ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shashidhara Halady Column: ನಿಮ್ಮೂರಲ್ಲೂ ಇವೆಯೇ ದೆವ್ವದ ಕಥೆಗಳು ?

ಕೆಲವು ಪ್ರದೇಶಗಳಲ್ಲಿದ್ದ ದೆವ್ವ ಭೂತಗಳ ನಂಬಿಕೆ ಮತ್ತು ಮೂಢನಂಬಿಕೆಗಳು ಅದಾವ ಮಟ್ಟದಲ್ಲಿದ್ದ ವೆಂದರೆ, ಅವುಗಳನ್ನು ಬಿಟ್ಟು ಆ ಊರಿನಲ್ಲಿ ವಾಸ ಮಾಡುವುದೇ ಕಷ್ಟವಿತ್ತು! ಆ ದಾರಿಯಲ್ಲಿ ರಾತ್ರಿ ಹೋಗಬಾರದು, ಈ ದಾರಿಯಲ್ಲಿ ನಡು ಮಧ್ಯಾಹ್ನ ಓಡಾಡಬಾರದು, ಮುಸ್ಸಂಜೆಯ ಹೊತ್ತಿನಲ್ಲಿ ಆ ತೋಡಿನ ಪಕ್ಕದಲ್ಲಿ ಓಡಾಡಬಾರದು, ನಡುರಾತ್ರಿಯಲ್ಲಿ ಅಲ್ಲೆಲ್ಲಾ ಓಡಾಡಿದರೆ ಅಪಾಯ ಖಚಿತ... ಇಂತಹ ನಂಬಿಕೆಗಳು ಲೆಕ್ಕಕ್ಕೇ ಸಿಗದಷ್ಟು ಧಂಡಿಯಾಗಿದ್ದವು!

ಶಶಾಂಕಣ

ಗ್ರಾಮೀಣ ಬದುಕಿನ ಸೊಗಡು, ಅನುಭವ ಬಹು ಆಪ್ತವಾದುದು ಎಂಬ ಮಾತಿದೆ; ಅದರ ಬಗ್ಗೆ ತಕರಾರಿಲ್ಲ; ನಮ್ಮಲ್ಲಿ ಬಹುಪಾಲು ಜನರಿಗೆ, ಗ್ರಾಮೀಣ ಬದುಕಿನ ಅಮೂಲ್ಯ ಕ್ಷಣಗಳು ಇಂದಿಗೂ ನೆನಪಾಗುತ್ತಲೇ ಇರುತ್ತದೆ. ಆದರೆ, ಕೆಲವು ದಶಕಗಳ ಹಿಂದೆ, ಗ್ರಾಮೀಣ ಮತ್ತು ಹಳ್ಳಿಯ ಸನ್ನಿವೇಶ ದಲ್ಲಿ ವಾಸಿಸುವವರನ್ನು ಹಲವು ಬಿಕ್ಕಟ್ಟುಗಳು, ವೈಚಿತ್ರ್ಯಗಳು ಕಾಡುತ್ತಿದ್ದವು. ಅವುಗಳಲ್ಲಿ ಒಂದು ಎಂದರೆ, ದೆವ್ವ ಭೂತಗಳ ಕಾಟ!

ದೆವ್ವ, ಭೂತಗಳು ನಿಜವಾಗಿಯೂ ಇವೆಯೋ ಇಲ್ಲವೋ ಎಂಬುದನ್ನು ನಾನಿಲ್ಲಿ ಚರ್ಚಿಸಲು ಹೋಗುವು ದಿಲ್ಲ; ಆದರೆ, ನಮ್ಮ ಬಾಲ್ಯ ಕಾಲದಲ್ಲಿ, ನಮ್ಮ ಹಳ್ಳಿಗಳಲ್ಲಿದ್ದ ದೆವ್ವ, ಭೂತಗಳ ಅಸ್ತಿತ್ವದ ಕುರಿತಾದ ನಂಬಿಕೆಗಳು, ಕಥೆಗಳು ಮಾತ್ರ ಭಲೇ ವಿಚಿತ್ರವಾಗಿದ್ದವು; ಕೆಲವು ಅಂತಹ ನಂಬಿಕೆಗಳು ಮಜವಾಗಿದ್ದವು ಎಂದೂ ಹೇಳಬಹುದು; ಆದರೆ, ಆಗೆಲ್ಲಾ ಹಳ್ಳಿಗಳ ಮೂಲೆ ಮೂಲೆಗಳಲ್ಲಿ ಇದ್ದವು ಎಂದು ಜನರು ನಂಬಿದ್ದ ಹಲವು ದೆವ್ವ ಭೂತಗಳು ಜನರನ್ನು ಭಯದ ನೆರಳಿನಲ್ಲೇ ಇರಿಸಿದ್ದವು ಎಂಬುದೂ ದಿಟ.

