Vinayaka V Bhat Column: ಇಂದಿನ ಪತ್ರಕರ್ತರಿಗೆ ನಾರದರು ಆದರ್ಶವಾಗಬೇಕು !
ಹೀಗೆ ವೃತ್ತಪತ್ರಿಕೆ, ವೃತ್ತಾಂತಪತ್ರಿಕೆ, ವಾರ್ತಾಪತ್ರಿಕೆ, ವರ್ತಮಾನಪತ್ರಿಕೆ, ಸಮಾಚಾರ ಪತ್ರಿಕೆ, ದಿನಪತ್ರಿಕೆ ಅಥವಾ ಇಂಗ್ಲಿಷಿನಲ್ಲಿ ಒಂದೇ ಪದದಲ್ಲಿ ಹೇಳಬೇಕೆಂದರೆ ‘ನ್ಯೂಸ್ ಪೇಪರ್’ನ ಅದ್ಭುತ ಇತಿಹಾಸ ಕೆದಕುವಾಗ ನನಗೆ ಸಿಕ್ಕಿದ್ದು 1968ರಲ್ಲಿ ಪ್ರಕಟವಾದ, ಸ್ವತಃ ಪತ್ರಕರ್ತರಾಗಿದ್ದ ನಮ್ಮ ಡಿವಿಜಿಯವರು ರಚಿಸಿದ ‘ವೃತ್ತಪತ್ರಿಕೆ’ ಎನ್ನುವ ಕಿರುಹೊತ್ತಗೆ.
-
ವಿದ್ಯಮಾನ
ಮುದ್ರಣ ಯಂತ್ರ ಭಾರತಕ್ಕೆ ಮೊದಲು ಎಲ್ಲಿಂದ ಮತ್ತು ಹೇಗೆ ಬಂತು ಎನ್ನುವ ಅತ್ಯಂತ ಸ್ವಾರಸ್ಯ ಕರ ಸಂಗತಿ ಪುಸ್ತಕದಲ್ಲಿ ಉಲ್ಲೇಖಿಸುತ್ತಾರೆ. ಜನರಿಗೆ ತಿಳಿಯದ/ತಿಳಿಸಬಾರದ ವಿಷಯ ತಿಳಿಯಪಡಿಸಿ, ಇಲ್ಲದಿರುವ ಆಶೆ, ಆಶಯ ಉಂಟು ಮಾಡಿ, ಅವರಲ್ಲಿ ಹೊಸ ಆವೇಶ, ಧೈರ್ಯ ವನ್ನೂ ಹುಟ್ಟಿಸಿ ಬುದ್ಧಿ, ನಡವಳಿಕೆಗಳನ್ನು ಬದಲಾಯಿಸಬಹುದಲ್ಲವೇ ಈ ಮುದ್ರಣ ಯಂತ್ರ?
ಸುಮಾರು ಐವತ್ತು ವರ್ಷಗಳ ಕಳಗೆ, ಅಂದರೆ ನಾನು ಸಣ್ಣವನಿದ್ದಾಗ, ಹತ್ತಿರದ ಪಟ್ಟಣದ ಬಸ್ ನಿಲ್ದಾಣಗಳಲ್ಲಿ ಕೆಲವು ಜನ ಕುಳಿತು ವೃತ್ತ ಪತ್ರಿಕೆಗಳನ್ನು ಓದುತ್ತಿರುವುದನ್ನು ನೋಡುತ್ತಿದ್ದೆ. ಇಷ್ಟು ದೊಡ್ಡ ಹಾಳೆಯನ್ನು ಇವರು ಹೇಗೆ ಹಿಡಿದುಕೊಳ್ಳುತ್ತಾರೆ, ಕೈ ನೋಯದೇ ಇವರಿಗೆ? ಇಷ್ಟು ಸಣ್ಣ ಅಕ್ಷರಗಳನ್ನು ತದೇಕ ಚಿತ್ತದಿಂದ ಇವರು ಓದುವುದಾದರೂ ಹೇಗೆ? ಅಷ್ಟೊಂದು ಏಕಾಗ್ರತೆ ಯಿಂದ ಪರಮ ಆಸಕ್ತಿಯಿಂದ ಓದುವಂಥಾದ್ದು ಅದರಲ್ಲಿ ಏನಿರಬಹುದು? ನಾವೆಲ್ಲ ಸಣ್ಣ ಪಠ್ಯ ವನ್ನೇ ಇಡೀ ಒಂದು ಶೈಕ್ಷಣಿಕ ವರ್ಷದಲ್ಲಿ ಓದಿ ಮುಗಿಸುವುದು ಕಷ್ಟವಾದಾಗ, ಇಷ್ಟು ದೊಡ್ಡ ಪತ್ರಿಕೆಯಲ್ಲಿರುವಷ್ಟನ್ನೂ ಇವರು ಒಂದೇ ದಿನದಲ್ಲಿ ಓದಿ ಮುಗಿಸಲು ಸಾಧ್ಯವೇ? ಮುಂತಾದ ಕುತೂಹಲವೇಳುತ್ತಿತ್ತು.
