ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Raghava Sharma Nidle Column: ದಿಲ್ಲಿಯಲ್ಲಿ ಜೀವಿಸಿದರೆ ನೀವು ಚೈನ್-ಸ್ಮೋಕರ್‌ ಎಂದೇ ಅರ್ಥ !

ಧೂಮಪಾನದ ಚಟವಿಲ್ಲದಿದ್ದರೂ, ದಿಲ್ಲಿಯಲ್ಲಿ ಜೀವಿಸಿದರೆ ನೀವು ಚೈನ್-ಸ್ಮೋಕರ್ ಎಂದೇ ಅರ್ಥ!! ಮಾಲಿನ್ಯ ತಗ್ಗಿಸುತ್ತೇವೆ ಎಂದು ದಿಲ್ಲಿ ವಾಸಿಗಳಲ್ಲಿ ಹತ್ತು ಹಲವು ಕನಸುಗಳನ್ನು ಬಿತ್ತಿದ್ದ ಅರವಿಂದ ಕೇಜ್ರಿವಾಲ್ ಈಗ ಮಾಲಿನ್ಯದಲ್ಲಿ ಮರೆಯಾಗಿ ಹೋಗಿದ್ದಾರೆ. ವಾಯುಮಾಲಿನ್ಯ ತಗ್ಗಿಸುವುದರ ಜತೆಗೆ ಯಮುನಾ ನದಿಯನ್ನು ಸ್ವಚ್ಛಗೊಳಿಸುವುದಾಗಿ ಪ್ರಮಾಣ ಮಾಡಿದ್ದ ಮಾಜಿ ಸಿಎಂ ಕೇಜ್ರಿವಾಲ, ಭರವಸೆಗಳನ್ನು ಈಡೇರಿಸುವಲ್ಲಿ ಸೋತರು.

ದಿಲ್ಲಿಯಲ್ಲಿ ಜೀವಿಸಿದರೆ ನೀವು ಚೈನ್-ಸ್ಮೋಕರ್‌ ಎಂದೇ ಅರ್ಥ !

-

ಜನಪಥ

ವಾಯುಮಾಲಿನ್ಯದಿಂದಾಗಿ ದಿಲ್ಲಿ ವಾಸಿಗಳ ಜೀವಿತಾವಧಿ 10 ವರ್ಷದಷ್ಟು ಕಡಿಮೆ ಯಾಗಿರುವ ಸಾಧ್ಯತೆಗಳಿವೆ. ದಿಲ್ಲಿ ವಾಸಿಯ ಶ್ವಾಸಕೋಶ ಕಪ್ಪು ಬಣ್ಣಕ್ಕೆ ತಿರುಗಿರುವುದನ್ನು ವೈದ್ಯರೇ ತೋರಿಸುತ್ತಿದ್ದಾರೆ. ಧೂಮಪಾನದ ಚಟವಿಲ್ಲದಿದ್ದರೂ, ದಿಲ್ಲಿಯಲ್ಲಿ ಜೀವಿಸಿದರೆ ನೀವು ಚೈನ್-ಸ್ಮೋಕರ್ ಎಂದೇ ಅರ್ಥ!!

ದೇಶದ ರಾಜಧಾನಿ ದೆಹಲಿ ಮತ್ತೆ ವಾಯುಮಾಲಿನ್ಯದ ಕರಿಛಾಯೆಯಲ್ಲಿ ಮುಳುಗಿದೆ. ವಾಯು ಮಾಲಿನ್ಯ ಹಾಗೂ ಅದರಿಂದ ಜನರಿಗೆ ಉಂಟಾಗುತ್ತಿರುವ ತೊಂದರೆಯ ಬಗ್ಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಮತ್ತೆ ಚರ್ಚೆಗಳಾಗುತ್ತಿವೆ. ವಿಷಗಾಳಿ ತಡೆಗಟ್ಟುವಲ್ಲಿ ಕೇಂದ್ರ ಮತ್ತು ಸ್ಥಳೀಯ ದಿಲ್ಲಿ ಸರಕಾರಗಳು ಸಂಪೂರ್ಣವಾಗಿ ವಿಫಲವಾಗಿರುವ ಬಗ್ಗೆ ಜನ ರೋಸಿ ಹೋಗಿದ್ದಾರೆ.