ಕೆಲವು ಪ್ರದೇಶಗಳಲ್ಲಿದ್ದ ದೆವ್ವ ಭೂತಗಳ ನಂಬಿಕೆ ಮತ್ತು ಮೂಢನಂಬಿಕೆಗಳು ಅದಾವ ಮಟ್ಟದಲ್ಲಿದ್ದ ವೆಂದರೆ, ಅವುಗಳನ್ನು ಬಿಟ್ಟು ಆ ಊರಿನಲ್ಲಿ ವಾಸ ಮಾಡುವುದೇ ಕಷ್ಟವಿತ್ತು! ಆ ದಾರಿಯಲ್ಲಿ ರಾತ್ರಿ ಹೋಗಬಾರದು, ಈ ದಾರಿಯಲ್ಲಿ ನಡು ಮಧ್ಯಾಹ್ನ ಓಡಾಡಬಾರದು, ಮುಸ್ಸಂಜೆಯ ಹೊತ್ತಿನಲ್ಲಿ ಆ ತೋಡಿನ ಪಕ್ಕದಲ್ಲಿ ಓಡಾಡಬಾರದು, ನಡುರಾತ್ರಿಯಲ್ಲಿ ಅಲ್ಲೆಲ್ಲಾ ಓಡಾಡಿದರೆ ಅಪಾಯ ಖಚಿತ... ಇಂತಹ ನಂಬಿಕೆಗಳು ಲೆಕ್ಕಕ್ಕೇ ಸಿಗದಷ್ಟು ಧಂಡಿಯಾಗಿದ್ದವು!

ಇದನ್ನೂ ಓದಿ: Shashidhara Halady Column:ಸೀ.ಸ್ಟೌ. ಅಡುಗೆ ಗೊತ್ತೇ ನಿಮಗೆ !

ಇಲ್ಲೊಂದು ವಿಚಿತ್ರವಿದೆ; ನಮ್ಮ ಅಜ್ಜಿಯು, ತಮ್ಮ ಬಾಲ್ಯದಲ್ಲಿ ಗಮನಿಸಿದ್ದ ದೆವ್ವ ಭೂತಗಳ ಕಥೆಗಳ ಸಂಖ್ಯೆಯು, ನಮ್ಮ ಬಾಲ್ಯದ ಸಮಯಕ್ಕೆ ಕಡಿಮೆಯಾಗಿತ್ತು. ನಮ್ಮ ಬಾಲ್ಯಕಾಲದಲ್ಲಿ ನಾವು ಕೇಳಿದ್ದ ಅಂತಹ ಕಥೆಗಳು ಸಂಖ್ಯೆ ಈಗ ಬಹುಮಟ್ಟಿಗೆ ಕಣ್ಮರೆಯಾಗಿವೆ! ಇದೇಕೆ ಹೀಗೆ ಎಂದು ಯೋಚಿಸುತ್ತಾ ಹೋದರೆ, ನಮ್ಮ ಹಳ್ಳಿಯ ಮೂಲೆಗೆ ವಿದ್ಯುತ್ ದೀಪದ ಸಂಪರ್ಕ ಬಂದ ನಂತರ, ಅರ್ಧಕ್ಕರ್ಧ ದೆವ್ವಭೂತಗಳು ಓಡಿಹೋದವು ಎಂಬ ವಿಚಾರ ಮುನ್ನೆಲೆಗೆ ಬರುತ್ತದೆ! ಹಳ್ಳಿಯ ಮಕ್ಕಳೆಲ್ಲಾ ಶಾಲೆಗೆ ಹೋಗಿ, ನಾಲ್ಕಕ್ಷರ ಕಲಿತ ನಂತರ, ಇನ್ನೊಂದಿಷ್ಟು ದೆವ್ವಗಳು ಅಂತರ್ಧಾನ ವಾದವು.

