ಜನಪಥ
ಅರಾವಳಿ ಬೆಟ್ಟಗಳಿಗೆ ಸಂಬಂಧಿಸಿ ತಜ್ಞ ಸಮಿತಿ ಶಿಫಾರಸು ಮಾಡಿದ ಮರುವ್ಯಾಖ್ಯಾನವನ್ನು ಅಂಗೀಕರಿಸಿದರೆ, 100 ಮೀ. ಎತ್ತರಕ್ಕಿಂತ ಕಡಿಮೆ ಇರುವ ಎಲ್ಲಾ ಬೆಟ್ಟಗಳನ್ನು ಗಣಿಗಾರಿಕೆಗೆ ಮುಕ್ತಗೊಳಿಸಲಾಗುತ್ತದೆ. ಇದರಿಂದ ಅರಾವಳಿ ಬೆಟ್ಟ, ಶ್ರೇಣಿಗಳು ತಮ್ಮ ಸಮಗ್ರತೆ ಕಳೆದು ಕೊಂಡು ಪರಿಸರ ಸಮತೋಲನಕ್ಕೆ ಅಡ್ಡಿಯಾಗಲಿದೆ ಎಂದು ಅಮಿಕಸ್ ಕ್ಯೂರಿ ಕೆ. ಪರಮೇಶ್ವರನ್ ಆತಂಕ ಹೊರ ಹಾಕಿದ್ದರು.
ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ತಾವು ನಿವೃತ್ತಿ ಯಾಗುವ ಕೆಲ ದಿನಗಳಿಗೆ ಮುನ್ನ ಅರಾವಳಿ ಬೆಟ್ಟ ಸಾಲುಗಳ ಮರುವ್ಯಾಖ್ಯಾನದ ಕುರಿತು ನೀಡಿದ್ದ ತೀರ್ಪು ಆ ಭಾಗದ ಪರಿಸರ ಪ್ರೇಮಿಗಳ ವ್ಯಾಪಕ ಖಂಡನೆಗೆ ಪಾತ್ರವಾಗಿದ್ದರಿಂದ ಸುಪ್ರೀಂ ಕೋರ್ಟ್‌ನ ಹಾಲಿ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು ನಿವೃತ್ತ ಸಿಜೆಐ ನೇತೃತ್ವದ ಪೀಠದ ತೀರ್ಪಿಗೆ ಮಧ್ಯಂತರ ತಡೆ ನೀಡಿರುವ ಅಪರೂಪದ ವಿದ್ಯಮಾನ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದವರು ಸಲ್ಲಿಸಿದ ಮರುಪರಿಶೀಲನಾ (ರಿವ್ಯೂ) ಅರ್ಜಿಗಳ ಬದಲಿಗೆ ಸ್ವಯಂ ಪ್ರೇರಿತವಾಗಿ (suo moto) ಪ್ರಕರಣವನ್ನು ಕೈಗೆತ್ತಿಕೊಂಡು, ತೀರ್ಪಿನ ಜಾರಿಗೆ ತಡೆಯೊಡ್ಡಿರು ವುದು ಸುಪ್ರೀಂಕೋರ್ಟ್ ಮಟ್ಟಿಗೆ ವಿಶೇಷ ಬೆಳವಣಿಗೆ. ಪ್ರಕರಣದ ಗಂಭೀರತೆಯು ಸುಪ್ರೀಂ ಕೋರ್ಟಿನ ಸಿಜೆಐ ಸೂರ್ಯಕಾಂತ್ ಅವರಿಗೆ ಅರ್ಥವಾಗಿದೆ ಎನ್ನುವುದನ್ನೇ ಇದು ಸೂಚಿಸುತ್ತದೆ.