ಬಿಜೆಪಿ/ಕಾಂಗ್ರೆಸ್/ಎಎಪಿ ಪಕ್ಷಗಳು ಪರಸ್ಪರ ಎಷ್ಟೇ ಬೈದಾಡಿಕೊಂಡರೂ, ವರ್ಷದಿಂದ ವರ್ಷಕ್ಕೆ ಜನ ನರಳಾಡುವುದು ತಪ್ಪುತ್ತಿಲ್ಲ. ಭಾರತದ ಆಡಳಿತ ಮತ್ತು ರಾಜಕಾರಣದ ಶಕ್ತಿಕೇಂದ್ರ ದಿಲ್ಲಿಯಲ್ಲಿ ಜನಪ್ರತಿನಿಧಿಗಳ ನಿರ್ಲಜ್ಜತನ ಹಾಗೂ ಬೇಜವಾಬ್ದಾರಿಯಿಂದಾಗಿ, ನೆಮ್ಮದಿಯ ಜೀವನ ನಡೆಸುವ ಮೂಲಭೂತ ಹಕ್ಕಿನಿಂದ ( Right to life) ಜನರು ವಂಚಿತರಾಗಿದ್ದಾರೆ.

10 ವರ್ಷಗಳ ಕಾಲ ದಿಲ್ಲಿಯಲ್ಲಿ ಅಧಿಕಾರದಲ್ಲಿದ್ದ ಆಮ್ ಆದ್ಮಿ ಪಾರ್ಟಿ ಸರಕಾರವೂ ಜನರ ನಿರೀಕ್ಷೆಯನ್ನು ಸುಳ್ಳು ಮಾಡಿತು. ದೆಹಲಿ ಈಗ ಬದುಕಲು ಯೋಗ್ಯವಲ್ಲದ, ಆರೋಗ್ಯಕ್ಕೆ ಭಾರಿ ಕುತ್ತು ತರುವ ಸ್ಥಳವಾಗಿ ಬಿಟ್ಟಿದೆ. ರಾಷ್ಟ್ರಪತಿ, ಪ್ರಧಾನಮಂತ್ರಿ, ಕೇಂದ್ರ ಸಚಿವರು, ಸಂಸದರು, ದಿಲ್ಲಿ ಮುಖ್ಯಮಂತ್ರಿ, ಶಾಸಕರು ದೊಡ್ಡ ದೊಡ್ಡ ಬಂಗಲೆಗಳಲ್ಲಿ ಏರ್ ಪ್ಯೂರಿಫೈಯರ್‌ಗಳನ್ನು ಅಳವಡಿಸಿಕೊಂಡು ವಿಷಕಾರಿ ಗಾಳಿಯಿಂದ ರಕ್ಷಣೆ ಪಡೆದುಕೊಂಡರೂ, ಜನಸಾಮಾನ್ಯರು, ಬಡ ಮಕ್ಕಳು, ವೃದ್ಧರು, ಮಹಿಳೆಯರ ಪಾಡು ಹೇಳತೀರದು.

ಮಾಲಿನ್ಯವನ್ನು ಸಹಿಸಿಕೊಂಡು, ಮಾಸ್ಕ್ ಧರಿಸಿ ಬದುಕುವುದು ಅನಿವಾರ್ಯವಾಗಿರುವುದರಿಂದ ಪರಿಸರದಲ್ಲಿ ಆಮೂಲಾಗ್ರ ಪರಿವರ್ತನೆ ತರಲು ಕೇಂದ್ರ ಅಥವಾ ದಿಲ್ಲಿ ಸರಕಾರ ಗಂಭೀರವಾಗಿ ಆಲೋಚನೆ ಮಾಡಿದೆ ಎಂದು ಅನಿಸುತ್ತಲೂ ಇಲ್ಲ. ದೊಡ್ಡ ದೊಡ್ಡ ಯೋಜನೆಗಳ ಅನುಷ್ಠಾನ‌ ದಲ್ಲಿ ತೋರುವ ನಿರುತ್ಸಾಹದಿಂದಾಗಿ ಭದ್ರ ಭವಿಷ್ಯದ ಭರವಸೆ ಮೂಡುತ್ತಿಲ್ಲ.