ಈಗಿನ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚು, ಆದ್ದರಿಂದಲೇ, ಹೆಚ್ಚಿನ ದೆವ್ವ ಭೂತಗಳು, ಅಂತಹ ಕಥೆಗಳು ಮಾಯವಾಗಿರಬಹುದು ಎನಿಸುತ್ತದೆ. ನಮ್ಮ ಹಳ್ಳಿಯ ಮನೆಯಲ್ಲಿ ನಿಂತು, ಉತ್ತರ ದಿಕ್ಕಿಗೆ ನೋಡಿದರೆ, ಸುಮಾರು ಒಂದು ಕಿ.ಮೀ. ದೂರದ ಬಯಲು; ಅಲ್ಲಿ ಬತ್ತದ ಗದ್ದೆಗಳಿವೆ. ಅದರ ಎರಡೂ ದಿಕ್ಕಿನಲ್ಲಿ, ಕಾಡುಪ್ರದೇಶವಿದೆ. ನಮ್ಮ ಮನೆಯ ಅಂಗಳದಲ್ಲಿ ನಿಂತು, ನಡುರಾತ್ರಿಯ ಹೊತ್ತಿನಲ್ಲೋ, ಬೆಳಗಿನ ಜಾವವೋ, ಆ ಗದ್ದೆ ಬಯಲಿನತ್ತ ದೃಷ್ಟಿ ಹಾಯಿಸಿದರೆ, ದೂರದಲ್ಲಿ ಕೊಳ್ಳಿ ದೆವ್ವಗಳು ಓಡಾಡುತ್ತಿದ್ದುದನ್ನು ಕಾಣಬಹುದಿತ್ತಂತೆ- ಎಂದು ನಮ್ಮ ಅಜ್ಜಿ ಹೇಳುತ್ತಿದ್ದರು. ಅವರ ಮಾವನವರು, ಅದೇ ಜಾಗದಲ್ಲಿ ನಿಂತು, ‘ಅಗೋ, ಅಲ್ಲಿ ದೂರದಲ್ಲಿ, ಆ ತೋಡಿನ ಹತ್ತಿರ ಎರಡು ಕೊಳ್ಳಿ ದೆವ್ವ (ದೊಡ್ಡ ಸೂಟೆ ಹಿಡಿದುಕೊಂಡು) ಓಡಾಡುತ್ತಾ ಇದ್ದವು’ ಎನ್ನುತ್ತಿದ್ದರಂತೆ. ಆದರೆ, ನಮ್ಮ ಅಮ್ಮಮ್ಮ ಮಾತ್ರ, ‘ಅವರು ಹೇಳಿದ್ದು ನಿಜ, ಆದರೆ ನಾನಂತೂ ಕಂಡಿಲ್ಲ’ ಎಂದು ತಮ್ಮದೇ ಮಟ್ಟದ ವಿಚಾರವಾದವನ್ನು ಪ್ರಸ್ತುತಪಡಿಸುತ್ತಿದ್ದರು.

S Halady 30

ದೆವ್ವ, ಭೂತದ ಕಥೆಗಳನ್ನು ಜಾಸ್ತಿ ನಂಬಬಾರದು, ಆ ನಂಬಿಕೆಗೆ ದಾಸರಾಗಿ ನಮ್ಮ ದಿನಚರಿಯನ್ನು ಕಷ್ಟಕ್ಕೆ ಸಿಲುಕಿಸಿಕೊಳ್ಳಬಾರದು ಎಂಬುದೇ ಅವರ ವಾದವಾಗಿತ್ತು. ಭೂತಗಳ ಕುರಿತಾದ ನಂಬಿಕೆ ಗಳನ್ನು, ಮೂಢನಂಬಿಕೆಗಳನ್ನು ಜನರೇ ಸೃಷ್ಟಿಸುವುದು ಎಂಬುದಕ್ಕೆ ಒಂದು ಪುಟ್ಟ ನಿದರ್ಶನ ವಿದೆ. ನಾವಾಗ, ಐದನೆಯ ತರಗತಿಯ ವಿದ್ಯಾರ್ಥಿಗಳು. ನಾವು ಓದುತ್ತಿದ್ದ ಸರಕಾರಿ ಶಾಲೆಯ ಸನಿಹದಲ್ಲೇ, ನಮ್ಮೂರಿನ ಮಾರಿಕಾನು ಅಮ್ಮನವರ ದೇವಾಲಯ; ಅದರ ಮುಖ ಮಂಟಪಕ್ಕೆ ಒಂದು ಉಪ್ಪರಿಗೆ ಇತ್ತು (ಈಗ ಅದನ್ನು ಜೀರ್ಣೋದ್ಧಾರಗೊಳಿಸಲು ಆರಂಭಿಸಿದ್ದಾರೆ). ಅದಕ್ಕೆ ಮೇಲ್ಭಾಗದಲ್ಲಿ ಹಂಚಿನ ಚಾವಣಿ.

ಮಧ್ಯಾಹ್ನ ಊಟದ ಬಿಡುವಿನಲ್ಲಿ, ಮಕ್ಕಳೆಲ್ಲಾ ಮಾರಿಕಾನು ದೇಗುಲದ ಆವರಣದಲ್ಲಿ ಆಟವಾಡು ವುದು ಮಾಮೂಲು. ಒಂದು ದಿನ ಮಕ್ಕಳೆಲ್ಲಾ ಓಡಿ ಬಂದು, ‘ಮಾರಿಕಾನು ದೇವಸ್ಥಾನದ ಉಪ್ಪರಿಗೆಯಲ್ಲಿ ಭೂತ ಉಂಟು!’ ಎಂದು ಅಚ್ಚರಿಯಿಂದ ಹೇಳಿದರು. ನನಗೆ ಕುತೂಹಲ; ನಾವೆಲ್ಲಾ ಪ್ರತಿದಿನ ಅಲ್ಲಿ ಆಟವಾಡಿದ್ದ ಜಾಗ; ಅಲ್ಲೆಂತಹ ಭೂತ ಬಂದೀತು ಎಂಬ ಪ್ರಶ್ನೆ. ಸ್ವಲ್ಪ ಹುಚ್ಚು ಧೈರ್ಯವೂ ಇತ್ತು ಎನಿಸುತ್ತದೆ; ‘ಭೂತವಾ; ಇಲ್ಲಪ್ಪ! ಅದು ಹೇಗೆ ಸಾಧ್ಯ? ಬನ್ನಿ ನೋಡೋಣ’ ಎಂದು, ನಾಲ್ಕಾರು ಸಹಪಾಠಿಗಳನ್ನು ಕರೆದುಕೊಂಡು, ಮಾರಿಕಾನು ದೇಗುಲದ ಮುಖಮಂಟಪದ ಉಪ್ಪರಿಗೆಗೆ ಹೋದೆ.