ಅರಾವಳಿ ಬೆಟ್ಟಸಾಲುಗಳ ಕುರಿತ ಮರುವ್ಯಾಖ್ಯಾನ ಹಾಗೂ ಈ ಪರಿಸರ ಸೂಕ್ಷ್ಮ ಬೆಟ್ಟಸಾಲುಗಳ ಸ್ಥಿತಿಗತಿಗಳ ಕುರಿತು ಅಧ್ಯಯನ ಮಾಡಲು ತಜ್ಞರ ಸಮಿತಿ ರಚನೆ ಮಾಡುವ ಪ್ರಸ್ತಾವವನ್ನು ಸಿಜೆಐ ಸೂರ್ಯಕಾಂತ್ ಅವರೀಗ ಮುಂದಿಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿ ಕೇಂದ್ರ ಹಾಗೂ ಸಂಬಂಧಪಟ್ಟ ರಾಜ್ಯಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಇಡೀ ಪ್ರಕರಣದಲ್ಲಿ ನಮಗೆ ಸಹಾಯ ಮಾಡುವಂತೆ ಕೇಂದ್ರದ ಅಟಾರ್ನಿ ಜನರಲ್ ವೆಂಕಟರಮಣಿ ಮತ್ತು ಹಿರಿಯ ವಕೀಲ ಪಿ.ಎಸ್.ಪರಮೇಶ್ವರ್ ಅವರಿಗೂ ನಿರ್ದೇಶನ ನೀಡಲಾಗಿದೆ. ಅರಾವಳಿ ಬೆಟ್ಟಗಳು ಹರಿಯಾಣದಿಂದ ಆರಂಭಗೊಂಡು ದೆಹಲಿ, ರಾಜಸ್ಥಾನ, ಗುಜರಾತ್‌ವರೆಗಿನ ಸುಮಾರು 700 ಕಿ.ಮೀ. ವ್ಯಾಪ್ತಿಗೆ ಹರಡಿಕೊಂಡಿವೆ.
ಇದನ್ನೂ ಓದಿ: Raghava Sharma Nidle Column: ದಿಲ್ಲಿಯಲ್ಲಿ ಜೀವಿಸಿದರೆ ನೀವು ಚೈನ್-ಸ್ಮೋಕರ್ ಎಂದೇ ಅರ್ಥ !
ದೆಹಲಿಯಿಂದ ರಾಜಸ್ಥಾನದ ಅಲ್ವಾರ್, ಭಾನ್‌ಗಢ, ಜೈಪುರ, ಉದಯಪುರ, ಚಿತ್ತೋರ್‌ಗಢ, ಮೌಟ್ ಅಬು ಪ್ರದೇಶಗಳಿಗೆ ಪ್ರವಾಸ ಮಾಡುತ್ತಾ ತೆರಳಿದಾಗ, ರಸ್ತೆಯುದ್ದಕ್ಕೂ ಹಬ್ಬಿರುವ ವಿಶಾಲವಾದ ಬೆಟ್ಟಸಾಲುಗಳನ್ನು ಕಾಣಬಹುದು. ಅಷ್ಟೇ ಅಲ್ಲದೆ, ವಿವಿಧ ಪ್ರಭೇದಗಳ, ಜೀವ-ವೈವಿಧ್ಯಗಳ ವಾಸ್ತವ್ಯ ತಾಣ ಇದಾಗಿದ್ದರೂ, ಇಲ್ಲಿ ಹಲವು ವರ್ಷಗಳಿಂದ ನಡೆಯುತ್ತಿರುವ ಗಣಿಗಾರಿಕೆ ಮತ್ತು ನಗರೀಕರಣದ ವಿಸ್ತರಣೆ ಬೆಟ್ಟಗಳಿಗೆ ಅತೀವವಾಗಿ ಹಾನಿ ಮಾಡುತ್ತಿದೆ.