Screenshot_2 ಋ

ಹಾಗಾದರೆ, ಈ ವಿಷಗಾಳಿ, ಮಾಲಿನ್ಯದಿಂದ ಮುಕ್ತಿ ಇಲ್ಲವೇ? ಇದಕ್ಕೊಂದು ಶಾಶ್ವತ ಪರಿಹಾರ ಇಲ್ಲವೇ? ಸ್ಪಷ್ಟ ಉತ್ತರವಿಲ್ಲ. ರಾಜಧಾನಿಯಲ್ಲಿ ಉದ್ಯೋಗ ಮಾಡುತ್ತಾ, ವೃತ್ತಿ ಜೀವನದಲ್ಲಿ ಅತ್ತುತ್ತಮ ಅನುಭವ ಪಡೆಯಲು ದಿಲ್ಲಿ ಯೋಗ್ಯಸ್ಥಳ ಎನ್ನುವುದು ನನ್ನ ವೈಯಕ್ತಿಕ ಅನಿಸಿಕೆ. ಆದರೆ, ಉತ್ತಮ ಆರೋಗ್ಯದ ಖಚಿತತೆ ನೀಡಲಾರೆ. ದಿಲ್ಲಿಯಲ್ಲಿ 18 ವರ್ಷ ಪತ್ರಿಕೋದ್ಯಮ ಮಾಡಿದ್ದ ನಾನು, ಸುಮಾರು 15 ವರ್ಷಗಳಿಂದ ವಾಯುಮಾಲಿನ್ಯದ ಬಗ್ಗೆ ನಿರಂತರವಾಗಿ ವರದಿ ಮಾಡುತ್ತಲೇ ಬಂದಿದ್ದೇನೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ದಿಲ್ಲಿ ಸರಕಾರ, ಕೇಂದ್ರ ಸರಕಾರಗಳ ಹೊಣೆಗಾರಿಕೆ ಬಗ್ಗೆ ನೆನಪಿಸುವುದು, ತರಾಟೆಗೆ ತೆಗೆದುಕೊಳ್ಳುವುದು, ಶಾಲೆಗಳಿಗೆ ರಜೆ ಘೋಷಿಸುವುದು, ನೌಕರರು ಮನೆಯಿಂದ ಕೆಲಸ ಮಾಡುವುದು.. ಹೀಗೆ ಇವುಗಳ ಬಗ್ಗೆ ನವೆಂಬರ್, ಡಿಸೆಂಬರ್, ಜನವರಿ ತಿಂಗಳಲ್ಲಿ ವರದಿ ಮಾಡುವುದು ಪತ್ರಕರ್ತರಿಗೆ ವಾಡಿಕೆಯಾಗಿ ಬಿಟ್ಟಿದೆ. ಹಾಗಂತ, ವಾಯುವಿನ ಗುಣಮಟ್ಟ ಸುಧಾರಿಸುತ್ತಿದೆ ಎಂದು ವರದಿ ಮಾಡುವ ಭಾಗ್ಯ ನಮ್ಮದಾಗಲೇ ಇಲ್ಲ!

ಬಹುಶಃ ಈ ನೋವು ನನ್ನಂತೆ ಅನೇಕ ಪತ್ರಕರ್ತರಲ್ಲಿ ಇರಲೂಬಹುದು. ವಾಯು ಮಾಲಿನ್ಯಕ್ಕೆ ಪ್ರತಿ ವರ್ಷವೂ ತಾತ್ಕಾಲಿಕ ಪರಿಹಾರವನ್ನಷ್ಟೇ ಕಂಡುಕೊಳ್ಳಲಾಗುತ್ತಿದೆ. ಶಾಶ್ವತ ಪರಿಹಾರಕ್ಕೆ ಸುಪ್ರೀಂ ಕೋರ್ಟ್, ಕೇಂದ್ರ ಸರಕಾರ, ದಿಲ್ಲಿ ಸರಕಾರ ಏನಾದರೂ ಮಾಡಿವೆಯೇ? ಇದಕ್ಕೆ ಉತ್ತರ ‘ಇಲ್ಲ’ ಎಂದೇ ಹೇಳಬೇಕು.

ಪ್ರತಿವರ್ಷದ ಅಕ್ಟೋಬರ್ ತಿಂಗಳಿಂದ ದಿಲ್ಲಿಯ ಗಾಳಿಯ ಗುಣಮಟ್ಟ ಕುಸಿಯಲಾರಂಭಿಸುತ್ತದೆ. ಉಸಿರಾಟದ ಸಮಸ್ಯೆಗಳ ಬಗ್ಗೆ ಹೇಳಿಕೊಂಡು, ಜನವರಿ ಅಂತ್ಯದ ತನಕ ವೃದ್ಧರು, ಮಕ್ಕಳು, ಮಹಿಳೆ ಯರು ಆಸ್ಪತ್ರೆಗಳಿಗೆ ದಾಖಲಾಗುತ್ತಲೇ ಇರುತ್ತಾರೆ. ಕೆಲ ದಿನಗಳ ಹಿಂದೆ ಸುಪ್ರೀಂಕೋರ್ಟ್‌ನ ಹೊಸ ಮುಖ್ಯನ್ಯಾಯಮೂರ್ತಿಯಾಗಿ ನೇಮಕಗೊಂಡ ಸೂರ್ಯಕಾಂತ್ ಅವರು ಕೋರ್ಟ್ ಕಲಾಪ ವೊಂದರಲ್ಲಿ ಮಾತನಾಡುತ್ತಾ, ಬೆಳಗ್ಗೆ ವಾಯು ವಿಹಾರಕ್ಕೆ (morning walk) ಹೋದಾಗ ಮಾಲಿನ್ಯ ದಿಂದ ತಾವು ಅಸ್ವಸ್ಥರಾದ ಬಗ್ಗೆ ಬೇಸರ ಹೊರಹಾಕಿದ್ದರು.

