ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vinayaka M Bhat Column: ಅನುಭವಾಮೃತ: ವೇದಾಂತ ಸಾಹಿತ್ಯ ಸರದ ಶಿಖಾಮಣಿ

19ನೇ ಮತ್ತು 20ನೇ ಶತಮಾನದ ಪಠ್ಯಗ್ರಂಥಗಳಲ್ಲಿ ಅನುಭವಾಮೃತದ ಪದ್ಯಗಳು ಇರುತ್ತಿದ್ದವು. ಹಾಗಾಗಿ ವಿದ್ಯಾರ್ಥಿಗಳಿಗೆ ಅನೇಕ ಪದ್ಯಗಳು ಕಂಠಪಾಠವಾಗಿರುತ್ತಿತ್ತು. ಕನ್ನಡದ ಮೊದಲ ಪಠ್ಯವೆನ್ನಿಸಿದ ‘ಪ್ರಾಕಾವ್ಯಮಾಲಿಕೆ’ಯಲ್ಲಿ ಅನುಭವಾಮೃತದ ಹತ್ತಾರು ಪದ್ಯಗಳು ಪ್ರಕಟ ವಾಗಿತ್ತಂತೆ. ಈಚಿನ ಪಠ್ಯಗಳಲ್ಲಿ ಕನ್ನಡದ ಎಷ್ಟೋ ಶ್ರೇಷ್ಠ ಕವಿಗಳ ಪದ್ಯಗಳು ಬಿಟ್ಟು ಹೋದ ಹಾಗೆ ಅನುಭವಾಮೃತದ ಪದ್ಯಗಳೂ ಬಿಟ್ಟು ಹೋಗಿವೆ.

ವಿದ್ಯಮಾನ

ಶಾಸ್ತ್ರಬದ್ಧವಾದ ಜೀವನಕ್ರಮವನ್ನು ರೂಢಿಸಿಕೊಳ್ಳಲು ಸರಳವಾದ ಉಕ್ತಿಗಳಿಂದ ಬೋಧಿಸಲು ಸಂಸ್ಕೃತದಲ್ಲಿಯಾದರೆ, ಶ್ರೀ ಶಂಕರ ಭಗವತ್ಪಾದರ ಉಪದೇಶ ಸಾಹಸ್ರಿಯಿದೆ, ವಿವೇಕ ಚೂಡಾ ಮಣಿಯಿದೆ ಭ್ರತೃಹರಿಯ ನೀತಿ ಶತಕವಿದೆ ಅಥವಾ ಇಂಥಾ ಇನ್ನೂ ಅನೇಕ ಗ್ರಂಥಗಳಿವೆ. ಈ ಎಲ್ಲ ಸಂಸ್ಕೃತ ಗ್ರಂಥಗಳಿಗೆ ಸರಿಸಮಾನವಾಗಿ ನಿಲ್ಲಬಲ್ಲ ಗ್ರಂಥ ಕನ್ನಡದಲ್ಲಿ ಯಾವುದಾದರೂ ಇದೆಯಾ ಎಂದು ನೋಡಿದರೆ ಯಾವುದೂ ಸಿಗುವುದೇ ಇಲ್ಲ, ಅಥವಾ ಇರುವುದು ನಮಗೆ ಗೊತ್ತಿಲ್ಲ.

ನಮಗೆ ಗೊತ್ತಿರುವುದು ಮಂಕುತಿಮ್ಮನ ಕಗ್ಗ, ಸ್ವಲ್ಪ ಹಿಂದೆ ಹೋದರೆ ಸರ್ವಜ್ಞನ ವಚನ ಗಳು ಅಷ್ಟೆ. ಮಹಲಿಂಗರಂಗರ ‘ಅನುಭವಾಮೃತ’ ಕಾವ್ಯ ಎನ್ನುವ ಕನ್ನಡದ ಗ್ರಂಥ ವೊಂದು ಆ ಸಾಲಿನಲ್ಲಿ ನಿಲ್ಲಬಹುದಾದ ಗ್ರಂಥವಾಗಿದೆ.

ಅನೇಕ ಸಂಸ್ಕೃತ ಪ್ರಾಚೀನ ಗ್ರಂಥಗಳು ಕನ್ನಡಕ್ಕೆ ಅನುವಾದವಾಗಿದ್ದಿದೆ, ಅದರನೂ ವಿಶೇಷವಿಲ್ಲ, ಆದರೆ ನಾನು ಹೇಳಹೊರಟಿರುವ ಮಹಲಿಂಗರಂಗರ ‘ಅನುಭವಾಮೃತ’ ಕಾವ್ಯ ಎನ್ನುವ ಕನ್ನಡದ ಗ್ರಂಥವೊಂದು ಸಂಸ್ಕೃತ ಭಾಷೆಗೆ ಅನುವಾದವಾದ ಅಪರೂಪ ದ ಕೃತಿಯಾಗಿದೆ. ಕಾರಣ ಅದು ಅಷ್ಟು ಸತ್ವಪೂರ್ಣವಾಗಿದೆ.