ಅಲ್ಲಿಗೆ ಹೋಗಲು ಮರದ ಮೆಟ್ಟಿಲನ್ನು ಮಾಡಿದ್ದರು. ಮೆಟ್ಟಿಲ ತುದಿಗೆ ಹೋಗಿ ನೋಡಿದರೆ, ಉಪ್ಪರಿಗೆಯ ಆ ತುದಿಯಲ್ಲಿ, ಮಸುಕು ಬೆಳಕಿನಲ್ಲಿ, ನೆಲಮೇಲೆ ಏನೋ ಉದ್ದನೆಯ ವಸ್ತು ಬಿದ್ದಂತೆ ಕಾಣಿಸುತ್ತಿತ್ತು; ಅಲ್ಲಿನ ಕತ್ತಲಿಗೆ ಕಣ್ಣು ಹೊಂದಿಕೊಂಡ ನಂತರ, ‘ಓ, ಅದೊಂದು ಹಿಡಿಸೂಡಿ ಅಲ್ವಾ’ ಎಂಬ ಉದ್ಗಾರ ನನ್ನಿಂದ. ಆ ಕತ್ತಲಿಗೆ ಕಣ್ಣು ಇನ್ನೂ ಹೊಂದಿಕೊಂಡ ನಂತರ, ‘ಅರೆ, ಅದು ಒಬ್ಬ ಹುಡುಗ ಅಲ್ವಾ, ಉದ್ದಕ್ಕೆ ಮಲಗಿಕೊಂಡಿದ್ದಾನೆ’ ಎಂದೆ. ಬೇರೆ ಮಕ್ಕಳು ಹೌದು ಹೌದು ಎಂದರು. ಇನ್ನೂ ಸ್ಪಷ್ಟವಾಗಿ ಕಾಣಿಸಿದಾಗ, ಅದು ಬೇರಾರು ಅಲ್ಲ ನಮ್ಮ ಸಹಪಾಠಿ, ಕುಚೇಲ ಎಂದು ಗೊತ್ತಾಯಿತು! (ಹೆಸರು ಬದಲಿಸಲಾಗಿದೆ). ಅವನು ಓದಿನಲ್ಲಿ ಹಿಂದೆ, ಸೋಮಾರಿ ಎಂದೇ ಹೆಸರುಪಡೆದಿದ್ದ.

‘ಕುಚೇಲ, ಎದ್ದೇಳು; ಇಲ್ಲೇಕೆ ಮಲಗಿದ್ದೀಯಾ?’ ಎಂದು ಕೇಳಿದೆ. ‘ಎಂತಕಿಲ್ಲ. ಬೆಳಗ್ಗೆ ಮನೆಯಿಂದ ಶಾಲೆಗೆ ಬಂದವನು, ಕ್ಲಾಸಿಗೆ ಬರದೇ ಇಲ್ಲಿಗೇ ಬಂದೆ. ಮಲಗಿದೆ. ನಿದ್ದೆ ಬಂತು’ ಎಂದು ಕಣ್ಣುಜ್ಜುತ್ತಾ ಎದ್ದ ಅವನು, ಸೀದ ತನ್ನ ಮನೆಗೆ ವಾಪಸು ಹೊರಟ. ಅವನ ಮನೆಯು, ಅಲ್ಲಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿತ್ತು. ಪಾಪ, ಮಧ್ಯಾಹ್ನದ ಊಟಕ್ಕೆ ಬುತ್ತಿಯನ್ನೂ ಮನೆಯವರು ಕೊಟ್ಟಿರಲಿಲ್ಲವೇನೋ, ಬಡತನದ ಸಮಸ್ಯೆಯೂ ಇತ್ತು ಎನಿಸುತ್ತದೆ. ಒಟ್ಟಿನಲ್ಲಿ, ಕತ್ತಲು ತುಂಬಿದ ಉಪ್ಪರಿಗೆಯಲ್ಲಿ ಮಲಗಿದ್ದ ಅವನು, ಭೂತದ ರೀತಿ ಬೇರೆ ಮಕ್ಕಳಿಗೆ ಕಾಣಿಸಿದ್ದ!