ನಂತರ, ವಿಡಿಯೋ ಕಾನರೆ ಮುಖಾಂತರ ವಿಚಾರಣೆ ನಡೆಸುವುದಾಗಿ ವಕೀಲರಿಗೆ ತಿಳಿಸಿದ್ದರು. ವಾಯುಮಾಲಿನ್ಯದ ಬಗ್ಗೆ ದಿಲ್ಲಿ ಹಾಗೂ ಉತ್ತರ ಭಾರತದ ಇತರೆ ಕೆಲವು ರಾಜ್ಯಗಳ ಜನರು ಇನ್ನೂ ಏಕೆ ಸಿಡಿದೆದ್ದಿಲ್ಲ ಎನ್ನುವುದೇ ನನಗೆ ಅರ್ಥವಾಗದ ವಿಚಾರ. ಭ್ರಷ್ಟಾಚಾರದ ವಿಷಯದಲ್ಲಿ ಅಣ್ಣಾ ಹಜಾರೆ ಪರ ನಿಂತು ಜನಾಂದೋಲನ ನಡೆಸಿ, ಲೋಕಪಾಲ್‌ಗಾಗಿ ಹೋರಾಟ ನಡೆಸಿದ್ದ ಉತ್ತರ ಭಾರತೀಯರು, ಬದುಕುವ ಹಕ್ಕನ್ನು ಕಸಿದುಕೊಂಡಿರುವ ವಾಯುಮಾಲಿನ್ಯ ತಡೆಯಲು ಏಕೆ ಇನ್ನೂ ಧ್ವನಿ ಏರಿಸಿಲ್ಲ? ಅದೂ ಕಳೆದ 15 ವರ್ಷಗಳಿಂದ ಸಮಸ್ಯೆ ದುಪ್ಪಟ್ಟಾಗುತ್ತಿದ್ದರೂ ಈ ಪರಿಯ ಮೌನವೇಕೆ? ಎಂಬುದು ಅಚ್ಚರಿ ಮೂಡಿಸಿದೆ.

ಹಾಗಾದರೆ, ಜನಪ್ರತಿನಿಧಿ ಮತ್ತು ಅಧಿಕಾರಶಾಹಿಗಳ ಕಾಲರ್ ಹಿಡಿದು ಪ್ರಶ್ನಿಸುವ ಶಕ್ತಿಯನ್ನೇ ಜನರು ಕಳೆದುಕೊಂಡಿದ್ದಾರಾ ಅಥವಾ ನಾವೆಷ್ಟೇ ಬೊಬ್ಬೆ ಹೊಡೆದರೂ ಈ ದೇಶದಲ್ಲಿ ಏನೂ ಮಾಡಲಾಗದು ಎಂಬ ಜುಗುಪ್ಸೆ ಬಂದಿರಬಹುದೇ? ವಾಸ್ತವದಲ್ಲಿ ವಿಷಗಾಳಿಯು ಉತ್ತರ ಭಾರತೀಯರನ್ನು ಕೆರಳಿಸಬೇಕಿತ್ತು.

ಒಂದೆರಡು ದಶಕಗಳ ಹಿಂದೆ, ದಿಲ್ಲಿಯ ಚಳಿ ಎಂದರೆ ಸ್ವರ್ಗವೇ ಧರೆಗಿಳಿದಂತೆ ಎಂಬ ಭಾವ ಜನರನ್ನು ಆವರಿಸಿ ಬಿಡುತ್ತಿತ್ತು. ಆದರೆ ಈಗ? ಯಾಕಾದರೂ ಈ ಚಳಿಗಾಲ ಬರುತ್ತದೋ ಎಂದು ಶಾಪ ಹಾಕುವ ದುಸ್ಥಿತಿಯಿದೆ. ಚಳಿಯಲ್ಲಿ ದಟ್ಟ ಮಂಜು ಆವರಿಸುವುದು ಪ್ರಾಕೃತಿಕ ಬೆಳವಣಿಗೆ. ಆದರೆ ಈಗ ಅಸಾಧ್ಯ ವಿಷಕಾರಿ ಹೊಗೆ ರಾಷ್ಟ್ರ ರಾಜಧಾನಿ ಪ್ರದೇಶದ ಮಂಜನ್ನು ಆವರಿಸಿಬಿಟ್ಟಿದೆ.