ನಮಗೆಲ್ಲ ಮಹಲಿಂಗರಂಗರೆಂದರೆ ಯಾರು ಎನ್ನುವುದು ಗೊತ್ತೇ ಇಲ್ಲ, ಅಥವಾ ಗೊತ್ತಿದ್ದ ನಮ್ಮ ಹಿಂದಿನವರು ಇವತ್ತಿಗೆ ಅವರನ್ನು ಮರೆತು ಬಿಟ್ಟಿದ್ದಾರೆ. ಸುಲಿದ ಬಾಳೆಯ ಹಣ್ಣಿನಂದದಿ ಕಳೆದ ಸಿಗುರಿನ ಕಬ್ಬಿನಂದದಿ ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿ ರ್ಪಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊಳು ತನ್ನ ಮೋಕ್ಷವ ಗಳಿಸಿಕೊಂಡರೆ ಸಾಲದೇ? ಸಂಸ್ಕೃತ ದಲಿನ್ನೇನು? ಎನ್ನುವ ಪದ್ಯವೊಂದಿದೆ.

ಮೋಕ್ಷಸಾಧನೆ ಪ್ರಧಾನವಾಗಿದೆ, ಅದಕ್ಕೆ ಸುಲಿದಿಟ್ಟ ಬಾಳೆಹಣ್ಣಿನಷ್ಟು, ಸಿಪ್ಪೆ ತೆಗೆದಿಟ್ಟ ಕಬ್ಬಿನಷ್ಟು, ಬಿಸಿಯಾರಿಸಿಟ್ಟ ಹಾಲಿನಷ್ಟು ಸೌಲಭ್ಯಪೂರ್ಣವಾದ ಕನ್ನಡ ಭಾಷೆಯ ಮೂಲಕ ಮೋಕ್ಷ ಸಾಧನ ಸಾಮಗ್ರಿಗಳನ್ನು ಸಾಧಿಸಿದರಾಗದೇ? ಸಂಸ್ಕೃತವೇ ಆಗಬೇಕೆ? ಎನ್ನುವುದು ಈ ಪದ್ಯದ ಸಾರ. ಈ ಪದ್ಯವನ್ನು ನಾವು ಕನ್ನಡಿಗರು ಬಹಳ ಕೇಳಿದ್ದೇವೆ, ಕನ್ನಡದ ವಿಷಯ ಬಂದಾಗಲೆಲ್ಲ ಉಲ್ಲೇಖವಾಗುವ ಪದ್ಯ ಇದು, ಆದರೆ ಈ ಪದ್ಯ ಯಾವ ಸಾಹಿತ್ಯ ಸರದ ಶಿಖಾ ಮಣಿ? ಇದರ ರಚಿತರು ಯಾರು ಎಂದು ಕೇಳಿದರೆ ಗೊತ್ತಿಲ್ಲ ಎನ್ನುವ ಉತ್ತರವೇ ನಮಗೆ ದೊರೆಯುತ್ತೆ.

ಇದನ್ನೂ ಓದಿ: Vinayaka V Bhat Column: ಇಂದಿನ ಪತ್ರಕರ್ತರಿಗೆ ನಾರದರು ಆದರ್ಶವಾಗಬೇಕು !

ಸಾಮಾನ್ಯವಾಗಿ ಬಳಸಲ್ಪಡುವ ಈ ಭಾಮಿನಿಷಟ್ಪದಿಯಲ್ಲಿರುವ ಪದ್ಯ ಮಹಲಿಂಗ ರಂಗರ ಇದೇ ಅನುಭವಾಮೃತ ಕಾವ್ಯದ್ದು. ಮಹಲಿಂಗರಂಗರನ್ನು ಇಂದಿನ ಕನ್ನಡಿಗರಿಗೆ ಪರಿಚಯಿಸುವುದಾದರೆ ಈ ಪದ್ಯದ ಮೂಲಕ ಪರಿಚಯಿಸುವುದು ಸುಲಭವಾಗ ಬಹುದೇನೋ!

ಒಂದು ಕಾಲದಲ್ಲಿ ಕನ್ನಡದಲ್ಲಿ ‘ಅನುಭವಾಮೃತ’ದ ಜನಪ್ರಿಯತೆ ಎಷ್ಟಿತ್ತೆಂದರೆ, ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅದ್ವೈತ ತತ್ತ್ವವನ್ನು ನಿರೂಪಿಸಿರುವ ಕಾವ್ಯ ಗ್ರಂಥಗಳಲ್ಲಿ ಮಹಲಿಂಗರಂಗರ ಅನುಭವಾಮೃತ ಕಾವ್ಯಕ್ಕೆ ಸರಿಸಾಟಿಯಾದ ಕಾವ್ಯ ಇನ್ನೊಂದಿಲ್ಲ ಎನ್ನುವಷ್ಟಿತ್ತು.

ಸರ್ವಜ್ಞನ ವಚನ, ಸೋಮೇಶ್ವರ ಶತಕ, ಕನಕದಾಸರ ಹರಿಭಕ್ತಿಸಾರ, ಪುರಂದರರ ಕೀರ್ತನೆ ಗಳು, ಕುಮಾರವ್ಯಾಸಭಾರತ, ಜೈಮಿನಿಭಾರತ, ತೊರವೆ ರಾಮಾಯಣದ ಕಾವ್ಯಗಳ ಹಾಗೆ ಜನರ ಬಾಯಲ್ಲಿ ನಲಿದಾಡುತ್ತಿದ್ದ ಕಾವ್ಯಗಳಲ್ಲಿ ಅನುಭವಾಮೃತ ಕಾವ್ಯವೂ ಒಂದಾಗಿತ್ತು.