ಅದರಲ್ಲೂ ಇಂಗ್ಲಿಷ್ ಪತ್ರಿಕೆಗಳನ್ನು ಓದುವವರನ್ನು ಕಂಡರೆ ಇನ್ನೂ ಅಚ್ಚರಿ. ಇಷ್ಟು ಸುದ್ದಿ ಪತ್ರಿಕೆಗಳಿಗೆ ಎಲ್ಲಿಂದ ಬರುತ್ತೆ? ಆ ಸುದ್ದಿಗಳೆಲ್ಲ ಕಾಗದದ ಮೇಲೆ ಮುದ್ರಣವಾಗುವ ಬಗೆಯೆಂತು? ಎಲ್ಲಾ ಮುದ್ರಣವಾಗುವ ಪತ್ರಿಕೆಗಳು ಬೆಳಗಾಗುವುದರೊಳಗೆ ಊರೂರನ್ನು ತಲುಪುವುದು ಹೇಗೆ? ಇಂಥಾ ನೂರಾರು ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಮೂಡುತ್ತಿತ್ತು.
ನಿಮಗೂ ಈ ಅಚ್ಚರಿಯ ಅನುಭವಗಳು ಆಗಿರಲಿಕ್ಕೆ ಸಾಕು. ನಮ್ಮ ಮನೆಗೂ ಪತ್ರಿಕೆಗಳು ಬರಲು ಪ್ರಾರಂಭವಾಗುವವರೆಗೂ, ನಾನೂ ಅಲ್ಪ ಸ್ವಲ್ಪ ಓದುವವರೆಗೂ ಆ ಕುತೂಹಲ ಹಾಗೆಯೇ ಇತ್ತು ಎನ್ನಿ. ಹೀಗೆ ನಾನೂ ಒಂದು ದಿನ ಪತ್ರಿಕೆಗಳನ್ನು ಓದಬೇಕು ಎನ್ನುವ ಆಸೆಯೇನೋ ಇತ್ತು. ಆದರೆ, ಮುಂದೊಮ್ಮೆ ನಾನೂ ಪತ್ರಿಕೆಗೆ ಬರೆಯುತ್ತೇನೆ ಎಂದು ಮಾತ್ರ ಅಂದುಕೊಂಡಿರಲಿಲ್ಲ.
ಹೀಗೆ ವೃತ್ತಪತ್ರಿಕೆ, ವೃತ್ತಾಂತಪತ್ರಿಕೆ, ವಾರ್ತಾಪತ್ರಿಕೆ, ವರ್ತಮಾನಪತ್ರಿಕೆ, ಸಮಾಚಾರ ಪತ್ರಿಕೆ, ದಿನಪತ್ರಿಕೆ ಅಥವಾ ಇಂಗ್ಲಿಷಿನಲ್ಲಿ ಒಂದೇ ಪದದಲ್ಲಿ ಹೇಳಬೇಕೆಂದರೆ ‘ನ್ಯೂಸ್ ಪೇಪರ್’ನ ಅದ್ಭುತ ಇತಿಹಾಸ ಕೆದಕುವಾಗ ನನಗೆ ಸಿಕ್ಕಿದ್ದು 1968ರಲ್ಲಿ ಪ್ರಕಟವಾದ, ಸ್ವತಃ ಪತ್ರಕರ್ತರಾಗಿದ್ದ ನಮ್ಮ ಡಿವಿಜಿಯವರು ರಚಿಸಿದ ‘ವೃತ್ತಪತ್ರಿಕೆ’ ಎನ್ನುವ ಕಿರುಹೊತ್ತಗೆ.
ಅದು ಅವರ ಉಪನ್ಯಾಸ ಹಾಗೂ ಕೈಬರಹಗಳ ಸಂಗ್ರಹವಾಗಿತ್ತಂತೆ. 1928ರಿಂದಲೇ ಪ್ರಾರಂಭವಾದ ಕೆಲಸವಾಗಿತ್ತು ಇದು ಅಂತ ಕಾಣುತ್ತದೆ. ಯಾವುದೇ ವಿಷಯವಾಗಿರಲಿ, ಡಿವಿಜಿಯವರು ಕೈಇಟ್ಟ ಮೇಲೆ ಅದು ಅತ್ಯಂತ ಪ್ರೌಢವೂ ತಲಸ್ಪರ್ಶಿಯಾದ ಅಧ್ಯಯನದ ಮೂಸೆಯಿಂದ ಹೊರಹೊಮ್ಮು ವಂಥಾದ್ದೂ ಆಗಿರುತ್ತದೆ ಎನ್ನುವುದು ನಮಗೆಲ್ಲ ತಿಳಿದೇ ಇದೆ.
ಇದನ್ನೂ ಓದಿ: Vinayaka M Bhat Column: ಸನ್ಯಾಸಿಯಷ್ಟೇ ಆತನ ಜನ್ಮದಾತರ ತ್ಯಾಗವೂ ದೊಡ್ಡದು
ಕನ್ನಡದ ಓದುಗರ ಈ ನಿರೀಕ್ಷೆಯನ್ನು ‘ವೃತ್ತಪತ್ರಿಕೆ’ ಎನ್ನುವ ಸದರಿ ಕಿರುಹೊತ್ತಿಗೆಯೂ ಹುಸಿ ಮಾಡಲಿಲ್ಲ. ಆ ಕಾಲದ ಅನೇಕ ಕುತೂಹಲಕಾರಿ ಸಂಗತಿಗಳನ್ನು ಅವರು ಈ ಹೊತ್ತಿಗೆಯಲ್ಲಿ ದಾಖಲಿಸಿದ್ದಾರೆ. ವೃತ್ತಪತ್ರಿಕೆಗಳ ತಾಯಿಯಾದ ಮುದ್ರಣ ಯಂತ್ರ ಭಾರತಕ್ಕೆ ಮೊದಲು ಎಲ್ಲಿಂದ ಮತ್ತು ಹೇಗೆ ಬಂತು ಎನ್ನುವ ಅತ್ಯಂತ ಸ್ವಾರಸ್ಯಕರ ಸಂಗತಿಯನ್ನು ಅವರು ಪುಸ್ತಕದಲ್ಲಿ ಉಲ್ಲೇಖಿ ಸುತ್ತಾರೆ. ಜಾಗತಿಕವಾಗಿ ವೃತ್ತಪತ್ರಿಕೆಯ ಉದಯ ಹಾಗೂ ಅವುಗಳ ಪೂರ್ವಚರಿತ್ರೆಯಿಂದ ಪ್ರಾರಂಭಿಸಿ ಭಾರತದಲ್ಲಿ ವೃತ್ತಪತ್ರಿಕೆಗಳ ಇತಿಹಾಸ ಹಾಗೂ ಬೆಳವಣಿಗೆಯ ಬಗ್ಗೆ ಬೆಳಕು ಚೆಲ್ಲಿ, ಕರ್ನಾಟಕದಲ್ಲಿ ವೃತ್ತಪತ್ರಿಕೆಗಳು ಸಾಗಿ ಬಂದ ದಾರಿಗಳ ಕುರಿತು ಅವರು ಉಲ್ಲೇಖಿಸುತ್ತಾರೆ.