ಆಸ್ತಮಾ ರೋಗಿಗಳು ಅಲ್ಲಲ್ಲಿ ಕಾಣಸಿಗುತ್ತಿzರೆ. ತಜ್ಞ ವೈದ್ಯರ ಪ್ರಕಾರ, ವಾಯುಮಾಲಿನ್ಯದಿಂದಾಗಿ ದಿಲ್ಲಿ ವಾಸಿಗಳ ಜೀವಿತಾವಧಿ 10 ವರ್ಷದಷ್ಟು ಕಡಿಮೆಯಾಗಿರುವ ಸಾಧ್ಯತೆಗಳಿವೆ. ಒಂದೆಡೆ, ಹಿಮಾಚಲ ಪ್ರದೇಶದ ಆರೋಗ್ಯಭರಿತ ವ್ಯಕ್ತಿಯ ಶ್ವಾಸಕೋಶ ಸುಂದರವಾಗಿದ್ದರೆ, ಮತ್ತೊಂದೆಡೆ ದಿಲ್ಲಿ ವಾಸಿಯ ಶ್ವಾಸಕೋಶ ಕಪ್ಪು ಬಣ್ಣಕ್ಕೆ ತಿರುಗಿರುವುದನ್ನು ವೈದ್ಯರೇ ತೋರಿಸುತ್ತಿದ್ದಾರೆ.

ಧೂಮಪಾನದ ಚಟವಿಲ್ಲದಿದ್ದರೂ, ದಿಲ್ಲಿಯಲ್ಲಿ ಜೀವಿಸಿದರೆ ನೀವು ಚೈನ್-ಸ್ಮೋಕರ್ ಎಂದೇ ಅರ್ಥ!! ಮಾಲಿನ್ಯ ತಗ್ಗಿಸುತ್ತೇವೆ ಎಂದು ದಿಲ್ಲಿ ವಾಸಿಗಳಲ್ಲಿ ಹತ್ತು ಹಲವು ಕನಸುಗಳನ್ನು ಬಿತ್ತಿದ್ದ ಅರವಿಂದ ಕೇಜ್ರಿವಾಲ್ ಈಗ ಮಾಲಿನ್ಯದಲ್ಲಿ ಮರೆಯಾಗಿ ಹೋಗಿದ್ದಾರೆ. ವಾಯುಮಾಲಿನ್ಯ ತಗ್ಗಿಸು ವುದರ ಜತೆಗೆ ಯಮುನಾ ನದಿಯನ್ನು ಸ್ವಚ್ಛಗೊಳಿಸುವುದಾಗಿ ಪ್ರಮಾಣ ಮಾಡಿದ್ದ ಮಾಜಿ ಸಿಎಂ ಕೇಜ್ರಿವಾಲ, ಭರವಸೆಗಳನ್ನು ಈಡೇರಿಸುವಲ್ಲಿ ಸೋತರು.

ದಿಲ್ಲಿ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾಗ, ಮಹಿಳೆಯರಿಗೆ ತಿಂಗಳಿಗೆ 2100 ರುಪಾಯಿ ಉಚಿತ ಆರ್ಥಿಕ ನೆರವು ಸೇರಿ ಹಲವು ಗ್ಯಾರಂಟಿಗಳ ಬಗ್ಗೆ ಆಸಕ್ತಿ ತೋರಿಸಿದ್ದ ಕೇಜ್ರಿವಾಲ, ಜನರಿಗೆ ವಿಷಗಾಳಿಯಿಂದ ರಿಲೀಫ್ ನೀಡುವುದಕ್ಕೆ ಆದ್ಯತೆ ನೀಡಲಿಲ್ಲ. 2020ರಲ್ಲಿ ವಾಯುಮಾಲಿನ್ಯ ಕಡಿಮೆ ಮಾಡುವುದು ಕೇಜ್ರಿವಾಲರ 10 ಗ್ಯಾರಂಟಿಗಳಲ್ಲಿ ಒಂದು ಪ್ರಮುಖ ವಿಷಯವಾಗಿತ್ತು. ‌

ವಾಯುಮಾಲಿನ್ಯವನ್ನು ಮೂರನೇ ಒಂದರಷ್ಟು ಕಡಿಮೆ ಮಾಡುತ್ತೇನೆ ಎಂದಿದ್ದ ಅವರು, ದಿಲ್ಲಿ ಅಬಕಾರಿ ಹಗರಣದಲ್ಲಿ ಸಿಲುಕಿಕೊಂಡು ತಿಹಾರ್ ಜೈಲು ಸೇರಿ ಸದ್ದು ಮಾಡಿದರು. ಮಾಲಿನ್ಯಮುಕ್ತ ಪರಿಸರವು ಕನಸಾಗಿಯೇ ಉಳಿಯಿತು. ಯಮುನಾ ಶುದ್ಧೀಕರಣ, 24 ಗಂಟೆ ಕುಡಿಯುವ ನೀರು ಪೂರೈಕೆ ಮತ್ತು ಜಾಗತಿಕ ಗುಣಮಟ್ಟದ ರಸ್ತೆಗಳನ್ನು ದಿಲ್ಲಿಗೆ ಒದಗಿಸಲು ಸಾಧ್ಯವಾಗಲಿಲ್ಲ ಎಂದು ಕೇಜ್ರಿವಾಲ್ ಒಪ್ಪಿಕೊಂಡರೂ, ಶುದ್ಧ ಗಾಳಿಯ ಗ್ಯಾರಂಟಿಯನ್ನು ಪೂರೈಸಲು ವಿಫಲನಾಗಿದ್ದೇನೆ ಎಂದು ಹೇಳಿಕೊಳ್ಳಲಿಲ್ಲ.