19ನೇ ಮತ್ತು 20ನೇ ಶತಮಾನದ ಪಠ್ಯಗ್ರಂಥಗಳಲ್ಲಿ ಅನುಭವಾಮೃತದ ಪದ್ಯಗಳು ಇರು ತ್ತಿದ್ದವು. ಹಾಗಾಗಿ ವಿದ್ಯಾರ್ಥಿಗಳಿಗೆ ಅನೇಕ ಪದ್ಯಗಳು ಕಂಠಪಾಠವಾಗಿರುತ್ತಿತ್ತು. ಕನ್ನಡದ ಮೊದಲ ಪಠ್ಯವೆನ್ನಿಸಿದ ‘ಪ್ರಾಕಾವ್ಯಮಾಲಿಕೆ’ಯಲ್ಲಿ ಅನುಭವಾಮೃತದ ಹತ್ತಾರು ಪದ್ಯ ಗಳು ಪ್ರಕಟವಾಗಿತ್ತಂತೆ. ಈಚಿನ ಪಠ್ಯಗಳಲ್ಲಿ ಕನ್ನಡದ ಎಷ್ಟೋ ಶ್ರೇಷ್ಠ ಕವಿಗಳ ಪದ್ಯಗಳು ಬಿಟ್ಟುಹೋದಹಾಗೆ ಅನುಭವಾಮೃತದ ಪದ್ಯಗಳೂ ಬಿಟ್ಟು ಹೋಗಿವೆ.

ಆದರೆ, ಇಂದೂ ಜನರ ನಾಲಿಗೆಯ ಮೇಲೆ ಸುಳಿದಾಡುತ್ತಿರುವ ‘ಸುಲಿದ ಬಾಳೆಯಣ್ಣಿ ನಂದದಿ’ ಪದ್ಯ ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇದು ಭಾಮಿನಿ ಷಟ್ಪದಿಯಲ್ಲಿ ರಚಿತವಾದ ಅದ್ವೈತ ದರ್ಶನದ ಕಾವ್ಯ ಎಂದು ಹೇಳಲಾಗುತ್ತದೆ.

ಅತ್ಯಂತ ಕ್ಲಿಷ್ಟ ವೇದಾಂತ ತತ್ವಗಳನ್ನು ಈ ಕಾವ್ಯದಲ್ಲಿ ಅತಿ ಸರಳವಾಗಿ ಹೇಳಲಾಗಿದೆ. ಇದು ಬರೀ ಕರ್ಣಾಕರ್ಣಿತವಾಗಿ ಬಂದ ಒಣ ವೇದಾಂತವಲ್ಲ, ಅನುಭವದ ಕಡಲನ್ನು ಕಡೆದು ಹೊರಹೊಮ್ಮಿದ ಅಮೃತ ನವನೀತವಾಗಿದೆ. ಕನ್ನಡದ ಅನೇಕ ಕವಿಗಳು ತಮ್ಮ ಸಾಹಿತ್ಯ ರಚನೆಗೆ ಭಾಮಿನಿ ಷಟ್ಪದಿಯ ಶೈಲಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ, ಅದಕ್ಕೆ ಪ್ರಮುಖ ಕಾರಣ ಅದು ಗಮಕಕ್ಕೆ ಅತ್ಯಂತ ಸೌಲಭ್ಯ ಶೀಲತೆಯನ್ನು ಒದಗಿಸುತ್ತದೆ ಎನ್ನುವ ಕಾರಣವಿರಬಹುದು.

ಭಾಮಿನಿಷಟ್ಪದಿಯಲ್ಲಿರುವ ಪದ್ಯಗಳನ್ನು ಓದುವುದರಲ್ಲಿರುವ ಆನಂದವೇ ಬೇರೆ! ಓದಿ ಯೇ ಅನುಭವಿಸಬೇಕು. ಷಟ್ಪದಿ ಎಂದು ಹೆಸರೇ ಹೇಳುವಂತೆ ಈ ಶೈಲಿಯ ಪ್ರತಿ ಪದ್ಯದಲ್ಲಿ ಆರು ಸಾಲುಗಳಿರುತ್ತವೆ, ಅಷ್ಟೇ ಅಲ್ಲದೇ, ಇಲ್ಲಿ ಗಣಗಳು ಹಾಗೂ ಗುರು ಲಘುಗಳು ವ್ಯವಸ್ಥಿತವಾಗಿ ಒಂದು ಕ್ರಮದಲ್ಲಿರ ಬೇಕಾಗುತ್ತದೆ.

