ ಕೋರಿಕೆ ಮಂಡಿಸಲು ಮುಂದಾಗಿದೆ. ಹಗರಣದ ಬಗ್ಗೆ ಮತ್ತೊಮ್ಮೆ ತನಿಖೆ‌ ನಡೆಸುವ ಸಿಬಿಐ ಮನವಿಯನ್ನು ಸುಪ್ರೀಂ ಕೋರ್ಟ್ ಈ ಹಿಂದೆಯೇ ತಿರಸ್ಕರಿಸಿದೆ. ಆದರೆ 37 ವರ್ಷಗಳ ಬಳಿಕ ಈ ಹಗರಣಕ್ಕೆ ಮತ್ತೊಮ್ಮೆ ಜೀವ ತುಂಬುವ ಪ್ರಯತ್ನ ನಡೆದಿದೆ.

ಮತ್ತದೇ ಬೊಫೋರ್ಸ್‌ ಫಿರಂಗಿ ಸದ್ದು !

ಕಾರ್ಯನಿರ್ವಾಹಕ ಸಂಪಾದಕ ಹಾಗೂ ಅಂಕಣಕಾರ ಲೋಕೇಶ್‌ ಕಾಯರ್ಗ

ಸಾಯಲಿಕ್ಕೂ ಬಿಡರು, ಬದುಕಲಿಕ್ಕೂ ಬಿಡರು’- ಬೊಫೋರ್ಸ್ ಹಗರಣಕ್ಕೆ ಇದಕ್ಕಿಂತ ಉತ್ತಮ ವ್ಯಾಖ್ಯಾನ ಇರಲಿಕ್ಕಿಲ್ಲ. ಇನ್ನೇನು ತೆರೆ ಬಿತ್ತು ಎನ್ನುವಷ್ಟರಲ್ಲಿ ಮತ್ತೆ ಸುದ್ದಿ ಮಾಡುವ ಹಗರಣಕ್ಕೆ ಈಗ ಬರೋಬ್ಬರಿ 37 ವರ್ಷ. ಹಲವರಿಗೆ ಇದು ಮರೆತ ವಿಷಯ. ಹೊಸ ಪೀಳಿಗೆಯಲ್ಲಿ ಅನೇಕರಿಗೆ ಅರಿಯದ ವಿಷಯ. ಆದರೆ ಬೊಫೋರ್ಸ್ ಫಿರಂಗಿಯ ಹೆಸರು ಬಂದಾಗಲೆಲ್ಲಾ ಅಧಿಕಾರದ ವಲಯದಲ್ಲಿ ಹೊಸ ಸಂಚಲನ ಮೂಡುತ್ತದೆ. ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗುತ್ತದೆ. ಆದರೆ ದೀಪಾವಳಿಯ ಪಟಾಕಿಯಂತೆ ಕೆಲವೇ ದಿನಗಳಲ್ಲಿ ಸುದ್ದಿಯ ಸದ್ದಡಗುತ್ತದೆ. ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಮತ್ತೆ ಅದೇ ಸದ್ದು. ಆರೋಪ, ಪ್ರತ್ಯಾರೋಪಗಳ ಪಟಾಕಿ.

1984ರ ಲೋಕಸಭೆ ಚುನಾವಣೆ ಯಲ್ಲಿ ಇಂದಿರಾ ಗಾಂಧಿ ಹತ್ಯೆಯ ಅನುಕಂಪದ ಅಲೆ ಏರಿ ಅಧಿಕಾರಕ್ಕೆ ಬಂದ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ 414 ಸ್ಥಾನಗಳನ್ನು ಪಡೆದು ಗೆಲುವು ಸಾಧಿಸಿದ್ದು ಇಂದಿಗೂ ದಾಖಲೆ.