“ಇದು ಪ್ರಾದೇಶಿಕ ಸಮಸ್ಯೆ. ನೆರೆಯ ಹರಿಯಾಣ, ಪಂಜಾಬ್, ರಾಜಸ್ಥಾನ ಸೇರಿ ವಿವಿಧ ರಾಜ್ಯಗಳಲ್ಲಿ ರೈತರು ಕೂಳೆ ಸುಡುವುದರಿಂದ ದಿಲ್ಲಿಯಲ್ಲಿ ದಟ್ಟ ಹೊಗೆಯ ವಾತಾವರಣ ಆವರಿಸಿಕೊಳ್ಳುತ್ತದೆ. ದೆಹಲಿ ಅಥವಾ ರಾಷ್ಟ್ರ ರಾಜಧಾನಿ ಪ್ರದೇಶ (ಎನ್‌ಸಿಆರ್) ಮತ್ತು ಉತ್ತರ ಭಾರತವನ್ನು ಮಾಲಿನ್ಯ ದಿಂದ ಮುಕ್ತಗೊಳಿಸಬೇಕಾದರೆ ಎಲ್ಲಾ ರಾಜ್ಯಗಳು ಒಗ್ಗೂಡಬೇಕು. ಹೀಗಾಗಿ, ಕೇಂದ್ರ ಸರಕಾರಕ್ಕೆ ಪ್ರಶ್ನೆಗಳನ್ನು ಕೇಳುವ ಸಮಯ ಬಂದಿದೆ" ಎಂದು ಜಾರಿಕೊಂಡಿದ್ದರು.

ದಿಲ್ಲಿಯಲ್ಲಿ 27 ವರ್ಷಗಳ ನಂತರ ಅಧಿಕಾರದ ಗದ್ದುಗೆ ಏರಿರುವ ಬಿಜೆಪಿ, ಗಾಳಿಯಲ್ಲಿರುವ PM 2.5 ಅಥವಾ PM 10 (Particulate Matter Levels - ಪೃಥಕ್ಕಣ) ಮಟ್ಟವನ್ನು ಅರ್ಧದಷ್ಟು ಕಡಿಮೆ ಮಾಡುವುದಾಗಿ ಭರವಸೆ ನೀಡಿದೆ; 2030ರ ವೇಳೆಗೆ ದೆಹಲಿಯ ಸರಾಸರಿ ಹವಾಗುಣ ಮಟ್ಟವನ್ನು ( AQ- Air Quality) ಈಗಿನದಕ್ಕಿಂತ ಅರ್ಧಕ್ಕೆ ಇಳಿಸುವ ‘ದೆಹಲಿ ಕ್ಲೀನ್ ಏರ್ ಮಿಷನ್’ ಬಗ್ಗೆ ಪುನರು ಚ್ಚರಿಸಿದೆ.

ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ದಿಲ್ಲಿಯ ವಾಯುಮಾಲಿನ್ಯ ತಗ್ಗಿಸುವುದು ಯಾವ ಸರಕಾರ ಕ್ಕೂ ಸಾಧ್ಯವಿಲ್ಲ. ಆದರೆ, ಕೇಜ್ರಿವಾಲರನ್ನು ಗೇಲಿ ಮಾಡುತ್ತಿದ್ದ ಸ್ಥಳೀಯ ಬಿಜೆಪಿ ನಾಯಕರು ತಮ್ಮ ಜವಾಬ್ದಾರಿಗಳನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದನ್ನು ಜನರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಕಾರ್ಯಕ್ರಮವೊಂದರಲ್ಲಿ AQI ಬಗ್ಗೆ ಸರಳ ವ್ಯಾಖ್ಯಾನ ನೀಡಲು ತಡಬಡಾಯಿಸಿದ ರಬ್ಬರ್ ಸ್ಟ್ಯಾಂಪ್ ಮುಖ್ಯಮಂತ್ರಿ ರೇಖಾ ಗುಪ್ತಾರ ಮಾತುಗಳನ್ನು ಕೇಳಿದಾಗ ಮಾಲಿನ್ಯದ ಬಗೆಗಿನ ಅವರ ಬೌದ್ಧಿಕ ದಿವಾಳಿತನ ಬಯಲಾಗಿತ್ತು. ಜನರು ಮುಖ್ಯಮಂತ್ರಿಯನ್ನು ಸೋಷಿಯಲ್ ಮೀಡಿಯಾ ಗಳಲ್ಲಿ, ಸಾರ್ವಜನಿಕ ವೇದಿಕೆಗಳಲ್ಲಿ ಗೇಲಿ ಮಾಡಿದರು.