ಸಂಸ್ಕೃತದ ಎರಡು ಸಾಲಿನ ಶ್ಲೋಕಗಳಲ್ಲಿ ‘ಅನುಷ್ಟುಪ್ ಛಂದಸ್ಸು’ ಬಹುವಾಗಿ ಬಳಕೆ ಯಾದಂತೆ ಕನ್ನಡ ಸಾಹಿತ್ಯದಲ್ಲಿ ಈ ಭಾಮಿನಿ ಷಟ್ಪದಿಯ ಶೈಲಿ ಕುಮಾರವ್ಯಾಸನ ಕಾಲ ದಿಂದಲೂ ಬಹಳ ಜನಪ್ರಿಯ ವಾದದ್ದಾಗಿದೆ.

ಕುಮಾರವ್ಯಾಸನ ಗದುಗಿನ ಭಾರತ, ಚಾಮರಸನ ಪ್ರಭುಲಿಂಗ ಲೀಲೆ ಮುಂತಾದ ಪ್ರಸಿದ್ಧ ಕಾವ್ಯಗಳು ಇದೇ ಭಾಮಿನಿ ಷಟ್ಪದಿಯಲ್ಲಿವೆ. ಈ ‘ಅನುಭವಾ ಮೃತ ಕಾವ್ಯ’ ಕೃತಿಯಲ್ಲಿ ಒಟ್ಟು 11 ಅಧ್ಯಾಯಗಳು (ಪ್ರಕರಣಗಳು) ಮತ್ತು ಸುಮಾರು 804 ಪದ್ಯಗಳಿವೆ. ಆತ್ಮ-ಪರಮಾತ್ಮರ ಏಕತೆಯನ್ನು (ಅದ್ವೈತ) ಸರಳವಾಗಿ ವಿವರಿಸುವುದು ಈ ಕೃತಿಯ ಉದ್ದೇಶ ವಿದ್ದಂತೆ ಕಾಣುತ್ತದೆ.

ಮಹಲಿಂಗರಂಗ ಕವಿಯ ಅನುಭವಾಮೃತ ಕನ್ನಡ ಸಾಹಿತ್ಯದ, ಅದರಲ್ಲೂ ಮುಖ್ಯವಾಗಿ ಅದ್ವೈತ ವೇದಾಂತ ಪರಂಪರೆಯ ಅತ್ಯಂತ ಪ್ರಮುಖ ಮತ್ತು ಜನಪ್ರಿಯ ಕೃತಿಯಾಗಿದೆ. ಹದಿನೇಳನೆಯ ಶತಮಾನದ (ಸುಮಾರು 1675) ಉತ್ತರಾರ್ಧದಲ್ಲಿದ್ದ ಮಹಲಿಂಗರಂಗರು ಈ ಕೃತಿಯನ್ನು ರಚಿಸಿದರು ಎಂದು ಹೇಳಲಾಗುತ್ತದೆ.

ಇಲ್ಲಿ, ಕಠಿಣವಾದ ವೇದಾಂತ ತತ್ವಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಅನೇಕ ದೃಷ್ಟಾಂತ, ರೂಪಕಗಳ ಮೂಲಕ ಮಹಲಿಂಗರಂಗರು ವಿವರಿಸಿದ್ದಾರೆ. ಉದಾ ಹರಣೆಗೆ: ಮಣ್ಣ ಬೆನಕಗೆ ಮಜ್ಜನದೊಳೇ ತನ್ನ ಮರಣವದೆಂಬ ಗಾದೆಯ ಲಿನ್ನು ಮಾಯೆಗೆ ತನ್ನ ಮೂಲವನರಿಯೆ ಲಯವಹುದು. ಮಾಯೆಯ ಮೂಲವನ್ನು ಅರಿತರೆ ಅದನ್ನು ಲಯಗೊಳಿಸಿ ಕೊಳ್ಳುವುದು ಸುಲಭವಾಗುತ್ತದೆ ಎಂದು ಹೇಳಲು, ಮಣ್ಣಿನಿಂದಾದ ಗಣಪತಿಯ ಮೂರ್ತಿಗೆ ಸ್ನಾನವೇ ಮರಣ ಸ್ಥಾನ ಎನ್ನುವ ಸುಲಭದ ಉದಾಹರಣೆಯನ್ನು ಕವಿ ಕೊಡುತ್ತಾರೆ.

ಈ ಕೃತಿಯು ಭಕ್ತಿಗಿಂತ ಜ್ಞಾನ ಮಾರ್ಗಕ್ಕೆ (ವೇದಾಂತ ವಿಚಾರಕ್ಕೆ) ಹೆಚ್ಚಿನ ಒತ್ತು ನೀಡು ತ್ತದೆ. ನಾನು ಮೊದಲೇ ಹೇಳಿದಂತೆ ಕನ್ನಡದಿಂದ ಸಂಸ್ಕೃತಕ್ಕೆ ಅನುವಾದಗೊಂಡ ವಿರಳ ಕೃತಿಗಳಲ್ಲಿ ಅನುಭವಾಮೃತವೂ ಒಂದು ಎಂದು ಹೆಮ್ಮೆಯಿಂದ ಹೇಳ ಬಹುದು. ಇದನ್ನು ಬಾಲಕೃಷ್ಣ ಬ್ರಹ್ಮಾನಂದ ರಾಜಯೋಗಿಗಳು ಸಂಸ್ಕೃತಕ್ಕೆ ಅನುವಾದಿಸಿದ್ದಾರಂತೆ.