ಆ ದಿನ, ಈ ರೀತಿ ಆತ ಮಲಗಿದ್ದನ್ನು ಪರೀಕ್ಷಿಸಿ, ಪತ್ತೆ ಹಚ್ಚದೇ ಹೋಗಿದ್ದರೆ, ಅಲ್ಲೊಂದು ಭೂತ ಇತ್ತು ಎಂಬ ಮೂಢನಂಬಿಕೆ ಕ್ರಮೇಣ ಜನಜನಿತವಾಗುತ್ತಿತ್ತು! ಇಂತಹ ಹಲವು ಭೂತಗಳ ಕಥೆಗಳು ನಮ್ಮ ಹಳ್ಳಿಯಲ್ಲಿದ್ದವು; ನಮ್ಮ ಹಳ್ಳಿಯೇನು, ಎಲ್ಲಾ ಹಳ್ಳಿಗಳಲ್ಲೂ ಇಂತಹವೇ ಕಥೆಗಳು! ವಿದ್ಯುತ್ ದೀಪದ ಸಂಪರ್ಕ ದೊರೆತ ನಂತರ, ಇಂತಹ ಕತ್ತಲಿನ ಭೂತಗಳು ಮಾಯವಾಗಿಬಿಟ್ಟಿವೆ!

ಇನ್ನೊಂದು ಇಂತಹದ್ದೇ ಸಂದರ್ಭ ನೆನಪಾಗುತ್ತದೆ. ಸುಮಾರು, 1976ರ ಸಮಯದಲ್ಲಿ, ನಮ್ಮ ಹಳ್ಳಿಯ ಸುತ್ತಮುತ್ತಲೂ, ಸಣ್ಣಪ್ರಮಾಣದ ಭೂಕಂಪವಾಗಿತ್ತು. ಅದು ಘಟಿಸಿದ್ದು ರಾತ್ರಿ. ಕುರ್ಚಿಯು ಸಣ್ಣಗೆ ಅಲುಗಾಡುವಷ್ಟು ಸಣ್ಣ ಭೂಕಂಪ ಅದು. ಜತೆಗೆ, ಅದೇ ಸಮಯದಲ್ಲಿ ನೆಲದಾಳದಲ್ಲಿ, ಮೋಟಾರ್ ಸೈಕಲ್ ಓಡಾಡಿದಂತಹ ಸದ್ದು ಕೆಲವು ಸೆಕೆಂಡುಗಳ ಕಾಲ ಕೇಳಿಸಿತ್ತು!

ಮರುದಿನ ಪತ್ರಿಕೆಗಳಲ್ಲಿ ಬಂದ ನಂತರವಷ್ಟೇ, ಆ ರಾತ್ರಿ ನಮ್ಮ ಮನೆಯಲ್ಲಿ ಕುರ್ಚಿ ಅಲುಗಿದ್ದು ಅದೇ ಭೂಕಂಪದಿಂದ ಎಂದು ಖಾತ್ರಿಯಾಯಿತು. ಮರುದಿನ ಬೆಳಗ್ಗೆ, ನಮ್ಮ ಮನೆಗೆ ಬಂದ ಕೃಷಿ ಕಾರ್ಮಿಕನೊಬ್ಬನು ಹೇಳಿದ ‘ಹ್ವಾಯ್, ನಿನ್ನೆ ರಾತ್ರಿ ನಮ್ಮ ಮನೆಯಲ್ಲಿ ಭೂತ ಶಬ್ದ ಮಾಡಿತ್ತು’. ‘ಅದೆಂತಹ ಶಬ್ದ? ಭೂತ ಎಂತಕೆ ಶಬ್ದ ಮಾಡುತ್ತೆ?’ ಎಂದು ಪ್ರಶ್ನಿಸಿದೆ.

‘ಹೌದು, ಅದು ಭೂತವೇ ಸರಿ. ರಾತ್ರಿ ಹೊತ್ತಿನಲ್ಲಿ ನೆಲದಲ್ಲಿ ಗುಡು ಗುಡು ಶಬ್ದ ಆಯಿತು. ನಾಲ್ಕಾರು ಸಲ ಜೋರಾದ ಶಬ್ದ ಆಯಿತು. ಅತ್ತಿಂದ ಇತ್ತ ಗುಡು ಗುಡು ಓಡಿದ ರೀತಿ. ನೆಲದಲ್ಲಿ ಆದ ಶಬ್ದ ಕೇಳಿ ನಮಗೆಲ್ಲಾ ಹೆದರಿಕೆ ಆಯಿತು. ಭೂತ ಬಂದಿತ್ತು ಅಂತ, ಹೊರಗೆ ಬಂದೆವು. ಸ್ವಲ್ಪ ಹೊತ್ತಿನ ನಂತರ ಶಬ್ದ, ಪೂರ್ವ ದಿಕ್ಕಿಗೆ ಹೋಯಿತು. ಅದು ಭೂತದ ಕೆಲಸ ಹೊರತು ಮತ್ತೇನೂ ಅಲ್ಲ’ ಎಂದು, ದೂರದಲ್ಲಿದ್ದ ಕಾಡುತುಂಬಿದ ಬೆಟ್ಟವನ್ನು ತೋರಿಸಿದ. ಹಿಂದಿನ ರಾತ್ರಿ ನೆಲದಾಳದಲ್ಲಿ ಕೇಳಿಬಂದ ಶಬ್ದವನ್ನು ಆತ ಮತ್ತು ಆತನ ಕುಟುಂಬದವರು ಭೂತದ ಚೇಷ್ಟೆ ಎಂದು ಬಲವಾಗಿ ನಂಬಿದ್ದರು!