ಮಾಲಿನ್ಯ ವಿಷಯದಲ್ಲಿ ನಮ್ಮ ಬಹುಪಾಲು ಜನರಲ್ಲಿ ನಾಗರಿಕ ಪ್ರಜ್ಞೆ ಇಲ್ಲ. ಕೆಲ ವರ್ಷಗಳ ಹಿಂದೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವು ಆದೇಶವೊಂದನ್ನು ಹೊರಡಿಸಿ, ಯಮುನಾ ನದಿಗೆ ಕಸ-ಕಡ್ಡಿ, ಹೂವಿನ ಹಾರ (ಭಕ್ತಿಯ ಹೆಸರಲ್ಲಿ) ಸೇರಿ ಇತರೆ ತ್ಯಾಜ್ಯಗಳನ್ನು ಹಾಕುವ ಸಾರ್ವ ಜನಿಕರಿಗೆ 5000 ರುಪಾಯಿ ದಂಡ ಹಾಕುವುದಾಗಿ ತಿಳಿಸಿತ್ತು. ಆದರೆ, ಜನರ ವರ್ತನೆ ಬದಲಾಗಲಿಲ್ಲ.

ಹೀಗಾಗಿ, ದಿಲ್ಲಿ ಸರಕಾರ ಸೇತುವೆಯ ಎರಡೂ ಬದಿಯಲ್ಲಿ ಕಬ್ಬಿಣದ ನೆಟ್ ನಿರ್ಮಾಣ ಮಾಡಿ, ಕಸಗಳನ್ನು ಎಸೆಯದಂತೆ ತಡೆಯಲು ಯತ್ನಿಸಿತು. ಆದರೆ, ಪರಿಜ್ಞಾನವಿಲ್ಲದ ಜನಗಳು ಏನು ಮಾಡಿದರು..? ಪ್ಲಾಸ್ಟಿಕ್‌ಗಳಲ್ಲಿ ಹೂವನ್ನು ತುಂಬಿಸಿ, ಕಬ್ಬಿಣದ ನೆಟ್ ಮೇಲಿನಿಂದ ನದಿಗೆ ಎಸೆದು, ‘ನಮಗೆ ಒಳ್ಳೆಯದನ್ನೇ ಮಾಡಮ್ಮಾ’ ಎಂದು ಯಮುನಾ ಮಾತೆಯಲ್ಲಿ ಬೇಡಿಕೊಳ್ಳುತ್ತಿದ್ದರು.

ಬೇಜವಾಬ್ದಾರಿ ಸರಕಾರ, ಜನಪ್ರತಿನಿಧಿಗಳ ಮಧ್ಯೆ, ಇಂಥ ಅನಾಗರಿಕರು ತುಂಬಿಕೊಂಡಿರುವಾಗ ‘ನದಿ ಮತ್ತು ಗಾಳಿಯನ್ನು ಕಲುಷಿತಗೊಳಿಸಬೇಡಿ’ ಎಂಬ ಜಾಗೃತ ಮನಸ್ಸುಗಳ ಧ್ವನಿಗಳಿಗೆ ಬೆಲೆ ಎಲ್ಲಿರುತ್ತದೆ ಅಲ್ಲವೇ? ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆ ಮಾಡಲು ರಾಷ್ಟ್ರವ್ಯಾಪಿ ಸಾಮೂಹಿಕ ಆಂದೋಲನ ಮತ್ತು ಜಾಗೃತಿ ಅಭಿಯಾನಕ್ಕೆ 2022ರ ಗಾಂಧಿ ಜಯಂತಿಯಂದು ಚಾಲನೆ ನೀಡಿದ್ದರು. ಆದರೆ, ದೇಶದಲ್ಲಿ ಎಷ್ಟರಮಟ್ಟಿಗೆ ಏಕ-ಬಳಕೆ ಪ್ಲಾಸ್ಟಿಕ್ ನಿಷೇಧಗೊಂಡಿದೆ? ಅಂಗಡಿ-ಮುಂಗಟ್ಟುಗಳಲ್ಲಿ ತರಹೇವಾರಿಯಾಗಿ ಪ್ಲಾಸ್ಟಿಕ್ ಬ್ಯಾಗ್‌ಗಳು ಈಗಲೂ ಲಭ್ಯವಿವೆ.