ಪತ್ರಿಕೆಯ ಹಿಂದಿರುವ ವಿಜ್ಞಾನ-ತಂತ್ರಜ್ಞಾನ, ಪತ್ರಿಕೆಗಳ ಮುಖ್ಯ ಉದ್ದೇಶಗಳು ಹಾಗೂ ಕರ್ತವ್ಯ ಗಳು, ಪತ್ರಕರ್ತರ ಆತ್ಮಶೋಧನೆ, ಸಮಾಜದ ಮೇಲೆ ಪತ್ರಿಕೆಗಳು ಬೀರಬಲ್ಲ ಪ್ರಭಾವಗಳು ಇವೆಲ್ಲದರ ಕುರಿತು ಅವರು ಬರೆಯುತ್ತಾರೆ. ಪತ್ರಿಕೆ ಹೇಗೆ ಪ್ರಜೆಗಳ ಮುಖ ಅಥವಾ ಪ್ರಜೆಗಳ ಮಂತ್ರಿ ಯಾಗಿ ಕೆಲಸಮಾಡಬೇಕು. ಅದರ ಹೊರಗಿನ ಸೊಗಸು ಹೇಗಿರಬೇಕು, ಸ್ವತಂತ್ರವಾದ ವಿವೇಚನೆ ಇರಬೇಕೇ ಬೇಡವೇ, ‘ಇಲಿಯಿದ್ದರೆ ಹುಲಿಯೇ ಇತ್ತು’ ಎಂದು ಅತಿರೋಚಕತೆಯನ್ನು ತರಬಾರದು ಹಾಗೂ ಹಾಸ್ಯಕ್ಕೂ ಪತ್ರಿಕೆಗಳಲ್ಲಿ ಸ್ಥಾನವಿರಬೇಕು ಎನ್ನುತ್ತಾರೆ ಡಿವಿಜಿ.
ಟೀಕೆ ಟಿಪ್ಪಣೆಗಳೇನೋ ಸರಿ. ಆದರೆ, ಅದು ಸಭ್ಯತೆಯ ಮರ್ಯಾದೆಯನ್ನು ಮೀರಬಾರದು ಎನ್ನುವ ಎಚ್ಚರಿಕೆಯನ್ನೂ ಡಿವಿಜಿ ನೀಡುತ್ತಾರೆ. ಅವರು ಈ ಹೊತ್ತಗೆಯಲ್ಲಿ ಉಲ್ಲೇಖಿಸಿರುವ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ಅವಲೋಕಿಸುವ ಪ್ರಯತ್ನವೇ ಈ ಲೇಖನ.
ಸುಮಾರು 220 ವರ್ಷಗಳ ಹಿಂದೆ, ‘ಲಾರ್ಡ್ ಮಿಂಟೋ’ ಎಂಬಾತ ಭಾರತ ದೇಶದ ಗವರ್ನರ್ ಜನರಲ್ ಆಗಿದ್ದಾಗ ಒಂದು ವಿಚಿತ್ರ ಸಂಗತಿ ನಡೆಯಿತು. ಆಗಿನ ಹೈದರಾಬಾದ್ ಸಂಸ್ಥಾನದ ನಿಜಾಮರು ಯೂರೋಪಿಯನ್ ಜನರ ವಿಜ್ಞಾನ ಚಮತ್ಕಾರಗಳ ಮಾದರಿಗಳನ್ನು ನೋಡ ಬೇಕೆಂದು ಕುತೂಹಲ ಪಟ್ಟು, ತಮ್ಮಲ್ಲಿ ಆಗ ಬ್ರಿಟಿಷ್ ರೆಸಿಡೆಂಟ್ ಆಗಿದ್ದ ಕ್ಯಾಪ್ಟನ್ ಸೈಡೆನ್ ಹ್ಯಾಂ ಎಂಬಾತನಿಗೆ ತಿಳಿಸಿದರು. ಆ ನಿಜಾಮರ ಕುತೂಹಲವನ್ನು ತಣಿಸುವ ಉದ್ದೇಶದಿಂದ ಈತನು ಗಾಳಿಯನ್ನು ಹೊರಕ್ಕೆ ಹೊರಡಿಸುವ ಕೊಳವೆ (ಏರ್-ಪಂಪ್), ಒಂದು ಮುದ್ರಣ ಯಂತ್ರ (ಪ್ರಿಂಟಿಂಗ್ ಪ್ರೆಸ್) ಹಾಗೂ ಒಂದು ಯುದ್ಧದ ಜಹಜಿನ ನಮೂನೆಗಳನ್ನು ಹೈದರಾಬಾದಿಗೆ ತರಿಸಿ ನಿಜಾಮರಿಗೆ ಕೊಡುತ್ತಾನೆ.