ಇದನ್ನೂ ಓದಿ: Lokesh Kayarga Column: ಕೇಜ್ರಿವಾಲ್‌ ಎಂಬ ನಂಬಿಕೆಯ ಕಗ್ಗೊಲೆ

ಆದರೆ ಐದು ವರ್ಷಗಳ ಆಡಳಿತದ ನಂತರ 1989ರಲ್ಲಿ ನಡೆದ ಚುನಾವಣೆಯಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ಗೆದ್ದಿದ್ದು ಕೇವಲ 197 ಸ್ಥಾನಗಳು. ಇದಕ್ಕೆ ಕಾರಣ ವಾಗಿದ್ದು ಇದೇ ಬೊಫೋರ್ಸ್ ಹಗರಣ. ಸ್ವೀಡನ್ ದೇಶದ ಶಸಾಸ ತಯಾರಿಕಾ ಸಂಸ್ಥೆ ಬೊಫೋರ್ಸ್ ಕಂಪೆನಿಯಿಂದ 1434 ಕೋಟಿ ರು. ವೆಚ್ಚದಲ್ಲಿ 400 ಬೊಫೋರ್ಸ್ ಫಿರಂಗಿ ಖರೀದಿಸಲು ರಾಜೀವ್ ಸರಕಾರ 1986ರ ಮಾರ್ಚ್ 18ರಂದು ಒಪ್ಪಂದ ಮಾಡಿಕೊಂಡಿತ್ತು.

ಇದರಿಂದ ಭಾರತೀಯ ಭೂ ಸೇನೆಯ ಸಾಮರ್ಥ್ಯವನ್ನು ಮೇಲ್ದರ್ಜೆಗೇರಲಿದೆ ಎಂದು ಹೇಳ ಲಾಗಿತ್ತು. ಕಾರ್ಗಿಲ್ ಯುದ್ಧದಲ್ಲಿ ಬೊಫೋರ್ಸ್ ಗನ್ ಪಾತ್ರ ಗಮನಿಸಿದರೆ ಇದು ನಿಜವೂ ಆಗಿತ್ತು. ಆದರೆ ಈ ಒಪ್ಪಂದ ಏರ್ಪಟ್ಟು ಒಂದು ವರ್ಷದ ನಂತರ 1987ರ ಏಪ್ರಿಲ್ 16 ರಂದು ಸ್ವೀಡನ್‌ನ ರೇಡಿಯೋ ಪ್ರಸಾರ ಮಾಡಿದ ಸ್ಪೋಟಕ ಸುದ್ದಿ ಭಾರತದ ರಾಜ ಕಾರಣದ ದಿಕ್ಕುದೆಶೆ ಬದಲಿಸುವಂತೆ ಮಾಡಿತು. ಬೊಫೋರ್ಸ್ ತೋಪುಗಳ ಖರೀದಿ ಕುದುರಿ ಸಲು ಸ್ವೀಡಿಸ್ ಕಂಪನಿ ಭಾರತದ ಪ್ರಮುಖ ರಾಜಕಾರಣಿಗಳು ಮತ್ತು ಸೇನಾಧಿಕಾರಿಗಳಿಗೆ ಭಾರಿ ಮೊತ್ತದ ಲಂಚ ನೀಡಿದೆ ಎಂದು ರೇಡಿಯೋದಲ್ಲಿ ಸುದ್ದಿ ಬಿತ್ತರವಾಗಿತ್ತು.

ಅಂತಿಮವಾಗಿ ರಾಜೀವ್ ಗಾಂಧಿ ಅವರೇ 64 ಕೋಟಿ ರು. ಹಗರಣದ ಪ್ರಮುಖ ರೂವಾರಿ ಎಂದು ದೇಶದ ಮತದಾರರನ್ನು ನಂಬಿಸುವಲ್ಲಿ ಪ್ರತಿಪಕ್ಷಗಳು ಯಶಸ್ವಿಯಾಗಿದ್ದವು. ಸೋನಿಯಾ ಗಾಂಧಿ ಅವರ ಕುಟುಂಬದ ನಿಕಟವರ್ತಿ ಎನ್ನಲಾದ ಇಟಲಿ ಮೂಲದ ಉದ್ಯಮಿ ಒಟ್ಟಾವಿಯೊ ಕ್ವಟ್ರೋಕಿ ಈ ಹಗರಣದಲ್ಲಿ ಮುಖ್ಯ ಆರೋಪಿಯಾಗಿದ್ದು ಸಂಶ ಯಕ್ಕೆ ಇನ್ನಷ್ಟು ಪುಷ್ಟಿ ನೀಡುವಂತಿತ್ತು.