ಮಹಲಿಂಗರಂಗರು ಗುರು ಸಹಜಾನಂದರ ಮಾರ್ಗದರ್ಶನದಲ್ಲಿ ಶ್ರೀಶೈಲದ ಮಲ್ಲಿಕಾರ್ಜು ನನನ್ನು ಆರಾಧ್ಯದೇವತೆಯಾಗಿ ಆರಾಧಿಸಿದವರು. ಒಟ್ಟಾರೆಯಾಗಿ, ಅನುಭವಾಮೃತವು ಅದ್ವೈತದರ್ಶನದ ಅತ್ಯಮೂಲ್ಯ ಕಾವ್ಯವಾಗಿದ್ದು, ಕನ್ನಡದಲ್ಲಿ ಆತ್ಮಜ್ಞಾನವನ್ನು ಪಡೆಯಲು ಬಯಸುವ ಸಾಧಕರಿಗೆ ಇದೊಂದು ಉತ್ತಮ ಕೈಪಿಡಿಯಾಗಿದೆ ಎನ್ನಬಹುದು.

ಕೆಲವು ಕಡೆ ಅವರು ಸುಭಾಷಿತ ಮುಂತಾದ ಸಂಸ್ಕೃತ ಶ್ಲೋಕಗಳನ್ನೇ ಯಥಾವತ್ತಾಗಿ ಕನ್ನಡದಲ್ಲಿ ಸುಂದರವಾ ದ ಪದ್ಯವಾಗಿಸಿದ್ದಾರೆ. ‘ಮರ್ಕಟಸ್ಯ ಸುರಾಪಾನಂ ಮಧ್ಯೇ ವ್ರಶ್ಚಿಕ ದಂಶನಂ ತನ್ಮಧ್ಯೇ ಭೂತ ಸಂಚಾರಂ ಯದ್ವಾತದ್ವಾ ಭವಿಷ್ಯತಿ’ ಎನ್ನುವ ಶ್ಲೋಕ ವನ್ನು ಅವರು ಹೀಗೆ ಪದ್ಯ ಮಾಡಿದ್ದಾರೆ.

‘ಮೊದಲೆ ಮರ್ಕಟ ಮೇಲೆ ಮಧ್ಯದ ಮದವೆದೆಯ ಹಿಡಿದಿರಲು ವೃಶ್ಚಿಕ ತುದಿಯಕಾಲನು ಕಚ್ಚಿದರೆ ಕುಣಿಯುವಂದದಲಿ, ಅಧಿಕ ಧನ ಸಂಪತ್ತು ಯೌವ್ವನ ಒದಗಿರಲು ವನಿತಾ ದಿ ವಿಷಯಾಸ್ಪದನೆನಿಸುತೊಡಲರಿಯದವಗಧ್ಯಾತ್ಮವೇಕೆಂದ’ ಮಹಲಿಂಗರಂಗರಿಗೆ ಕನ್ನಡ ಭಾಷೆಯ ಮೇಲೆ ಅಪಾರ ಪ್ರೀತಿಯಿದ್ದಂತೆ ಕಂಡುಬರುತ್ತದೆ.

ಸಂಸ್ಕೃತದ ಜ್ಞಾನವನ್ನು ಕನ್ನಡದಲ್ಲಿ ಸುಲಭವಾಗಿ ತಿಳಿಯಬಹುದು ಎಂದು ಅವರು ಸಾರಿ ಸಾರಿ ಹೇಳುತ್ತಾರೆ. ಅನುಭವಾಮೃತವು ಕನ್ನಡದಲ್ಲಿ ಮೊದಲು ಮುದ್ರಣವಾಗಿದ್ದು, ಮೈಸೂರು ಅರಮನೆಯ ಕಲ್ಲಚ್ಚಿನ ಮುದ್ರಣಾಲಯದಲ್ಲಿ. ಅಲ್ಲಿಂದಿಚೇಗೆ ಈ ಗ್ರಂಥ ಅನೇಕ ಮುದ್ರ ಣಗಳನ್ನು ಕಂಡಿದೆ.

ಈ ಎಲ್ಲ ಅನುಭವಾಮೃತ ಕಾವ್ಯ ಪ್ರಕಟಣೆಗಳಲ್ಲಿ ವಿದ್ವತ್ಪೂರ್ಣವಾಗಿ, ಗ್ರಂಥ ಸಂಪಾದನಾ ಶಾಸ್ತ್ರರೀತ್ಯ ಶುದ್ಧ ಪಾಠದಿಂದ ಸರ್ವಾರ್ಥ ಸಂದರ್ಶಿನಿ ಎಂಬ ಟೀಕೆ ಯೊಡನೆ ವಿಸ್ತಾ ರವಾದ ಪೀಠಿಕೆಯೊಡನೆ ಪ್ರಕಟವಾಗಿರುವ ಹೊಸಕೆರೆ ಚಿದಂಬರ ಯ್ಯನವರ ಅನುಭವಾಮೃತ ಪ್ರಕಟಣೆ ಹಲವು ದೃಷ್ಟಿಗಳಿಂದ ಶ್ರೇಷ್ಠ ಪ್ರಕಟಣೆಯಾಗಿದೆ ಎಂದು ಗುರುತಿಸಲಾಗಿದೆ.