ಆಮೇಲೆ, ತಾನು ಹೀಗೆ ಮಾಡಿದ ಸಂಗತಿಯನ್ನು ತನ್ನ ಸರಕಾರದ ಮೇಲಿನ ಅಧಿಕಾರಿಗಳಿಗೆ ವರದಿ ಮಾಡುತ್ತಾನೆ. ಆ ಮೂರು ಸಾಮಗ್ರಿಗಳ ಪೈಕಿ ಮುದ್ರಣ ಯಂತ್ರವನ್ನು ತರಿಸಿ, ಅಂಥಾ ಅಪಾಯಕರ ವಾದ ಆಯುಧವನ್ನು ದೇಶೀಯ ರಾಜನ ಕೈಗೆ ಒಪ್ಪಿಸಿದ್ದಕ್ಕಾಗಿ ಬ್ರಿಟಿಷ್ ಸರಕಾರದವರು ಸೈಡೆನ್ ಹ್ಯಾಂನ ಮೇಲೆ ಕೋಪಗೊಂಡರು. ಆಗ ಆತ ತನ್ನ ಸರಕಾರಕ್ಕೆ ಸಮಾಧಾನ ಪತ್ರವನ್ನು ಬರೆದು, ಅವರ ಭಯಕ್ಕೆ ಕಾರಣವಿಲ್ಲವೆಂದೂ, ಮುದ್ರಣ ಯಂತ್ರದ ವಿಚಾರದಲ್ಲಿ ನಿಜಾಮರು ಹೆಚ್ಚಿನ ಆಸಕ್ತಿಯೇನನ್ನೂ ತೋರಿಸಲಿಲ್ಲವೆಂದೂ, ಆ ಯಂತ್ರದ ಉಪಯೋಗವನ್ನು ತೋರಿಸಿಕೊಡಲು ಮದ್ರಾಸಿ ನಿಂದ ಬಂದಿದ್ದ ಅಚ್ಚಕ್ಷರ ಜೋಡಿಸುವ (ಕಂಪೋಸಿಟರ್) ಕೆಲಸಗಾರರಿಗೆ ನಿಜಾಮರು ಇನಾಮು ಸಹ ಕೊಡಲಲ್ಲವೆಂದೂ ಅರಿಕೆ ಮಾಡಿಕೊಂಡದ್ದಲ್ಲದೆ, ಆ ಮುದ್ರಣ ಯಂತ್ರವು ಹೈದರಾಬಾದಿನಲ್ಲಿ ಇರುವ ವಿಷಯದಲ್ಲಿ ಬ್ರಿಟಿಷ್ ಸರಕಾರಕ್ಕೆ ಇನ್ನೂ ಶಂಕೆಯೇನಾದರೂ ಇದ್ದ ಪಕ್ಷದಲ್ಲಿ, ತಾನೇ ಉಪಾಯಾಂತರದಿಂದ ನಿಜಾಮರ ತೋಷಾಖಾನೆಗೆ ಹೋಗಿ, ಅಲ್ಲಿ ಯಾರಿಗೂ ತಿಳಿಯದಂತೆ ಮುದ್ರಣ ಯಂತ್ರವನ್ನು ಪೂರ್ತಿ ಕಳಚಿಟ್ಟು, ಕಲಸಕ್ಕೆ ಬಾರದಂತೆ ಮಾಡುವುದಾಗಿ ಭರವಸೆ ಕೊಡುತ್ತಾನೆ.
ಹೀಗಿತ್ತು, ಆ ಕಾಲದಲ್ಲಿ ಮುದ್ರಣಯಂತ್ರದ ಮೇಲಿನ ಭಯ. ಜನರಿಗೆ ತಿಳಿಯದ ಅಥವಾ ತಿಳಿಸ ಬಾರದ ವಿಷಯಗಳನ್ನು ತಿಳಿಯಪಡಿಸಿ, ಇಲ್ಲದಿರುವ ಆಶೆ ಆಶಯಗಳನ್ನು ಉಂಟು ಮಾಡಿ, ಅವರಲ್ಲಿ ಹೊಸ ಆವೇಶವನ್ನೂ ಹೊಸ ಧೈರ್ಯವನ್ನೂ ಹುಟ್ಟಿಸಿ ಬುದ್ಧಿ ನಡವಳಿಕೆಗಳನ್ನು ಬದಲಾಯಿಸಬಹುದಲ್ಲವೇ ಈ ಮುದ್ರಣ ಯಂತ್ರ? ಅದರ ಸಂಕ್ಷೋಭಕಾರಕವಾದ ಪ್ರಭಾವವನ್ನು ಬ್ರಿಟಿಷರು ಮೊದಲೇ ಕಂಡುಕೊಂಡಿದ್ದರು.