ಈ ಹಗರಣದ ಕಾರಣಕ್ಕೆ ಅಧಿಕಾರ ಕಳೆದುಕೊಂಡ ರಾಜೀವ್ ಗಾಂಧಿ ಅವರು ಮತ್ತೆಂದೂ ಪ್ರಧಾನಿ ಹುದ್ದೆಗೆ ಏರಲು ಸಾಧ್ಯವಾಗಲಿಲ್ಲ. ಈ ಹಗರಣವನ್ನೇ ಪ್ರಧಾನ ಭೂಮಿಕೆ ಯನ್ನಾಗಿಸಿ ಅಧಿಕಾರಕ್ಕೆ ಬಂದ ಪ್ರತಿಪಕ್ಷಗಳಿಗೂ ಹಗರಣಕ್ಕೆ ತಾರ್ಕಿಕ ಅಂತ್ಯ ಕಾಣಿಸಲು ಸಾಧ್ಯವಾಗಲಿಲ್ಲ.

ಹಗರಣದ ತನಿಖೆಯ ಹೊಣೆ ಹೊತ್ತ ಸಿಬಿಐಗೆ ಆರೋಪ ಸಾಬೀತುಪಡಿಸುವುದು ಬಿಡಿ, ಆರೋಪಿಗಳನ್ನು ಕನಿಷ್ಠ ಒಂದು ಬಾರಿ ಮುಖಾಮುಖಿ ವಿಚಾರಣೆಗೊಳಪಡಿಸಲು, ಕಟ ಕಟೆಗೆ ತರಲು ಸಾಧ್ಯವಾಗಲಿಲ್ಲ. ಸಿಬಿಐ ಆರೋಪ ಪಟ್ಟಿ ಸಲ್ಲಿಸುವ ಮೊದಲೇ ರಾಜೀವ್ ಗಾಂಧಿ ಬಾಂಬ್ ಸ್ಪೋಟಕ್ಕೆ ಬಲಿ ಯಾಗಿದ್ದರು. ಆರೋಪಿ ಸ್ಥಾನದಲ್ಲಿ ನಿಂತಿದ್ದ ಬೊಫೋ ರ್ಸ್ ಸಂಸ್ಥೆಯ ಅಧ್ಯಕ್ಷ ಮಾರ್ಟಿನ್ ಅಡ್ಬೊರ್, ಒಟ್ಟಾವಿಯೊ ಕ್ವಟ್ರೋಕಿ, ಲಂಚ ವ್ಯವಹಾ ರದಲ್ಲಿ ದಳಿಯ ಕೆಲಸ ಮಾಡಿದ್ದರೆನ್ನಲಾದ ವಿನ್ ಚೆಡ್ಡಾ, ಹಿಂದೂಜಾ ಸಹೋದರರು, ಆಗಿನ ರಕ್ಷಣಾ ಇಲಾಖೆಯ ಕಾರ‍್ಯದರ್ಶಿ ಆಗಿದ್ದ ಎಸ್.ಕೆ.ಭಟ್ನಾಗರ್ ಸೇರಿದಂತೆ ಎಲ್ಲರೂ ಆರೋಪ ಮುಕ್ತರಾದರು. ಈಗ ಇವರೆಲ್ಲರೂ ಇಹಲೋಕದಿಂದಲೂ ಮುಕ್ತರಾಗಿದ್ದಾರೆ.

ಮತ್ತದೇ ಸದ್ದು

ಇದೀಗ ಮೂರೂವರೆ ದಶಕಗಳ ಬಳಿಕ ಇದೇ ಹಗರಣದ ಸಂಬಂಧ ವಿವರ ಕೋರಿ ಅಮೆ ರಿಕಕ್ಕೆ ಸಿಬಿಐ ನ್ಯಾಯಾಂಗ ಕೋರಿಕೆ ರವಾನಿಸಿದೆ. ಬೊಫೋರ್ಸ್ ಹಗರಣದ ಕುರಿತು ತನ್ನ ಬಳಿ ಹೆಚ್ಚಿನ ಮಾಹಿತಿ ಇದೆ ಎಂದಿದ್ದ ಅಮೆರಿಕದ ಖಾಸಗಿ ಗೂಢಚರ, ಫೇರ್ ಫಾಕ್ಸ್ ಗ್ರೂಪ್‌ನ ಮುಖ್ಯಸ್ಥ ಮೈಕೆಲ್ ಹೆರ್ಷ್‌ಮನ್ ಅವರಿಂದ ಮಾಹಿತಿ ಸಂಗ್ರಹದ ಸಲುವಾಗಿ ಸಿಬಿಐ ಈ ನ್ಯಾಯಾಂಗ ಕೋರಿಕೆ ರವಾನಿಸಿದೆ.