ಭೂತದ ಕಥೆಗಳು ಹೀಗೆಯೇ ಅಲ್ಲವೆ ಹುಟ್ಟುವುದು! ನಮ್ಮ ಹಳ್ಳಿಗಳಲ್ಲಿ ಹಿಂದೆ ಹರಿದಾಡುತ್ತಿದ್ದ ವೈವಿಧ್ಯಮಯ ಭೂತದ ಕಥೆಗಳ ಬೆನ್ನು ಹತ್ತಿದರೆ, ತಳಬುಡ ಅರ್ಥವಾಗದಂತಹ ಇನ್ನೂ ಕೆಲವು ವಿವರಗಳು ಹೊರಬರುತ್ತವೆ. ಕೊಳ್ಳಿ ದೆವ್ವಗಳ ಕಥೆಗಳು ನಮ್ಮೂರಲ್ಲಿ ಮಾತ್ರವಲ್ಲ, ಎಲ್ಲಾ ಕಡೆಗಳಲ್ಲೂ ಇದ್ದವು. ಮಧ್ಯರಾತ್ರಿಯಲ್ಲಿ, ದೊಡ್ಡದಾದ ಬೆಳಕಿನ ದೊಂದಿಯ ಸಂಚಾರವನ್ನೇ ಕೊಳ್ಳಿದೆವ್ವ ಎಂದಿದ್ದಾರೆ; ಇಂತಹ ಚಲಿಸುವ ಬೆಳಕು ಅಥವಾ ದೊಂದಿಗಳ ಕಥೆಗಳು, ವಿಶ್ವದಾ ದ್ಯಂತ ಇದ್ದವು ಎಂಬುದನ್ನು ಸಂಶೋಧಕರು ಗುರುತಿಸಿದ್ದಾರೆ. ಪೂರ್ಣ ಚಂದ್ರ ತೇಜಸ್ವಿಯವರು, ತಮ್ಮ ‘ಫ್ಲೈಯಿಂಗ್ ಸಾಸರ್ಸ್’ ಎಂಬ ಪುಸ್ತಕದಲ್ಲಿ, ಕಾಡು ಬೆಟ್ಟಗಳ ನಡುವೆ ಸಂಚರಿಸುವ ಪ್ರಖರ ಬೆಳಕಿನ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಜತೆಗೆ, ಮಳೆಗಾಲದಲ್ಲಿ, ಕಾಡಿನ ನಡುವೆ ಕೊಳೆತ ಮರದ ಬೊಡ್ಡೆಗಳ ಮೇಲೆ ಬೆಳೆಯುವ ಅಣಬೆಗಳ (ಫಂಗಸ್) ಒಂದು ಪ್ರಭೇದವು ಬೆಳಕು ಬೀರುವ ವಿಚಾರವನ್ನು ಸಹ ಪ್ರಸ್ತಾಪಿಸಿದ್ದಾರೆ. ದಟ್ಟ ಕಾಡಿನಲ್ಲಿ, ನಡುರಾತ್ರಿಯಲ್ಲಿ ಈ ರೀತಿ ಮರದ ತುಂಬಾ ಬೆಳೆದ ಅಣಬೆಗಳ ಒಂದು ಪ್ರಭೇದವು ಬೀರಿದ ಬೆಳಕನ್ನು, ಹಿಂದಿನವರು ದೆವ್ವ ಎಂದು ಭ್ರಮಿಸಿರುವ ಸಾಧ್ಯತೆ ಇದೆ. ನಮ್ಮ ಹಳ್ಳಿಯಲ್ಲೂ, ರಾತ್ರಿಯ ಹೊತ್ತಿನಲ್ಲಿ ಬೆಳಕು ಬೀರುವ ಅಣಬೆಗಳನ್ನು ನಾನು ಕಂಡಿದ್ದುಂಟು; ಹಲವು ದಿನಗಳ ಕಾಲ ಸುರಿದ ಮಳೆಗೆ, ಹಳೆಯ ಮರದ ಬೊಡ್ಡೆಗಳು ನೆನೆದು ಕುಂಬಾದಾಗ, ಅವುಗಳ ಮೇಲೆ ಬೆಳೆಯುವ ಒಂದು ಪ್ರಭೇದದ ಅಣಬೆಯು, ಕತ್ತಲಿನಲ್ಲಿ ಹೊಳೆಯುವುದನ್ನು ಕಾಣಬಹುದು.