ಆದುದರಿಂದಲೇ ಈ ದೇಶದಲ್ಲಿ ವೃತ್ತಪತ್ರಿಕೆಗಳ ತತ್ರಾಪಿ ದೇಶ ಭಾಷಿಯ ಪತ್ರಿಕೆಗಳ ಬೆಳವಣಿಗೆಯ ವಿಷಯವಾಗಿ ಅವರಿಗೆ ಸಂತೋಷವಿಲ್ಲದೆ ಇದ್ದುದು. ಮಾನವ ವರ್ಗದ ನಯ-ನಾಗರಿಕತೆಗಳ ಚರಿತ್ರೆಯಲ್ಲಿ ಮುದ್ರಣ ಯಂತ್ರದಿಂದ ಅಗಿರುವುದಕ್ಕಿಂತ ಹಚ್ಚಾದ ಮಾರ್ಪಾಟುಗಳು ಇನ್ಯಾವ ಸಂಶೋಧನೆ ಗಳಿಂದಲೂ ಆಗಿಲ್ಲವೆಂದು ಹೇಳಬಹುದು.
ವೃತ್ತಪತ್ರಿಕೆಗಳ ಪ್ರಚಾರವೂ ಪ್ರಾಬಲ್ಯವೂ ನಮ್ಮ ದೇಶದಲ್ಲಿ ಈಗ ಹೆಚ್ಚಾಗುತ್ತಿವೆ. ವಿದ್ಯಾಭ್ಯಾಸವೂ ರಾಜಕೀಯ ಬುದ್ಧಿಯೂ ಜನರಲ್ಲಿ ಹರಡುತ್ತ ಹೋದ ಹಾಗೆಲ್ಲ ಪತ್ರಿಕೆಗಳ ಒಲವು ವ್ಯಾಪನೆಯೂ ಇನ್ನೂ ಹೆಚ್ಚಲೇಬೇಕು. ಜನರ ಜ್ಞಾನ ಅಭಿಪ್ರಾಯ, ನಡತೆ, ಮಾತು, ವ್ಯಾಪಾರ, ವ್ಯವಹಾರ ಇವೆಲ್ಲವನ್ನೂ ಪತ್ರಿಕೆಗಳು ಒಂದಲ್ಲ ಒಂದು ವಿಧದಿಂದ ತಿದ್ದುತ್ತಲೇ ಇವೆ.
ಹೀಗೆ ದೇಶಜೀವನದ ಮುಖ್ಯ ಉಪಕರಣಗಳ ಪೈಕಿ ಅತಿಮುಖ್ಯವಾದ, ನಮ್ಮೆಲ್ಲರ ದಿನಚರ್ಯೆಗೆ ನಾಂದಿಯಾಗಿರುವ ವೃತ್ತಪತ್ರಿಕೆಗೂ ಪೂರ್ವೋತ್ತರಗಳಿವೆ, ಅದಕ್ಕೂ ಒಂದು ಇತಿಹಾಸವಿದೆ. ಲೋಕ ವಾರ್ತೆಯನ್ನು ರಾಜನೂ, ರಾಜವಾರ್ತೆಯನ್ನು ಪ್ರಜೆಗಳೂ ತಿಳಿದುಕೊಳ್ಳುವುದು ಆವಶ್ಯಕ ವೆಂಬುದನ್ನು ನಮ್ಮ ಪೂರ್ವಿಕರು ಕಂಡುಕೊಂಡಿದ್ದರು. ಅದಕ್ಕಾಗಿಯೇ ಪುರಾತನ ರಾಜ್ಯಗಳಲ್ಲಿ ಬೇಹುಗಾರರು ರಾಜರಿಗೋಸ್ಕರವಾಗಿಯೂ, ಡಂಗುರದವರು ಜನರಿಗೋಸ್ಕರವಾಗಿಯೂ ನೇಮಕವಾಗಿರುತ್ತಿದ್ದರು.
ಪ್ರಾಚೀನ ರೋಮ್ ರಾಷ್ಟದಲ್ಲಿ ಆಯಾ ದಿವಸದ ವಿಶೇಷವನ್ನು ‘ಎದಿನವಾರ್ತೆ’ ಎಂಬ ಒಂದು ದಫ್ತರದಲ್ಲಿ ಬರೆಯಿಸಿ ಚಾವಡಿಯಲ್ಲಿರಿಸುವ ಪದ್ಧತಿಯಿತ್ತು. ಆದರೆ, ದೇಶ- ವಿದೇಶಗಳ ವೃತ್ತಾಂತ ಗಳನ್ನು ಅನೇಕ ಪ್ರತಿಗಳಲ್ಲಿ ಅಚ್ಚಿಟ್ಟು ಜನರಲ್ಲಿ ಹಂಚುವ ವ್ಯಾಪಾರವು ಈಚಿನದು. ಅದು ಮುದ್ರಣ ಕಲೆಯ ಬೆಳೆವಣಿಗೆಯಿಂದ ಉತ್ಪನ್ನವಾದುದು.
ಮುದ್ರಣ ಯಂತ್ರೋಪಕರಣಗಳು, ವಿಧಾನವನ್ನು ಮೊದಲು ಕಂಡುಹಿಡಿದವನು ಚೀನಾ ದೇಶದ ಪಿ-ಷಿಂಗ್ ಎಂಬ ಅಕ್ಕಸಾಲಿಗನಂತೆ, ಅವನು ಅಕ್ಷರಗಳನ್ನು ಸಣ್ಣ-ಸಣ್ಣ ಮರದ ದಿಮ್ಮಿಗಳ ಮೇಲೆ ಕೆತ್ತಿ ಅದರಿಂದ ಕಾಗದದ ಮೇಲೆ ಅಚ್ಚೊತ್ತುತ್ತಿದ್ದನು. ಈ ವಿಧಾನದಿಂದ ಅಚ್ಚಾದ ವೃತ್ತಪತ್ರಿಕೆ ಯೊಂದು ಆ ದೇಶದ ರಾಜಧಾನಿಯಲ್ಲಿ ಕ್ರಿಸ್ತ ಶಕ 618ನೇಯ ಇಸ್ವಿಯ ಹಿಂದೆಯೇ ಪ್ರಕಟ ವಾಗುತ್ತಿತ್ತಂತೆ.