ಸಿಬಿಐ ನಡೆಯ ಹಿಂದೆ ಕೇಂದ್ರ ಸರಕಾರದ ಒತ್ತಾಸೆ ಇರುವುದು ಸ್ಪಷ್ಟ. ಕಾಂಗ್ರೆಸ್ ಪಕ್ಷವನ್ನು ಬೆಂಬಿಡದ ಭೂತವಾಗಿ ಕಾಡುತ್ತಿರುವ ಬೊಫೋರ್ಸ್ ಹಗರಣದಲ್ಲಿ ರಾಜೀವ್ ಗಾಂಧಿ ಇಲ್ಲವೇ ಕ್ವಟ್ರೋಕಿ ಪಾತ್ರದ ಬಗ್ಗೆ ಒಂದೆಳೆ ಸಿಕ್ಕಿದರೂ ಮೋದಿ ಸರಕಾರಕ್ಕೆ ಅದುವೇ ಬೋನಸ್. ಹೆರ್ಷ್‌ಮನ್ 2017ರಲ್ಲಿ ಸಮ್ಮೇಳನವೊಂದರಲ್ಲಿ ಭಾಗವಹಿಸಲು ಭಾರತಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ,“ ಕಾಂಗ್ರೆಸ್ ಪಕ್ಷ ಹಗರಣದ ತನಿಖೆಯನ್ನು ಹಳಿ ತಪ್ಪಿಸಿತ್ತು. ಸಿಬಿಐ ಕೋರಿದರೆ ಅದರ ಜೊತೆ ವಿವರ ಹಂಚಿಕೊಳ್ಳಲು ಸಿದ್ಧ" ಎಂದು ಹೇಳಿ ದ್ದರು.

“ವಿದೇಶಗಳಲ್ಲಿ ಇರುವ ಭಾರತೀಯರು ಕರೆನ್ಸಿ ನಿಯಂತ್ರಣ ಕಾನೂನುಗಳನ್ನು ಉಲ್ಲಂಘಿಸಿ ದ್ದರೆ, ಹಣದ ಅಕ್ರಮ ವರ್ಗಾವಣೆಯಲ್ಲಿ ತೊಡಗಿದ್ದರೆ ಅದರ ಬಗ್ಗೆ ತನಿಖೆ ನಡೆಸಲು ಮತ್ತು ಅಂತಹ ಆಸ್ತಿಗಳ ಮೇಲೆ ಕಣ್ಣಿಡಲು ಕೇಂದ್ರ ಹಣಕಾಸು ಸಚಿವಾಲಯವು 1986ರಲ್ಲಿ ತಮ್ಮನ್ನು ನೇಮಿಸಿತ್ತು. ಆ ಪೈಕಿ ಕೆಲವು ಆಸ್ತಿಗಳು ಬೊಫೋರ್ಸ್ ಒಪ್ಪಂದಕ್ಕೆ ಸಂಬಂಧಿ ಸಿದವು" ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದರು.

ಇದಾದ ಮರು ತಿಂಗಳಲ್ಲೇ ಹಗರಣದ ಮರು ತನಿಖೆ ಕೋರಿ ಸಿಬಿಐ ಸುಪ್ರೀಂ ಕೋರ್ಟ್ ಮುಂದೆ ಅರ್ಜಿ ಸಲ್ಲಿಸಿತ್ತು. ಆದರೆ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಅವರ ನೇತೃತ್ವದ ನ್ಯಾಯಪೀಠ ಅರ್ಜಿ ಸಲ್ಲಿಕೆ ವೇಳೆ ಆಗಿರುವ ವಿಳಂಬವನ್ನು ಪರಿಗಣಿಸಿ ಮರು ತನಿಖೆ ಸಾಧ್ಯವಿಲ್ಲ ಎಂದು ಸಿಬಿಐ ಅರ್ಜಿಯನ್ನು ತಳ್ಳಿ ಹಾಕಿತ್ತು. ಇದಾಗಿ ಎಂಟು ವರ್ಷಗಳ ಬಳಿಕ ಗುಜರಿ ಸೇರಿದ್ದ ಬೊಫೋರ್ಸ್ ಫಿರಂಗಿಯನ್ನು ಸಿಬಿಐಗೆ ಕೈ ಕೊಟ್ಟು ಮತ್ತೊಮ್ಮೆ ಕಾಂಗ್ರೆಸ್ ವಿರುದ್ಧ ಟೀಕಾಸ್ತ್ರವಾಗಿ ಬಳಸಲು ಮೋದಿ ಸರಕಾರ ಯೋಜನೆ ರೂಪಿಸಿದೆ.