ನಿವೃತ್ತ ಸಿಜೆಐ ಬಿ.ಆರ್.ಗವಾಯಿ ನೇತೃತ್ವದ ನ್ಯಾಯಪೀಠ ಇತ್ತೀಚಿಗೆ ನೀಡಿದ್ದ ತೀರ್ಪಿನಿಂದ ಹಾನಿ ಪ್ರಮಾಣ ದುಪ್ಪಟ್ಟಾಗಲಿದೆ ಎಂಬ ಆತಂಕವಿದೆ. ಕೇಂದ್ರ ಸರಕಾರದ ತಜ್ಞರ ಸಮಿತಿ ನೀಡಿದ್ದ ವರದಿಯನ್ನು ಅನುಮೋದಿಸಿದ್ದ ನ್ಯಾ.ಬಿ.ಆರ್. ಗವಾಯಿ ನೇತೃತ್ವದ ಪೀಠ, ಅರಾವಳಿ ಸುತ್ತಮುತ್ತ ಲಿನ ಭೂಪ್ರದೇಶದಿಂದ 100 ಮೀಟರ್ ಎತ್ತರದಲ್ಲಿ ಇರುವ ಭೂರೂಪಗಳನ್ನು ಮಾತ್ರ ‘ಅರಾವಳಿ’ ಬೆಟ್ಟಗಳು ಎಂದು ವ್ಯಾಖ್ಯಾನಿಸಬಹುದು ಎಂದು ಮರುವ್ಯಾಖ್ಯಾನ ಮಾಡಿತ್ತು.
ಅರಾವಳಿಯ ಹಲವು ಬೆಟ್ಟಗಳು 100 ಮೀಟರ್ ಮಾನದಂಡವನ್ನು ಪೂರೈಸುವುದಿಲ್ಲ ಎನ್ನುವುದು ಗಮನಾರ್ಹ. ಹಾಗಿದ್ದರೂ, ಅವು ಪರಿಸರ ಸಮತೋಲದ ಕಾಯ್ದುಕೊಳ್ಳಲು ಮಹತ್ವದ ಕೊಡುಗೆ ನೀಡುತ್ತಿವೆ ಎನ್ನುವುದು ಸರಕಾರಕ್ಕೆ ಗೊತ್ತಿಲ್ಲದೇನಿಲ್ಲ. ಆದರೆ, ಕೈಗಾರಿಕೋದ್ಯಮಿಗಳು, ಕಾರ್ಪೊ ರೇಟ್ ಸಂಸ್ಥೆಗಳ ಲಾಬಿಗೆ ಮಣಿದು, 100 ಮೀಟರ್ ಎತ್ತರದ ಮಾನದಂಡವನ್ನು ಸರಕಾರದ ತಜ್ಞರ ಸಮಿತಿ ನಿರ್ಧರಿಸಿರುವ ಸಾಧ್ಯತೆಗಳ ಬಗ್ಗೆ ಶಂಕೆ ಇದೆ.
ಆದರೆ, ಈ ಮಾನದಂಡವನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡದ್ದು ಕಳವಳಕಾರಿ. ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಕಾನೂನಾತ್ಮಕವಾಗಿ ಸಹಾಯ ಮಾಡಲು ಅಮಿಕಸ್ ಕ್ಯೂರಿ (ನ್ಯಾಯಾಲಯದ ಮಿತ್ರ) ಆಗಿ ನೇಮಕಗೊಂಡಿದ್ದ ಹಿರಿಯ ವಕೀಲ ಕೆ.ಪರಮೇಶ್ವರ್ ಕೂಡ 100 ಮೀ. ಮಾನದಂಡಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
ತಜ್ಞ ಸಮಿತಿ ಶಿಫಾರಸು ಮಾಡಿದ ವ್ಯಾಖ್ಯಾನವನ್ನು ಅಂಗೀಕರಿಸಿದರೆ, 100 ಮೀ. ಎತ್ತರಕ್ಕಿಂತ ಕಡಿಮೆ ಇರುವ ಎಲ್ಲಾ ಬೆಟ್ಟಗಳನ್ನು ಗಣಿಗಾರಿಕೆಗೆ ಮುಕ್ತಗೊಳಿಸಲಾಗುತ್ತದೆ ಮತ್ತು ಪರಿಣಾಮ ವಾಗಿ ಅರಾವಳಿ ಬೆಟ್ಟ, ಶ್ರೇಣಿಗಳು ತಮ್ಮ ಸಮಗ್ರತೆ ಕಳೆದುಕೊಂಡು ಪರಿಸರ ಸಮತೋಲನಕ್ಕೆ ಅಪಾಯ ಉಂಟು ಮಾಡುತ್ತವೆ ಎಂದು ಅವರು ಆತಂಕ ಹೊರ ಹಾಕಿದ್ದರು.