ಕೇಂದ್ರ ಸರಕಾರ ಪ್ಲಾಸ್ಟಿಕ್ ಬಳಕೆ ಮೇಲೆ ನಿಷೇಧ ಹೇರುವ ಬದಲು ಅವುಗಳ ಉತ್ಪಾದನೆಗೆ ಕಡಿವಾಣ ಹಾಕಿದೆಯೇ? ಪ್ಲಾಸ್ಟಿಕ್ ಬಳಕೆ ನಿಷೇಧ ಜಾರಿಯಲ್ಲಿದೆಯೇ ಎಂಬುದನ್ನು ಪರೀಕ್ಷಿಸಲು ಸರಕಾರದ ಕಾರ್ಯಯೋಜನೆ ಏನಿದೆ? ಅಧಿಕಾರಿಗಳು ಈ ಬಗ್ಗೆ ಕೇಂದ್ರಕ್ಕೆ ವರದಿ ನೀಡುತ್ತಿದ್ದಾರಾ? ಅಥವಾ ಏಕಬಳಕೆ ಪ್ಲಾಸ್ಟಿಕ್ ಅನ್ನು ಕಣ್ಕಟ್ಟಿಗೆ ಮಾತ್ರ ನಿಷೇಧ ಮಾಡಲಾಗಿದೆಯೇ? ವಿಷಗಾಳಿ ಯನ್ನು ಉಸಿರಾಡುತ್ತಲೇ ದಿಲ್ಲಿಯಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಇತ್ತೀಚೆಗೆ ನಡೆಸ ಲಾಯಿತು.

ವಿಪರ್ಯಾಸ ಎಂದರೆ, ದಿಲ್ಲಿ ಮಾಲಿನ್ಯದ ಬಗ್ಗೆ ಸಂಸತ್ತಿನಲ್ಲಿ ಇದುವರೆಗೆ ಗಂಭೀರ ಚರ್ಚೆ ಆಗಿಯೇ ಇಲ್ಲ. ಮಾಲಿನ್ಯದ ಬಗೆಗಿನ ಚರ್ಚೆ ನಡೆಯಲು ಕಾಂಗ್ರೆಸ್ ಅವಕಾಶ ನೀಡಲಿಲ್ಲ. ಬದಲಿಗೆ, ಪ್ರತಿಭಟ ನಾಕಾರರನ್ನೇ ಉತ್ತೇಜಿಸಿತು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಆರೋಪ ಮಾಡಿದರು. ವಾಸ್ತವ ಏನೆಂದರೆ, ಅಧಿಕಾರಕ್ಕೆ ಬಂದು 11 ವರ್ಷಗಳಾದ ಮೇಲೆ ಮಾಲಿನ್ಯ ದ ಬಗ್ಗೆ ಚರ್ಚೆ ಮಾಡಬೇಕು ಎಂದು ಕೇಂದ್ರ ಸರಕಾರಕ್ಕೆ ಅನ್ನಿಸಿತಲ್ಲ ಎನ್ನುವುದೇ ಸಮಾಧಾನಕರ ವಿಚಾರ.

ಜನಜೀವನಕ್ಕೆ ಸಂಬಂಧಿಸಿದ ಜ್ವಲಂತ, ಗಂಭೀರ ವಿಚಾರಗಳ ಬಗ್ಗೆ ಚರ್ಚೆ ನಡೆಸುವ ಬದಲು, ಅದರಿಂದ ಜಾರಿಕೊಳ್ಳುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಹಾಲಿ ಕೇಂದ್ರ ಸರಕಾರ ಫೆಬ್ರವರಿ ಯ ಬಜೆಟ್ ಅಧಿವೇಶನದಲ್ಲಿ ಇದನ್ನು ಚರ್ಚಿಸುವ ಸಾಧ್ಯತೆ ಕಡಿಮೆ.

ಫೆಬ್ರವರಿ ಆರಂಭದ ವೇಳೆ ದಿಲ್ಲಿ ವಿಷಗಾಳಿ ಪ್ರಮಾಣ ಸ್ವಲ್ಪ ತಗ್ಗಿರುತ್ತದೆ ಮತ್ತು ಜನರೂ ಸಹಜ ಜೀವನಕ್ಕೆ ಮರಳಿರುತ್ತಾರೆ. ಹಾಗಾಗಿ, 2026ರ ಡಿಸೆಂಬರ್ ತಿಂಗಳ ಚಳಿಗಾಲದ (ವಿಷಗಾಳಿಯ) ಅಧಿವೇಶನಕ್ಕೆ ಕಾಯೋಣ.. ಅಲ್ಲವೇ?