ಸಿಬಿಐ ಎಂಬ ಅಧಿಕಾರಸ್ಥರ ಕೈ ಗೊಂಬೆ ಆಯಾ ಸರಕಾರಗಳ ತಾಳಕ್ಕೆ ತಕ್ಕಂತೆ ಸಿಬಿಐ ಹೆಸರಿನ ತನಿಖಾ ಸಂಸ್ಥೆ ಹೇಗೆ ಕುಣಿಯಬೇಕಾಗುತ್ತದೆ ಎನ್ನುವುದಕ್ಕೆ ಬೊಫೋರ್ಸ್ ಹಗರಣ ಅತ್ಯುತ್ತಮ ಉದಾಹರಣೆ. ಬೊಫೋರ್ಸ್ ಹಗರಣವನ್ನೇ ಪ್ರಧಾನ ಅಸ್ತ್ರವಾಗಿಸಿಕೊಂಡು ಅಧಿಕಾರಕ್ಕೆ ಬಂದ ವಿ.ಪಿ. ಸಿಂಗ್ ಸರಕಾರ ಸಿಬಿಐ ತನಿಖೆಗೆ ಆದೇಶ ನೀಡಿತ್ತು.

ಆದರೆ ವರ್ಷ ಕಳೆಯುವ ಮುನ್ನವೇ ಅಧಿಕಾರ ಕಳೆದುಕೊಂಡ ಸರಕಾರಕ್ಕೆ ಈ ನಿಟ್ಟಿನಲ್ಲಿ ಏನನ್ನೂ ಮಾಡಲಾಗಲಿಲ್ಲ. ನಂತರ ಬಂದ ಚಂದ್ರಶೇಖರ್ ಅವರ ಸರಕಾರ ಕಾಂಗ್ರೆಸ್ ಬೆಂಬಲವನ್ನು ನೆಚ್ಚಿಕೊಂಡಿತ್ತು. ಬಳಿಕ 1991ರಿಂದ 1996ರ ತನಕ ಪೂರ್ಣಾವಧಿಗೆ ಸರಕಾರ ನಡೆಸಿದ ನರಸಿಂಹ ಸರಕಾರ ಇದೇ ತನಿಖಾ ಸಂಸ್ಥೆಯನ್ನು ಬಳಸಿಕೊಂಡು ಈ ಹಗರಣಕ್ಕೆ ಸಮಾಧಿ ತೋಡುವ ಕೆಲಸ ಮಾಡಿತು.

ಬೊಫೋರ್ಸ್ ಹಗರಣದ ತನಿಖೆಯಲ್ಲಿ ಮುಖ್ಯ ಘಟ್ಟವಾಗಿದ್ದ ಈ ಅವಧಿಯಲ್ಲಿ ಸಿಬಿಐ ಮನವಿ ಮೇರೆಗೆ ಬ್ರಿಟನ್‌ನಲ್ಲಿ ಉದ್ಯಮಿ ಒಟ್ಟಾವಿಯೋ ಕ್ವಟ್ರೋಕಿ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಆದರೆ ಇದೇ ಸಿಬಿಐ, ಬಳಿಕ ಕ್ವಟ್ರೋಕಿಗೆ ಬೊಫೋ ರ್ಸ್ ಕಂಪನಿಯಿಂದ ಕಮಿಷನ್ ರೂಪದಲ್ಲಿ ಹಣ ಪಡೆದಿದ್ದಾರೆ ಎನ್ನಲು ತನ್ನ ಬಳಿ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ ಎಂದು ಅಫಿಡವಿಟ್ ಸಲ್ಲಿಸಿತ್ತು. ಈ ಅಫಿಡವಿಟ್ ಆಧಾರದಲ್ಲಿ ಲಂಡನ್‌ನ ಬಿಎಸ್‌ಐಎಜಿ ಬ್ಯಾಂಕಿನಲ್ಲಿದ್ದ ಕ್ವಟ್ರೋಕಿಯ ಎರಡು ಬ್ಯಾಂಕ್ ಖಾತೆಗಳ ಮೇಲಿನ ದಿಗ್ವಂಧನವನ್ನು ಬ್ರಿಟನ್ ನ್ಯಾಯಾಲಯ ರದ್ದುಪಡಿಸಿತ್ತು.