ಅರಾವಳಿಯಲ್ಲಿ ಅವ್ಯಾಹತ ಗಣಿಗಾರಿಕೆಯನ್ನು ಈಗಲೂ ಸೀಮಿತಗೊಳಿಸಲಾಗಿಲ್ಲ. 100 ಮೀ. ಎತ್ತರದ ಪ್ರದೇಶಗಳಲ್ಲೂ ನಿರಾತಂಕವಾಗಿ ಗಣಿಗಾರಿಕೆ ನಡೆಯುತ್ತಿರುವ ದೃಶ್ಯಗಳನ್ನು ರಾಷ್ಟ್ರೀಯ ಮಾಧ್ಯಮಗಳು ಬಿತ್ತರಿಸಿವೆ.
2018ರಲ್ಲಿ ಸುಪ್ರೀಂಕೋರ್ಟ್ ನೇಮಿಸಿದ್ದ ತಜ್ಞ ಸಮಿತಿಯು ತನ್ನ ವರದಿಯಲ್ಲಿ, “ಕಳೆದ 50 ವರ್ಷ ಗಳಲ್ಲಿ ರಾಜಸ್ಥಾನದಲ್ಲಿರುವ 128 ಅರಾವಳಿ ಬೆಟ್ಟಗಳಲ್ಲಿ 31 ಬೆಟ್ಟಗಳು ಅಕ್ರಮ ಕಲ್ಲು ಗಣಿಗಾರಿಕೆ ಯಿಂದಾಗಿ ಕಣ್ಮರೆಯಾಗಿವೆ ಮತ್ತು ಅರಾವಳಿ ಬೆಟ್ಟ ಸಾಲುಗಳ ಮಧ್ಯೆ 10-12 ದೊಡ್ಡ ಅಂತರಗಳು ತೆರೆದುಕೊಂಡಿವೆ" ಎಂದು ದಾಖಲು ಮಾಡಿತ್ತು.
ಅಂದು ರಾಜಸ್ಥಾನ ಸರಕಾರ 100 ಮೀಟರ್ ಮಾನದಂಡ ಬಳಸಿ ಗಣಿಗಾರಿಕೆಗೆ ಅನುಮತಿ ನೀಡಿತ್ತು. ಸುಪ್ರೀಂಕೋರ್ಟ್ ಇದೇ ಮಾನದಂಡವನ್ನು ಎಲ್ಲಾ ನಾಲ್ಕು ರಾಜ್ಯಗಳಿಗೆ ಅನ್ವಯವಾಗುವ ಏಕರೂಪದ ಮಾನದಂಡ ಎಂದು ನಿರ್ಧರಿಸಿತು. ಈ ನಿರ್ಧಾರಕ್ಕೀಗ ಮಧ್ಯಂತರ ತಡೆ ಬಿದ್ದಿದೆ.
2010ರಲ್ಲಿ ಫಾರೆಸ್ಟ್ ಸರ್ವೆ ಆಫ್ ಇಂಡಿಯಾ (FSI) ಪ್ರಸ್ತಾಪಿಸಿದ ಮತ್ತು ತಜ್ಞರ ಸಮಿತಿಯಿಂದ ಅನುಮೋದಿಸಲ್ಪಟ್ಟ ವ್ಯಾಖ್ಯಾನದ ಪ್ರಕಾರ, 3 ಡಿಗ್ರಿ ಅಥವಾ ಅದಕ್ಕಿಂತ ಹೆಚ್ಚಿನ ಇಳಿಜಾರನ್ನು ಹೊಂದಿರುವ ಬೆಟ್ಟಗಳು ಹಾಗೂ ಅವುಗಳ ಕೆಳಗಿನ ಭಾಗಗಳೂ ಅರಾವಳಿ ಬೆಟ್ಟ ಎಂದೇ ಗುರುತಿಸ ಲ್ಪಡುತ್ತವೆ.