ಹೀಗೆ ಮೊದಲಾದ ಅಕ್ಷರ ಮುದ್ರಣ ಕಲೆಯು ಕ್ರಿಶ ಸುಮಾರು 1460ರ ವೇಳೆಗೆ ಯೂರೋಪ್ ಖಂಡದ ಜರ್ಮನಿ, ಹಾಲೆಂಡ್ ಮೊದಲಾದ ದೇಶಗಳಿಗೆ ಬಂದು ಪ್ರವರ್ಧಮಾನವಾಯಿತು. ಅಲ್ಲಿಂದ ಕೆಲವು ವರ್ಷಗಳೊಳಗಾಗಿ ಆ ಕಲೆಯು ಇಂಗ್ಲೆಂಡ್ ದೇಶಕ್ಕೆ ಹೋಗಿ ನೆಲಸಿತು. ಅಲ್ಲಿಂದೀ ಚೆಗೆ ಸೀಸ ಮೊದಲಾದ ಲೋಹಗಳಿಂದ ಅಕ್ಷರಗಳನ್ನು ಎರಕಹೊಯ್ಯುವ ಸಂಶೋಧನೆಗಳೂ, ಅಕ್ಷರಗಳ ಗಾತ್ರ ರೂಪಗಳೂ ಕಮೇಣ ಉತ್ತಮವಾಗುತ್ತ ಬಂದಿವೆ.
ಈ ಮುದ್ರಣ ಕಲೆಯ ಚರಿತ್ರೆಯು ಆಶ್ಚರ್ಯವನ್ನುಂಟು ಮಾಡಬಲ್ಲದಾಗಿದೆ. ಕಾಗದದ ಕಥೆಯೂ ಆದೇ ರೀತಿ ಇದೆ. ಕಾಗದವನ್ನು ಮೊದಲು ತಯಾರು ಮಾಡಿದವರೂ ಚೀನದವರೇ, ಅವರಿಂದ ಅರಬ್ಬೀ ದೇಶದವರೂ, ಅವರಿಂದ ಸ್ಪೇನ್ ದೇಶದವರೂ ಆ ವಿದ್ಯೆಯನ್ನು ಕಲಿತುಕೊಂಡರು. ಕ್ರಿಶ 1300ರ ವೇಳೆಗೆ ಸ್ಪೇನ್, ಇಟಲಿ, ಹಾಲೆಂಡ್ ಮೊದಲಾದ ದೇಶಗಳಲ್ಲಿ ಅನೇಕ ಕಾಗದದ ಕಾರ್ಖಾನೆ ಗಳು ಹುಟ್ಟಿಕೊಂಡು ಕಾಗದದ ಉಪಯೋಗವು ಯೂರೋಪಿನಲ್ಲಾ ಹರಡಿತ್ತು ಎನ್ನುವುದು ತಿಳಿದುಬರುತ್ತದೆ.
ಹಾಗಾಗಿ, ಕಾಗದದ ಕಾರ್ಖಾನೆಯೂ, ಅಚ್ಚಿನ ಕಾರ್ಖಾನೆಯೂ ವೃತ್ತಪತ್ರಿಕೆಯ ಉದ್ದಿಮೆಗೆ ತಾಯಿ-ತಂದೆಗಳು ಅಂತ ಹೇಳಬಹುದು. ಆ ಕಾಲಕ್ಕೆ ಪತ್ರಿಕೆ ಒಂದು ಉದ್ಯಮವಾಗಿರಲಿಲ್ಲ, ತೀರ ಇತ್ತೀಚೆಗೆ ಅದು ‘ಪತ್ರಿಕೋದ್ಯಮ’ ಅಂತ ಕರೆಸಿಕೊಳ್ಳಲು ಶುರು ವಿಟ್ಟುಕೊಂಡಿದ್ದು. ಅದು ಸರಿಯೇ, ಆದರೆ ಯಾರಿಗೆ ಪತ್ರಿಕೋದ್ಯಮಿಯಾಗಬೇಕೆಂದಿದೆಯೋ ಅಥವಾ ಯಾರು ಪತ್ರಿಕೋದ್ಯಮವೂ ಇತರ ಕಸುಬುಗಳಂತೆ ಜೀವನೋಪಾಯಕ್ಕೆ ಎಂದು ತಿಳಿದಿಕೊಂಡಿದ್ದಾರೋ ಅಂಥವರಿಗೆ ಕೆಲವು ಕಿವಿಮಾತುಗಳನ್ನು ಡಿವಿಜಿ ಹೇಳುತ್ತಾರೆ.
ವಕೀಲನ ಕೆಲಸಕ್ಕೆ, ವೈದ್ಯರ ಕೆಲಸಕ್ಕೆ ಅಥವಾ ಉಪಾಧ್ಯಾಯನ ಕೆಲಸಕ್ಕೆ ಒಂದು ವಿಶೇಷ ವಿದ್ಯಾ ಭ್ಯಾಸವುಂಟೋ, ಅದೇ ರೀತಿಯಲ್ಲಿ ಪತ್ರಿಕೋದ್ಯಮಕ್ಕೂ ಇದೆ. ಉತ್ಸಾಹವಿರುವ ಯಾರೆಂದರೆ ಅವರು ಪತ್ರಿಕೋದ್ಯಮಿಯಾಗಲು ಸಾಧ್ಯವಿಲ್ಲ, ಪತ್ರಕರ್ತನಾದವನು ಸತತವಾಗಿ ಪುಸ್ತಕಗಳನ್ನು ಓದುತ್ತ ಸದಾ ಅಧ್ಯಯನಶೀಲ ವಿದ್ಯಾರ್ಥಿಯಾಗಿಯೇ ಇರ ಬೇಕು ಎನ್ನುತ್ತಾರೆ ಡಿವಿಜಿ.