ಇಂತಹ ಬೆಳಕುಗಳು, ಬಹು ಹಿಂದೆ ಜನರಲ್ಲಿ ಭಯವನ್ನು ಹುಟ್ಟಿಸಿರಲೂಬಹುದು. ನಮ್ಮ ಹಳ್ಳಿಗಳಲ್ಲಿ ಇದ್ದ ಇನ್ನೊಂದು ಇಂತಹದ್ದೇ ನಂಬಿಕೆಯೆಂದರೆ ‘ಗಾಳಿ ಸೋಂಕು’. ಇಲ್ಲಿ ‘ಗಾಳಿ’ ಎಂದರೆ, ಕೆಟ್ಟ ಗಾಳಿ ಅಥವಾ ಭೂತದ ನೆನಪನ್ನು ಹುಟ್ಟಿಸುವ ಸೋಂಕು. ಮುಸ್ಸಂಜೆಯ ಹೊತ್ತಿನಲ್ಲಿ ಸಣ್ಣ ಮಕ್ಕಳು ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಓಡಾಡಿ ವಾಪಸಾದಾಗ, ರಾತ್ರಿಹೊತ್ತಿನಲ್ಲಿ ಆ ಮಕ್ಕಳಿಗೆ ಜ್ವರ ಬರುವುದು ಅಥವಾ ಮೈಮೇಲೆ ದದ್ದು ಆಗುವುದು, ಸಣ್ಣಗೆ ಅಸ್ವಸ್ಥವಾಗುವುದು ಕಂಡು ಬಂದಾಗ, ‘ಹೋ, ಇಂದು ಸಂಜೆ ಅಲ್ಲಿಗೆ ಹೋಗಿ ಬರುವಾಗ ಗಾಳಿ ಸೋಂಕು ಆಗಿದೆ’ ಎಂಬ ಉದ್ಗಾರವನ್ನು ಮನೆಯವರು ಹೊರಡಿಸುತ್ತಿದ್ದರು.

ಆಗ, ಮೈಮೇಲೆ ದದ್ದು ರೀತಿಯ ಕಲೆಗಳು ಆಗುವುದೂ ಇದೆ; ಇಂದಿನ ತಿಳಿವಳಿಕೆಯ ಪ್ರಕಾರ ಅದು ಅಲರ್ಜಿ. ಆದರೆ, ಅಂತಹ ಮಾಹಿತಿ ಇಲ್ಲದ ಅಂದಿನ ದಿನಗಳಲ್ಲಿ, ಅದನ್ನು ಗಾಳಿಸೋಂಕು ಎಂದು ಸಾಮಾನ್ಯೀಕರಣಗೊಳಿಸಿ, ಜನರು ಚಿಂತೆಗೆ ಒಳಗಾಗುತ್ತಿದ್ದರು. ಇಂತಹ ಗಾಳಿಸೋಕು ಆದಾಗ, ಪರಿಹಾರವೇನು? ಪುನಃ ಇಂತಹದ್ದೇ ನಂಬಿಕೆಯನ್ನು (ಮೂಢ) ಹೋಲುವ ಇನ್ನೊಂದು ಆಚರಣೆ- ಅದೇ ದೃಷ್ಟಿ ತೆಗೆಯುವುದು.

ಹಂಚಿಕಡ್ಡಿಯಿಂದಲೋ, ಬೆಳ್ಳುಳ್ಳಿ ಸಿಪ್ಪೆ ಮತ್ತು ಉಪ್ಪನ್ನು ನಿವಾಳಿಸಿ ಬೆಂಕಿಗೆ ಹಾಕುವು ದರಿಂದಲೋ, ದೃಷ್ಟಿ ತೆಗೆದು, ಗಾಳಿಸೋಂಕನ್ನು ದೂರ ಮಾಡಲು ಪ್ರಯತ್ನಿಸುತ್ತಿದ್ದರು. ‘ಒಂದು ನಂಬಿಕೆಯಿಂದಾದ ತೊಡಕಿನ ಪರಿಹಾರಕ್ಕೆ, ಅದೇ ರೀತಿಯ ಇನ್ನೊಂದು ನಂಬಿಕೆಯ ಔಷಧವೇ?’ ಎಂದು ನೀವು ಕೇಳಬಹುದು. ಇಂತಹ ನಂಬಿಕೆ ಅಥವಾ ಮೂಢ ನಂಬಿಕೆಗಳೇ ಮುಂದುವರಿದು, ದೆವ್ವ ಭೂತಗಳ ಕಥೆಗಳು ಸೃಷ್ಟಿಯಾಗಿರಬಹುದು ಎಂದು ನೀವು ಊಹಿಸಲೂ ಅವಕಾಶವಿದೆ. ಆದರೆ, ದೃಷ್ಟಿ ಆಗುವುದು ಮತ್ತು ದೃಷ್ಟಿ ತೆಗೆಯುವುದು ಎಂಬ ವಿಚಾರಕ್ಕೆ ಬಂದರೆ, ಅದು ಇನ್ನೊಂದೇ ಆಯಾಮದ ಚರ್ಚೆಗೆ ದಾರಿಯಾದೀತು! ಕೆಲವರಿಗೆ ದೃಷ್ಟಿ ಆಗುತ್ತದೆ ಎಂದು ಬಲವಾಗಿ ನಂಬುವವರು ಇಂದಿಗೂ ಇದ್ದಾರೆ; ಪೇಟೆ ಪಟ್ಟಣದವರು ಸಹ ‘ದೃಷ್ಟಿ’ಯಾಗುವ ದೃಷ್ಟಾಂತ ಗಳನ್ನು ಉದಾಹರಿಸುತ್ತಾರೆ!