100 ಮೀ. ತಪ್ಪಲಿನ ಬಫರ್ ವಲಯ ಮತ್ತು ಬೆಟ್ಟಗಳ ನಡುವಿನ 500 ಮೀ. ಅಂತರದಲ್ಲಿ ಸುತ್ತು ವರಿದ ಪ್ರದೇಶಗಳು ಮತ್ತು ಕಣಿವೆಗಳು ಅರಾವಳಿ ವ್ಯಾಪ್ತಿಯ ಬರುತ್ತವೆ ಎಂದು ತಿಳಿಸಲಾಗಿತ್ತು. ಇದನ್ನು 15 ವರ್ಷಗಳ ಹಿಂದೆ ಸುಪ್ರೀಂಕೋರ್ಟ್ ಕೂಡ ಅನುಮೋದಿಸಿತ್ತು. ವಿಚಿತ್ರ ಎಂದರೆ, ಇದೇ ಮಾನದಂಡವನ್ನು 2025ರಲ್ಲಿ ಇದೇ ಸುಪ್ರೀಂಕೋರ್ಟ್ ತಿರಸ್ಕರಿಸಿದೆ ಮತ್ತು 100 ಮೀ. ಎತ್ತರದ ಭೂರೂಪವನ್ನು ಮಾತ್ರ ಹಾಗೆನ್ನಬಹುದು ಎಂದು ಮರುವ್ಯಾಖ್ಯಾನ ಮಾಡುವ ತಜ್ಞರ (?) ವರದಿ ಯನ್ನು ಅನುಮೋದಿಸಿದೆ!!
ಅರಾವಳಿ ಕಾಡುಗಳು ಅಂತರ್ಜಲ ಮರುಪೂರಣವನ್ನು ಸುಗಮಗೊಳಿಸುವ, ಮಣ್ಣನ್ನು ಸ್ಥಿರ ಗೊಳಿಸುವ, ವನ್ಯಜೀವಿ ಓಡಾಟಕ್ಕೆ ಅನುಕೂಲಕರ ವಾತಾವರಣ ರೂಪಿಸುವ ಮತ್ತು ಅರೆ-ಶುಷ್ಕ ಪ್ರದೇಶಗಳಲ್ಲಿ ಸ್ಥಳೀಯ ಹವಾಮಾನ ಅನುಕೂಲಗೊಳಿಸುವ ಕೆಲಸ ಮಾಡುತ್ತಿವೆ.
ಗುಜರಾತ್, ರಾಜಸ್ಥಾನ, ಹರಿಯಾಣ, ದೆಹಲಿಯಾದ್ಯಂತ ಮಳೆ ಹೆಚ್ಚಿಸುವಲ್ಲಿ, ಬರಗಾಲ ತಡೆ ಗಟ್ಟುವಲ್ಲಿ ಮತ್ತು ತೇವಾಂಶವನ್ನು ಕಾಪಾಡಿಕೊಳ್ಳುವಲ್ಲಿ ಅರಾವಳಿ ಕಾಡುಗಳು ನಿರ್ಣಾಯಕ ವಾದ ಪರಿಸರೀಯ ಪಾತ್ರವನ್ನು ನಿರ್ವಹಿಸುತ್ತಿವೆ.