ಬ್ರಿಟನ್ ಕೋರ್ಟ್ ಆದೇಶ ಕೈ ಸೇರಿದ ಮರುದಿನವೇ ಕ್ವಟ್ರೋಕಿ ತನ್ನ ಎರಡೂ ಬ್ಯಾಂಕ್ ಖಾತೆಗಳಲ್ಲಿದ್ದ ಸುಮಾರು 21 ಕೋಟಿ ರೂ.ಗಳನ್ನು ಪತ್ನಿ ಮಾರಿಯಾಳ ಹೆಸರಿಗೆ ವರ್ಗಾ ಯಿಸಿದ್ದ. ಬ್ಯಾಂಕ್ ಖಾತೆಗಳ ಮರುಸ್ಥಂಭನಕ್ಕೆ ಕ್ರಮಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಸಿಬಿಐಗೆ ಸೂಚಿಸುವಷ್ಟರಲ್ಲಿ ಈ ಖಾತೆಯಲ್ಲಿದ್ದ ಹಣ ಖಾಲಿಯಾಗಿತ್ತು. ಸಿಬಿಐ ಬಯಸಿದರೆ ’ಘೋಷಿತ ಅಪರಾಧಿ’ ಕ್ವಟ್ರೋಕಿ ಆಸ್ತಿ ಮುಟ್ಟುಗೋಲು ಹಾಕಲು ಕಷ್ಟವೇನೂ ಇರಲಿಲ್ಲ.

ಒರಿಸ್ಸಾದಲ್ಲಿ ಕ್ವಟ್ರೋಕಿಗೆ ಸೇರಿದ ವಿದ್ಯುತ್ ಕಂಪೆನಿ ಆ ಸಮಯದಲ್ಲಿ ಕಾರ್ಯಾಚರಣೆ ನಡೆಸುತ್ತಿತ್ತು. ! ಕ್ವಟ್ರೋಕಿಯನ್ನು ದೋಷಮುಕ್ತಗೊಳಿಸಲು ಅಂದು ಸಿಬಿಐ ಸ್ವತಃ ವಕಾಲತ್ತು ವಹಿಸಿತ್ತು. ಪಿ.ವಿ. ನರಸಿಂಹ ರಾವ್ ಸರಕಾರದಲ್ಲಿ ಕಾನೂನು ಸಚಿವರಾಗಿದ್ದ, ಕರ್ನಾಟಕದ ರಾಜ್ಯಪಾಲರಾಗಿಯೂ ಹಲವು ವರ್ಷ ಸೇವೆ ಸಲ್ಲಿಸಿದ ಹಂಸ್‌ರಾಜ್ ಭಾರ ಧ್ವಾಜ್ ಅಂದು ರಾಜೀವ್ ಕುಟುಂಬದ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದರು.

ಅಡಿಷನಲ್ ಸಾಲಿಸಿಟರ್ ಜನರಲ್ ಬಿ.ದತ್ತಾ ಖುದ್ದಾಗಿ ಬ್ರಿಟನ್‌ಗೆ ಧಾವಿಸಿ ಕ್ವಟ್ರೋಕಿ ವಿರುದ್ಧ ಸಿಬಿಐ ಬಳಿ ಸಾಕ್ಷ್ಯಗಳಿಲ್ಲ ಎಂದು ಅಫಿಡವಿಟ್ ಸಲ್ಲಿಸುವಲ್ಲಿ ಭಾರಧ್ವಾಜ್ ನಿರ್ದೇ ಶನವಿತ್ತು. ದಿಲ್ಲಿಯ ನ್ಯಾಯಾಲಯ 2004ರ ಮೇ 31 ರಂದು ನೀಡಿದ ತೀರ್ಪಿನಲ್ಲಿ ಈ ಹಗರಣದಲ್ಲಿ ರಾಜೀವ್ ಕುಟುಂಬವನ್ನು ದೋಷಮುಕ್ತಗೊಳಿಸಿದೆಯಾರೂ ಕ್ವಟ್ರೋಕಿ ಮತ್ತು ರಾಜೀವ್ ಕುಟುಂಬದ ನಂಟನ್ನು ಅಲ್ಲಗಳೆಯಲು ಈವರೆಗೂ ಸಾಧ್ಯವಾಗಿಲ್ಲ.