ಚಿದಂಬರಯ್ಯನವರು ನಿಧನರಾದನಂತರ ಈ ಗ್ರಂಥ ಮರು ಮುದ್ರಣ ವಾಗದೆ ಜನರು ನಿರಂತರ ವಾಗಿ ಅಪೇಕ್ಷಿಸುವಂತಾಯ್ತು. ಕೆಲವು ವರ್ಷಗಳ ಹಿಂದೆ ಅವರು ಬರೆದ ಟೀಕೆ ಯೊಡನೆ ಮೂಲ ಸಹಿತ ಹೊಸದಾಗಿ ಗದ್ಯಾನುವಾದ ಮಾಡಿ ಅನುಬಂಧಗಳೊಡನೆ ಮತ್ತೆ ಪ್ರಕಟಿಸಲಾಗಿದೆ.

‘ಕನ್ನಡದ ನುಡಿಯೆಂದು ಪೇಕ್ಷಿಸಲಿನ್ನು ಹಿರಿಯರಿಗಂಜಿ ನುಡಿವೆನು; ಕನ್ನಡಿಯೆ ದರ್ಪಣ ವದಲ್ಲದೆ ಭೇದವೇನಿದಕೆ? ಮುನ್ನಲುಪನಿಷದರ್ಥವನು ಸಂಪನ್ನಮತಿಗಳು ಪೇಳುದನೆ ನಾ ಕನ್ನಡಿಸಿದನು; ಕೊರತೆಯಿರ್ದೊಡೆ ಮನ್ನಿಸುವದೊಲಿದು’ ಕನ್ನಡದ ನುಡಿಯೆಂದು ತಿರಸ್ಕಾರ ಮಾಡುವ ಹಿರಿಯರಾದ ಸಂಸ್ಕೃತ ವಿದ್ವಾಂಸರಿಗೆ ವಿನಯದಿಂದ ಹೇಳುತ್ತಿದ್ದೇನೆ. ಕನ್ನಡದಲ್ಲಿ ‘ಕನ್ನಡಿ’ ಎನ್ನುತ್ತಾರೆ.

ಸಂಸ್ಕೃತದಲ್ಲಿ ‘ದರ್ಪಣ’ ಎನ್ನುತ್ತಾರೆ. ಭಾಷಾ ವ್ಯತ್ಯಾಸವಲ್ಲದೆ ವಿಷಯ-ವಸ್ತುವಿನಲ್ಲಿ ವ್ಯತ್ಯಾಸವಿಲ್ಲ. ಈ ಮೊದಲು ವೇದೋಪನಿಷತ್ತುಗಳಲ್ಲಿ ಆತ್ಮಜ್ಞಾನಿಗಳು ತಿಳಿಸಿರು ವುದನ್ನೇ ನಾನು ಕನ್ನಡದಲ್ಲಿ ಹೇಳಿರುತ್ತೇನೆ. ಸದ್ಗುಣ ಸಂಪನ್ನ ರಾದ ವಿದ್ವಾಂಸರು ನಾನು ಹೇಳಿದ್ದರಲ್ಲಿ ಏನಾದರೂ ಲೋಪ ದೋಷಗಳಿದ್ದರೆ ದಯಮಾಡಿ ಕ್ಷಮಿಸಬೇಕು ಎಂದು ಕವಿ ಅತ್ಯಂತ ವಿನಯದಿಂದ ಕೋರುತ್ತಾನೆ.

ಕನ್ನಡಿಯೆಂಬ ಮಾತಿಗೆ ಪ್ರತಿ ಬಿಂಬವು ಕಾಣುವಂಥ ಗಾಜು ಎಂಬ ಅರ್ಥವೂ ರೂಢಿ ಯಲ್ಲಿದ್ದೇ ಇದೆ. ಇದರಿಂದ ಕನ್ನಡಿಯಲ್ಲಿ ಯಾವ ವಸ್ತುವಾದರೂ ಇದ್ದದ್ದಿದ್ದಂತೆ ಹೇಗೆ ಪ್ರತಿಬಿಂಬಿತವಾಗುವುದೋ ಹಾಗೆ ಸಂಸ್ಕೃತ ದಿಂದ ಅಥವಾ ಬೇರೆ ಯಾವ ಭಾಷೆಯಿಂದಾ ದರೂ ತಂದ ಯಾವ ವಿಚಾರವಾದರೂ ಇದ್ದದ್ದಿದ್ದಂತೆ ಕನ್ನಡದ ಮಾತಿನಲ್ಲಿ ಇಳಿದು ಬಂದೇ ಬರುವುದು ಎನ್ನುವುದು ಈ ಕನ್ನಡ ಪರವಾದ ಪದ್ಯದ ಧ್ವನಿ.