ಫಾರೆಸ್ಟ್ ಸರ್ವೆ ಆಫ್ ಇಂಡಿಯಾ (FSI) ಪ್ರಕಾರ, ಸುಪ್ರೀಂಕೋರ್ಟ್‌ನ ಹೊಸ ವ್ಯಾಖ್ಯಾನವನ್ನು ಅನ್ವಯಿಸಿ ನೋಡಿದರೆ, ಅರಾವಳಿ ಭೂರೂಪಗಳಲ್ಲಿ ಸುಮಾರು ಶೇ.8.7ರಷ್ಟು ಭೂಭಾಗಗಳು (12,081 ಅರಾವಳಿ ಬೆಟ್ಟಗಳಲ್ಲಿ 1,048) ಮಾತ್ರ 100 ಮೀಟರ್ ಮಾನದಂಡದ ವ್ಯಾಪ್ತಿಗೆ ಬರುತ್ತವೆ! ಅಂದರೆ, ಉಳಿದ ಭೂಭಾಗ ಅಥವಾ ಬೆಟ್ಟಗಳು ಅನಿಯಂತ್ರಿತ ಮಾನವ ಚಟುವಟಿಕೆಗಳಿಗೆ ತುತ್ತಾಗಲಿವೆ ಎಂದಾಯಿತು!
ಅರಾವಳಿ ಹೊಸ ವ್ಯಾಖ್ಯಾನದಂತೆ 100 ಮೀ. ಕೆಳಗಿನ ಬೆಟ್ಟಗಳನ್ನು ಕಳೆದುಕೊಂಡರೆ, ರಾಜಸ್ಥಾನದ ಥಾರ್ ಮರುಭೂಮಿಯಿಂದ ಗಾಳಿಯಲ್ಲಿ ಬರುವ ಮರಳು ಮತ್ತು ಧೂಳಿನ ಕಣಗಳಿಗೆ ಇಂಡೋ-ಗಂಗಾ ಬಯಲು ಪ್ರದೇಶಗಳು ತೆರೆದುಕೊಳ್ಳಲಿವೆ. ಇದರಿಂದ ದೆಹಲಿ, ಹರಿಯಾಣ, ಉತ್ತರ ಪ್ರದೇಶ ಸೇರಿ ಈ ಬಯಲು ಪ್ರದೇಶಗಳ ವ್ಯಾಪ್ತಿಯಲ್ಲಿ ವಾಸಿಸುವವರು ಹಾಗೂ ರೈತರ ಜೀವನೋ ಪಾಯಕ್ಕೆ ತೊಂದರೆಯಾಗಲಿದ್ದು, ಆರೋಗ್ಯಕ್ಕೂ ಅಪಾಯ ಉಂಟಾಗುವ ಸಾಧ್ಯತೆಯಿದೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿಯೇ 12,081 ಬೆಟ್ಟಗಳಲ್ಲಿ 1,048 ಬೆಟ್ಟಗಳು ಮಾತ್ರ 100 ಮೀಟರ್ ಎತ್ತರದ ಮಾನದಂಡವನ್ನು ಪೂರೈಸುತ್ತವೆ ಎಂಬ ಕಳವಳ ವಾಸ್ತವಿಕ ಮತ್ತು ವೈಜ್ಞಾನಿಕ ವಾಗಿ ಸರಿಯಾಗಿದೆಯೇ? ಇಲ್ಲಿ ಭೂವೈಜ್ಞಾನಿಕ ಪರಿಶೀಲನೆಯ ಅಗತ್ಯವಿದೆಯೇ ಎಂಬ ಬಗ್ಗೆ ಸುಪ್ರೀಂಕೋರ್ಟ್ ಸಿಜೆಐ ಸೂರ್ಯಕಾಂತ್ ಪೀಠ ಜನವರಿ 21ರಂದು ನಿರ್ಧರಿಸುವ ಸಾಧ್ಯತೆಯಿದೆ.