ಬೊಫೋರ್ಸ್ ಹಗರಣ ಬಯಲಾಗುವ ಮುನ್ನ ಕ್ವಟ್ರೋಕಿ ಕುಟುಂಬ ಮತ್ತು ರಾಜೀವ್ ಕುಟುಂಬ ನಿಕಟ ಸ್ನೇಹ ಹೊಂದಿತ್ತು ರಾಜೀವ್ ಕುಟುಂಬದ ಸದಸ್ಯರು ಇಟಲಿಗೆ ಭೇಟಿ ನೀಡಿದಾಗಲೆ ಕ್ಟಟ್ರೋಕಿ ಮನೆಗೆ ಭೇಟಿ ನೀಡುತ್ತಿದ್ದರು. ಹಾಗೆಯೇ ಕ್ವಟ್ರೋಕಿಗೆ 10 ಜನಪಥ್ ನಿವಾಸಕ್ಕೆ ಮುಕ್ತ ಪ್ರವೇಶಾವಕಾಶವಿತ್ತು.

ಖಾತೆ ನಿರ್ಬಂಧ ರದ್ದಾದ ಬೆನ್ನಿಗೇ “ ಸೋನಿಯಾ ಕುಟುಂಬದೊಂದಿಗೆ ನನಗೆ ಈಗಲೂ ನಂಟಿದೆ. ಈ ಬಗ್ಗೆ ಹೆಮ್ಮೆಯಿದೆ" ಎಂದು ಕ್ವಟ್ರೋಕಿ ಹೇಳಿಕೊಂಡಿದ್ದರು. ಈಗ ಹೊರಬರು ತ್ತಿರುವ ಸಹಸ್ರ ಕೋಟಿ ರೂ. ಮೊತ್ತದ ಹಗರಣಗಳಿಗೆ ಹೋಲಿಸಿದರೆ ಬೊಪೋರ್ಸ್ ಹಗರಣ ಸಾಸಿವೆ ಕಾಳಿಗೆ ಸಮ. 64 ಕೋಟಿ ರು. ಹಗರಣದ ವಿಚಾರಣೆಗೆ 250 ಕೋಟಿ ರೂಪಾಯಿ ವ್ಯಯಿಸಿದ್ದಕ್ಕೆ ದಿಲ್ಲಿ ಹೈಕೋರ್ಟ್ ಸಿಬಿಐಗೆ ಛೀಮಾರಿ ಹಾಕಿತ್ತು.

ನಂತರ ತನಿಖೆ ಮುಂದುವರಿಸುವ ಬಿಜೆಪಿ ಸರಕಾರದ ಮನವಿಗೆ ಸುಪ್ರೀಂಕೋರ್ಟ್ ಕೆಂಪು ನಿಶಾನೆ ತೋರಿಸಿತ್ತು. ಆದರೆ ದೇಶದ ಪ್ರಧಾನಿಯನ್ನೇ ಸಂಶಯದ ದೃಷ್ಟಿಯಲ್ಲಿ ನೋಡು ವಂತೆ ಮಾಡಿದ ಈ ಹಗರಣಕ್ಕೆ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಹೆಚ್ಚಿನ ಮಹತ್ವವಿದೆ. ದೇಶದ ರಕ್ಷಣೆಗೆ ಸಂಬಂಧಿಸಿದ ಈ ಹಗರಣ ಸ್ವತಂತ್ರ ಭಾರತದ ಮೊಟ್ಟ ಮೊದಲ ರಾಜ ಕೀಯ ಹಗರಣವೂ ಹೌದು.

ಎರಡೂ ದೇಶಗಳಲ್ಲಿ ಟ್ರಂಪ್ ಮತ್ತು ಮೋದಿ ಎಂಬ ದೋಸ್ತಿ ಸರಕಾರವಿದೆ. ಈ ಹಂತದಲ್ಲಿ ಬೊಫೋರ್ಸ್ ಬಗ್ಗೆ ಹೆಚ್ಚಿನ ಮಾಹಿತಿ ಕೋರಿ ಸಿಬಿಐ ಸಲ್ಲಿಸಿರುವ ನ್ಯಾಯಾಂಗ ಕೋರಿಕೆಗೆ ಅಲ್ಲಿನ ನ್ಯಾಯಾಂಗ ಮತ್ತು ಸರಕಾರ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂದು ಕಾದು ನೋಡಬೇಕಾಗಿದೆ.