ಕನ್ನಡಿಯೆಂದರೂ ದರ್ಪಣವೆಂದರೂ ಪದಾರ್ಥ ಒಂದೇ ಆದ್ದರಿಂದ ಕನ್ನಡದಲ್ಲಿ ಹೇಳಿದ ಮಾತ್ರಕ್ಕೆ ಯಾವ ಕೊರತೆಯೂ ಇಲ್ಲವೆಂದು ತಾತ್ಪರ್ಯ. ಇನ್ನು ಯಾವುದೇ ಮಹದ್ವಿಷ ಯವನ್ನು ಯಾರೂ ನೇರವಾಗಿ ಸ್ವೀಕಾರ ಮಾಡಲಾರರು, ಆದರೆ ಅದನ್ನು ಮಕ್ಕಳಿಗೆ ನಂಬಿಸಿ ಹಾಲುಕುಡಿಸುವಂತೆ ಅವರಿಗೆ ನಿಧಾನವಾಗಿ ತಲುಪಿಸ ಬೇಕಾಗುತ್ತದೆ ಎಂದು ಈ ಪದ್ಯದ ಮೂಲಕ ಕವಿ ಬಹಳ ಮಾರ್ಮಿಕವಾಗಿ ಹೇಳುತ್ತಾರೆ.

‘ಹಾಲನೆರೆದರೆ ಕುಡಿಯಲೊಲ್ಲದ ಬಾಲಕನ ತೆರನಂತೆ ಮನವಿದು ಕೇಳಲೊಲ್ಲದು ಹಿತವನರಿಯದ ಮೂರ್ಖನಂದದಲಿ, ಬಾಲಕಿಯನುಪಲಾಲಿಸುವವೋಲು ಬೋಳಯಿಸಿ ತನ್ನೊಳಗುಮಾಡಲು ಮೇಲೆಮೇಲದು ಮೆಲ್ಲ ಮೆಲ್ಲನೆ ಕೇಳತೊಡಗುವುದು’ ಹಾಲನ್ನು ಕುಡಿಯಲು ಕೊಟ್ಟರೆ ಕುಡಿಯಲು ಒಪ್ಪದ ಚಿಕ್ಕ ಹುಡುಗನ ರೀತಿಯಂತೆ, ತನ್ನ ಒಳಿ ತನ್ನು ಅರ್ಥಮಾಡಿಕೊಳ್ಳದ ಮೂಢನಂತೆ, ಈ ಮನಸ್ಸು ಏನು ಹೇಳಿದರೂ ಒಪ್ಪುವುದಿಲ್ಲ.

ಇಂಥ ಮನಸ್ಸು ಕೇಳುವಂತೆ ಮಾಡುವುದು ಹೇಗೆ? ಮುಗ್ಧ ಬಾಲಿಕೆಯನ್ನು ತಲೆಯನ್ನು ನೇವರಿಸಿ ಹಿತನುಡಿಗಳಿಂದ ಒಲಿಸಿ ಕೊಳ್ಳುವಂತೆ ಮನಸ್ಸನ್ನು ಆ ರೀತಿ ಒಲಿಸಿಕೊಂಡರೆ ಕ್ರಮೇಣ ಅದು ಮೆಲ್ಲಮೆಲ್ಲಗೆ ಹತೋಟಿಗೆ ಬರುತ್ತದೆ ಎನ್ನುತಾರೆ ಮಹಲಿಂಗರಂಗರು.

‘ಕೇಳತೊಡಗಿದ ಬಳಿಕ ಬಿಡದದು ಲೋಲಪ್ರೌಢಿಯ ತೆರದಿ ಹಗಲಿರುಳಾಲಿಸುತ್ತದರಲ್ಲಿ ಮಿಗಿಲಾಸಕತಿಯಾಗಿಹುದು, ಹೇಳ ಲೇನಭ್ಯಾಸವಶದಿಂ ಮೇಲೆ ಪರಮಾನಂದಪದದೊಳ ಗಾಳಿ ನಿಜಸಾಯುಜ್ಯಪದವಿಯ ಪಡೆದು ಸುಖಿಸಬಹುದು’ ಆ ರೀತಿ ಒಲಿದ ಮನಸ್ಸು ಅಧ್ಯಾತ್ಮದ ಬೋಧೆಯನ್ನು ಆಲಿಸತೊಡಗಿದ ನಂತರ ಕೇಳುತ್ತಾ ಕೇಳುತ್ತಾ ಮನಸ್ಸು ಅಧಿಕವಾಗಿ ಅಧ್ಯಾತ್ಮದಲ್ಲಿ ಆಸಕ್ತಿ ಹೊಂದುವುದು.

ಹೆಚ್ಚಿಗೆ ಹೇಳುವುದೇನಿದೆ? ಎಡೆಬಿಡದೆ ಮನಸ್ಸು ಆ ಅಧ್ಯಾತ್ಮದಲ್ಲಿಯೇ ಮತ್ತೆ ಮತ್ತೆ ಲೀನವಾಗುತ್ತಾ ಮುಂದಕ್ಕೆ ದಿವ್ಯಾನಂದ ಸ್ತುತಿಯಲ್ಲಿ ಪರಬ್ರಹ್ಮಸ್ವರೂಪದ ಸ್ಥಿತಿಯಲ್ಲಿದ್ದು ಸುಖಿಸುತ್ತದೆ ಎಂದರೆ ಜೀವನ್ಮುಕ್ತಿ ಹೊಂದಿ ಸಾಯುಜ್ಯ ವೆಂಬ ಮುಕ್ತಿಯನ್ನು ಪಡೆದು ಸುಖಿಸುತ್ತದೆ.