ವಿಶ್ವದ ಅತ್ಯಂತ ಹಳೆಯ ಪರ್ವತ ಶ್ರೇಣಿಗಳಲ್ಲಿ ಒಂದಾಗಿರುವ (2 ಶತಕೋಟಿ ವರ್ಷಗಳಿಗೂ ಹಳೆಯದು), ಪ್ರಾಚೀನ ಇತಿಹಾಸವುಳ್ಳ ಅರಾವಳಿ ಬೆಟ್ಟಗಳು ಥಾರ್ ಮರುಭೂಮಿಗೆ ಬಲವಾದ ತಡೆಗೋಡೆಯಂತೆ ಕಾರ್ಯನಿರ್ವಹಿಸುತ್ತಾ, ಉತ್ತರ ಭಾರತದ ಮಹತ್ವದ ಜಲ ಮರುಪೂರಣ ವಲಯವಾಗಿ, ಮಾಲಿನ್ಯ ತಡೆಗಟ್ಟುವ ರಕ್ಷಣಾ ಕವಚವಾಗಿವೆ.
ಈ ಬೆಟ್ಟ ಸಾಲುಗಳ ರಕ್ಷಣೆಯ ವಿಷಯದಲ್ಲಿ ಪರಿಸರ ಹೋರಾಟಗಾರರು ಹಾಗೂ ಮಾಧ್ಯಮಗಳು ಚಳವಳಿ ರೀತಿಯಲ್ಲಿ ತಮ್ಮ ಜವಾಬ್ದಾರಿ ನಿರ್ವಹಿಸದೇ ಇದ್ದಿದ್ದರೆ ಬಹುಶಃ ಸುಪ್ರೀಂಕೋರ್ಟ್ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಳ್ಳುವ ಸಾಧ್ಯತೆಗಳು ಕಡಿಮೆಯಿದ್ದವು. ಪ್ರಸಿದ್ಧ ಸುದ್ದಿ ವಾಹಿನಿಯೊಂದರ ಪತ್ರಕರ್ತರೊಬ್ಬರು ಅರಾವಳಿ ಬೆಟ್ಟಸಾಲುಗಳ ಮರುವ್ಯಾಖ್ಯಾನದ ಬಗ್ಗೆ ತೀರ್ಪು ಬರೆದ ನಿವೃತ್ತ ಸಿಜೆಐ ಬಿ.ಆರ್.ಗವಾಯಿ ಅವರನ್ನು ಸಂದರ್ಶನ ಮಾಡಿ, ಕೆಲ ಕಠಿಣ ಪ್ರಶ್ನೆಗಳನ್ನೇ ಕೇಳಿದಾಗ ಅವರಿಂದ ಅದೇ ಮಾದರಿಯಲ್ಲಿ ಉತ್ತರಗಳು ಬರಲಿಲ್ಲ.
ತಮ್ಮ ತೀರ್ಪಿನಲ್ಲಿರುವ ಅಂಶಗಳನ್ನು ಉಲ್ಲೇಖಿಸಿ, “ನಾವು ಕೇಂದ್ರ ಸರಕಾರದ ತಜ್ಞರ ಸಮಿತಿಯ ವರದಿ ಆಧರಿಸಿ ತೀರ್ಪು ನೀಡಿದ್ದೇವೆ" ಎಂದು ಸಮರ್ಥನೆ ನೀಡಿದರೂ, ಅರಾವಳಿಯ ಪರಿಸರ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳುವಲ್ಲಿ ನಿವೃತ್ತ ಸಿಜೆಐ ವಿಫಲರಾದರೇನೋ ಎಂದು ಸಂದರ್ಶನ ನೋಡಿದವರಿಗೆ ಅನ್ನಿಸದಿರದು.
ಅರಾವಳಿ ವ್ಯಾಪ್ತಿಯ ಬುಡಕಟ್ಟು ಜನರೂ ಸೇರಿದಂತೆ ಸಾವಿರಾರು ಮಂದಿ ನಡೆಸಿದ ಹೋರಾಟದ ಫಲವಾಗಿ ಒಂದೇ ತಿಂಗಳಲ್ಲಿ ಸುಪ್ರೀಂಕೋರ್ಟ್ ತನ್ನದೇ ತೀರ್ಪಿನ ಮರುಪರಿಶೀಲನೆಗೆ ಮುಂದಾ ಗಿದೆ ಎಂದರೆ ಈ ದೇಶದಲ್ಲಿ ಹೋರಾಟಗಳು ಇನ್ನೂ ಮೌಲ್ಯ ಕಳೆದುಕೊಂಡಿಲ್ಲ ಎಂದೇ ಅರ್ಥ.