ಸಮಾಜದಲ್ಲಿ ಪ್ರಮುಖರೆನಿಸಿಕೊಂಡ ವೈದ್ಯರು, ವಕೀಲರು, ಉದ್ದಿಮೆದಾರರು, ಸಾಹಿತಿಗಳು ಹಾಗೂ ರಾಜಕಾರಣಿಗಳು, ಮಂತ್ರಿಗಳು ಕೂಡಾ ಆಗಾಗ ಪತ್ರಿಕೆಗಳಲ್ಲಿ ಬರೆಯುವ ಅಭ್ಯಾಸ ಮಾಡಿಕೊಳ್ಳ ಬೇಕು. ಇವರುಗಳಿಗೆ ಪತ್ರಿಕೆಗಳ ಸಹಾಯ ಬೇಕೇ ಬೇಕು, ಇವರ ಭಾಷಣಗಳನ್ನು ಪತ್ರಿಕೆಗಳು ವರದಿ ಮಾಡಬೇಕು ಎನ್ನುವ ವಾಂಛೆ ಇದ್ದೇ ಇರುತ್ತೆ.
ಹಾಗಾಗದಿದ್ದಾಗ ಇವರುಗಳಿಗೆ ಪತ್ರಿಕೆಗಳ ಮೇಲೆ ಕೋಪವೂ ಬರುತ್ತೆ. ಹಾಗಾಗಿ ಭಾಷಣಗಳನ್ನು ಮಾಡುವುದರ ಜತೆಜತೆಗೆ ವರ್ಷದಲ್ಲಿ ಒಂದೆರಡು ಲೇಖನಗಳನ್ನು ಬರೆದರೆ ಅವರ ಬಲವೂ ಹೆಚ್ಚುತ್ತದೆ ಹಾಗೂ ಪತ್ರಿಕೆಗಳ ಬಲವೂ ಹೆಚ್ಚಲಿದೆ ಎನ್ನುವುದು ಗುಂಡಪ್ಪನವರ ಅಭಿಪ್ರಾಯ. ಪ್ರಾಯಶಃ ಗುಂಡಪ್ಪನವರ ಈ ಅಭಿಪ್ರಾಯದ ಆಧಾರದಲ್ಲಿಯೇ ವಿಶ್ವೇಶ್ವರ ಭಟ್ಟರಂಥ ಸಂಪಾದಕರು ಸಮಾಜದ ಅನೇಕ ಪ್ರಮುಖರನ್ನು ಬರೆಯಲು ಹಚ್ಚಿದ್ದು ಅಂತ ಕಾಣುತ್ತದೆ.
ವೈದ್ಯರು, ವಕೀಲರು, ಉದ್ದಿಮೆದಾರರು, ಸಾಹಿತಿಗಳು ಅಷ್ಟೇ ಏಕೆ ರಾಜಕಾರಣಿಗಳಿಂದಲೂ ಭಟ್ಟರು ಅಂಕಣಗಳನ್ನು ಬರೆಸಿರುವುದು ನಮಗೆ ತಿಳಿದೇ ಇದೆ. ಇನ್ನು ಪತ್ರಕರ್ತನಾದವನಿಗೆ ಹೇಳುತ್ತಾ, ಸರ್ ಎಂ.ವಿಶ್ವೇಶ್ವರಯ್ಯನವರು ದಿವಾನರಾಗಿದ್ದ ಕಾಲದಲ್ಲೂ ಡಿವಿಜಿಯವರ ಸಾರಥ್ಯದ ‘ಕರ್ನಾಟಕ ಪತ್ರಿಕೆ’ ವಿಶ್ವೇಶ್ವರಯ್ಯನವರ ಕುರಿತು ಪಕ್ಷಪಾತವುಳ್ಳದ್ದಾಗಿರಲಿಲ್ಲ, ಅದು ಯಾರಾದರಾಗಲಿ, ಪತ್ರಿಕೆ ಮಾತ್ರ ನಿಷ್ಪಕ್ಷಪಾತವಾಗಿ ಹಾಗೂ ಸ್ವತಂತ್ರವಾಗಿ ನಡೆಯಬೇಕು ಎನ್ನುವುದು ನನ್ನ ವೃತಿಯಾಗಿತ್ತು ಎನ್ನುತ್ತಾರೆ.
ಅದಕ್ಕಾಗಿಯೇ ವಿಶ್ವೇಶ್ವರಯ್ಯನವರು ಡಿವಿಜಿಯ ವರನ್ನು ಕಂಡಾಗಲೆಲ್ಲ, You have become a very virulent critic (ನೀನು ವಿಷಕಂಟಕಪ್ರಾಯ ವಿಮರ್ಶಕ ನಾಗುತ್ತಿದ್ದೀಯೆ) ಎನ್ನುತ್ತಿದ್ದರಂತೆ.