‘ಅಭ್ಯಾಸೇನ ತು ಕೌಂತೇಯ ವೈರಾಗ್ಯಣ ಚ ಗೃಹ್ಯತೇ’ ಎಂಬ ಗೀತೋಕ್ತಿಯಂತೆ ಮನಸ್ಸನ್ನು ಎಡಬಿಡದೆ ಪ್ರಯತ್ನದಿಂದಲೂ, ವೈರಾಗ್ಯದಿಂದಲೂ ಬಿಗಿ ಹಿಡಿಯುವುದಕ್ಕಾಗುತ್ತದೆ ಎಂಬ ಮಾತನ್ನು ಹೇಳುತ್ತಾರೆ. ಶಂಕರಾನಂದ ಯೋಗೀಶ್ವರರೆಂಬ ಕವಿಗಳ ಶ್ರೀ ಸೀತಾರಾ ಮಾಂಜನೇಯ ಸಂವಾದದದ ಶೈಲಿಯಲ್ಲಿರುವ ‘ಶ್ರೀ ರಾಮತ ತ್ವಾಮೃತ’ವೆಂಬ ಭಾಮಿನಿ ಷಟ್ಪದಿಯ ಇರುವ ವೇದಾಂತ ಕಾವ್ಯವನ್ನು ನಾನು ಓದುವಾಗ, ಅದರಲ್ಲಿ ಅವರು ತನ್ನ ಗುರು ಮಹಲಿಂಗರಂಗರ ಉಲ್ಲೇಖ ಮಾಡಿರುವುದು ಕಂಡುಬಂತು.

ಶ್ರೀ ಶಂಕರಾನಂದ ಯೋಗೀಶ್ವರರ ಅದ್ಭುತವಾದ ಶ್ರೀ ರಾಮತ ತ್ವಾಮೃತ ಗ್ರಂಥವನ್ನು ಓದಿದ ನನಗೆ, ಇನ್ನು ಅವರ ಗುರುಗಳು ಹೇಗೆ ಬರೆಯಬಹುದು ಎನ್ನುವ ಕುತೂಹಲ ವಾಯಿತು. ಆ ಕುತೂಹಲವೇ ‘ಅನುಭವಾಮೃತ’ದ ವರೆಗೆ ನನ್ನನ್ನು ಕರೆತಂತು. ವೇದಾಂತ, ಅದ್ವೈತವಿರಲಿ, ದ್ವೈತವಿರಲಿ ಅಥವಾ ವಿಶಿಷ್ಟಾದ್ವೈತವಿರಲಿ, ನನ್ನ ಪ್ರಕಾರ ಆ ಮತ್ತತ್ವ ಗಳನ್ನು ಸರಳ ಪದ್ಯಗಳ ಮೂಲಕ ಕನ್ನಡ ಜನರಿಗೆ ಸುಲಭವಾಗಿ ತಲುಪಿಸಿದ ಮಹಲಿಂಗ ರಂಗರು ಸ್ಮರಣೀಯರೇ ಆಗುತ್ತಾರೆ.

ಉತ್ತಮವಾದ ಆರ್ಷೇಯ ವಿಷಯಗಳನ್ನು ಮೂಲ ಸಂಸ್ಕೃತದಲ್ಲಿ ಓದೋಣವೆಂದರೆ ಮಗೆ ಸಂಸ್ಕೃತ ತಿಳಿಯುವುದಿಲ್ಲ, ಕನ್ನಡದಲ್ಲಿ ಓದೋಣವೆಂದರೆ ಅದು ಕನ್ನಡದಲ್ಲಿ ಸಿಗೋ ದಿಲ್ಲ ಎನ್ನುವ ಸ್ಥಿತಿಯಲ್ಲಿ ನಾವಿರುವಾಗ, ಶತಮಾನಗಳ ಹಿಂದೆಯೇ ಮಹಲಿಂಗರಂಗ ರಂಥವರ ಸಾಧನೆ ನಿಜಕ್ಕೂ ಸ್ತುತ್ಯರ್ಹವಾದದ್ದಾಗಿದೆ. ಪ್ರೊ ಜಿ. ಅಶ್ವತ್ಥನಾರಾಯಣರ ಸಂಪಾದಕತ್ವದಲ್ಲಿ ಅಧ್ಯಾತ್ಮ ಪ್ರಕಾಶ ಕಾರ್ಯಾಲಯ, ಹೊಳೆನರಸೀಪುರದವರು ಹೊರ ತಂದ ಪುಸ್ತಕಗಳು ಬಹುತೇಕ ಈಗಲೂ ಲಭ್ಯವಿದೆ. ನಾವು ಆಸಕ್ತಿವಹಿಸಿ ತಂದು ಓದಬೇಕಷ್ಟೆ.

ವಿನಾಯಕ ವೆಂ ಭಟ್ಟ

View all posts by this author