ಅರಾವಳಿ ಕುರಿತ ಈಚಿನ ವಿದ್ಯಮಾನಗಳು 2010ರಲ್ಲಿ ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರಿನಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ ವಿರುದ್ಧ ಇದೇ ನ್ಯಾಯಾಲಯ ಸಿಡಿದೆದ್ದ ಘಟನಾವಳಿಗಳನ್ನು ನೆನಪಿಸುವಂತಿವೆ. ಅಂದು ಸಮಾಜ ಪರಿವರ್ತನ ಸಮುದಾಯದ ಎಸ್.ಆರ್. ಹಿರೇಮಠ್ ಅವರು ಗಣಿ ಮಾಲೀಕರ ವಿರುದ್ಧ ಏಕಾಂಗಿಯಾಗಿ ಹೋರಾಡಿದ್ದರು.
ಅದರ ಫಲವಾಗಿ, ಸುಪ್ರೀಂಕೋರ್ಟ್‌ನ ನಿವೃತ್ತ ಸಿಜೆಐ ದಿವಂಗತ ಎಸ್.ಎಚ್. ಕಪಾಡಿಯಾ, ಅಂದಿನ ಜಸ್ಟಿಸ್ ಅಫ್ತಾಬ್ ಆಲಂ ಮತ್ತು ಜಸ್ಟಿಸ್ ರಾಧಾಕೃಷ್ಣನ್ ಸಿಬಿಐ ತನಿಖೆಯ ತೀರ್ಪು ಬರೆದು, ಈ ಮೂರೂ ಜಿಲ್ಲೆಗಳಲ್ಲಿ ಪರಿಸರದ ಮರುಸ್ಥಾಪನೆಗಾಗಿ ಪರಿಸರ ಪುನರುಜ್ಜೀವನ ಕ್ರಮಗಳ ಜಾರಿಯಾಗಬೇಕು ಎಂದರು. ಈಗ ಕರ್ನಾಟಕದ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿದೆ.
ನೇತ್ರಾವತಿ ನದಿನೀರನ್ನು ಚಿಕ್ಕಬಳ್ಳಾಪುರ ಜಿಗೆ ಹರಿಸುವ ಎತ್ತಿನಹೊಳೆ ಯೋಜನೆಯಲ್ಲಿ ಅಕ್ರಮ ನಡೆದಿದೆ ಎಂದು ಕೇಂದ್ರ ಸರಕಾರವೇ ಹೇಳಿದೆ. ಈ ಯೋಜನೆ ಹೆಸರಲ್ಲಿ ಈಗಾಗಲೇ ವ್ಯಾಪಕ ಅರಣ್ಯ ನಾಶವಾಗಿದ್ದಲ್ಲದೆ, ಭಾರಿ ಭ್ರಷ್ಟಾಚಾರ ನಡೆದಿರುವ ಶಂಕೆಗಳಿವೆ. ಅರಾವಳಿ ಬೆಟ್ಟಸಾಲುಗಳ ರಕ್ಷಣೆ ವಿಷಯದಲ್ಲಿ ಹೇಗೆ ಜನರು ಮತ್ತು ಮಾಧ್ಯಮಗಳು ಒಗ್ಗೂಡಿದವೋ, ಅದೇ ರೀತಿಯಲ್ಲಿ ಕರ್ನಾಟಕ ಭಾಗದ ಅರಣ್ಯ, ನದಿಗಳ ರಕ್ಷಣೆಗೂ ನಾಗರಿಕರು ಕೈಜೋಡಿಸಿ, ಗಾಢನಿದ್ರೆಯಿಂದ ಹೊರ ಬರಬೇಕಿದೆ...