ಕೆಲವು ಸರಕಾರಿ ಅಧಿಕಾರಿಗಳು ಅವರ ಪತ್ರಿಕೆ ಇದು ‘ಕರ್ನಾಟಕ’ ಅಲ್ಲ, ‘ಕಾರ್ಕೋಟಕ’ ಪತ್ರಿಕೆ ಎನ್ನುತ್ತಿದ್ದರಂತೆ. 1977ರ ಮಹಾ ಚುನಾವಣೆಯ ಕಾಲಕ್ಕೆ ಕಾಂಗ್ರೆಸ್ ಬಲ ಹೀನವಾಗಿದೆ ಎಂದು ಸ್ಪಷ್ಟವಾಗುವವರೆಗೂ ಭಾರತದ ಬಹುತೇಕ ಪತ್ರಿಕೆಗಳು ಕಾಂಗ್ರೆಸ್ ಸರಕಾರದ ವಿಷಯದಲ್ಲಿ ಹಲ್ಲು ಕಚ್ಚಿಯೇ ಮಾತನಾಡುತ್ತಿದ್ದವು, ಅಲ್ಲಿಂದೀಚೆಗೆ ಜನರ ಮನಸ್ಸು ಸ್ವತಂತ್ರವಾಗಿ ನಡೆಯುವುದೂ ಉಂಟು ಎಂದು ಗೊತ್ತಾದ ಮೇಲೆ ಭಾರತೀಯ ಪತ್ರಿಕೆಗಳಲ್ಲಿ ನಿರ್ಭೀತಿ, ನಿರ್ದಾಕ್ಷಿಣ್ಯಗಳು ಕೊಂಚಕೊಂಚವಾಗಿ ಕಾಣಲು ಶುರುವಾಯಿತು ಎನ್ನುತ್ತಾರೆ ಡಿವಿಜಿ.
ಡಿವಿಜಿಯವರು ಪತ್ರಕರ್ತನನ್ನು ಮಹರ್ಷಿ ನಾರದರಿಗೆ ಹೋಲಿಸಿ ಬಹಳ ಮಾರ್ಮಿಕವಾಗಿ ಹೀಗೆ ಬರೆಯತ್ತಾರೆ. ದೇವತಾ ಪ್ರಪಂಚದಲ್ಲೂ ಹಾಗೂ ಪುರುಷ ಪ್ರಪಂಚದಲ್ಲೂ ನಾರದರು ಈಗಿನ ಪತ್ರಕರ್ತರು ಮಾಡುವ ಕೆಲಸವನ್ನೇ ಮಾಡುತ್ತಿದ್ದರು. ಲೋಕವಾರ್ತೆಯನ್ನು ಸಾರುವುದೂ, ದುಷ್ಟ- ಚೇಷ್ಟೆಯನ್ನು ಗಮನಕ್ಕೆ ತರುವುದೂ, ಲೋಕಕ್ಕೆ ಹಿತವನ್ನು ಸೂಚಿಸುವುದೂ ಹಾಗೂ ಅಧಿಕಾರಸ್ಥರನ್ನು ಯುಕ್ತಿಯಿಂದ ತಿದ್ದುವುದು ನಾರದರು ಮಾಡುತ್ತಿದ್ದ ಕೆಲಸವಾಗಿತ್ತು.
ಹಿರಣ್ಯಕಷ್ಯಪುವಿಗೆ ಅಪಾಯವನ್ನು ಸೂಚಿಸಿದರು, ದೇವೇಂದ್ರನಿಗೆ ಎಚ್ಚರಿಕೆ ನೀಡಿದರು, ಸತ್ಯ ಭಾಮೆಗೆ ಆಕೆಯ ಹಕ್ಕನ್ನು ತಿಳಿಸಿದರು, ಧ್ರುವನಿಗೆ ಹಿತೋಪದೇಶ ಮಾಡಿದರು, ಅರ್ಜುನನಿಗೆ ಗರ್ವಭಂಗ ಮಾಡಿದರು, ಮಹಾವಿಷ್ಣುವಿಗೆ ಲೋಕಗಳ ವಾರ್ತೆಗಳನ್ನು ಅರುಹಿ, ಸಕಲ ಜೀವಿಗಳಿಗೆ ದೈವ ಲೀಲೆಯನ್ನು ಕೀರ್ತಿಸುತ್ತಿದ್ದರು. ಈಗ ನಾರದರಿಲ್ಲ, ಅವರು ಮಾಡುತ್ತಿದ್ದ ಹಿತ ಹೇಳುವ, ಎಚ್ಚರಿಸುವ ಹಾಗೂ ಉಪದೇಶಿಸುವ ಕೆಲಸವನ್ನು ಈಗ ಪತ್ರಕರ್ತನು ಮಾಡಬೇಕಿದೆ ಎನ್ನುತ್ತಾರೆ ನಮ್ಮ ಗುಂಡಪ್ಪನವರು.
ಒಟ್ಟಿನಲ್ಲಿ, ಗುಂಡಪ್ಪನವರ ವೃತ್ತಪತ್ರಿಕೆಯ ಮೇಲಿರುವ ಈ ಕಿರು ಪುಸ್ತಕ, ಶತಮಾನ ಸಂದರೂ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಪಠ್ಯವಾಗುವಷ್ಟು, ಆಗಲೇ ಪತ್ರಿಕೋದ್ಯಮದಲ್ಲಿ ನಿರತ ರಾಗಿರುವ ಪತ್ರಕರ್ತರಿಗೆ ಮಾರ್ಗದರ್ಶಕವಾಗಬಲ್ಲಷ್ಟು ಪ್ರಸ್ತುತವಾಗಿದೆ. ಪತ್ರಕರ್ತರಾಗ ಬಯಸು ವವರೂ ಹಾಗೂ ಪತ್ರಕರ್ತರಾದವರು ಓದಲೇಬೇಕಾದ ಪುಸ್ತಕವಿದು.