ಕೆಲವು ಬಣ್ಣದ ಹೊಸ ಬಟ್ಟೆಯನ್ನುಟ್ಟಾಗ, ಕೆಲವು ಸನ್ನಿವೇಶಗಳಲ್ಲಿ ದೃಷ್ಟಿ ಬೀಳುತ್ತದೆ ಎಂಬುದು ನಂಬಿಕೆ. ಮನುಷ್ಯರಿಗೆ ಮಾತ್ರವಲ್ಲ, ಚೆನ್ನಾಗಿ ಹಾಲು ಕೊಡುವ ಹಸುಗಳ ಮೇಲೆ, ಕೆಲವು ಯಂತ್ರಗಳಂತಹ ನಿರ್ಜೀವ ವಸ್ತುಗಳ ಮೇಲೆ ಸಹ ದೃಷ್ಟಿ ಬಿದ್ದು, ಅವುಗಳ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ ಎಂದು ಹಲವರು ಸಾಕಷ್ಟು ಉದಾಹರಣೆಗಳನ್ನು ನೀಡುತ್ತಾರೆ. ಈ ದೃಷ್ಟಿ ಬೀಳಲು ಮುಖ್ಯ ಕಾರಣವೆಂದರೆ, ಮತ್ತೆ ಕೆಲವು ವ್ಯಕ್ತಿಗಳು ಎಂಬ ಮೂಢನಂಬಿಕೆಯೂ ಇದೆ! ಕೆಲವರ ದೃಷ್ಟಿ ‘ಬಲು ಬಿರುಸು’ ಎಂಬ ಸಬೂಬು ಬೇರೆ! ನಮ್ಮೂರಲ್ಲಿ ಹುಲ್ಲಿನ ಬಣವೆಯ ಮೇಲೂ ‘ದೃಷ್ಟಿ ಹಾಕಿ’, ಅದನ್ನು ಬೀಳಿಸಿದ ವ್ಯಕ್ತಿಗಳ ಕಥೆಗಳಿವೆ! ಇವೆಲ್ಲಾ ಮೂಢನಂಬಿಕೆ ಎಂದು ತಳ್ಳಿ ಹಾಕುವರು, ಇಂದಿನ ‘ವಿದ್ಯಾವಂತ ಮಂದಿ’! ಜನರಲ್ಲಿ ವಿದ್ಯಾಭ್ಯಾಸದ ಮಟ್ಟ ಜಾಸ್ತಿಯಾಗಿ, ಬೇರೆ ಬೇರೆ ಉದ್ದೇಶಕ್ಕೆ ದೂರದೂರನ್ನು ನೋಡಿ ಬಂದು ಆತ್ಮವಿಶ್ವಾಸ ಜಾಸ್ತಿಯಾದ ಬಳಿಕ, ಇಂತಹ ಮೂಢನಂಬಿಕೆಗಳೆಲ್ಲಾ ಬಹಳಷ್ಟು ಕಣ್ಮರೆಯಾಗಿವೆ.

ಒಂದಂತೂ ನಿಜ, ನಮ್ಮ ಹಳ್ಳಿಗೆ ವಿದ್ಯುತ್ ದೀಪ ಸಂಪರ್ಕ ದೊರತದ್ದು ಬಹಳ ನಿಧಾನವಾಗಿ, ಅಂದರೆ ಒಂದೆರಡು ದಶಕಗಳ ಹಿಂದೆ; ಆ ನಂತರ, ಪ್ರಖರ ಬೆಳಕಿನ ಪ್ರಭಾವದಿಂದಲೋ ಏನೋ, ಅಲ್ಲಿನ ಕಾಡು, ಬೆಟ್ಟ, ಗುಡ್ಡ, ಮರಗಳ ಸುತ್ತಲೂ ಇದ್ದ ಅವೆಷ್ಟೋ ದೆವ್ವಗಳು ಕಣ್ಮರೆಯಾಗಿವೆ! ನಿಮ್ಮೂರಲ್ಲೂ ಈ ರೀತಿ ದೆವ್ವಗಳು ಇತ್ತೀಚಿನ ವರ್ಷಗಳಲ್ಲಿ ಓಡಿಹೋಗಿರಬೇಕು ಅಲ್ಲವೇ!

ಶಶಿಧರ ಹಾಲಾಡಿ

View all posts by this author